Tag: ಗುಜರಾತ್ ಜೈಂಟ್ಸ್

  • ಗುಜರಾತ್‌ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ –  ಶನಿವಾರ ಡೆಲ್ಲಿ ವಿರುದ್ಧ ಫೈನಲ್‌

    ಗುಜರಾತ್‌ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ – ಶನಿವಾರ ಡೆಲ್ಲಿ ವಿರುದ್ಧ ಫೈನಲ್‌

    ಮುಂಬೈ: ಹೇಲಿ ಮ್ಯಾಥ್ಯೂಸ್ (Hayley Matthews) ಆಲ್‌ರೌಂಡರ್‌ ಆಟದಿಂದಾಗಿ ಎಲಿಮಿನೆಟರ್‌ (Eliminator) ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ (Gujarat Giants) ವಿರುದ್ಧ 47 ರನ್‌ಗಳ ಭರ್ಜರಿ ಜಯ ಸಾಧಿಸಿದ ಮುಂಬೈ (Mumbai Indians) ಡಬ್ಲ್ಯೂಪಿಎಲ್‌ ಫೈನಲ್‌ ಪ್ರವೇಶಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ 4 ವಿಕೆಟ್‌ ನಷ್ಟಕ್ಕೆ 213 ರನ್‌ ಹೊಡೆಯಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 19.2 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟ್‌ ಆಯ್ತು.

    ಈ ಗೆಲುವಿನೊಂದಿಗೆ ಮುಂಬೈ ಎರಡನೇ ಬಾರಿ ಫೈನಲ್‌ ಪ್ರವೇಶಿಸಿದಂತಾಯಿತು. 2023 ರಲ್ಲಿ ನಡೆದ ಮೊದಲ ಆವೃತ್ತಿ ಮುಂಬೈ ಡೆಲ್ಲಿಯನ್ನು ಸೋಲಿಸಿ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಶನಿವಾರ ಫೈನಲ್‌ನಲ್ಲಿ ಅದೇ ಡೆಲ್ಲಿ ವಿರುದ್ಧ ಸೆಣಸಾಡಲಿದೆ.

    ಗುಜರಾತ್‌ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತ್ತು. 43 ರನ್‌ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. ಹೇಲಿ ಮ್ಯಾಥ್ಯೂಸ್ 3 ವಿಕೆಟ್‌, ಅಮೆಲಿಯಾ ಕೆರ್ 2 ವಿಕೆಟ್‌ ಪಡೆದರು.

    ಮುಂಬೈ ಪರ ಯಸ್ತಿಕಾ ಭಾಟಿಯಾ 15 ರನ್‌ ಗಳಿಸಿ ಔಟಾದರೂ ಎರಡನೇ ವಿಕೆಟಿಗೆ ಹೇಲಿ ಮ್ಯಾಥ್ಯೂಸ್ ಮತ್ತು ನ್ಯಾಟ್ ಸಿವರ್-ಬ್ರಂಟ್ 71 ಎಸೆತಗಳಲ್ಲಿ 133 ರನ್‌ ಜೊತೆಯಾಟವಾಡಿದರು.

    ಹೇಲಿ ಮ್ಯಾಥ್ಯೂಸ್ 77 ರನ್‌(50 ಎಸೆತ, 10 ಬೌಂಡರಿ, 3 ಸಿಕ್ಸರ್‌) ಹೊಡೆದರೆ ನ್ಯಾಟ್ ಸಿವರ್-ಬ್ರಂಟ್ 77 ರನ್‌( 41 ಎಸೆತ, 10 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು. ಕೊನೆಯಲ್ಲಿ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) 36 ರನ್‌( 12 ಎಸೆತ, 2 ಬೌಂಡರಿ, 4 ಸಿಕ್ಸರ್‌) ಸಿಡಿಸಿದ ಪರಿಣಾಮ ಮುಂಬೈ ತಂಡ 200 ರನ್‌ಗಳ ಗಡಿಯನ್ನು ದಾಟಿತ್ತು.

     

  • ಬೆತ್ ಮೂನಿ ಸ್ಫೋಟಕ ಬ್ಯಾಟಿಂಗ್‌ – ಯುಪಿ ವಿರುದ್ಧ ಗುಜರಾತ್‌ಗೆ 81 ರನ್‌ಗಳ ಭರ್ಜರಿ ಜಯ

    ಬೆತ್ ಮೂನಿ ಸ್ಫೋಟಕ ಬ್ಯಾಟಿಂಗ್‌ – ಯುಪಿ ವಿರುದ್ಧ ಗುಜರಾತ್‌ಗೆ 81 ರನ್‌ಗಳ ಭರ್ಜರಿ ಜಯ

    ಲಕ್ನೋ: ಬೆತ್ ಮೂನಿ (Beth Mooney) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಗುಜರಾತ್‌ ಜೈಂಟ್ಸ್‌ (Gujarat Giants) ಯುಪಿ ವಾರಿಯರ್ಸ್‌(UP Warriorz) ವಿರುದ್ಧ 81 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 5 ವಿಕೆಟ್‌ ನಷ್ಟಕ್ಕೆ 186 ರನ್‌ ಹೊಡೆಯಿತು. ಕಠಿಣ ಗುರಿಯನ್ನು ಪಡೆದ ಯುಪಿ ವಾರಿಯರ್ಸ್‌ 17.1 ಓವರ್‌ಗಳಲ್ಲಿ 105 ರನ್‌ ಗಳಿಸಿ ಆಲೌಟ್‌ ಆಯ್ತು.

    ಯುಪಿ ಪರ ಆರಂಭಿಕ ಆಟಗಾರ್ತಿ ಗ್ರೇಸ್‌ ಹ್ಯಾರಿಸ್‌ 25 ರನ್‌(30 ಎಸೆತ, 3 ಬೌಂಡರಿ) ಹೊಡೆದರೆ ಚಿನೆಲ್ಲೆ ಹೆನ್ರಿ 28 ರನ್‌( 14 ಎಸೆತ, 3 ಬೌಂಡರಿ, 2 ಸಿಕ್ಸ್‌) ಸಿಡಿಸಿ ಔಟಾದರು.

    ಗುಜರಾತ್‌ ಪರ ಕಾಶ್ವೀ ಗೌತಮ್ ಮತ್ತು ತನುಜಾ ಕನ್ವರ್ ತಲಾ 3 ವಿಕೆಟ್‌ ಪಡೆದರೆ ಡಿಯಾಂಡ್ರಾ ಡಾಟಿನ್ 2, ಮೇಘನಾ ಸಿಂಗ್‌ ಮತ್ತು ಆಶ್ಲೀ ಗಾರ್ಡ್ನರ್ ತಲಾ ಒಂದೊಂದು ವಿಕೆಟ್‌ ಪಡೆದರು.

    ಗುಜರಾತ್‌ ಪರ ಆರಂಭಿಕ ಆಟಗಾರ್ತಿ ದಯಾಲನ್ ಹೇಮಲತಾ 3 ಎಸೆತಗಳಿಗೆ 2 ರನ್ ಗಳಿಸಿ ಮೊದಲ ವಿಕೆಟ್ ಒಪ್ಪಿಸಿದರು. ಬಳಿಕ ಎರಡನೇ ವಿಕೆಟಿಗೆ ಬೆತ್ ಮೂನಿ ಹಾಗೂ ಹರ್ಲೀನ್ ಡಿಯೋಲ್ 68 ಎಸೆತಗಳಿಗೆ 101 ರನ್ ಜೊತೆಯಾಟವಾಡಿದರು. ಇದನ್ನೂ ಓದಿ: ರೋಹಿತ್‌ ಶರ್ಮಾ ದಪ್ಪಗಿದ್ದಾರೆ – ಕಾಂಗ್ರೆಸ್‌ ವಕ್ತಾರೆ ಪೋಸ್ಟ್, ವಿವಾದದ ಬೆನ್ನಲ್ಲೇ ಪಕ್ಷದಿಂದ ಛೀಮಾರಿ

    ಬೆತ್ ಮೂನಿ ಅಜೇಯ 96 ರನ್ (59 ಎಸೆತ, 17 ಬೌಂಡರಿ) ಹೊಡೆದರೆ ಹರ್ಲೀನ್ ಡಿಯೋಲ್ 45 ರನ್(32 ಎಸೆತ, 6 ಬೌಂಡರಿ) ಹೊಡೆದ ಪರಿಣಾಮ ತಂಡ 180 ರನ್‌ಗಳ ಗಡಿಯನ್ನು ದಾಟಿತ್ತು.

