Tag: ಗುಜರಾತ್ ಟೈಟಾನ್ಸ್

  • IPL 2024: ಗೆದ್ದರೂ ಖುಷಿಯಿಲ್ಲ – ಶತಕ ಸಿಡಿಸಿ ಮೆರೆದಾಡಿದ ಗಿಲ್‌ಗೆ 24 ಲಕ್ಷ ರೂ. ದಂಡ!

    IPL 2024: ಗೆದ್ದರೂ ಖುಷಿಯಿಲ್ಲ – ಶತಕ ಸಿಡಿಸಿ ಮೆರೆದಾಡಿದ ಗಿಲ್‌ಗೆ 24 ಲಕ್ಷ ರೂ. ದಂಡ!

    – ತಂಡದ ಉಳಿದ ಆಟಗಾರರಿಗೆ ಪಂದ್ಯ ಶುಲ್ಕದ 25% ದಂಡ ವಿಧಿಸಿದ್ದೇಕೆ?

    ಅಹಮದಾಬಾದ್‌: 2024ರ ಐಪಿಎಲ್‌ ಆವೃತ್ತಿಯಲ್ಲಿ 12 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್‌ ರೇಸ್‌ನಲ್ಲಿರುವ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡ ಸಿಎಸ್‌ಕೆ ವಿರುದ್ಧ ಗೆದ್ದರೂ ಖುಷಿಯಿಲ್ಲದಂತಾಗಿದೆ.

    ಹೌದು. ಸಿಎಸ್‌ಕೆ (CSK) ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಟೈಟಾನ್ಸ್‌ ತಂಡದ ನಾಯಕ ಶುಭಮನ್‌ ಗಿಲ್‌ (Shubman Gill) ಅವರಿಗೆ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದು ಈ ಋತುವಿನಲ್ಲಿ ಟೈಟಾನ್ಸ್‌ ತಂಡಕ್ಕೆ ವಿಧಿಸಲಾದ 2ನೇ ದಂಡ ಶುಲ್ಕವಾಗಿದೆ. ಇದನ್ನೂ ಓದಿ: ಕಿರಿಯ ವಯಸ್ಸಿನಲ್ಲೇ ಕ್ರಿಕೆಟ್ ದೇವರ ದಾಖಲೆ ಮುರಿದ ಸಾಯಿ ಸುದರ್ಶನ್!

    ಮೊದಲ ಬಾರಿಗೆ ನಿಧಾನಗತಿಯ ಓವರ್‌ರೇಟ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. 2ನೇ ಬಾರಿ ನಿಮಯ ಉಲ್ಲಂಘಿಸಿದ್ದರಿಂದಾಗಿ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರೊಂದಿಗೆ ಇಂಪ್ಯಾಕ್ಟ್‌ ಪ್ಲೇಯರ್‌ (Impact Player) ಸೇರಿದಂತೆ ತಂಡದ ಉಳಿದ 11 ಸದಸ್ಯರಿಗೆ ವೈಯಕ್ತಿಕವಾಗಿ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ 25 ಪ್ರತಿಶತದಷ್ಟು ದಂಡ (IPL Fined) ವಿಧಿಸಲಾಗಿದೆ.

    ಗಿಲ್‌-ಸುದರ್ಶನ ಶತಕಗಳ ಸಾಧನೆ:
    ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಶತಗಳ ಜೊತೆಯಾಟವಾಡಿದ ಶುಭಮನ್‌ ಗಿಲ್‌ ಹಾಗೂ ಸಾಯಿಸುದರ್ಶನ್‌ ಮೊದಲ ವಿಕೆಟ್‌ಗೆ 210 ರನ್‌ಗಳ ಜೊತೆಯಾಟ ನೀಡಿದರು. ಈ ಮೂಲಕ ಮೊದಲ ವಿಕೆಟಿಗೆ ದ್ವಿಶತಕದ ಜೊತೆಯಾಟವಾಡಿದ್ದ ಕೆ.ಎಲ್‌ ರಾಹುಲ್‌ ಹಾಗೂ ಕ್ವಿಂಟನ್‌ ಡಿಕಾಕ್‌ ಅವರ ದಾಖಲೆಯನ್ನೂ ಸರಿಗಟ್ಟಿದ್ದರು. 2022ರ ಆವೃತ್ತಿಯಲ್ಲಿ ಐಪಿಎಲ್‌ ಪ್ರವೇಶಿಸಿದ ಲಕ್ನೂ ಸೂಪರ್‌ ಜೈಂಟ್ಸ್‌ ತಂಡದ ಪರ ಕ್ವಿಂಟನ್‌ ಡಿಕಾಕ್‌ ಹಾಗೂ ಕೆ.ಎಲ್‌ ರಾಹುಲ್‌ ಆರಂಭಿಕರಾಗಿ ಕಣಕ್ಕಿಳಿದು 210 ರನ್‌ಗಳ ಜೊತೆಯಾಟ ನೀಡಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು.

    ಗಿಲ್‌-ಸುದರ್ಶನ್‌ 17.2 ಓವರ್‌ಗಳಲ್ಲೇ 210 ರನ್‌ ಬಾರಿಸುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಶುಭಮನ್‌ ಗಿಲ್‌ 55 ಎಸೆತಗಳಲ್ಲಿ 104 ರನ್‌ (9 ಬೌಂಡರಿ, 6 ಸಿಕ್ಸರ್)‌ ಬಾರಿಸಿದ್ರೆ, ಸಾಯಿ ಸುದರ್ಶನ್‌ 51 ಎಸೆತಗಳಲ್ಲಿ 103 ರನ್‌ (7 ಸಿಕ್ಸರ್‌, 5 ಬೌಂಡರಿ) ಚಚ್ಚಿದರು. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಹೃದಯ ಶ್ರೀಮಂತಿಕೆ ಮೆರೆದ ಧೋನಿ – ವೀಡಿಯೋ ವೈರಲ್‌!

    ಶುಕ್ರವಾರ ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ ತಂಡ 3 ವಿಕೆಟ್‌ ನಷ್ಟಕ್ಕೆ 231 ರನ್‌ ಸಿಡಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಸಿಎಸ್‌ಕೆ 8 ವಿಕೆಟ್‌ಕೆ 196 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

  • ಕಿರಿಯ ವಯಸ್ಸಿನಲ್ಲೇ ಕ್ರಿಕೆಟ್ ದೇವರ ದಾಖಲೆ ಮುರಿದ ಸಾಯಿ ಸುದರ್ಶನ್!

    ಕಿರಿಯ ವಯಸ್ಸಿನಲ್ಲೇ ಕ್ರಿಕೆಟ್ ದೇವರ ದಾಖಲೆ ಮುರಿದ ಸಾಯಿ ಸುದರ್ಶನ್!

    ಅಹಮದಾಬಾದ್‌: 2024ರ ಐಪಿಎಲ್‌ ಆವೃತ್ತಿಯಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡದ ಯುವ ಆಟಗಾರ ಸಾಯಿ ಸುದರ್ಶನ್‌ (Sai Sudharsan), ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ ಅಪರೂಪದ ದಾಖಲೆಯೊಂದನ್ನು ಮುರಿದಿದ್ದಾರೆ.

