Tag: ಗುಂಡಾ ಕಾಯ್ದೆ

  • ಮುಲಾಜಿಲ್ಲದೇ ಗೂಂಡಾ ಕಾಯ್ದೆ ಹಾಕಿ ಕ್ರಮ ಕೈಗೊಳ್ಳಿ: ಪೊಲೀಸರಿಗೆ ಸಿಎಂ ಸೂಚನೆ

    ಮುಲಾಜಿಲ್ಲದೇ ಗೂಂಡಾ ಕಾಯ್ದೆ ಹಾಕಿ ಕ್ರಮ ಕೈಗೊಳ್ಳಿ: ಪೊಲೀಸರಿಗೆ ಸಿಎಂ ಸೂಚನೆ

    ಬೆಂಗಳೂರು: ಕಾನೂನು ಸುವ್ಯವಸ್ಥೆ ಕುಸಿಯುತ್ತಿರುವ ಆರೋಪದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ  ಜೊತೆ  ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ.

    ಕೋಮುವಾದಿಗಳು ಯಾವುದೇ ಸಂಘಟನೆಯವರೇ ಆದ್ರೂ ಮುಲಾಜಿಲ್ಲದೇ ಗೂಂಡಾ ಕಾಯ್ದೆ ಹಾಕಿ ಕ್ರಮ ಕೈಗೊಳ್ಳಿ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಹರಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಿ ಎಂದಿದ್ದಾರೆ.

    ಚುನಾವಣೆ ನಡೆಯುವ ಮುಂದಿನ ಮೂರು ತಿಂಗಳು ಸವಾಲು ಆಗಿದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಬಗ್ಗೆ ಎಚ್ಚರವಹಿಸಿ ಅಂತ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸಂಘಟನೆಗಳ ಬಗ್ಗೆ ಗುಪ್ತಚರ ಇಲಾಖೆ ಮೊದಲೇ ಎಚ್ಚರ ವಹಿಸಿದ್ರೆ ಇವತ್ತು ದೀಪಕ್ ರಾವ್ ಮತ್ತು ಬಶೀರ್ ಹತ್ಯೆ ಆಗುತ್ತಿರಲಿಲ್ಲ ಎಂದು  ಸಿದ್ದರಾಮಯ್ಯ ಹೇಳಿದ್ರು.

    ಸಿಎಂ ಸಿಟ್ಟು: ಸಿಎಂ ಸಿದ್ದರಾಮಯ್ಯ ಡಿಜಿ ಕಚೇರಿಯ ಪೇದೆ ಮೇಲೆ ಸುದ್ದಿಗೋಷ್ಟಿ ವೇಳೆ ಸಿಡುಕಿದ ಘಟನೆ ನಡೀತು. ನಾರ್ಮಲ್ ಟೀ ಕೊಡದೇ ಗ್ರೀನ್ ಟೀ ತಂದು ಕೊಟ್ಟಿದ್ದಕ್ಕೆ ಸಿಎಂ ಗರಂ ಆದ್ರು. ನಾರ್ಮಲ್ ಟೀ ತಗೆದುಕೊಂಡ ಬಾ. ಇದು ಯಾವ ಟೀ ತಂದಿದಿಯಾ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಎಂದಿನ ಶೈಲಿಯಲ್ಲಿ ಕೋಪಗೊಂಡ್ರು. ಇದ್ರಿಂದ ಟೀ ತಂದ ಸಿಬ್ಬಂದಿ ಕಕ್ಕಾಬಿಕ್ಕಿಯಾದರು.

    ಏನಿದು ಗೂಂಡಾ ಕಾಯ್ದೆ?
    ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಬೆಂಗಳೂರಿನಲ್ಲಿ ರೌಡಿಗಳ ಹಾವಳಿ ಮೀತಿ ಮೀರಿತ್ತು. ಈ ರೌಡಿಗಳನ್ನು ಮಟ್ಟ ಹಾಕಲು 1985ರಲ್ಲಿ ಜನತಾ ಸರ್ಕಾರ ಗೂಂಡಾ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೆ ತಂದಿತು.

    ಯಾರ ವಿರುದ್ಧ ಕ್ರಮ ಕೈಗೊಳ್ಳಬಹುದು?
    ತಿದ್ದು ಪಡಿಯಾದ ಕಾಯ್ದೆ ವ್ಯಾಪ್ತಿಗೆ ಆಸಿಡ್ ದಾಳಿಕೋರರು, ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಪರಿಸರಕ್ಕೆ ಹಾನಿ ಮಾಡುವವರು, ಡಿಜಿಟಲ್ ಮೀಡಿಯಾದಲ್ಲಿ (ವೆಬ್‍ಸೈಟ್) ವಂಚಿಸುವವರು, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು, ಕಾನೂನು ಬಾಹಿರ ಹಣಕಾಸು ವ್ಯವಹಾರ ನಡೆಸುವವರನ್ನು ಸೇರಿಸಲಾಗಿದೆ.

    ನೇರವಾಗಿ ಜೈಲಿಗೆ:
    ಈ ಕಾಯ್ದೆಯಲ್ಲಿ ಬಂಧನಕ್ಕೆ ಒಳಗಾದ ಆರೋಪಿಯನ್ನು ಇತರ ಪ್ರಕರಣಗಳ ಮಾದರಿಯಲ್ಲಿ 24 ಗಂಟೆಗಳ ಒಳಗೆ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯ ಇಲ್ಲ. ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನವನ್ನು ಪದೇ ಪದೇ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯ ಅಗತ್ಯವೂ ಇಲ್ಲದೇ ನೇರವಾಗಿ ಜೈಲಿಗೆ ಕಳುಹಿಸಬಹುದಾಗಿದೆ. ಈ ಕಾಯ್ದೆಯ ಅಡಿ ಬಂಧನಕ್ಕೆ ಒಳಗಾದರೆ ಒಂದು ವರ್ಷ ಜಾಮೀನು ಸಿಗುವುದಿಲ್ಲ. ಮುನ್ನಚ್ಚರಿಕಾ ಕ್ರಮವಾಗಿ ಬಂಧಿಸಿ ಗಡೀಪಾರು ಆದೇಶವನ್ನೂ ಹೊರಡಿಸಲು ಅವಕಾಶವಿದೆ.

    ಯಾವ ರಾಜ್ಯದಲ್ಲಿದೆ?
    ಸ್ವಾತಂತ್ರ್ಯಾ ನಂತರ ರಾಜಸ್ತಾನ (1975), ಉತ್ತರ ಪ್ರದೇಶ (1971), ತಮಿಳುನಾಡು (1982), ಕೇರಳಗ(2007) ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಿವೆ. ಡಿಜಿಟಲ್ ಅಪರಾಧ, ಸೈಬರ್ ಅಪರಾಧಗಳನ್ನು ಗೂಂಡಾ ಕಾಯ್ದೆಯಡಿ ತಮಿಳುನಾಡು ಮೊದಲ ಬಾರಿಗೆ 2004ರಲ್ಲಿ ತಂದಿತ್ತು.

    ಸಿಎಂ ಫೇಸ್ ಬುಕ್ ನಲ್ಲಿ ಪ್ರಕಟವಾಗಿರುವ ಸ್ಟೇಟಸ್ ಯಥಾವತ್ ಕಾಪಿಯನ್ನು ಇಲ್ಲಿ ನೀಡಲಾಗಿದೆ.
    ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಬರಹಗಳನ್ನು ಪ್ರಕಟಿಸಿ ಕೋಮು ಭಾವನೆ ಕೆರಳಿಸುವ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಯಾರೇ ಮಾಡಿದರೂ, ಅವರು ಯಾವುದೇ ಧರ್ಮದ ಸಂಘಟನೆಗೆ ಸೇರಿದವರಾಗಿದ್ದರೂ ಸ್ವಯಂಪ್ರೇರಿತಯವಾಗಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.

    ಇತ್ತೀಚಿನ ದಿನಗಳಲ್ಲಿ ಮೂಲಭೂತವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪ್ರಚೋದನಾಕಾರಿ ಬರಹಗಳ ಮೂಲಕ ಅವರು ಕೋಮು ಭಾವನೆ ಕೆರಳಿಸುವ ಹಾಗೂ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅಂತಹವರ ಬಗ್ಗೆ ವಿಶೇಷವಾಗಿ ನಿಗಾ ಇರಿಸುವುದರ ಜೊತೆಗೆ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

    ಮಾದಕ ವಸ್ತುಗಳ ಮಾರಾಟ ಜಾಲದಿಂದಾಗಿ ಯುವ ಜನಾಂಗ ದಿಕ್ಕು ತಪ್ಪುತ್ತಿರುವುದು ಕಳವಳಕಾರಿ ಸಂಗತಿ. ಹೀಗಾಗಿ ಮಾದಕ ವಸ್ತುಗಳ ಮಾರಾಟ ಜಾಲವನ್ನು ಮಟ್ಟ ಹಾಕುವುದರ ಜೊತೆಗೆ ಆ ಜಾಲದ ಹಿಂದೆ ಇರುವ ವ್ಯಕ್ತಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಕಾನೂನಿನ ಚೌಕಟ್ಟಿಗೆ ತಂದು ಕಠಿಣ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದೇನೆ.

    ಕೋಮು ಭಾವನೆ ಕೆರಳಿಸುವುದೇ ಮೂಲಭೂತವಾದಿಗಳ ಕೆಲಸ. ಅಂತಹವರನ್ನು ಪತ್ತೆ ಮಾಡಿ. ಅಗತ್ಯವೆನಿಸಿದರೆ ಗೂಂಡಾ ಕಾಯಿದೆಯಲ್ಲಿ ಕೇಸು ದಾಖಲು ಮಾಡಿ, ಗಡಿಪಾರು ಮಾಡಿ ಎಂದು ಹೇಳಿದ್ದೇನೆ. ಮಂಗಳೂರಿನಲ್ಲಿ ಇತ್ತೀಚೆಗೆ ದೀಪಕರಾವ್ ಹಾಗೂ ಬಶೀರ್ ಎಂಬುವರ ಹತ್ಯೆ ಆಗಿದೆ. ಪೊಲೀಸರು ಮುಂಜಾಗ್ರತೆ ವಹಿಸಿದ್ದರೆ ಎರಡೂ ಹತ್ಯೆ ತಪ್ಪಿಸಬಹುದಿತ್ತು.  2017ರಲ್ಲಿ ಅಪರಾಧಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆ. ಆದರೆ, ಗಣನೀಯವಾಗಿ ಇಳಿಕೆಯಾಗಬೇಕು.ಮಹಿಳೆಯರು, ಮಕ್ಕಳು ಅದರಲ್ಲಿಯೂ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದ್ದೇನೆ.

    ಗುಪ್ತದಳವನ್ನು ಹೆಚ್ಚು ಕ್ರಿಯಾಶೀಲ ಮಾಡಬೇಕು. ಅದಕ್ಕಾಗಿಯೇ ಗುಪ್ತದಳಕ್ಕೆ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಈಗ ಸಂದರ್ಶನ ಪ್ರಕ್ರಿಯೆ ನಡೆಯುತ್ತಿದೆ. ನೇಮಕ ಪ್ರಕ್ರಿಯೆ ಸಹ ವಿಶೇಷವಾಗಿ ನಡೆಯುತ್ತದೆ. ನೇಮಕಗೊಳ್ಳುವ ಸಿಬ್ಬಂದಿ ಅಲ್ಲಿಯೇ ಕಾಯಂ ಆಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಬೇರೆ ವಿಭಾಗಗಳಿಗೆ ಹೋಗುವಂತಿಲ್ಲ. ಗುಪ್ತದಳದಲ್ಲಿ ಕಾರ್ಯನಿರ್ವಹಿಸುವುದು ಶಿಕ್ಷೆ ರೂಪದಲ್ಲಿ ಮಾಡುವ ಕೆಲಸ ಅಥವಾ ವರ್ಗಾವಣೆ ಎಂಬ ಮನೋಭಾವ ಇದೆ. ಹೀಗಾಗಿ ವಿಶೇಷವಾಗಿ ಮತ್ತು ಪ್ರತ್ಯೇಕವಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

    ಅಪರಾಧ ನಡೆದ ಬಳಿಕ ಕಾನೂನು ರೀತ್ಯ ಕ್ರಮ ಕೈಗೊಳ್ಳುವುದು,ಆರೋಪ ಪಟ್ಟಿ ದಾಖಲು ಮಾಡುವುದು ಬೇರೆ ವಿಚಾರ. ಆದರೆ ಅಪರಾಧಗಳೇ ನಡೆಯದಂತೆ ಮುಂಜಾಗ್ರತೆ ವಹಿಸುವುದು ಮುಖ್ಯ.ದರೋಡೆಗಳು, ಕಳ್ಳತನ, ಸರ ಕಳ್ಳತನ, ಮತೀಯವಾದ, ಗೂಂಡಾಗಿರಿಗೆ ಕಾರಣರಾಗುವ ವ್ಯಕ್ತಿಗಳನ್ನು ಮೊದಲೇ ಪತ್ತೆ ಹಚ್ಚಿ ಮುಂಜಾಗ್ರತೆ ವಹಿಸಿದರೆ ಒಳ್ಳೆಯದು. ಇದು ಆಯಾ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜವಾಬ್ದಾರಿ.

    ಮಾದಕ ವಸ್ತುಗಳ ಮಾರಾಟ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳು ಎಲ್ಲಿ ಮಾರಾಟವಾಗುತ್ತದೆ. ಅದು ಎಲ್ಲಿಂದ ಸರಬರಾಜು ಆಗುತ್ತದೆ ಎಂಬುದರ ಬಗ್ಗೆ ನಿಗಾ ಇರಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ. ವಿದ್ಯಾರ್ಥಿಗಳು ಹಾಗೂ ಯುವಕರ ಕೈಗೆ ಮಾದಕ ವಸ್ತುಗಳು ಸಿಗದಂತೆ ನೋಡಿಕೊಳ್ಳಬೇಕು. ಮಾರಾಟ ಜಾಲ ಪತ್ತೆ ಹಚ್ಚಿ ಕಡಿವಾಣ ಹಾಕಬೇಕು.

    ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿದೆ. ರಾಜ್ಯದಲ್ಲಿ 56 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಿವೆ. ಅಲ್ಲಿ ಸರಿಯಾದ ರೀತಿಯಲ್ಲಿ ಬಂದೋಬಸ್ತ್ ಮಾಡಬೇಕು. ಮತದಾರರು ನಿರ್ಭಯವಾಗಿ ಮತ ಚಲಾವಣೆ ಮಾಡಲು ವ್ಯವಸ್ಥೆ ಮಾಡಬೇಕು. ಅಂತಹ ವಾತಾವರಣ ನಿರ್ಮಿಸಬೇಕು. ಸೂಕ್ಷ್ಮ ಮತಗಟ್ಟೆಗಳ ಕಡೆ ವಿಶೇಷ ಗಮನ ಹರಿಸಬೇಕು.

    ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡುತ್ತವೆ. ಅದು ರಾಜಕೀಯ ಪ್ರೇರಿತ. ಕಾಮಾಲೆ ಕಣ್ಣಿನವರಿಗೆ ಕಾಣುವುದೆಲ್ಲ ಹಳದಿಯೇ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಪ್ರಗತಿ ಕಂಡು ಬಂದಿದೆ. ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ.

    ಪೊಲೀಸ್ ಸಿಬ್ಬಂದಿಯ ವೇತನ, ಭತ್ಯೆ ಹೆಚ್ಚಳಕ್ಕೂ ಸರ್ಕಾರ ಕ್ರಮ ಕೈಗೊಂಡಿದೆ. ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆದಿದೆ. ಖಾಲಿ ಇರುವ 42 ಸಾವಿರ ಹುದ್ದೆಗಳ ಪೈಕಿ 32 ಸಾವಿರ ಹುದ್ದೆಗಳನ್ನು ಈಗಾಗಲೇ ತುಂಬಲಾಗಿದೆ. ರೂ.2,272 ಕೋಟಿ ವೆಚ್ಚದಲ್ಲಿ ಸಿಬ್ಬಂದಿಗೆ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ 12 ಸಾವಿರ ಮಂದಿಗೆ ಏಕ ಕಾಲದಲ್ಲಿ ಬಡ್ತಿಯನ್ನೂ ನೀಡಲಾಗಿದೆ. ಇಂತಹ ಕಾರ್ಯ ಈ ಹಿಂದೆ ಎಂದೂ ನಡೆದಿರಲಿಲ್ಲ. ಪೊಲೀಸರು, ವೈದ್ಯರು ಹಾಗೂ ಶಿಕ್ಷಕರ ನೇಮಕ ವಿಚಾರದಲ್ಲಿ ಆರ್ಥಿಕ ಮಿತಿ ನಿರ್ಬಂಧ ಹೇರದಂತೆ ಸೂಚನೆಯನ್ನೂ ಕೊಟ್ಟಿದ್ದೇನೆ. ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಏರಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ.