Tag: ಗುತ್ತಿಗೆ ನೌಕರರು

  • ಗುತ್ತಿಗೆ, ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಯತ್ನ, ಆರೋಗ್ಯ ವಿಮೆ ವಿಸ್ತರಣೆ: ಸುಧಾಕರ್

    ಗುತ್ತಿಗೆ, ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಯತ್ನ, ಆರೋಗ್ಯ ವಿಮೆ ವಿಸ್ತರಣೆ: ಸುಧಾಕರ್

    ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವೇತನವನ್ನು ಹೆಚ್ಚಳ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ಆರೋಗ್ಯ ವಿಮೆ ವಿಸ್ತರಿಸಲು ಕೂಡ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ನಡೆಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ಭೇಟಿಯಾಗಿ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಸುಧಾಕರ್, ಸರ್ಕಾರದ ಇತಿಮಿತಿಯೊಳಗೆ ಎಲ್ಲಾ ಬೇಡಿಕೆಗಳನ್ನು ಆದಷ್ಟು ಶೀಘ್ರದಲ್ಲಿ ಈಡೇರಿಸಲಾಗುವುದು. ಶ್ರೀನಿವಾಸಾಚಾರಿಯವರ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಭ್ರಷ್ಟಾಚಾರದ ಇನ್ನೊಂದು ಮುಖವೇ ಕಾಂಗ್ರೆಸ್: ರೇಣುಕಾಚಾರ್ಯ

    ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಖಾಯಂ ನೌಕರರಿಗೆ ಕೊಡುವಷ್ಟೇ ವೇತನವನ್ನು ನಮಗೂ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ 49 ಕಾರ್ಯಕ್ರಮಗಳನ್ನು ನಿರ್ದಿಷ್ಟ ಸಮಯದ ತನಕ ಮಾಡಲಿದೆ. ಹೀಗಾಗಿ ಅವರನ್ನು ಖಾಯಂ ನೌಕರರನ್ನಾಗಿ ಮಾಡಿಕೊಳ್ಳಲು ಅಡಚಣೆಗಳಿವೆ. ಅಷ್ಟೇ ಅಲ್ಲದೆ, ಖಾಯಂ ನೌಕರರಂತೆ ಸಮಾನ ವೇತನ ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ ಈಗಿರುವ ವೇತನವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

    ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಆರೋಗ್ಯ ವಿಮೆ ವಿಸ್ತರಣೆ, 10 ದಿನಗಳ ವೇತನ ಸಹಿತ ರಜೆಯ ಬೇಡಿಕೆಗಳನ್ನು ಇಟ್ಟಿದ್ದಾರೆ. ಇದಕ್ಕೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಲಿದೆ. ಪ್ರತಿಭಟನಾ ನಿರತ ನೌಕಕರು ಕೇಳಿರುವ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ಪ್ರಮಾಣಿಕ ಪ್ರಯತ್ನ ಮಾಡಲಿದ್ದೇವೆ. ಸರ್ಕಾರ ಅವರ ಪರವಾಗಿ ಕೆಲಸ ಮಾಡಲಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಚಿರತೆ ದಾಳಿಗೆ ಬಲಿಯಾದ ತನ್ನ ಕರುವನ್ನು ಪತ್ತೆಹಚ್ಚಿದ ತಾಯಿ!

    ಸರ್ಕಾರಿ ಆರೋಗ್ಯ ವ್ಯವಸ್ಥೆಯ ಬಗ್ಗೆ ಜನರು ಬಹಳ ವಿಶ್ವಾಸ ಇಟ್ಟಿದ್ದಾರೆ. ಕೇವಲ ಮೂಲಭೂತ ಸೌಲಭ್ಯಗಳಿಂದ ಮಾತ್ರ ಜನರಿಗೆ ವಿಶ್ವಾಸ ಬರುವುದಿಲ್ಲ. ಬದಲಾಗಿ ಇಂತಹ ನೌಕರರಿಂದ ಆರೋಗ್ಯ ಸೇವೆಗೆ ಉತ್ತಮ ಹೆಸರು ಬಂದಿದೆ. ಅವರಿಗೆ ನೋವು ಕೊಟ್ಟು ನಾವು ಮುಂದುವರಿಯುವುದು ಅಸಾಧ್ಯ. ಕೆಲವು ಬೇಡಿಕೆ ಈಡೇರಿಸಲು ಕಾನೂನಾತ್ಮಕ, ತಾಂತ್ರಿಕ ತೊಡಕುಗಳಿವೆ. ಇವೆಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿ, ಸಾಧ್ಯವಿರುವ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ. ದೇಶದಲ್ಲೇ ಆರೋಗ್ಯ ಸೇವೆ ನೀಡುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅದಕ್ಕೆ ಪೂರಕವಾಗಿ ಕೆಲಸ ನಡೆಯಬೇಕು. ನೌಕರರು ಮುಷ್ಕರ ಕೈ ಬಿಟ್ಟು ಶೀಘ್ರದಲ್ಲೇ ಸೇವೆಗೆ ಹಿಂದಿರುಗಬೇಕು ಎಂದು ಸಚಿವರು ಮನವಿ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • 11ನೇ ದಿನಕ್ಕೆ ಕಾಲಿಟ್ಟ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನೆ

    11ನೇ ದಿನಕ್ಕೆ ಕಾಲಿಟ್ಟ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನೆ

    ಮೈಸೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಆರೋಗ್ಯ ಇಲಾಖೆಯ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ವಿವಿಧ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಇದೀಗ 11ನೇ ದಿನಕ್ಕೆ ಕಾಲಿಟ್ಟಿದೆ.

    ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಬಳಿ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದು, 11ನೇ ದಿನಕ್ಕೆ ಕಾಲಿಟ್ಟಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆರೋಗ್ಯ ಇಲಾಖೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ, ಸಮಾನ ವೇತನ ಹಾಗೂ ಸೇವಾ ಭದ್ರತೆ ಕಲ್ಪಿಸುವಲ್ಲಿ ವಿಫಲವಾಗಿದೆ. ಕೋವಿಡ್-19 ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಸಿಬ್ಬಂದಿಗೆ ವಿಮಾ ಯೋಜನೆ ಕಲ್ಪಿಸಿಲ್ಲ. ನಮ್ಮ ನಿರಂತರ ಹೋರಾಟದ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯವಹಿಸಿದೆ. ಕೂಡಲೇ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಪ್ರತಿಭಟನೆ ಉಗ್ರರೂಪ ತಾಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

  • ‘ವಾರಿಯರ್ಸ್‍ಗೆ ಕೇವಲ ಹೂಮಳೆ ಸುರಿಸಿ, ಚಪ್ಪಾಳೆ ತಟ್ಟಿದ್ರೆ ಸಾಕಾ?’: ಆರೋಗ್ಯ ಸಿಬ್ಬಂದಿ ಪ್ರಶ್ನೆ

    ‘ವಾರಿಯರ್ಸ್‍ಗೆ ಕೇವಲ ಹೂಮಳೆ ಸುರಿಸಿ, ಚಪ್ಪಾಳೆ ತಟ್ಟಿದ್ರೆ ಸಾಕಾ?’: ಆರೋಗ್ಯ ಸಿಬ್ಬಂದಿ ಪ್ರಶ್ನೆ

    – ‘ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ’
    – ಆರೋಗ್ಯ ಇಲಾಖೆ ಒಳ, ಹೊರ ಗುತ್ತಿಗೆ ನೌಕರರ ಮುಷ್ಕರ

    ಶಿವಮೊಗ್ಗ: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಕಳೆದ 15-20 ವರ್ಷಗಳಿಂದ ಒಳ ಹಾಗೂ ಹೊರಗುತ್ತಿಗೆ ಅಡಿಯಲ್ಲಿ ಕಡಿಮೆ ವೇತನಕ್ಕೆ ಆರೋಗ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ತಾರತಮ್ಯ ನಿವಾರಿಸುವಂತೆ ಹಾಗೂ ಗುತ್ತಿಗೆ ನೌಕರರನ್ನೇ ಖಾಯಂಗೊಳಿಸುವಂತೆ ಆಗ್ರಹಿಸಿ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಿಬ್ಬಂದಿ ಆರೋಪಿಸಿದ್ದಾರೆ.

    ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಡಾ.ಹೇಮಲತಾ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ನ್ಯಾಯಾಲಯ ಸಹ ಹೇಳಿದೆ. ಈಗಿದ್ದರೂ ಸರ್ಕಾರ ನಮ್ಮನ್ನು ಅತ್ಯಂತ ನಿಷ್ಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದರು.

    ಅಲ್ಲದೇ ಸರ್ಕಾರ ನಿರ್ಲಕ್ಷ್ಯ ಖಂಡಿಸಿ ಜೂನ್ 4 ರಿಂದ ಆರೋಗ್ಯ ಸಿಬ್ಬಂದಿ ಕರ್ತವ್ಯಕ್ಕೆ ಗೈರು ಹಾಜರಾಗಿ ಮನೆಯಲ್ಲೇ ಕುಳಿತು ಅಸಹಕಾರ ಚಳುವಳಿ ಮಾಡುವುದಾಗಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಿಬ್ಬಂದಿ ತಿಳಿಸಿದ್ದಾರೆ.

    ಕೊರೊನಾ ಸೋಂಕಿನ ಸಂದಿಗ್ಧ ಸಂದರ್ಭದಲ್ಲಿ ನಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದೇವೆ. ಅದಕ್ಕೆ ಪ್ರತಿಯಾಗಿ ಸರ್ಕಾರ ಹೂ ಮಳೆ ಸುರಿಸಿ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದೆ. ಆದರೆ ಕೇವಲ ಅಷ್ಟೇ ಸಾಕಾ? ನಮಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಜೂನ್ 4 ರಿಂದ ಮುಷ್ಕರ ಕೈಗೊಂಡಿದ್ದು, ಒಂದು ವೇಳೆ ಏನಾದರೂ ಅನಾಹುತವಾದರೆ ನಾವು ಜವಾಬ್ದಾರರಲ್ಲ ಎಂದು ತಿಳಿಸಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ನಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತವಾಗಿ ಭರವಸೆ ನೀಡಿದರೆ ಮುಷ್ಕರ ಹಿಂಪಡೆಯುತ್ತೇವೆ. ಇಲ್ಲದಿದ್ದರೆ ರಾಜ್ಯಾದ್ಯಂತ ಸಾವಿರಾರು ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದ್ದಾರೆ.