Tag: ಗುಂಡೂರಾವ್

  • ರಾಜ್ಯದ 11ನೇ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಖಾಸಗಿ ಬಸ್ ಏಜೆಂಟ್ ಆಗಿದ್ರು

    ರಾಜ್ಯದ 11ನೇ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಖಾಸಗಿ ಬಸ್ ಏಜೆಂಟ್ ಆಗಿದ್ರು

    ಮಡಿಕೇರಿ: ಆರ್ ಗುಂಡೂರಾವ್ (R Gundu Rao) ಹಲವು ನಿಟ್ಟಿನಲ್ಲಿ ಗಮನಾರ್ಹ ವ್ಯಕ್ತಿತ್ವದ ಮುಖ್ಯಮಂತ್ರಿಗಳಾಗಿದ್ದವರು. ಗುಂಡೂರಾವ್ ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ 1937ರ ಏಪ್ರಿಲ್ 8ರಂದು ಜನಿಸಿದರು. ತಂದೆ ಕೆ ರಾಮರಾವ್ ಶಾಲಾ ಶಿಕ್ಷಕರಾಗಿದ್ದರು. ತಾಯಿ ಚೆನ್ನಮ್ಮ. ಆರಂಭದಲ್ಲಿ ಖಾಸಗಿ ಬಸ್‌ನ ಏಜೆಂಟ್ (Bus Agent) ಆಗಿದ್ದ ಗುಂಡೂರಾವ್ ಆಗಲೇ ಅನೇಕ ಸಮಾಜಮುಖಿ ಕೆಲಸ ಮಾಡಿ ಜನಪ್ರಿಯ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ಗುಂಡೂರಾವ್ ತಮ್ಮ 24ನೇ ವಯಸ್ಸಿನಲ್ಲೇ ಕುಶಾಲನಗರ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಯುವಪಡೆಯನ್ನು ನಿಲ್ಲಿಸಿ, ಗೆಲ್ಲಿಸಿ, ಪುರಸಭೆಯನ್ನು ಕೈವಶ ಮಾಡಿಕೊಂಡಿದ್ದರು. 9 ವರ್ಷಗಳ ಕಾಲ ಪುರಸಭೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

    ಗುಂಡೂರಾಯರು 1965ರಲ್ಲಿ ಕೊಡಗು ಜಿಲ್ಲೆ ಕಾಂಗ್ರೆಸ್ (Congress) ಸದಸ್ಯರಾದರು. 1972ರಲ್ಲಿ ಸೋಮವಾರಪೇಟೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. 1973ರಲ್ಲಿ ದೇವರಾಜ ಅರಸು ಸಂಪುಟದಲ್ಲಿ ವಾರ್ತೆ, ಕ್ರೀಡೆ ಮತ್ತು ಯುವಜನ ಸೇವಾ ಖಾತೆಯ ರಾಜ್ಯ ಸಚಿವರಾದರು. 1976ರಲ್ಲಿ ವಸತಿ ಮತ್ತು ಯುವಜನ ಸೇವಾಖಾತೆ ಸಚಿವರಾದರು. 1978ರಲ್ಲಿ ಸಾರಿಗೆ ಮತ್ತು ಪ್ರವಾಸೋದ್ಯಮ ಖಾತೆ ಸಚಿವರಾದರು. 1980ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗ ಜನವರಿ 12ರಂದು ಗುಂಡೂರಾವ್ ಅತಿ ಕಿರಿಯ ವಯಸ್ಸಿನ ಮುಖ್ಯಮಂತ್ರಿಗಳಾಗಿ (Chief Minister) ಅಧಿಕಾರ ಸ್ವೀಕಾರ ಮಾಡಿದರು.

    ಗುಂಡೂರಾವ್ ಕಚೇರಿ ಅಥವಾ ವಿಧಾನಸಭೆಯಯಲ್ಲಿ ತಾವು ನೀಡಿದ ಆದೇಶಗಳು ತಕ್ಷಣವೇ ಜಾರಿಗೆ ಬರಬೇಕು ಎಂಬ ಕ್ಷಿಪ್ರ ಮನೋಧರ್ಮಕ್ಕೆ ಹೆಸರಾಗಿದ್ದರು. ಬೆಂಗಳೂರಿನ ಸುಭಾಷ್‌ನಗರದಲ್ಲಿ ವಿಶಾಲವಾದ ಬಸ್ ನಿಲ್ದಾಣ ನಿರ್ಮಾಣವಾಗಿದ್ದು ಇಂತಹ ನಿರ್ಧಾರಗಳಲ್ಲಿ ಒಂದು. ಅನೇಕ ಮೆಡಿಕಲ್ ಕಾಲೇಜುಗಳು ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಮಂಜೂರಾತಿ ಪಡೆದವು. ಕಾವೇರಿ 3ನೇ ಹಂತದ ಕೆಲಸ ಕೇವಲ ಒಂದೂವರೆ ವರ್ಷದಲ್ಲೇ ನಡೆಯಿತು. ಮೈಸೂರಿನ ಕಲಾಮಂದಿರ ನಿರ್ಮಾಣಗೊಂಡಿತು. ಇದನ್ನೂ ಓದಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸರ್ವನಾಶವಾಗುತ್ತಿದೆ: ಅಮಿತ್ ಶಾ

    ಗುಂಡೂರಾವ್ ತಮ್ಮ ಸರ್ಕಾರವನ್ನು ‘ಇಂದಿರಾ ಪೋಷಿತ ನಾಟಕ ಕಂಪನಿ’ ಎಂದು ಕರೆದುಕೊಳ್ಳುತ್ತಿದ್ದರು. ಬೆಂಗಳೂರಿನಲ್ಲಿ ಸಾರ್ವಜನಿಕ ರಂಗದ ಕೈಗಾರಿಕೆಗಳ 77 ದಿನಗಳ ದೀರ್ಘ ಮುಷ್ಕರ, ಗೋಕಾಕ್ ಚಳವಳಿಯಲ್ಲಿ ರಾಜ್‌ಕುಮಾರ್ ಪ್ರವೇಶ ತಂದ ಬಿರುಸು, ನರಗುಂದ ಹಾಗೂ ನವಲಗುಂದಗಳಲ್ಲಿ ನಡೆದ ರೈತ ಚಳವಳಿ ಮುಂತಾದವುಗಳ ಪರಿಣಾಮಗಳನ್ನು ಅವರ ಆಡಳಿತ ಕಾಣಬೇಕಾಯಿತು.

    1983ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಮವಾರಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಗುಂಡೂರಾವ್ ಜನತ ಪರಿವಾರದಿಂದ ಸ್ಪರ್ಧಿಸಿದ ಜಿ ವಿಜಯ ಅವರ ಮುಂದೆ ಸೋಲು ಕಂಡರು. ಹುರುಪು ಹುಮ್ಮಸ್ಸು ಉತ್ಸಾಹಗಳಿಂದ ಜೀವನ ಸಾಗಿಸಿದ ಗುಂಡೂರಾವ್ ಕೆಲ ಕಾಲ ರಕ್ತದ ಕ್ಯಾನ್ಸರ್‌ನಿಂದ ಬಳಲಿ ಲಂಡನ್‌ನಲ್ಲಿ ಚಿಕಿತ್ಸೆ ಪಡೆದರು. ಆದರೆ ಕಾಲ ಕಿವಿಗೊಡಲಿಲ್ಲ 56 ವರ್ಷದಲ್ಲಿ ಗುಂಡೂರಾವ್ 1993ರ ಆಗಸ್ಟ್ 22ರಂದು ನಿಧನರಾದರು. ಇದನ್ನೂ ಓದಿ: ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ 8 ಮಂದಿಗೆ ಜೀವದಾನ ಸಾಧ್ಯ – ಮನ್‌ ಕಿ ಬಾತ್‌ನಲ್ಲಿ ಮೋದಿ ಕರೆ

  • ಗುಂಡೂರಾವ್ ಯುರೋಪ್ ಪ್ರವಾಸ, ಸಿದ್ದರಾಮಯ್ಯ ಮೈಸೂರಿಗೆ ಭೇಟಿ

    ಗುಂಡೂರಾವ್ ಯುರೋಪ್ ಪ್ರವಾಸ, ಸಿದ್ದರಾಮಯ್ಯ ಮೈಸೂರಿಗೆ ಭೇಟಿ

    ಬೆಂಗಳೂರು: ಒಂದೆಡೆ ಸಿಎಂ ಅಮೆರಿಕದಲ್ಲೂ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಯುರೋಪ್ ಪ್ರವಾಸದಲ್ಲಿದ್ದರೆ, ಇವತ್ತು ಸಿದ್ದರಾಮಯ್ಯ ಮೈಸೂರಿಗೆ ಹೋಗಲಿದ್ದಾರೆ. ಕಾಂಗ್ರೆಸ್ ಬುಡ ಅಲ್ಲಾಡುತ್ತಿದ್ದರೂ ಸಿದ್ದರಾಮಯ್ಯ 2 ದಿನ ಮೈಸೂರಿಗೆ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

    ಶಾಸಕರ ರಾಜೀನಾಮೆಯಿಂದ ಎರಡು ದಿನ ಸಿದ್ದರಾಮಯ್ಯನವರ ಬೆಂಗಳೂರು ನಿವಾಸದದಲ್ಲಿ ರಾಜಕೀಯ ಭೇಟಿ ಬಿರುಸು ಪಡೆದಿತ್ತು. ಪಕ್ಷದಲ್ಲಿ ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ ಸಿದ್ದರಾಮಯ್ಯ ಮೈಸೂರಿಗೆ ಹೋಗುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

    ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯ ಈ ಹಿಂದೆ ಶಾಸಕರಿಗೆ ವಿಪ್ ಜಾರಿ ಮಾಡಿ ಸರ್ಕಾರ ರಕ್ಷಿಸುವ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಈಗ ಮುಖ್ಯಮಂತ್ರಿಗಳಿಗೆ ಹಾಗೂ ತಮ್ಮ ಪಕ್ಷದ ಅಧ್ಯಕ್ಷರಿಗೆ ಇಲ್ಲದ ತಲೆಬಿಸಿ ನನಗ್ಯಾಕೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

    ಬೆಂಗಳೂರಿನಲ್ಲಿ ಇದ್ದರೆ ಅನವಶ್ಯಕ ಗೊಂದಲ ಜಾಸ್ತಿ. ಒಬ್ಬರಲ್ಲ ಒಬ್ಬರು ಮನೆಗೆ ಬರುತ್ತಿರುತ್ತಾರೆ. ಅದರ ಬದಲು ಮೈಸೂರಿನಲ್ಲಿದ್ದರೆ ಈ ಕಿರಿಕಿರಿಯಿಂದ ಪಾರಾಗಬಹುದು ಎನ್ನುವ ತೀರ್ಮಾನಕ್ಕೆ ಮಾಜಿ ಸಿಎಂ ಬಂದಿದ್ದಾರೆ.

    ಸದ್ಯ ಎದ್ದಿರುವ ಗೊಂದಲಗಳಿಗೆ ಸಿದ್ದರಾಮಯ್ಯ ಪೂರ್ಣ ವಿರಾಮ ಹಾಕಬಹುದು ಎನ್ನುವ ನಿರೀಕ್ಷೆಯಲ್ಲಿ ದೋಸ್ತಿ ನಾಯಕರಿದ್ದರು. ಆದರೆ ಸಿದ್ದರಾಮಯ್ಯ ಈ ಸಹವಾಸವೇ ಬೇಡ ಎಂದು ಹೇಳಿ ಮೈಸೂರಿಗೆ ಹೊರಟು ರಾಜಕೀಯ ಗೊಂದಲದಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿರುವ ನಡೆ ಅಚ್ಚರಿ ಮೂಡಿಸಿದೆ.

    ಬಿಎಸ್‍ವೈ ಪ್ರವಾಸ ರದ್ದು: ಇವತ್ತು ಮತ್ತು ನಾಳೆ ನಿಗದಿ ಆಗಿದ್ದ ಬರ ಪ್ರವಾಸವನ್ನ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ದಿಢೀರ್ ಮುಂದೂಡಿದ್ದಾರೆ. ಇವತ್ತು ಹಾಸನ, ನಾಳೆ ಮಂಡ್ಯದಲ್ಲಿ ಬರ ಅಧ್ಯಯನ ಕೈಗೊಳ್ಳಬೇಕಿತ್ತು.