Tag: ಗುಂಡಿನ ಚಕಮಕಿ

  • 370 ಕಿತ್ತು ಹಾಕಿದ ಬಳಿಕ ಮೊದಲ ಗುಂಡಿನ ಚಕಮಕಿ – ಉಗ್ರ ಹತ್ಯೆ, ಪೊಲೀಸ್ ಅಧಿಕಾರಿ ಹುತಾತ್ಮ

    370 ಕಿತ್ತು ಹಾಕಿದ ಬಳಿಕ ಮೊದಲ ಗುಂಡಿನ ಚಕಮಕಿ – ಉಗ್ರ ಹತ್ಯೆ, ಪೊಲೀಸ್ ಅಧಿಕಾರಿ ಹುತಾತ್ಮ

    ಶ್ರೀನಗರ: ಉಗ್ರರು ಹಾಗೂ ಭದ್ರತಾ ಸಿಬ್ಬಂದಿಯ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಜಮ್ಮು ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿ(ಎಸ್‍ಪಿಓ) ಹುತಾತ್ಮರಾಗಿ, ಮತ್ತೊರ್ವ ಸಬ್ ಇನ್ಸ್‍ಪೆಕ್ಟರ್ ಗಂಭೀರ ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳವಾರ ತಡರಾತ್ರಿ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಪೊಲೀಸರು ಸಹ ಓರ್ವ ಉಗ್ರನನ್ನು ಗುಂಡಿಕ್ಕಿ ಕೊಂದಿದ್ದಾರೆ. ಹುತಾತ್ಮರಾದ ಎಸ್‍ಪಿಓ ಅವರನ್ನು ಬಿಲ್ಲಾಲ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸಬ್ ಇನ್ಸ್ ಪೆಕ್ಟರ್ ಅಮರ್ ದೀಪ್ ಪರಿಹಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ಮಧ್ಯೆ ಮಂಗಳವಾರ ಸಂಜೆ ಪ್ರಾರಂಭವಾದ ಗುಂಡಿನ ಚಕಮಕಿ, ರಾತ್ರಿಯವರೆಗೂ ನಡೆದಿದ್ದು, ಇಂದು ಬೆಳಗ್ಗೆ ಜಮ್ಮು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿ ಮಾಹಿತಿ ನೀಡುವ ಮೂಲಕ ಎನ್‍ಕೌಂಟರ್ ಅಂತ್ಯವಾಗಿರುವುದನ್ನು ಖಚಿತಪಡಿಸಿದ್ದಾರೆ.

    ಗುಂಡಿನ ಚಕಮಕಿ ಪೂರ್ಣಗೊಂಡಿದ್ದು, ಒಬ್ಬ ಉಗ್ರ ಹತನಾಗಿದ್ದಾನೆ. ಈತನ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ. ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ನಮ್ಮ ಸಹೋದ್ಯೋಗಿ ಎಸ್‍ಪಿಓ ಬಿಲ್ಲಾಲ್ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಎಸ್‍ಐ ಅಮರ್ ದೀಪ್ ಪರಿಹಾರ್ ಅವರು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ಟ್ವೀಟ್ ಮಾಡಿ ಖಚಿತಪಡಿಸಿದೆ.

    ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಮೊದಲ ಗುಂಡಿನ ಚಕಮಕಿ ಇದಾಗಿದೆ. ಆಗಸ್ಟ್ 5ರಂದು ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದುಪಡಿಸಿತ್ತು.

  • ಪಾಕ್‍ನಿಂದ ಕದನವಿರಾಮ ಉಲ್ಲಂಘನೆ- ಓರ್ವ ಯೋಧ ಹುತಾತ್ಮ

    ಪಾಕ್‍ನಿಂದ ಕದನವಿರಾಮ ಉಲ್ಲಂಘನೆ- ಓರ್ವ ಯೋಧ ಹುತಾತ್ಮ

    ಶ್ರೀನಗರ: ಪಾಕಿಸ್ತಾನ ಮತ್ತೆ ಕದನವಿರಾಮ ಉಲ್ಲಂಘಿಸಿದ್ದು, ಪಾಕ್ ನಡೆಸಿದ ಶೆಲ್ ದಾಳಿಗೆ ಓರ್ವ ಯೋಧ ಹುತಾತ್ಮರಾಗಿರುವ ಘಟನೆ ರಾಜೌರಿ ಜಿಲ್ಲೆಯಲ್ಲಿ ನಡೆದಿದೆ.

    ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕ್ ಕದನ ವಿರಾಮ ಉಲ್ಲಂಘಿಸಿತ್ತು. ಪಾಕ್ ನಡೆಸಿದ ಶೆಲ್ ದಾಳಿಗೆ ಓರ್ವ ಸೈನಿಕ ಹುತಾತ್ಮರಾಗಿದ್ದು, ಡೆಹರಾಡೂನ್‍ನ ಲ್ಯಾನ್ಸ್ ನಾಯಕ್ ಸಂದೀಪ್ ಥಾಪ (35) ಎಂದು ಗುರುತಿಸಲಾಗಿದೆ. ಹುತಾತ್ಮ ಯೋಧ ಸಂದೀಪ್ ಸುಮಾರು 15 ವರ್ಷಗಳಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕೋಲ್ ದೇವೇಂದರ್ ಆನಂದ್ ಮಾಹಿತಿ ನೀಡಿದ್ದಾರೆ.

    ಲ್ಯಾನ್ಸ್ ನಾಯಕ್ ಸಂದೀಪ್ ಥಾಪಾ ಅವರು ಧೈರ್ಯಶಾಲಿ ಸೈನಿಕರಾಗಿದ್ದರು. ಅವರ ಕರ್ತವ್ಯ ಮತ್ತು ತ್ಯಾಗಕ್ಕೆ ರಾಷ್ಟ್ರವು ಅವರಿಗೆ ಋಣಿಯಾಗಿರುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ.

    ಪಾಕಿಸ್ತಾನ ಸೈನಿಕರು ಬೆಳಗ್ಗೆ 6.30ರ ಹೊತ್ತಿಗೆ ನೌಶೇರಾ ಸೆಕ್ಟರ್ ನಲ್ಲಿ ಗುಂಡು ಹಾರಿಸುವುದು ಮತ್ತು ಶೆಲ್ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿದರು. ಭಾರತೀಯ ಸೇನೆ ಸಹ ಇದಕ್ಕೆ ಸೂಕ್ತ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಬೆಳಗ್ಗೆ ಗುಂಡಿನ ಚಕಮಕಿ ತೀವ್ರವಾಗಿತ್ತು, ಅಂತಿಮ ವರದಿ ಬಂದಾಗ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ತಿಳಿಸಿದ್ದಾರೆ.

    ಇತ್ತೀಚೆಗೆ ಪೂಂಛ್ ಜಿಲ್ಲೆಯ ಕೆಜಿ ಸೆಕ್ಟರ್ ನಲ್ಲಿ ಭಾರತ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಪಾಕಿಸ್ತಾನ ಸೈನಿಕರು ಹತರಾಗಿದ್ದಾರೆ ಎಂದು ಪಾಕ್ ಆರೋಪಿಸಿತ್ತು. ಈ ವಾದವನ್ನು ಭಾರತ ತಿರಸ್ಕರಿಸಿತ್ತು.

    ಕೇಂದ್ರ ಸರ್ಕಾರ ಆಗಸ್ಟ್ 5 ಮತ್ತು 6ರಂದು 370ನೇ ವಿಧಿಯನ್ನು ರದ್ದು ಪಡಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ನಂತರ ಪಾಕ್‍ನ ಪುಂಡಾಟ ಹೆಚ್ಚಾಗಿದೆ. ಈ ಮೂಲಕ ಪಾಕಿಸ್ತಾನ ಸೇನೆಯು ನಿಯಮಿತವಾಗಿ ಒಪ್ಪಂದವನ್ನು ಉಲ್ಲಂಘಿಸುತ್ತಿದ್ದು, ಉಗ್ರರನ್ನು ಜಮ್ಮು ಕಾಶ್ಮೀರಕ್ಕೆ ನುಗ್ಗಿಸಲು ಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದ ಪುಂಡಾಟಕ್ಕೆ ದಂಡನಾತ್ಮಕವಾಗಿಯೇ ಪ್ರತಿಕ್ರಿಯಿಸುತ್ತೇವೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಈಗಾಗಲೇ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

  • ನಕ್ಸಲರ ಜೊತೆ ಗುಂಡಿನ ಕಾಳಗ –  ರಾಜ್ಯದ ಯೋಧ ಹುತಾತ್ಮ

    ನಕ್ಸಲರ ಜೊತೆ ಗುಂಡಿನ ಕಾಳಗ – ರಾಜ್ಯದ ಯೋಧ ಹುತಾತ್ಮ

    ರಾಯ್‍ಪುರ: ಇಂದು ಛತ್ತೀಸ್‍ಗಢದಲ್ಲಿ ನಕ್ಸಲರು ಹಾಗೂ ಸಿಆರ್‌ಪಿಎಫ್‌ ಯೋಧರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದಾರೆ.

    ಹುತಾತ್ಮರನ್ನು ಕರ್ನಾಟಕದ ಕಲಬುರಗಿಯ ಎಎಸ್‍ಐ, ಜಿಡಿ ಪಿ.ಮಹಾದೇವ(50), ಉತ್ತರ ಪ್ರದೇಶದ ಅಲಿಗರ್‍ನ ಎಎಸ್‍ಐ, ಜಿಡಿ ಮದನ್ ಪಾಲ್ ಸಿಂಗ್(52) ಹಾಗೂ ಕೇರಳದ ಇಡುಕ್ಕಿಯ ಓ.ಪಿ.ಸಜು(47) ಎಂದು ಗುರುತಿಸಲಾಗಿದೆ. ಭಯೋತ್ಪಾದಕರು ಹಾಗೂ ಭದ್ರತಾ ಪಡೆಗಳ ಎನ್‍ಕೌಂಟರ್ ನಡೆಯುತ್ತಿದ್ದಾಗ ಪಿಕ್‍ಅಪ್ ವ್ಯಾನ್ ಬಂದಿದ್ದು, ವಾಹನದಲ್ಲಿದ್ದ ಗ್ರಾಮಸ್ಥರೊಬ್ಬರು ಸಾವನ್ನಪ್ಪಿದ್ದಾರೆ.

    ಇಂದು ಬೆಳಗ್ಗೆ ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯ ಕೇಶ್‍ಕುಟುಲ್ ಎಂಬಲ್ಲಿ ಗುಂಡಿನ ಚಕಮಕಿ ನಡೆದಿದೆ. ನಕ್ಸಲರು ಹೊಂಚು ಹಾಕಿರುವುದನ್ನು ಅರಿತ 199ನೇ ಬೆಟಾಲಿಯನ್‍ನ ಸಿಆರ್‌ಪಿಎಫ್‌ ಯೋಧರು, ತಕ್ಷಣ ಗುಂಡಿನ ದಾಳಿ ನಡೆಸಿದ್ದಾರೆ.

    ದಾಳಿ ವೇಳೆ ಸ್ಥಳದಲ್ಲಿ ಓರ್ವ ಯೋಧ ಬಲಿಯಾಗಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಯೋಧರು ನಂತರ ಮೃತಪಟ್ಟಿದ್ದಾರೆ.

     ಮಹಾದೇವ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಮದವರಾಗಿದ್ದು, ಕಳೆದ 29 ವರ್ಷಗಳಿಂದ ಸಿಆರ್‌ಪಿಎಫ್‌ನಲ್ಲಿ ಎಎಸ್‍ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಎರಡ್ಮೂರು ದಿನಗಳಲ್ಲಿ ರಜೆ ಮೇಲೆ ಸ್ವಗ್ರಾಮಕ್ಕೆ ಬರುವುದಾಗಿ ಮಹಾದೇವ ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ ಹುತಾತ್ಮರಾದ ಸುದ್ದಿ ಕೇಳಿ ಮರಗುತ್ತಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

  • ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತ

    ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತ

    ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ದರಂದೋರಾ ಕೀಗಮ್‍ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ.

    ಭಯೋತ್ಪಾದಕರು ತಂಗಿರುವ ಕುರಿತ ಖಚಿತ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿಯು ಶೋಪಿಯನ್ ಜಿಲ್ಲೆಯಲ್ಲಿ ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಭಯೋತ್ಪಾದಕರು ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಎನ್‍ಕೌಂಟರ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಉಗ್ರರ ಅಡಗುತಾಣಗಳ ಮೇಲೆ ಕಾರ್ಯಾಚರಣೆ ಕೇಂದ್ರೀಕರಿಸಲಾಗಿತ್ತು. ಭದ್ರತಾ ಪಡೆ ಅಡಗುತಾಣವನ್ನು ಸುತ್ತುವರಿಯುತ್ತಿದ್ದಂತೆ ಭಯೋತ್ಪಾದಕರು ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿತು. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.

    ಹತರಾದ ಭಯೋತ್ಪಾದಕರು ಯಾವ ಸಂಘಟನೆಯ ಸದಸ್ಯರು ಎನ್ನುವ ಬಗ್ಗೆ ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]