Tag: ಗುಜರಾತ್ ಟೈಟಾನ್ಸ್

  • ಪಾಂಡ್ಯ ಆಲ್‍ರೌಂಡರ್ ಆಟ ರಾಜಸ್ಥಾನ ಪರದಾಟ – ಮುಂದುವರಿದ ಗುಜರಾತ್ ಗೆಲುವಿನ ಓಟ

    ಪಾಂಡ್ಯ ಆಲ್‍ರೌಂಡರ್ ಆಟ ರಾಜಸ್ಥಾನ ಪರದಾಟ – ಮುಂದುವರಿದ ಗುಜರಾತ್ ಗೆಲುವಿನ ಓಟ

    ಮುಂಬೈ: ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ ಆಟಕ್ಕೆ ರಾಜಸ್ಥಾನ ಥಂಡ ಹೊಡೆದಿದೆ. ರಾಜಸ್ಥಾನ ವಿರುದ್ಧ ಗುಜರಾತ್ 37 ರನ್‌ಗಳ ಅಂತರದ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

    ಗುಜರಾತ್ ಪರ ಬ್ಯಾಟಿಂಗ್‍ನಲ್ಲಿ ಪಾಂಡ್ಯ, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್ ಮಿಂಚಿದರೆ, ಬೌಲಿಂಗ್‍ನಲ್ಲಿ ಲಾಕಿ ಫರ್ಗುಸನ್, ಯಶ್ ದಯಾಳ್ ಕಮಾಲ್ ಮಾಡಿದರು.

    ಗೆಲ್ಲಲು 193 ರನ್‍ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಶೂನ್ಯ ಸುತ್ತಿದರು. ಒಂದುಕಡೆ ವಿಕೆಟ್ ಉರುಳುತ್ತಿದ್ದರು ಜೋಸ್ ಬಟ್ಲರ್ ಮಾತ್ರ ಎಂದಿನಂತೆ ಹೊಡಿಬಡಿ ಆಟದ ಮೂಲಕ ಗಮನಸೆಳೆದರು. ಆದರೆ 54 ರನ್ (24 ಎಸೆತ, 8 ಬೌಂಡರಿ, 3 ಸಿಕ್ಸ್)ಗಳಿಗೆ ಬಟ್ಲರ್ ಆಟ ಕೊನೆಗೊಂಡಿತು. ಆ ಬಳಿಕ ಶಿಮ್ರಾನ್ ಹೆಟ್ಮೆಯರ್ 29 ರನ್ (17 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಗುಜರಾತ್ ಬೌಲರ್‍ಗಳಿಗೆ ಕಾಡಿದರು. ಅಂತಿಮವಾಗಿ ರಾಜಸ್ಥಾನ 20 ಓವರ್‌ಗಳ ಅಂತ್ಯಕ್ಕೆ 9 ವಿಕೆಟ್‌  ಕಳೆದುಕೊಂಡು 155 ರನ್‌ ಗಳಿಸಲಷ್ಟೇ ಶಕ್ತವಾಗಿ 37 ರನ್‌ಗಳಿಂದ ಸೋಲೊಪ್ಪಿಕೊಂಡಿತು.

    ಹಾರ್ದಿಕ್ ಪಾಂಡ್ಯ ಆರ್ಭಟ
    ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ತಂಡ ಆರಂಭದಲ್ಲೇ ಅಗ್ರ ಕ್ರಮಾಂಕದ ಮೂರು ವಿಕೆಟ್‍ಗಳನ್ನು 53 ರನ್‍ಗಳಿಗೆ ಕಳೆದುಕೊಂಡಿತು. ಆ ಬಳಿಕ ಒಂದಾದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಅಭಿನವ್ ಮನೋಹರ್ ಗುಜರಾತ್ ತಂಡಕ್ಕೆ ಚೇತರಿಕೆ ನೀಡಿದರು.

