Tag: ಗುಣತಿಲಕ

  • ಕ್ಷೇತ್ರ ರಕ್ಷಣೆಗೆ ಅಡ್ಡಿ, ಗುಣತಿಲಕ ಔಟ್‌ – ವಿಂಡೀಸ್‌ ವಿರುದ್ಧ ಅಭಿಮಾನಿಗಳ ಕಿಡಿ

    ಕ್ಷೇತ್ರ ರಕ್ಷಣೆಗೆ ಅಡ್ಡಿ, ಗುಣತಿಲಕ ಔಟ್‌ – ವಿಂಡೀಸ್‌ ವಿರುದ್ಧ ಅಭಿಮಾನಿಗಳ ಕಿಡಿ

    – ವಿವಾದಕ್ಕೆ ಕಾರಣವಾದ ಔಟ್‌ ನಿರ್ಧಾರ
    – ಗುಣತಿಲಕ ಬಳಿ ಕ್ಷಮೆ ಕೇಳಿದ ಪೊಲಾರ್ಡ್‌

    ಆ್ಯಂಟಿಗುವಾ: ವೆಸ್ಟ್‌ಇಂಡೀಸ್‌ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್ ಧನುಷ್ಕಾ ಗುಣತಿಲಕ ಔಟ್‌ ನಿರ್ಧಾರ ಈಗ ವಿವಾದಕ್ಕೆ ಕಾರಣವಾಗಿದೆ.

    ನಡೆದಿದ್ದು ಏನು?
    ಕೀರಾನ್ ಪೊಲಾರ್ಡ್ ಎಸೆದ ಇನ್ನಿಂಗ್ಸ್‌ನ 22ನೇ ಓವರ್‌ನ ಮೊದಲ ಎಸೆತದಲ್ಲಿ ಗುಣತಿಲಕ ಒಂಟಿ ರನ್ ಕಸಿಯಲು ಮುಂದಾಗಿದ್ದರು. ಈ ವೇಳೆ ಪೊಲಾರ್ಡ್‌ ವೇಗವಾಗಿ ಬಾಲ್‌ ಹಿಡಿಯಲು ಮುಂದಕ್ಕೆ ಬರುತ್ತಿದ್ದರು. ಪೊಲಾರ್ಡ್‌ ಬರುತ್ತಿರುವುದನ್ನು ಗಮನಿಸಿದ ಗುಣತಿಲಕ ಒಂದು ರನ್‌ ಓಡುವ ನಿರ್ಧಾರದಿಂದ ಹಿಂದಕ್ಕೆ ಸರಿದು ಮರಳಿ ಸ್ಟ್ರೈಕ್‌ನತ್ತ ಹಿಂದಕ್ಕೆ ಓಡಿದ್ದಾರೆ. ಓಡುವ ಸಂದರ್ಭದಲ್ಲಿ ಗುಣತಿಲಕ ಚೆಂಡಿನ ಮೇಲೆ ಕಾಲಿಟ್ಟಿದ್ದಾರೆ. ಕಾಲಿನ ಹಿಂಬದಿಗೆ ತಾಗಿದ ಚೆಂಡು ಕೀಪರ್‌ನತ್ತ ಸಾಗಿದೆ.

    https://twitter.com/ImKanup/status/1370085333530857472

    ಬಾಲ್‌ ಹಿಡಿಯಲು ಗುಣತಿಲಕ ಅಡ್ಡಿಯಾದ ಕಾರಣ ರನೌಟ್‌ ಪ್ರಯತ್ನ ವಿಫಲಗೊಂಡಿತು. ಇದರಿಂದ ಸಿಟ್ಟಾದ ಪೊಲಾರ್ಡ್‌ ಕ್ಷೇತ್ರ ರಕ್ಷಣೆಗೆ ಅಡ್ಡಿ ಪಡಿಸಿದ ಕಾರಣ ನೀಡಿ ಅಂಪೈರ್‌ ಬಳಿ ಔಟ್‌ ನೀಡಲು ಮನವಿ ಮಾಡಿದರು.

    ಫೀಲ್ಡ್‌ ಅಂಪೈರ್‌ ಜೋ ವಿಲ್ಸನ್‌ ಮೂರನೇ ಅಂಪೈರ್‌ಗೆ ತೀರ್ಪನ್ನು ನೀಡುವ ಮೊದಲು ಸಾಫ್ಟ್‌ ಸಿಗ್ನಲ್‌ ಔಟ್‌ಎಂದು ತೀರ್ಪು ನೀಡಿದ್ದರು. ರಿಪ್ಲೇ ವೇಳೆ ಗುಣತಿಲಕ ಉದ್ದೇಶಪೂರ್ವಕವಾಗಿ ಚೆಂಡಿಗೆ ಅಡ್ಡಿ ಪಡಿಸಿರುವುದು ಸ್ಪಷ್ಟವಾಗಿ ಕಾಣದೇ ಇದ್ದರೂ ಫೀಲ್ಡ್‌ ಅಂಪೈರ್‌ ಔಟ್‌ ತೀರ್ಮಾನ ನೀಡಿದ ಹಿನ್ನೆಲೆಯಲ್ಲಿ ಮೂರನೇ ಅಂಪೈರ್‌ ಔಟ್‌ ಎಂದು ತೀರ್ಪು ನೀಡಿದರು.

    ಉದ್ದೇಶಪೂರ್ವಕವಾಗಿ ಯಾವುದೇ ತಪ್ಪು ಎಸಗದಿದ್ದರೂ ಫೀಲ್ಡಿಂಗ್‌ಗೆ‌ ಅಡ್ಡಿಯಾಗಿದ್ದಾರೆ ಎಂಬ ಐಸಿಸಿ ನಿಯಮದನ್ವಯ ಅಂಪೈರ್ ಔಟ್ ತೀರ್ಪು ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮಹತ್ವದ ಪಂದ್ಯದಲ್ಲಿ ಅಂಪೈರ್‌ಗಳಿಂದ ಈ ರೀತಿಯ ತೀರ್ಪುಗಳು ಪ್ರಕಟವಾದರೆ ಗೆಲ್ಲುವ ತಂಡ ಸೋಲಬಹುದು ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಂಡೀಸ್‌ ಆಟಗಾರರು ಕ್ರೀಡಾ ಸ್ಪೂರ್ತಿ ಮರೆತು ಆಡಿದ್ದಾರೆ ಎಂದು ಕ್ರಿಕೆಟ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://twitter.com/ShuvoAlHossain/status/1370076093613404160

    ಕ್ಷಮೆಯಾಚಿಸಿದ ಪೊಲಾರ್ಡ್‌: ಪಂದ್ಯ ಮುಗಿದ ಬಳಿಕ ಪೊಲಾರ್ಡ್‌ ಧನುಷ್ಕಾ ಗುಣತಿಲಕ ಅವರ ಬಳಿ ಕ್ಷಮೆಯಾಚಿಸಿದ್ದಾರೆ. ಪಂದ್ಯ ನಡೆಯುವಾಗ ಈ ವಿಚಾರ ತಿಳಿದಿರಲಿಲ್ಲ. ರಿಪ್ಲೇ ನೋಡುವಾಗ ನೋಡಿದ ಬಳಿಕವಷ್ಟೇ ನಾನು ಅಡ್ಡಿ ಮಾಡಿಲ್ಲ ಎನ್ನುವುದು ಅವರ ಗಮನಕ್ಕೆ ಬಂದಿದೆ ಎಂದು ಗುಣತಿಲಕ ಹೇಳಿದ್ದಾರೆ.

    ವಿಂಡೀಸ್‌ಗೆ ಜಯ : ವಿಂಡೀಸ್ ಮೊದಲ ಏಕದಿನ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 49 ಓವರ್‌ಗಳಲ್ಲಿ 232 ರನ್‌ಗಳಿಗೆ ಆಲೌಟ್‌ ಆಗಿತ್ತು. ಆರಂಭಿಕ ಆಟಗಾರ ಶಾಯ್‌ ಹೋಪ್‌ ಅವರ 110 ರನ್‌ಗಳ ನೆರವಿನಿಂದ ವಿಂಡೀಸ್‌ 2 ವಿಕೆಟ್‌ ನಷ್ಟಕ್ಕೆ 236 ರನ್‌ ಹೊಡೆದು ಜಯಗಳಿಸಿತು.