Tag: ಗುಜರಾತ್ ಶಾಸಕರು

  • ಈಗಲ್ ಟನ್ ನಲ್ಲಿದ್ದ ಕಾಂಗ್ರೆಸ್ ಶಾಸಕರು ಇಂದು ಶಿಫ್ಟ್?

    ಈಗಲ್ ಟನ್ ನಲ್ಲಿದ್ದ ಕಾಂಗ್ರೆಸ್ ಶಾಸಕರು ಇಂದು ಶಿಫ್ಟ್?

    ರಾಮನಗರ: ಇಲ್ಲಿನ ಬಿಡದಿ ಸಮೀಪದ ಈಗಲ್ ಟನ್ ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಕಾಂಗ್ರೆಸ್ ಶಾಸಕರು ಇಂದು ಪ್ರವಾಸಕ್ಕೆ ಹೊರಡುವ ಇಲ್ಲವೇ ಈಗಲ್ ಟನ್ ನಿಂದ ಬೇರೆಡೆ ಶಿಫ್ಟ್ ಆಗುವ ಲಕ್ಷಣಗಳು ದಟ್ಟವಾಗಿವೆ.

    ಬೆಳ್ಳಂಬೆಳಗ್ಗೆಯೇ ರೆಸಾರ್ಟ್ ಒಳಗೆ ಎರಡು ಐರಾವತ ಬಸ್‍ಗಳು ಪ್ರವೇಶಿಸಿವೆ. ಇದ್ರಿಂದ ಗುಜರಾತ್ ಶಾಸಕರು ರೆಸಾರ್ಟ್ ನಿಂದ ಹೊರ ಹೋಗಲಿದ್ದಾರೆ ಎನ್ನಲಾಗ್ತಿದೆ. ಶಾಸಕರೆಲ್ಲರೂ ಕೂಡಾ ಪ್ರವಾಸಕ್ಕೆ ಬೆಂಗಳೂರು ಅಥವಾ ಮಡಿಕೇರಿ ಕಡೆಗೆ ಹೋಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಆದ್ರೆ ಬಸ್ ಗಳು ರೆಸಾರ್ಟ್ ಒಳಪ್ರವೇಶ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಈಗಲ್ ಟನ್ ರೆಸಾರ್ಟ್ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸಿನಿಮಾ ಚಿತ್ರಿಕರಣಕ್ಕೆ ಬಸ್ ಗಳು ಬಂದಿವೆ ಅಂತ ತಿಳಿಸುತ್ತಿದ್ದಾರೆ.

  • ಡಿಕೆಶಿ ಹುಡುಕಿ ರೆಸಾರ್ಟ್ ಗೆ ಬಂದ ಐಟಿ ಅಧಿಕಾರಿಗಳು ಗುಜರಾತ್ ಶಾಸಕರನ್ನು ಸಂಪರ್ಕಿಸಿದ್ದೇಕೆ?

    ಡಿಕೆಶಿ ಹುಡುಕಿ ರೆಸಾರ್ಟ್ ಗೆ ಬಂದ ಐಟಿ ಅಧಿಕಾರಿಗಳು ಗುಜರಾತ್ ಶಾಸಕರನ್ನು ಸಂಪರ್ಕಿಸಿದ್ದೇಕೆ?

    ಬೆಂಗಳೂರು: ಈಗಲ್ ಟನ್ ರೆಸಾರ್ಟ್‍ನಲ್ಲಿ ಐಟಿ ಅಧಿಕಾರಿಗಳು ಸಚಿವ ಡಿಕೆ ಶಿವಕುಮಾರ್ ಅವರನ್ನು ಮಾತ್ರ ಸಂಪರ್ಕಿಸಿದ್ದರು ಎಂಬ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿಕೆಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆಯ ಸಿಸಿಟಿವಿ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಇದರಲ್ಲಿ ಐಟಿ ಅಧಿಕಾರಿಗಳು ರೆಸಾರ್ಟಲ್ಲಿದ್ದ ಶಾಸಕರನ್ನು ಮಾತನಾಡುತ್ತಿರೋ ದೃಶ್ಯಗಳಿವೆ.

    ಗುಜರಾತ್ ಶಾಸಕರಿಗಾಗಿಯೇ ಈಗಲ್ಟನ್ ಮೇಲೆ ಐಟಿ ದಾಳಿ ನಡೆಯಿತಾ ಎಂಬ ಅನುಮಾನ ಮೂಡಿದೆ. ಕಾರಣ ರೆಸಾರ್ಟ್‍ನಲ್ಲಿ ಸಚಿವ ಡಿಕೆಶಿ ಮೇಲೆ ದಾಳಿ ವೇಳೆ ಗುಜರಾತ್ ಎಂಎಲ್‍ಎಗಳನ್ನು ಐಟಿ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಈ ಎಕ್ಸ್ ಕ್ಲೂಸಿವ್ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕಾಂಗ್ರೆಸ್ ಶಾಸಕರಾದ ಜಾವೀದ್ ಪಿರ್ ಜಾದಾ, ಇಂದ್ರಾನಿಲ್ ರಾಜಗುರು, ಬಲದೇವ್ ಜೀ, ನಟವರ್ ಸಿಂಗ್ ಠಾಕೂರ್ ರನ್ನು ಅಧಿಕಾರಿಗಳು ಭೇಟಿಯಾಗಿದ್ದಾರೆ. ಅಧಿಕಾರಿಗಳು ಶಾಸಕರೊಂದಿಗೆ ಮಾತುಕತೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಗುಜರಾತ್ ಶಾಸಕರು ಈಗಲ್‍ಟನ್ ರೆಸಾರ್ಟ್‍ನಲ್ಲಿರುವ ಕಾರಣ ಅಲ್ಲಿ ದಾಳಿ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದು ರಾಜಕೀಯ ಪ್ರೇರಿತ ಎಂದು ಕಿಡಿ ಕಾರಿತ್ತು. ಆದ್ರೆ ಇದಕ್ಕೆ ಬುಧವರಾದಂದು ಸ್ಪಷ್ಟೀಕರಣ ನೀಡಿದ್ದ ಆದಾಯ ತೆರಿಗೆ ಇಲಾಖೆ, ಈ ದಾಳಿ ಸಚಿವ ಡಿಕೆಶಿ ಮೇಲೆ ಮಾತ್ರ. ಗುಜರಾತ್ ಶಾಸಕರಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿತ್ತು.

    ಕರ್ನಾಟಕದ ಸಚಿವರಿಗೆ ಸಂಬಂಧಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಕರ್ನಾಟಕ ತನಿಖಾ ತಂಡ ಶೋಧ ನಡೆಸುತ್ತಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 132 ಅಡಿ ನಡೆಯುತ್ತಿರುವ ಈ ಶೋಧ ಸಾಕ್ಷಿ ಸಂಗ್ರಹದ ಪ್ರಕ್ರಿಯೆಯಾಗಿದೆ. ನಿರ್ದಿಷ್ಟ ಸಮಯದಿಂದ ಚಾಲ್ತಿಯಲ್ಲಿರುವ ತನಿಖೆಯ ಮುಂದುವರಿದ ಭಾಗವಾಗಿ ಈ ದಾಳಿ ನಡೆಸಲಾಗಿದೆ. ದಾಳಿಯ ಸಮಯವನ್ನ ಈ ಹಿಂದೆಯೇ ನಿಗದಿಪಡಿಸಲಾಗಿತ್ತು. ಬೇರೆ ರಾಜ್ಯದ ಶಾಸಕರನ್ನ ಕರ್ನಾಟಕಕ್ಕೆ ಕರೆತಂದಿರುವುದು ಅನಿರೀಕ್ಷಿತ ಅಷ್ಟೇ. ದಾಳಿ ನಡೆಸಲಾಗಿರುವ ಸಚಿವರು ಬೆಂಗಳೂರಿನ ರೆಸಾರ್ಟ್‍ನಲ್ಲಿ ಇದ್ದು, ಅದೇ ರೆಸಾರ್ಟ್‍ನಲ್ಲಿ ಬೇರೆ ರಾಜ್ಯದ ಶಾಸಕರನ್ನ ಇರಿಸಲಾಗಿದೆ. ಹೀಗಾಗಿ ಸಚಿವರ ರೂಮನ್ನು ಮಾತ್ರ ಪರಿಶೀಲನೆ ಮಾಡಲಾಗ್ತಿದೆ. ದಾಳಿ ತಂಡಕ್ಕೂ ಬೇರೆ ರಾಜ್ಯದ ಶಾಸಕರಿಗೂ ಯಾವುದೇ ಸಂಬಂಧವಿಲ್ಲ, ಸಂಪರ್ಕವೂ ಇಲ್ಲ. ಓರ್ವ ಕರ್ನಾಟಕ ಸಚಿವರ ಮೇಲೆ ಮಾತ್ರ ಈ ದಾಳಿ ನಡೆದಿದೆ ಎಂದು ಐಟಿ ಇಲಾಖೆ ಹೇಳಿತ್ತು. ಆದರೆ ಈಗ ಅಧಿಕಾರಿಗಳು ಗುಜರಾತ್ ಶಾಸಕರನ್ನು ಭೇಟಿ ಮಾಡಿರುವ ದೃಶ್ಯಗಳು ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ.

  • ಕಾಂಗ್ರೆಸ್ ಶಾಸಕರ ರೆಸಾರ್ಟ್ ಪಾಲಿಟಿಕ್ಸ್ – ಇಂದಿನಿಂದ ಕೈ ಪಡೆಗೆ ಪ್ರವಾಸ ಭಾಗ್ಯ

    ಕಾಂಗ್ರೆಸ್ ಶಾಸಕರ ರೆಸಾರ್ಟ್ ಪಾಲಿಟಿಕ್ಸ್ – ಇಂದಿನಿಂದ ಕೈ ಪಡೆಗೆ ಪ್ರವಾಸ ಭಾಗ್ಯ

    ಬೆಂಗಳೂರು: ನಗರದ ಈಗಲ್‍ಟನ್ ರೆಸಾರ್ಟ್‍ನಲ್ಲಿ ಕಳೆದ ಮೂರು ದಿನಗಳಿಂದ ಬೀಡುಬಿಟ್ಟಿರೋ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಇಂದು ಪ್ರವಾಸ ಭಾಗ್ಯ ದೊರೆಯಲಿದೆ.

    ಇಂದಿನಿಂದ ಎರಡ್ಮೂರು ದಿನಗಳ ಕಾಲ ಬೆಂಗಳೂರಿಗೆ ಹತ್ತಿರದಲ್ಲಿಯೇ ಇರುವ ಪ್ರೇಕ್ಷಣೀಯ ಮತ್ತು ಪ್ರವಾಸಿ ತಾಣಗಳನ್ನು ತೋರಿಸುವ ಕೆಲಸ ನಡೆಯಲಿದೆ. ಇದರ ಉಸ್ತುವಾರಿಯೂ ಡಿಕೆ ಬ್ರದರ್ಸ್ ಹೆಗಲಿಗೆ ಬಿದ್ದಿದೆ. ವಿಶೇಷ ಎಸಿ ಬಸ್‍ನಲ್ಲಿ ಬಿಗಿ ಭದ್ರತೆ ನಡುವೆ ಶಾಸಕರನ್ನು ಟ್ರಿಪ್‍ಗೆ ಕರೆದುಕೊಂಡು ಹೋಗಲಿದ್ದಾರೆ.

    ಗುಜರಾತ್ ಶಾಸಕರ ರೆಸಾರ್ಟ್ ರಾಜಕಾರಣ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರದಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಇಂಧನ ಸಚಿವ ಡಿಕೆ ಶಿವಕಮಾರ್, ನಮ್ಮ ಗುಜರಾತ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ. ಅವರಿಗೆ ಅತಿಥ್ಯ ನಿಡೋದು ನಮ್ಮ ಕೆಲಸ ನಾವು ಮಾಡ್ತಿದ್ದೇವೆ. ನಾವು ಯಾರನ್ನು ಹಿಡಿದಿಟ್ಟುಕೊಂಡಿಲ್ಲ. ಯಾರು ದಡ್ಡರಲ್ಲ, ಚಿಕ್ಕ ಮಕ್ಕಳಲ್ಲ ಅಂತ ಹೇಳಿದ್ರು. ಬೆಂಗಳೂರಿನ ಐಟಿ ಕ್ಷೇತ್ರ, ಇನ್ನಿತರ ಪ್ರವಾಸಿ ಸ್ಥಳ ವೀಕ್ಷಣೆ ಮಾಡಿಸುತ್ತೇವೆ. ಯಾರ ಮೊಬೈಲ್ ಕಿತ್ತುಕೊಂಡಿಲ್ಲ. ಯಾರನ್ನು ಬಂಧಿಸಿಲ್ಲ. ಶಾಸಕರ ಸಭೆಯ ಬಳಿಕ ಅವರೆಲ್ಲ ಮೀಡಿಯಾ ಮುಂದೆ ಬರಲಿದ್ದಾರೆ. 43 ಶಾಸಕರು ಇಲ್ಲಿ ಇದ್ದಾರೆ. ಮತ್ತಷ್ಟು ಜನ ಬರ್ತಾರೆ. ನಾಲ್ವರು ಐವರು ಯಾರೂ ತಪ್ಪಿಸಿಕೊಂಡಿಲ್ಲ. ಎಲ್ಲರೂ ಒಟ್ಟಿಗೆ ಇದ್ದಾರೆ. ಎಲ್ಲಿಗೆ ಪ್ರವಾಸ ಅನ್ನುವುದನ್ನ ಇನ್ನು ನಿರ್ಧರಿಸಿಲ್ಲ. ದೇವಸ್ಥಾನ, ಟೂರಿಸಂ ಸ್ಥಳಗಳಿಗೆ ಕಳಿಸುತ್ತೇವೆ ಅಂತ ಹೇಳಿದ್ರು.

    ಕುದುರೆ ವ್ಯಾಪಾರ ಭಯದಲ್ಲಿ ರೆಸಾರ್ಟ್ ರಾಜಕೀಯ ಮಾಡ್ತಿದ್ದೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ದೇಶಾದ್ಯಂತ ಕುದುರೆ ವ್ಯಾಪಾರ ನಡೆಯುತ್ತಿದೆ. ಅಧಿಕಾರ ಬಳಸಿಕೊಂಡು ಕುದುರೆ ವ್ಯಾಪಾರ ಮಾಡ್ತಿದ್ದಾರೆ. ಇದನ್ನ ತಪ್ಪಿಸಲು ಎಲ್ಲರು ಬಂದಿದ್ದಾರೆ. ಬಿಜೆಪಿ ಐದು ವರ್ಷ ಇದ್ದಾಗ ಏನ್ ಮಾಡಿತ್ತು? ಯಾರನ್ನ ಎಲ್ಲಿಗೆ ಕರೆದುಕೊಂಡು ಹೋಗಿದ್ರು? ರೆಸಾರ್ಟ್ ರಾಜಕೀಯ ಮಾಡಿದ್ರು. ಅದನ್ನೇ ಈಗ ನಾವು ಮಾಡುತ್ತಿದ್ದೇವೆ ಅಂತ ಅವರು ಹೇಳಿದ್ರು.