     

  • ಬೆಂಗಳೂರಿನಲ್ಲಿ ಹ್ಯಾಟ್ರಿಕ್‌ ಸೋಲು – ಆರ್‌ಸಿಬಿ ವಿರುದ್ಧ ಗುಜರಾತ್‌ಗೆ ಸುಲಭ ಜಯ

    ಬೆಂಗಳೂರಿನಲ್ಲಿ ಹ್ಯಾಟ್ರಿಕ್‌ ಸೋಲು – ಆರ್‌ಸಿಬಿ ವಿರುದ್ಧ ಗುಜರಾತ್‌ಗೆ ಸುಲಭ ಜಯ

    ಬೆಂಗಳೂರು: ತವರು ನೆಲದಲ್ಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ (RCB) ಹ್ಯಾಟ್ರಿಕ್‌ ಸೋಲಾಗಿದೆ. ನಾಯಕಿ ಆಶ್ಲೇ ಗಾರ್ಡ್ನರ್ (Ashleigh Gardner) ಸ್ಫೋಟಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ ವಿರುದ್ಧ ಗುಜರಾತ್‌ ಜೈಂಟ್ಸ್‌ (Gujarat Giants) 6 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 7 ವಿಕೆಟ್‌ ನಷ್ಟಕ್ಕೆ 125 ರನ್ ‌ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 16.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 126 ರನ್‌ ಹೊಡೆದು ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು. ಹ್ಯಾಟ್ರಿಕ್‌ ಸೋಲು ಕಂಡರೂ ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲೇ ಮುಂದುವರಿದಿದೆ.

    32 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದ್ದರೂ ಗಾರ್ಡ್ನರ್ 58 ರನ್‌ (31 ಎಸೆತ, 6 ಬೌಂಡರಿ, 3 ಸಿಕ್ಸ್‌) ಸಿಡಿಸಿದರೆ ಫೋಬೆ ಲಿಚ್‌ಫೀಲ್ಡ್ ಔಟಾಗದೇ 30 ರನ್‌ (21 ಎಸೆತ, 3 ಬೌಂಡರಿ, 1 ಸಿಕ್ಸ್‌) ಹೊಡೆದರು. ಆರ್‌ಸಿಬಿ ಪರ ರೇಣುಕಾ ಸಿಂಗ್‌ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ತಲಾ 2 ವಿಕೆಟ್‌ ಪಡೆದರು. ಇದನ್ನೂ ಓದಿ: ಕಾರವಾರ| ಪ್ರೀತಿಸಿ ಮದುವೆಯಾಗಿದ್ದ ಮಗಳು-ಅಳಿಯನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನ


    ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ವಿಫಲವಾಯಿತು. ಸ್ಮೃತಿ ಮಂಧನಾ 10 ರನ್‌, ಡ್ಯಾನಿ ವ್ಯಾಟ್‌ 4 ರನ್‌ ಗಳಿಸಿ ಔಟಾದರು. ಕಳೆದ ಎರಡೂ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದ ಪೆರ್ರಿ ಶೂನ್ಯಕ್ಕೆ ಔಟಾದರು. ರಾಘ್ವಿ ಬಿಸ್ಟ್‌ 22 ರನ್‌, ಕನಿಕಾ ಅಹುಜಾ 33 ರನ್‌, ಜಾರ್ಜಿಯಾ 20 ರನ್‌ ಕಲೆ ಹಾಕಿದರು.

    ಗುಜರಾತ್‌ ಪರ ಉತ್ತಮ ಬೌಲಿಂಗ್‌ ಮಾಡಿದ ತನುಜಾ 16 ಹಾಗೂ ಡಿಯಾಂಡ್ರಾ 31 ರನ್‌ ನೀಡಿ ತಲಾ 2 ವಿಕೆಟ್‌ ಕಿತ್ತರು. ಇನ್ನುಳಿದ ಆಶ್ಲೀ, ಕಾಶ್ವೀ ತಲಾ ವಿಕೆಟ್‌ ಪಡೆದುಕೊಂಡರು.

  • WPL 2025 | ಗುಜರಾತ್‌ ವಿರುದ್ಧ ರಿಚಾ ಘರ್ಜನೆ – ಆರ್‌ಸಿಬಿ ಗೆಲುವಿನ ಶುಭಾರಂಭ

    WPL 2025 | ಗುಜರಾತ್‌ ವಿರುದ್ಧ ರಿಚಾ ಘರ್ಜನೆ – ಆರ್‌ಸಿಬಿ ಗೆಲುವಿನ ಶುಭಾರಂಭ

    ವಡೋದರ: ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್, ಎಲ್ಲೀಸ್ ಪೆರ್ರಿ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ತಂಡ ಮಹಿಳಾ ಪ್ರೀಮಿಯರ್ ಲೀಗ್ ನ ಉದ್ಘಾಟನಾ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

    ವಡೋದರಾದಲ್ಲಿ ಶುಕ್ರವಾರ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿಯು ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ. ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಗಳನ್ನು ಪೇರಿಸಿತು. ಗೆಲ್ಲಲು ಬೃಹತ್ ಗುರಿ ಪಡೆದ ಆರ್ ಸಿಬಿ ವನಿತೆಯರ ಬಳಗ ಇನ್ನೂ 9 ಎಸೆತಗಳು ಬಾರಿ ಇರುವಾಗಲೇ 202 ರನ್‌ ಸಿಡಿಸಿ ಗೆದ್ದು ಬೀಗಿತು.

    ಗೆಲುವಿಗೆ ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
    14ನೇ ಓವರ್‌ ಕಳೆಯುತ್ತಿದ್ದಂತೆ ರಿಚಾ – ಕನಿಕಾ ಹೊಡಿ ಬಡಿ ಆಟಕ್ಕೆ ಮುಂದಾದರು. ವಿಕೆಟ್‌ ಬಿಟ್ಟುಕೊಡದೇ ಗುಜರಾತ್‌ ಬೌಲರ್‌ಗಳನ್ನ ಬೆಂಡೆತ್ತಿದ್ದರು. ಇವರಿಬ್ಬರ ಸ್ಫೋಟಕ ಆಟದಿಂದ ಕೊನೆಯ 27 ಎಸೆತಗಳಲ್ಲಿ ತಂಡಕ್ಕೆ 79 ರನ್‌ ಸೇರ್ಪಡೆಯಾಯಿತು. 15, 16, 17, 18, 19ನೇ ಓವರ್‌ಗಳಲ್ಲಿ ಕ್ರಮವಾಗಿ 16, 23, 16, 17, 7 ರನ್‌ ಸೇರ್ಪಡೆಯಾಯಿತು. ಇದು ಆರ್‌ಸಿಬಿ ಗೆಲುವಿಗೆ ಕಾರಣವಾಯಿತು.

    ದಾಖಲೆಯ ಚೇಸಿಂಗ್‌:
    ಗುಜರಾತ್‌ ವಿರುದ್ಧದ ಗೆಲುವಿನೊಂದಿಗೆ ಡಬ್ಲ್ಯೂಪಿಎಲ್‌ನಲ್ಲಿ ಆರ್‌ಸಿಬಿ ದಾಖಲೆಯ ಜಯಕ್ಕೆ ಪಾತ್ರವಾಯಿತು. ಕಳೆದ ಎರಡು ಆವೃತ್ತಿಗಳಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧವೇ ಮುಂಬೈ ಇಂಡಿಯನ್ಸ್‌ 191 ರನ್‌, ಆರ್‌ಸಿಬಿ 189 ರನ್‌, ಯುಪಿ ವಾರಿಯರ್ಸ್‌ 179 ರನ್‌ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿತ್ತು. ಅದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ 172 ರನ್‌ಗಳ ಚೇಸಿಂಗ್‌ ಮಾಡಿದ್ದು ದೊಡ್ಡ ಮೊತ್ತದ ಚೇಸಿಂಗ್‌ ಆಗಿತ್ತು. ಇದೀಗ ಆರ್‌ಸಿಬಿ ಎಲ್ಲ ದಾಖಲೆಗಳನ್ನ ನುಚ್ಚುನೂರು ಮಾಡಿದೆ.

    ಆರ್‌ಸಿಬಿಗೆ ಆರಂಭಿಕ ಆಘಾತ:
    ಬೃಹತ್‌ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲೇ ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 2 ಓವರ್‌ಗಳಲ್ಲಿ 14 ರನ್‌ ಗಳಿಸಿದ್ದರೂ ಆರಂಭಿಕ 2 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಎಲ್ಲಿಸ್‌ ಪೆರ್ರಿ ಆರ್‌ಬಿಗೆ ಆಸರೆಯಾದರು. 25 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಪೆರ್ರಿ ಒಟ್ಟು 34 ಎಸೆತಗಳಲ್ಲಿ 57 ರನ್‌ (2 ಸಿಕ್ಸರ್‌, 6 ಬೌಂಡರಿ) ಚಚ್ಚಿದರು. ಇದರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ರಾಘ್ವಿ ಬಿಸ್ಟ್ 25 ರನ್‌ಗಳ ಕೊಡುಗೆ ನೀಡಿದರು.

    97 ರನ್‌ಗಳ ಜೊತೆಯಾಟ:
    ಇವರಿಬ್ಬರ ವಿಕೆಟ್ ಪತನದ ಬಳಿಕ ಒಟ್ಟಾದ ರಿಚಾ ಘೋಷ್ ಮತ್ತು ಕನಿಕಾ ಅಹುಜಾ ಕೊನೆಯವರೆಗೂ ವಿಕೆಟ್‌ ಬಿಟ್ಟುಕೊಡದೇ ಹೋರಾಟ ನಡೆಸಿದರು. ಗುಜರಾತ್ ಬೌಲರ್ ಗಳನ್ನು ಚೆಂಡಾಡಿದ ಇಬ್ಬರು ಬ್ಯಾಟರ್ ಗಳು ತಂಡವನ್ನು ಗೆಲುವಿನ ದಡ ಸೇರಿಸಿದರು. ಮುರಿಯದ 5ನೇ ವಿಕೆಟ್‌ಗೆ ಕನಿಕಾ ಅಹುಜಾ ಹಾಗೂ ರಿಚಾ ಘೋಷ್‌ ಜೋಡಿ ಕೇವಲ 37 ಎಸೆತಗಳಲ್ಲಿ ಸ್ಫೋಟಕ 93 ರನ್‌ಗಳ ಜೊತೆಯಾಟ ನೀಡಿತು. ಇದರಿಂದ ಆರ್‌ಸಿಬಿಗೆ ಗೆಲುವು ಸುಲಭವಾಯಿತು.

    ‌ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಗುಜರಾತ್‌ ಜೈಂಟ್ಸ್‌ ಮಹಿಳಾ ತಂಡ ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿತು. ಪವರ್‌ ಪ್ಲೇನಲ್ಲಿ 39 ರನ್‌ಗಳಿಸಿ ಒಂದು ವಿಕೆಟ್‌ ಕಳೆದುಕೊಂಡಿತ್ತು. ಅಲ್ಲದೇ ಮೊದಲ 10 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ ಕೇವಲ 68 ರನ್‌ ಗಳಿಸಿತ್ತು. ಇದರಿಂದ ಗುಜರಾತ್‌ 150 ರನ್‌ಗಳ ಗಡಿ ದಾಟುವುದೂ ಕಷ್ಟವೆಂದೇ ಭಾವಿಸಲಾಗಿತ್ತು.

    ಆಶ್ಲೀ ಗಾರ್ಡ್ನರ್ ಆರ್ಭಟ:
    ನಿಧಾನಗತಿಯ ಬ್ಯಾಟಿಂಗ್‌ನಿಂದ ಗುಜರಾತ್‌ ತಂಡಕ್ಕೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಶ್ಲೀ ಗಾರ್ಡ್ನರ್ ಜೀವ ತುಂಬಿದರು. ಆರಂಭದಿಂದಲೇ ಆರ್‌ಸಿಬಿ ಬೌಲರ್‌ಗಳನ್ನ ಹಿಗ್ಗಾಮುಗ್ಗ ಬೆಂಡೆತ್ತಿದ್ದರು. ಕೇವಲ 25 ಎಸೆತಗಳಲ್ಲೇ 3 ಬೌಂಡರಿ, 4 ಸಿಕ್ಸರ್‌ ನೆರವಿನೊಂದಿಗೆ ಸ್ಫೋಟಕ ಫಿಫ್ಟಿ ಸಿಡಿಸಿದರು. 213.51 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಗಾರ್ಡ್ನರ್ ಒಟ್ಟು 37 ಎಸೆತಗಳಲ್ಲಿ 79 ರನ್‌ (8 ಸಿಕ್ಸರ್‌, 3 ಬೌಂಡರಿ) ಚಚ್ಚಿ ಅಜೇಯರಾಗುಳಿದರು. ಇದರೊಂದಿಗೆ ಡಿಯಾಂಡ್ರಾ ಡಾಟಿನ್ 25 ರನ್‌, ಸಿಮ್ರಾನ್‌ ಶೈಕ್‌ 11 ರನ್‌ ಹಾಗೂ ಹರ್ಲೀನ್‌ ಡಿಯೋಲ್‌ 9 ರನ್‌ ಕೊಡುಗೆ ನೀಡಿದರು.

    ಪಂದ್ಯದ ಗತಿ ಬದಲಿಸಿದ ಗಾರ್ಡ್ನರ್ ಸಿಕ್ಸರ್
    13 ಓವರ್‌ ಕಳೆದರೂ ಗುಜರಾತ್‌, 3 ವಿಕೆಟ್‌ಗೆ 98 ರನ್‌ಗಳನ್ನಷ್ಟೇ ಗಳಿಸಿತ್ತು. ಆದ್ರೆ 14ನೇ ಓವರ್‌ನಲ್ಲಿ ಪ್ರೇಮಾ ರಾವತ್‌ ಬೌಲಿಂಗ್‌ಗೆ ಆಶ್ಲೀ ಗಾರ್ಡ್ನರ್ ಹ್ಯಾಟ್ರಿಕ್‌ ಸಿಕ್ಸರ್‌ ಚಚ್ಚಿದರು. ಇದರೊಂದಿಗೆ ಒಂದೇ ಓವರ್‌ನಲ್ಲಿ 21 ರನ್‌ ತಂಡಕ್ಕೆ ಸೇರ್ಪಡೆಯಾಯಿತು. ಅಲ್ಲದೇ ಗುಜರಾತ್‌ ಆಟಗಾರ್ತಿಯರು 18, 19ನೇ ಓವರ್‌ಗಳಲ್ಲಿ ತಲಾ 20 ರನ್‌ ಚಚ್ಚಿದರು. ಇದು ದೊಡ್ಡ ಮೊತ್ತಕ್ಕೆ ಕಾರಣವಾಯಿತು.

    ಆರ್‌ಸಿಬಿ ಪರ ರೇಣುಕಾ ಸಿಂಗ್‌ 2 ವಿಕೆಟ್‌ ಕಿತ್ತರೆ, ಕನಿಕಾ ಅಹುಜಾ, ಜಾರ್ಜಿಯಾ ವೇರ್ಹ್ಯಾಮ್, ಪ್ರೇಮಾ ರಾವತ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ಕೊನೇ 30 ಎಸೆತಗಳಲ್ಲಿ 72 ರನ್‌; ಹರ್ಮನ್‌ಪ್ರೀತ್‌ ಬೆಂಕಿ ಬ್ಯಾಟಿಂಗ್‌ – ಮುಂಬೈಗೆ 7 ವಿಕೆಟ್‌ಗಳ ಜಯ

    ಕೊನೇ 30 ಎಸೆತಗಳಲ್ಲಿ 72 ರನ್‌; ಹರ್ಮನ್‌ಪ್ರೀತ್‌ ಬೆಂಕಿ ಬ್ಯಾಟಿಂಗ್‌ – ಮುಂಬೈಗೆ 7 ವಿಕೆಟ್‌ಗಳ ಜಯ

    ನವದೆಹಲಿ: ನಾಯಕಿ ಹರ್ಮನ್‌ ಪ್ರೀತ್‌ಕೌರ್‌ ಅವರ ಬೆಂಕಿ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ ಮಹಿಳಾ ತಂಡವು (Mumbai Indians Women) ಗುಜರಾತ್‌ ಜೈಂಟ್ಸ್‌ ಮಹಿಳಾ ತಂಡದ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ.

    ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಗುಜರಾತ್‌ (Gujarat Giants Women) ನೀಡಿದ 191ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ 19.5 ಓವರ್‌ಗಳಲ್ಲಿ ನಿಗದಿ ಗುರಿ ತಲುಪಿ ಯಶಸ್ಸುಕಂಡಿತು ಕೊನೆಯ 2 ಓವರ್‌ಗಳಲ್ಲಿ ಮುಂಬೈ ಗೆಲುವಿಗೆ 23 ರನ್‌ಗಳ ಅಗತ್ಯವಿತ್ತು, ಆದ್ರೆ ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) ಅವರ ಸಿಕ್ಸರ್‌, ಬೌಂಡರಿ ನೆರವಿನಿಂದ 11 ಎಸೆತಗಳಲ್ಲೇ ಗುರಿ ತಲುಪುವಂತಾಯಿತು. 19ನೇ ಓವರ್‌ನಲ್ಲೇ 10 ರನ್‌ ಗಳಿಸಿದ ಮುಂಬೈ, ಕೊನೇ ಓವರ್‌ನ 5 ಎಸೆತಗಳಲ್ಲೇ 13 ರನ್‌ ಬಾರಿಸಿತು. ಒಟ್ಟಾರೆ ಕೊನೇ 30 ಎಸೆತಗಳಲ್ಲಿ ಮುಂಬೈ ಬರೋಬ್ಬರಿ 72 ರನ್‌ ಸಿಡಿಸಿ ಗೆಲುವು ತನ್ನದಾಗಿಸಿಕೊಂಡಿತು.

    ಶನಿವಾರ ನಡೆದ ಮಹಿಳಾ ಕ್ರಿಕೆಟ್‌ ಅಭಿಮಾನಿಗಳ (Womens Cricket Fans) ಕಣ್ಣಿಗೆ ಹಬ್ಬವಾಗಿತ್ತು. ಇತ್ತಂಡದ ಆಟಗಾರರೂ ಸಿಕ್ಸರ್‌ – ಬೌಂಡರಿ ಮಳೆ ಸುರಿಸಿದರು. ಈ ಆಟದಲ್ಲಿ ಬರೋಬ್ಬರಿ 44 ಬೌಂಡರಿ, 13 ಸಿಕ್ಸರ್‌ಗಳು ದಾಖಲಾದವು. ಈ ಪೈಕಿ ಮುಂಬೈ ಪರ 22 ಬೌಂಡರಿ, 7 ಸಿಕ್ಸರ್‌ ಸಿಡಿದರೆ, ಗುಜರಾತ್‌ ಪರ 22 ಬೌಂಡರಿ, 6 ಸಿಕ್ಸರ್‌ಗಳು ದಾಖಲಾಯಿತು. ಇದನ್ನೂ ಓದಿ: ಟೀಂ ಇಂಡಿಯಾಗೆ ಇನ್ನಿಂಗ್ಸ್‌, 64 ರನ್‌ಗಳ ಜಯ – ತಾರಾ ಆಟಗಾರರ ಗೈರಿನ ಮಧ್ಯೆಯೂ ಅತ್ಯುತ್ತಮ ಸಾಧನೆ

    ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ತಂಡ ಆರಂಭದಲ್ಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಮುಂಬೈ ಪರ ಯಾಸ್ತಿಕಾ ಭಾಟಿಯಾ 49 ರನ್‌, ಹೇಲಿ ಮ್ಯಾಥೀವ್ಸ್‌ 18 ರನ್‌, ನಟಾಲಿ ಸ್ಕಿವರ್‌ ಬ್ರಂಟ್‌ 2 ರನ್‌ ಗಳಿಸಿ ಪೆವಿಲಿಯನ್‌ ಪೆರೇಡ್‌ ನಡೆಸಿದರು. ಆದ್ರೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಹರ್ಮನ್‌ ಪ್ರೀತ್‌ಕೌರ್‌ 48 ಎಸೆತಗಳಲ್ಲಿ ಅಜೇಯ 95 ರನ್‌ (10 ಬೌಂಡರಿ, 5 ಸಿಕ್ಸರ್)‌ ಸಿಡಿಸುವ ಮೂಲಕ ಮುಂಬೈ ತಂಡಕ್ಕೆ ಗೆಲುವು ತಂದುಕೊಟ್ಟರು. ಅಮೇಲಿಯಾ ಕೇರ್‌ 12 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಗುಜರಾತ್‌ ತಂಡ ದಯಾಳನ್ ಹೇಮಲತಾ, ನಾಯಕಿ ಬೆತ್‌ ಮೂನಿ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 190 ರನ್‌ ಕಲೆಹಾಕಿತು. ಇದನ್ನೂ ಓದಿ: ಯಶಸ್ವಿ ಅರ್ಧಶತಕ – 700 ರನ್‌ ಸಿಡಿಸಿ ಸಚಿನ್‌, ಕೊಹ್ಲಿ ದಾಖಲೆ ಉಡೀಸ್‌

    ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಬ್ಬರಿಸಿದ ಲಾರಾ ವೊಲ್ವಾರ್ಡ್ಟ್ 13 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. 2ನೇ ವಿಕೆಟ್‌ಗೆ ಜೊತೆಯಾದ ಹೇಮಲತಾ ಹಾಗೂ ಬೆತ್‌ ಮೂನಿ 62 ಎಸೆತಗಳಲ್ಲಿ 121 ರನ್‌ಗಳ ಜೊತೆಯಾಟ ನೀಡಿದರು. ಹೇಮಲತಾ 40 ಎಸೆತಗಳಲ್ಲಿ ಸ್ಫೋಟಕ 74 ರನ್‌ (9 ಬೌಂಡರಿ, 2 ಸಿಕ್ಸರ್‌) ಚಚ್ಚಿದರೆ, ಬೆತ್‌ ಮೂನಿ 35 ಎಸೆತಗಳಲ್ಲಿ 66 ರನ್‌ (8 ಬೌಂಡರಿ, 3 ಸಿಕ್ಸರ್‌) ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಭಾರತಿ ಫುಲ್ಮಾಲಿ 21 ರನ್‌ಗಳ ಕೊಡುಗೆ ನೀಡಿದರು. ಅಂತಿಮವಾಗಿ ಗುಜರಾತ್‌ ತಂಡ 190 ರನ್‌ ಗಳಿಸಿ 191 ರನ್‌ ಗಳ ಗುರಿ ನೀಡಿತ್ತು.

  • ಗ್ರೇಸ್‌ ಹ್ಯಾರಿಸ್‌ ಸ್ಫೋಟಕ ಅರ್ಧಶತಕ – ಯುಪಿಗೆ 6 ವಿಕೆಟ್‌ಗಳ ಭರ್ಜರಿ ಜಯ

    ಗ್ರೇಸ್‌ ಹ್ಯಾರಿಸ್‌ ಸ್ಫೋಟಕ ಅರ್ಧಶತಕ – ಯುಪಿಗೆ 6 ವಿಕೆಟ್‌ಗಳ ಭರ್ಜರಿ ಜಯ

    ಬೆಂಗಳೂರು: ಗ್ರೇಸ್‌ ಹ್ಯಾರಿಸ್‌ (Grace Harris) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಯುಪಿ ವಾರಿಯರ್ಸ್‌ (UP Warriorz), ಗುಜರಾತ್‌ ಜೈಂಟ್ಸ್‌ (Gujarat Giants) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲ ಬ್ಯಾಟ್‌ ಮಾಡಿದ ಗುಜರಾತ್‌ ಜೈಂಟ್ಸ್‌ 5 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಯುಪಿ ವಾರಿಯರ್ಸ್‌ 15.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 143 ರನ್‌ ಹೊಡೆಯುವ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿತು.

    ಯುಪಿ ಪರ ಗ್ರೇಸ್‌ ಹ್ಯಾರಿಸ್‌ ಔಟಾಗದೇ 60 ರನ್‌ (33 ಎಸೆತ, 9 ಬೌಂಡರಿ, 2 ಸಿಕ್ಸರ್‌) ಹೊಡೆದರೆ ಆರಂಭಿಕ ಆಟಗಾರ್ತಿ, ನಾಯಕಿ ಅಲಿಸ್ಸಾ ಹೀಲಿ 33 ರನ್‌ (21 ಎಸೆತ, 7 ಬೌಂಡರಿ) ಹೊಡೆದರು. ಇದನ್ನೂ ಓದಿ: ಐದನೇ ಬಾರಿಗೆ ಬೆಂಗಳೂರಿನಲ್ಲಿ ಬಾಂಬ್‌ ಸ್ಟೋಟ: ಹಿಂದೆ ಎಲ್ಲೆಲ್ಲಿ ಸಂಭವಿಸಿತ್ತು?

    ಗುಜರಾತ್‌ ಜೈಂಟ್ಸ್‌ ಪರ ಆಶ್ಲೀಗ್ ಗಾರ್ಡ್ನರ್ 30 ರನ್‌ (17 ಎಸೆತ, 4 ಬೌಂಡರಿ, 1 ಸಿಕ್ಸರ್)‌, ಫೋಬೆ ಲಿಚ್ಫೀಲ್ಡ್ 35 ರನ್‌ (26 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದರು.

    ಸದ್ಯ ಡಬ್ಲ್ಯೂಪಿಎಲ್‌ (WPL) ಅಂಕ ಪಟ್ಟಿಯಲ್ಲಿ ತಲಾ 4 ಅಂಕಗಳನ್ನು ಪಡೆದಿದ್ದರೂ ನೆಟ್‌ ರನ್‌ ರೇಟ್‌ ಆಧಾರದಲ್ಲಿ ಡೆಲ್ಲಿ ಮೊದಲ ಸ್ಥಾನ ಪಡೆದರೆ ಆರ್‌ಸಿಬಿ ಎರಡನೇ ಸ್ಥಾನ ಪಡೆದಿದೆ. ಯುಪಿ, ಮುಂಬೈ ಅನುಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿದೆ. ಆಡಿರುವ ಮೂರು ಪಂದ್ಯಗಳನ್ನು ಸೋತಿರುವ ಗುಜರಾತ್‌ 0 ಅಂಕದೊಂದಿಗೆ ಐದನೇ ಸ್ಥಾನದಲ್ಲಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಕೇಸ್‌ – ಓರ್ವ ವಶಕ್ಕೆ

  • WPL 2024: ಸೋಲೇ ಇಲ್ಲ ಗೆಲುವೆ ಎಲ್ಲಾ; ಅಮೇಲಿಯಾ ಆಲ್‌ರೌಂಡರ್‌ ಆಟ – ಮುಂಬೈಗೆ 5 ವಿಕೆಟ್‌ಗಳ ಜಯ

    WPL 2024: ಸೋಲೇ ಇಲ್ಲ ಗೆಲುವೆ ಎಲ್ಲಾ; ಅಮೇಲಿಯಾ ಆಲ್‌ರೌಂಡರ್‌ ಆಟ – ಮುಂಬೈಗೆ 5 ವಿಕೆಟ್‌ಗಳ ಜಯ

    ಬೆಂಗಳೂರು: ಅಮೇಲಿಯಾ ಕೇರ್‌ ಆಲ್‌ರೌಂಡರ್‌ ಆಟ ಹಾಗೂ ಹರ್ಮನ್‌ ಪ್ರೀತ್‌ ಕೌರ್‌ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ ಮಹಿಳಾ (Mumbai Indians Women) ತಂಡ ಗುಜರಾತ್‌ ಜೈಂಟ್ಸ್‌ ಮಹಿಳಾ (Gujarat Giants Women) ತಂಡದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ.

    ಮಹಿಳಾ ಪ್ರೀಮಿಯರ್‌ ಲೀಗ್‌ (WPL) ಮೊದಲ ಆವೃತ್ತಿಯಲ್ಲಿ ಸತತ ಗೆಲುವಿನೊಂದಿಗೆ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಮುಂಬೈ ಇಂಡಿಯನ್ಸ್‌ 2ನೇ ಆವೃತ್ತಿಯಲ್ಲೂ ಜಯದ ಓಟ ಮುಂದುವರಿಸಿದೆ. ಆರಂಭಿಕ ಎರಡೂ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಇದನ್ನೂ ಓದಿ: ಭರ್ಜರಿ ಕಂಬ್ಯಾಕ್‌; ಅಶ್ವಿನ್‌ ಸ್ಪಿನ್‌ ಮೋಡಿಗೆ ಮಕಾಡೆ ಮಲಗಿದ ಇಂಗ್ಲೆಂಡ್ – ಸರಣಿ ಗೆಲುವಿನ ವಿಶ್ವಾಸದಲ್ಲಿ ಭಾರತ

    ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ದಿಂಗ್‌ ಆಯ್ದುಕೊಂಡ ಮುಂಬೈ, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಗುಜರಾತ್‌ ಜೈಂಟ್ಸ್‌ ಮಹಿಳಾ ತಂಡಕ್ಕೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 126 ರನ್‌ ಗಳಿಸಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಮುಂಬೈ 18.1 ಓವರ್‌ಗಳಲ್ಲೇ 129 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

    ಚೇಸಿಂಗ್‌ ಆರಂಭಿಸಿದ ಮುಂಬೈ ಒಂದೆಡೆ ರನ್‌ ಕಲೆಹಾಕಿದರೂ ಮತ್ತೊಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಗುಜರಾತ್‌ ತಂಡ ಫೀಲ್ಡಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ್ದರಿಂದ ಮುಂಬೈಗೆ ಗೆಲುವು ಕಷ್ಟವೆಂದೇ ಭಾವಿಸಲಾಗಿತ್ತು. ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಹಾಗೂ ಅಮೆಲಿಯಾ ಕೆರ್ (Amelia Kerr) 50 ಎಸೆತಗಳಲ್ಲಿ 66 ರನ್‌ಗಳ ಜೊತೆಯಾಟ ನೀಡಿದರು. ಇದರಿಂದ ಗೆಲುವು ಮುಂಬೈ ತಂಡದತ್ತ ವಾಲಿತು.

    ಮುಂಬೈ ಪರ ಹರ್ಮನ್‌ ಪ್ರೀತ್‌ ಕೌರ್‌ 46 ರನ್‌, ಅಮೇಲಿಯಾ ಕೇರ್‌ 31 ರನ್‌, ನಟಾಲಿ ಸ್ಕೀವರ್‌ ಬ್ರಂಟ್‌ 22 ರನ್‌, ಹೇಲಿ ಮ್ಯಾಥ್ಯೂಸ್‌ ಹಾಗೂ ಯಸ್ತಿಕಾ ಭಾಟಿಯಾ ತಲಾ 7 ರನ್‌, ಪೂಜಾ ವಸ್ತ್ರಕಾರ್‌ 1 ರನ್‌ ಗಳಿಸಿದರು. ಗುಜರಾತ್‌ ಜೈಂಟ್ಸ್‌ ಪರ ತನುಜಾ ಕನ್ವರ್ 2 ವಿಕೆಟ್‌ ಕಿತ್ತರೆ, ಕ್ಯಾಥರಿನ್ ಬ್ರೈಸ್ ಮತ್ತು ಲಿಯಾ ತಹುಹು ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಶ್ವಿನ್‌ ಕಮಾಲ್‌ – ಕುಂಬ್ಳೆ ದಾಖಲೆ ಅಳಿಸಿ ಅಗ್ರಸ್ಥಾನಕ್ಕೇರಿದ ಸ್ಪಿನ್‌ ಮಾಂತ್ರಿಕ

    ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ತಂಡ ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆಯಲ್ಲಿತ್ತು. ಆದ್ರೆ ಆರಂಭದಿಂದಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಗುಜರಾತ್‌ ತಂಡದ ಪರ ನಾಯಕಿ ಬೆತ್‌ ಮೂನಿ 24 ರನ್‌, ತನುಜಾ ಕನ್ವರ್ 28 ರನ್‌, ಕ್ಯಾಥರಿನ್ ಬ್ರೈಸ್ 25 ರನ್‌, ಆಶ್ಲೀ ಗಾರ್ಡ್ನರ್ 15 ರನ್‌ ಗಳಿಸಿದ್ದು ಬಿಟ್ಟರೆ, ಉಳಿದೆಲ್ಲರೂ ಒಂದಕಿ ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಅಂತಿಮವಾಗಿ ಗುಜರಾತ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಕೇವಲ 126 ರನ್‌ ಗಳಿಸಿತು.

    ಮುಂಬೈ ಇಂಡಿಯನ್ಸ್‌ ಪರ ಅಮೆಲಿಯಾ ಕೆರ್ 4 ಓವರ್‌ಗಳಲ್ಲಿ ಕೇವಲ 17 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತರೆ, ಶಬ್ನಿಮ್ ಇಸ್ಮಾಯಿಲ್ 3 ವಿಕೆಟ್‌, ನಟಾಲಿ ಸ್ಕೀವರ್‌ ಬ್ರಂಟ್‌ ಮತ್ತು ಹೇಲಿ ಮ್ಯಾಥ್ಯೂಸ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ರಣಜಿಯಲ್ಲಿ ದ್ವಿಶತಕ ಸಿಡಿಸಿ ಸರ್ಫರಾಜ್‌ ಖಾನ್‌ ಸಹೋದರ ಶೈನ್‌; ಕ್ರಿಕೆಟ್‌ ಲೋಕದಲ್ಲಿ ಅಣ್ತಮ್ಮ ಕಮಾಲ್‌! 

  • PKL 10: ಪ್ರೊ ಕಬಡ್ಡಿ ಲೀಗ್: ಗುಜರಾತ್ ಜೈಂಟ್ಸ್‌ಗೆ ಭರ್ಜರಿ ಜಯ

    PKL 10: ಪ್ರೊ ಕಬಡ್ಡಿ ಲೀಗ್: ಗುಜರಾತ್ ಜೈಂಟ್ಸ್‌ಗೆ ಭರ್ಜರಿ ಜಯ

    ಅಹಮದಾಬಾದ್: ಇಲ್ಲಿನ ಟ್ರಾನ್ಸ್‌ಸ್ಟೇಡಿಯಾ ಅರೆನಾ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ (Kabaddi) ಲೀಗ್‍ನ 10ನೇ ಸೀಸನ್‍ನ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ (Telugu Titans) ವಿರುದ್ಧ ಗುಜರಾತ್ ಜೈಂಟ್ಸ್ (Gujarat Giants) ಭರ್ಜರಿ ಗೆಲುವು ಸಾಧಿಸಿತು.

    ಗುಜರಾತ್ ತಂಡದ ರೈಡರ್ ಸೋನು ಜಗ್ಲಾನ್ ಉತ್ತಮ ಪ್ರದರ್ಶನ ನೀಡಿದ್ದು, ಒಟ್ಟು 11 ಬಾರಿ ದಾಳಿ ಮಾಡಿ 11 ಪಾಯಿಂಟ್ಸ್ ತಂದುಕೊಟ್ಟು ಯಶಸ್ವಿಯಾದರು. ರಾಕೇಶ್ ಸುಂಗ್ರೋಯಾ 5 ರೈಡ್‍ಗಳಲ್ಲಿ 5 ಅಂಕಗಳಿಸಿದರು. ಈ ಮೂಲಕ ಆತಿಥೇಯ ಗುಜರಾತ್ ಜೈಂಟ್ಸ್ ತಂಡವು ತೆಲುಗು ಟೈಟಾನ್ಸ್ ವಿರುದ್ಧ 38-32 ಅಂಕಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು. ಇದನ್ನೂ ಓದಿ: WPL 2024 ಹರಾಜಿಗೆ 165 ಪ್ಲೇಯರ್ಸ್‌ ನೋಂದಣಿ – ಯಾರಾಗ್ತಾರೆ ಈ ಬಾರಿಯ ಟಾಪ್‌ ಪ್ಲೇಯರ್‌?

    ತೆಲುಗು ಟೈಟಾನ್ಸ್ ತಂಡದ ಸ್ಟಾರ್ ರೈಡರ್ ಪವನ್ ಸೆಹ್ರಾವತ್ ಈ ಪಂದ್ಯದಲ್ಲಿ ಸೂಪರ್ 10 ಪಡೆದರು. ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ತೆಲುಗು ಟೈಟಾನ್ಸ್ ಎಡವಿದ ಕಾರಣ ಗೆಲುವಿಗೆ ಆ ಅಂಕಗಳು ಸಾಕಾಗಲಿಲ್ಲ. ಇದನ್ನೂ ಓದಿ: T20I ಕ್ರಿಕೆಟ್‌ನಲ್ಲಿ ಪಾಕ್‌ ದಾಖಲೆ ನುಚ್ಚುನೂರು – ಟೀಂ ಇಂಡಿಯಾ ಯುವಪಡೆಗೆ ಮೆಚ್ಚುಗೆ

  • ಸೋಫಿ ಬೆಂಕಿ ಬ್ಯಾಟಿಂಗ್‌ – RCBಗೆ 8 ವಿಕೆಟ್‌ಗಳ ಭರ್ಜರಿ ಜಯ

    ಸೋಫಿ ಬೆಂಕಿ ಬ್ಯಾಟಿಂಗ್‌ – RCBಗೆ 8 ವಿಕೆಟ್‌ಗಳ ಭರ್ಜರಿ ಜಯ

    ಮುಂಬೈ: ಆಲ್‌ರೌಂಡರ್‌ ಸೋಫಿ ಡಿವೈನ್‌ (Sophie Devine) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಆರ್‌ಸಿಬಿ (RCB) ತಂಡವು, ಗುಜರಾತ್‌ ಜೈಂಟ್ಸ್‌ (Gujarat Giants) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಮುಂಬೈನ ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 188 ರನ್‌ ಬಾರಿಸಿತ್ತು. 189 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಆರ್‌ಸಿಬಿ ತಂಡ 15.3 ಓವರ್‌ಗಳಲ್ಲೇ 189 ರನ್‌ ಚಚ್ಚಿ ನಿರಾಯಾಸವಾಗಿ ಗೆಲುವು ಸಾಧಿಸಿತು. ಆ ಮೂಲಕ ಸತತ ಎರಡನೇ ಗೆಲುವು ಪಡೆದುಕೊಂಡಿತು. ಜೊತೆಗೆ ಆರ್‌ಸಿಬಿ ಪಾಯಿಂಟ್ಸ್‌ ಟೇಬಲ್‌ನಲ್ಲಿ 4 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೇರಿತು.

    ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಸ್ಮೃತಿ ಮಂದಾನ (Smriti Mandhana), ಸೋಫಿ ಡಿವೈನ್‌ ಜೋಡಿ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ ಪತನಕ್ಕೆ ಈ ಜೋಡಿ 57 ಎಸೆತಗಳಲ್ಲಿ ಸ್ಫೋಟಕ 125 ರನ್‌ ಚಚ್ಚಿ ಗುಜರಾತ್‌ ಬೌಲರ್‌ಗಳ ಬೆವರಿಳಿಸಿತ್ತು. ಇದನ್ನೂ ಓದಿ: ಬಲಿಷ್ಠ ಮುಂಬೈಗೆ ಮೊದಲ ಸೋಲು – ಯುಪಿ ವಾರಿಯರ್ಸ್‌ಗೆ 5 ವಿಕೆಟ್‌ಗಳ ರೋಚಕ ಜಯ

    2ನೇ ಓವರ್‌ನಿಂದಲೇ ಸಿಕ್ಸರ್‌, ಬೌಂಡರಿಗಳೊಂದಿಗೆ ಅಬ್ಬರಿಸಲು ಶುರು ಮಾಡಿದ ಸೋಫಿ ಕೇವಲ 36 ಎಸೆತಗಳಲ್ಲಿ 99 ರನ್‌ (9 ಬೌಂಡರಿ, 8 ಸಿಕ್ಸರ್‌) ಚಚ್ಚಿದರು. ಶತಕ ಬಾರಿಸಿ ಚೊಚ್ಚಲ ಡಬ್ಲ್ಯೂಪಿಎಲ್‌ ಆವೃತ್ತಿಯಲ್ಲೇ ದಾಖಲೆ ಬರೆಯುವ ಸನಿಹದಲ್ಲಿದ್ದಾಗ ಮೆಕ್‌ಗ್ರಾತ್‌ ಬೌಲಿಂಗ್‌ ದಾಳಿಗೆ ಔಟಾಗಿ ನಿರಾಸೆ ಅನುಭವಿಸಿದರು. ಇದನ್ನೂ ಓದಿ: IPL 2023: RCB ತಂಡಕ್ಕೆ ಆನೆ ಬಲ – ವಿಲ್‌ ಜಾಕ್ಸ್‌ ಬದಲಿಗೆ ಕಿವೀಸ್‌ ಸ್ಟಾರ್‌ ಆಲ್‌ರೌಂಡರ್‌ ಸೇರ್ಪಡೆ

    ನಂತರ ಏಲ್ಲಿಸ್‌ ಪೆರ್ರಿ 19 ರನ್‌ ಹಾಗೂ ಹೀದರ್‌ ನೈಟ್‌ 22 ರನ್‌ ಅಜೇಯ ಆಟವಾಡಿ ತಂಡವನ್ನು ಗೆಲುವಿನ ಹಾದಿಗೆ ತಲುಪಿಸಿದರು. ನಾಯಕಿ ಸ್ಮೃತಿ ಮಂದಾನ ಮತ್ತೊಮೆ ಬೃಹತ್‌ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. 31 ಎಸೆತಗಳಲ್ಲಿ 37 ರನ್‌ (5 ಬೌಂಡರಿ, 1 ಸಿಕ್ಸರ್‌) ಗಳಿಸಿ ಪೆವಿಲಿಯನ್‌ ಸೇರಿದರು. ಗುಜರಾತ್‌ ಪರ ಕಿಮ್‌ ಗಾರ್ತ್‌ ಹಾಗೂ ಸ್ನೇಹ ರಾಣ ತಲಾ ಒಂದೊಂದು ವಿಕೆಟ್‌ ಪಡೆದರು.

    ರನ್‌ ಹೊಳೆ ಹರಿಸಿದ ಆಟಗಾರರು ಇವರೇ: ಪುರುಷರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಇತಿಹಾಸದಲ್ಲಿ ಕ್ರಿಸ್‌ಗೇಲ್‌ 175 ರನ್‌ ಸಿಡಿಸಿರುವುದು ಈವರೆಗೆ ಯಾರೂ ಮುರಿಯದ ದಾಖಲೆಯಾಗಿದೆ. ಇದರೊಂದಿಗೆ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ 36 ಎಸೆತಗಳಲ್ಲಿ 99 ರನ್‌ ಗಳಿಸಿರುವ ಸೋಫಿ ಡಿವೈನ್‌ ಅತಿಹೆಚ್ಚು ರನ್‌ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಇಬ್ಬರೂ ಆರ್‌ಸಿಬಿ ತಂಡದ ಆಟಗಾರರೇ ಎಂಬುದು ವಿಶೇಷ.

    ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ ಜೈಂಟ್ಸ್ ಅತ್ಯುತ್ತಮ ಆರಂಭ ಪಡೆಯಿತು. 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿ ಆರ್‌ಸಿಬಿಗೆ ಬೃಹತ್‌ ಮೊತ್ತದ ಗುರಿ ನೀಡಿತ್ತು. ಸೋಫಿಯಾ ಡಂಕ್ಲಿ 16 ರನ್ ಗಳಿಸಿ ಔಟಾದ ನಂತರ ಲಾರಾ ವೊಲ್ವಾರ್ಡ್ ಮಾತ್ರ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. 42 ಎಸೆತಗಳಲ್ಲಿ 68 ರನ್ (9 ಬೌಂಡರಿ 2 ಸಿಕ್ಸರ್) ಚಚ್ಚಿ ತಂಡದ ರನ್‌ ಮೊತ್ತ ಹೆಚ್ಚಿಸುವಲ್ಲಿ ಕಾರಣರಾದರು. ಇದರೊಂದಿಗೆ ಸಬ್ಬಿನೇನಿ ಮೇಘನಾ 32 ಎಸೆತಗಳಲ್ಲಿ 31 ರನ್, ಆಲ್‌ರೌಂಡರ್ ಆಶ್ಲೀ ಗಾರ್ಡ್ನರ್ 26 ಎಸೆತಗಳಲ್ಲಿ ಸ್ಫೋಟಕ 41 ರನ್ (6 ಬೌಂಡರಿ, 1 ಸಿಕ್ಸರ್) ಹಾಗೂ ದಯಾಳ್ ಹೇಮಲತಾ 6 ಎಸೆತಗಳಲ್ಲಿ 16 ರನ್ ಗಳಿಸಿ ಮಿಂಚಿದರು. ಕೊನೆಯಲ್ಲಿ ಹರ್ಲೀನ್ ಡಿಯೋಲ್ ಸಹ 5 ಎಸೆತಗಳಲ್ಲಿ 12 ರನ್ ಗಳಿಸುವ ಮೂಲಕ ತಂಡದ ಬೃಹತ್‌ ಮೊತ್ತಕ್ಕೆ ಸಹಾಯ ಮಾಡಿದ್ದರು. ಆದರೆ ಕಳಪೆ ಬೌಲಿಂಗ್‌ನಿಂದ ತಂಡ ಸೋಲನುಭವಿಸಿತು.

    ಆರ್‌ಸಿಬಿ ಪರ ಶ್ರೇಯಾಂಕ ಪಾಟೀಲ್‌ 2 ವಿಕೆಟ್‌ ಕಿತ್ತರೆ, ಸೋಫಿ ಡಿವೈನ್‌, ಪ್ರೀತಿ ಬೋಸ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ಆಶ್ಲೀ ಗಾರ್ಡ್ನರ್ ಆಲ್‌ರೌಂಡರ್‌ ಆಟ – ಗುಜರಾತ್‌ಗೆ 11 ರನ್‌ಗಳ ಜಯ

    ಆಶ್ಲೀ ಗಾರ್ಡ್ನರ್ ಆಲ್‌ರೌಂಡರ್‌ ಆಟ – ಗುಜರಾತ್‌ಗೆ 11 ರನ್‌ಗಳ ಜಯ

    ಮುಂಬೈ: ಆಶ್ಲೀ ಗಾರ್ಡ್ನರ್ (Ashleigh Gardner) ಆಲ್‌ರೌಂಡರ್‌ ಆಟ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಗುಜರಾತ್ ಜೈಂಟ್ಸ್ (Gujarat Giants) ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ವಿರುದ್ಧ 11 ರನ್‌ಗಳ ರೋಚಕ ಜಯ ಸಾಧಿಸಿದೆ.

    ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಜೈಂಟ್ಸ್‌ ನಿಗದಿತ ಓವರ್‌ಗಳಲ್ಲಿ 147 ರನ್‌ ಗಳಿಸಿತು. 148 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.4 ಓವರ್‌ಗಳಲ್ಲಿ ಸರ್ವಪತನ ಕಂಡು 11 ರನ್‌ಗಳ ಸೋಲು ಅನುಭವಿಸಿತು. ಇದನ್ನೂ ಓದಿ: ವಿರಾಟ್ ಅಣ್ಣನ ಸಲಹೆ ಸಹಾಯವಾಯ್ತು – RCB ಗೆಲುವಿನ ನಂತ್ರ ಮಂದಾನ ಮುಖದಲ್ಲಿ ಮಂದಹಾಸ

    ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್ ಆರಂಭಿಸಿದ ನಾಯಕಿ ಮೆಗ್ ಲ್ಯಾನ್ನಿಂಗ್ (Meg Lanning) ಮತ್ತು ಶಫಾಲಿ ವರ್ಮಾ (Shafali Verma) ಸೇರಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ತಂಡದ ಸೋಲಿಗೆ ಕಾರಣವಾಯಿತು. ಶಫಾಲಿ ವರ್ಮಾ 8 ರನ್ ಗಳಿಸಿ ಔಟಾದರೆ, ಮೆಗ್ ಲ್ಯಾನ್ನಿಂಗ್ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಆಲಿಸ್ ಕ್ಯಾಪ್ಸೆ 11 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 22 ರನ್ ಬಾರಿಸಿದರು. ಜೆಮಿಮಾ ರೋಡ್ರಿಗಸ್ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆಲ್‌ರೌಂಡರ್ ಮಾರಿಜಾನ್ನೆ ಕಪ್ 29 ಎಸೆತಗಳಲ್ಲಿ 36 ರನ್ ಬಾರಿಸಿದರು. ಜೆಸ್ ಜೊನಾಸ್ಸೆನ್ 4 ರನ್, ತಾನಿಯಾ ಭಾಟಿಯಾ 1 ರನ್ ಗಳಿಸಿದರೆ, ಕೊನೆಯಲ್ಲಿ ಅರುಂಧತಿ ರೆಡ್ಡಿ 17 ಎಸೆತಗಳಲ್ಲಿ 25 ರನ್ ಬಾರಿಸಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಅವರ ವಿಕೆಟ್ ಬೀಳುತ್ತಿದ್ದಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲು ಖಚಿತವಾಯಿತು.

    ಗುಜರಾತ್ ಜೈಂಟ್ಸ್ ಪರ ಸಂಘಟಿತ ಬೌಲಿಂಗ್‌ ದಾಳಿ ನಡೆಸಿದ ಕಿಮ್ ಗಾರ್ಥ್, ಆಶ್ಲೀಗ್ ಗಾರ್ಡ್ನರ್ ಹಾಗೂ ತನುಜಾ ಕನ್ವರ್ 2 ವಿಕೆಟ್ ಕಿತ್ತರು. ಉಳಿದಂತೆ ಸ್ನೇಹ ರಾಣಾ ಮತ್ತು ಹರ್ಲೀನ್ ಡಿಯೋಲ್ ತಲಾ ಒಂದೊಂದು ವಿಕೆಟ್ ಪಡೆದರು.

    ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ನೇಹ ರಾಣಾ ನಾಯಕತ್ವದ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ಇದನ್ನೂ ಓದಿ: RCB ಪಂದ್ಯಗಳ ಟಿಕೆಟ್‌ ದರ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು – ಟಿಕೆಟ್‌ ಬುಕ್‌ ಮಾಡೋದು ಹೇಗೆ..?

    ಗುಜರಾತ್ ಜೈಂಟ್ಸ್ ತಂಡದ ಪರ ಸೋಫಿಯಾ ಡಂಕ್ಲೆ ಮತ್ತು ಲಾರಾ ವೊಲ್ವಾರ್ಡ್ಟ್ ಇನ್ನಿಂಗ್ಸ್ ಆರಂಭಿಸಿದರು. ಒಂದು ಓವರ್‌ನಲ್ಲಿ 4 ರನ್‌ಗಳಾಗುವಷ್ಟರಲ್ಲಿ ಸೋಫಿಯಾ ಡಂಕ್ಲೆ ವಿಕೆಟ್ ಕಳೆದುಕೊಂಡಿತು. ನಂತರ ಹರ್ಲೀನ್ ಡಿಯೋಲ್ ಉತ್ತಮ ಬ್ಯಾಟಿಂಗ್ ಮಾಡಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು. 33 ಎಸೆತಗಳಲ್ಲಿ 4 ಬೌಂಡರಿಗಳ ಸಮೇತ 31 ರನ್ ಗಳಿಸಿದ್ದ ಹರ್ಲೀನ್ ಡಿಯೋಲ್ ವಿಕೆಟ್ ಒಪ್ಪಿಸಿದರು. ಬಳಿಕ ಜೊತೆಗೂಡಿದ ಲಾರಾ ವೊಲ್ವಾರ್ಡ್ಟ್ ಹಾಗೂ ಆಶ್ಲೀ ಗಾರ್ಡ್ನರ್ ಬೆಂಕಿ ಬ್ಯಾಟಿಂಗ್‌ ಮಾಡಿದರು. ಲಾರಾ 45 ಎಸೆತಗಳಲ್ಲಿ 57 ರನ್ (6 ಬೌಂಡರಿ, 1 ಸಿಕ್ಸರ್) ಚಚ್ಚಿದರೆ, ಗಾರ್ಡ್ನರ್ 33 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ ಸ್ಫೋಟಕ 51 ರನ್ ಬಾರಿಸಿ ಅಜೇಯರಾಗುಳಿದರು.

    ಬೌಲಿಂಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಜೆಸ್ ಜೊನಾಸ್ಸೆನ್ 4 ಓವರ್‌ಗಳಲ್ಲಿ 38 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮರಿಜಾನ್ನೆ ಕಪ್ ಮತ್ತು ಅರುಂಧತಿ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.