Tag: ಗಿಳಿ

  • ಗಿಳಿಗಾಗಿ ಮಾಲೀಕನ ಪರಾದಾಟ – ಹುಡುಕಿಕೊಟ್ಟರೆ 10 ಸಾವಿರ ಬಹುಮಾನ

    ಗಿಳಿಗಾಗಿ ಮಾಲೀಕನ ಪರಾದಾಟ – ಹುಡುಕಿಕೊಟ್ಟರೆ 10 ಸಾವಿರ ಬಹುಮಾನ

    ಲಕ್ನೋ: ಸಾಮಾನ್ಯವಾಗಿ ಮನುಷ್ಯರು ಪ್ರಾಣಿಗಳನ್ನು ಹೆಚ್ಚಾಗಿ ಹಚ್ಚಿಕೊಂಡಿರುವುದನ್ನು ನೋಡಿರುತ್ತೇವೆ. ಆದರೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ವ್ಯಕ್ತಿಯೋರ್ವ ಕಳೆದು ಹೋಗಿರುವ ಗಿಳಿಯನ್ನು ಹುಡುಕಿಕೊಂಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಗಿಳಿಯನ್ನು ಹುಡುಕಿಕೊಟ್ಟವರಿಗೆ 10,000 ರೂ. ಹಣವನ್ನು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

    ಹೌದ ಸಾಕಿದ್ದ ಗಿಳಿಯೊಂದು ಕಾಣೆಯಾಗಿದ್ದು, ಇದೀಗ ಅಲಿಗಢ ಜಿಲ್ಲೆಯಲ್ಲಿ ಗಿಳಿಯ ವಿಚಾರ ಭಾರೀ ಚರ್ಚೆಯಾಗುತ್ತಿದೆ. ವಿಶೇಷವೆಂದರೆ ಈ ಗಿಳಿ ವಿದೇಶಿ ತಳಿಯದ್ದಾಗಿದೆ. ನಗರದ ಕ್ವಾರ್ಸಿ ಪೊಲೀಸ್ ಠಾಣಾ ಪ್ರದೇಶದಿಂದ ನಾಲ್ಕು ದಿನಗಳ ಹಿಂದೆ ಕಾಣೆಯಾಗಿದೆ.

    ಗಿಳಿಯ ಮಾಲೀಕ ಎಸ್.ಸಿ.ವಷ್ರ್ನಿ ಎಂದು ಗುರುತಿಸಲಾಗಿದ್ದು, ಇವರು ದೀಂದಯಾಲ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗದು ಬಹುಮಾನ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಲ್ಲದೇ, ಗಿಳಿ ಹುಡುಕಲು ಸಹಾಯ ಮಾಡುವಂತೆ ಕರಪತ್ರಗಳನ್ನು ಮುದ್ರಿಸಿ ಸುತ್ತಮುತ್ತಲಿನವರಿಗೆ ಹಂಚಿದ್ದಾರೆ. ಅಲ್ಲದೆ ಗಿಳಿ ಹುಡುಕಲು ಸಹಾಯ ಮಾಡಿದವರಿಗೆ 10,000ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.

  • ವಾಲಿಬಾಲ್ ಆಡುತ್ತಿರುವ ಗಿಳಿಗಳ ವಿಡಿಯೋ ವೈರಲ್

    ವಾಲಿಬಾಲ್ ಆಡುತ್ತಿರುವ ಗಿಳಿಗಳ ವಿಡಿಯೋ ವೈರಲ್

    ಗಿಳಿಗಳು ಮಾತನಾಡುವುದು, ಹಾಡು ಹೇಳುವುದನ್ನು ಕೇಳಿದ್ದೀರಿ ಮತ್ತು ನೋಡಿದ್ದೀರಿ ಆದರೆ ಇಲ್ಲಿ ಗಿಳಿಗಳು ವಾಲಿಬಾಲ್ ಆಟ ಆಡುತ್ತವೆ ಎಂದು ಹೇಳಿದರೆ ಖಂಡಿತವಾಗಿಯೂ ಆಶ್ಚರ್ಯವಾಗುತ್ತದೆ ಆದರು ಇದು ಸತ್ಯ.

    ಹೌದು. ಹಸಿರು ಮತ್ತು ಹಳದಿ ಬಣ್ಣದ ಮುದ್ದು ಗಿಳಿಗಳು ಎರಡು ತಂಡಗಳಾಗಿ ವಾಲಿಬಾಲ್ ಆಟ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಪುಟ್ಟ ಪಕ್ಷಿಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಒಂದು ಬದಿಯಲ್ಲಿ ಹಸಿರು ಬಣ್ಣದ ಗಿಳಿಯ ತಂಡ ಇನ್ನೊಂದು ಕಡೆ ಹಳದಿ ಬಣ್ಣದ ಗಿಳಿಗಳ ತಂಡವನ್ನಾಗಿ ಮಾಡಲಾಗುತ್ತದೆ. ನಂತರ ಇವುಗಳ ಮಧ್ಯೆ ಒಂದು ಪುಟ್ಟ ನೆಟ್ ಕಟ್ಟಿ ಆಟವಾಡಲು ಬಿಡುತ್ತಾರೆ. ಆಗ ಗಿಳಿಗಳು ಕಾಳುಗಳನ್ನು ಹೆಕ್ಕುತ್ತಾ ಪುಟ್ಟ ಬಾಲ್ ಅನ್ನು ನೆಟ್ ನಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪಾಸ್ ಮಾಡುವ ದೃಶ್ಯ ಎಲ್ಲರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಆಟವಾಡುತ್ತಿರುವ ಈ ಮುದ್ದಾದ ಗಿಳಿಗಳ ವಿಡಿಯೋ ಹರಿದಾಡುತ್ತಿದೆ.

  • ಗಿಳಿಯನ್ನು ಬಿಟ್ಟಿದ್ದಕ್ಕೆ 8 ವರ್ಷದ ಬಾಲಕಿಯನ್ನು ಹೊಡೆದು ಕೊಂದ ಮಾಲೀಕರು

    ಗಿಳಿಯನ್ನು ಬಿಟ್ಟಿದ್ದಕ್ಕೆ 8 ವರ್ಷದ ಬಾಲಕಿಯನ್ನು ಹೊಡೆದು ಕೊಂದ ಮಾಲೀಕರು

    ಇಸ್ಲಾಮಾಬಾದ್: ಮನೆ ಕೆಲಸಕ್ಕೆ ಇದ್ದ ಎಂಟು ವರ್ಷದ ಬಾಲಕಿ ಪಂಜರದಲ್ಲಿ ಇದ್ದ ಗಿಳಿಯನ್ನು ಬಿಟ್ಟಿದ್ದಕ್ಕೆ ಮನೆ ಮಾಲೀಕರು ಆಕೆಯನ್ನು ಹೊಡೆದು ಕೊಂದಿರುವ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ.

    ಮೃತ ಬಾಲಕಿಯನ್ನು ಜೊಹ್ರಾ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಜೊಹ್ರಾ ಹಕ್ಕಿಗಳಿಗೆ ಆಹಾರ ಹಾಕಲು ಪಂಜರದ ಬಾಗಿಲನ್ನು ತೆರೆದಿದ್ದಾಳೆ. ಈ ವೇಳೆ ಒಂದು ಗಿಳಿ ಮರಿ ತಪ್ಪಿಸಿಕೊಂಡು ಹಾರಿ ಹೋಗಿದೆ. ಇದರಿಂದ ಕೋಪಗೊಂಡ ಮನೆಯ ಮಾಲೀಕರು ಆಕೆಯನ್ನು ಹೊಡೆದು ಸಾಯಿಸಿದ್ದಾರೆ.

    ಜೊಹ್ರಾ ಕೆಲಸ ಮಾಡುತ್ತಿದ್ದ ಮನೆಯವರು ಪ್ರಾಣಿ ಪಕ್ಷಿಗಳನ್ನು ಸಾಕಿ ಅವುಗಳನ್ನು ಮಾರುವ ವ್ಯಾಪಾರ ಮಾಡುತ್ತಿದ್ದರು. ಜೊತೆಗೆ ತಮ್ಮ ಮನೆಯಲ್ಲಿ ಇರುವ ಪುಟ್ಟಮಕ್ಕಳನ್ನು ನೋಡಿಕೊಳ್ಳಲು ಜೊಹ್ರಾಳನ್ನು ಮನೆ ಕೆಲಸಕ್ಕೆ ಇಟ್ಟಿಕೊಂಡಿದ್ದರು. ಈ ವೇಳೆ ಜೊಹ್ರಾ ಗಿಳಿ ಹಾರಿಹೋಗಲು ಬಿಟ್ಟಿದ್ದಾಳೆ ಎಂದು ಮಾಲೀಕರು ಮನಬಂದಂತೆ ಥಳಿಸಿದ್ದಾರೆ. ಪ್ರಜ್ಞಾಹೀನಾಳದ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸೋಮವಾರ ಸಾವನ್ನಪ್ಪಿದ್ದಾಳೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ರಾವಲ್ಪಿಂಡಿ ಪೊಲೀಸ್ ಅಧೀಕ್ಷಕ ಜಿಯಾ ಉದ್ದೀನ್, ಪ್ರಾಥಮಿಕ ತನಿಖೆಯ ಪ್ರಕಾರ ಆಸ್ಪತ್ರೆಗೆ ಬಾಲಕಿಯನ್ನು ಕರೆದುಕೊಂಡು ಬಂದಾಗ ಆಕೆ ಬದುಕಿದ್ದಳು. ಆದರೆ ಆಕೆಯ ಮುಖ, ಕೈ-ಕಾಲು, ಪಕ್ಕೆಲುಬು ಮತ್ತು ಕಾಲಿನ ಕೆಳಭಾಗದಲ್ಲಿ ಗಂಭೀರ ಗಾಯಗಳಾಗಿದ್ದವು. ಜೊತೆಗೆ ಬಾಲಕಿಯ ತೊಡೆಯ ಭಾಗದಲ್ಲಿ ಗಾಯವಾಗಿದ್ದ ಕಾರಣ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರಬವುದು ಎಂದು ಶಂಕಿಸಲಾಗಿದೆ ಎಂದು ಹೇಳಿದ್ದಾರೆ.

    ಜೊಹ್ರಾಳನ್ನು ಚಿಕ್ಕಮಕ್ಕಳನ್ನು ನೋಡಿಕೊಳ್ಳುವ ಮನೆಯ ಕೆಲಸಕ್ಕೆ ಇಟ್ಟಿಕೊಳ್ಳಲಾಗಿತ್ತು. ಈ ಕೆಲಸಕ್ಕೆ ಹಣದ ರೂಪದಲ್ಲಿ ಅವಳ ಓದಿಗೆ ಸಹಾಯ ಮಾಡುವುದಾಗಿ ಮಾಲೀಕರು ಹೇಳಿದ್ದರು. ಆದರೆ ಗಿಳಿಗಾಗಿ ಆಕೆಯಯನ್ನು ಕ್ರೂರವಾಗಿ ಕೊಂದಿದ್ದಾರೆ. ಈ ವಿಚಾರವಾಗಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಜೊತೆಗೆ ತನಿಖೆ ಮುಂದುವರೆದಿದೆ ಎಂದು ಜಿಯಾ ಉದ್ದೀನ್ ಮಾಹಿತಿ ನೀಡಿದ್ದಾರೆ.

  • ಮನೆಯವರೊಂದಿಗೆ ಆತ್ಮೀಯತೆಯ ಜೊತೆಗೆ ಮಾತೂ ಆಡ್ತಾನೆ ಗಿಣಿ ರಾಮ

    ಮನೆಯವರೊಂದಿಗೆ ಆತ್ಮೀಯತೆಯ ಜೊತೆಗೆ ಮಾತೂ ಆಡ್ತಾನೆ ಗಿಣಿ ರಾಮ

    – 5 ವರ್ಷದ ಹಿಂದೆ ಸಿಕ್ಕ ಗಿಣಿ
    – ಕೊಡಗು ವಾಲಗ ಸೌಂಡ್ ಕೇಳಿದ್ರೆ ಡ್ಯಾನ್ಸ್ ಮಾಡ್ತಾನೆ

    ಮಡಿಕೇರಿ: ಪಕ್ಷಿಗಳಲ್ಲಿ ಬಹುತೇಕ ಜನರಿಗೆ ಅತೀ ಆಕರ್ಷಣೀಯವಾದುದು ಗಿಳಿ. ಅಂತದರಲ್ಲಿ ಮನೆಯಲ್ಲೊಂದು ಗಿಳಿಯಿದ್ದು, ಅದು ನಮ್ಮೊಂದಿಗೆ ಆತ್ಮೀಯ ಒಡನಾಟ ಬೆಳೆಸಿಕೊಂಡರೆ ಎಷ್ಟು ಚಂದ. ಇಲ್ಲೊಂದು ಮನೇಲಿ ಮುದ್ದಾದ ಗಿಣಿ ರಾಮ ಇದ್ದಾನೆ. ಮನೆಯವರೊಂದಿಗೆ ಆತ್ಮೀಯವಾಗಿರೋದರ ಜೊತೆಗೆ ಅವರ ಜೊತೆ ಮಾತೂ ಆಡ್ತಾನೆ.

    ಹೌದು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಳಿಯ ಬ್ಯಾಡಗೊಟ್ಟ ಗ್ರಾಮದ ಸತೀಶ್ ಎಂಬವರ ಮನೆಯಲ್ಲಿರುವ ಈ ಗಿಣಿ ಇದೀಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಸುಮಾರು ಐದು ವರ್ಷದ ಹಿಂದೆ ತಮಗೆ ಸಿಕ್ಕ ಗಿಣಿಯನ್ನು ಮನೆಗೆ ತಂದು ಪಂಜರದಲ್ಲಿಟ್ಟು ಸಾಕಿದರು. ಬಳಿಕ ರಾಮು ಅಂತ ಹೆಸ್ರನ್ನೂ ಇಟ್ಟಿದ್ದಾರೆ. ಮನೆಯವರು ಮಾತಾಡುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ರಾಮು, ಬರಬರುತ್ತಾ ಮನೆಯವರ ಜೊತೆಗೆ ಮಾತು ಶುರು ಮಾಡಿದ. ಮನೆಗೆ ಯಾರಾದರೂ ಬಂದರೆ ತಕ್ಷಣ ಅಲರ್ಟ್ ಆಗುವ ರಾಮು, ಅದರ ಸಂದೇಶವನ್ನು ಕೊಡುತ್ತಾನೆ. ಬಂದವರನ್ನು ಊಟ ಆಯ್ತಾ, ಊಟ ಬೇಕಾ ಅಂತ ಕೇಳಿದ್ರೆ, ಸತೀಶ್ ಅವರ ಮಕ್ಕಳಾದ ಛಾಯ ಹಾಗೂ ಹರ್ಷಿತಾಳನ್ನು ಹೆಸರಿಟ್ಟು ಕರೆಯುತ್ತಾನೆ.

    ಮನೆಗೆ ಬಂದ್ರವರು ವಾಪಸ್ ಹೊರಟರೆ ‘ಹೋಗಿ ಬರ್ತೀರಾ?’ ಎಂದು ಬೀಳ್ಕೊಡುತ್ತಾನೆ. ಯಾರಾದರೂ ಕಿರಿಕ್ ಮಾಡಿದರೆ ‘ಹೋಗೋ’ ಅಥವಾ ‘ಹೋಗೆ’ ಅಂತ ಬಯ್ಯೋದನ್ನು ಕೂಡ ಈತ ಕರಗತ ಮಾಡಿಕೊಂಡಿದ್ದಾನೆ. ಇವನಿಗೆ ಕೊಡವ ವಾಲಗ ಅಂದರೆ ಎಲ್ಲಿಲ್ಲಂದ ಖುಷಿ. ಮೊಬೈಲಲ್ಲಿ ವಾಲಗ ಪ್ಲೇ ಮಾಡಿದರೆ ಸಾಕು, ತಲೆ ಅಲ್ಲಾಡಿಸುತ್ತಾ ಡ್ಯಾನ್ಸ್ ಮಾಡೋದು ಕೂಡ ಗೊತ್ತು. ಅಪರಿಚಿತರು ಮನೆಗೆ ಬಂದರೆ ಮೊದಲಿಗೆ ಕೊಂಚ ಮುಜುಗರ ತೋರುವ ರಾಮು, ನಂತರ ಸುಧಾರಿಸಿಕೊಳ್ಳುತ್ತಾನೆ. ಮನೇಲಿ ನಾಯಿಗಳು ಕೂಡ ಇದ್ದು, ಅವುಗಳೊಂದಿಗೂ ಹೊಂದಿಕೊಂಡಿದ್ದಾನೆ. ಸಂಜೆಯಾದರೆ ಮನೆಯವರ ಜೊತೆ ಕೂತು ಟಿವಿ ನೋಡೋದು ಕೂಡ ರುಟೀನ್ ಆಗಿಬಿಟ್ಟಿದೆ. ರಾಮುವಿನ ಸ್ಪೆಷಾಲಿಟಿ ಬಗ್ಗೆ ಮಾಹಿತಿ ತಿಳಿದು ಪ್ರತಿ ದಿನ ಹತ್ತಾರು ಮಂದಿ ನೋಡೋಕೆ ಬರುತ್ತಾರೆ. ಅವರು ಕೊಡೋ ಚಾಕ್ಲೇಟನ್ನು ತಾನೇ ಸುಳಿದು ತಿನ್ನುತ್ತಾನೆ ಎಂದು ಸ್ಥಳೀಯರಾದ ಆಣ್ಣಯ್ಯ ತಿಳಿಸಿದ್ದಾರೆ.