    ಒಂದುಕಡೆ ಪಾಂಡ್ಯ ಅಬ್ಬರಿಸಲು ಪ್ರಾರಂಭಿಸುತ್ತಿದ್ದಂತೆ ಅಭಿನವ್ ಮನೋಹರ್ ಕೂಡ ಮನಮೋಹಕ ಹೊಡೆತಗಳಿಗೆ ಮುಂದಾದರು. ಈ ಜೋಡಿ 4ನೇ ವಿಕೆಟ್‍ಗೆ 86 ರನ್ (55 ಎಸೆತ) ಒಟ್ಟುಗೂಡಿಸಿತು. ಅಭಿನವ್ ಮನೋಹರ್ 43 ರನ್ (28 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು.

    ಬಳಿಕ ಬಂದ ಡೇವಿಡ್ ಮಿಲ್ಲರ್ ರಾಜಸ್ಥಾನ್ ಬೌಲರ್‌ಗಳಿಗೆ ಕಂಟಕವಾದರು. ಇನ್ನೊಂದೆಡೆ ಪಾಂಡ್ಯ ಮಾತ್ರ ರಾಜಸ್ಥಾನ ಬೌಲರ್‌ಗಳ ಮುಂದೆ ತಮ್ಮ ಪರಾಕ್ರಮ ಮೆರೆದರು. ಈ ಜೋಡಿ ಅಜೇಯ 53 ರನ್ (25 ಎಸೆತ) ಸಿಡಿಸಿ ತಂಡದ ಮೊತ್ತವನ್ನು 190ರ ಗಡಿದಾಟಿಸಿದರು. ಅಂತಿಮವಾಗಿ ಪಾಂಡ್ಯ ಅಜೇಯ 87 ರನ್ (52 ಎಸೆತ, 8 ಬೌಂಡರಿ, 4 ಸಿಕ್ಸ್) ಮತ್ತು ಮಿಲ್ಲರ್ 31 ರನ್ (14 ಎಸೆತ, 5 ಬೌಂಡರಿ, 1 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 192 ರನ್ ಕಲೆಹಾಕಿತು.

  • ಗುಜರಾತ್‌ಗೆ ಸೋಲಿನ ಗುದ್ದು ಕೊಟ್ಟ ಹೈದರಾಬಾದ್ – 8 ವಿಕೆಟ್‍ಗಳ ಜಯ

    ಗುಜರಾತ್‌ಗೆ ಸೋಲಿನ ಗುದ್ದು ಕೊಟ್ಟ ಹೈದರಾಬಾದ್ – 8 ವಿಕೆಟ್‍ಗಳ ಜಯ

    ಮುಂಬೈ: ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಹೈದರಾಬಾದ್ ತಂಡ ಗುಜರಾತ್ ವಿರುದ್ಧ 8 ವಿಕೆಟ್‍ಗಳ ಅಂತರದಿಂದ ಗೆದ್ದು ಬೀಗಿದೆ.

    ಗೆಲ್ಲಲು 163 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಉತ್ತಮ ಆರಂಭ ಪಡೆಯಿತು. ಅಭಿಷೇಕ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್ ಗುಜರಾತ್ ಬೌಲರ್‌ಗಳಿಗೆ ಕಾಡಿದರು. ಈ ಜೋಡಿ ಮೊದಲ ವಿಕೆಟ್‍ಗೆ 64 ರನ್ (53 ಎಸೆತ) ಗಳ ಜೊತೆಯಾಟವಾಡಿತು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ಅಭಿಷೇಕ್ ಶರ್ಮಾ 42 ರನ್ (32 ಎಸೆತ, 4 ಬೌಂಡರಿ) ವಿಕೆಟ್ ಪಡೆಯುವಲ್ಲಿ ರಶೀದ್ ಖಾನ್ ಯಶಸ್ವಿಯಾದರು. ಬಳಿಕ ಬಂದ ರಾಹುಲ್ ತ್ರಿಪಾಠಿ 17 ರನ್ (11 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಗಾಯಗೊಂಡು ನಿವೃತ್ತರಾದರು.

    ಇತ್ತ ಕೇನ್ ವಿಲಿಯಮ್ಸನ್ 57 ರನ್ (46 ಎಸೆತ, 2 ಬೌಂಡರಿ, 4 ಸಿಕ್ಸ್) ಸಿಡಿಸಿ ನಾಯಕನಾಟವಾಡಿದರು. ಅಂತಿಮವಾಗಿ 19.1 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು ಇನ್ನೂ 5 ಎಸೆತ ಬಾಕಿ ಇರುವಂತೆ ಹೈದರಾಬಾದ್ 168 ರನ್ ಸಿಡಿಸಿ 8 ವಿಕೆಟ್‍ಗಳಿಂದ ಗೆಲುವು ದಾಖಲಿಸಿತು.

    ಟಾಸ್ ಗೆದ್ದ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಎದುರಾಳಿ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಹೈದರಾಬಾದ್ ಬೌಲರ್‌ಗಳು ಕೂಡ ನಾಯಕನ ನಿರ್ಧಾರಂತೆ ಗುಜರಾತ್ ಬ್ಯಾಟ್ಸ್‌ಮ್ಯಾನ್‌ಗಳಿಗೆ ಆರಂಭದಿಂದಲೇ ಕಡಿವಾಣ ಹಾಕಿದರು. ಗುಜರಾತ್ ಪರ ನಾಯಕ ಹಾರ್ದಿಕ್ ಪಾಂಡ್ಯ ಏಕಾಂಗಿ ಹೋರಾಟ ನಡೆಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಬಂದ ಪಾಂಡ್ಯ ಕೊನೆಯ ಎಸೆತದ ವರೆಗೆ ಬ್ಯಾಟ್ ಬೀಸಿ ಭರ್ತಿ 50 ರನ್ (42 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದರು.

    ಪಾಂಡ್ಯಗೆ ಉತ್ತಮ ಸಾಥ್ ನೀಡಿದ ಕನ್ನಡಿಗ ಅಭಿನವ್ ಮನೋಹರ್ 35 ರನ್ (21 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಈ ಮೊದಲು ಪಾಂಡ್ಯ ಜೊತೆ 5ನೇ ವಿಕೆಟ್‍ಗೆ 50 ರನ್ (32 ಎಸೆತ) ಜೊತೆಯಾಟವಾಡಿ ತಂಡಕ್ಕೆ ನೆರವಾದರು. ಅಂತಿಮವಾಗಿ ಗುಜರಾತ್ ತಂಡ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು.

    ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ ಮತ್ತು ಟಿ.ನಟರಾಜನ್ ತಲಾ 2 ವಿಕೆಟ್ ಕಿತ್ತು ಗುಜರಾತ್ ತಂಡಕ್ಕೆ ಮುಳುವಾದರು. ಮಾರ್ಕೊ ಜಾನ್ಸೆನ್ ಮತ್ತು ಉಮ್ರಾನ್ ಮಲಿಕ್ ತಲಾ 1 ವಿಕೆಟ್ ಹಂಚಿಕೊಂಡರು.

  • ಪಂಜಾಬ್‍ಗೆ ಪಂಚ್ ನೀಡಿದ ರಾಹುಲ್ ತೆವಾಟಿಯಾ – ಗುಜರಾತ್‍ಗೆ ರೋಚಕ ಜಯ

    ಪಂಜಾಬ್‍ಗೆ ಪಂಚ್ ನೀಡಿದ ರಾಹುಲ್ ತೆವಾಟಿಯಾ – ಗುಜರಾತ್‍ಗೆ ರೋಚಕ ಜಯ

    ಮುಂಬೈ: ಕೊನೆಯ ಎಸೆತದವರೆಗೆ ರೋಚಕವಾಗಿ ಕೂಡಿದ್ದ ಪಂದ್ಯದಲ್ಲಿ ರಾಹುಲ್ ತೆವಾಟಿಯಾ ಸಿಡಿಸಿದ ಬ್ಯಾಕ್ ಟು ಬ್ಯಾಕ್ ಸಿಕ್ಸರ್‌ಗಳ ನೆರವಿನಿಂದ ಪಂಜಾಬ್ ವಿರುದ್ಧ ಗುಜರಾತ್ 6 ವಿಕೆಟ್‍ಗಳ ರೋಚಕ ಜಯ ಸಾಧಿಸಿತು.

    ಗೆದ್ದಿದ್ದು ಹೇಗೆ:
    ಕೊನೆಯ 12 ಎಸೆತಗಳಲ್ಲಿ 32 ರನ್ ಬೇಕಾಗಿತ್ತು 18ನೇ ಓವರ್‌ನಲ್ಲಿ 13 ರನ್ ಬಂತು. 6 ಎಸೆತಗಳಲ್ಲಿ 19 ರನ್ ಬೇಕಿತ್ತು. ಕೊನೆಯ ಓವರ್ ಎಸೆದ ಓಡನ್ ಸ್ಮಿತ್ ಅವರ ಮೊದಲ ಎಸೆತದಲ್ಲಿ 1 ರನ್ ಬಂತು. ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟ್ ಆದರು. ಮೂರನೇ ಎಸೆತದಲ್ಲಿ 4 ರನ್, 4ನೇ ಎಸೆತದಲ್ಲಿ 1 ರನ್ ಬಂತು. ಕೊನೆಯ 2 ಎಸೆತಗಳಲ್ಲಿ ಗುಜರಾತ್ ಗೆಲುವಿಗೆ 12 ರನ್ ಬೇಕಿತ್ತು. ರಾಹುಲ್ ತೆವಾಟಿಯಾ ಕೊನೆಯ 2 ಎಸೆತಗಳನ್ನು ಸಿಕ್ಸರ್‌ಗಟ್ಟಿ ಗುಜರಾತ್‍ಗೆ 6 ವಿಕೆಟ್‍ಗಳ ಜಯ ತಂದುಕೊಟ್ಟರು.

    ಪಂಜಾಬ್ ನೀಡಿದ 190 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡ ಆರಂಭದಲ್ಲೇ ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್ 6 ರನ್ (7 ಎಸೆತ, 1 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ಗಿಲ್ ಮತ್ತು ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಸಾಯಿ ಸುದರ್ಶನ್ 35 ರನ್ (30 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆಗುವ ಮುನ್ನ 2ನೇ ವಿಕೆಟ್‍ಗೆ ಗಿಲ್ ಜೊತೆ 101 ರನ್ (68 ಎಸೆತ)ಗಳ ಜೊತೆಯಾಟವಾಡಿದರು. ಗಿಲ್ 96 ರನ್ (59 ಎಸೆತ, 11 ಬೌಂಡರಿ, 1 ಸಿಕ್ಸ್) ವೇಳೆ ಔಟ್ ಆಗಿ ಶತಕ ವಂಚಿತರಾದರು.

    ಈ ಮೊದಲು ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಆದರೆ ಈ ಪಂದ್ಯದಲ್ಲೂ ಕೂಡ ನಾಯಕ ಮಯಾಂಕ್ ಅಗರ್‌ವಾಲ್ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿ ಕೇವಲ 5 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಶಿಖರ್ ಧವನ್ 35 ರನ್ (30 ಎಸೆತ, 4 ಬೌಂಡರಿ) ಬಾರಿಸಿ ಔಟ್ ಆದರು.


    ಆ ಬಳಿಕ ಲಿಯಾಮ್ ಲಿವಿಂಗ್ಸ್ಟೋನ್ ಪಂಜಾಬ್ ಪರ ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸಿದರು. ಗುಜರಾತ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಲಿವಿಂಗ್ಸ್ಟೋನ್ ಬೌಂಡರಿ, ಸಿಕ್ಸರ್‌ಗಳ ಅಬ್ಬರದ ಆಟದ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದರು. ಆದರೆ 64 ರನ್ (27 ಎಸೆತ, 7 ಬೌಂಡರಿ, 4 ಸಿಕ್ಸ್) ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಆ ಬಳಿಕ ಮತ್ತೆ ಪಂಜಾಬ್ ಕುಸಿತ ಕಂಡಿತು. ಅಂತಿಮವಾಗಿ ರಾಹುಲ್ ಚಹರ್ ಬಿರುಸಿನ ಅಜೇಯ 22 ರನ್ (14 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 180ರ ಗಡಿದಾಟಿಸಿದರು.

    ಅಂತಿಮವಾಗಿ 20 ಓವರ್‌ಗಳಲ್ಲಿ ಪಂಜಾಬ್ ತಂಡ 9 ವಿಕೆಟ್ ಕಳೆದುಕೊಂಡು 189 ರನ್ ಕಲೆ ಹಾಕಿತು. ಗುಜರಾತ್ ಪರ ರಶೀದ್ ಖಾನ್ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ದರ್ಶನ್ ನಲ್ಕಂಡೆ 2, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಮತ್ತು ಲಾಕಿ ಫರ್ಗುಸನ್ ತಲಾ 1 ವಿಕೆಟ್ ಪಡೆದರು.

  • ಡೆಲ್ಲಿಗೆ ಟಕ್ಕರ್ ನೀಡಿದ ಟೈಟಾನ್ಸ್ – ಗುಜರಾತ್‍ಗೆ ಭರ್ಜರಿ ಜಯ

    ಡೆಲ್ಲಿಗೆ ಟಕ್ಕರ್ ನೀಡಿದ ಟೈಟಾನ್ಸ್ – ಗುಜರಾತ್‍ಗೆ ಭರ್ಜರಿ ಜಯ

    ಪುಣೆ: ಗುಜರಾತ್ ಟೈಟಾನ್ಸ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ನೀಡಿದ ಉತ್ತಮ ಪ್ರದರ್ಶನದ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

    ಗೆಲ್ಲಲು 172 ರನ್‍ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ನಾಯಕ ರಿಷಭ್ ಪಂತ್ 43 ರನ್ (29 ಎಸೆತ, 7 ಬೌಂಡರಿ) ಮತ್ತು ಲಲಿತ್ ಯಾದವ್ 25 ರನ್ (22 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಹೋರಾಡಿದ್ದನ್ನು ಹೊರತುಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ ಕೂಡ ಡೆಲ್ಲಿ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಎಡವಿದರು. ಅಂತಿಮವಾಗಿ ಡೆಲ್ಲಿ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 157 ರನ್‌ಗಳಿಸಲಷ್ಟೆ ಶಕ್ತವಾಗಿ ಸೋಲು ಕಂಡಿತು.

    ಡೆಲ್ಲಿ ನಾಯಕನ ನಿರ್ಧಾರದಂತೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಗುಜರಾತ್ ಟೈಟಾಟ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮ್ಯಾಥ್ಯೂ ವೇಡ್ 1 ರನ್‍ಗೆ ಸುಸ್ತಾದರು. ನಂತರ ವಿಜಯ್ ಶಂಕರ್ 13 ರನ್ (20 ಎಸೆತ, 1 ಬೌಂಡರಿ) ಬಾರಿಸಿ ನಿರಾಸೆ ಮೂಡಿಸಿದರು.

    ನಂತರ ಜೊತೆಯಾದ ಶುಭಮನ್ ಗಿಲ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ 3ನೇ ವಿಕೆಟ್‍ಗೆ 65 ರನ್ (47 ಎಸೆತ) ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಹಾರ್ದಿಕ್ ಪಾಂಡ್ಯ 31 ರನ್ (27 ಎಸೆತ, 4 ಬೌಂಡರಿ) ಸಿಡಿಸಿ ಔಟ್ ಆದರು. ಆದರೆ ಗಿಲ್ ಮಾತ್ರ ತಮ್ಮ ಬ್ಯಾಟಿಂಗ್ ಆರ್ಭಟ ಮುಂದುವರಿಸಿ 84 ರನ್ (46 ಎಸೆತ 6 ಬೌಂಡರಿ, 4 ಸಿಕ್ಸ್) ಬಾರಿಸಿ ಕ್ಯಾಚ್ ನೀಡಿ ಔಟ್ ಆದರು. ಅಂತಿಮವಾಗಿ ಟೈಟಾನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ ಪೇರಿಸಿತು.

    ಡೆಲ್ಲಿ ಪರ ಮುಸ್ತಫಿಜುರ್ ರೆಹಮಾನ್ 3 ವಿಕೆಟ್ ಮಿಂಚಿದರೆ, ಖಲೀಲ್ ಅಹಮದ್ 2 ಮತ್ತು ಕುಲ್‍ದೀಪ್ ಯಾದವ್ 1 ವಿಕೆಟ್ ಕಿತ್ತರು.

  • ಲಕ್ನೋಗೆ ಲಾಕ್ ಹಾಕಿದ ಟೈಟಾನ್ಸ್ – ಗುಜರಾತ್‍ಗೆ 5 ವಿಕೆಟ್‍ಗಳ ಜಯ

    ಲಕ್ನೋಗೆ ಲಾಕ್ ಹಾಕಿದ ಟೈಟಾನ್ಸ್ – ಗುಜರಾತ್‍ಗೆ 5 ವಿಕೆಟ್‍ಗಳ ಜಯ

    ಮುಂಬೈ: ಕೊನೆಯ ಓವರ್ ವರೆಗೆ ರೋಚಕವಾಗಿ ಕೂಡಿದ್ದ ಪಂದ್ಯದಲ್ಲಿ ಲಕ್ನೋ ವಿರುದ್ಧ ಮೇಲುಗೈ ಸಾಧಿಸಿದ ಗುಜರಾತ್ ತಂಡ ಗೆಲುವಿನ ನಗೆ ಬೀರಿತು.

    ಕೊನೆಯ 2 ಓವರ್‍ಗಳಲ್ಲಿ 20 ರನ್ ಬೇಕಾಗಿತ್ತು. ಬಳಿಕ 6 ಎಸೆತಗಳಿಗೆ 11 ರನ್ ಬೇಕಾಗಿತ್ತು. ಕೊನೆಯ ಓವರ್ ಎಸೆದ ಆವೇಶ್ ಖಾನ್‍ರ ಎರಡು ಎಸೆತಗಳನ್ನು ಕನ್ನಡಿಗ ಅಭಿನವ್ ಮನೋಹರ್ ಬೌಂಡರಿಗಟ್ಟಿದರು. ಬಳಿಕ ಒಂದು ಸಿಂಗಲ್ ರನ್ ಕಸಿದರು. ಬಳಿಕ 3 ಎಸೆತಗಳಲ್ಲಿ 2 ರನ್ ಬೇಕಾಗಿತ್ತು. ಈ ವೇಳೆ ರಾಹುಲ್ ತೆವಾಟಿಯಾ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಈ ಮೊದಲು ಲಕ್ನೋ ನೀಡಿದ 159 ರನ್‍ಗಳ ಗುರಿ ಬೆನ್ನಟ್ಟಿದ ಗುಜರಾತ್ ಕೂಡ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಆಟಗಾರ ಶುಭಮನ್ ಗಿಲ್ ಡಕ್ ಔಟ್ ಆದರು. ನಂತರ ಬಂದ ವಿಜಯ್ ಶಂಕರ್ ಬ್ಯಾಟ್‍ನಿಂದ ಸಿಡಿದಿದ್ದು, ಕೇವಲ 4 ರನ್. ಆ ಬಳಿಕ ಒಂದಾದ ಮ್ಯಾಥ್ಯೂ ವೇಡ್ ಮತ್ತು ಹಾರ್ದಿಕ್ ಪಾಂಡ್ಯ ಕೆಲ ಹೊತ್ತು ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದರು.ಈ ಜೋಡಿ 3ನೇ ವಿಕೆಟ್‍ಗೆ 57 ರನ್ (48 ಎಸೆತ) ಜೊತೆಯಾಟವಾಡಿತು. ಪಾಂಡ್ಯ 33 ರನ್ (28 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ವೇಡ್ 30 ರನ್ (29 ಎಸೆತ, 4 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ರಾಹುಲ್ ತೆವಾಟಿಯಾ ಅಜೇಯ 40 ರನ್ (24 ಎಸೆತ, 5 ಬೌಂಡರಿ, 2 ಸಿಕ್ಸ್) ಮತ್ತು ಭಿನವ್ ಮನೋಹರ್ 15 ರನ್ (7 ಎಸೆತ, 3 ಬೌಂಡರಿ) ಸಿಡಿಸಿ19.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 161 ರನ್ ಸಿಡಿಸಿ 5 ವಿಕೆಟ್‍ಗಳ ಗೆಲುವು ದಾಖಲಿಸಿದೆ.

    ಬೃಹತ್ ಮೊತ್ತ ಪೇರಿಸುವ ವಿಶ್ವಾಸದೊಂದಿಗೆ ಮೊದಲು ಬ್ಯಾಟಿಂಗ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭದಲ್ಲೆ ಸಾಲು, ಸಾಲು ವಿಕೆಟ್ ಕಳೆದುಕೊಂಡು ಸಾಗಿತು. ನಾಯಕ ಕೆ.ಎಲ್ ರಾಹುಲ್ ಡಕ್ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಇವರ ಹಿಂದೆ ಕ್ವಿಂಟನ್ ಡಿ ಕಾಕ್ 7, ಎವಿನ್ ಲೆವಿಸ್ 10, ಮನೀಶ್ ಪಾಂಡೆ 6 ರನ್ ಸಿಡಿಸಿ ಪೆವಿಲಯನ್‍ಗೆ ಹೆಜ್ಜೆ ಹಾಕಿದರು. 4 ಓವರ್‌ಗಳಲ್ಲಿ ಲಕ್ನೋ ತಂಡದ ವೇಗಿಗಳು ಗುಜರಾತ್ ತಂಡದ ಅಗ್ರ ಕ್ರಮಾಂಕದ ಹೆಡೆಮುರಿ ಕಟ್ಟಿದರು.

    ಬಳಿಕ ದೀಪಕ್ ಹೂಡಾ ಮತ್ತು ಆಯುಷ್ ಬದೋನಿ ಗುಜರಾತ್ ತಂಡಕ್ಕೆ ಬ್ಯಾಟಿಂಗ್‍ನಲ್ಲಿ ಆಸರೆಯಾದರು. ಕೆಲ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಈ ಜೋಡಿ 5ನೇ ವಿಕೆಟ್‍ಗೆ 87 ರನ್ (68 ಎಸೆತ) ಜೊತೆಯಾಟವಾಡಿತು. ಅಲ್ಲದೆ ತಲಾ ಅರ್ಧಶತಕ ಹೊಡೆತು ಸಂಭ್ರಮಿಸಿದರು. ದೀಪಕ್ ಹೂಡಾ 55 ರನ್, 41 ಎಸೆತ, 6 ಬೌಂಡರಿ, 2 ಸಿಕ್ಸ್) ಮತ್ತು ಆಯುಷ್ ಬದೋನಿ 54 ರನ್ (41 ಎಸೆತ, 4 ಬೌಂಡರಿ, 3 ಸಿಕ್ಸ್) ಬಾರಿಸಿ ಗಮನಸೆಳೆದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಕೃನಾಲ್ ಪಾಂಡ್ಯ ಅಜೇಯ 21 ರನ್ (13 ಎಸೆತ, 3 ಬೌಂಡರಿ) ಸಿಡಿಸಿ ತಂಡದ ಮೊತ್ತ 150ರ ಗಡಿ ದಾಟುವಂತೆ ನೋಡಿಕೊಂಡರು. ಅಂತಿಮವಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಕಲೆ ಹಾಕಿತು.

    ಗುಜರಾತ್ ಪರ ಶಮಿ 3 ವಿಕೆಟ್ ಕಿತ್ತು ಶೈನ್ ಆದರು. ವರುಣ್ ಆರೋನ್ 2 ವಿಕೆಟ್ ಮತ್ತು ರಶೀದ್ ಖಾನ್ 1 ವಿಕೆಟ್ ಹಂಚಿಕೊಂಡರು.

     

  • ತಂಡದ ಹೆಸರು ಸೂಚಿಸಿದ ಅಹಮದಾಬಾದ್ ಫ್ರಾಂಚೈಸ್ – ಗುಜರಾತ್ ಟೈಟಾನ್ಸ್ ನ್ಯೂ ನೇಮ್

    ತಂಡದ ಹೆಸರು ಸೂಚಿಸಿದ ಅಹಮದಾಬಾದ್ ಫ್ರಾಂಚೈಸ್ – ಗುಜರಾತ್ ಟೈಟಾನ್ಸ್ ನ್ಯೂ ನೇಮ್

    ಮುಂಬೈ: ಐಪಿಎಲ್‍ಗೆ ಸೇರ್ಪಡೆಗೊಂಡಿರುವ ಅಹಮದಾಬಾದ್ ಫ್ರಾಂಚೈಸ್ ಅಧಿಕೃತವಾಗಿ ತಂಡದ ಹೆಸರನ್ನು ಗುಜರಾತ್ ಟೈಟಾನ್ಸ್ ಎಂದು ಘೋಷಿಸಿದೆ.

    CVC Capital Partners ತಂಡದ ಮಾಲಕರಾದ ಸಿದ್ದಾರ್ಥ್ ಪಾಟೀಲ್ ಅಹಮದಾಬಾದ್ ಫ್ರಾಂಚೈಸ್‍ನ ಹೆಸರು ಗುಜರಾತ್ ಟೈಟಾನ್ಸ್ ಎಂಬುದಾಗಿ ನಾಮಕರಣ ಮಾಡಿರುವುದನ್ನು ದೃಢಪಡಿಸಿದ್ದಾರೆ. ಇದನ್ನೂ ಓದಿ: ದಾದಾ ಮಾತನ್ನು ಡೋಂಟ್ ಕೇರ್ ಎಂದ್ರಾ ಹಾರ್ದಿಕ್ ಪಾಂಡ್ಯ?

    ಈಗಾಗಲೇ ಗುಜರಾತ್ ಟೈಟಾನ್ಸ್ ತಂಡದ ನಾಯಕರನ್ನಾಗಿ ಟೀಂ ಇಂಡಿಯಾದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯರನ್ನು ನೇಮಕಮಾಡಲಾಗಿದೆ. ಜೊತೆಗೆ ರಶೀದ್ ಖಾನ್ ಮತ್ತು ಶುಭಮನ್ ಗಿಲ್‍ರನ್ನು ಹರಾಜಿಗೂ ಮೊದಲು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪಾಂಡ್ಯ ಮತ್ತು ರಶೀದ್ ಖಾನ್‍ಗೆ 15 ಕೋಟಿ ರೂ. ನೀಡಿದರೆ, ಗಿಲ್‍ಗೆ 8 ಕೋಟಿ ರೂ. ನೀಡಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

    2011ರಲ್ಲಿ ಟೀಂ ಇಂಡಿಯಾದ ಕೋಚ್ ಆಗಿದ್ದ ಗ್ಯಾರಿ ಕಸ್ಟರ್ನ್‌ರನ್ನು ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಟೀಂ ಇಂಡಿಯಾದ ಮಾಜಿ ವೇಗಿ ಆಶಿಶ್ ನೆಹ್ರಾ ಅವರನ್ನು ಕೋಚ್ ಆಗಿ ನೇಮಕಮಾಡಲಾಗಿದೆ. ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್ ಸೋಲ್ಡ್ ಔಟ್

    ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಫಿಕ್ಸಿಂಗ್ ಆರೋಪದಲ್ಲಿ ಬ್ಯಾನ್ ಆದ ಸಂದರ್ಭ ಅಹಮದಾಬಾದ್ ಫ್ರಾಂಚೈಸ್ 2016 ಮತ್ತು 17 ರಲ್ಲಿ ಐಪಿಎಲ್‍ನಲ್ಲಿ ಆಡಿತ್ತು. ಈ ವೇಳೆ ತಂಡದ ಹೆಸರು ಗುಜರಾತ್ ಲಯನ್ಸ್ ಎಂದಿತ್ತು. ತಂಡವನ್ನು ಸುರೇಶ್ ರೈನಾ ಮುನ್ನಡೆಸಿದ್ದರು. ಇದೀಗ ಗುಜರಾತ್ ತಂಡ ಮತ್ತೊಮ್ಮೆ ಐಪಿಎಲ್‍ನಲ್ಲಿ ಮಿಂಚಲು ಸಿದ್ಧವಾಗುತ್ತಿದೆ.