    ಶುಕ್ರವಾರ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ 22 ವರ್ಷದ ಸುದರ್ಶನ್‌, ಇದರೊಂದಿಗೆ ಐಪಿಎಲ್‌ ಆವೃತ್ತಿಯಲ್ಲಿ ವೇಗವಾಗಿ 1,000 ರನ್‌ ಪೂರೈಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಹೃದಯ ಶ್ರೀಮಂತಿಕೆ ಮೆರೆದ ಧೋನಿ – ವೀಡಿಯೋ ವೈರಲ್‌!

    ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ 11ನೇ ಓವರ್‌ನಲ್ಲಿ ಸಿಮರ್ಜೀತ್ ಸಿಂಗ್ ಅವರ ಬೌಲಿಂಗ್‌ಗೆ ಸಿಕ್ಸರ್‌ ಸಿಡಿಸಿ, 71 ರನ್​ ಗಳಿಸುವ ಮೂಲಕ ಸುದರ್ಶನ್‌ 1,000 ರನ್‌ ಪೂರೈಸಿದ ಸಾಧನೆ ಮಾಡಿದ್ದಾರೆ. ಒಟ್ಟಾರೆ ಈ ಪಂದ್ಯದಲ್ಲಿ ಸಾಯಿ ಸುರ್ದಶನ್‌ 51 ಎಸೆತಗಳಲ್ಲಿ 7 ಸಿಕ್ಸರ್‌, 5 ಬೌಂಡರಿಯೊಂದಿಗೆ 103 ರನ್‌ ಬಾರಿಸಿದ್ದಾರೆ.

    ವೇಗದ 1000 ರನ್‌ ಸಿಡಿಸಿದ ಮೊದಲ ಭಾರತೀಯ:
    ಸಾಯಿ ಸುದರ್ಶನ್ ಕೇವಲ 25 ಇನ್ನಿಂಗ್ಸ್​ಗಳಲ್ಲಿ 1,000 ರನ್ ಪೂರೈಸಿದ ಮೊದಲ ಭಾರತೀಯನಾಗಿದ್ದಾರೆ. ಸಚಿನ್ ತೆಂಡೂಲ್ಕರ್ (Sachin Tendulkar) ಮತ್ತು ಗಾಯಕ್ವಾಡ್ ಇಬ್ಬರೂ 31 ಇನ್ನಿಂಗ್ಸ್​ಗಳಲ್ಲಿ 1000 ರನ್ ಪೂರೈಸಿದ್ದರು. 33 ಇನ್ನಿಂಗ್ಸ್‌ಗಳಲ್ಲಿ 1,000 ರನ್‌ ಬಾರಿಸಿದ್ದ ತಿಲಕ್‌ ವರ್ಮಾ 4ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಸಾಯಿ ಸುದರ್ಶನ್‌, ಗಿಲ್‌ ದ್ವಿಶತಕ ಜೊತೆಯಾಟ – ಚೆನ್ನೈ ವಿರುದ್ಧ ಗುಜರಾತ್‌ಗೆ 35 ರನ್‌ಗಳ ಜಯ

    ವೇಗವಾಗಿ 1,000 ರನ್‌ ಸಿಡಿಸಿದ ಟಾಪ್‌-5 ಸರದಾರರು:
    ಶಾನ್ ಮಾರ್ಷ್- 21 ಇನಿಂಗ್ಸ್​
    ಲೆಂಡ್ಲ್ ಸಿಮನ್ಸ್ – 23 ಇನಿಂಗ್ಸ್​
    ಮ್ಯಾಥ್ಯೂ ಹೇಡನ್- 25 ಇನಿಂಗ್ಸ್​
    ಸಾಯಿ ಸುದರ್ಶನ್- 25ಇನಿಂಗ್ಸ್​
    ಜಾನಿ ಬೈರ್​ಸ್ಟೋವ್​- 26 ಇನಿಂಗ್ಸ್

  • ಮೈದಾನಕ್ಕೆ ನುಗ್ಗಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಹೃದಯ ಶ್ರೀಮಂತಿಕೆ ಮೆರೆದ ಧೋನಿ – ವೀಡಿಯೋ ವೈರಲ್‌!

    ಮೈದಾನಕ್ಕೆ ನುಗ್ಗಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಹೃದಯ ಶ್ರೀಮಂತಿಕೆ ಮೆರೆದ ಧೋನಿ – ವೀಡಿಯೋ ವೈರಲ್‌!

    – ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭದ್ರತಾ ವೈಫಲ್ಯ

    ಅಹಮದಾಬಾದ್‌: ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಅತ್ಯುತ್ಸಾಹ ಭದ್ರತಾ ವೈಫಲ್ಯಗಳಿಗೆ ದಾರಿ ಮಾಡಿಕೊಡುತ್ತಿದೆ. ಅದೇ ರೀತಿ ಶುಕ್ರವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ವೇಳೆ ಧೋನಿ ಅಭಿಮಾನಿಯೊಬ್ಬರು (MS Dhoni Fans) ದಿಢೀರ್‌ ಮೈದಾನಕ್ಕೆ ನುಗ್ಗಿದ್ದು, ಭದ್ರತಾ ವೈಫಲ್ಯಕ್ಕೆ ಕಾರಣವಾಗಿದೆ.

    ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಉಸಿರು ಯಾರು ಎಂದು ಕೇಳಿದರೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ನಿಸ್ಸಂಶಯವಾಗಿ ಧೋನಿ ಹೆಸರನ್ನೇ ಹೇಳುತ್ತಾರೆ. 42 ವರ್ಷದ ಮಹಿ, 2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದ ಚೆನ್ನೈ ತಂಡದ ನಾಯಕನಾಗಿದ್ದಾರೆ. 2013ರಿಂದ 2 ವರ್ಷಗಳ ತಂಡವನ್ನು ಅಮಾನತುಗೊಳಿಸಿದ್ದು, ಹೊರತುಪಡಿಸಿ ಉಳಿದ ಎಲ್ಲ ಆವೃತ್ತಿಗಳಲ್ಲೂ ಚೆನ್ನೈ ತಂಡದ ಪರವಾಗಿಯೇ ಆಡಿದ್ದಾರೆ. ಈಗಲೂ ಆರೋಗ್ಯ ಸಮಸ್ಯೆಯಿದ್ದರೂ ಮಹಿ ತಮ್ಮ ಅಭಿಮಾನಿಗಳಿಗಾಗಿಯೇ ಆಡುತ್ತಿದ್ದಾರೆ.

    ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (Gujarat Titans) ನಡುವಿನ ಐಪಿಎಲ್‌ ಪಂದ್ಯದ ವೇಳೆ ಅಭಿಮಾನಿಯೊಬ್ಬರು ಏಕಾಏಕಿ ಮೈದಾನಕ್ಕೆ ನುಗ್ಗಿದ್ದಾರೆ. ಎಂ.ಎಸ್ ಧೋನಿ ಅವರ ಪಾದಗಳನ್ನು ಮುಟ್ಟಿ, ತಮ್ಮ ತಲೆಯನ್ನು ನೆಲಕ್ಕೆ ಸ್ಪರ್ಶಿಸಿ ನಮಸ್ಕರಿಸಿದ್ದಾರೆ. ದಿಢೀರನೆ ಬಂದ ಅಭಿಮಾನಿ ಕಂಡು ಕ್ಷಣಿಕ ಬೆಚ್ಚಿದ ಮಹಿ ಬಳಿಕ ಅಭಿಮಾನಿಯನ್ನು ನಿಲ್ಲಿಸಿ, ಹೆಗಲ ಮೇಲೆ ಕೈಯಿಟ್ಟು ಮಾತನಾಡಿಸಿದ್ದಾರೆ, ಪ್ರೀತಿಯ ಅಪ್ಪುಗೆಯೊಂದಿಗೆ ಬೀಳ್ಕೊಟ್ಟಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ಎಳೆದೊಯ್ಯುವ ವೇಳೆ, ಅವರನ್ನು ಆರಾಮಾಗಿ ಹೋಗಲು ಬಿಡಿ ಎಂದು ಭದ್ರತಾ ಸಿಬ್ಬಂದಿಗೆ ಹೇಳಿದ್ದಾರೆ. ಮಹಿ ಅವರ ಈ ನಡೆ ಅಭಿಮಾನಿಗಳ ಹೃದಯಸ್ಪರ್ಶಿಸುವಂತೆ ಮಾಡಿದೆ. ಈ ಕುರಿತ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಗುಜರಾತ್‌ ಟೈಟಾನ್ಸ್‌ ಮೂರು ವಿಕೆಟ್‌ ನಷ್ಟಕ್ಕೆ 231 ರನ್‌ ಬಾರಿಸಿತ್ತು. 232 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಚೆನ್ನೈ 8 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಕೊನೆಯಲ್ಲಿ 236.36 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಮಹಿ, 11 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್‌, 1 ಬೌಂಡರಿ ಸೇರಿ 26 ರನ್‌ ಚಚ್ಚಿದರು.

  • ಸಾಯಿ ಸುದರ್ಶನ್‌, ಗಿಲ್‌ ದ್ವಿಶತಕ ಜೊತೆಯಾಟ – ಚೆನ್ನೈ ವಿರುದ್ಧ ಗುಜರಾತ್‌ಗೆ 35 ರನ್‌ಗಳ ಜಯ

    ಸಾಯಿ ಸುದರ್ಶನ್‌, ಗಿಲ್‌ ದ್ವಿಶತಕ ಜೊತೆಯಾಟ – ಚೆನ್ನೈ ವಿರುದ್ಧ ಗುಜರಾತ್‌ಗೆ 35 ರನ್‌ಗಳ ಜಯ

    ಅಹಮದಾಬಾದ್‌: ಇಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್‌ನಲ್ಲಿ ಪಂದ್ಯದಲ್ಲಿ ಗುಜರಾತ್ 35 ರನ್‌ಗಳ ಜಯ ಗಳಿಸಿದೆ.

    ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ನಿಗದಿತ ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 231 ರನ್‌ಗಳನ್ನು ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 196 ರನ್‌ಗಳನ್ನು ಮಾತ್ರ ಕಲೆ ಹಾಕಲು ಶಕ್ತವಾಯಿತು.

    ಚೆನ್ನೈ ತಂಡದ ಮೊತ್ತ 10 ರನ್‌ ಇರುವಾಗಲೇ 3 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಎದರಿಸಿತು. ತಂಡದ ಪರ ಡೆರಿಲ್ ಮಿಚೆಲ್ 34 ಎಸೆತಗಳಲ್ಲಿ 3 ಸಿಕ್ಸರ್‌, 7 ಬೌಂಡರಿ ನೆರವಿನಿಂದ 63 ರನ್‌ ಕಲೆ ಹಾಕಿದರು. ಮೊಯಿನ್ ಅಲಿ 36 ಎಸೆತಗಳಲ್ಲಿ 4 ಸಿಕ್ಸರ್‌ 4 ಬೌಂಡರಿ ಸಿಡಿಸಿ 56 ರನ್‌ ಗಳಿಸಿದರು. ಶಿವಂ ದುಬೆ 13 ಎಸೆತಗಳಲ್ಲಿ 21, ಜಡೇಜಾ 10 ಎಸೆತಗಳಲ್ಲಿ 18 ರನ್‌ಗಳ ಕೊಡುಗೆ ನೀಡಿದರು. ಧೋನಿ 11 ಎಸೆತಗಳಲ್ಲಿ 3 ಸಿಕ್ಸರ್‌, 1 ಬೌಂಡರಿ ನೆರವಿನಿಂದ 26 ರನ್‌ ಗಳಿಸಿದರು.

    ಗುಜರಾತ್‌ ಪರ ಮೋಹಿತ್ ಶರ್ಮಾ 3, ರಶೀದ್ ಖಾನ್ 2, ಸಂದೀಪ್, ಉಮೇಶ್‌ ಯಾದವ್‌ ತಲಾ 1 ವಿಕೆಟ್‌ ಉರುಳಿಸಿದರು.

    ಗುಜರಾತ್‌ ಪರ ಶುಬಮನ್‌ ಗಿಲ್ 55 ಎಸೆತಗಳಲ್ಲಿ 6 ಸಿಕ್ಸರ್‌, 9 ಬೌಂಡರಿ ನೆರವಿನಿಂದ 104 ರನ್‌, ಸಾಯಿ ಸುದರ್ಶನ್‌ 51 ಎಸೆತಗಳಲ್ಲಿ 7 ಸಿಕ್ಸರ್‌ 5 ಬೌಂಡರಿ ಸಿಡಿಸಿ 103 ರನ್‌ ಕಲೆ ಹಾಕಿದರು. ಈ ಮೂಲಕ ಸಾಯಿ ಸುದರ್ಶನ್‌ ಐಪಿಎಲ್‌ನಲ್ಲಿ ಅತಿ ವೇಗವಾಗಿ 1000 ರನ್‌ಗಳನ್ನು (25 ಇನ್ನಿಂಗ್ಸ್) ಸಿಡಿಸಿದ ಆಟಗಾರ ಎಂಬ ದಾಖಲೆ ಬರೆದರು.

    ಸಚಿನ್‌ ತೆಂಡೂಲ್ಕರ್‌ (31), ರುತುರಾಜ್ ಗಾಯಕ್ವಾಡ್ (31), ತಿಲಕ್‌ ವರ್ಮಾ (33) ಇನ್ನಿಂಗ್ಸ್ನಲ್ಲಿ 1000 ರನ್‌ಗಳನ್ನು ದಾಖಲಿಸಿದ್ದರು.

    ಪಂದ್ಯದಲ್ಲಿ ಚೆನ್ನೈ ಪರ ತುಷಾರ್ ದೇಶಪಾಂಡೆ 2 ವಿಕೆಟ್‌ ಕಿತ್ತರು.

  • ಐಪಿಎಲ್‌ನಲ್ಲಿ ಮನರಂಜನೆ ಮಾತ್ರವಲ್ಲ ಜಾಗೃತಿಯೂ ಉಂಟು – ಗಿಲ್‌ ಪಡೆ ಲ್ಯಾವೆಂಡರ್‌ ಜೆರ್ಸಿ ಧರಿಸಿ ಕಣಕ್ಕಿಳಿಯೋದು ಏಕೆ?

    ಐಪಿಎಲ್‌ನಲ್ಲಿ ಮನರಂಜನೆ ಮಾತ್ರವಲ್ಲ ಜಾಗೃತಿಯೂ ಉಂಟು – ಗಿಲ್‌ ಪಡೆ ಲ್ಯಾವೆಂಡರ್‌ ಜೆರ್ಸಿ ಧರಿಸಿ ಕಣಕ್ಕಿಳಿಯೋದು ಏಕೆ?

    ಅಹಮದಾಬಾದ್‌: 2024ರ ಐಪಿಎಲ್‌ ಆವೃತ್ತಿಯಲ್ಲಿ (IPL 2023) ಗುಜರಾತ್‌ ಟೈಟಾನ್ಸ್‌ (Gujarat Titans) ತಂಡವು ತವರಿನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 13ರಂದು ನಡೆಯುವ ಪಂದ್ಯದಲ್ಲಿ ಸಾಂಪ್ರದಾಯಿಕ ಕಡು ನೀಲಿ ಜೆರ್ಸಿ ಬದಲಿಗೆ ವಿಶೇಷ ಲ್ಯಾವೆಂಡರ್ ಬಣ್ಣದ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ.

    ಹೌದು. 2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಗುಜರಾತ್‌ ಟೈಟಾನ್ಸ್‌ ತಂಡ ತನ್ನ 2ನೇ ಆವೃತ್ತಿಯಿಂದಲೇ ವಿಶೇಷವಾಗಿ ಜಾಗೃತಿ ಮೂಡಿಸುವ ಅಭಿಯಾನವೊಂದನ್ನೂ ನಡೆಸುತ್ತಾ ಬಂದಿದೆ. ಅದರಂತೆ ಮೇ 13ರಂದು ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ ನಡೆಯುವ ಪಂದ್ಯದಲ್ಲಿ ಗುಜರಾತ್‌ ಲ್ಯಾವೆಂಡರ್‌ ಜೆರ್ಸಿಯನ್ನ ಧರಿಸಿ ಕಣಕ್ಕಿಳಿಯಲಿದೆ.

    ಲ್ಯಾವೆಂಡರ್‌ ಜೆರ್ಸಿ ಧರಿಸಲು ಕಾರಣ ಏನು?
    ಲ್ಯಾವೆಂಡರ್ (Lavender Jersey) ಸಾಮಾನ್ಯವಾಗಿ ಅನ್ನನಾಳದ ಕ್ಯಾನ್ಸರ್‌ಗೆ ಸಂಬಂಧಿಸಿದ್ದಾಗಿದೆ. ಇದು ಎಲ್ಲಾ ರೀತಿಯ ಕ್ಯಾನ್ಸರ್ (Cancer) ಅನ್ನು ಪ್ರತಿನಿಧಿಸುತ್ತದೆ. ಈ ವಿನಾಶಕಾರಿ ರೋಗದ ಬಗ್ಗೆ ಜಾಗೃತಿ (Cancer Awareness) ಮೂಡಿಸುವಲ್ಲಿ ತಂಡದ ಜವಾಬ್ದಾರಿಯುತ ಪ್ರಜ್ಞೆ ಎಂದು ಗುಜರಾತ್‌ ಟೈಟಾನ್ಸ್‌ ತಂಡ ಹೇಳಿಕೊಂಡಿದೆ. ಇದನ್ನೂ ಓದಿ: IPL 2024: ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಆರ್​ಸಿಬಿಗೆ 60 ರನ್‌ಗಳ ಭರ್ಜರಿ ಜಯ

    ಲ್ಯಾವೆಂಡರ್ ಜೆರ್ಸಿ ಧರಿಸುವ ಮೂಲಕ, ನಾವು ಕ್ಯಾನ್ಸರ್ ರೋಗಿಗಳು ಹಾಗೂ ಕ್ಯಾನ್ಸರ್‌ನಿಂದ ಬದುಕುಳಿದವರು ಮತ್ತು ಅವರ ಕುಟುಂಬಗಳಿಗೆ ಬೆಂಬಲ ಸೂಚಿಸಬಹುದು ಎಂದು ತಂಡ ಭಾವಿಸುತ್ತದೆ. ಅಲ್ಲದೇ ಕ್ಯಾನ್ಸರ್‌ ತಡೆಯುವ ಜಾಗೃತ ಕ್ರಮಗಳ ಬಗ್ಗೆ ಜನರನ್ನು ಪ್ರೇರೇಪಿಸುವುದು, ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವವರಿಗೆ ಸಹಕಾರ ನೀಡುವುದನ್ಮು ಪ್ರೇರೇಪಿಸುವುದು ತಂಡದ ಉದ್ದೇಶವಾಗಿದೆ ಆದ್ದರಿಂದ ಅಂದು ಲ್ಯಾವೆಂಡರ್‌ ಜೆರ್ಸಿ ಧರಿಸಿ ತಂಡ ಕಣಕ್ಕಿಳಿಯಲಿದೆ ಎಂದು ಟೈಟಾನ್ಸ್‌ ಫ್ರಾಂಚೈಸಿ ಹೇಳಿಕೋಂಡಿದೆ.

    ಪ್ರತಿ ಸೀಸನ್‌ನಲ್ಲೂ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸುತ್ತಿದ್ದ ಆರ್‌ಸಿಬಿ ಪರಿಸರದ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿತ್ತು. ತನ್ನ 2ನೇ ಆವೃತ್ತಿಯಿಂದಲೇ ಗುಜರಾತ್‌ ಟೈಟಾನ್ಸ್‌ ತಂಡ ಕ್ಯಾನ್ಸರ್‌ ಮಾರಣಾಂತಿಕ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವುದು ಕ್ರಿಕೆಟ್‌ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ: ಲಕ್ನೋಗೆ ಹೀನಾಯ ಸೋಲು – ಮೈದಾನದಲ್ಲೇ ರಾಹುಲ್‌ಗೆ ಮಾಲೀಕರಿಂದ ಫುಲ್‌ ಕ್ಲಾಸ್‌

  • ಚಿನ್ನಸ್ವಾಮಿ ಅಂಗಳದಲ್ಲಿಂದು ಆರ್‌ಸಿಬಿಗೆ ಟೈಟಾನ್ಸ್‌ ಸವಾಲು – ಹೈವೋಲ್ಟೇಜ್‌ ಕದನಕ್ಕೆ ಮಳೆ ಅಡ್ಡಿ ಆತಂಕ!

    ಚಿನ್ನಸ್ವಾಮಿ ಅಂಗಳದಲ್ಲಿಂದು ಆರ್‌ಸಿಬಿಗೆ ಟೈಟಾನ್ಸ್‌ ಸವಾಲು – ಹೈವೋಲ್ಟೇಜ್‌ ಕದನಕ್ಕೆ ಮಳೆ ಅಡ್ಡಿ ಆತಂಕ!

    ಬೆಂಗಳೂರು: ಐಪಿಎಲ್‌ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಆರ್‌ಸಿಬಿ (IPL 2024) ಮುಂದಿನ ತನ್ನೆಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಇಂದು (ಏ.4) ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Taitans) ಎದುರು ಸೆಣಸಲು ಸಜ್ಜಾಗಿದ್ದು, ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.

    2024ರ ಐಪಿಎಲ್‌ ಟೂರ್ನಿಯಲ್ಲಿ ಅಸ್ಥಿರ ಪ್ರದರ್ಶನ ನೀಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಕಳೆದ 2 ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಅದರಲ್ಲೂ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ ಎದುರು 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಇದೀಗ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಅಂಥದ್ದೇ ಪ್ರದರ್ಶನ ನೀಡಿ ನಾಕ್‌ಔಟ್‌ ಹಂತಕ್ಕೆ ಮತ್ತಷ್ಟು ಹತ್ತಿರವಾಗಲು ಆರ್‌ಸಿಬಿ ಎದುರು ನೋಡುತ್ತಿದೆ. ಇದನ್ನೂ ಓದಿ: ಟಿ20 ವಿಶ್ವಕಪ್‌ ತಂಡದಿಂದ ರಾಹುಲ್‌ ಬಿಟ್ಟಿದ್ದೇಕೆ? ಕೊಹ್ಲಿ ಸ್ಟ್ರೈಕ್‌ರೇಟ್‌ ಬಗ್ಗೆ ರೋಹಿತ್‌ ಹೇಳಿದ್ದೇನು?

    ಅತ್ತ ಹೊಸ ನಾಯಕ ಶುಭಮನ್ ಗಿಲ್‌ ಸಾರಥ್ಯದಲ್ಲಿ ಆರಂಭಿಕ ಪಂದ್ಯಗಳನ್ನು ಗೆದ್ದು ಉತ್ತಮ ಪ್ರದರ್ಶನ ನೀಡಿದ್ದ ಗುಜರಾತ್‌ ಟೈಟಾನ್ಸ್‌ ತಂಡ ಬಳಿಕ ಸತತ ವೈಫಲ್ಯಗಳೊಂದಿಗೆ ನಿರಾಸೆ ಅನುಭವಿಸಿದೆ. ಕಳೆದ 5 ಪಂದ್ಯಗಳಲ್ಲಿ ಟೈಟಾನ್ಸ್‌ 3 ಸೋಲು ಕಂಡಿದೆ. ಈವರೆಗೆ ಆಡಿರುವ 10 ಪಂದ್ಯಗಳಲ್ಲಿ 4 ಜಯ ಮತ್ತು 6 ಸೋಲಿನೊಂದಿಗೆ 8 ಅಂಕಗಳನ್ನು ಕಲೆಹಾಕಿದ್ದು 8ನೇ ಸ್ಥಾನ ಅಲಂಕರಿಸಿದೆ. ಹೀಗಾಗಿ ಉಳಿದ 4 ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದು ಸುಲಭವಾಗಿ ಪ್ಲೇ-ಆಫ್ಸ್‌ ತಲುಪಲು ಗಿಲ್‌ ಪಡೆ ಎದುರು ನೋಡುತ್ತಿದೆ. ಇತ್ತಂಡಗಳು ಒಟ್ಟು 4 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಉಭಯ ತಂಡಗಳು ತಲಾ ಎರಡರಲ್ಲಿ ಗೆಲುವು ಸಾಧಿಸಿದೆ.

    ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್-11
    ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್‌ ಗ್ರೀನ್‌, ದಿನೇಶ್ ಕಾರ್ತಿಕ್, ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್. ಇದನ್ನೂ ಓದಿ: ಮುಂಬೈ ವಿರುದ್ಧ 24 ರನ್‌ಗಳ ಜಯ – ಎರಡನೇ ಸ್ಥಾನಕ್ಕೆ ಜಿಗಿದ ಕೋಲ್ಕತ್ತಾ

    ಮಳೆ ಅಡ್ಡಿಯಾಗುತ್ತಾ?
    ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಶುಕ್ರವಾರವೂ ಬೆಂಗಳೂರಿನ ಕೆಲವೆಡೆ ಮಳೆಯಾಗಿದ್ದು, ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

  • 10 ಸಿಕ್ಸರ್‌ನೊಂದಿಗೆ ಸ್ಫೋಟಕ ಶತಕ – ಆರ್‌ಸಿಬಿಗೆ ವಿಲ್‌ ಪವರ್‌; ಟೈಟಾನ್ಸ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    10 ಸಿಕ್ಸರ್‌ನೊಂದಿಗೆ ಸ್ಫೋಟಕ ಶತಕ – ಆರ್‌ಸಿಬಿಗೆ ವಿಲ್‌ ಪವರ್‌; ಟೈಟಾನ್ಸ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    – ವಿಲ್‌ ಜಾಕ್ಸ್‌ಗೆ ಕಿಂಗ್‌ ಕೊಹ್ಲಿ ಸಾಥ್‌
    – 500 ರನ್‌ ಪೂರೈಸಿ ವಿಶೇಷ ಸಾಧನೆ ಮಾಡಿದ ‌ವಿರಾಟ್‌

    ಅಹಮದಾಬಾದ್‌: ವಿಲ್‌ ಜಾಕ್ಸ್‌ (Will Jacks) ಸ್ಫೋಟಕ ಶತಕ ಹಾಗೂ ವಿರಾಟ್‌ ಕೊಹ್ಲಿ (Virat Kohli) ಅವರ ಅರ್ಧಶತಕದ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಗುಜರಾತ್‌ ಟೈಟಾನ್ಸ್‌ (RCB vs GT) ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಆರ್‌ಸಿಬಿ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಗುಜರಾತ್‌ ತಂಡಕ್ಕೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌, ಸಾಯಿ ಸುದರ್ಶನ್‌, ಎಂ. ಶಾರುಖ್‌ ಖಾನ್‌ (M Shahrukh Khan) ಅವರ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 200 ರನ್‌ ಬಾರಿಸಿತ್ತು. 201 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಕೇವಲ 16 ಓವರ್‌ಗಳಲ್ಲೇ 206 ರನ್‌ ಚಚ್ಚಿ ಭರ್ಜರಿ ಗೆಲುವು ಸಾಧಿಸಿತು.

    ಚೇಸಿಂಗ್‌ ಆರಂಭಿಸಿದ್ದ ಆರ್‌ಸಿಬಿ 3.5 ಓವರ್‌ಗಳಲ್ಲಿ 40 ರನ್‌ಗಳಿದ್ದಾಗ ಮೊದಲ ವಿಕೆಟ್‌ ಕಳೆದುಕೊಂಡಿತ್ತು. ನಂತರ ಜೊತೆಗೂಡಿದ ಕಿಂಗ್‌ ಕೊಹ್ಲಿ ಹಾಗೂ ವಿಲ್‌ ಜಾಕ್ಸ್‌ ಜೋಡಿ ಅಬ್ಬರಕ್ಕೆ ಗುಜರಾತ್‌ ಭಸ್ಮವಾಯಿತು. 16ನೇ ಓವರ್‌ನಲ್ಲೇ ಬರೋಬ್ಬರಿ 4 ಸಿಕ್ಸರ್‌, 1 ಬೌಂಡರಿ ಸಿಡಿಸಿದ ವಿಲ್‌ ಜಾಕ್ಸ್‌ ಚೊಚ್ಚಲ ಐಪಿಎಲ್‌ ಶತಕ ಪೂರೈಸುವ ಜೊತೆಗೆ ಪಂದ್ಯವನ್ನೂ ಗೆಲ್ಲಿಸಿದರು. ಕೊನೆವರೆಗೂ ಕ್ರೀಸ್‌ನಲ್ಲಿ ಉಳಿದ ವಿಲ್‌ ಜಾಕ್ಸ್‌ 41 ಎಸೆತಗಳಲ್ಲಿ ಸ್ಪೋಟಕ 100 ರನ್‌ (10 ಸಿಕ್ಸರ್‌, 5 ಬೌಂಡರಿ) ಚಚ್ಚಿದರೆ, 44 ಎಸೆತ ಎದುರಿಸಿದ ವಿರಾಟ್‌ ಕೊಹ್ಲಿ 70 ರನ್‌ (3 ಸಿಕ್ಸರ್‌, 6 ಬೌಂಡರಿ) ಗಳಿದರು. ಇದರೊಂದಿಗೆ 17ನೇ ಆವೃತ್ತಿಯ ಐಪಿಎಲ್‌ನಲ್ಲಿ 500 ರನ್‌ ಪೂರೈಸಿದ ಸಾಧನೆಯನ್ನೂ ಕೊಹ್ಲಿ ಮಾಡಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಟೈಟಾನ್ಸ್‌ 6.4 ಓವರ್‌ಗಳಲ್ಲೇ 45 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ ಮಧ್ಯ ಕ್ರಮಾಂಕದಲ್ಲಿ 45 ಎಸೆತಗಳಲ್ಲಿ 86 ರನ್‌ಗಳ ಜೊತೆಯಾಟ ನೀಡುವ ಮೂಲಕ ಇನ್ನಿಂಗ್ಸ್‌ ಕಟ್ಟಿದ್ದರು. ಶಾರುಖ್‌ ಖಾನ್‌ ಔಟಾದ ಬೆನ್ನಲ್ಲೇ ಡೇವಿಡ್‌ ಮಿಲ್ಲರ್‌ ಮತ್ತು ಸುದರ್ಶನ್‌ ಜೋಡಿ ಮುರಿಯದ 4ನೇ ವಿಕೆಟ್‌ಗೆ 36 ಎಸೆತಗಳಲ್ಲಿ ಸ್ಫೋಟಕ 69 ರನ್‌ ಜೊತೆಯಾಟ ನೀಡಿತ್ತು. ಇದು ಗುಜರಾತ್‌ ತಂಡದಲ್ಲಿ ಉತ್ಸಾಹ ಹೆಚ್ಚಿಸಿತ್ತು.

    ಗುಜರಾತ್‌ ಪರ ಸಾಯಿ ಸುದರ್ಶನ್‌ 84 ರನ್‌ (49 ಎಸೆತ, 4 ಸಿಕ್ಸರ್‌, 8 ಬೌಂಡರಿ), ಶಾರುಖ್‌ ಖಾನ್‌ 58 ರನ್‌ (30 ಎಸೆತ, 5 ಸಿಕ್ಸರ್‌, 3 ಬೌಂಡರಿ), ಡೇವಿಡ್‌ ಮಿಲ್ಲರ್‌ 26 ರನ್‌ (19 ಎಸೆತ, 1 ಸಿಕ್ಸರ್‌, 2 ಬೌಂಡರಿ), ವೃದ್ಧಿಮಾನ್‌ ಸಾಹಾ 5 ರನ್‌, ಶುಭಮನ್‌ ಗಿಲ್‌ 16 ರನ್‌ ಗಳಿಸಿದರು.ಆರ್‌ಸಿಬಿ ಪರ ಗ್ಲೆನ್‌ ಮ್ಯಾಕ್ಸ್‌ವೆಲ್‌, ಸ್ವಪ್ನಿಲ್‌ ಸಿಂಗ್‌, ಮೊಹಮ್ಮದ್‌ ಸಿರಾಜ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

  • IPL 2024: ಕೊನೇ ಓವರ್ ಥ್ರಿಲ್ಲರ್ – ರೋಚಕ ಪಂದ್ಯದಲ್ಲಿ ಡೆಲ್ಲಿಗೆ 4 ರನ್‌ಗಳ ಜಯ; ಹೋರಾಡಿ ಸೋತ ಟೈಟಾನ್ಸ್!

    IPL 2024: ಕೊನೇ ಓವರ್ ಥ್ರಿಲ್ಲರ್ – ರೋಚಕ ಪಂದ್ಯದಲ್ಲಿ ಡೆಲ್ಲಿಗೆ 4 ರನ್‌ಗಳ ಜಯ; ಹೋರಾಡಿ ಸೋತ ಟೈಟಾನ್ಸ್!

    ನವದೆಹಲಿ: ರಶೀದ್ ಖಾನ್ ಅವರ ಸಿಕ್ಸರ್, ಬೌಂಡರಿ ಆಟದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

    ಕೊನೇ ಓವರ್ ಥ್ರಿಲ್ಲಿಂಗ್?
    ಕೊನೇ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ರಶೀದ್ ಖಾನ್ ಮೊದಲ 2 ಎಸೆತಗಳಲ್ಲಿ ಭರ್ಜರಿ ಬೌಂಡರಿ ಬಾರಿಸಿದ್ದರು. 3-4ನೇ ಎಸೆತದಲ್ಲಿ ರನ್ ಕದಿಯುವಲ್ಲಿ ವಿಫಲರಾದರು. 2 ಎಸೆತಗಳಲ್ಲಿ 11 ರನ್ ಬೇಕಿದ್ದಾಗಲೇ 5ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ್ದರು, ಇದರಿಂದ ಕೊನೇ ಕ್ಷಣದವರೆಗೂ ಗುಜರಾತ್‌ಗೆ ಗೆಲುವಿನ ಆಸೆ ಜೀವಂತವಾಗಿತ್ತು. ಆದ್ರೆ ಕೊನೇ ಎಸೆತದಲ್ಲಿ ಬೌಂಡರಿಗೆ ಯತ್ನಿಸಿದ ರಶೀದ್ ಖಾನ್ ಒಂದು ರನ್ ಕದಿಯುವಲ್ಲಿ ಮಾತ್ರ ಸಫಲರಾದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್‌ಗೆ 4 ರನ್‌ಗಳ ರೋಚಕ ಗೆಲುವು ಸಿಕ್ಕಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಚೇಸಿಂಗ್ ಆರಂಭಿಸಿದ ಗುಜರಾತ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಉತ್ತಮ ರನ್ ಕಲೆಹಾಕಿತ್ತು. ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ನೆರವಾಗಿತ್ತು. ಇವರಿಬ್ಬರ ವಿಕೆಟ್ ಉರುಳುತ್ತಿದ್ದಂತೆ ರನ್ ವೇಗವೂ ಕಡಿಮೆಯಾಯಿತು.

    ಟೈಟಾನ್ಸ್ ಪರ ಸಾಯಿ ಸುದರ್ಶನ್ 65 ರನ್ (39 ಎಸೆತ, 2 ಸಿಕ್ಸರ್, 7 ಬೌಂಡರಿ), ಡೇವಿಡ್ ಮಿಲ್ಲರ್ 55 ರನ್ (23 ಎಸೆತ, 3 ಸಿಕ್ಸರ್, 6 ಬೌಂಡರಿ), ವೃದ್ಧಿಮಾನ್ ಸಾಹಾ 39 ರನ್, ಶುಭಮನ್ ಗಿಲ್ 6 ರನ್, ಅಜ್ಮತುಲ್ಲಾ ಒಮರ್ಜಾಯ್ 1 ರನ್, ಎಂ. ಶಾರೂಖ್ ಖಾನ್ 8 ರನ್, ರಾಹುಲ್ ತೆವಾಟಿಯಾ 8 ರನ್, ಸಾಯಿ ಕಿಶೋರ್ 13 ರನ್, ರಶೀದ್ ಖಾನ್ 21 ರನ್ ಗಳಿಸಿದರು.

    ಟಾಸ್ ಸೋತು ಮೊದಲು ಕ್ರೀಸ್‌ಗಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಫೋಟಕ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ನಿಧಾನಗತಿಯ ಬ್ಯಾಟಿಂಗ್‌ನಿಂದ 200 ರನ್‌ಗಳ ಗಡಿ ತಲುಪುವುದೂ ಕಷ್ಟವಾಗಿತ್ತು. ಆದ್ರೆ ಕೊನೇ 2 ಓವರ್‌ಗಳಲ್ಲಿ ರಿಷಭ್ ಪಂತ್ ಹಾಗೂ ಟ್ರಿಸ್ಟಾನ್ ಸ್ಟಬ್ಸ್ ಅವರ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಕೊನೇ 10 ಎಸೆತಗಳಲ್ಲಿ ಸ್ಟಬ್ಸ್ ಮತ್ತು ಪಂತ್ ಜೋಡಿ ಬರೋಬ್ಬರಿ 51 ರನ್ ಚಚ್ಚಿತ್ತು. ಇದರಲ್ಲಿ ಬರೋಬ್ಬರಿ 6 ಸಿಕ್ಸರ್ ಹಾಗೂ 3 ಬೌಂಡರಿಗಳೂ ಸೇರಿದ್ದವು.

    ಡೆಲ್ಲಿ ಕ್ಯಾಪಿಟಲ್ಸ್ ಪರ ರಿಷಭ್ ಪಂತ್ 88 ರನ್ (43 ಎಸೆತ, 8 ಸಿಕ್ಸರ್, 5 ಬೌಂಡರಿ), ಅಕ್ಷರ್ ಪಟೇಲ್ 66 ರನ್ (43 ಎಸೆತ, 4 ಸಿಕ್ಸರ್. 5 ಬೌಂಡರಿ), ಟ್ರಿಸ್ಟಾನ್ ಸ್ಟಬ್ಸ್ 26 ರನ್ (2 ಸಿಕ್ಸರ್, 3 ಬೌಂಡರಿ), ಜೇಕ್ ಫ್ರೇಸರ್-ಮ್ಯಾಕ್‌ಗಾರ್ಕ್ 23 ರನ್, ಪೃಥ್ವಿ ಶಾ 11 ರನ್, ಶಾಯ್ ಹೋಪ್ 5 ರನ್ ಗಳಿಸಿದರು. ಗುಜರಾತ್ ಟೈಟಾನ್ಸ್ ಪರ ಮಾರಕ ದಾಳಿ ನಡೆಸಿದ ಸಂದೀಪ್ ವಾರಿಯರ್ಸ್ 3 ವಿಕೆಟ್ ಕಿತ್ತರೆ, ನೂರ್ ಅಹ್ಮದ್ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

  • ಪಂಜಾಬ್‌ ವಿರುದ್ಧ 3 ವಿಕೆಟ್‌ ಜಯ – 6ನೇ ಸ್ಥಾನಕ್ಕೆ ಜಿಗಿತ ಗುಜರಾತ್‌

    ಪಂಜಾಬ್‌ ವಿರುದ್ಧ 3 ವಿಕೆಟ್‌ ಜಯ – 6ನೇ ಸ್ಥಾನಕ್ಕೆ ಜಿಗಿತ ಗುಜರಾತ್‌

    ಮುಲ್ಲನಪುರ: ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಗುಜರಾತ್‌ ಟೈಟಾನ್ಸ್‌ (Gujarat Titans) ಪಂಜಾಬ್‌ ಕಿಂಗ್ಸ್‌(Punjab Kings) ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿ ಪಂಜಾಬ್‌ 20 ಓವರ್‌ಗಳಲ್ಲಿ 142 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 19.1 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 146 ರನ್‌ ಹೊಡೆದು ಜಯಗಳಿಸಿತು.

    ಈ ಪಂದ್ಯವನ್ನು ಗೆಲ್ಲುವ ಮೂಲಕ 8ನೇ ಸ್ಥಾನದಲ್ಲಿದ್ದ ಗುಜರಾತ್‌ 6ನೇ ಸ್ಥಾನಕ್ಕೆ ಜಿಗಿದಿದೆ.

    ಗುಜರಾತ್‌ ಪರ ನಾಯಕ ಶುಭಮನ್‌ ಗಿಲ್‌ 35 ರನ್‌ (29 ಎಸೆತ, 5 ಬೌಂಡರಿ), ಸಾಯಿ ಸುದರ್ಶನ್‌ 31 ರನ್‌(34 ಎಸೆತ, 3 ಬೌಂಡರಿ) ಕೊನೆಯಲ್ಲಿ ರಾಹುಲ್‌ ತೆವಾಟಿಯ ಔಟಾಗದೇ 36 ರನ್‌(18 ಎಸೆತ, 7 ಬೌಂಡರಿ) ಹೊಡೆದು ತಂಡಕ್ಕೆ ಜಯ ತಂದುಕೊಟ್ಟರು. ಪಂಜಾಬ್‌ ಪರ ಹರ್ಷಲ್‌ ಪಟೇಲ್‌ 3 ವಿಕೆಟ್‌, ಲಿವಿಂಗ್‌ಸ್ಟೋನ್‌ 2 ವಿಕೆಟ್‌ ಕಿತ್ತರು.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಉತ್ತಮ ಆರಂಭ ಪಡೆದಿತ್ತು. ಮೊದಲ ವಿಕೆಟಿಗೆ 52 ರನ್‌ ಜೊತೆಯಾಟ ಬಂದಿತ್ತು. ನಂತರ ನಿರಂತರ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಇದನ್ನೂ ಓದಿ: IPL 2024: ಹೆಚ್ಚುವರಿ 20 ರನ್‌ ಕೊಟ್ಟಿದ್ದೇ ಆರ್‌ಸಿಬಿಗೆ ಮುಳುವಾಯ್ತಾ? – ಗ್ರೀನ್‌ ಬಾಯ್ಸ್‌ ಎಡವಿದ್ದೆಲ್ಲಿ?

    ಪಂಜಬ್‌ ಪರ ಪ್ರಭ್‌ಸಿಮ್ರಾನ್‌ ಸಿಂಗ್‌ 35 ರನ್‌ ( 21 ಎಸೆತ, 3 ಬೌಂಡರಿ, 3 ಸಿಕ್ಸರ್‌), ಹರ್‌ಪ್ರೀತ್‌ ಬ್ರಾರ್‌ 29 ರನ್‌ (12 ಎಸೆತ, 4 ಬೌಂಡರಿ, 1 ಸಿಕ್ಸರ್‌) ಸಿಡಿಸಿದ ಪರಿಣಾಮ ತಂಡದ ಮೊತ್ತ 140 ರನ್‌ಗಳ ಗಡಿ ದಾಟಿತು. ಗುಜರಾತಿನ ಸಾಯ್‌ ಕಿಶೋರ್‌ 4 ವಿಕೆಟ್‌ ಕಿತ್ತರೆ ನೂರ್‌ ಅಹ್ಮದ್‌ ಮತ್ತು ಮೋಹಿತ್‌ ಶರ್ಮಾ ತಲಾ 2 ವಿಕೆಟ್‌ ಪಡೆದರು.

  • ಕೊನೆಯ ಎಸೆತದಲ್ಲಿ ಬೌಂಡರಿ – ಗುಜರಾತಿಗೆ ರೋಚಕ ಜಯ: ಕೊನೆಯ ಓವರ್‌ ಹೀಗಿತ್ತು

    ಕೊನೆಯ ಎಸೆತದಲ್ಲಿ ಬೌಂಡರಿ – ಗುಜರಾತಿಗೆ ರೋಚಕ ಜಯ: ಕೊನೆಯ ಓವರ್‌ ಹೀಗಿತ್ತು

    ಜೈಪುರ: ನಾಯಕ ಶುಭಮನ್‌ ಗಿಲ್‌ (Shubman Gill)‌ ಅರ್ಧಶತಕ ಕೊನೆಗೆ ರಶೀದ್‌ ಖಾನ್‌ (Rashid Khan) ಮತ್ತು ರಾಹುಲ್‌ ತೆವಾಟಿಯ ಅವರ ಸ್ಫೋಟಕ ಆಟದಿಂದ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಗುಜರಾತ್‌ ಟೈಟಾನ್ಸ್‌ (Gujarat Titans) ರೋಚಕ 3 ವಿಕೆಟ್‌ ಜಯ ಸಾಧಿಸಿದೆ.

    ಗೆಲ್ಲಲು 196 ರನ್‌ಗಳ ಕಠಿಣ ಗುರಿಯನ್ನು ಪಡೆದ ಗುಜರಾತ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 199 ರನ್‌ ಹೊಡೆಯಿತು. ರಶೀದ್‌ ಖಾನ್‌ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಸತತ 4 ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನಕ್ಕೆ 5 ಪಂದ್ಯದಲಿ ಸೋಲಾಗಿದೆ.

    ರಾಜಸ್ಥಾನಕ್ಕೆ ಕೊನೆಯ 24 ಎಸೆತದಲ್ಲಿ 59 ರನ್‌ ಬೇಕಿತ್ತು. ಅಶ್ವಿನ್‌ ಎಸೆದ 17ನೇ ಓವರ್‌ನಲ್ಲಿ 17 ರನ್‌ ಬಂದರೆ 18ನೇ ಓವರ್‌ನಲ್ಲಿ 7 ರನ್‌ ಬಂತು. ಕುಲದೀಪ್‌ ಸೇನ್‌ 19ನೇ ಓವರ್‌ನಲ್ಲಿ 20 ರನ್‌ ನೀಡಿದರು. ಈ ಓವರ್‌ನಲ್ಲಿ 4ನೇ ಎಸೆತ ನೋಬಾಲ್‌ ಆಗಿತ್ತು. ಆ ಎಸೆತವನ್ನು ರಶೀದ್‌ ಖಾನ್‌ ಬೌಂಡರಿಗೆ ಅಟ್ಟಿದ್ದರು.

    ಕೊನೆಯ ಓವರ್‌ನಲ್ಲಿ 15 ರನ್‌ ಬೇಕಿತ್ತು. ಈ ವೇಳೆ ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ 4 ಆಟಗಾರರು ಮಾತ್ರ ಬೌಂಡರಿ ಬಳಿ ಫೀಲ್ಡಿಂಗ್‌ ಮಾಡಲು ಅವಕಾಶವಿತ್ತು. ಇದರ ಲಾಭವನ್ನು ರಶೀದ್‌ ಖಾನ್‌ ಮತ್ತು ತೆವಾಟಿಯ ಪಡೆದರು. ಅವೇಶ್‌ ಖಾನ್‌ ಎಸೆದ ಮೊದಲ ಎಸೆತವನ್ನು ರಶೀದ್‌ ಖಾನ್‌ ಬೌಂಡರಿಗೆ ಅಟ್ಟಿದರೆ ಎರಡನೇ ಎಸೆತದಲ್ಲಿ 2 ರನ್‌, ಮೂರನೇ ಎಸೆತದಲ್ಲಿ ಬೌಂಡರಿ ಹೊಡೆದರು. 4ನೇ ಎಸೆತದಲ್ಲಿ ಒಂದು ರನ್‌ ತೆಗೆದರೆ 5ನೇ ಎಸೆತದಲ್ಲಿ ಮೂರು ರನ್‌ ತೆಗೆಯುವಾಗ ತವಾಟಿಯಾ ರನೌಟ್‌ ಆದರು. ಕೊನೆಯ ಒಂದು ಎಸೆತದಲ್ಲಿ 2 ರನ್‌ ಬೇಕಿದ್ದಾಗ ರಶೀದ್‌ ಖಾನ್‌ ಬೌಂಡರಿ ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು.

    ಗುಜರಾತ್‌ ಪರ ನಾಯಕ ಶುಭಮನ್‌ ಗಿಲ್‌ 72 ರನ್‌(44 ಎಸೆತ, 6 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರೆ ಸಾಯಿ ಸುದರ್ಶನ್‌ 35 ರನ್‌ (29 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.

    ಮಧ್ಯಮ ಕ್ರಮಾಂಕದ ಆಟಗಾರರು ಬೇಗನೇ ಔಟಾದ ಪರಿಣಾಮ ಗುಜರಾತ್‌ ಸೋಲಿನ ಕಡೆ ಜಾರಿತ್ತು. ಆದರೆ ರಶೀದ್‌ ಖಾನ್‌ ಮತ್ತು ತೆವಾಟಿಯಾ 14 ಎಸೆತದಲ್ಲಿ 36 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡತ್ತ ತಂದರು. ರಶೀದ್‌ ಖಾನ್‌ ಔಟಾಗದೇ 24 ರನ್‌(11 ಎಸೆತ, 4 ಬೌಂಡರಿ) ತವಾಟಿಯಾ 22 ರನ್‌ (11 ಎಸೆತ, 3 ಬೌಂಡರಿ) ಹೊಡೆದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ 42 ರನ್‌ ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್‌ 24 ರನ್‌(19 ಎಸೆತ, 5 ಬೌಂಡರ), ಜೋಸ್‌ ಬಟ್ಲರ್‌ ಅವರ ವಿಕೆಟ್‌ ಕಳೆದುಕೊಂಡಿತ್ತು. ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಸಂಜು ಸ್ಯಾಮ್ಸನ್‌ ಮತ್ತು ರಿಯಾನ್‌ ಪರಾಗ್‌ ನಿಧಾನವಾಗಿ ಇನ್ನಿಂಗ್ಸ್‌ ಕಟ್ಟಿದರು. ಇವರಿಬ್ಬರು ಮೂರನೇ ವಿಕೆಟಿಗೆ 78 ಎಸೆತಗಳಲ್ಲಿ 130 ರನ್‌ ಹೊಡೆದರು.

    ರಿಯಾನ್‌ ಪರಾಗ್‌ 76 ರನ್‌(48 ಎಸೆತ, 3 ಬೌಂಡರಿ, 5 ಸಿಕ್ಸರ್‌) ಹೊಡೆದು ಔಟಾದರೆ ನಾಯಕ ಸಾಮ್ಸನ್‌ ಔಟಾಗದೇ 68 ರನ್‌ (38 ಎಸೆತ, 7 ಬೌಂಡರಿ, 2 ಸಿಕ್ಸರ್‌), ಹೆಟ್ಮೇಯರ್‌ 13 ರನ್‌ (5 ಎಸೆತ, 1 ಬೌಂಡರಿ, 1 ಸಿಕ್ಸರ್‌) ಹೊಡೆದ ಪರಿಣಾಮ ರಾಜಸ್ಥಾನ 3 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆಯಿತು.