Tag: ಗುಜರಾತ

  • ಗುಜರಾತ ರಾಜಕಾರಣದಲ್ಲಿ ಸೆಕ್ಸ್ ಸಿಡಿ ಸದ್ದು – ಬಿಜೆಪಿ ಸಂಸದನ ಪುತ್ರರಿಂದ ದೂರು ದಾಖಲು

    ಗುಜರಾತ ರಾಜಕಾರಣದಲ್ಲಿ ಸೆಕ್ಸ್ ಸಿಡಿ ಸದ್ದು – ಬಿಜೆಪಿ ಸಂಸದನ ಪುತ್ರರಿಂದ ದೂರು ದಾಖಲು

    – ಆಗಸ್ಟ್ 15ಕ್ಕೆ ವೀಡಿಯೋ ರಿಲೀಸ್ ಮಾಡಲು ಆಪ್ ಸಿದ್ಧತೆ
    – ಆಪ್ ನಾಯಕರ ವಿರುದ್ಧ ಎಫ್‍ಐಆರ್

    ಗಾಂಧಿನಗರ: ಗುಜರಾತ ರಾಜಕಾರಣದಲ್ಲಿ ಬಿಜೆಪಿ ಸಂಸದರೊಬ್ಬರದ್ದು ಎನ್ನಲಾದ ಸೆಕ್ಸ್ ವೀಡಿಯೋದ ಫೋಟೋ ಸದ್ದು ಮಾಡುತ್ತಿದೆ. ಸದ್ಯ ವೀಡಿಯೋದ ಒಂದು ಫೋಟೋ ರಿವೀಲ್ ಮಾಡಿರುವ ಆಮ್ ಆದ್ಮಿ ಪಕ್ಷ ಆಗಸ್ಟ್ 15ರಂದು ಸಂಪೂರ್ಣ ಕ್ಲಿಪ್ ಬಿಡುಗಡೆಗೊಳಿಸೋದಾಗಿ ಹೇಳಿಕೊಂಡಿದೆ. ಈ ಸಂಬಂಧ ಆಪ್ ನಾಯಕರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿಯನ್ನು ಬಿಜೆಪಿ ಸಂಸದ ಪರ್ಬತ್ ಪಟೇಲ್ ಎಂದು ಹೇಳಲಾಗುತ್ತಿದೆ. ಆದ್ರೆ ಸಂಸದರಾದ ಪಟೇಲ್, ಈ ಎಲ್ಲ ಆರೋಪಗಳು ಸುಳ್ಳು ಎಂದು ಅಲ್ಲಗಳೆದ್ರೆ, ಅವರ ಪುತ್ರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ವೀಡಿಯೋಗೆ ಸಂಬಂಧಿಸಿದಂತೆ ಆಪ್ ಮುಖಂಡ ಮಧಾಭಾಯಿ ಪಟೇಲ್ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಪೋಸ್ಟ್ ಬನಲ್ಲಿ ಫೋಟೋ ಹಂಚಿಕೊಂಡು ಕೆಲ ಸಾಲುಗಳ್ನು ಬರೆದುಕೊಂಡಿದ್ದಾರೆ. ಆದ್ರೆ ಅದರಲ್ಲಿ ಆ ವ್ಯಕ್ತಿ ಮುಖ ಕಾಣಿಸುತ್ತಿಲ್ಲ. ಈ ಬಿಜೆಪಿ ನಾಯಕನ ಪೂರ್ಣ ವೀಡಿಯೋ ಆಗಸ್ಟ್ 15ರಂದು ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.

    ಆಪ್ ನಾಯಕನ ಪೋಸ್ಟ್ ವೈರಲ್ ಆಗುತ್ತಲೇ ಮಾಧ್ಯಮಗಳ ಮುಂದೆ ಸಂಸದ ಪರ್ಬತ್ ಪಟೇಲ್ ಸ್ಪಷ್ಟನೆ ನೀಡಿದ್ದಾರೆ. ನಾನು ಜೀವನದಲ್ಲಿಯೇ ಯಾವ ಕೆಟ್ಟ ಕೆಲಸವನ್ನೂ ಮಾಡಿಲ್ಲ. ಉದ್ದೇಶಪೂರ್ವಕವಾಗಿ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿರುವ ಹಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಾರಕಿಹೊಳಿ ಸಿಡಿ ಕೇಸ್‍ಗೆ ಟ್ವಿಸ್ಟ್ – ಹೈಕೋರ್ಟ್ ಅಸಮಾಧಾನ

    ಇತ್ತ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗ್ತಿದ್ದಂತೆ ಮಧಾಬಾಯಿ ಪಟೇಲ್ ಮತ್ತು ಮುಕೇಶ್ ರಜಪೂತ್ ವಿರುದ್ಧ ಪರ್ಬತ್ ಪಟೇಲ್ ಮಕ್ಕಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ತಂದೆ ನಿರ್ದೋಷಿಗಳಾಗಿದ್ದು, ಅವರ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪರ್ಬತ್ ಪಟೇಲ್ ಪುತ್ರ ಶೈಲೇಶ್ ಆಪ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಅತ್ಯಾಚಾರ ಪ್ರಕರಣದಿಂದ ಸಾಹುಕಾರ್ ಬಚಾವ್ ಆಗ್ತಾರಾ? ಒಪ್ಪಿತ ಸೆಕ್ಸ್ ಅಂತ ಬಿ ರಿಪೋರ್ಟ್ ಹಾಕ್ತಾರಾ?

  • ವೇದಿಕೆಯ ಮೇಲೆ ಕುಸಿದ ಸಿಎಂ ವಿಜಯ್ ರೂಪಾನಿ

    ವೇದಿಕೆಯ ಮೇಲೆ ಕುಸಿದ ಸಿಎಂ ವಿಜಯ್ ರೂಪಾನಿ

    ಅಹಮದಾಬಾದ್: ಚುನಾವಣೆ ಪ್ರಚಾರದ ವೇಳೆ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದಾಗಲೇ ಗುಜರಾತ್ ಸಿಎಂ ವಿಜಯ್ ರೂಪಾನಿ ಕುಸಿದಿದ್ದಾರೆ. ಭಾನುವಾರ ವಡೋದರಾದ ನಿಜಾಮಪುರನಲ್ಲಿ ಮುಖ್ಯಮಂತ್ರಿಗಳು ಎಲೆಕ್ಷನ್ ಕ್ಯಾಂಪನ್ ನಲ್ಲಿ ಭಾಗಿಯಾಗಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಸಿಎಂ ಕುಸಿಯುತ್ತಿದ್ದಂತೆ ಅಧಿಕಾರಿಗಳು ಕಾರ್ಯಕ್ರಮವನ್ನ ರದ್ದುಗೊಳಿಸಿ, ವೇದಿಕೆಯಲ್ಲಿಯೇ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳನ್ನ ಅಹಮಾದಾಬಾದ್ ಗೆ ಶಿಫ್ಟ್ ಮಾಡಲಾಗಿದೆ. ಸಿಎಂ ಅವರ ವೈದ್ಯಕೀಯ ವರದಿ ಬಂದಿದ್ದು, ಗಾಬರಿಯಾಗುವಂತಿದಿಲ್ಲ. ಇಸಿಜಿ, ಸಿಟಿ ಸ್ಕ್ಯಾನ್ ಸೇರಿದಂತೆ ಎಲ್ಲ ವೈದ್ಯಕೀಯ ಪರೀಕ್ಷೆಗಳನ್ನ ನಡೆಸಲಾಗಿದ್ದು, ಸಿಎಂ ಆರೋಗ್ಯವಾಗಿದ್ದಾರೆ. 24 ಗಂಟೆ ವೈದ್ಯರ ನಿಗಾದಲ್ಲಿ ಇರಿಸಲಾಗಿದೆ ಎಂದು ಯು.ಎನ್. ಆಸ್ಪತ್ರೆಯ ಡಾಕ್ಟರ್ ಆರ್.ಕೆ.ಪಟೇಲ್ ಮಾಹಿತಿ ನೀಡಿದ್ದಾರೆ.

    ವಡೋದರಾದ ನಿಜಾಮಪುರನಲ್ಲಿ ಮೂರನೇ ಬಾರಿ ಚುನಾವಣೆ ಪ್ರಚಾರ ನಡೆಸುತ್ತಿದ್ದರು. ವೇದಿಕೆ ಮೇಲೆ ಮತದಾರರನ್ನು ಉದ್ದೇಶಿಸಿ ಮತನಾಡುವಾಗ ಸಿಎಂ ದಿಢೀರ್ ಕುಸಿದರು. ಚುನಾವಣೆ ಹಿನ್ನೆಲೆ ನಿರಂತರ ಪ್ರಚಾರದಲ್ಲಿ ತೊಡಗಿಕೊಂಡಿರುವ ಸಿಎಂ ಕಳೆದ ಎರಡು ದಿನಗಳಿಂದ ಸರಿಯಾಗಿ ವಿಶ್ರಾಂತಿ ಸಹ ಪಡೆದುಕೊಂಡಿರಲಿಲ್ಲ. ಈ ಹಿನ್ನೆಲೆ ಕಡಿಮೆ ರಕ್ತದೊತ್ತಡದಿಂದಾಗಿ ಕುಸಿದಿದ್ದಾರೆ ಎಂದು ವರದಿಯಾಗಿದೆ.

    ವಡೋದರ ಸೇರಿದಂತೆ 6 ಮಹಾನಗರ ಪಾಲಿಕೆಗಳಲ್ಲಿ ಫೆಬ್ರವರಿ 21ರಂದು ಚುನಾವಣೆ ನಡೆಯಲಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಸಿಎಂ ಆರೋಗ್ಯ ವಿಚಾರಿಸಿದ್ದಾರೆ ಡಿಸಿಎಂ ನಿತಿನ್ ಪಟೇಲ್ ಹೇಳಿದ್ದಾರೆ.

  • ಸೋಮನಾಥ ಮಂದಿರದ ಕೆಳಗೆ 3 ಅಂತಸ್ತಿನ ಕಟ್ಟಡ, ಬೌದ್ಧ ಗುಹೆ ಪತ್ತೆ

    ಸೋಮನಾಥ ಮಂದಿರದ ಕೆಳಗೆ 3 ಅಂತಸ್ತಿನ ಕಟ್ಟಡ, ಬೌದ್ಧ ಗುಹೆ ಪತ್ತೆ

    – 12 ಮೀಟರ್ ಕೆಳಗಿನವರೆಗೆ ಅಧ್ಯಯನ

    ಗಾಂಧಿನಗರ: ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದ ಅಡಿಯಲ್ಲಿ ಮೂರು ಮಹಡಿಯ ಕಟ್ಟಡ ಇರೋದು ಪತ್ತೆಯಾಗಿದೆ. ಐಐಟಿ ಗಾಂಧಿನಗರ ಮತ್ತು ನಾಲ್ಕು ಸಂಸ್ಥೆಗಳ ಪುರಾತತ್ವ ತಜ್ಞರು ದೇಗುಲದ ಕೆಳಗಿನ ಕಟ್ಟಡವನ್ನ ಪತ್ತೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಮತ್ತು ದೇವಾಲಯದ ಟ್ರಸ್ಟಿ ಆಗಿರುವ ನರೇಂದ್ರ ಮೋದಿ ಅವರ ಆದೇಶದ ಮೇಲೆ ಈ ಉತ್ಖನನ ನಡೆಸಲಾಗಿತ್ತು. ಒಂದು ವರ್ಷದ ಹಿಂದೆ ದೆಹಲಿಯ ಸಭೆಯಲ್ಲಿ ಪುರಾತತ್ವ ಇಲಾಖೆಗೆ ಉತ್ಖನನ ನಡೆಸುವಂತೆ ಪ್ರಧಾನಿಗಳು ಆದೇಶಿಸಿದ್ದರು.

    ‘ಎಲ್’ ಆಕಾರದಲ್ಲಿರುವ ಕಟ್ಟಡ: ಕಳೆದ ಒಂದು ವರ್ಷದಿಂದ ಅಧ್ಯಯನ ನಡೆಸಿರುವ ಪುರಾತತ್ವ ಇಲಾಖೆ 32 ಪುಟಗಳ ವರದಿಯನ್ನ ಸಿದ್ಧಪಡಿಸಿ ಸೋಮನಾಥ್ ಟ್ರಸ್ಟ್ ಗೆ ನೀಡಿದೆ. ಮಂದಿರದ ಕೆಳಗೆ ‘ಎಲ್’ ಆಕಾರದಲ್ಲಿ ಮತ್ತೊಂದು ಕಟ್ಟಡವಿದೆ. ಸೋಮನಾಥ ದೇವಾಲಯದ ದಿಗ್ವಿಜಯ್ ದ್ವಾರ ಮತ್ತು ಸರ್ದಾರ್ ವಲ್ಲಭ ಭಾಯಿ ಪಟೇಲ್ ಪ್ರತಿಮೆಯ ಆಸುಪಾಸಿನಲ್ಲಿ ಬೌಧ್ಧ ಗುಹೆಗಳಿವೆ ಎಂದು ಉತ್ಖನನ ತಂಡ ಹೇಳಿದೆ.

    ತಜ್ಷರ ತಂಡ ಸುಮಾರು 5 ಕೋಟಿ ಮೌಲ್ಯದ ಮಶೀನ್ ಬಳಸಿ ಶೋಧನೆ ನಡೆಸಿದೆ. ಭೂಮಿಯ ಕೆಳಗೆ ಅಂದ್ರೆ 12 ಮೀಟರ್ ವರೆಗೆ ಜಿಪಿಆರ್ ಸಹಾಯದಿಂದ ಶೋಧ ನಡೆಸಿದೆ. ದೇವಾಲಯದ ಕೆಳಗೆ ಕಟ್ಟಡವಿದ್ದು, ಅದು ಪ್ರವೇಶ ದ್ವಾರವನ್ನ ಹೊಂದಿದೆ ಎಂದು ತಜ್ಞರ ತಂಡ ಹೇಳಿದೆ.

    ರಾಜರಿಂದ 5 ಬಾರಿ ಜೀರ್ಣೋದ್ಧಾರ: ಮೊದಲಿಗೆ ಇಲ್ಲಿ ಸಣ್ಣ ಮಂದಿರ ಇತ್ತು. ಏಳನೇ ಶತಮಾನದಲ್ಲಿ ವಲ್ಲಭಿಯ ಮೈತ್ರಕ ರಾಜರು ಈ ದೇವಾಲಯವನ್ನ ಜೀರ್ಣೋದ್ಧಾರ ಮಾಡಿದ್ದರು. ತದನಂತರ ಎಂಟನೇ ಶತಮಾನದಲ್ಲಿ ಅರೇಬಿಕ್ ಗವರ್ನರ್ ಜುನೇದ್ ದೇಗುಲವನ್ನ ಧ್ವಂಸಗೊಳಿಸಲು ತನ್ನ ಸೈನ್ಯವನ್ನ ಕಳುಹಿಸಿದ್ದನು. ಕ್ರಿಸ್ತ ಶಕ 815ರಲ್ಲಿ ಪ್ರತಿಹಾರದ ರಾಜ ನಾಗಭಟ್ಟ ಮೂರನೇ ಬಾರಿ ಈ ದೇವಾಲಯವನ್ನು ನಿರ್ಮಿಸಿದರು. ಇದೇ ಅವಶೇಷಗಳ ಮೇಲೆ ಮಾಲ್ವಾ ರಾಜಾ ಬೋಜ ಮತ್ತು ಗುಜರಾತಿನ ಅರಸ ಭೀಮದೇವ ಮಂದಿರವನ್ನ ಪುನರ್ ನಿರ್ಮಾಣ ಮಾಡಿದ್ದರು. 1169ರಲ್ಲಿ ರಾಜಾ ಕುಮಾರ್ ಪಾಲ್ ದೇಗುಲವನ್ನ ಪುನಶ್ಚೇತನಗೊಳಿಸಿದನು.

    ಸದ್ಯದ ದೇವಾಲಯದಲ್ಲಿ ಪಟೇಲರ ಪಾತ್ರ: 1706ರಲ್ಲಿ ಮೊಗಲ್ ಬಾದ್‍ಶಾ ಔರಂಗಜೇಬ್ ಸೋಮನಾಥ ದೇವಾಲಯವನ್ನ ಸಂಪೂರ್ಣವಾಗಿ ಕೆಡವಿದ್ದನು. ಸ್ವತಂತ್ರ ಬಳಿಕ 1947ರಲ್ಲಿ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭ ಭಾಯಿ ಪಟೇಲ್ ದೇವಸ್ಥಾನದ ನಿರ್ಮಾಣಕ್ಕೆ ಆದೇಶ ನೀಡಿದ್ದರು. 1951ರಲ್ಲಿ ಹೊಸ ಸೋಮನಾಥ ದೇಗುಲ ನಿರ್ಮಾಣವಾಗಿತ್ತು.

  • ನನ್ನೊಳಗೊಬ್ಬ ಹುಡುಗನಿದ್ದ- ಲಿಂಗ ಪರಿವರ್ತನೆಗೊಳಗಾದ ಗಾಯಕಿ

    ನನ್ನೊಳಗೊಬ್ಬ ಹುಡುಗನಿದ್ದ- ಲಿಂಗ ಪರಿವರ್ತನೆಗೊಳಗಾದ ಗಾಯಕಿ

    – ಅವಳು, ಅವನಾಗಿ ಬದಲಾದ ಕಥೆ ಹೇಳಿದ ಸಿಂಗರ್

    ಅಹಮಾದಾಬಾದ್: ಗುಜರಾತಿನ ಗಾಯಕಿ ಲಿಂಗ ಪರಿವರ್ತನೆಗೊಳಗಾಗಿದ್ದು, ಅವಳು ಅವನಾಗಿ ಬದಲಾದ ಕಥೆಯನ್ನ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಭಜನೆ ಗಾಯಕಿ ಅಮಿತಾ ಇದೀಗ ಆದಿತ್ಯನಾಗಿ ಬದಲಾಗಿದ್ದಾರೆ.

    ಹೆಣ್ಣು ಮಗುವಾಗಿ ಹುಟ್ಟಿದ್ದ ಅಮಿತಾ ಕಾಲೇಜಿನ ದಿನಗಳ ವರೆಗೂ ಎಲ್ಲ ಹುಡುಗಿಯರಂತೆ ಇದ್ದರು. ಹಾವ-ಭಾವ, ಬಟ್ಟೆ ಧರಿಸುವಿಕೆ, ನಡವಳಿಕೆ ಹುಡುಗಿಯರಂತಿದ್ದರು. ಗುಜರಾತಿನ ಅಮರೇಲಿ ಜಿಲ್ಲೆಯ ಮೋಟಾ ಮುಂಜಿಯಾಸಾರ್ ಗ್ರಾಮದ ನಿವಾಸಿಯಾಗಿದ್ದು, ತಮ್ಮ ಭಜನೆ ಹಾಡುಗಳಿಂದ ಸ್ಥಳೀಯ ಮಟ್ಟದಲ್ಲಿ ಅಮಿತಾ ಗುರುತಿಸಿಕೊಂಡಿದ್ದರು. ಕಾಲೇಜಿನ ದಿನಗಳಲ್ಲಿ ತಮ್ಮಲ್ಲಾದ ಕೆಲ ಬದಲಾವಣೆಯಿಂದ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ.

    1994 ಜನವರಿ 31 ರಂದು ಜನಿಸಿದ ಅಮಿತಾ ಬಗಸಾರ್ ವ್ಯಾಪ್ತಿಯ ಪುಟ್ಟ ಗ್ರಾಮದಲ್ಲಿ ಜನಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಡುಗಿಯಾಗಿಯೇ ಪೂರ್ಣಗೊಳಿಸಿದ ಅಮಿತಾ ತಮ್ಮ ಹಾಡುಗಳಿಂದ ಸ್ಥಳೀಯವಾಗಿ ಗುರುತಿಸಿಕೊಂಡಿದ್ದರು. ಕಾಲೇಜು ದಿನಗಳಲ್ಲಿ ನಾನು ಹುಟ್ಟಿನಿಂದ ಹುಡುಗಿ ಆಗಿರಬಹುದು. ಆದರೆ ನನ್ನೊಳಗೊಬ್ಬ ಹುಡುಗ ಇರೋದು ನನ್ನ ಅರಿವಿಗೆ ಬಂತು ಎಂದು ಆದಿತ್ಯನಾಗಿ ಬದಲಾದ ಅಮಿತಾ ಹೇಳುತ್ತಾರೆ.

    ಪೋಷಕರ ಬೆಂಬಲ: ಲಿಂಗ ಪರಿವರ್ತನೆಗೆ ಮುಂದಾದ ಅಮಿತಾಳ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದ್ದಾರೆ. ಪೋಷಕರ ಅನುಮತಿ ಮೇರೆಗೆ ಅಮಿತಾ ದೆಹಲಿ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಯ ಒಂದು ವರ್ಷದ ಬಳಿಕ ಅಮಿತಾ ಸಂಪೂರ್ಣವಾಗಿ ತಮ್ಮನ್ನ ಆದಿತ್ಯ ಪಟೇಲ್ ಆಗಿ ಬದಲಿಸಿಕೊಂಡು ಎಲ್ಲರಂತೆ ಜೀವನ ನಡೆಸುತ್ತಿದ್ದಾರೆ.

    ಸಮಾಜದಲ್ಲಿ ಕೆಲವು ಟೀಕೆಗಳನ್ನು ಎದುರಿಸಬೇಕು ಎಂಬುವುದು ನನಗೆ ಗೊತ್ತು. ಸಮಾಜ ಸಹ ನಮ್ಮಂತಹವರನ್ನ ತಾರತಮ್ಯದಿಂದ ನೋಡುವುದನ್ನ ಬಿಡಬೇಕು. ನಮ್ಮನ್ನ ಎಲ್ಲರಂತೆ ಕಾಣಬೇಕಿದೆ. ಲಿಂಗ ಬದಲಾವಣೆಗೆ ಒಳಗಾಗುವರಿಗೆ ಪೋಷಕರು ಬೆಂಬಲ ಬೇಕು ಎಂದು ಆದಿತ್ಯಾ ಹೇಳುತ್ತಾರೆ.

  • ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ 11 ಜನರ ಸಾವು

    ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ 11 ಜನರ ಸಾವು

    – ಮುಂದಿನ ತಿಂಗ್ಳು ಮದ್ವೆ ನಿಶ್ಚಯವಾಗಿದ್ದ ಯುವಕ
    – ದೇವರ ದರ್ಶನಕ್ಕೆ ಹೊರಟಿದ್ದ ಕುಟುಂಬ
    – ನಿದ್ದೆಯಲ್ಲಿದ್ದವರು ಏಳಲೇ ಇಲ್ಲ

    ಗಾಂಧಿನಗರ: ಗುಜರಾತಿನ ವಡೋದರ ಬಳಿ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ 11 ಜನರು ಮೃತಪಟ್ಟಿದ್ದಾರೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಇಡೀ ಕುಟುಂಬವೊಂದು ನಾಶವಾಗಿದೆ. ಮೂವರು ಪುರುಷರು ಸೇರಿದಂತೆ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತ ಸುರೇಶ್ ಮದುವೆ ಮುಂದಿನ ತಿಂಗಳು ನಿಶ್ಚಯವಾಗಿತ್ತು. ಸೂ ರತ್ ನಗರದ ನಿವಾಸಿಯಾಗಿದ್ದ ಕುಟುಂಬ ವಾಸಿಸುತ್ತಿದ್ದ ಸೊಸೈಟಿಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

    ಆಸ್ಪತ್ರೆಗೆ ಬರುವ ಮೊದಲೇ ಒಂಬತ್ತು ಜನರು ಸಾವನ್ನಪ್ಪಿದ್ದರು. ಇನ್ನಿಬ್ಬರಿಗೆ ಚಿಕಿತ್ಸೆ ನೀಡುವಷ್ಟರಲ್ಲಿ ಪ್ರಾಣ ಬಿಟ್ಟಿದ್ದರು. ಐವರು ಮಹಿಳೆಯರು, ನಾಲ್ಕು ಜನ ಪುರಷರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 11 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೆಚ್ಚು ರಕ್ತಸ್ರಾವವಾದ ಹಿನ್ನೆಲೆ ಎಲ್ಲರ ಸಾವು ಆಗಿದೆ ಎಂದು ವಡೋದರ ಸಯ್ಯಾಜಿ ಆಸ್ಪತ್ರೆಯ ವೈದ್ಯ ರಂಜನ್ ಮಾಹಿತಿ ನೀಡಿದ್ದಾರೆ.

    ಮಲಗಿದ್ದವರು ಏಳಲೇ ಇಲ್ಲ: ವಡೋದರ ಜಿಲ್ಲೆಯ ವಾಘೋಡಿಯಾ ಚೌಕ್ ಬಳಿಯಲ್ಲಿ ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಅಪಘಾತ ಸಂಭವಿಸಿದೆ. ಮೃತರು ಮಿನಿ ಟ್ರಕ್ ಬಾಡಿಗೆ ಪಡೆದು ಸೂರತ್ ನಿಂದ ಪಾಗಾಗಢದ ಮೂಲಕ ಡಾಕೋರ್ ದೇವಸ್ಥಾನಕ್ಕೆ ತೆರಳುತ್ತಿದ್ದರು. ಅಪಘಾತದ ವೇಳೆ ಪ್ರಯಾಣಿಕರೆಲ್ಲರೂ ನಿದ್ರೆಯಲ್ಲಿದ್ದರು. ಘಟನೆಯ ಬಳಿಕ ಪ್ರಯಾಣಿಕರು ಚೀರಾಟ ಕೇಳಿದ ಸ್ಥಳೀಯರು ಸಹಾಯಕ್ಕೆ ಆಗಮಿಸಿ ಅಂಬುಲೆನ್ಸ್ ಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಜನರು ವಾಹನದಲ್ಲಿ ಸಿಲುಕಿದ್ದವರು ರಕ್ಷಣಾ ಕಾರ್ಯಕ್ಕೆ ಮುಂದಾಗಿ ಪ್ರಾಣ ಉಳಿಸಲು ಹರಸಾಹಸಪಟ್ಟಿದ್ದರು.

    ವಾಘೋಡಿಯಾ ಚೌಕ್ ಬಳಿ ದೇವಸ್ಥಾನಕ್ಕೆ ಹೊರಟ್ಟಿದ್ದ ಮಿನಿ ಟ್ರಕ್ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 11 ಜನರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿಯ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಗುಜರಾತ ಸಿಎಂ ವಿಜಯ್ ರೂಪಾನಿ ಸೂಚಿಸಿದ್ದಾರೆ.

  • ಸ್ಪಾ ಉದ್ಯೋಗಿಯ ಕೊಲೆ ರಹಸ್ಯ ಬೇಧಿಸಿದ ಪೊಲೀಸರು

    ಸ್ಪಾ ಉದ್ಯೋಗಿಯ ಕೊಲೆ ರಹಸ್ಯ ಬೇಧಿಸಿದ ಪೊಲೀಸರು

    -ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಶವ
    -ಕೂಲ್ ಡ್ರಿಂಕ್ಸ್ ನಲ್ಲಿ ಮದ್ಯ ಮಿಕ್ಸ್

    ಗಾಂಧಿನಗರ: ಥೈಲ್ಯಾಂಡ್ ಮೂಲದ ಸ್ಪಾ ಉದ್ಯೋಗಿಯ ಕೊಲೆ ರಹಸ್ಯ ಬೇಧಿಸುವಲ್ಲಿ ಗುಜರಾತಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಸೆಪ್ಟೆಂಬರ್ 6ರಂದು ಯುವತಿ ವನಿಡಾ ಬುಸೊರ್ನ್ ಮೃತದೇಹ ಆಕೆಯ ಮನೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವನಿಡಾ ವಾಸವಾಗಿದ್ದ ಕೋಣೆಯಲ್ಲಿ ಮದ್ಯದ ಪಾರ್ಟಿ ಬಳಿಕ ಕೊಲೆ ನಡೆದಿತ್ತು.

    ಮಗದಲ್ಲಾದಲ್ಲಿ ವಾಸವಾಗಿದ್ದ ವನಿಡಾ ಉರ್ಫ್ ಮಿಮಿ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮನೆಯಲ್ಲಿ ವನಿಡಾ ಮೊಬೈಲ್, ಹಣ ಮತ್ತು ಆಕೆಯ ಚಿನ್ನಾಭರಣಗಳು ಮಾಯವಾಗಿದ್ದವು. ಈ ಹಿನ್ನೆಲೆ ಪೊಲೀಸರು ಕಳ್ಳತನ ಮತ್ತು ಕೊಲೆ ಎಂದು ತನಿಖೆಯ ಆರಂಭದಲ್ಲಿ ಅನುಮಾನ ವ್ಯಕ್ತಪಡಿಸಿದ್ದರು.

    ಕೋಣೆಯಲ್ಲಿ ಕೇವಲ ಒಂದು ಗಾದಿ ಮಾತ್ರ ಬೆಂಕಿಗಾಹುತಿಯಾಗಿತ್ತು. ಬೆಂಕಿಯಲ್ಲಿ ವನಿಡಾ ಸುಟ್ಟು ಕರಕಲಾಗಿದ್ದರೂ ಯಾವುದೇ ರೀತಿ ಸದ್ದು ನೆರಹೊರೆಯವರಿಗೆ ಕೇಳಿಸಿರಲಿಲ್ಲ. ಘಟನಾ ಸ್ಥಳದಲ್ಲಿ ಸಿಕ್ಕ ಕೂಲ್ ಡ್ರಿಂಕ್ಸ್ ಬಾಟಲ್ ಗಳಲ್ಲಿ ಮದ್ಯದ ವಾಸನೆ ಬರುತ್ತಿತ್ತು. ಈ ಎಲ್ಲ ಅಂಶಗಳು ಇದೊಂದು ಪೂರ್ವಯೋಜಿಯ ಕೊಲೆ ಎಂಬುವುದು ಪೊಲೀಸರಿಗೆ ಬಹುತೇಕ ಖಚಿತವಾಗಿತ್ತು. ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ವನಿಡಾ ವಾಸವಾಗಿದ್ದ ಕಟ್ಟಡದ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದಿದ್ರು. ಇದನ್ನೂ ಓದಿ: ನಾನು ಬದುಕುಳಿಯಲು ಕೊಲೆ ಮಾಡಿದೆ – ಮಲಗಿದ್ದ ಪತ್ನಿ, ಅತ್ತೆಯ ಕತ್ತು ಕೊಯ್ದ

    ಸಿಸಿಟಿವಿ ದೃಶ್ಯದ ಆಧಾರದಲ್ಲಿ ವನಿಡಾ ಗೆಳತಿ, ಸ್ಪಾದಲ್ಲಿ ಕೆಲಸ ಮಾಡಿಕೊಂಡಿದ್ದ ಆಯಿದಾ ಮೇಲೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿತ್ತು. ಕೊಲೆಯಾದ ದಿನ ರಾತ್ರಿ ಸುಮಾರು 3.30ಕ್ಕೆ ವನಿಡಾ ಮನೆಯಿಂದ ಆಯಿದಾ ಕೈಯಲ್ಲಿ ಕಪ್ಪು ಪಾಲಿಥಿನ್ ಬ್ಯಾಗ್ ಹಿಡಿದು ಹೊರ ಬಂದಿದ್ದಳು. ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆಯಾದ ದಿನ ತಾನು ವನಿಡಾ ಮನೆಯಲ್ಲಿದ್ದೆ ಎಂದು ಆಯಿದಾ ತಪ್ಪೊಪ್ಪಿಕೊಂಡಿದ್ದಾಳೆ.

    ತಡರಾತ್ರಿ ಎಲ್ಲಿಗಾದರೂ ಹೋಗಲು ವನಿಡಾ ಮತ್ತು ಆಯಿದಾ ಮೊದಲೇ ಆಟೋ ಬುಕ್ ಮಾಡಿಕೊಳ್ಳುತ್ತಿದ್ದರು. ಕೊಲೆಯಾದ ದಿನವೂ ಆಯಿದಾ ಇದೇ ಆಟೋ ಬಳಸಿಕೊಂಡಿದ್ದಳು. ಮನೆಯಿಂದ ಹೊರ ತಂದಿದ್ದ ಬ್ಯಾಗ್ ಆಟೋ ಚಾಲಕನಿಗೆ ನೀಡಿ ಎಸೆಯುವಂತೆ ಹೇಳಿದ್ದಳು. ಆದ್ರೆ ಚಾಲಕ ಮರೆತು ಅದನ್ನು ಆಟೋದಲ್ಲಿಯ ಇಟ್ಟುಕೊಂಡಿದ್ದನು. ಪತ್ತೆಯಾದ ಬ್ಯಾಗ್ ನಲ್ಲಿ ಹಾಸಿಗೆ ಮತ್ತು ಒಂದು ಮೊಬೈಲ್ ಸಿಕ್ಕಿದೆ. ಬಂಧಿತ ಆಯಿದಾ ವಿರುದ್ಧ ಮಲೇಶಿಯಾ ಮತ್ತು ಜಪಾನ್ ನಲ್ಲಿ ಕೆಲ ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಕಾಲ್ ರಿಸೀವ್ ಮಾಡ್ತಿದ್ದಂತೆ ಬೇರೆಯವರ ಪತ್ನಿಗೆ ಖಾಸಗಿ ಅಂಗ ತೋರಿಸಿದ

    ವನಿಡಾ ಮನೆಯಲ್ಲಿ ತಡರಾತ್ರಿವರೆಗೂ ಮದ್ಯದ ಪಾರ್ಟಿ ಮಾಡಲಾಗಿದೆ. ಈ ವೇಳೆ ಆಯಿದಾ ಗಾಂಜಾ ಸಹ ಸೇವನೆ ಮಾಡಿದ್ದಾಳೆ. ಹಣ ಮತ್ತು ಚಿನ್ನದಾಸೆಗಾಗಿ ವನಿಡಾಳನ್ನು ಕೊಲೆ ಮಾಡಿ, ಪೊಲೀಸರು ದಿಕ್ಕಿ ತಪ್ಪಿಸಲಿ ಹಲವು ಪ್ಲಾನ್ ಮಾಡಿಕೊಂಡಿದ್ದಳು. ಪೊಲೀಸ್ ತನಿಖೆ ವೇಳೆ ಆಯಿದಾಳ ಎಲ್ಲ ಕಳ್ಳಾಟಗಳು ಬಯಲಾಗಿದ್ದು, ಆರೋಪಿ ಕಂಬಿ ಎಣಿಸುತ್ತಿದ್ದಾಳೆ. ಇದನ್ನೂ ಓದಿ: ಮದ್ಯ ಸೇವಿಸಿ ಯುವತಿಗೂ ಕುಡಿಸಿದ್ರು – ಅಪ್ರಾಪ್ತ ಸೇರಿ ಮೂವರಿಂದ ಗ್ಯಾಂಗ್‍ರೇಪ್

  • ಗ್ರಾಮಸ್ಥರ ಹೃದಯ ಗೆದ್ದ ವಜ್ರದ ವ್ಯಾಪಾರಿ ಸಾವಜಿ ಡೊಲಕಿಯಾ

    ಗ್ರಾಮಸ್ಥರ ಹೃದಯ ಗೆದ್ದ ವಜ್ರದ ವ್ಯಾಪಾರಿ ಸಾವಜಿ ಡೊಲಕಿಯಾ

    -ಉದ್ಯೋಗಿಗಳಿಗೆ ಕಾರ್, ಫ್ಲ್ಯಾಟ್ ಗಿಫ್ಟ್ ನೀಡ್ತಿದ್ದ ಉದ್ಯಮಿ

    ಸೂರತ್: ತನ್ನ ಉದ್ಯೋಗಿಗಳಿಗೆ ಕಾರ್, ಫ್ಲ್ಯಾಟ್ ನೀಡುವ ಮೂಲಕ ಹೆಸರುವಾಸಿಯಾಗಿರುವ ವಜ್ರದ ವ್ಯಾಪಾರಿ ಸಾವಜಿ ಡೊಲಕಿಯಾ ತಮ್ಮ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸಾವಿರಾರು ಕೋಟಿ ಗಳಿಸಿದ್ದರೂ ತಮ್ಮ ಸ್ವಂತ ಊರನ್ನು ಮರೆಯದ ಉದ್ಯಮಿ ಡೊಲಕಿಯಾ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಅಮ್ರೇಲಿ ಜಿಲ್ಲೆಯ ಧೂದಲ್ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದು, ಕೆರೆ ನಿರ್ಮಾಣಗಳ ಕಾರ್ಯ ನಡೆದಿದೆ.

    ತಾಯಿಯ ಪ್ರೇರಣೆ: ಮಹಿಳೆಯರಿಗೆ ವಜ್ರ, ವಜ್ರಾಭರಣಗಳು ಅಂದ್ರೆ ಹೆಚ್ಚು ಇಷ್ಟಪಡುತ್ತಾರೆ. ಆದ್ರೆ ಡೊಲಕಿಯಾ ಅವರ ತಾಯಿ ಎಂದೂ ವಜ್ರಗಳನ್ನು ಇಷ್ಟಪಟ್ಟಿಲ್ಲ. ತನ್ನೂರಿನ ಜನರಿಗೆ ಕುಡಿಯುವ ನೀರು ಸಿಗಬೇಕು ಎಂಬ ಆಸೆಯನ್ನು ಹೊಂದಿದ್ದರು. ತಾಯಿಯ ಆಸೆಯನ್ನು ಪೂರ್ಣಗೊಳಿಸಲು ಡೊಲಕಿಯಾ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಬಾಲ್ಯದಿಂದ ತಾಯಿ ಮೋಡಗಳಲ್ಲಿ ಮಳೆ ಸುರಿಸುವಂತೆ ಪ್ರಾರ್ಥಿಸುತ್ತಿರೋದನ್ನು ಡೊಲಕಿಯಾ ನೋಡಿದ್ದರು.

    ಆರು ಸಾವಿರ ಕೋಟಿಯ ಮಾಲೀಕರಾಗಿರುವ ಡೊಲಕಿಯಾ ಅವರು ಬರಗಾಲ ಹಿನ್ನೆಲೆಯಲ್ಲಿ ಗ್ರಾಮ ತೊರೆದು ಸೂರತ್ ಸೇರಿಕೊಂಡಿದ್ದರು. ಅಂದಿನಿಂದ ಸತತ ಪರಿಶ್ರಮದಿಂದ ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿದ್ದಾರೆ.

    ತಾಯಿಯ ಆಸೆಯನ್ನು ಪೂರ್ಣಗೊಳಿಸುವ ಸಮಯ ಬಂದಿದ್ದರಿಂದ ಗ್ರಾಮಕ್ಕೆ ಹಿಂದಿರುಗಿದ್ದೇನೆ. 15 ವರ್ಷದ ಹಿಂದೆ ಗುಜರಾತಿನ ಜಲ ಸಮಸ್ಯೆ ನಿವಾರಣೆಗಾಗಿ ಟ್ರಸ್ಟ್ ಒಂದಕ್ಕೆ 33 ಲಕ್ಷ ರೂ. ದೇಣಿಗೆ ನೀಡಿದ್ದೆ. ಈ ರೀತಿ ದೇಣಿಗೆ ನೀಡುವದರಿಂದ ನೀರಿನ ಸಮಸ್ಯೆ ಪರಿಹಾರ ಸಾಧ್ಯವಿಲ್ಲ ಎಂಬುವುದು ನನಗೆ ಮನವರಿಕೆ ಆಯ್ತು. ಬರಗಾಲ ಪೀಡಿತ ಪ್ರದೇಶದಲ್ಲಿ ಕೆರೆಗಳ ನಿರ್ಮಾಣ ಮತ್ತು ಪುನಶ್ಚೇತನಕ್ಕೆ ಮುಂದಾದೆ. ಆರಂಭದಲ್ಲಿ ನನ್ನೂರಿನ ಗ್ರಾಮಕ್ಕೆ 5 ಕೋಟಿ ರೂ. ವೆಚ್ಚದಲ್ಲಿ 5 ಕೆರಗಳ ನಿರ್ಮಾಣ ಮಾಡಲಾಯ್ತು. ಕೆರೆಗಳ ನಿರ್ಮಾಣದಿಂದ ಗ್ರಾಮದ ಬಹುತೇಕ ಸಮಸ್ಯೆಗಳು ದೂರು ಆಯ್ತು. ಆರಂಭದಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ, ಇದೀಗ ನಮ್ಮ ಕೆಲಸದ ಪ್ರತಿಫಲ ನಮ್ಮ ಮುಂದಿದೆ ಎಂದು ಸಾವಜಿ ಡೊಲಕಿಯಾ ಸಂತೋಷ ವ್ಯಕ್ತಪಡಿಸುತ್ತಾರೆ.

    ಸಾವಜಿ ಡೊಲಕಿಯಾ ಫೌಂಡೇಶನ್ ಅಡಿಯಲ್ಲಿ ಇನ್ನುಳಿದ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ದಿಟ್ಟ ಹೆಜ್ಜೆಯನ್ನು ಇರಿಸಿದ್ದಾರೆ. ಫೌಂಡೇಶನ್ ವತಿಯಿಂದ ಆಯ್ದ ಗ್ರಾಮಗಳಿಗೆ ತಲಾ 25 ಲಕ್ಷ ರೂ. ನೀಡಲಾಗಿದೆ. ಗ್ರಾಮಸ್ಥರು ಸಹ ಸ್ವಇಚ್ಛೆಯಿಂದ ಕೆಲಸದಲ್ಲಿ ಭಾಗಿಯಾಗುತ್ತಿರೋದು ಖುಷಿ ತಂದಿದೆ. 45 ಕೆರೆಗಳ ನಿರ್ಮಾಣದಲ್ಲಿ 2,500ಕ್ಕೂ ಹೆಚ್ಚು ಜನರು ನಮ್ಮ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎಂದು ಡೊಲಕಿಯಾ ಹೇಳುತ್ತಾರೆ.

    ತಮ್ಮ ಗ್ರಾಮದಲ್ಲಿ ಸೇರಿದಂತೆ ಒಟ್ಟು 45 ಕೆರೆಗಳ ನಿರ್ಮಾಣ ಕಾರ್ಯವನ್ನು ಡೊಲಕಿಯಾ ಪೂರ್ಣಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ 70 ಕೆರೆಗಳ ನಿರ್ಮಾಣದ ಗುರಿಯನ್ನು ಡೊಲಕಿಯಾ ಹೊಂದಿದ್ದಾರೆ.

    ಹರಿಕೃಷ್ಣ ಎಕ್ಸ್ ಪೋರ್ಟ್  ಕಂಪನಿಯ ಮಾಲೀಕರಾಗಿರುವ ಸಾವಜಿ ಡೊಲಕಿಯಾ 2018ರ ದೀಪಾವಳಿ ಸಂದರ್ಭದಲ್ಲಿ ಬೋನಸ್ ರೂಪದಲ್ಲಿ ತಮ್ಮ ನೌಕರರಿಗೆ 600 ಕಾರು ಮತ್ತು 900 ಜನರಿಗೆ ಎಫ್‍ಡಿ ನೀಡಿದ್ದರು. ವಿಶೇಷ ಬೋನಸ್ ಪಡೆಯಲು 1500 ಜನರನ್ನು ಆಯ್ಕೆ ಮಾಡಲಾಗಿತ್ತು. ಇದಕ್ಕಾಗಿ ಬರೋಬ್ಬರಿ 50 ಕೋಟಿ ರೂ. ವ್ಯಯಿಸಲಾಗಿತ್ತು.

    600 ನೌಕರರಿಗೆ ಮಾರುತಿ ಸುಜುಕಿ ಸೆಲೆರಿಯೋ ಕಾರ್ ಬೋನಸ್ ರೂಪದಲ್ಲಿ ಲಭ್ಯವಾಗಿತ್ತು. ಹಬ್ಬದ ದಿನದಂದು 6,000 ಸಾವಿರ ಜನರಿಗೆ ಔತಣಕೂಟವನ್ನು ಸಹ ಏರ್ಪಡಿಸಲಾಗಿತ್ತು. 2018ರ ವೇಳೆ ಕಂಪನಿಯಲ್ಲಿ 25 ವರ್ಷ ಪೂರೈಸಿದ್ದ ದೆಹಲಿ ಶಾಖೆಯ ಮೂವರಿಗೆ ಬೆಂಜ್ ಕಾರ್ ಉಡುಗೊರೆಯಾಗಿ ನೀಡಿದ್ದರು. 2011ರಿಂದಲೂ ಡೊಲಕಿಯಾವರು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಪ್ರಯುಕ್ತ ವಿಶೇಷ ಬೋನಸ್ ನೀಡಲು ಪ್ರಾರಂಭಿಸಿದ್ದಾರೆ. 2015ರಲ್ಲಿ ಹಬ್ಬದ ಪ್ರಯುಕ್ತ 491 ಕಾರ್ ಮತ್ತು 200 ಫ್ಲ್ಯಾಟ್‍ಗಳನ್ನು ಗಿಫ್ಟ್ ನೀಡಿದ್ದರು. 2014ರಲ್ಲಿ ಕಂಪನಿಯ ನೌಕರರಿಗೆ 50 ಕೋಟಿ ರೂ. ಹಂಚಿದ್ದರು.

  • 9 ರೂ.ಗಾಗಿ 15 ಲಕ್ಷ ಕಳೆದುಕೊಂಡ ಕಂಡಕ್ಟರ್

    9 ರೂ.ಗಾಗಿ 15 ಲಕ್ಷ ಕಳೆದುಕೊಂಡ ಕಂಡಕ್ಟರ್

    ಅಹಮದಾಬಾದ್: ಗುಜರಾತ್ ಸಾರಿಗೆ ಸಂಸ್ಥೆಯ ನಿರ್ವಾಹಕನೋರ್ವ 9 ರೂ. ಆಸೆಗಾಗಿ ಅಂದಾಜು 15 ಲಕ್ಷ ರೂ. ಕಳೆದುಕೊಂಡಿದ್ದಾನೆ. ಪ್ರಯಾಣಿಕನಿಂದ 9 ರೂ.ಪಡೆದು ಟಿಕೆಟ್ ನೀಡದ್ದಕ್ಕೆ ಆತನ ಸಂಬಳದಿಂದ 15 ಲಕ್ಷ ರೂ.ಗೆ ಕತ್ತರಿ ಹಾಕಲಾಗಿದೆ.

    ಏನಿದು ಪ್ರಕರಣ?
    ನಿರ್ವಾಹಕ ಚಂದ್ರಕಾಂತ್ ಪಟೇಲ್ ವಿರುದ್ಧ ಪ್ರಯಾಣಿಕರಿಗೆ ಟಿಕೆಟ್ ನೀಡದ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಗುಜರಾತಿನ ಸಾರಿಗೆ ಇಲಾಖೆ ವಿಶೇಷ ಸಮಿತಿಯನ್ನು ರಚಿಸಿತ್ತು. ಸುದೀರ್ಘ ವಿಚಾರಣೆ ನಡೆಸಿದ ಸಮಿತಿ ಚಂದ್ರಕಾಂತ್ ದೋಷಿ ಎಂದು ಹೇಳಿತ್ತು. ದೋಷಿ ಎಂದು ಸಾಬೀತಾದ ಬೆನ್ನಲ್ಲೇ ಸಾರಿಗೆ ನಿಗಮ ಮಂಡಳಿ ಆತನ ಸಂಬಳದ ಎರಡು ಏರಿಕೆಯನ್ನು ಕಡಿತಗೊಳಿಸಿತ್ತು. ಸಾರಿಗೆ ಸಂಸ್ಥೆ ನಿರ್ಧರಿಸುವ ಸಂಬಳಕ್ಕೆ ಚಂದ್ರಕಾಂತ್ ತನ್ನ ವೃತ್ತಿಯನ್ನು ಪೂರ್ಣಗೊಳಿಸಬೇಕೆಂದು ಆದೇಶಿಸಿತ್ತು.

    2003 ಜುಲೈ 5ರಂದು ಚಂದ್ರಕಾಂತ್ ಪಟೇಲ್ ಕಾರ್ಯನಿರ್ವಹಿಸುತ್ತಿದ್ದ ಬಸ್ ಮಾರ್ಗ ಮಧ್ಯೆ ಪರಿಶೀಲನೆಗೆ ಒಳಪಟ್ಟಿತ್ತು. ಓರ್ವ ಪ್ರಯಾಣಿಕನಿಂದ 9 ರೂ. ಪಡೆದಿದ್ದ ಚಂದ್ರಕಾಂತ್ ಪಟೇಲ್ ಟಿಕೆಟ್ ನೀಡಿರಲಿಲ್ಲ. ಚಂದ್ರಕಾಂತ್ ವಿರುದ್ಧ ಸಾರಿಗೆ ನಿಗಮದಲ್ಲಿ ಪ್ರಕರಣ ದಾಖಲಾಗಿತ್ತು.

    ಹೈಕೋರ್ಟ್ ಮೆಟ್ಟಿಲೇರಿದ ಚಂದ್ರಕಾಂತ್:
    ದೂರು ದಾಖಲಾದ ಒಂದು ತಿಂಗಳ ಬಳಿಕ ಚಂದ್ರಕಾಂತ್ ದೋಷಿ ಎಂದು ನಿಗಮ ಮಂಡಳಿ ಆದೇಶಿಸಿ ಆತನ ಸಂಬಳದ ಕೆಲ ಮೊತ್ತವನ್ನು ಕಡಿತಗೊಳಿಸಿತ್ತು. ಸಾರಿಗೆ ನಿಗಮದ ತೀರ್ಪು ಪ್ರಶ್ನಿಸಿ ಔದ್ಯೋಗಿಕ ನ್ಯಾಯಧೀಕರಣ ಮತ್ತು ಹೈ ಕೋರ್ಟ್ ಮೊರೆ ಹೋಗಿದ್ದ ಚಂದ್ರಕಾಂತ್ ಗೆ ಅಲ್ಲಿಯೂ ದೋಷಿ ಎಂದು ಪರಿಗಣಿಸಲಾಗಿತ್ತು. ಹಾಗೆ ಗುಜರಾತಿನ ಸಾರಿಗೆ ಸಂಸ್ಥೆಯ ತೀರ್ಪನ್ನು ಎತ್ತಿ ಹಿಡಿದು, ಚಂದ್ರಕಾಂತ್ ಸಲ್ಲಿಸಿದ ಎರಡೂ ಕಡೆ ಅರ್ಜಿ ವಜಾಗೊಂಡಿತ್ತು.

    ಈ ಕುರಿತು ಪ್ರತಿಕ್ರಿಯಿಸಿರುವ ಚಂದ್ರಕಾಂತ್ ಪರ ವಕೀಲರು, ಇಷ್ಟು ಚಿಕ್ಕ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆ. ಸಾರಿಗೆ ಸಂಸ್ಥೆ ನೀಡಿರುವ ಶಿಕ್ಷೆಯಿಂದ ನನ್ನ ಕಕ್ಷಿದಾರರ ವೃತ್ತಿ ಜೀವನದಲ್ಲಿ 15 ಲಕ್ಷ ರೂ. ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

    ನಿರ್ವಾಹಕ ಚಂದ್ರಕಾಂತ್ ಹಣದ ವಿಚಾರಕ್ಕೆ ಸಂಬಂಧಿಸಿದಂತೆ 35 ಪ್ರಕರಣಗಳನ್ನು ಎದುರಿಸಿದ್ದಾರೆ. ಹಲವು ಬಾರಿ ಸಾಮಾನ್ಯ ಶಿಕ್ಷೆ ಮತ್ತು ಸಣ್ಣ ಪ್ರಮಾಣದ ದಂಡವನ್ನು ವಿಧಿಸಲಾಗಿತ್ತು ಎಂದು ಸಾರಿಗೆ ಸಂಸ್ಥೆ ಪರ ವಕೀಲರು ಪ್ರತಿಕ್ರಿಯಿಸಿದ್ದಾರೆ.

  • ನಿಮ್ಮ ಮತಗಳೇ ನಮಗೆ ಆಯುಧ – ಮೋದಿ ತವರಲ್ಲಿ ಪ್ರಿಯಾಂಕ ಭಾಷಣ

    ನಿಮ್ಮ ಮತಗಳೇ ನಮಗೆ ಆಯುಧ – ಮೋದಿ ತವರಲ್ಲಿ ಪ್ರಿಯಾಂಕ ಭಾಷಣ

    – ನಿಮ್ಮ ಭವಿಷ್ಯಕ್ಕಾಗಿ ಮತ ಚಲಾವಣೆ ಮಾಡಿ
    – 2 ಕೋಟಿ ಉದ್ಯೋಗ ಎಲ್ಲಿ?

    ಅಹಮದಬಾದ್: ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮೊದಲ ಬಾರಿಗೆ ಪ್ರಧಾನಿ ಮೋದಿ ತವರಲ್ಲಿಯೇ ತಮ್ಮ ಮೊದಲ ರಾಜಕೀಯ ಭಾಷಣ ಮಾಡಿದ್ದಾರೆ. ಗುಜರಾತಿನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಿಯಾಂಕ ಗಾಂಧಿ ಬಿಜೆಪಿ ಸರ್ಕಾರದ ಆಡಳಿತ ವೈಖರಿಯನ್ನು ಪ್ರಶ್ನೆ ಮಾಡಿ ಟೀಕಿಸಿದರು.

    ನನ್ನ ಮನಸ್ಸಿನಲ್ಲಿರುವ ಎರಡು ಮಾತುಗಳನ್ನು ನಿಮ್ಮ ಮುಂದೆ ಇರಿಸಲು ಇಚ್ಛಿಸುತ್ತೇನೆ. ಮೊದಲ ಬಾರಿಗೆ ನಾನು ಗುಜರಾತಿಗೆ ಬಂದಿದ್ದು, ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಕಂಡು ಭಾವುಕಳಾಗಿದ್ದೇನೆ. ಸಬರಮತಿ ಆಶ್ರಮದಲ್ಲಿಯ ಮರಗಳ ಕೆಳಗೆ ಕುಳಿತು ಭಜನೆ ಕೇಳಿದ್ರೆ, ದೇಶಕ್ಕಾಗಿ ಮಡಿದ ವೀರ ದೇಶಭಕ್ತರು ನೆನಪಾಗುತ್ತಾರೆ. ಭಾರತ ಪ್ರೀತಿ, ಮಾನವೀಯತೆ, ಸದ್ಭಾವನೆಗಳ ಆಧಾರದಲ್ಲಿ ನಿರ್ಮಾಣವಾಗಿದೆ. ಆದ್ರೆ ಇಂದು ನಮ್ಮ ದೇಶದ ಸ್ಥಿತಿ ನೋಡಿದ್ರೆ ನನಗೆ ಬೇಸರವಾಗುತ್ತಿದೆ. ನೀವು ಜಾಗರೂಕರಾದರೆ ಇದಕ್ಕಿಂತ ದೊಡ್ಡ ದೇಶಭಕ್ತಿ ಯಾವುದು ಇಲ್ಲ. ನಿಮ್ಮ ಮತ ಒಂದು ಆಯುಧವಾಗಿದ್ದು, ಅದು ನಿಮ್ಮನ್ನು ಸದೃಢರನ್ನಾಗಿ ಮಾಡುತ್ತದೆ. ನಿಮ್ಮ ಬಳಿಯಿರುವ ಮತ ಎಂಬ ಆಯುಧ ಯಾರಿಗೂ ನೋವುಂಟು ಮಾಡಲ್ಲ. ಈ ಬಾರಿ ನೀವು ಅತ್ಯಂತ ಜಾಗೂರಕರಾಗಿ ನಿಮ್ಮ ಮತವನ್ನು ಚಲಾಯಿಸಬೇಕು. ಕೇವಲ ಓರ್ವ ವ್ಯಕ್ತಿಯನ್ನು ನೀವು ಆಯ್ಕೆ ಮಾಡಲ್ಲ. ನಿಮ್ಮ ಭವಿಷ್ಯಕ್ಕಾಗಿ ಮತ ಹಾಕಬೇಕಾಗಿದ್ದು, ನಿಮ್ಮ ಬಳಿಯಿರುವ ಆಯುಧವನ್ನು ಬೇರೆಯವರ ಪಾಲಾಗದಂತೆ ಕಾಯ್ದುಕೊಳ್ಳಬೇಕಿದೆ.

    ಬಿಜೆಪಿಗೆ ಮೂರು ಪ್ರಶ್ನೆ:
    ಕೆಲವರು ನಿಮ್ಮ ಮುಂದೆ ದೊಡ್ಡ ಭಾಷಣಗಳನ್ನು ಮಾಡುತ್ತಾರೆ. ಇನ್ನೊಮ್ಮೆ ನಿಮ್ಮ ಮುಂದೆ ಮತ ಕೇಳಲು ಬಂದಾಗ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದನ್ನು ತೋರಿಸಿ ಎಂದು ಧೈರ್ಯವಾಗಿ ಕೇಳಿ. ನಿಮ್ಮೆಲ್ಲರ ಖಾತೆಗೆ ಬರುತ್ತೆ ಅಂತಾ 15 ಲಕ್ಷ ರೂ. ಎಲ್ಲಿ ಹೋಯ್ತು ಎಂದು ಪ್ರಶ್ನೆ ಮಾಡಿ. ಮಹಿಳಾ ಸುರಕ್ಷತೆಗೆ ಮಾತನಾಡುವ ಕೆಲವರು ಕಳೆದ ಐದು ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂಬುದನ್ನು ನೀವೆಲ್ಲರು ಕೇಳಬೇಕೆಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.

    ಮುಂಬರುವ ಎರಡು ತಿಂಗಳಲ್ಲಿ ಹಲವು ವಿಚಾರಗಳ ಜೊತೆ ನಿಮ್ಮ ಮುಂದೆ ಬರುತ್ತಾರೆ. ನೀವು ಯಾವುದೇ ನಿರ್ಣಯ ತೆಗೆದುಕೊಂಡರೂ ಯೋಚಿಸಿ, ಚರ್ಚಿಸಿ ತೆಗೆದುಕೊಳ್ಳಬೇಕಿದೆ. ಯಾರನ್ನು ನೀವು ಆಯ್ಕೆ ಮಾಡಬೇಕು ಎಂಬ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಮತದಾನ ಮಾಡುವ ಮೂಲಕ ನಿಮ್ಮ ದೇಶಭಕ್ತಿಯನ್ನು ತೋರಿಸಿ. ಸ್ವತಂತ್ರಕ್ಕಾಗಿ ಗಾಂಧೀಜಿ ಇಲ್ಲಿಂದಲೇ ಮುಂದಾಗಿದ್ದರು. ಹಾಗಾಗಿ ನಾವು ಸಹ ಇಲ್ಲಿಂದಲೇ ಧ್ವನಿ ಎತ್ತುತ್ತಿದ್ದೇವೆ. ನೀವು ಈ ದೇಶವನ್ನು ನಿರ್ಮಾಣ ಮಾಡಿದ್ದು, ಬೇರೆ ಯಾರದ್ದು ಅಲ್ಲ. ನಿಮ್ಮ ದೇಶಕ್ಕಾಗಿ ನೀವು ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಹೇಳಿದರು.

    ಪ್ರಿಯಾಂಕ ಗಾಂಧಿ ಅವರ ಭಾಷಣ ಯುವ ಸಮುದಾಯ, ಮಹಿಳೆ ರಕ್ಷಣೆ ಮತ್ತು ರೈತರ ಅಭಿವೃದ್ಧಿಯ ವಿಷಯಗಳನ್ನು ಒಳಗೊಂಡಿತ್ತು. ಈ ವಿಷಯಗಳ ಹೊರತಾಗಿ ಬೇರೆ ಯಾವುದರ ಬಗ್ಗೆ ಪ್ರಿಯಾಂಕ ಗಾಂಧಿ ಹೆಚ್ಚು ಮಾತನಾಡಲಿಲ್ಲ.

    ಜನವರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಪ್ರಿಯಾಂಕರನ್ನು ಪೂರ್ವ ಉತ್ತರ ಪ್ರದೇಶದ ಕಾರ್ಯ ಸಮಿತಿಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಇಂದು ಚುನಾವಣೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕಾರ್ಯಕಾರಿಣಿ ಸಭೆ ನಡೆಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಸಿಎಂ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ

    ಮಾಜಿ ಸಿಎಂ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ

    ಅಹಮದಾಬಾದ್: ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್‍ರ ಕಾಲುಗಳನ್ನು ಮುಟ್ಟಿ ನಮಸ್ಕರಿಸುವ ಮೂಲಕ ಪ್ರಧಾನಿ ಮೋದಿ ಆಶೀರ್ವಾದ ಪಡೆದಿದ್ದಾರೆ.

    ಗುಜರಾತನ ಅಡಲಜಿಯಲ್ಲಿ ಶಿಕ್ಷಣ ಭವನದ ಶಿಲಾನ್ಯಾಸ ಮಾಡಲು ಮೋದಿ ಅವರು ವೇದಿಕೆ ಮೇಲೆ ಬರುತ್ತಿದ್ದಂತೆ ರಾಜಕೀಯ ಗುರು ಕೇಶುಭಾಯಿ ಪಟೇಲರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು. ಕೂಡಲೇ ಪಟೇಲರು ಪ್ರಧಾನಿಗಳನ್ನು ಅಪ್ಪಿಕೊಂಡು ಕುಶಲೋಪರಿ ವಿಚಾರಿಸಿದರು.

    2001ರಲ್ಲಿ ಕೇಶುಭಾಯಿ ಪಟೇಲರು ತಮ್ಮ ಸಿಎಂ ಸ್ಥಾನವನ್ನು ಮೋದಿಯವರಿಗೆ ಬಿಟ್ಟುಕೊಟ್ಟಿದ್ದರು. 2001ರ ಭೂಕಂಪದ ಬಳಿಕ ಸರ್ಕಾರದ ಕ್ಷಮತೆ ಮತ್ತು ಕಾರ್ಯವೈಖರಿಯ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆ ಮಾಡಿದ್ದವು. 2001ರಲ್ಲಿ ಕೇಶುಭಾಯಿ ಪಟೇಲ್ ಗುಜರಾತಿಗೆ ಮಾರಕ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮೋದಿ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದರು. ಅಂದಿನ ಘಟನೆಯ ಬಳಿಕ ಮೋದಿ ಮತ್ತು ಕೇಶುಭಾಯಿ ಅವರ ನಡುವೆ ಎಲ್ಲವೂ ಸರಿ ಇರಲಿಲ್ಲ ಎಂದು ಹೇಳಲಾಗುತ್ತದೆ. ಆದ್ರೂ ಪ್ರಧಾನಿಗಳು ಮಾತ್ರ ಕೇಶುಭಾಯಿ ಅವರನ್ನು ರಾಜಕೀಯ ಗುರುಗಳು ಎಂದು ಭಾವಿಸುತ್ತಾರೆ.

    ಕೇಶುಭಾಯಿ 1980ರಿಂದ 2012ರವರೆಗೆ ಬಿಜೆಪಿಯ ನಾಯಕರಾಗಿದ್ದರು. 1995ರಲ್ಲಿ ಕೇಶುಭಾಯಿ ನೇತೃತ್ವದಲ್ಲಿಯೇ ಚುನಾವಣೆಯನ್ನು ಎದುರಿಸಿ ಸರ್ಕಾರ ರಚಿಸಿದ್ದರು. 2012ರಲ್ಲಿ ಬಿಜೆಪಿಯಿಂದ ಹೊರಬಂದ ಕೇಶುಭಾಯಿ ‘ಗುಜರಾತ್ ಪರಿವರ್ತನ ಪಕ್ಷ’ ಕಟ್ಟಿದ್ದರು. ಇದಾದ ಬಳಿಕ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. 2014ರಲ್ಲಿ ಗುಜರಾತ್ ಪರಿವರ್ತನ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿದ್ದರು. 2017ರಲ್ಲಿ ಕೇಶುಭಾಯಿ ಪುತ್ರ ಪ್ರವೀಣ್ ನಿಧನದ ಬಳಿಕ ಪ್ರಧಾನಿ ಮೋದಿ ಖುದ್ದು ಆಗಮಿಸಿ ತಮ್ಮ ರಾಜಕೀಯ ಗುರುವಿಗೆ ಸಾಂತ್ವಾನ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv