Tag: ಗುಂಪು

  • ಮರಳು ಮಾರಾಟ ಮಾಡುವ ನೆಪದಲ್ಲಿ ಡೀಸೆಲ್ ಕದಿಯುತ್ತಿದ್ದ ಖದೀಮರು ಅರೆಸ್ಟ್

    ಮರಳು ಮಾರಾಟ ಮಾಡುವ ನೆಪದಲ್ಲಿ ಡೀಸೆಲ್ ಕದಿಯುತ್ತಿದ್ದ ಖದೀಮರು ಅರೆಸ್ಟ್

    ಮುಂಬೈ: ಡೀಸೆಲ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಮೇಲೆ ದಾಳಿ ಮಾಡಿ 14 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯ ಕನ್ನಡ ತಾಲೂಕಿನಲ್ಲಿ ನಡೆದಿದೆ.

    ಅಂತಾರಾಜ್ಯ ಡಿಸೇಲ್ ಗ್ಯಾಂಗ್‍ನ ಮೇಲೆ ಪೊಲೀಸರು ದಾಳಿ ನಡೆಸಿದ್ದು, 14 ಮಂದಿಯನ್ನು ಬಂಧಿಸಲಾಗಿದೆ. ದಾಳಿ ವೇಳೆ 4 ಟ್ರಕ್, ಡೀಸೆಲ್ ತುಂಬಿದ್ದ 40 ಕಂಟೇನರ್ ಹಾಗೂ 98 ಲಕ್ಷ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಕ್ಷದಾ ಪಾಟೀಲ್ ಹೇಳಿದ್ದಾರೆ.

    ಫೆ16ರಂದು ಚಿತೆಗಾಂವ್ ಪೆಟ್ರೋಲ್ ಬಂಕ್‍ನಿಂದ ಕೆಲವು ದಿನಗಳ ಹಿಂದೆ 3,480 ಲೀಟರ್ ಡೀಸೆಲ್ ಕಳ್ಳತನವಾಗಿದೆ ಎಂದು ಚಿಕಲಠಾಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಯಲ್ಲಿ ನಾವು ತನಿಖೆ ನಡೆಸುತ್ತಿದ್ದೆವು. ಕೆಲವು ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿ ಕಳ್ಳರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಡೀಸೆಲ್ ಕದಿಯುವ ಕಳ್ಳರ ಗ್ಯಾಂಗ್‍ನ ಸದಸ್ಯರು ಮರಳು ಮಾರಾಟ ಮಾಡುವ ಸೊಗಿನಲ್ಲಿ ಬಂದು ಕದಿಯುತ್ತಿದ್ದರು. ಗುಜರಾತ್‍ನ ತಾಪಿ ಜಿಲ್ಲೆಯಲ್ಲಿ ಟ್ರಕ್‍ಗಳ ಮೂಲಕ ಮರಳನ್ನು ತುಂಬಿಸಿಕೊಂಡು ಉಸ್ಮಾನಾಬಾದ್‍ನಲ್ಲಿ ಮಾರಾಟ ಮಾಡುತ್ತಿದ್ದರು. ಈ ವೇಳೆ ಪೆಟ್ರೋಲ್ ಬಂಕ್‍ಗಳ ಬಳಿ ತಂಗುತ್ತಿದ್ದರು. ಬಳಿಕ ರಾತ್ರಿ ವೇಳೆ ಬಂಕ್‍ನಲ್ಲಿನ ಹ್ಯಾಂಡ್ ಪಂಪ್ ಮೂಲಕ ಡೀಸೆಲ್ ಕದಿಯುತ್ತಿದ್ದರು. ತಾವು ಉಪಯೋಗಿಸಿ, ಉಳಿದ ಡೀಸೆಲ್ ಕಡಿಮೆ ಬೆಲೆಗೆ ಇತರ ಟ್ರಕ್ ಚಾಲಕರಿಗೆ ಮಾರುತ್ತಿದ್ದರು ಎಂದು ತಿಳಿದು ಬಂದಿದೆ.

    ವಿಚಾರಣೆ ವೇಳೆ 36 ಕಡೆಗಳಲ್ಲಿ ಈ ರೀತಿಯ ಡೀಸೆಲ್ ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೆ ಈ ಗ್ಯಾಂಗ್ ಐದು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿರುವುದು ತಿಳಿದು ಬಂದಿದೆ. ಇದೇ ರೀತಿಯ ಪ್ರಕರಣಗಳು ಗುಜರಾತ್, ಕರ್ನಾಟಕ ಹಾಗೂ ಮಹಾರಾಷ್ಟ್ರದ ಹಲವೆಡೆ ನಡೆದಿದ್ದು ದೂರುಗಳು ದಾಖಲಾಗಿವೆ.

  • ಪಾಕ್‍ನಲ್ಲಿ ಮತ್ತೆ ದೇವಾಲಯ ಧ್ವಂಸ- 600 ಹಿಂದೂ ಕುಟುಂಬಗಳ ಮೇಲೆ ದಾಳಿಗೆ ಯತ್ನ

    ಪಾಕ್‍ನಲ್ಲಿ ಮತ್ತೆ ದೇವಾಲಯ ಧ್ವಂಸ- 600 ಹಿಂದೂ ಕುಟುಂಬಗಳ ಮೇಲೆ ದಾಳಿಗೆ ಯತ್ನ

    ನವದೆಹಲಿ: ಪಾಕಿಸ್ತಾನದಲ್ಲಿ ಮತ್ತೆ ಹಿಂದೂ ದೇವಸ್ಥಾನವನ್ನು ಧ್ವಂಸ ಮಾಡಲಾಗಿದ್ದು, ಉದ್ರಿಕ್ತ ಗುಂಪು ದೇವಸ್ಥಾನದ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದೆ.

    ಪಾಕಿಸ್ತಾನದ ಸಿಂಧ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ದೇವಸ್ಥಾನ ಧ್ವಂಸಗೊಳಿಸಿದ್ದು ಮಾತ್ರವಲ್ಲದೆ 300ಕ್ಕೂ ಹೆಚ್ಚು ಹಿಂದೂ ಕುಟುಂಬಗಳ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಶತಮಾನಗಳಷ್ಟು ಹಳೆಯದಾದ ಪ್ರದೇಶಕ್ಕೆ ತೆರಳುವುದನ್ನು ನಿಲ್ಲಿಸಿದರು. ಶೀತಲ್ ದಾಸ್ ಕಾಂಪೌಂಡ್ ನಲ್ಲಿ ಭಾನುವಾರ ಘಟನೆ ನಡೆದಿದ್ದು, 300ಕ್ಕೂ ಹೆಚ್ಚು ಹಿಂದೂ ಹಾಗೂ 30 ಮುಸ್ಲಿಂ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ನಿವಾಸಿಗಳ ಪ್ರಕಾರ, ಹಿಂದೂ ಕುಟುಂಬಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ ನೂರಾರು ಮಂದಿ ಕಾಂಪೌಂಡ್ ಬಳಿ ಜಮಾಯಿಸಿದ್ದರು ಎಂದು ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಕಾಂಪೌಂಡ್ ಆಸುಪಾಸಿನಲ್ಲಿರುವ ಮುಸ್ಲಿಂ ಕುಟುಂಬದವರು ತಕ್ಷಣವೇ ಆಗಮಿಸಿ ಗೇಟ್ ಬಳಿ ಬಂದು ಗುಂಪನ್ನು ತಡೆದಿದ್ದಾರೆ.

    60 ಹಿಂದೂ ಕುಟುಂಬಗಳ ಸ್ಥಳಾಂತರ:
    ಘಟನೆ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದರು ಎಂದು ಇಲ್ಲಿನ ಹಿಂದೂ ವ್ಯಕ್ತಿ ತಿಳಿಸಿದ್ದಾರೆ. ಅಲ್ಲದೆ ಮುಸ್ಲಿಂ ಗುಂಪೊಂದು ಹಿಂಗೂ ಕುಟುಂಬಗಳು ವಾಸವಿರುವ ಕಾಂಪೌಂಡ್ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಪೊಲೀಸರು ಅದನ್ನು ತಡೆದರು. ದೇವಸ್ಥಾನದಲ್ಲಿ ಮೂರು ವಿಗ್ರಹಗಳನ್ನು ನಾಶ ಮಾಡಿದ್ದಾರೆ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

    ಹಿಂದೂ ಸಮುದಾಯದವರ ಮೇಲೆ ಅಲ್ಲಿನ ಸ್ಥಳೀಯ ಮುಸ್ಲಿಂ ಗುಂಪು ದಾಳಿ ನಡೆಸಲು ಮುಂದಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಸಿಂಧ್ ಪ್ರದೇಶದಲ್ಲಿ ಮೂರನೇ ದಾಳಿ
    ಮುಸ್ಲಿಂ ಕುಟುಂಬಗಳು ತಡೆಯದಿದ್ದರೆ ದಾಳಿಯನ್ನು ಎದುರಿಸುವುದು ತುಂಬಾ ಕಷ್ಟವಿತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಳಿಕ 60ಕ್ಕೂ ಹೆಚ್ಚು ಹಿಂದೂ ಕುಟುಂಬಗಳನ್ನು ನಗರದ ವಿವಿಧ ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾರೆ. ಪಾಕಿಸ್ತಾನದಲ್ಲಿನ 22 ಕೋಟಿ ಜನ ಸಂಖ್ಯೆ ಪೈಕಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದು, ಹಿಂದೂಗಳು ಕೇವಲ ಶೇ.2ರಷ್ಟು ಇದ್ದಾರೆ. ಇದರಲ್ಲಿ ಬಹುತೇಕರು ಸಿಂಧ್ ಪ್ರಾಂತ್ಯದಲ್ಲೇ ಜೀವನ ಕಟ್ಟಿಕೊಂಡಿದ್ದಾರೆ. ಸಿಂಧ್ ನಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ಮೂರನೇ ದಾಳಿ ಇದಾಗಿದೆ.

    ಹಿಂದೂಗಳ ಮೇಲಿನ ಇಂತಹ ದಾಳಿಗಳು ಅಲ್ಪಸಂಖ್ಯಾತರ ರಕ್ಷಣೆ ಕುರಿತು ಪಾಕಿಸ್ತಾನದ ಕ್ರಮವನ್ನು ಬಹಿರಂಗಪಡಿಸುತ್ತವೆ. ಇಲ್ಲಿನ ಮುಸ್ಲಿಮರು ಹಿಂದೂಗಳ ಮೇಲೆ ನಿರಂತರವಾಗಿ ಆಕ್ರಮಣ ಮಾಡುತ್ತಿದ್ದಾರೆ.

  • ವಿವಾಹಿತೆ ಜೊತೆ ಅಕ್ರಮ ಸಂಬಂಧ- ಬಲವಂತವಾಗಿ ಮೂತ್ರ ಕುಡಿಸಿ, ವಿಡಿಯೋ ರೆಕಾರ್ಡ್

    ವಿವಾಹಿತೆ ಜೊತೆ ಅಕ್ರಮ ಸಂಬಂಧ- ಬಲವಂತವಾಗಿ ಮೂತ್ರ ಕುಡಿಸಿ, ವಿಡಿಯೋ ರೆಕಾರ್ಡ್

    – ಸಿಎಂ, ಪೊಲೀಸರಿಗೆ ವಿಡಿಯೋ ಟ್ಯಾಗ್

    ಜೈಪುರ: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಸ್ಥಳೀಯ ಗುಂಪೊಂದು ಯುವಕನಿಗೆ ಬಲವಂತವಾಗಿ ಮೂತ್ರ ಕುಡಿಸಿ, ಥಳಿಸಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ 8 ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಯುವಕನನ್ನು ಸಿರೋಹಿ ಜಿಲ್ಲೆಯ ಭೇವ್ ಪಲಾಡಿ ಗ್ರಾಮದ ನಿವಾಸಿ ಕಲುರಾಮ್ (24) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಗ್ರಾಮಸ್ಥರು ಶಿಕ್ಷೆಯನ್ನು ವಿಧಿಸಿದ್ದಾರೆ. ಅದರಂತೆಯೇ ಶಿಕ್ಷೆಯ ಭಾಗವಾಗಿ ಜನಸಮೂಹದ ಮುಂದೆ ಮೂತ್ರ ಮತ್ತು ಶೂನಿಂದ ನೀರನ್ನು ಕುಡಿಯುವಂತೆ ಒತ್ತಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸುಮೇರ್ ಪುರ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ತನ್ನ ಗ್ರಾಮದ 8 ಮಂದಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾನೆ. ಎಫ್‍ಐಆರ್ ಪ್ರಕಾರ, ಜೂನ್ 11ರಂದು ನಾನು ನನ್ನ ಚಿಕ್ಕಪ್ಪನನ್ನು ಭೇವ್‍ನಿಂದ ಭರೋಂಡಾ ಗ್ರಾಮಕ್ಕೆ ಬಿಡಲು ಹೋಗಿದ್ದೆ. ಈ ವೇಳೆ ಪುರುಷರ ಗುಂಪೊಂದು ನನ್ನನ್ನು ಅಪಹರಿಸಿ ಬಲವಂತವಾಗಿ ಮದ್ಯದ ಬಾಟಲಿನಲ್ಲಿದ್ದ ಮೂತ್ರವನ್ನು ಕುಡಿಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಆರೋಪಿಗಳು ನನಗೆ ಥಳಿಸಿದ್ದು, ಅದನ್ನು ವಿಡಿಯೋ ಕೂಡ ಮಾಡಿದ್ದಾರೆ ಎಂದು ಕಲುರಾಮ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

    ಎಸ್‍ಪಿ ರಾಹುಲ್ ಕೊಟೆಕಿ ಮಾತನಾಡಿ, ಯುವಕ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು. ಈ ವಿಚಾರ ತಿಳಿದ ಗ್ರಾಮದ ಕೆಲ ಜನರು ಕೋಪಗೊಂಡು ಆತನನ್ನು ಅಪಹರಿಸಿ ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದಾರೆ. ನಾವು ಈ ಕುರಿತು ಎಫ್‍ಐಆರ್ ದಾಖಲಿಸಿದ್ದೇವೆ. 8 ಪ್ರಮುಖ ಆರೋಪಿಗಳಲ್ಲಿ 6 ಮಂದಿಯನ್ನು ಬಂಧಿಸಿದ್ದೇವೆ. ಸದ್ಯಕ್ಕೆ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಕಲುರಾಮ್‍ಗೆ ಬಲವಂತವಾಗಿ ಮೂತ್ರ ಕುಡಿಯುವ ವಿಡಿಯೊಗಳನ್ನು ಯುವರಾಜ್ ರಾಕೇಶ್ ಎಂಬಾತ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಈ ವಿಡಿಯೋವನ್ನು ಸಿಎಂ ಅಶೋಕ್ ಗೆಹ್ಲೋಟ್ ಮತ್ತು ರಾಜಸ್ಥಾನ ಪೊಲೀಸ್ , ಅನೇಕ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿರೋಹಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ತನಿಖೆ ಮಾಡುವಂತೆ ರಾಜಸ್ಥಾನ ಗೃಹ ಇಲಾಖೆ ಆದೇಶಿಸಿದೆ.

  • ನಾಯಿ ತಂದ ಎಡವಟ್ಟು- ಎರಡು ಗುಂಪುಗಳ ನಡುವೆ ಮಾರಾಮಾರಿ

    ನಾಯಿ ತಂದ ಎಡವಟ್ಟು- ಎರಡು ಗುಂಪುಗಳ ನಡುವೆ ಮಾರಾಮಾರಿ

    ಬೆಂಗಳೂರು: ನಾಯಿಯಿಂದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಬೆಂಗಳೂರಿನ ರಾಜಾರಾಜೇಶ್ವರಿನಗರ ಸಾಯಿ ಪೆಟ್ರೋಲ್ ಬಂಕ್‍ನಲ್ಲಿ ನಡೆದಿದೆ.

    ಖಾಸಗಿ ಕ್ಲಬ್‍ವೊಂದರಲ್ಲಿ ಟೆನ್ನಿಸ್ ಕೋಚ್ ಆಗಿ ಕೆಲಸ ಮಾಡುವ ದೀಪಕ್ ಮತ್ತು ಸ್ನೇಹಿತ ಗಗನ್ ರಾತ್ರಿ ಪೆಟ್ರೋಲ್ ಹಾಕಿಸಿಕೊಳ್ಳಲು ಬೈಕ್‍ನಲ್ಲಿ ಹೋಗಿದ್ದರು. ಈ ವೇಳೆ ಪೆಟ್ರೋಲ್ ಬಂಕ್‍ಗೆ ಹೋಗುವ ದಾರಿಯಲ್ಲಿ ಬೀದಿ ನಾಯಿಯೊಂದು ರಸ್ತೆಗೆ ಅಡ್ಡಲಾಗಿ ಮಲಗಿತ್ತು.

    ನಾಯಿಯನ್ನು ನೋಡಿದ ದೀಪಕ್ ಅದನ್ನು ಪಕ್ಕಕ್ಕೆ ಹೋಗುವಂತೆ ಗದರುತ್ತಿದ್ದ ವೇಳೆ ಅದೇ ದಾರಿಯಲ್ಲಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಾಯಿ ಮೇಲೆ ಯಾಕೆ ಗಲಾಟೆ ಮಾಡ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನು ಕೇಳಿದ ದೀಪಕ್ ನಾವು ಗಲಾಟೆ ಮಾಡುತ್ತಿಲ್ಲ ನಾಯಿಯನ್ನು ಪಕ್ಕಕ್ಕೆ ಹೋಗುವಂತೆ ಬೆದರಿಸುತ್ತಿದ್ದೇವೆ ಎಂದು ಹೇಳಿದ್ದರು.

    ಇದೇ ವಿಚಾರಕ್ಕೆ ನಾಲ್ವರ ಮಧ್ಯೆ ಗಲಾಟೆ ಆಗಿ ಕಾರಿನಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಟೆನ್ನಿಸ್ ಕೋಚ್ ದೀಪಕ್ ಮತ್ತು ಸ್ನೇಹಿತ ಗಗನ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೊಳಾದ ಗಗನ್ ತಮ್ಮ ಸ್ನೇಹಿತರಾದ ಮಧು, ಶಾನು ಎಂಬವರಿಗೆ ಫೋನ್ ಮಾಡಿ ಸಹಾಯಕ್ಕೆ ಕರೆದಿದ್ದರು.

    ಗಲಾಟೆ ಸ್ಥಳಕ್ಕೆ ಬಂದ ಮಧು, ಶಾನು ಕೂಡ ಕಾರಿನಲ್ಲಿದ್ದ ಇಬ್ಬರು ಅಪರಿಚಿತರ ಮೇಲೆ ಮರದ ದಿಮ್ಮಿಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೀದಿ ನಾಯಿಯ ಕ್ಷಲ್ಲಕ ವಿಚಾರಕ್ಕೆ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಬಗ್ಗೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

  • ಹುಡುಗಿಯರನ್ನು ಚುಡಾಯಿಸಬೇಡಿ, ಇದು ಹಿಂದೂ ರಾಷ್ಟ್ರ ಎಂದ ಯುವಕನಿಗೆ ಥಳಿಸಿದ ಗುಂಪು

    ಹುಡುಗಿಯರನ್ನು ಚುಡಾಯಿಸಬೇಡಿ, ಇದು ಹಿಂದೂ ರಾಷ್ಟ್ರ ಎಂದ ಯುವಕನಿಗೆ ಥಳಿಸಿದ ಗುಂಪು

    ಮಂಗಳೂರು: ಹುಡುಗಿಯರನ್ನು ಚುಡಾಯಿಸಬೇಡಿ, ಇದು ಹಿಂದೂ ರಾಷ್ಟ್ರ ಎಂದು ತಿಳುವಳಿಕೆ ಹೇಳಿದ ಯುವಕನನ್ನು ಗುಂಪೊಂದು ಅಟ್ಟಾಡಿಸಿ ಹೊಡೆದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಫೋರಂ ಫಿಜಾ ಮಾಲ್‍ನಲ್ಲಿ ಘಟನೆ ನಡೆದಿದ್ದು, ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.

    ನಗರದ ಫೋರಂ ಫಿಜಾ ಮಾಲ್‍ಗೆ ಬಂದಿದ್ದ ಕಾಲೇಜಿನ ವಿದ್ಯಾರ್ಥಿಗಳು ಹುಡುಗಿಯರನ್ನು ಚುಡಾಯಿಸುತ್ತಿದ್ದರು. ಇದನ್ನು ನೋಡಿ ಯುವಕ, ಹೀಗೆ ಮಾಡುವುದು ಸರಿಯಲ್ಲ ಎಂದು ಬುದ್ಧಿ ಹೇಳಿದ್ದಾನೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಏಕಾಏಕಿ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಯುವಕನನ್ನು ಸುತ್ತುವರಿದು, ಈಗ ಹೇಳು ನೋಡೋಣ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.

    ವಿದ್ಯಾರ್ಥಿಗಳು ಸುತ್ತುವರಿದು ಭಯ ಮೂಡಿಸುತ್ತಿದ್ದಂತೆ ಯುವಕ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ ಇದಕ್ಕೆ ಅವಕಾಶ ಕೊಡದ ಗುಂಪು ಹಿಡಿದು ಮತ್ತೆ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಪಿನಲ್ಲಿದ್ದ ಯುವಕನೊಬ್ಬ ಈ ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಲ್ಲೆ ನಡೆಸಿದ ಯುವಕರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

  • ಗುಂಪುಗಳ ನಡ್ವೆ ಗಲಾಟೆ- ಮನೆಗಳ ಮೇಲೆ ಕಲ್ಲು ತೂರಾಟ

    ಗುಂಪುಗಳ ನಡ್ವೆ ಗಲಾಟೆ- ಮನೆಗಳ ಮೇಲೆ ಕಲ್ಲು ತೂರಾಟ

    ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗಿದ್ದು ಈ ವೇಳೆ ಪರಸ್ಪರ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ಶುಕ್ರವಾರ ಸಂಜೆಯಿಂದ ಆರಂಭವಾದ ಘರ್ಷಣೆ ಕೊನೆಯಲ್ಲಿ ಕಲ್ಲು ತೂರಾಟ ಹಂತಕ್ಕೆ ತಲುಪಿದೆ. ಎರಡು ವರ್ಗದ ಯುವಕರ ನಡುವೆ ಜಗಳ ನಡೆದಿದೆ ಎನ್ನಲಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಕೆಲವರು ದಲಿತರ ಹಟ್ಟಿಗೆ ನುಗ್ಗಿ ಕಲ್ಲು ತೂರಾಟ ನಡೆಸಿದ್ದಾರೆ.

    ಘಟನೆಯಲ್ಲಿ ಎರಡೂ ಕಡೆಯ ತಲಾ ಮೂವರಿಗೆ ಗಾಯಗಳಾಗಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳಿಗೆ ಸಂತೆಬೆನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಬಗ್ಗೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಎರಡು ಕಡೆಯಿಂದಲೂ ದೂರು ದಾಖಲಾಗಿದೆ.

  • ಕ್ಷುಲ್ಲಕ ಕಾರಣಕ್ಕೆ 2 ಕೋಮಿನ ನಡುವೆ ಗಲಾಟೆ- ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿ ಪ್ರಹಾರ

    ಕ್ಷುಲ್ಲಕ ಕಾರಣಕ್ಕೆ 2 ಕೋಮಿನ ನಡುವೆ ಗಲಾಟೆ- ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿ ಪ್ರಹಾರ

    ಗದಗ: ಕ್ಷುಲ್ಲಕ ಕಾರಣದಿಂದ 2 ಕೋಮಿನ ನಡುವೆ ಗಲಾಟೆ ನಡೆದ ಘಟನೆ ಗದಗ ನಗರದ ಜುಮ್ಮಾ ಮಸೀದಿ ಬಳಿ ನಡೆದಿದೆ.

    ದಿನಾಂಕ 25ರಂದು ನಗರದ ಮುನ್ಸಿಪಲ್ ಕಾಲೇಜ್ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀರಾಮಸೇನೆಯಿಂದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಜನಾಗ್ರಹ ಸಭೆ ನಡೆಯಲಿದೆ. ಗುರುವಾರ ಕಾರ್ಯಕ್ರಮ ಪ್ರಚಾರ ನಡೆಯುತ್ತಿತ್ತು. ಆಗ ಕಿಡಿಗೇಡಿಗಳು ಆಟೋ ವಾಹನವನ್ನ ಅಡ್ಡಗಟ್ಟಿ ಬಳಿಕ ಚಾಲಕನಿಗೆ ಥಳಿಸಿ ವಾಹನಕ್ಕೆ ಕಟ್ಟಿದ್ದ ಧ್ವಜ ಹರಿದು ಪರಾರಿಯಾಗಿದ್ದಾರೆ.

    ಇದು 2 ಕೋಮುಗಳ ನಡುವಿನ ಗಲಾಟೆಗೆ ಕಾರಣವಾಗಿದೆ. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಪಟ್ಟಿದ್ದಾರೆ. ಆದರೂ ಏನು ಪ್ರಯೋಜವಾಗಿಲ್ಲ. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಗುಂಪು ಚದುರಿಸಲು ಪೊಲೀಸರು ಲಘುಲಾಠಿ ಚಾರ್ಜ್ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹುಡುಗಿಗಾಗಿ ಬಾರ್ ನಲ್ಲಿ 2 ಗುಂಪುಗಳ ಮಾರಾಮಾರಿ

    ಹುಡುಗಿಗಾಗಿ ಬಾರ್ ನಲ್ಲಿ 2 ಗುಂಪುಗಳ ಮಾರಾಮಾರಿ

    ಬೆಂಗಳೂರು: ಹುಡುಗಿಯ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ಆಗಿರುವ ಪ್ರಕರಣವೊಂದು ಬೆಂಗಳೂರಿನ ಕಲ್ಯಾಣ ನಗರದ ಹೆಚ್‍ಆರ್ ಬಿಆರ್ ಲೇಔಟ್ ನಲ್ಲಿರುವ ಎಜೆಂಟ್ ಜಾಕ್ಸ್ ಬಿಯರ್ ಬಾರ್‍ನಲ್ಲಿ ನಡೆದಿದೆ.

    ಪಬ್ ನಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಹುಡುಗಿಯ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ಆಗಿದೆ ಎಂದು ಶಂಕಿಸಲಾಗುತ್ತಿದೆ. ಗಲಾಟೆ ವಿಷಯ ತಿಳಿದು ಸ್ಥಳಕ್ಕೆ ಬಾಣಸವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪೊಲೀಸರು ಬಾರ್ ಗೆ ಎಂಟ್ರಿ ಆಗುತ್ತಿದ್ದಂತೆ ಎರಡು ಗುಂಪುಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಸದ್ಯ ಈ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಅಲ್ಲದೇ ಪೊಲೀಸರು ಕೂಡ ಯಾವುದೇ ದೂರನ್ನು ದಾಖಲಿಸಿಕೊಂಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪುಗಳ ನಡುವೆ ಮಾತಿನ ಚಕಮಕಿ- ಪೊಲೀಸರಿಂದ ಲಾಠಿ ಚಾರ್ಜ್

    ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪುಗಳ ನಡುವೆ ಮಾತಿನ ಚಕಮಕಿ- ಪೊಲೀಸರಿಂದ ಲಾಠಿ ಚಾರ್ಜ್

    ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕರ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೆಲ ಸಮಯ ಬಿಗುವಿನ ವಾತಾವರಣ ಉಂಟಾಗಿ ಪೆÇಲೀಸರು ಲಘು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಣ ಮಾಡಿದ ಘಟನೆ ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಬಳಿ ತಡರಾತ್ರಿ ನಡೆದಿದೆ.

    ಗಣೇಶ ಪ್ರತಿಷ್ಠಾನೆ ಸಲುವಾಗಿ ಡಿಜೆ ಹಚ್ಚಿ ಭಾರೀ ಮೆರವಣಿಗೆ ಮಾಡಲಾಗುತಿತ್ತು. ಒಬ್ಬ ಯುವಕ ಇನ್ನೊಬ್ಬ ಯುವಕನಿಗೆ ಕಾಲು ತಾಗಿದೆ. ಇದೇ ನೆಪದಿಂದ ಕಾಲು ತಾಗಿದ ಯುವಕ ಸ್ನೇಹಿತರು ಕಾಲು ತಾಗಿಸಿದ ಯುವಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.

    ಆಗ ಇಬ್ಬರೂ ಯುವಕರ ಕಡೆಯವರು ಪರಸ್ಪರ ಮಾತಿನ ಚಕಮಕಿ ನಡೆದು ಗಲಾಟೆ ಉಂಟಾಗಿ ಕೆಲ ಸಮಯ ವಾತಾವರಣ ತ್ವೇಷಮಯದಿಂದ ಕೂಡಿತ್ತು. ತಕ್ಷಣ ಪೊಲೀಸರು ಮಧ್ಯೆ ಪ್ರವೇಶ ಮಾಡಿ ಲಘು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ತಹಬದಿಗೆ ತಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನ ಗ್ರಾಮಕ್ಕೆ ಉಡುಪಿ ಯುವಕರ ಸಹಾಯಹಸ್ತ

    ಕೊಡಗಿನ ಗ್ರಾಮಕ್ಕೆ ಉಡುಪಿ ಯುವಕರ ಸಹಾಯಹಸ್ತ

    ಉಡುಪಿ: ರುದ್ರ ಸ್ವರೂಪಿ ಪ್ರವಾಹದಿಂದ ಕೊಡಗು ಜಿಲ್ಲೆ ತತ್ತರಿಸಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಜೊತೆ ಖಾಸಗಿ ಸಂಸ್ಥೆಗಳು- ಜನ ಸಾಮಾನ್ಯರು ಕೊಡಗಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಇತ್ತ ಉಡುಪಿ ಜಿಲ್ಲೆಯ ಮುದರಂಗಡಿಯ ಗೆಳೆಯರ ಬಳಗ, ಕಾಂಗ್ರೆಸ್ ಸ್ಥಾನೀಯ ಸಮಿತಿ ಸದಸ್ಯರು ಕೊಡಗಿನ ನೆರೆಪೀಡಿತ ಸ್ಥಳಗಳಿಗೆ ಹೋಗಿ ಸಹಾಯ ಹಸ್ತ ಚಾಚಿದ್ದಾರೆ.

    ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಅಕ್ಕಿ, ಬಟ್ಟೆ ಸೀರೆ ಹಾಗೂ ದಿನಬಳಕೆಯ ಸಾಮಾಗ್ರಿಗಳನ್ನು ನೇರವಾಗಿ ಪ್ರವಾಹ ಸಂತ್ರಸ್ತರಿಗೆ ವಿತರಿಸಿದ್ದಾರೆ. ಉಡುಪಿಯ ಎಂಟು ಮಂದಿಯ ತಂಡ ಎರಡು ಟ್ರಕ್ ಗಳಲ್ಲಿ ತೆರಳಿ ಅತಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿರುವ ಸೋಮವಾರ ಪೇಟೆ ತಾಲೂಕಿನ ಮಾದಾಪುರ, ಕಿರಗಂದೂರು, ಬಿಳಗೇರಿ, ನಂದಿಘಾಟಿ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ.

    ಇಲ್ಲಿನ ಸಂತ್ರಸ್ತರಿಗೆ ಸರ್ಕಾರದ ಪ್ರತಿನಿಧಿಗಳಿಂದ ಯಾವುದೇ ಆಹಾರ ಸಾಮಾಗ್ರಿಗಳು ಮತ್ತು ವೈದ್ಯಕೀಯ ಚಿಕಿತ್ಸೆ ಇದೂವರೆಗೂ ದೊರಕಿಲ್ಲವಂತೆ. ಆ ಭಾಗಗಳಿಗೆ ಸರ್ಕಾರದ ಸಹಾಯ ತಲುಪಬೇಕಿದೆ. ಮಿಲಿಟರಿಯವರು ಈ ಭಾಗಕ್ಕೆ ಭೇಟಿ ನೀಡಿಲ್ಲ. ಸುಮಾರು 45 ಸಂತ್ರಸ್ತರು ನಾಲ್ಕು ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಯುವಕರು ತಿಳಿಸಿದರು.

    ತಂಡದ ಸದಸ್ಯ ಯೋಗೀಶ್ ಆಚಾರ್ಯ ಇನ್ನಾ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ ವಸ್ತು, ಆಹಾರ ಪದಾರ್ಥಗಳು ಮನೆಗಳಿಗೆ ತಲುಪದೆ ಅಲ್ಲಲ್ಲಿ ದಾಸ್ತಾನುಗಳಲ್ಲಿ ಉಳಿದಿವೆ. ಕೆಲವು ಕಡೆಗಳಲ್ಲಿ ಅದರ ದುರ್ಬಳಕೆಗಳು ನಡೆಯುತ್ತಿದ್ದು, ನಿಜವಾದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಹಂಚುವ ಕಾರ್ಯವಾಗಬೇಕಿದೆ. ಯಾರೇ ಆಹಾರ ವಸ್ತುಗಳನ್ನು ಕಳುಹಿಸುವವರು ಸಾಧ್ಯವಾದರೆ ಜನರಿಗೆ ನೇರವಾಗಿ ಹಂಚಲು ಪ್ರಯತ್ನ ಮಾಡಿದರೆ ಉತ್ತಮ ಎಂದರು.

    ಸದಸ್ಯರಾದ ಸುಧೀರ್ ರಾವ್ ಸಾಂತೂರು, ನರಸಿಂಹ ಶೆಣೈ, ಅಲಗೇಸ್ ಸನ್ನೊನಿ, ಪ್ರಭಾಕರ ಆಚಾರ್ಯ ಕಟಪಾಡಿ, ಜಯಂತ್ ಮುದರಂಗಡಿ, ಹಾಗೂ ಕಾರ್ಯಕರ್ತರು ಪರಿಹಾರ ವಿತರಣಾ ಕಾರ್ಯದಲ್ಲಿ ಜೊತೆಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv