Tag: ಗುಜರಾತ್ ಟೈಟಾನ್ಸ್

  • ಗುಜರಾತ್‌ ಬೆಂಕಿ ಬ್ಯಾಟಿಂಗ್‌ಗೆ ಹೈದರಾಬಾದ್‌ ಬರ್ನ್‌!

    ಗುಜರಾತ್‌ ಬೆಂಕಿ ಬ್ಯಾಟಿಂಗ್‌ಗೆ ಹೈದರಾಬಾದ್‌ ಬರ್ನ್‌!

    ಅಹಮದಾಬಾದ್‌: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಗುಜರಾತ್‌ ಟೈಟಾನ್ಸ್‌ (Gujarat Titans) ಹೈದರಾಬಾದ್‌ ಸನ್‌ರೈಸರ್ಸ್‌ (Sunrisers Hyderabad) ವಿರುದ್ಧ 38 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ 6 ವಿಕೆಟ್‌ ನಷ್ಟಕ್ಕೆ 224 ರನ್‌ ಗಳಿಸಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಹೈದರಾಬಾದ್‌ ಆರಂಭ ಉತ್ತಮವಾಗಿತ್ತು. ಮೊದಲ ವಿಕೆಟಿಗೆ ಟ್ರಾವಿಸ್‌ ಹೆಡ್‌ ಮತ್ತು ಅಭಿಶೇಕ್‌ ಶರ್ಮಾ 27 ಎಸೆತಗಳಲ್ಲಿ 49 ರನ್‌ ಜೊತೆಯಾಟವಾಡಿದ್ದರು. ಹೆಡ್‌ 20 ರನ್‌ ಗಳಿಸಿ ಔಟಾದರೆ ಇಶನ್‌ ಕಿಶನ್‌ 13 ರನ್‌ ಗಳಿಸಿ ಔಟಾಗುವ ಮೂಲಕ ಮತ್ತೆ ವಿಫಲರಾದರು.


    ನಂತರ ಅಭಿಶೇಕ್‌ ಶರ್ಮಾ ಮತ್ತು ಕ್ಲಾಸೆನ್‌ 33 ಎಸೆತಗಳಲ್ಲಿ 57 ರನ್‌ ಜೊತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ ಅಭಿಶೇಕ್‌ ಶರ್ಮಾ 74 ರನ್‌(41 ಎಸೆತ, 4 ಬೌಂಡರಿ, 6 ಸಿಕ್ಸ್‌ ಹೊಡೆದು) ಔಟಾದರು. ಶರ್ಮಾ ಔಟಾದ ಬೆನ್ನಲ್ಲೇ ಹೈದರಾಬಾದ್‌ ಕ್ಲಾಸೆನ್‌, ಅಂಕಿತ್‌ ವರ್ಮಾ, ಮೆಂಡೀಸ್‌ ಔಟಾದರು. ನಿತಿಶ್‌ ಕುಮಾರ್‌ ರೆಡ್ಡಿ ಔಟಾಗದೇ 21 ರನ್‌, ಪ್ಯಾಟ್‌ ಕಮಿನ್ಸ್‌ ಔಟಾಗದೇ ಔಟಾಗದೇ 19 ರನ್‌ (10 ಎಸೆತ, 1 ಬೌಂಡರಿ, 1 ಸಿಕ್ಸ್‌ ) ಹೊಡೆದರು

    ಸಿರಾಜ್‌ ಮತ್ತು ಪ್ರಸಿದ್ಧ್‌ ಕೃಷ್ಣ ತಲಾ 2 ವಿಕೆಟ್‌ ಪಡೆದರೆ ಇಶಾಂತ್‌ ಶರ್ಮಾ ಮತ್ತು ಜೆರಾಲ್ಡ್ ಕೋಟ್ಜೀ ತಲಾ ಒಂದೊಂದು ವಿಕೆಟ್‌ ಪಡೆದರು.

    ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಪರ ಆರಂಭಿಕ ಆಟಗಾರರಾದ ಸಾಯಿ ಸುದರ್ಶನ್‌ (Sai Sudharsan) ಮತ್ತು ನಾಯಕ ಶುಭಮನ್‌ ಗಿಲ್‌ (Shubman Gil) 41 ಎಸೆತಗಳಲ್ಲಿ 87 ರನ್‌ ಜೊತೆಯಾಟವಾಡಿದರು. ಸಾಯಿ ಸುದರ್ಶನ್‌ 48 ರನ್‌(23 ಎಸೆತ, 9 ಬೌಂಡರಿ ಹೊಡೆದು ಔಟಾದರು. ನಂತರ ಎರಡನೆ ವಿಕೆಟಿಗೆ ಗಿಲ್‌ ಮತ್ತು ಜೋಸ್‌ ಬಟ್ಲರ್‌ 37 ಎಸೆತಗಳಲ್ಲಿ 62 ರನ್‌ ಹೊಡೆದರು.

    ಗಿಲ್‌ 76 ರನ್‌(38 ಎಸೆತ, 10 ಬೌಂಡರಿ, 2 ಸಿಕ್ಸ್‌) ಗಳಿಸಿದ್ದಾಗ ರನೌಟ್‌ ಆದರು. ಬಟ್ಲರ್‌ 64 ರನ್‌(37 ಎಸೆತ, 3 ಬೌಂಡರಿ, 4 ಸಿಕ್ಸ್‌) ಹೊಡೆದು ಕ್ಯಾಚ್‌ ನೀಡಿ ಹೊರನಡೆದರು.

  • ರನೌಟ್‌ ಕೊಟ್ಟದ್ದಕ್ಕೆ ಬೌಂಡರಿ ಲೈನ್‌ ಬಳಿ ಅಂಪೈರ್‌ ಜೊತೆ ಗಿಲ್‌ ಜಗಳ

    ರನೌಟ್‌ ಕೊಟ್ಟದ್ದಕ್ಕೆ ಬೌಂಡರಿ ಲೈನ್‌ ಬಳಿ ಅಂಪೈರ್‌ ಜೊತೆ ಗಿಲ್‌ ಜಗಳ

    ಅಹಮದಾಬಾದ್‌: ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧದ ಪಂದ್ಯದಲ್ಲಿ ರನೌಟ್‌ ಆಗಿದ್ದಕ್ಕೆ ಗುಜರಾತ್‌ ಟೈಟಾನ್‌ (Gujarat Titans) ತಂಡದ ನಾಯಕ ಶುಭಮನ್‌ ಗಿಲ್‌ (Shubman Gill) ಅಂಪೈರ್‌ ವಿರುದ್ಧವೇ ಜಗಳ ಮಾಡಿದ್ದಾರೆ.

    ಜೀಶನ್ ಅನ್ಸಾರಿ ಎಸೆದ 13ನೇ ಓವರ್‌ನ ಕೊನೆಯ ಎಸೆತವನ್ನು ಬಟ್ಲರ್‌ ಫೈನ್‌ ಲೆಗ್‌ ಕಡೆ ಹೊಡೆದು ಓಡಿದರು. ಈ ವೇಳೆ ನಾನ್‌ ಸ್ಟ್ರೈಕ್‌ನಲ್ಲಿ ಗಿಲ್‌ ಸ್ಟ್ರೈಕ್‌ನತ್ತ ಬರುತ್ತಿದ್ದರು.

    ಈ ಸಂದರ್ಭದಲ್ಲಿ ಹರ್ಷಲ್‌ ಪಟೇಲ್‌ ಬಾಲ್‌ ಹಿಡಿದು ಕೀಪರ್‌ ಕ್ಲಾಸೆನ್ ಕಡೆಗೆ ಎಸೆದರು. ಬಾಲ್‌ ಬಂದ ಕೂಡಲೇ ಕ್ಲಾಸೆನ್ ಬಾಲನ್ನು ವಿಕೆಟ್‌ಗೆ ತಾಗಿಸಿದರು. ಗ್ರೌಂಡ್‌ನಲ್ಲಿ ಅಂಪೈರ್‌ ಮೂರನೇ ಅಂಪೈರ್‌ಗೆ ತೀರ್ಪು ನೀಡುವಂತೆ ಸೂಚಿಸಿದರು. ಇದನ್ನೂ ಓದಿ: IPL 2025 | ಒಂದೇ ಒಂದು ತೂಫಾನ್‌ ಶತಕ – ವೈಭವ್‌ಗೆ 10 ಲಕ್ಷ ರೂ. ಬಹುಮಾನ!

    ರಿಪ್ಲೈಯಲ್ಲಿ ವಿಕೆಟ್‌ಗೆ ಗ್ಲೌಸ್‌ ತಾಗಿದೆಯೋ ಅಥವಾ ಚೆಂಡು ವಿಕೆಟ್‌ ತಾಗಿದೆಯೋ ಎನ್ನುವುದು ಸ್ಪಷ್ಟವಾಗಿರಲಿಲ್ಲ. ಆದರೆ ಮೂರನೇ ಅಂಪೈರ್‌ ಗಿಲ್‌ ಔಟ್‌ ಎಂದು ತೀರ್ಪು ನೀಡಿದರು. ಔಟ್‌ ತೀರ್ಪು ಪ್ರಕಟವಾದ ಬೆನ್ನಲ್ಲೇ ಶುಭಮನ್‌ ಗಿಲ್‌ ಬೌಂಡರಿ ಗೆರೆ ಬಳಿ ಇದ್ದ ಅಂಪೈರ್‌ ಬಳಿ ಬಂದು ಔಟ್‌ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಗುಜರಾತ್‌ 6 ವಿಕೆಟ್‌ ನಷ್ಟಕ್ಕೆ 224 ರನ್‌ ಹೊಡೆಯಿತು. ನಾಯಕ ಶುಭಮನ್‌ ಗಿಲ್‌ 76 ರನ್‌ (38 ಎಸೆತ, 10 ಬೌಂಡರಿ, 2 ಸಿಕ್ಸ್‌), ಸಾಯಿ ಸುದರ್ಶನ್‌ 48 ರನ್‌(23 ಎಸೆತ, 9 ಬೌಂಡರಿ), ಜೋಸ್‌ ಬಟ್ಲರ್‌64 ರನ್‌(37 ಎಸೆತ, 3 ಬೌಂಡರಿ, 4 ಸಿಕ್ಸ್‌) ಹೊಡೆದು ಔಟಾದರು.

     

  • IPL 2025 | ಒಂದೇ ಒಂದು ತೂಫಾನ್‌ ಶತಕ – ವೈಭವ್‌ಗೆ 10 ಲಕ್ಷ ರೂ. ಬಹುಮಾನ!

    IPL 2025 | ಒಂದೇ ಒಂದು ತೂಫಾನ್‌ ಶತಕ – ವೈಭವ್‌ಗೆ 10 ಲಕ್ಷ ರೂ. ಬಹುಮಾನ!

    – ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಇತಿಹಾಸ ನಿರ್ಮಿಸಿದ 14ರ ಬಾಲಕ

    ಜೈಪುರ: ತನ್ನ ಚೊಚ್ಚಲ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲೇ (IPL 20225) ಸ್ಫೋಟಕ ಶತಕ ಸಿಡಿಸಿದ ಕ್ರೀಡಾತಾರೆ ವೈಭವ್‌ ಸೂರ್ಯವಂಶಿಗೆ (Vaibhav Suryavanshi) ಬಿಹಾರ ರಾಜ್ಯ ಸರ್ಕಾರ ಬಂಪರ್‌ ಬಹುಮಾನ ನೀಡಿ ಘೋಷಿಸಿದೆ.

    ಶತಕ ಬಾರಿಸಿದ ವೈಭವ್‌ ಸೂರ್ಯವಂಶಿಗೆ ಸಿಎಂ ನಿತೀಶ್‌ ಕುಮಾರ್‌ (Nitish Kumar) ತಮ್ಮ ನಿವಾಸದಲ್ಲಿ ಸನ್ಮಾನಿಸಿದರು. ಇದೇ ವೇಳೆ ಬಿಹಾರ ರಾಜ್ಯ ಸರ್ಕಾರದಿಂದ 10 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದರು. ಇದನ್ನೂ ಓದಿ: ʻವೈಭವ’ ಶತಕ – ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಇತಿಹಾಸ ನಿರ್ಮಿಸಿದ 14ರ ಬಾಲಕ

    ವೈಭವ್‌ ಸೂರ್ಯವಂಶಿಗೆ ಅಭಿನಂದನೆ ತಿಳಿಸಿದರು. ಕಿರಿಯ ವಯಸ್ಸಿನಲ್ಲೇ ಅವರ ಪ್ರತಿಭೆ ಮುಂದೆ ಭಾರತೀಯ ಕ್ರಿಕೆಟ್‌ಗೆ ಹೊಸ ಭರವಸೆಯಾಗಿದೆ. ಇಂದು ಇಡೀ ದೇಶವೇ ಅವನ ಬಗ್ಗೆ ಹೆಮ್ಮೆ ಪಡುತ್ತಿದೆ. 2024ರಲ್ಲಿ ನಾನು ವೈಭವ್‌ ಮತ್ತು ಅವರ ತಂದೆಯನ್ನ ಭೇಟಿಯಾಗಿದ್ದೆ, ಆಗಲೇ ನಾನು ಅವರ ಭವಿಷ್ಯ ಉಜ್ವಲವಾಗಿರಲಿದೆ ಎಂದು ಹಾರೈಸಿದ್ದೆ. ಹಾಗೆಯೇ ಇಂದು ಯಶಸ್ಸು ಕಾಣುತ್ತಿದ್ದಾರೆ. ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನದ ಬಳಿಕ ನಾನು ಅವರಿಗೆ ಫೋನ್‌ ಮಾಡಿ ಮಾತನಾಡಿದ್ದೆ. ವೈಭವ್ ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಇನ್ನಷ್ಟು ದಾಖಲೆಗಳನ್ನು ಸೃಷ್ಟಿಸಿ ದೇಶಕ್ಕೆ ಕೀರ್ತಿ ತರಲೆಂದು ಹಾರೈಸುತ್ತೇನೆ ಎಂದು ಶುಭಕೋರಿದರು.  ಇದನ್ನೂ ಓದಿ: ಐಪಿಎಲ್‌ಗಾಗಿ ಮಟನ್‌, ಪಿಜ್ಜಾ ತ್ಯಜಿಸಿದ್ದ ವೈಭವ್‌ – ಡಯಟ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಕೋಚ್‌

    ವೇಗದ ಶತಕ ಸಿಡಿಸಿದ ಮೊದಲ ಭಾರತೀಯ
    ತನ್ನ ಚೊಚ್ಚಲ ಪಂದ್ಯದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ 3ನೇ ಪಂದ್ಯದಲ್ಲೇ ಸ್ಫೋಟಕ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು 35 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ವೇಗದ ಶತಕ ಬಾರಿಸಿದ 2ನೇ ಆಟಗಾರ ಹಾಗೂ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಡೀ ಐಪಿಎಲ್ ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸಿದ ಖ್ಯಾತಿ ಕ್ರಿಸ್ ಗೇಲ್ (30 ಎಸೆತ) ಅವರ ಹೆಸರಿನಲ್ಲಿದೆ. ಇದೀಗ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವೈಭವ್ ಸೂರ್ಯವಂಶಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಉಳಿದಂತೆ ಯೂಸೂಫ್ ಪಠಾಣ್ (37 ಎಸೆತ), ಡೇವಿಡ್ ಮಿಲ್ಲರ್ (38 ಎಸೆತ), ಟ್ರಾವಿಸ್ ಹೆಡ್ (39 ಎಸೆತ) ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಟಾಪ್-5 ಆಟಗಾರ ಪಟ್ಟಿಯಲ್ಲಿದ್ದಾರೆ.

    ವೇಗದ ಫಿಫ್ಟಿ:
    ಇನ್ನೂ ವೈಭವ್ ಈ ಆವೃತ್ತಿಯಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಜೊತೆಗೆ ಅತೀ ಕಿರಿಯ ವಯಸ್ಸಿಗೆ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾರೆ. ಇಡೀ ಐಪಿಎಲ್‌ನಲ್ಲೇ ಅತೀ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಯಶಸ್ವಿ ಜೈಸ್ವಾಲ್ ಹೆಸರಲ್ಲಿದೆ. 2023ರ ಆವೃತ್ತಿಯಲ್ಲಿ ಜೈಸ್ವಾಲ್ ಕೆಕೆಆರ್ ವಿರುದ್ಧ ಕೇವಲ 13 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು. 2018ರಲ್ಲಿ ಕೆ.ಎಲ್ ರಾಹುಲ್, 2022ರಲ್ಲಿ ಪ್ಯಾಟ್ ಕಮ್ಮಿನ್ಸ್ (ಅಂದು ಕೆಕೆಆರ್) ಮುಂಬೈ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಕ್ರಮವಾಗಿ 2, 3ನೇ ಸ್ಥಾನಗಳಲ್ಲಿದ್ದಾರೆ. ಇದನ್ನೂ ಓದಿ: ಸ್ಪಿನ್‌ ಮಾಂತ್ರಿಕ ಅಶ್ವಿನ್‌, ಒಲಿಂಪಿಕ್ಸ್‌ ಪದಕ ವಿಜೇತ ಶ್ರೀಜೇಶ್‌ಗೆ ಪದ್ಮ ಪ್ರಶಸ್ತಿ ಗೌರವ 

    ಈ ಆವೃತ್ತಿಯಲ್ಲಿ ವೇಗದ ಫಿಫ್ಟಿ ಬಾರಿಸಿದ ಆಟಗಾರರು
    ವೈಭವ್ (ರಾಜಸ್ಥಾನ್) – 50 ರನ್ – 17 ಎಸೆತ
    ಪೂರನ್ (ಎಲ್‌ಎಸ್‌ಜಿ) – 50 ರನ್, 18 ಎಸೆತ
    ಮಾರ್ಷ್ (ಎಲ್‌ಎಸ್‌ಜಿ) – 50 ರನ್, 21 ಎಸೆತ
    ಹೆಡ್ (ಎಸ್‌ಆರ್‌ಹೆಚ್) – 50 ರನ್, 21 ಎಸೆತ

  • ʻವೈಭವ’ ಶತಕ – ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಇತಿಹಾಸ ನಿರ್ಮಿಸಿದ 14ರ ಬಾಲಕ

    ʻವೈಭವ’ ಶತಕ – ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಇತಿಹಾಸ ನಿರ್ಮಿಸಿದ 14ರ ಬಾಲಕ

    – ಎಬಿಡಿ, ಹೆಡ್‌ ಮಿಲ್ಲರ್‌ರಂತಹ ದಿಗ್ಗಜರ ದಾಖಲೆಗಳು ಉಡೀಸ್‌

    ಜೈಪುರ: ಉದಯೋನ್ಮುಖ ಪ್ರತಿಭೆಗಳಿಗೆ ದೊಡ್ಡ ವೇದಿಕೆಯಾಗಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (IPL 2025) ಈ ಬಾರಿ ಹೊಸ ಯುವಕರ ಆರ್ಭಟವೇ ಜೋರಾಗಿದೆ. ಆದ್ರೆ 14 ವರ್ಷದ ಬಾಲಕ ತಾನು ಪ್ರವೇಶಿಸಿದ ಚೊಚ್ಚಲ ಐಪಿಎಲ್‌ ಆವತ್ತಿಯಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ಕ್ರಿಕೆಟ್‌ ದಿಗ್ಗಜರ ಹುಬ್ಬೇರಿಸುವಂತೆ ಮಾಡಿದ್ದಾನೆ.

    ಹೌದು. ಐಪಿಎಲ್‌ ಅಂದ್ರೆ ಸಿಕ್ಸರ್‌, ಬೌಂಡರಿಗಳ ಅಬ್ಬರ ಇದ್ದೇ ಇರುತ್ತೇ. ಕೆಲವೊಮ್ಮೆ ಬ್ಯಾಟರ್‌ಗಳು ಕಡಿಮೆ ಎಸೆತಗಳಲ್ಲಿ ಭಾರೀ ರನ್‌ ಗಳಿಸಿ ಪಂದ್ಯದ ಗತಿಯನ್ನೇ ಬದಲಿಸುತ್ತಾರೆ. ಅಂತಾರಾಷ್ಟ್ರೀಯ ಮಟ್ಟದ ದಿಗ್ಗಜರೇ ಹೆಚ್ಚಾಗಿರುವ ಈ ಅಖಾಡದಲ್ಲಿ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ (Vaibhav Suryavanshi) ಮಿಂಚುತ್ತಿದ್ದಾರೆ.

    ತನ್ನ ಚೊಚ್ಚಲ ಪಂದ್ಯದಲ್ಲೇ ಸಿಕ್ಸರ್‌ ಸಿಡಿಸುವ ಮೂಲಕ ಐಪಿಎಲ್‌ ವೃತ್ತಿ ಬದುಕು ಶುರು ಮಾಡಿದ ವೈಭವ್‌ ಸೂರ್ಯವಂಶಿ 3ನೇ ಪಂದ್ಯದಲ್ಲೇ ಸ್ಫೋಟಕ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಗುಜರಾತ್‌ ಟೈಟಾನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್‌ ಕೇವಲ 17 ಎಸೆತಗಳಲ್ಲಿ 6 ಸಿಕ್ಸರ್‌, 3 ಬೌಂಡರಿ ಬಾರಿಸುವ ಮೂಲಕ ಸ್ಫೋಟಕ ಅರ್ಧಶತಕ ಸಿಡಿಸಿದ್ದರು. ಮುಂದಿನ 18 ಎಸೆತಗಳಲ್ಲಿ ಫಿಫ್ಟಿ ಬಾರಿಸುವ ಮೂಲಕ ಶತಕ ಪೂರೈಸಿದ್ದಾರೆ. ಒಟ್ಟು ತಾನು ಎದುರಿಸಿದ 38 ಎಸೆತಗಳಲ್ಲಿ 101 ರನ್‌ (11 ಸಿಕ್ಸರ್, 7 ಬೌಂಡರಿ) ಸಿಡಿಸಿ ಔಟಾದರು.

    2ನೇ ಆಟಗಾರನೆಂಬ ದಾಖಲೆ:
    ಇಡೀ ಐಪಿಎಲ್‌ ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸಿದ ಖ್ಯಾತಿ ಕ್ರಿಸ್‌ ಗೇಲ್‌ ಅವರ ಹೆಸರಿನಲ್ಲಿದೆ. ಇದೀಗ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವೇಗದ ಶತಕ ಬಾರಿಸಿದ 2ನೇ ಆಟಗಾರ ಜೊತೆಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.‌ ಉಳಿದಂತೆ ಯೂಸೂಫ್‌ ಪಠಾಣ್‌ (37 ಎಸೆತ), ಡೇವಿಡ್‌ ಮಿಲ್ಲರ್‌ (38 ಎಸೆತ), ಟ್ರಾವಿಸ್‌ ಹೆಡ್‌ (39 ಎಸೆತ) ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಟಾಪ್‌-5 ಆಟಗಾರರಾಗಿದ್ದಾರೆ.

    ವೇಗದ ಫಿಫ್ಟಿ:
    ಇನ್ನೂ ವೈಭವ್‌ ಈ ಆವೃತ್ತಿಯಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಜೊತೆಗೆ ಅತೀ ಕಡಿಮೆ ವಯಸ್ಸಿಗೆ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾರೆ.

    ಇಡೀ ಐಪಿಎಲ್‌ನಲ್ಲೇ ಅತೀ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಯಶಸ್ವಿ ಜೈಸ್ವಾಲ್‌ ಹೆಸರಲ್ಲಿದೆ. 2023ರ ಆವೃತ್ತಿಯಲ್ಲಿ ಜೈಸ್ವಾಲ್‌ ಕೆಕೆಆರ್‌ ವಿರುದ್ಧ ಕೇವಲ 13 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು. 2018ರಲ್ಲಿ ಕೆ.ಎಲ್‌ ರಾಹುಲ್‌, 2022ರಲ್ಲಿ ಪ್ಯಾಟ್‌ ಕಮ್ಮಿನ್ಸ್‌ (ಅಂದು ಕೆಕೆಆರ್‌) ಮುಂಬೈ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಕ್ರಮವಾಗಿ 2, 3ನೇ ಸ್ಥಾನಗಳಲ್ಲಿದ್ದಾರೆ.

    ಈ ಆವೃತ್ತಿಯಲ್ಲಿ ವೇಗದ ಫಿಫ್ಟಿ ಬಾರಿಸಿದ ಆಟಗಾರರು
    ವೈಭವ್‌ (ರಾಜಸ್ಥಾನ್‌) – 50 ರನ್‌ – 17 ಎಸೆತ
    ಪೂರನ್‌ (ಎಲ್‌ಎಸ್‌ಜಿ) – 50 ರನ್‌, 18 ಎಸೆತ
    ಮಾರ್ಷ್‌ (ಎಲ್‌ಎಸ್‌ಜಿ) – 50 ರನ್‌, 21 ಎಸೆತ
    ಹೆಡ್‌ (ಎಸ್‌ಆರ್‌ಹೆಚ್‌) – 50 ರನ್‌, 21 ಎಸೆತ

  • ಬಟ್ಲರ್‌ ಬೆಂಕಿಯಾಟಕ್ಕೆ ಗುಜರಾತ್‌ನಲ್ಲಿ ಡೆಲ್ಲಿ ಬರ್ನ್‌!

    ಬಟ್ಲರ್‌ ಬೆಂಕಿಯಾಟಕ್ಕೆ ಗುಜರಾತ್‌ನಲ್ಲಿ ಡೆಲ್ಲಿ ಬರ್ನ್‌!

    ಅಹಮದಾಬಾದ್‌: ಜೋಸ್‌ ಬಟ್ಲರ್‌ (Jos Buttler) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಗುಜರಾತ್‌ ಟೈಟಾನ್ಸ್‌ (Gujarat Titans) ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 7 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 8 ವಿಕೆಟ್‌ ನಷ್ಟಕ್ಕೆ 203 ರನ್‌ ಹೊಡೆಯಿತು. ಕಠಿಣ ಮೊತ್ತವಾದರೂ ಇನ್ನೂ 4 ಎಸೆತ ಬಾಕಿ ಇರುವಂತೆ ಗುಜರಾತ್‌ 3 ವಿಕೆಟ್‌ ಕಳೆದುಕೊಂಡು 204 ರನ್‌ ಹೊಡೆದು ಜಯಗಳಿಸಿತು.

    ನಾಯಕ ಶುಭಮನ್‌ ಗಿಲ್‌ 7 ರನ್‌ ಗಳಿಸಿ ಔಟಾದಾಗ ಗುಜರಾತ್‌ಗೆ ಆರಂಭದಲ್ಲೇ ಹಿನ್ನಡೆಯಾಗಿತ್ತು. ಎರಡನೇ ವಿಕೆಟಿಗೆ ಸಾಯಿ ಸುದರ್ಶನ್‌ ಮತ್ತು ಬಟ್ಲರ್‌ 35 ಎಸೆತಗಳಲ್ಲಿ 60 ರನ್‌ ಹೊಡೆಯುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಸಾಯಿ ಸುದರ್ಶನ್‌ 36 ರನ್‌ (21 ಎಸೆತ, 5 ಬೌಂಡರಿ, 1 ಸಿಕ್ಸ್‌ )ಸಿಡಿಸಿ ಔಟಾದರು.

    ಮೂರನೇ ವಿಕೆಟಿಗೆ ಬಟ್ಲರ್‌ ಮತ್ತು ರುದರ್‌ರ್ಫೋರ್ಡ್‌ 69 ಎಸೆತಗಳಲ್ಲಿ 119 ರನ್‌ ಚಚ್ಚುವಾಗಲೇ ಗುಜರಾತ್‌ ಗೆಲುವು ಖಚಿತವಾಯಿತು.

    ಕೊನೆಯಲ್ಲಿ ಸಿಕ್ಸ್‌ ಸಿಡಿಸಲು ಹೋಗಿ ರುದರ್‌ಫೋರ್ಡ್‌ 43 ರನ್‌(34 ಎಸೆತ, 1 ಬೌಂಡರಿ, 3 ಸಿಕ್ಸ್‌) ಹೊಡೆದು ಔಟಾದರು. ನಂತರ ಬಂದ ತವಾಟಿಯಾ ಔಟಾಗದೇ 11 ರನ್‌ (3 ಎಸೆತ, 1 ಬೌಂಡರಿ, 1 ಸಿಕ್ಸ್‌) ಸಿಡಿಸಿ ಜಯವನ್ನು ತಂದುಕೊಟ್ಟರು. ಬಟ್ಲರ್‌ಗೆ ಶತಕ ಕೈ ತಪ್ಪಿದರೂ ಅಜೇಯ 97 ರನ್‌(54 ಎಸೆತ, 11 ಬೌಂಡರಿ, 4 ಸಿಕ್ಸ್‌) ಹೊಡೆಯುವ ಮೂಲಕ ತಂಡದ ಜಯದಲ್ಲಿ ಪ್ರದಾನ ಪಾತ್ರ ವಹಿಸಿದರು.


    ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಪರ ನಾಯಕ ಅಕ್ಷರ್‌ ಪಟೇಲ್‌ 39 ರನ್‌ (22 ಎಸೆತ, 1 ಬೌಂಡರಿ, 2 ಸಿಕ್ಸ್‌), ಅಶುತೋಶ್‌ ಶರ್ಮಾ 37 ರನ್‌ (19 ಎಸೆತ, 2 ಬೌಂಡರಿ, 3 ಸಿಕ್ಸ್)‌ ಕೆಎಲ್‌ ರಾಹುಲ್‌ 28 ರನ್‌(14 ಎಸೆತ, 4 ಬೌಂಡರಿ, 1 ಸಿಕ್ಸ್‌) ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಗುಜರಾತ್‌ ಪರ ಪ್ರಸಿದ್ಧ್‌ ಕೃಷ್ಣ 4 ವಿಕೆಟ್‌ ಕಿತ್ತರು.

  • 105 ಮೀಟರ್‌ ಭರ್ಜರಿ ಸಿಕ್ಸರ್‌ – ಈ ಐಪಿಎಲ್‌ನಲ್ಲಿ ಫಿಲ್‌ ಸಾಲ್ಟ್‌ ವಿಶೇಷ ಸಾಧನೆ

    105 ಮೀಟರ್‌ ಭರ್ಜರಿ ಸಿಕ್ಸರ್‌ – ಈ ಐಪಿಎಲ್‌ನಲ್ಲಿ ಫಿಲ್‌ ಸಾಲ್ಟ್‌ ವಿಶೇಷ ಸಾಧನೆ

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಫೋಟಕ ಬ್ಯಾಟರ್‌ ಫಿಲ್‌ ಸಾಲ್ಟ್‌ (Phil Salt) 105 ಮೀಟರ್‌ ಸಿಕ್ಸರ್‌ ಸಿಡಿಸುವ ಮೂಲಕ ಈ ಆವೃತ್ತಿಯ ಐಪಿಎಲ್‌ನಲ್ಲಿ (IPL 2025) ವಿಶೇಷ ಸಾಧನೆ ಮಾಡಿದ್ದಾರೆ.

    ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 169 ರನ್‌ ಗಳಿಸಿ, ಎದುರಾಳಿಗೆ 170 ರನ್‌ಗಳ ಗುರಿ ನೀಡಿದೆ. ಒಂದೆಡೆ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ ಮತ್ತೊಂದೆಡೆ ರನ್‌ ಕಲೆಹಾಕುತ್ತಾ ಸಾಗಿದ್ದ ಆರ್‌ಸಿಬಿ ಪರ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ ಸ್ಫೋಟಕ ಪ್ರದರ್ಶನಕ್ಕಿಳಿದಿದ್ದರು. ಇದನ್ನೂ ಓದಿ: ಮೈದಾನದಲ್ಲೇ ಧೀಮಾಕು ತೋರಿಸಿದ ದಿಗ್ವೇಶ್ ರಥಿಗೆ ಬಿತ್ತು ಭಾರೀ ದಂಡ

    ಪವರ್‌ ಪ್ಲೇನ 5ನೇ ಓವರ್‌ನಲ್ಲಿ ಮೊಹಮ್ಮದ್‌ ಸಿರಾಜ್‌ (Mohammed Siraj) ಬೌಲಿಂಗ್‌ಗೆ ಬಂದಾಗ ಸ್ಫೋಟಕವಾಗಿ ಅಬ್ಬರಿಸುತ್ತಿದ್ದ ಸಾಲ್ಟ್‌ 3ನೇ ಎಸೆತದಲ್ಲೇ ಭರ್ಜರಿ 105 ಮೀಟರ್‌ ಸಿಕ್ಸರ್‌ ಬಾರಿಸಿದ್ರು. ಈ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಅತಿದೊಡ್ಡ ಸಿಕ್ಸರ್‌ ಸಿಡಿಸಿದ 2ನೇ ಆಟಗಾರ ಎಂಬ ವಿಶೇಷ ಸಾಧನೆಗೂ ಪಾತ್ರರಾದರು. ಇದಕ್ಕೆ ಪ್ರಯುತ್ತರವಾಗಿ ಮರು ಎಸೆತದಲ್ಲೇ ವಿಕೆಟ್‌ಕಿತ್ತು ಸಾಲ್ಟ್‌ಗೆ ಸಿರಾಜ್‌ ಪೆವಿಲಿಯನ್‌ ಹಾದಿ ತೋರಿಸಿದ್ರು. ಇದನ್ನೂ ಓದಿ: ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂಂ ಅಂತೀಯಾ: ಕನ್ನಡದಲ್ಲಿ ಸೊಗಸಾಗಿ ಹಾಡಿದ ಪಡಿಕ್ಕಲ್‌

    ಈ ಆವೃತ್ತಿಯಲ್ಲಿ ಅತಿದೊಡ್ಡ ಸಿಕ್ಸರ್‌ ಸಿಡಿಸಿದ ಟಾಪ್‌-5 ಬ್ಯಾಟರ್ಸ್‌

    * ಟ್ರಾವಿಸ್‌ ಹೆಡ್‌ – ಎಸ್‌ಆರ್‌ಹೆಚ್‌ – 105 ಮೀಟರ್‌
    * ಫಿಲ್‌ ಸಾಲ್ಟ್‌ – ಆರ್‌ಸಿಬಿ – 105 ಮೀಟರ್‌
    * ಅನಿಕೇತ್‌ ವರ್ಮಾ – ಎಸ್‌ಆರ್‌ಹೆಚ್‌ – 102 ಮೀಟರ್‌
    * ಟ್ರಿಸ್ಟನ್‌ ಸ್ಟಬ್ಸ್‌ – ಡೆಲ್ಲಿ – 98 ಮೀಟರ್‌
    * ನಿಕೋಲಸ್‌ ಪೂರನ್‌ – ಲಕ್ನೋ – 97 ಮೀಟರ್‌

  • ತವರಲ್ಲಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡುತ್ತಾ ಆರ್‌ಸಿಬಿ?

    ತವರಲ್ಲಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡುತ್ತಾ ಆರ್‌ಸಿಬಿ?

    – ಬೆಂಗಳೂರಲ್ಲಿ ಗುಜರಾತ್‌ ವಿರುದ್ಧ ಇಂದು ಆರ್‌ಸಿಬಿ ಸೆಣಸಾಟ

    ಬೆಂಗಳೂರು: ಐಪಿಎಲ್‌ 2025ರ ಟೂರ್ನಿಯಲ್ಲಿ ತವರಿನಾಚೆ ಆಡಿತ ಎರಡೂ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ಆರ್‌ಸಿಬಿ ಇಂದು ತವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡಲಿದೆ.

    ಬುಧವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸಜ್ಜಾಗಿದೆ. ಹ್ಯಾಟ್ರಿಕ್‌ ಗೆಲುವಿನ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ತವಕದಲ್ಲಿ ಆರ್‌ಸಿಬಿ ಇದೆ.

    ಟೂರ್ನಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿತ್ತು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಿರುವ ರಜತ್‌ ಪಾಟೀದಾರ್‌ ಪಡೆ ಕೆಕೆಆರ್‌ ವಿರುದ್ಧ ಗೆದ್ದು ಬೀಗಿತ್ತು. ತವರಲ್ಲೇ ಕೆಕೆಆರ್‌ಗೆ ಪಾದಾರ್ಪಣೆ ಪಂದ್ಯದಲ್ಲಿ ಮುಖಭಂಗವಾಯಿತು.

    ಇನ್ನು ಚೆಪಾಕ್‌ನಲ್ಲಿ ನಡೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್‌ ಪಾಟೀದಾರ್‌ ಜವಾಬ್ದಾರಿಯುತ ಆಡವಾಡಿದ್ದರು. ಬೌಲಿಂಗ್‌ನಲ್ಲಿ ಜೋಶ್‌ ಹ್ಯಾಜಲ್‌ವುಡ್‌ ಮಿಂಚಿದ್ದರು. ಇದರಿಂದ ಚೆನ್ನೈ ವಿರುದ್ಧ ಆರ್‌ಸಿಬಿ 17 ವರ್ಷಗಳ ಬಳಿಕ ಐತಿಹಾಸಿಕ ಗೆಲುವು ದಾಖಲಿಸಿತು. ಫಿಲ್‌ ಸಾಲ್ಟ್‌, ಕೊಹ್ಲಿ, ಡೇವಿಡ್‌, ಪಡಿಕ್ಕಲ್ ಬ್ಯಾಟಿಂಗ್‌ ಫಾರ್ಮ್‌ನಲ್ಲಿದ್ದಾರೆ. ಕೃನಾಲ್‌, ಭುವನೇಶ್ವರ್‌, ಹ್ಯಾಜಲ್‌ವುಡ್‌ ಬೌಲಿಂಗ್‌ನಲ್ಲಿ ಭರವಸೆ ಮೂಡಿಸಿದ್ದಾರೆ.

    ಗುಜರಾತ್‌ ತಂಡಕ್ಕೆ ಪ್ರಮುಖ ಆಟಗಾರರೇ ಬಲ. ಶುಭಮನ್‌ ಗಿಲ್‌, ಜೋಸ್‌ ಬಟ್ಲರ್‌, ರಶೀದ್‌ ಖಾನ್‌ ತಂಡದಲ್ಲಿ ನಿರ್ಣಾಯಕ ಪಾತ್ರ. ಆರ್‌ಸಿಬಿಯಿಂದ ಗುಜರಾತ್‌ಗೆ ಬಂದಿರುವ ಮೊಹಮ್ಮದ್‌ ಸಿರಾಜ್‌ ಕೂಡ ತಂಡದ ಬೌಲಿಂಗ್‌ ಅಸ್ತ್ರವಾಗಿದ್ದಾರೆ.

    ಐಪಿಲ್‌ ಟೂರ್ನಿಯಲ್ಲಿ ಇದುವರೆಗೆ ಆರ್‌ಸಿಬಿ ಮತ್ತು ಗುಜರಾತ್‌ ಒಟ್ಟು 5 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅವುಗಳ ಪೈಕಿ ಆರ್‌ಸಿಬಿ 3ರಲ್ಲಿ ಹಾಗೂ ಗುಜರಾತ್‌ 2 ಪಂದ್ಯಗಳಲ್ಲಿ ಜಯ ಗಳಿಸಿವೆ.

    ಆರ್‌ಸಿಬಿ ಆಟಗಾರರು: ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ದೇವದತ್‌ ಪಡಿಕ್ಕಲ್‌, ರಜತ್‌ ಪಾಟೀದಾರ್‌ (ನಾಯಕ), ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಿತೇಶ್‌ ಕುಮಾರ್‌, ಟಿಮ್‌ ಡೇವಿಡ್‌, ಕೃನಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಜೋಶ್‌ ಹ್ಯಾಜಲ್‌ವುಡ್‌, ಯಶ್‌ ದಯಾಳ್‌, ಸುಯಶ್‌/ರಸಿತ್‌.

    ಗುಜರಾತ್‌ ಆಟಗಾರರು: ಸಾಯಿ ಸುದರ್ಶನ್‌, ಅನುಜ್‌, ಶುಭಮನ್‌ ಗಿಲ್‌ (ನಾಯಕ), ಜೋಸ್‌ ಬಟ್ಲರ್‌, ರುಥರ್‌ಪೋರ್ಡ್‌, ಶಾರುಖ್‌, ತೆವಾಟಿಯಾ, ರಶೀದ್‌ ಖಾನ್‌, ರಬಾಡ, ಸಾಯಿ ಕಿಶೋರ್‌, ಮೊಹಮ್ಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ, ಇಶಾಂತ್‌ ಶರ್ಮಾ.

  • IPL Retention | ಮಿಲ್ಲರ್‌, ಶಮಿ ಸೇರಿ ಟಾಪ್‌ ಆಟಗಾರರು ಔಟ್‌ – ರಶೀದ್‌ಗಿಂತ ಕಡಿಮೆ ಸಂಭಾವನೆ ಪಡೆದ ಗಿಲ್‌

    IPL Retention | ಮಿಲ್ಲರ್‌, ಶಮಿ ಸೇರಿ ಟಾಪ್‌ ಆಟಗಾರರು ಔಟ್‌ – ರಶೀದ್‌ಗಿಂತ ಕಡಿಮೆ ಸಂಭಾವನೆ ಪಡೆದ ಗಿಲ್‌

    ಮುಂಬೈ: ತನ್ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿ, ನಂತರದ ಸೀಸನ್​ನಲ್ಲೂ ಫೈನಲ್​ಗೇರಿದ್ದ ಗುಜರಾತ್ ಟೈಟಾನ್ಸ್ (Gujarat Titans) ಫ್ರಾಂಚೈಸಿಯು ರಶೀದ್‌ ಖಾನ್‌, ನಾಯಕ ಶುಭಮನ್‌ ಗಿಲ್‌ (Shubman Gill) ಸೇರಿ ಐವರು ಪ್ರಮುಖ ಆಟಗಾರರನ್ನ ತಂಡದಲ್ಲೇ ಉಳಿಸಿಕೊಂಡಿದೆ.

    ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಗುಜರಾತ್‌ ಟೈಟಾನ್ಸ್‌ ತಂಡ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿತ್ತು. ಹೀಗಾಗಿ ಮುಂದಿನ ಆವೃತ್ತಿಗೆ ಬಲಿಷ್ಠ ತಂಡ ಕಟ್ಟಲು ಸಿದ್ದವಾಗಿರುವ ಗುಜರಾತ್, ಮೆಗಾ ಹರಾಜಿಗೂ ಮುನ್ನ ಐವರು ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿದೆ.

    ಅವರಲ್ಲಿ ನಾಯಕ ಶುಭ್​ಮನ್ ಗಿಲ್, ರಶೀದ್ ಖಾನ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಶಾರುಖ್ ಖಾನ್ ಸೇರಿದರೆ, ಉಳಿದಂತೆ ಅನುಭವಿ ಆಟಗಾರರಾದ ಮೊಹಮ್ಮದ್ ಶಮಿ, ಡೇವಿಡ್ ಮಿಲ್ಲರ್, ಉಮೇಶ್ ಯಾದವ್, ಕೇನ್ ವಿಲಿಯಮ್ಸನ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.

    ಗಿಲ್‌ಗಿಂತಲೂ ರಶೀದ್‌ ದುಬಾರಿ!
    * ರಶೀದ್‌ ಖಾನ್‌ – 18 ಕೋಟಿ ರೂ.
    * ಶುಭಮನ್‌ ಗಿಲ್‌ – 16.5 ಕೋಟಿ ರೂ.
    * ಸಾಯಿ ಸುದರ್ಶನ್‌ – 8.5 ಕೋಟಿ ರೂ.
    * ರಾಹುಲ್‌ ತೆವಾಟಿಯ – 4 ಕೋಟಿ ರೂ.
    * ಶಾರೂಖ್‌ ಖಾನ್‌ – 4 ಕೋಟಿ ರೂ.

    2025 ರಿಂದ 2027ರ ಐಪಿಎಲ್‌ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ.

  • IPL 2024: ಮಳೆಗೆ ಪಂದ್ಯ ಬಲಿ – ಸನ್‌ ರೈಸರ್ಸ್‌ ಪ್ಲೇ ಆಫ್‌ಗೆ, ಟೈಟಾನ್ಸ್‌ ಮನೆಗೆ

    IPL 2024: ಮಳೆಗೆ ಪಂದ್ಯ ಬಲಿ – ಸನ್‌ ರೈಸರ್ಸ್‌ ಪ್ಲೇ ಆಫ್‌ಗೆ, ಟೈಟಾನ್ಸ್‌ ಮನೆಗೆ

    – ಶನಿವಾರ ಸಿಎಸ್‌ಕೆ-ಆರ್‌ಸಿಬಿ ನಡುವೆ ನಿರ್ಣಾಯಕ ಕದನ

    ಹೈದರಾಬಾದ್‌: ಇಲ್ಲಿನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಗುಜರಾತ್‌ ಟೈಟಾನ್ಸ್‌ ಮತ್ತು ಸನ್‌ ರೈಸರ್ಸ್‌ ಹೈದರಾಬಾದ್‌ (GT vs SRH) ನಡುವಿನ ಪಂದ್ಯವು ಮಳೆಯಿಂದ ರದ್ದಾಗಿದೆ. ಪಂದ್ಯ ರದ್ದಾದ ಹಿನ್ನೆಲೆ ಉಭಯ ತಂಡಗಳು ತಲಾ ಒಂದೊಂದು ಅಂಕ ಪಡೆದುಕೊಂಡಿವೆ. ಇದರೊಂದಿಗೆ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡವು ಪ್ಲೇ ಆಫ್‌ಗೆ ಅಧಿಕೃತವಾಗಿ ಪ್ರವೇಶ ಗಿಟ್ಟಿಸಿಕೊಂಡಿದೆ.

    ಈಗಾಗಲೇ ಕೋಲ್ಕತ್ತಾ ನೈಟ್‌ರೈಡರ್ಸ್‌, ರಾಜಸ್ಥಾನ್‌ ರಾಯಲ್ಸ್‌ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದ್ದು, ಸನ್‌ ರೈಸರ್ಸ್‌ ಹೈದರಾಬಾದ್‌ 2024ರ ಆವೃತ್ತಿಯಲ್ಲಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ 3ನೇ ತಂಡವಾಗಿದೆ. ಇನ್ನೊಂದು ತಂಡಕ್ಕೆ ಪ್ಲೇ ಆಫ್‌ ಪ್ರವೇಶಿಸುವ ಅವಕಾಶವಿದೆ. ಶನಿವಾರ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿ (CSK vs RCB) ಉತ್ತಮ ರನ್‌ರೇಟ್‌ನೊಂದಿಗೆ ಗೆದ್ದರೆ ಪ್ಲೇ ಆಫ್‌ಗೆ (IPL Playoffs) ಎಂಟ್ರಿ ಕೊಡಲಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಚೆನ್ನೈ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ.

    ಗಂಟು-ಮೂಟೆ ಕಟ್ಟಿದ ಟೈಟಾನ್ಸ್:‌
    2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಗುಜರಾತ್‌ ಟೈಟಾನ್ಸ್‌ ತನ್ನ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಮುಡಿಗೇರಿಸಿಕೊಂಡಿತ್ತು. 2ನೇ ಆವೃತ್ತಿಯಲ್ಲಿ ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಆದ್ರೆ 2024ರ ಆವೃತ್ತಿಯಲ್ಲಿ 12ರಲ್ಲಿ 5 ಪಂದ್ಯಗೆದ್ದು ಪ್ಲೇ ಆಫ್‌ ಕನಸು ಕಂಡಿದ್ದ ಗುಜರಾತ್‌ ತಂಡಕ್ಕೆ ಮಳೆ ತಣ್ಣೀರು ಎರಚಿತು. ತನ್ನ ಪಾಲಿನ ಕೊನೆಯ ಎರಡೂ ಪಂದ್ಯಗಳೂ ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ಒಂದೊಂದು ಅಂಕ ಪಡೆದುಕೊಂಡು ಲೀಗ್‌ ಸುತ್ತಿನಲ್ಲೇ ತನ್ನ ಆಟ ಮುಗಿಸಿತು.

    ಸನ್‌ಗೆ ಮಳೆ ತಂದ ವರ:
    12 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ 13ನೇ ಪಂದ್ಯ ರದ್ದಾದರೂ ಒಂದು ಅಂಕ ಪಡೆದು ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಒಟ್ಟು 13 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಸಾಧಿಸಿರುವ ಹೈದರಾಬಾದ್‌ 15 ಅಂಕಗಳೊಂದಿಗೆ ಪ್ಲೇ ಆಫ್‌ ಪ್ರವೇಶಿಸಿದೆ.

  • ಮಳೆಗೆ ಪಂದ್ಯ ಬಲಿ – ಪ್ಲೇ ಆಫ್‌ ರೇಸ್‌ನಿಂದ ಗುಜರಾತ್‌ ಔಟ್‌

    ಮಳೆಗೆ ಪಂದ್ಯ ಬಲಿ – ಪ್ಲೇ ಆಫ್‌ ರೇಸ್‌ನಿಂದ ಗುಜರಾತ್‌ ಔಟ್‌

    ಅಹಮದಾಬಾದ್‌: ಗುಜರಾತ್‌ ಟೈಟಾನ್ಸ್‌ (Gujarat Titans) ಐಪಿಎಲ್‌ ಪ್ಲೇ ಆಫ್‌ ರೇಸ್‌ನಿಂದ ಹೊರ ಬಿದ್ದಿದೆ. ಗುಜರಾತ್‌ ಮತ್ತು ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧದ ಪಂದ್ಯ ಭಾರೀ ಮಳೆಯಿಂದ ರದ್ದಾಗಿದೆ.

    ಪ್ಲೇ ಆಫ್‌ಗೆ ಹೋಗಲು ಇಂದಿನ ಪಂದ್ಯವನ್ನು ಗುಜರಾತ್‌ಗೆ ಗೆಲ್ಲಲೇ ಬೇಕಿತ್ತು. ಆದರೆ ಭಾರೀ ಮಳೆಯಿಂದ (Rain) ಒಂದು ಎಸೆತ ಕಾಣದೇ ಪಂದ್ಯ ರದ್ದಾದ ಪರಿಣಾಮ ಗುಜರಾತ್‌ ಕನಸು ಭಗ್ನಗೊಂಡಿದೆ.

    ಪಂದ್ಯ ರದ್ದಾದ ಪರಿಣಾಮ ಕೋಲ್ಕತ್ತಾ ಮತ್ತು ಗುಜರಾತ್‌ಗೆ ತಲಾ ಒಂದೊಂದು ಅಂಕವನ್ನು ಹಂಚಲಾಗಿದೆ. ಈಗಾಲೇ ಪ್ಲೇ ಆಫ್‌ ಪ್ರವೇಶಿಸಿರುವ ಕೋಲ್ಕತ್ತಾಗೆ ಒಟ್ಟು 19 ಅಂಕ ಸಂಪಾದಿಸಿದರೆ ಗುಜರಾತ್‌ 12 ಪಂದ್ಯಗಳಿಂದ ಒಟ್ಟು 11 ಅಂಕ ಸಂಪಾದಿಸಿದೆ.

     ಚೆನ್ನೈ ಮತ್ತು ಹೈದರಾಬಾದ್‌ ತಲಾ 14 ಅಂಕ ಗಳಿಸಿ ಪ್ಲೇ ಆಫ್‌ ರೇಸ್‌ನಲ್ಲಿದೆ. ಈ ಒಂದು ವೇಳೆ ಈ ಪಂದ್ಯವನ್ನು ಉತ್ತಮ ರನ್‌ ರೇಟ್‌ನೊಂದಿಗೆ ಗೆದ್ದಿದ್ದರೆ ಗುಜರಾತ್‌ಗೆ ಪ್ಲೇ ಆಫ್‌ ಪ್ರವೇಶಿಸುವ ಸಾಧ್ಯತೆ ಇತ್ತು. ಆದರೆ ಈ ಪಂದ್ಯದ ರದ್ದಾದ ಪರಿಣಾಮ 2022 ಚಾಂಪಿಯನ್‌, 2023ರ ದ್ವಿತೀಯ ಸ್ಥಾನಿ ಗುಜರಾತ್‌ ಐಪಿಎಲ್‌ ಪ್ಲೇ ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ.