Tag: ಗುಜರಾತ್ ಟೈಟಾನ್ಸ್

  • IPL 2023 Finals: ಗಿಲ್‌ ಅಬ್ಬರಕ್ಕೆ ಮುಂಬೈ ಬರ್ನ್‌ – 2ನೇ ಬಾರಿಗೆ ಗುಜರಾತ್‌ ಟೈಟಾನ್ಸ್‌ ಫೈನಲ್‌ಗೆ

    IPL 2023 Finals: ಗಿಲ್‌ ಅಬ್ಬರಕ್ಕೆ ಮುಂಬೈ ಬರ್ನ್‌ – 2ನೇ ಬಾರಿಗೆ ಗುಜರಾತ್‌ ಟೈಟಾನ್ಸ್‌ ಫೈನಲ್‌ಗೆ

    ಅಹಮದಾಬಾದ್‌: ಶುಭಮನ್‌ ಗಿಲ್‌ ಸ್ಫೋಟಕ ಶತಕದ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದ ಗುಜರಾತ್‌ ಟೈಟಾನ್ಸ್‌ ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ 62 ರನ್‌ಗಳ ಭರ್ಜರಿ ಜಯದೊಂದಿಗೆ ಸತತ 2ನೇ ಬಾರಿಗೆ ಐಪಿಎಲ್‌ನಲ್ಲಿ ಫೈನಲ್‌ ಪ್ರವೇಶಿಸಿದೆ. ಇನ್ನೂ 5 ಬಾರಿ ಚಾಂಪಿಯನ್ಸ್‌ ಪಟ್ಟಕ್ಕೇರಿದ್ದ ಮುಂಬೈ ಇಂಡಿಯನ್ಸ್‌ ಸೋಲಿನೊಂದಿಗೆ 2023ರ ಐಪಿಎಲ್‌ ಆವೃತ್ತಿಗೆ ವಿದಾಯ ಹೇಳಿದೆ.

    2022ರ ಆವೃತ್ತಿಯಲ್ಲಿ ಐಪಿಎಲ್‌ ಪ್ರವೇಶಿಸಿದ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ತಂಡ ಸತತ 2ನೇ ಬಾರಿಗೆ ಐಪಿಎಲ್‌ನಲ್ಲಿ ಫೈನಲ್‌ ತಲುಪಿದೆ. ಸೂಪರ್‌ ಸಂಡೇನಲ್ಲಿ (ಮೇ 28) ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೆಣಸಲಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 20 ಓವರ್‌ಗಳಲ್ಲಿ 233 ರನ್‌ ಗಳಿಸಿತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ 18.2 ಓವರ್‌ಗಳಲ್ಲಿ 171 ರನ್‌ಗಳಿಗೆ ಸರ್ವಪತನ ಕಂಡಿತು.

    ಚೇಸಿಂಗ್‌ ಆರಂಭಿಸಿದ ಮುಂಬೈ ಇಂಡಿಯನ್ಸ್‌ ಆರಂಭದಲ್ಲೇ ರೋಹಿತ್‌ ಶರ್ಮಾ ಹಾಗೂ ನೆಹಾಲ್‌ ವಧೇರಾ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ನಂತರ ಕಣಕ್ಕಿಳಿದ ‌14 ಎಸೆತಗಳಲ್ಲಿ ವರ್ಮಾ 307.14 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ ಸ್ಫೋಟಕ 43 ರನ್‌ (5 ಬೌಂಡರಿ, 3 ಸಿಕ್ಸರ್‌) ಚಚ್ಚಿ ತಂಡಕ್ಕೆ ಚೇತರಿಕೆ ತಂದರು.

    ನಂತರ 4ನೇ ವಿಕೆಟ್‌ಗೆ ಜೊತೆಯಾದ ಕ್ಯಾಮರೂನ್‌ ಗ್ರೀನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಜೋಡಿ 32 ಎಸೆತಗಳಲ್ಲಿ 52 ರನ್‌ ಜೊತೆಯಾಟ ನೀಡಿತ್ತು. ಅಷ್ಟರಲ್ಲೇ 20 ಎಸೆತಗಳಲ್ಲಿ 30 ರನ್‌ (2 ಸಿಕ್ಸರ್‌, 2 ಬೌಂಡರಿ) ಗಳಿಸಿದ್ದ ಗ್ರೀನ್‌ ವಿಕೆಟ್‌ ಕೈಚೆಲ್ಲಿ ನಿರಾಸೆ ಮೂಡಿಸಿದರು. ಇನ್ನೂ ಅರ್ಧಶತಕ ಗಳಿಸಿ ಸ್ಫೋಟಕ ಬ್ಯಾಟಿಂಗ್‌ ಮಾಡುತ್ತಿದ್ದ ಸೂರ್ಯಕುಮಾರ್‌ ಯಾದವ್‌, ತಂಡಕ್ಕೆ ಗೆಲುವು ತಂದುಕೊಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದ್ರೆ ಬೇಡದ ಶಾಟ್‌ ಹೊಡೆಯಲು ಯತ್ನಿಸಿ ಸೂರ್ಯ ಕ್ಲೀನ್‌ ಬೌಲ್ಡ್‌ ಆಗಿ ತಂಡದ ಗೆಲುವಿನ ಕನಸನ್ನ ನುಚ್ಚು ನೂರು ಮಾಡಿದರು.

    ಸೂರ್ಯಕುಮಾರ್‌ ಯಾದವ್‌ 61 ರನ್‌ (38 ಎಸೆತ, 7 ಬೌಂಡರಿ, 2 ಸಿಕ್ಸರ್‌) ಗಳಿಸಿ ಔಟಾಗುತ್ತಿದ್ದಂತೆ ವಿಷ್ಣು ವಿನೋದ್‌ 5 ರನ್‌ ಗಳಿಸಿ ಔಟಾದರು. ಕೊನೆಯಲ್ಲಿ ಟಿಮ್‌ ಡೇವಿಡ್‌ 2 ರನ್‌, ಕ್ರಿಸ್‌ ಜೋರ್ಡಾನ್‌ 2 ರನ್‌ ಗಳಿಸಿದರೆ ಪಿಯೂಷ್‌ ಚಾವ್ಲಾ ಶೂನ್ಯಕ್ಕೆ ನಿರ್ಗಮಿಸಿದರು. ಕುಮಾರ್‌ ಕಾರ್ತಿಕೇಯನ್‌ 6 ರನ್‌ ಗಳಿಸಿ ಔಟಾದರೆ, ಜೇಸನ್ ಬೆಹ್ರೆನ್ಡಾರ್ಫ್ 3 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾದರೂ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಬೃಹತ್‌ ಮೊತ್ತ ದಾಖಲಿಸಿತು. 6.3 ಓವರ್‌ಗಳಲ್ಲಿ 54 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡರು. 2ನೇ ವಿಕೆಟ್‌ಗೆ 16.5 ಓವರ್‌ಗಳಲ್ಲಿ ತಂಡದ ಮೊತ್ತ 192ಕ್ಕೆ ಏರಿತ್ತು.

    ಶುಭಮನ್‌ ಗಿಲ್‌ ಸ್ಫೋಟಕ ಶತಕದಾಟಕ್ಕೆ ಮುಂಬೈ ಬೌಲರ್‌ಗಳು ಕಂಗಾಲಾಗಿದ್ದರು. ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್‌ ಜೋಡಿ 64 ಎಸೆತಗಳಲ್ಲಿ 138 ರನ್‌ ಗಳಿಸಿತ್ತು. ಮೊದಲ 32 ಎಸೆತಗಳಲ್ಲಿ 50 ರನ್‌ ಗಳಿಸಿದ್ದ ಗಿಲ್‌, ಮುಂದಿನ 17 ಎಸೆತಗಳಲ್ಲಿ 50 ರನ್‌ ಚಚ್ಚಿ ಶತಕ ಪೂರೈಸಿದರು. ಕೊನೆಗೆ 60 ಎಸೆತಗಳನ್ನು ಎದುರಿಸಿ 10 ಭರ್ಜರಿ ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 129 ರನ್‌ ಗಳಿಸಿ ಔಟಾದರು.

    ಈ ನಡುವೆ ಸಾಯಿ ಸುದರ್ಶನ್‌ 43 ರನ್‌ (‌ 31 ಎಸೆತ, 5 ಬೌಂಡರಿ, 1 ಸಿಕ್ಸರ್), ವೃದ್ಧಿಮಾನ್‌ ಸಾಹಾ 18 ರನ್‌, ಹಾರ್ದಿಕ್‌ ಪಾಂಡ್ಯ ಅಜೇಯ 28 ರನ್‌, ರಶೀದ್‌ ಖಾನ್‌ ಅಜೇಯ 5 ರನ್‌ ಗಳಿಸಿದರು.

    ಮುಂಬೈ ಪರ ಆಕಾಶ್‌ ಮಧ್ವಾಲ್‌, ಪಿಯೂಷ್‌ ಚಾವ್ಲಾ ತಲಾ ಒಂದೊಂದು ವಿಕೆಟ್‌ ಪಡೆದರು.

  • ಗಿಲ್‌ ಗಿಲ್‌ ಗಿಲ್‌ – ಕೊಹ್ಲಿ IPL ದಾಖಲೆ ಉಡೀಸ್‌ ಮಾಡ್ತಾರಾ ಗಿಲ್‌?

    ಗಿಲ್‌ ಗಿಲ್‌ ಗಿಲ್‌ – ಕೊಹ್ಲಿ IPL ದಾಖಲೆ ಉಡೀಸ್‌ ಮಾಡ್ತಾರಾ ಗಿಲ್‌?

    ಅಹಮದಾಬಾದ್‌: ಭರ್ಜರಿ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವ ಟೀಂ ಇಂಡಿಯಾ ಹಾಗೂ ಗುಜರಾತ್‌ ಟೈಟಾನ್ಸ್‌ (GT) ಆಟಗಾರ ಶುಭಮನ್‌ ಗಿಲ್‌ (Shubman Gill) ಈ ಬಾರಿ ವಿರಾಟ್‌ ಕೊಹ್ಲಿ (Virat Kohli) ಐಪಿಎಲ್‌ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.

    ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಪಾಲಿಗೆ ಮುಳ್ಳಾಗಿ ಕಾಡಿದ ಗಿಲ್‌, ಶತಕ ಬಾರಿಸಿ ಆರ್‌ಸಿಬಿ ತಂಡವನ್ನು ಪ್ಲೇ ಆಫ್‌ಗೆ ಬಾರದಂತೆ ತಡೆದರು. ಶುಕ್ರವಾರ (ಮೇ 26) ಕ್ವಾಲಿಫೈಯರ್‌ 2ನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ ಗಿಲ್‌ ಮುಂಬೈ ಬೌಲರ್‌ಗಳನ್ನ ಚೆಂಡಾಡಿದರು. ಆರಂಭಿಕನಾಗಿ ಕಣಕ್ಕಿಳಿದ ಶುಭಮನ್‌ ಗಿಲ್‌ 60 ಎಸೆತಗಳಲ್ಲಿ 10 ಸಿಕ್ಸ್‌, 7 ಬೌಂಡರಿಗಳೊಂದಿಗೆ ಬರೋಬ್ಬರಿ 129 ರನ್‌ ಚಚ್ಚಿದರು. ಈ ಮೂಲಕ 2023ರ ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮ್ಯಾನ್‌ ಆಗಿದ್ದಾರೆ. ಇದನ್ನೂ ಓದಿ: IPL 2023: ಧೋನಿಯಿಂದ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ- ಲಾಸ್ಟ್ 5 ಓವರ್‌ಗೂ ಮುನ್ನ ನಡೆದಿದ್ದೇನು?

    ಆರ್‌ಸಿಬಿ ತಂಡದ ನಾಯಕ ಫಾಫ್‌ ಡು ಪ್ಲೆಸಿಸ್‌ 730 ರನ್‌ಗಳಿಸಿ ಆರೆಂಜ್‌ಕ್ಯಾಪ್‌ ರೇಸ್‌ನಲ್ಲಿದ್ದರು. ಆದ್ರೆ ಗಿಲ್‌ ಈ ಸೀಸನ್‌ನಲ್ಲಿ 3 ಶತಕಗಳನ್ನ ಸಿಡಿಸುವ ಮೂಲಕ ಆರೆಂಜ್‌ ಕ್ಯಾಪ್‌‌ ರೇಸ್‌ನಲ್ಲಿ ಮೊದಲಿಗರಾಗಿದ್ದಾರೆ.

    ಕೊಹ್ಲಿ ದಾಖಲೆ ಉಡೀಸ್‌ ಆಗುತ್ತಾ?
    ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ 2016ರ ಐಪಿಎಲ್‌ ಒಂದೇ ಸೀಸನ್‌ನಲ್ಲಿ 4 ಭರ್ಜರಿ ಶತಕ, 7 ಅರ್ಧಶತಕಗಳೊಂದಿಗೆ 973 ರನ್‌ ಗಳಿಸಿದ್ದರು. ಇದು ಈವರೆಗೆ ಯಾರೂ ಮುರಿಯದ ದಾಖಲೆಯಾಗಿದೆ. 2016ರ ಸೀಸನ್‌ನಲ್ಲೇ ಡೇವಿಡ್‌ ವಾರ್ನರ್‌ 848 ರನ್‌ ಗಳಿಸಿದ್ದರು. 2022ರ ಐಪಿಎಲ್‌ ಸೀಸನ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಜೋಸ್‌ ಬಟ್ಲರ್‌ 4 ಶತಕಗಳೊಂದಿಗೆ 863 ರನ್‌ ಗಳಿಸಿದ್ದರು.

    2023ರ ಸೀಸನ್‌ನಲ್ಲಿ 16 ಪಂದ್ಯ 16 ಇನ್ನಿಂಗ್ಸ್‌ಗಳನ್ನಾಡಿರುವ ಶುಭಮನ್‌ ಗಿಲ್‌ 3 ಶತಕಗಳೊಂದಿಗೆ 851 ರನ್‌ ಗಳಿಸಿದ್ದಾರೆ. ಈ ಮೂಲಕ ಡೇವಿಡ್‌ ವಾರ್ನರ್‌ ದಾಖಲೆಯನ್ನ ಮುರಿದಿದ್ದು, ಜೋಸ್‌ ಬಟ್ಲರ್‌ ಹಾಗೂ ವಿರಾಟ್‌ ಕೊಹ್ಲಿ ಅವರ ಸಾರ್ವಕಾಲಿಕ ದಾಖಲೆಯನ್ನ ಮುರಿಯುವ ಸನಿಹದಲ್ಲಿದ್ದಾರೆ. ಒಂದು ವೇಳೆ ಶುಕ್ರವಾರದ ಪಂದ್ಯದಲ್ಲಿ ಟೈಟಾನ್ಸ್‌ ಫೈನಲ್‌ ತಲುಪಿ, ಇದೇ ಆಟ ಮುಂದುವರಿಸಿದರೆ,‌ ಗಿಲ್‌ ಕೊಹ್ಲಿಯ ದಾಖಲೆಯನ್ನ ಮುರಿಯುವ ಸಾಧ್ಯತೆಗಳಿದೆ. ಇದನ್ನೂ ಓದಿ: ಕೊಹ್ಲಿ ಕೆಣಕಿದ ನವೀನ್‌ಗೆ ಮುಂಬೈ ಸ್ಟಾರ್ಸ್‌ ಕೊಟ್ರು ಪಂಚ್‌ – RCB ಫ್ಯಾನ್ಸ್‌ಗೆ ಡಬಲ್‌ ಖುಷಿ

  • IPL 2023: GT vs MI ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಕಾಟ

    IPL 2023: GT vs MI ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಕಾಟ

    ಅಹಮದಾಬಾದ್‌: ಮುಂಬೈ ಇಂಡಿಯನ್ಸ್‌ (Mumbai Indians) ಹಾಗೂ ಗುಜರಾತ್‌ ಟೈಟಾನ್ಸ್‌ (Gujarat Taitans) ನಡುವಿನ ಹೈವೋಲ್ಟೇಜ್‌ ಕದನಕ್ಕೆ ಕೆಲವೇ ಕ್ಷಣಗಳು ಬಾಕಿಯಿದ್ದು, ಮಳೆ ಅಡ್ಡಿಯಾಗಿದೆ.

    ಅಹಮದಾಬಾದ್‌ನಲ್ಲಿ ಮಳೆ ಜೋರಾಗಿದ್ದು, ಮೈದಾನವನ್ನು ಟಾರ್ಪಲ್‌ಗಳಿಂದ ಮುಚ್ಚಲಾಗಿದೆ. ಸದ್ಯ ಮಳೆಯಿಂದ (Rain) ಪಂದ್ಯ ರದ್ದಾಗುವ ಭೀತಿ ಎದುರಾಗಿದೆ. ಇದನ್ನೂ ಓದಿ: IPL 2023 Final: ಗುಜರಾತ್‌ಗೆ ಗುನ್ನ ಕೊಟ್ಟ ಚೆನ್ನೈ – 10ನೇ ಬಾರಿಗೆ ಫೈನಲ್‌ಗೆ CSK ಎಂಟ್ರಿ

    2ನೇ ಆವೃತ್ತಿಯಲ್ಲಿ ಪ್ಲೇ ಆಫ್‌ ಪ್ರವೇಶಿಸಿರುವ ಗುಜರಾತ್‌ ಟೈಟಾನ್ಸ್‌ ಸತತ 2ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದರೆ, 5 ಬಾರಿ ಚಾಂಪಿಯನ್‌ ಪಟ್ಟಕ್ಕೇರಿರುವ ಮುಂಬೈ ಇಂಡಿಯನ್ಸ್‌ 2ನೇ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದು 6ನೇ ಬಾರಿ ಕಪ್‌ ಗೆಲ್ಲುವ ತವಕದಲ್ಲಿದೆ. ಇಂದು ಇತ್ತಂಡಗಳ ನಡುವೆ ಹಣಾಹಣಿ ನಡೆಯಲಿದ್ದು, ಗೆದ್ದ ತಂಡ ಫೈನಲ್‌ನಲ್ಲಿ ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೆಣಸಲಿದೆ. ಇದನ್ನೂ ಓದಿ: ಧೋನಿ ಫ್ಯಾನ್ಸ್‌ ಜೊತೆ ಕಿರಿಕ್‌ ತೆಗೆದ ಜಡೇಜಾ – RCB ತಂಡ ಸೇರಲು ಆಫರ್‌ ಕೊಟ್ರು ಫ್ಯಾನ್ಸ್‌

  • IPL 2023: ಧೋನಿಯಿಂದ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ- ಲಾಸ್ಟ್ 5 ಓವರ್‌ಗೂ ಮುನ್ನ ನಡೆದಿದ್ದೇನು?

    IPL 2023: ಧೋನಿಯಿಂದ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ- ಲಾಸ್ಟ್ 5 ಓವರ್‌ಗೂ ಮುನ್ನ ನಡೆದಿದ್ದೇನು?

    ಚೆನ್ನೈ: 2023ರ ಐಪಿಎಲ್ (IPL 2023) ಆವೃತ್ತಿಯ ಪ್ಲೇ ಆಫ್‌ನಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (GT) ತಂಡವನ್ನ ಮಣಿಸಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) 10ನೇ ಬಾರಿಗೆ ಫೈನಲ್ ತಲುಪಿದೆ. ಆದ್ರೆ ಕೊನೆಯ 5 ಓವರ್‌ನಲ್ಲಿ ಟೈಟಾನ್ಸ್ ಗೆಲುವಿಗೆ 71 ರನ್‌ಗಳ ಅಗತ್ಯವಿದ್ದಾಗ ಸಿಎಸ್‌ಕೆ ನಾಯಕ ಎಂ.ಎಸ್ ಧೋನಿ (MS Dhoni) ನಡೆದುಕೊಂಡ ರೀತಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ ಎಂದು ಕ್ರಿಕೆಟ್ ಅಭಿಮಾನಿಗಳು ದೂಷಿಸುತ್ತಿದ್ದಾರೆ.

    ಈ ಹಿಂದೆ ಸಿಎಸ್‌ಕೆ ತಂಡದ ಪ್ರಮುಖ ಆಟಗಾರರು ಮ್ಯಾಚ್ ಫಿಕ್ಸಿಂಗ್ ಕೇಸ್‌ನಲ್ಲಿ ಸಿಲುಕಿದ್ದರಿಂದ ತಂಡ 2 ವರ್ಷ ಬ್ಯಾನ್ ಆಗಿತ್ತು. ಆಗ ತಂಡದಲ್ಲಿದ್ದ ಆಟಗಾರರು ಇಬ್ಭಾಗವಾಗಿ ಕೆಲ ಆಟಗಾರರು ಗುಜರಾತ್ ಲಯನ್ಸ್ ತಂಡದಲ್ಲಿ, ಇನ್ನೂ ಕೆಲವರು ಮಹಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದಲ್ಲಿ ಆಡಿದ್ದರು. ಇದೀಗ ಮಹಿ ಅವರ ನಡೆಯಿಂದ ಕ್ರಿಕೆಟ್ ಅಭಿಮಾನಿಗಳ ನಡುವೆ ಪರ-ವಿರೋಧ ಚರ್ಚೆ ಹುಟ್ಟಿಕೊಂಡಿದೆ. ಇದನ್ನೂ ಓದಿ: IPL 2023 Final: ಗುಜರಾತ್‌ಗೆ ಗುನ್ನ ಕೊಟ್ಟ ಚೆನ್ನೈ – 10ನೇ ಬಾರಿಗೆ ಫೈನಲ್‌ಗೆ CSK ಎಂಟ್ರಿ

    ಕೊನೆಯ 5 ಓವರ್‌ನಲ್ಲಿ ನಡೆದಿದ್ದೇನು?
    ಗುಜರಾತ್ ಟೈಟಾನ್ಸ್‌ಗೆ ಬೃಹತ್ ಮೊತ್ತದ ಗುರಿ ನೀಡಿದ್ದ ಚೆನ್ನೈ 16ನೇ ಓವರ್ ಬೌಲ್ ಮಾಡಲು ಮಥೀಶ ಪತಿರನ ಸಿದ್ಧಗೊಳ್ಳುತ್ತಿದ್ದಾಗ ಅಂಪೈರ್ ಅನಿಲ್ ಚೌಧು ಪತಿರನ ಅವರನ್ನ ತಡೆದರು. ಆಗ ಲೆಗ್ ಅಂಪೈರ್ ಕ್ರಿಸ್ ಗ್ಯಾನಿ ಬಳಿ ತೆರಳಿದ ಧೋನಿ ಏನೆ0ದು ವಿಚಾರಿಸಿದರು. ಪತಿರನ ತಮ್ಮ ಮೊದಲ ಓವರ್ (ಇನ್ನಿಂಗ್ಸ್ನ 12ನೇ ಓವರ್) ಬೌಲ್ ಮಾಡಿದ ಬಳಿಕ 9 ನಿಮಿಷ ಮೈದಾನದಿಂದ ಹೊರಗುಳಿದಿದ್ದರು. ನಿಯಮದ ಪ್ರಕಾರ ಆಟದ ಮಧ್ಯೆ ಆಟಗಾರ ಮೈದಾನ ತೊರೆದರೆ, ಎಷ್ಟು ಸಮಯ ಹೊರಗಿದ್ದರೋ ಅಷ್ಟು ಸಮಯ ಕಳೆದ ಬಳಿಕವಷ್ಟೇ ಬೌಲ್ ಮಾಡಬಹುದು.

    ಪತಿರನ ಬೌಲ್ ಮಾಡಲು ಇನ್ನೂ 4 ನಿಮಿಷ ಆಗಬೇಕಿತ್ತು. ಇದಕ್ಕೆ ಧೋನಿ ಈಗಾಗಲೇ ಚಹಾರ್, ಜಡೇಜಾ, ತೀಕ್ಷಣ ತಲಾ 4 ಓವರ್ ಮುಗಿಸಿದ್ದಾರೆ. ಉಳಿದಿರುವುದು ತುಷಾರ್ ದೇಶ್‌ಪಾಂಡೆ ಮಾತ್ರ. ಅದರಲ್ಲಿ 2 ಓವರ್ ಪತಿರನ ಅವರದ್ದು 3 ಓವರ್ ಬಾಕಿ ಇದೆ. ತಂಡದಲ್ಲಿರುವ ಮತ್ತೊಂದು ಬೌಲಿಂಗ್ ಆಯ್ಕೆ ಮೋಯಿನ್ ಅಲಿ, 30 ಎಸೆತದಲ್ಲಿ ಟೈಟಾನ್ಸ್ ಗೆ ಗೆಲ್ಲಲು 71 ರನ್ ಬೇಕಿದೆ. ವಿಜಯ್ ಶಂಕರ್, ರಹೀದ್ ಖಾನ್ ಇಬ್ಬರು ಬಲಗೈ ಬ್ಯಾಟರ್‌ಗಳು ಆಡುತ್ತಿರುವಾಗ ಬಲಗೈ ಸ್ಪಿನ್ನರ್‌ನನ್ನ ದಾಳಿಗಿಳಿಸುವ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ 4 ನಿಮಿಷ ಮಾತನಾಡುತ್ತಲೇ ಕಳೆಯೋಣ ಎಂದು ಧೋನಿ ಅಂಪೈರ್‌ಗಳಲ್ಲಿ ಮನವರಿಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: CSKvsGT: ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 2.5 ಕೋಟಿ ಜನರಿಂದ ವೀಕ್ಷಣೆ – ಎಲ್ಲಾ ದಾಖಲೆಗಳು ಉಡೀಸ್‌

    ದಂಡದಿಂದ ಸಿಎಸ್‌ಕೆ ಪಾರು:
    ಫೀಲ್ಡಿಂಗ್ ಮಾಡುತ್ತಿರುವ ತಂಡ ಉದ್ದೇಶ ಪೂರ್ವಕವಾಗಿ ಸಮಯ ವ್ಯರ್ಥ ಮಾಡಿದರೆ, ನಿಯಮದ ಪ್ರಕಾರ 5 ರನ್ ದಂಡ ಹಾಕಬೇಕು, ಜೊತೆಗೆ ಯಾವ ಬೌಲರ್ ನಿಂದಾಗಿ ಆಟ ವಿಳಂಬವಾಗುತ್ತಿದೆಯೋ ಆತನನ್ನು ಹೊರಹಾಕಬೇಕು. ಇದು ಅಂಪೈರ್‌ಗಳಷ್ಟೇ ತೆಗೆದುಕೊಳ್ಳಬಹುದಾದ ನಿರ್ಧಾರ. ಆದ್ರೆ ಧೋನಿಯ ವಿಚಾರದಲ್ಲಿ ಅಂಪೈರ್ ಗಳು ಮೃದು ಧೋರಣೆ ತೋರಿದ್ದಾರೆ ಎಂಬ ಚರ್ಚೆ ಜಾಲತಾಣದಲ್ಲಿ ನಡೆಯುತ್ತಿದೆ.

    ಮ್ಯಾಚ್ ಫಿಕ್ಸಿಂಗ್ ಸದ್ದು:
    ಐಪಿಎಲ್‌ನಲ್ಲಿ ಈ ಹಿಂದೆಯೂ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳು ಬೆಳಕಿಗೆ ಬಂದಿದೆ. ಟೀಂ ಇಂಡಿಯಾ ಮಾಜಿ ವೇಗಿ ಎಸ್ ಶ್ರೀಶಾಂತ್, ಅಂಕಿತ್ ಚವಾಣ್ ಹಾಗೂ ಅಜಿತ್ ಚಂಡೀಲಾ ಅವರು ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಕ್ಕಿ ಬಿದ್ದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕಾರಿ ಗುರುನಾಥ್ ಮೇಯಪ್ಪನ್ ಅವರು ಕೂಡ ಇವರ ಜೊತೆ ಶಿಕ್ಷೆಗೆ ಒಳಗಾಗಿದ್ದರು. ಬಾಂಗ್ಲಾದೇಶ ಮಾಜಿ ನಾಯಕ ಶಕಿಬ್ ಅಲ್ ಹಸನ್ ಅವರು 2021ರಲ್ಲಿ ಭ್ರಷ್ಟಚಾರದ ಕುರಿತು ವರದಿ ಮಾಡುವಲ್ಲಿ ವಿಫಲರಾಗಿದ್ದರಿಂದ ಅವರು ಕೆಲ ತಿಂಗಳ ಕಾಲ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು.

    BCCI ಭ್ರಷ್ಟಾಚಾರ ನಿಗ್ರಹ ಘಟಕ ಹೇಳುವುದೇನು?
    ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಆಟಗಾರರು ಹಾಗೂ ಅಧಿಕಾರಿಗಳನ್ನ ಸಂಪರ್ಕಿಸಿದರೆ, ತಕ್ಷಣ ಅವರು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಬೇಕು. ಇಲ್ಲದೇ ಇದ್ದಲ್ಲಿ ಅಂತಹ ಆಟಗಾರರು ಅಮಾನತು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಈ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ, ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಕಾರ್ಯ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಭ್ರಷ್ಟಚಾರ ನಿಗ್ರಹ ಘಟಕ ಹೇಳಿದೆ.

  • CSKvsGT: ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 2.5 ಕೋಟಿ ಜನರಿಂದ ವೀಕ್ಷಣೆ – ಎಲ್ಲಾ ದಾಖಲೆಗಳು ಉಡೀಸ್‌

    CSKvsGT: ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 2.5 ಕೋಟಿ ಜನರಿಂದ ವೀಕ್ಷಣೆ – ಎಲ್ಲಾ ದಾಖಲೆಗಳು ಉಡೀಸ್‌

    – GT vs CSK ಕ್ವಾಲಿಫೈಯರ್-1 ಪಂದ್ಯದ ವೇಳೆ ಏಕಕಾಲಕ್ಕೆ ದಾಖಲೆಯ ವೀಕ್ಷಣೆ

    ಮುಂಬೈ: ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಟಾಟಾ ಐಪಿಎಲ್ 2023ರ ಕ್ವಾಲಿಫೈಯರ್-1 (IPl 2023 Qualifier-1) ಪಂದ್ಯವನ್ನು ಜಿಯೋಸಿನಿಮಾದಲ್ಲಿ (JioCinema) ದಾಖಲೆಯ 2.5 ಕೋಟಿ ಜನರು ವೀಕ್ಷಿಸಿದ್ದಾರೆ. ಈ ಮೂಲಕ ಜಿಯೋಸಿನಿಮಾ ಹೊಸ ಮೈಲಿಗಲ್ಲು ಸಾಧಿಸಿದೆ.

    ಜಿಯೋಸಿನಿಮಾ ಹಾಲಿ ಐಪಿಎಲ್ ಆವೃತ್ತಿಯಲ್ಲಿ 3ನೇ ಬಾರಿಗೆ ತನ್ನದೇ ವೀಕ್ಷಕರ ದಾಖಲೆಯನ್ನ ಮುರಿದಿದೆ. ಜೊತೆಗೆ 2019ರ ಐಸಿಸಿ ಏಕದಿನ ವಿಶ್ವಕಪ್ (ICC WorldCup) ವೇಳೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ನಿರ್ಮಿಸಲ್ಪಟ್ಟಿದ್ದ ವಿಶ್ವದಾಖಲೆಯನ್ನೂ ಸರಿಗಟ್ಟಿದೆ. ಇದನ್ನೂ ಓದಿ: IPL 2023 Final: ಗುಜರಾತ್‌ಗೆ ಗುನ್ನ ಕೊಟ್ಟ ಚೆನ್ನೈ – 10ನೇ ಬಾರಿಗೆ ಫೈನಲ್‌ಗೆ CSK ಎಂಟ್ರಿ

    ಏಪ್ರಿಲ್ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (CSK) ನಡುವಿನ ಪಂದ್ಯದ ವೇಳೆ ಎಂ.ಎಸ್ ಧೋನಿ (MS Dhoni) ಅವರ ಆಟ ವೀಕ್ಷಿಸಲು 2.4 ಕೋಟಿ ವೀಕ್ಷಕರು ಜಿಯೋಸಿನಿಮಾದಲ್ಲಿ ಒಟ್ಟಾಗಿ ಸೇರಿದ್ದು ಹಿಂದಿನ ದಾಖಲೆ ಎನಿಸಿತ್ತು. ಅದಕ್ಕೂ ಮುನ್ನ ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಗತವೈಭವ ನೆನಪಿಸುವಂಥ ಬ್ಯಾಟಿಂಗ್ ಪ್ರದರ್ಶಿಸಿದಾಗ ಗರಿಷ್ಠ 2.2 ಕೋಟಿ ವೀಕ್ಷಕರ ದಾಖಲೆ ಕಂಡಿತ್ತು.

    ಟಾಟಾ ಐಪಿಎಲ್ 2023ರ (TATA IPL 2023) ಪಂದ್ಯಗಳನ್ನು ವೀಕ್ಷಿಸಲು ಜಿಯೋಸಿನಿಮಾ, ಕ್ರಿಕೆಟ್ ಅಭಿಮಾನಿಗಳ ಪ್ರಮುಖ ಆದ್ಯತೆ ಆಗಿದೆ ಎಂಬುದಕ್ಕೆ ಈ ದಾಖಲೆಗಳು ಸಾಕ್ಷಿಯಾಗಿವೆ. ರೋಚಕ ಪಂದ್ಯಗಳನ್ನು ವೀಕ್ಷಿಸುವ ವೇಳೆ ಜಿಯೋಸಿನಿಮಾದಲ್ಲಿ ಅಭಿಮಾನಿ ಕೇಂದ್ರಿತವಾದ ಹಲವಾರು ಕೊಡುಗೆಗಳನ್ನು ನೀಡಲಾಗುತ್ತಿದೆ. ಉದಾಹರಣೆಗೆ ಎಲ್ಲಾ ನೆಟ್ವರ್ಕ್ ಚಂದಾದಾರರಿಗೆ ಉಚಿತ ಸ್ಟ್ರೀಮಿಂಗ್ ನೀಡಲಾಗಿದೆ. 4K ಸ್ಟ್ರೀಮಿಂಗ್ ವಿಶೇಷವೆನಿಸಿದೆ. 12 ಭಾಷೆಗಳಲ್ಲಿ ವೀಕ್ಷಕ ವಿವರಣೆ ನೀಡಲಾಗುತ್ತಿದೆ. ಜೀತೋ ಧನ್ ಧನಾ ಧನ್ ಸ್ಪರ್ಧೆಯ ಮೂಲಕ ಪ್ರತೀ ಪಂದ್ಯದ ವೀಕ್ಷಣೆಯ ವೇಳೆ ಕಾರು ಗೆಲ್ಲುವ ಜೊತೆ ಅತ್ಯಾಕರ್ಷಕ ಬಹುಮಾನಗಳನ್ನೂ ವಿತರಿಸಲಾಗುತ್ತಿದೆ.

    ಜಿಯೋಸಿನಿಮಾ ಡಿಜಿಟಲ್ ಕ್ರೀಡಾ ವೀಕ್ಷಣೆಯ ಜಗತ್ತಿನಲ್ಲಿ ಜಾಗತಿಕ ಮಾನದಂಡ ನಿರ್ಮಿಸುವುದನ್ನು ಮುಂದುವರಿಸಿದೆ. ಟಾಟಾ ಐಪಿಎಲ್ 2023ರ ಮೊದಲ 5 ವಾರಗಳಲ್ಲಿ 1,300 ಕೋಟಿಗೂ ಅಧಿಕ ವಿಡಿಯೋ ವೀಕ್ಷಣೆಯ ದಾಖಲೆ ರಚಿಸಲಾಗಿತ್ತು. ವೀಕ್ಷಕರು ಜಿಯೋಸಿನಿಮಾದ ಅಭಿಮಾನಿ-ಕೇಂದ್ರಿತ ಪ್ರಸ್ತುತಿಗೆ ಮನಸೋತಿದ್ದಾರೆ. ಪ್ರತಿ ಪಂದ್ಯದ ವೇಳೆ ಪ್ರತಿ ವೀಕ್ಷಕರು ಸರಾಸರಿ 60 ನಿಮಿಷಗಳಷ್ಟು ಸಮಯವನ್ನು ಜಿಯೋಸಿನಿಮಾದಲ್ಲಿ ಕಳೆಯುತ್ತಿದ್ದಾರೆ. ಕನೆಕ್ಟೆಡ್ ಟಿವಿಯಲ್ಲಿನ ಟಾಟಾ ಐಪಿಎಲ್ 2023ರ ಪಂದ್ಯಗಳ ವೀಕ್ಷಣೆ ಈಗಾಗಲೇ HD TVಗಿಂತ ಎರಡು ಪಟ್ಟು ಅಧಿಕ ವೀಕ್ಷಕರ ಸಂಖ್ಯೆಯನ್ನು ತಲುಪಿದೆ. ಇದನ್ನೂ ಓದಿ: ಪ್ಲೇ ಆಫ್ಸ್‌ನಲ್ಲಿ ಒಂದೊಂದು ಡಾಟ್‌ ಬಾಲ್‌ಗೂ 500 ಗಿಡ ನೆಡಲಿದೆ BCCI – ಏಕೆ ಗೊತ್ತೇ?

    ಟಾಟಾ ಐಪಿಎಲ್ 2023ರ ಡಿಜಿಟಲ್ ಸ್ಟ್ರೀಮಿಂಗ್‌ಗಾಗಿ ಜಿಯೋಸಿನಿಮಾ 26 ಅಗ್ರ ಬ್ರ್ಯಾಂಡ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಇವುಗಳಲ್ಲಿ (ಸಹ-ಪ್ರಸ್ತುತ ಪ್ರಾಯೋಜಕ) ಡ್ರೀಮ್11, (ಕೋ-ಪವರ್ಡ್) ಜಿಯೋಮಾರ್ಟ್, ಫೋನ್ಪೆ, ಟಿಯಾಗೋ ಇವಿ, ಜಿಯೋ (ಸಹ ಪ್ರಾಯೋಜಕ) ಆ್ಯಪ್ಪಿ ಫಿಜ್, ಇಟಿಮನೀ, ಕ್ಯಾಸ್ಟ್ರಾಲ್, ಟಿವಿಎಸ್, ಓರಿಯೊ, ಬಿಂಗೋ, ಸ್ಟಿಂಗ್, ಅಜಿಯೋ, ಹೈಯರ್, ರುಪೇ, ಲೂಯಿಸ್ ಜೀನ್ಸ್, ಅಮೆಜಾನ್, ರಾಪಿಡೊ, ಅಲ್ಟ್ರಾ ಟೆಕ್ ಸಿಮೆಂಟ್, ಪೂಮಾ, ಕಮಲಾ ಪಸಂದ್, ಕಿಂಗ್‌ಫಿಶರ್ ಪವರ್ ಸೋಡಾ, ಜಿಂದಾಲ್ ಪ್ಯಾಂಥರ್ ಟಿಎಂಟಿ ರೆಬಾರ್, ಸೌದಿ ಪ್ರವಾಸೋದ್ಯಮ, ಸ್ಪಾಟಿಫೈ ಮತ್ತು ಎಎಂಎಫ್ಐ ಸೇರಿವೆ.

  • IPL 2023 Playoffs: ಮೇ 23ಕ್ಕೆ CSK vs GT ಹೈವೋಲ್ಟೇಜ್‌ ಕದನ – ಮಹಿ ಮೇಲೆ ಎಲ್ಲರ ಕಣ್ಣು

    IPL 2023 Playoffs: ಮೇ 23ಕ್ಕೆ CSK vs GT ಹೈವೋಲ್ಟೇಜ್‌ ಕದನ – ಮಹಿ ಮೇಲೆ ಎಲ್ಲರ ಕಣ್ಣು

    ಚೆನ್ನೈ: 16ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ಲೀಗ್‌ ಹಂತದ ಎಲ್ಲಾ ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಪ್ಲೇ ಆಫ್‌ ರೋಚಕ ಘಟ್ಟ ತಲುಪಿದೆ. ಮೇ 23 ರಿಂದ ಪ್ಲೇ ಆಫ್‌ (IPL 2023 Playoffs) ಪಂದ್ಯಗಳು ಆರಂಭವಾಗಲಿದೆ.

    10 ತಂಡಗಳ ಪೈಕಿ ಗುಜರಾತ್‌ ಟೈಟಾನ್ಸ್‌ (GT), ಚೆನ್ನೈ ಸೂಪರ್‌ ಕಿಂಗ್ಸ್‌ (CSK), ಲಕ್ನೋ ಸೂಪರ್‌ ಜೈಂಟ್ಸ್‌ (LSG) ಹಾಗೂ ಮುಂಬೈ ಇಂಡಿಯನ್ಸ್‌ (MI) ತಂಡಗಳು ಪ್ಲೇ ಆಫ್‌ನಲ್ಲಿ ಉಳಿದಿವೆ.

    ಮೇ 23ರಂದು ಮೊದಲ ಕ್ವಾಲಿಫೈಯರ್‌ ಪಂದ್ಯ ಗುಜರಾತ್‌ ಟೈಟಾನ್ಸ್‌ ಹಾಗೂ ಸಿಎಸ್‌ಕೆ ಬಲಿಷ್ಠ ತಂಡಗಳ ನಡುವೆ ನಡೆಯಲಿದೆ. ಮೇ 24ರಂದು ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ನಡುವೆ ಮೊದಲ ಎಲಿಮಿನೇಟರ್‌ ಪಂದ್ಯಗಳು ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದನ್ನೂ ಓದಿ: RCB ಔಟ್, ಮುಂಬೈಗೆ ಪ್ಲೇ ಆಫ್ ಗಿಫ್ಟ್ – ಪಂದ್ಯ ಸೋತಿದ್ದಕ್ಕೆ ಕಣ್ಣೀರಿಟ್ಟ ಕೊಹ್ಲಿ

    ಇನ್ನೂ ಕ್ವಾಲಿಫೈಯರ್‌ ಮೊದಲ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಅದಾದ ಬಳಿಕ ಕ್ವಾಲಿಫೈಯರ್‌ ಮೊದಲ ಪಂದ್ಯದಲ್ಲಿ ಸೋತ ತಂಡ ಹಾಗೂ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡಗಳ ನಡುವೆ ಮೇ 26ರಂದು 2ನೇ ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಜಯಭೇರಿ ಬಾರಿಸಿದ ಎರಡು ತಂಡಗಳು ಅಂತಿಮವಾಗಿ ಮೇ 28ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ಸೆಣಸಲಿವೆ. ಇದನ್ನೂ ಓದಿ: IPL Playoffs Schedule: ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್‌ ಫೈನಲ್‌

    ಕಳೆದ ವರ್ಷವೂ 2ನೇ ಕ್ವಾಲಿಫೈಯರ್‌ ಹಾಗೂ ಫೈನಲ್‌ ಪಂದ್ಯಗಳು ಅಹಮದಾಬಾದ್‌ನಲ್ಲೇ ನಡೆದಿದ್ದವು. ಮೊದಲ ಕ್ವಾಲಿಫೈಯರ್‌ ಹಾಗೂ ಎಲಿಮಿನೇಟರ್‌ ಪಂದ್ಯಗಳು ಕೋಲ್ಕತಾದಲ್ಲಿ ನಡೆದಿತ್ತು. ಈ ವರ್ಷ ಉದ್ಘಾಟನಾ ಸಮಾರಂಭ ಹಾಗೂ ಫೈನಲ್‌ ಪಂದ್ಯಕ್ಕೂ ಮೋದಿ ಕ್ರೀಡಾಂಗಣವನ್ನೇ ಬಿಸಿಸಿಐ (BCCI) ಆಯ್ಕೆ ಮಾಡಿದೆ.

    ಅಲ್ಲದೇ ಸಿಎಸ್‌ಕೆ ತಂಡದ ನಾಯಕ ಎಂ.ಎಸ್‌ ಧೋನಿ ಈ ಬಾರಿ ಐಪಿಎಲ್‌ನೊಂದಿಗೆ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಲಿದ್ದಾರೆ. ಈ ಹಿನ್ನೆಲೆಯಲ್ಲಿ ತವರು ಅಂಗಳದಲ್ಲಿ ಮಹಿ ಬ್ಯಾಟಿಂಗ್‌ ಅಬ್ಬರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರವಾಗಿದ್ದಾರೆ.

  • RCB ಔಟ್, ಮುಂಬೈಗೆ ಪ್ಲೇ ಆಫ್ ಗಿಫ್ಟ್ – ಪಂದ್ಯ ಸೋತಿದ್ದಕ್ಕೆ ಕಣ್ಣೀರಿಟ್ಟ ಕೊಹ್ಲಿ

    RCB ಔಟ್, ಮುಂಬೈಗೆ ಪ್ಲೇ ಆಫ್ ಗಿಫ್ಟ್ – ಪಂದ್ಯ ಸೋತಿದ್ದಕ್ಕೆ ಕಣ್ಣೀರಿಟ್ಟ ಕೊಹ್ಲಿ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಗುಜರಾತ್ ಟೈಟಾನ್ಸ್ (GT) ಹಾಗೂ ಆರ್‌ಸಿಬಿ (RCB) ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಆದ್ರೆ ಕೊಹ್ಲಿ (Virat Kohli) ಶತಕದಾಟದ ಹೊರತಾಗಿಯೂ, ಶುಭಮನ್ ಗಿಲ್ (Shubman Gill) ಕೌಂಟರ್ ಅಟ್ಯಾಕ್‌ಗೆ ಆರ್‌ಸಿಬಿ ಮಂಡಿಯೂರಿತು.

    ಕೊನೆ ಕ್ಷಣದಲ್ಲಿ ಶುಭಮನ್ ಗಿಲ್ ಸಿಕ್ಸರ್, ಬೌಂಡರಿ ಬಾರಿಸುತ್ತಿದ್ದಂತೆ ಕ್ಯಾಪ್‌ನಿಂದ ಮುಖ ಮುಚ್ಚಿಕೊಂಡ ಕೊಹ್ಲಿ ಕಣ್ಣೀರಿಟ್ಟರು. ಬಳಿಕ ಕ್ಯಾಪ್ ಕಿತ್ತೆಸೆದು ಕಣ್ಣಲ್ಲಿ ನೀರು ತುಂಬಿಕೊಂಡೇ ಶೇಕ್‌ಹ್ಯಾಂಡ್ ಮಾಡಿದರು. ಈ ಕುರಿತ ವೀಡಿಯೋ ತುಣುಕು ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೊಹ್ಲಿ ಅಭಿಮಾನಿಗಳು ಶುಭಮನ್ ಗಿಲ್ ವಿರುದ್ಧ ತಿರುಗಿಬಿದ್ದಿದ್ದಾರೆ. ಜೊತೆಗೆ ‘ಹೆದರಿಬೇಡಿ ಬಾಸ್, ಮುಂದಿನ ಸಲ ಕಪ್ ನಮ್ದೆ’ ಎಂದು ಧೈರ್ಯ ತುಂಬಿದ್ದಾರೆ. ಇದನ್ನೂ ಓದಿ: IPL 2023: ಶುಭಮನ್‌ ಗಿಲ್‌ ಶತಕದಾಟ, ಗುಜರಾತ್‌ ಟೈಟಾನ್ಸ್‌ಗೆ ಜಯ – RCB ಮನೆಗೆ, ಮುಂಬೈ ಪ್ಲೇ ಆಫ್‌ಗೆ

    ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಕೊಹ್ಲಿ ಭರ್ಜರಿ ಶತಕದೊಂದಿಗೆ 197 ರನ್ ಗಳಿಸಿತ್ತು. ಆದ್ರೆ ಗುಜರಾತ್ ಟೈಟಾನ್ಸ್ ಶುಭಮನ್ ಗಿಲ್ ಬ್ಯಾಟಿಂಗ್ ನೆರವಿನಿಂದ ನಿರಾಯಾಸವಾಗಿ ಗೆದ್ದು ಬೀಗಿತು. ಅಗ್ರ ಕ್ರಮಾಂಕದ ಬ್ಯಾಟ್ಸ್ಮ್ಯಾನ್‌ಗಳು ಕೈಚೆಲ್ಲಿದ ಹೊರತಾಗಿಯೂ ಏಕಾಂಗಿ ಹೋರಾಟ ನಡೆಸಿದ ಕೊಹ್ಲಿ 61 ಎಸೆತಗಳಲ್ಲಿ ಔಟಾಗದೇ 101 ರನ್ (13 ಬೌಂಡರಿ, 1 ಸಿಕ್ಸ್) ಗಳಿಸಿದರು. ಭಾರತ ತಂಡದ ಭವಿಷ್ಯ ಎಂದೇ ಹೇಳಲಾಗುತ್ತಿರುವ ಶುಭಮನ್ ಗಿಲ್ 52 ಎಸೆತಗಳಲ್ಲಿ 104 ರನ್ (8 ಸಿಕ್ಸರ್, 5 ಬೌಂಡರಿ) ಚಚ್ಚಿ ಟೈಟಾನ್ಸ್ಗೆ ಗೆಲುವು ತಂದುಕೊಟ್ಟರು.

    ಸೋತು ಗೆದ್ದ ಕೊಹ್ಲಿ:
    ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಕೊಹ್ಲಿ ಪಂದ್ಯ ಸೋತರೂ ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. 237 ಪಂದ್ಯ, 229 ಇನ್ನಿಂಗ್ಸ್‌ಗಳನ್ನಾಡಿರುವ ಕೊಹ್ಲಿ 7,263 ರನ್ ಗಳಿಸಿದ್ದಾರೆ. ಜೊತೆಗೆ ಐಪಿಎಲ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ನಂ.1 ಆಟನಾಗಿದ್ದಾರೆ. ಇದನ್ನೂ ಓದಿ: ಡಿಕೆ ಡಕೌಟ್‌ – IPLನಲ್ಲಿ ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡ ದಿನೇಶ್‌ ಕಾರ್ತಿಕ್‌

    ಆರ್‌ಸಿಬಿ ತಂಡದ ಮಾಜಿ ಕ್ರಿಕೆಟಿಗ ಕ್ರಿಸ್‌ಗೇಲ್ ಐಪಿಎಲ್‌ನಲ್ಲಿ 6 ಶತಕ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಕಳೆದವಾರ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ 6ನೇ ಶತಕ ಸಿಡಿಸಿ ಗೇಲ್ ದಾಖಲೆಯನ್ನ ಸರಿಗಟ್ಟಿದ್ದರು. ಭಾನುವಾರ ಟೈಟಾನ್ಸ್ ವಿರುದ್ಧ ಶತಕ ಸಿಡಿಸುವ ಮೂಲಕ ಅತಿಹೆಚ್ಚು ಶತಕ ಸಿಡಿಸಿದ ಆಟಗಾರನಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ 5 ಶತಕ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ.

    ಭಾನುವಾರ ರಾಜಕೀಯ ಒತ್ತಡದ ನಡುವೆಯೂ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಪುತ್ರಿ ಐಶ್ವರ್ಯ ಜೊತೆಗೆ ಆರ್‌ಸಿಬಿ ಪಂದ್ಯ ವೀಕ್ಷಿಸಿ ಖುಷಿಪಟ್ಟರು.

  • IPL 2023: ಶುಭಮನ್‌ ಗಿಲ್‌ ಶತಕದಾಟ, ಗುಜರಾತ್‌ ಟೈಟಾನ್ಸ್‌ಗೆ ಜಯ – RCB ಮನೆಗೆ, ಮುಂಬೈ ಪ್ಲೇ ಆಫ್‌ಗೆ

    IPL 2023: ಶುಭಮನ್‌ ಗಿಲ್‌ ಶತಕದಾಟ, ಗುಜರಾತ್‌ ಟೈಟಾನ್ಸ್‌ಗೆ ಜಯ – RCB ಮನೆಗೆ, ಮುಂಬೈ ಪ್ಲೇ ಆಫ್‌ಗೆ

    ಬೆಂಗಳೂರು: ಶುಭಮನ್‌ ಗಿಲ್‌ (Shubman Gill) ಭರ್ಜರಿ ಶತಕ, ಆರ್‌ಸಿಬಿ (RCB) ಕಳಪೆ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಗುಜರಾತ್‌ ಟೈಟಾನ್ಸ್‌ (GT) ವಿರುದ್ಧ ಹೀನಾಯ ಸೋಲನುಭವಿಸಿದೆ. ಈ ಮೂಲಕ 2023ರ ಐಪಿಎಲ್‌ (IPL 2023) ಆವೃತ್ತಿಗೆ ಸೋಲಿನೊಂದಿಗೆ ವಿದಾಯ ಹೇಳಿದೆ.

    ಅಂತಿಮವಾಗಿ ಗುಜರಾತ್‌ ಟೈಟಾನ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ (CSK), ಲಕ್ನೋ ಸೂಪರ್‌ ಜೈಂಟ್ಸ್‌ (LSG) ಹಾಗೂ ಮುಂಬೈ ಇಂಡಿಯನ್ಸ್‌ (MI) ಪ್ಲೇ ಆಫ್‌ ಪ್ರವೇಶಿಸಿದೆ. 2022ರ ಆವೃತ್ತಿಯಲ್ಲಿ ಐಪಿಎಲ್‌ ಪ್ರವೇಶಿಸಿದ ಗುಜರಾತ್‌ ಟೈಟಾನ್ಸ್‌ ತಂಡ ಸತತ 2ನೇ ಬಾರಿಯೂ ಪ್ಲೇ ಆಫ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 197 ರನ್‌ ಚಚ್ಚಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಗುಜರಾತ್‌ ಟೈಟಾನ್ಸ್‌ 19.1 ಓವರ್‌ನಲ್ಲಿ 198 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿತು.

    ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್‌ ಸಾಹಾ 14 ಎಸೆತಗಳಲ್ಲಿ 12 ರನ್‌ ಗಳಿಸಿ ಔಟಾದರು. ಬಳಿಕ 2ನೇ ವಿಕೆಟ್‌ಗೆ ಜೊತೆಯಾದ ವಿಜಯ್‌ ಶಂಕರ್‌ ಹಾಗೂ ಶುಭಮನ್‌ ಗಿಲ್‌ ಜೋಡಿ ಆರ್‌ಸಿಬಿ ಬೌಲರ್‌ಗಳನ್ನ ಚೆಂಡಾಡಿತು. 2ನೇ ವಿಕೆಟ್‌ ಪತನಕ್ಕೆ ಈ ಜೋಡಿ 71 ಎಸೆತಗಳಲ್ಲಿ ಬರೋಬ್ಬರಿ 123 ರನ್‌ ಜೊತೆಯಾಟವಾಡಿತು.

    ಟೈಟಾನ್ಸ್‌ ಪರ ವಿಜಯ್‌ ಶಂಕರ್‌ 53 ರನ್‌ (35 ಎಸತೆ, 2 ಸಿಕ್ಸರ್‌, 7 ಬೌಂಡರಿ), ವೃದ್ಧಿಮಾನ್‌ ಸಾಹಾ 12 ರನ್‌, ಡೇವಿಡ್‌ ಮಿಲ್ಲರ್‌ 6 ರನ್‌ ಗಳಿಸಿದರೆ ಧಸುನ್‌ ಶನಾಕ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ ಸೇರಿದರು. ಕೊನೆಯವರೆಗೂ ಹೋರಾಡಿದ ಶುಭಮನ್‌ ಗಿಲ್‌ 52 ಎಸೆತಗಳಲ್ಲಿ 104 ರನ್‌ (8 ಸಿಕ್ಸ್‌, 5 ಬೌಂಡರಿ) ಚಚ್ಚಿ ಅಜೇಯರಾಗುಳಿದರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಆರಂಭದಿಂದಲೇ ವಿಕೆಟ್‌ ಕಳೆದುಕೊಂಡರೂ ರನ್‌ ಕಲೆಹಾಕುತ್ತಾ ಸಾಗಿತು. ಆರಂಭಿಕರಾಗಿ ಕಣಕ್ಕಿಳಿದ ಫಾಫ್‌ ಡು ಪ್ಲೆಸಿಸ್‌ ಹಾಗೂ ವಿರಾಟ್‌ ಕೊಹ್ಲಿ ಜೋಡಿ ಮುರಿಯುತ್ತಿದ್ದಂತೆ ರನ್‌ ವೇಗವೂ ಕಡಿಮೆಯಾಯಿತು. ಮೊದಲ ವಿಕೆಟ್‌ಗೆ ಡುಪ್ಲೆಸಿಸ್‌ ಹಾಗೂ ಕೊಹ್ಲಿ 7.1 ಓವರ್‌ಗಳಲ್ಲಿ 67 ರನ್‌ ಜೊತೆಯಾಟವಾಡಿದ್ದರು. ಡುಪ್ಲೆಸಿಸ್‌ ಔಟಾಗುತ್ತಿದ್ದಂತೆ ಕೊಹ್ಲಿ ಏಕಾಂಗಿ ಹೋರಾಟ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯದ ಹೊರತಾಗಿಯೂ ಆರ್‌ಸಿಬಿ ಬೃಹತ್‌ ಮೊತ್ತ ಪೇರಿಸಿತ್ತು.

    ಕೊನೆಯವರೆಗೂ ಅಜೇನಾಗಿ ಹೋರಾಡಿದ ಕಿಂಗ್‌ ಕೊಹ್ಲಿ 61 ಎಸೆತಗಳಲ್ಲಿ 101 ರನ್‌ (13 ಬೌಂಡರಿ, 1 ಸಿಕ್ಸರ್‌), ಡುಪ್ಲೆಸಿಸ್‌ 28 ರನ್‌ (19 ಎಸೆತ, 5 ಬೌಂಡರಿ), ಮ್ಯಾಕ್ಸ್‌ವೆಲ್‌ 11 ರನ್‌ (5 ಎಸೆತ, 1 ಬೌಂಡರಿ, 1 ಸಿಕ್ಸರ್)‌, ಮೈಕೆಲ್‌ ಬ್ರೇಸ್‌ವೆಲ್‌ 26 ರನ್‌ (16 ಎಸೆತ, 5 ಬೌಂಡರಿ), ಅನುಜ್‌ ರಾವತ್‌ 23 ರನ್‌ (15 ಎಸೆತ, 1 ಬೌಂಡರಿ, 1 ಸಿಕ್ಸರ್‌) ಗಳಿಸಿದರೆ, ದಿನೇಶ್‌ ಕಾರ್ತಿಕ್‌ ಮತ್ತೊಮ್ಮೆ ಡಕೌಟ್‌ ಆಗಿ ನಿರಾಸೆ ಮೂಡಿಸಿದರು. ಈ ಮೂಲಕ ಐಪಿಎಲ್‌ನಲ್ಲಿ 17 ಬಾರಿ ಡಕೌಟ್‌ ಆದ ಕೆಟ್ಟ ದಾಖಲೆಯನ್ನೂ ಬರೆದರು.

    ಗುಜರಾತ್‌ ಟೈಟಾನ್ಸ್‌ ಪರ ನೂರ್‌ ಅಹ್ಮದ್‌ 2 ವಿಕೆಟ್‌ ಹಾಗೂ ಮೊಹಮ್ಮದ್‌ ಶಮಿ, ಯಶ್‌ ದಯಾಳ್‌, ರಶೀದ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ಡಿಕೆ ಡಕೌಟ್‌ – IPLನಲ್ಲಿ ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡ ದಿನೇಶ್‌ ಕಾರ್ತಿಕ್‌

    ಡಿಕೆ ಡಕೌಟ್‌ – IPLನಲ್ಲಿ ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡ ದಿನೇಶ್‌ ಕಾರ್ತಿಕ್‌

    ಬೆಂಗಳೂರು: 2022ರ ಐಪಿಎಲ್‌ (IPL) ಸೀಸನ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ನಿಂದ T20 ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದ ದಿನೇಶ್‌ ಕಾರ್ತಿಕ್‌ (Dinesh Karthik) ಈ ಬಾರಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿ ಬೇಡದ ದಾಖಲೆಯೊಂದನ್ನ ಹೆಗಲಿಗೇರಿಸಿಕೊಂಡಿದ್ದಾರೆ.

    ಆರಂಭದಿಂದಲೂ ಕಳಪೆ ಬ್ಯಾಟಿಂಗ್‌ ಮುಂದುವರಿಸಿದ ದಿನೇಶ್‌ ಕಾರ್ತಿಕ್‌ 17ನೇ ಬಾರಿಗೆ ಡಕೌಟ್‌ ಆಗುವ ಮೂಲಕ ಐಪಿಎಲ್‌ನಲ್ಲಿ ಅತಿಹೆಚ್ಚು ಬಾರಿ ಡಕೌಟ್‌ ಆದ ಕೆಟ್ಟ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಗ್ರೀನ್‌ ಸ್ಫೋಟಕ ಶತಕ, ಮುಂಬೈಗೆ 8 ವಿಕೆಟ್‌ಗಳ ಭರ್ಜರಿ ಜಯ – RCB ಗೆದ್ದರಷ್ಟೇ ಪ್ಲೇ ಆಫ್‌ಗೆ

    ಐಪಿಎಲ್‌ನಲ್ಲಿ ಕೆಕೆಆರ್‌ (KKR) ತಂಡದ ಆಟಗಾರ ಸುನೀಲ್‌ ನರೇನ್‌, ಮಂದೀಪ್‌ ಸಿಂಗ್‌ ತಲಾ 15 ಬಾರಿ, ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) 16 ಬಾರಿ ಡಕೌಟ್‌ ಆದ ಕೆಟ್ಟ ಸಾಧನೆ ಮಾಡಿದ್ದರು. ಆದ್ರೆ 2023ರ ಸೀಸನ್‌ನಲ್ಲಿ ಸತತ ಕಳಪೆ ಬ್ಯಾಟಿಂಗ್‌ನಿಂದ ದಿನೇಶ್‌ ಕಾರ್ತಿಕ್‌ ಅತಿಹೆಚ್ಚುಬಾರಿ ಡಕೌಟ್‌ ಆದ ಕೆಟ್ಟ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಕೊನೆಯಲ್ಲಿ ರಿಂಕು 6,4,6 – ಹೋರಾಡಿ ಸೋತ KKR – 1 ರನ್‌ನಿಂದ ಗೆದ್ದು ಪ್ಲೇ ಆಫ್‌ಗೆ ಹಾರಿದ ಲಕ್ನೋ

    dinesh karthik

    ಒಟ್ಟಾರೆಯಾಗಿ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ 386 ಟಿ20 ಪಂದ್ಯಗಳನ್ನಾಡಿರುವ ದಿನೇಶ್‌ ಕಾರ್ತಿಕ್‌ 25 ಬಾರಿ ಡಕೌಟ್‌ ಆಗಿದ್ದರೆ, ರೋಹಿತ್‌ ಶರ್ಮಾ 27 ಬಾರಿ ಡಕೌಟ್‌ ಆಗಿದ್ದಾರೆ. ಇದರಿಂದ ಆರ್‌ಸಿಬಿ ಅಭಿಮಾನಿಗಳು ದಿನೇಶ್‌ ಕಾರ್ತಿಕ್‌ ವಿರುದ್ಧ ಕಿಡಿ ಕಾರಿದ್ದಾರೆ.

    ಸೂಪರ್‌ ಸಂಡೇನಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಕೊನೆಯ ಲೀಗ್‌ ಪಂದ್ಯವನ್ನಾಡುತ್ತಿರುವ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 197 ರನ್‌ಗಳನ್ನು ಕಲೆಹಾಕಿತು.

  • ಬೆಂಗ್ಳೂರಿನಲ್ಲಿ ಮಳೆ ಆರ್ಭಟ – ಇಂದಿನ RCB ಮ್ಯಾಚ್ ರದ್ದಾಗುತ್ತಾ?

    ಬೆಂಗ್ಳೂರಿನಲ್ಲಿ ಮಳೆ ಆರ್ಭಟ – ಇಂದಿನ RCB ಮ್ಯಾಚ್ ರದ್ದಾಗುತ್ತಾ?

    ಬೆಂಗಳೂರು: ಭಾನುವಾರ ಮಧ್ಯಾಹ್ನ ಬೆಂಗಳೂರು ನಗರದಲ್ಲಿ ಮಳೆಯ ಆರ್ಭಟ (Rain In Bengaluru) ಜೋರಾಗಿದ್ದು, ರಸ್ತೆಗಳು ಕೆರೆಯಂತಾಗಿವೆ. ಮಠ ಮಠ ಮಧ್ಯಾಹ್ನ 3:30ರ ವೇಳೆಗೆ ಕತ್ತಲು ಆವರಿಸಿದ್ದು, ವಾಹನ ಸವಾರರು ಪರದಾಡಿದ್ದಾರೆ.

    ಮಳೆಯ ಆರ್ಭಟ ಜೋರಾದ ಹಿನ್ನೆಲೆ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯಬೇಕಿದ್ದ ಗುಜರಾತ್ ಟೈಟಾನ್ಸ್ (GT) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಹೈವೋಲ್ಟೇಜ್ ಪಂದ್ಯ ರದ್ದಾಗುವ ಸಾಧ್ಯತೆ ಏರ್ಪಟ್ಟಿದೆ. ಇದನ್ನೂ ಓದಿ: ಕೊನೆಯಲ್ಲಿ ರಿಂಕು 6,4,6 – ಹೋರಾಡಿ ಸೋತ KKR – 1 ರನ್‌ನಿಂದ ಗೆದ್ದು ಪ್ಲೇ ಆಫ್‌ಗೆ ಹಾರಿದ ಲಕ್ನೋ

    ಭಾರೀ ಮಳೆ ಹಿನ್ನೆಲೆಯಲ್ಲಿ ಮೈದಾನದ ತುಂಬಾ ನೀರು ಆವರಿಸಿದೆ. ಜೊತೆಗೆ ಪ್ರೇಕ್ಷಕರು ಕುಳಿತುಕೊಳ್ಳುವ ಆಸನಗಳ ಸ್ಥಳ ಹಾಗೂ ವಿಐಪಿ ಕ್ಯಾಬಿನ್‌ಗಳಿಗೂ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ಲೀಗ್ ಹಂತದ ಕೊನೆಯ ಪಂದ್ಯ ರದ್ದಾಗುವ ಸಾಧ್ಯತೆಯಿದೆ. ಇದನ್ನೂ ಓದಿ: IPL 2023: ಗೆದ್ದು ಪ್ಲೇ ಆಫ್‌ಗೆ ಹಾರಿದ ಚೆನ್ನೈ – ಹೀನಾಯವಾಗಿ ಸೋತು ಆಟ ಮುಗಿಸಿದ ಡೆಲ್ಲಿ ಕ್ಯಾಪಿಟಲ್ಸ್‌

    ಭಾನುವಾರ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಕೊನೆಯ ಲೀಗ್ ಪಂದ್ಯ ಇದ್ದು, ಆರ್‌ಸಿಬಿ ಪ್ಲೇ ಆಫ್ ತಲುಪಲು ಈ ಪಂದ್ಯ ನಿರ್ಣಾಯಕವಾಗಿದೆ. ಉತ್ತಮ ರನ್‌ರೇಟ್‌ನೊಂದಿಗೆ 4ನೇ ಸ್ಥಾನ ಖಚಿತಪಡಿಸಿಕೊಂಡಿರುವ ಆರ್‌ಸಿಬಿ ತಂಡಕ್ಕೆ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಒಂದು ವೇಳೆ ಪಂದ್ಯ ಸಂಪೂರ್ಣ ರದ್ದಾದರೆ, ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಸಹ ಸೋಲಬೇಕಾಗುತ್ತದೆ. ಮುಂಬೈ ಇಂಡಿಯನ್ಸ್ ಗೆದ್ದರೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಕಳೆದುಕೊಳ್ಳಲಿದೆ.

    ಚಿನ್ನಸ್ವಾಮಿ ಅಂಗಳಕ್ಕೆ ಸಮಸ್ಯೆಯಿಲ್ಲ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಪಂದ್ಯಗಳು ಆರಂಭಿಸಬಹುದಾಗಿದೆ. ಉದಾಹರಣೆಗೆ ಒಂದು ಗಂಟೆ ಭಾರೀ ಮಳೆ ಸುರಿದರೆ ಕೇವಲ 7 ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದು. ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಂ ಅಳವಡಿಕೆಯಾಗಿದ್ದು ಕೂಡಲೇ ನೀರನ್ನು ಹೊರ ಹಾಕಲಾಗುತ್ತದೆ. ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನ ಒಣಗಿಸುವ ವ್ಯವಸ್ಥೆಯಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.