    ಸಾಮಾನ್ಯವಾಗಿ ಮನೇಲಿ ಸಾಕಿದ ಗಿಳಿಗಳು ಒಂದೆರಡು ಪದಗಳನ್ನು ಉಚ್ಛರಿಸೋದು ಇದ್ದಿದ್ದೇ. ಆದರೆ ಈ ರಾಮು ಮಾತ್ರ ಫುಲ್ ಡಿಫರೆಂಟಾಗಿ ಮಾತಾಡುವ ಜೊತೆಗೆ ಡ್ಯಾನ್ಸ್ ಕೂಡ ಮಾಡೋದು ಅಚ್ಚರಿಯ ಜೊತೆಗೆ ಮನೆಯವರ ಅಕ್ಕರೆಗೂ ಪಾತ್ರನಾಗಿದ್ದಾನೆ.

  • ಅಜಯ್ ದೇವಗನ್ ಡೇಂಜರಸ್ ಸ್ಟಂಟ್ ನಕಲು ಮಾಡಿದ ಗಿಳಿ

    ಅಜಯ್ ದೇವಗನ್ ಡೇಂಜರಸ್ ಸ್ಟಂಟ್ ನಕಲು ಮಾಡಿದ ಗಿಳಿ

    ಮುಂಬೈ: ಬಾಲಿವುಡ್ ಸಿಂಗಂ ಅಜಯ್ ದೇವಗನ್ ಅವರ ಪ್ರತಿ ಸಿನಿಮಾಗಳಲ್ಲಿ ಸ್ಪೆಷಲ್ ಸ್ಟಂಟ್ ಸೀನ್ ಇದ್ದೇ ಇರುತ್ತದೆ. ನೋಡಲು ಸರಳವಾಗಿ ಕಂಡರೂ, ಸ್ಟಂಟ್ ಪ್ರಯತ್ನ ಮಾಡಲು ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಸಿನಿಮಾಗಳಿಂದ ಪ್ರೇರಿತಗೊಂಡ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಫಾಲೋ ಮಾಡುತ್ತಾರೆ. ಇದೀಗ ಗಿಳಿಯೊಂದು ಅಜಯ್ ದೇವಗನ್ ಅವರನ್ನ ನಕಲು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಜಯ್ ದೇವಗನ್ ತಮ್ಮ ಮೊದಲ ಸಿನಿಮಾದಲ್ಲಿ ಎರಡು ಬೈಕ್ ಗಳ ಮೇಲೆ ನಿಂತು ಎಂಟ್ರಿ ನೀಡಿದ್ದರು. ಹಾಗೆಯೇ ಮುಂದಿನ ಕೆಲವು ಚಿತ್ರಗಳಲ್ಲಿ ಇದೇ ರೀತಿಯ ಎಂಟ್ರಿ ಪಡೆದಿದ್ದರು. ಕೆಲವು ವರ್ಷಗಳ ಹಿಂದೆ ಬಿಡುಗಡೆಗೊಂಡ ಸನ್ ಆಫ್ ಸರ್ದಾರ್ ಸಿನಿಮಾದಲ್ಲಿ ಎರಡು ಕುದುರೆಗಳ ಮೇಲೆ ನಿಂತು ಸ್ಟಂಟ್ ಮಾಡುವ ಮೂಲಕ ನೋಡುಗರ ಹುಬ್ಬೇರುವಂತೆ ಮಾಡಿದ್ದರು. ಗೋಲ್ಮಾಲ್ ಸಿನಿಮಾದಲ್ಲಿ ಎರಡು ಕಾರುಗಳ ಮೇಲೆ ನಿಂತು ಅಜಯ್ ಎಂಟ್ರಿ ನೀಡಿದ್ದರು.

    ಏನದು ವಿಡಿಯೋ?
    ಗಿಳಿಯೊಂದು ಎರಡು ಪುಟಾಣಿ ಕಾರುಗಳ ಮೇಲೆ ನಿಂತು ಹೋಗುತ್ತದೆ. ಇದು ಅಜಯ್ ದೇವಗನ್ ಗಿಳಿ ಎಂದು ಬರೆದು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ವಿಡಿಯೋವನ್ನು ರಿಟ್ವೀಟ್ ಮಾಡಿಕೊಂಡಿರುವ ಅಜಯ್ ದೇವಗನ್, ಮೆಚ್ಚುಗೆ ಸೂಚಿಸಿದ್ದಾರೆ. ಗಿಳಿ ಕಾರಿನ ಮೇಲೆ ಸ್ಟಂಟ್ ಮಾಡಿದ್ದನ್ನು, ಹಾರೋದನ್ನ ಮರೆತ ಹಾಗಿದೆ ಎಂದು ಬರೆದುಕೊಂಡಿದ್ದಾರೆ.

    ಅಜಯ್ ದೇವಗನ್ ಅಭಿನಯದ ‘ದೇ ದೇ ಪ್ಯಾರ್ ದೇ’ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಚಿತ್ರದಲ್ಲಿ 50 ವರ್ಷದ ಉದ್ಯಮಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಜಯ್ ದೇವಗನ್‍ಗೆ 24 ವರ್ಷದ ಯುವತಿಯೊಂದಿಗೆ ಪ್ರೇಮಾಂಕುರವಾಗುತ್ತದೆ. ಈ ಸಿನಿಮಾದಲ್ಲಿ ಅಜಯ್ ದೇವಗನ್ ಅವರ ಮಾಜಿ ಪತ್ನಿ ಪಾತ್ರದಲ್ಲಿ ತಬ್ಬು ಕಾಣಿಸಿಕೊಂಡಿದ್ದಾರೆ.

  • ಮನೆಗೆ ಬಂದ ಅತಿಥಿಯ ಜೊತೆ ಪತ್ನಿಯ ತರ್ಲೆ ನೋಡಿ ನಸುನಕ್ಕ ಯಜಮಾನ

    ಮನೆಗೆ ಬಂದ ಅತಿಥಿಯ ಜೊತೆ ಪತ್ನಿಯ ತರ್ಲೆ ನೋಡಿ ನಸುನಕ್ಕ ಯಜಮಾನ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯಕ್ಕೆ ಮೈಸೂರಿನ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈಗ ಅವರ ಮನೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದಾರೆ.

    ದರ್ಶನ್ ಮನೆಗೆ ವಿಶೇಷ ಅತಿಥಿಯಾಗಿ ಬಂದಿರುವುದು ಮುದ್ದಾದ ಗಿಳಿ. ದರ್ಶನ್, ಪತ್ನಿ ವಿಜಯಲಕ್ಷ್ಮಿ ಮತ್ತು ಮುದ್ದಾದ ಗಿಣಿ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ವಿಜಯಲಕ್ಷ್ಮಿ ಅವರು ತಮ್ಮ ಕೈಯಲ್ಲಿ ಗಿಳಿಯನ್ನು ಕೂರಿಸಿಕೊಂಡು ಅದರ ಜೊತೆ ಮಾತನಾಡುತ್ತಿದ್ದಾರೆ. ಇದನ್ನು ನೋಡಿದ ದರ್ಶನ್ ನಕ್ಕು ಬೇರೆ ಕಡೆ ನೋಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು.

    ಇಂದು ಕೂಡ ದರ್ಶನ್ ತಮ್ಮ ಮಗ ವಿನೀಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಚಿತ್ರವನ್ನು ವಿಜಯಲಕ್ಷ್ಮಿ ಅವರು ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ದರ್ಶನ್ ಕುಟುಂಬದವರಿಗೆ ಪ್ರಾಣಿ-ಪಕ್ಷಿಗಳೆಂದರೆ ತುಂಬಾ ಪ್ರೀತಿ. ದರ್ಶನ್ ಅವರು ಕುದುರೆ, ಹುಲಿ, ಚಿರತೆಯನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಇನ್ನು ಮಗ ವಿನೀಶ್ ಕೂಡ ಒಂದು ಕುದುರೆಯನ್ನು ಸಾಕುತ್ತಿದ್ದು, ಇತ್ತೀಚೆಗೆ ಅದರಲ್ಲಿ ಸವಾರಿ ಕೂಡ ಮಾಡಿದ್ದರು. ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಪ್ರಾಣಿ ಮತ್ತು ಪಕ್ಷಿಗಳ ಪ್ರೇಮಿಯಾಗಿದ್ದು, ಅವರು ತಮ್ಮ ಮನೆಯಲ್ಲಿ ಬೆಕ್ಕನ್ನು ಸಾಕಿದ್ದಾರೆ.

    ಇತ್ತೀಚೆಗೆ ದರ್ಶನ್ ಅವರು ತಮಿಳುನಾಡಿನ ತಿರುನಲ್ಲರ್ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮಗ ವಿನೀಶ್ ಮತ್ತು ಕೆಲವು ಸ್ನೇಹಿತರ ಜೊತೆ ಜನಸಾಮಾನ್ಯರಂತೆ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ್ ಪೂಜೆ ಸಲ್ಲಿಸಿ ಬಂದಿದ್ದಾರೆ.

    ಕಡು ನೀಲಿ ವರ್ಣದ ಉಡುಪು ಧರಿಸಿ ದೇವಸ್ಥಾನಕ್ಕೆ ತೆರಳಿದ್ದ ದರ್ಶನ್ ದೀಪದ ಎಣ್ಣೆಯ ತುಲಾಭಾರ ಹರಕೆಯನ್ನ ಪೂರೈಸಿದ್ದಾರೆ. ವರ್ಷಕ್ಕೊಮ್ಮೆ ಆದರೂ ದರ್ಶನ್ ತಿರುನಲ್ಲರ್ ಶನಿ ದೇವಸ್ಥಾನಕ್ಕೆ ಭೇಟಿ ನೀಡುವ ಪದ್ಧತಿಯನ್ನು ರೂಡಿಸಿಕೊಂಡು ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುದ್ದು ಗಿಳಿಯ ಸಾವು- ವಿಧಿವಿಧಾನದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ ಮಾಲೀಕ

    ಮುದ್ದು ಗಿಳಿಯ ಸಾವು- ವಿಧಿವಿಧಾನದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ ಮಾಲೀಕ

    ಲಕ್ನೋ: ಕುಟುಂಬಸ್ಥರು ಸಾವನ್ನಪ್ಪಿದಾಗ ಅಂತ್ಯಸಂಸ್ಕಾರ ನಡೆಸುವುದು ಸಂಪ್ರದಾಯದ ಒಂದು ಭಾಗ. ಆದ್ರೆ ಉತ್ತರಪ್ರದೇಶದ ಅಮ್ರೋಹಾದಲ್ಲಿ ವ್ಯಕ್ತಿಯೊಬ್ಬರು ತನ್ನ ಸಾಕುಗಿಳಿಯ ಅಂತ್ಯಸಂಸ್ಕಾರವನ್ನ ನೆರವೇರಿಸಿರುವುದು ಸುದ್ದಿಯಾಗಿದೆ.

    ಪಂಜಕ್ ಕುಮಾರ್ ಮಿತ್ತಲ್ ಹಿಂದೂ ಸಂಪ್ರದಾಯದಂತೆ ಗಿಳಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮಿತ್ತಲ್ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಮಾರ್ಚ್ 5 ರಂದು ಸಾವನ್ನಪ್ಪಿದ್ದ ತನ್ನ ಮುದ್ದು ಗಿಳಿಗೆ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ತನ್ನ ಪ್ರೀತಿ ಹಾಗೂ ಸ್ಮರಣೆಯನ್ನ ನಿರೂಪಿಸಿದ್ದಾರೆ. ಅಮ್ರೋಹಾದ ಹಸನ್‍ಪುರ್ ನಿವಾಸಿಯಾಗಿರೋ ಮಿತ್ತಲ್, ಗಿಳಿಯ ಅಂತ್ಯಸಂಸ್ಕಾರದ ಭಾಗವಾಗಿ ಭಾನುವಾರದಂದು ಹವನ ಹಾಗೂ ಔತಣ ಕೂಡ ಏರ್ಪಡಿಸಿದ್ದರು.

    5 ವರ್ಷಗಳ ಹಿಂದೆ ಗಿಳಿಯ ಕಾಲಿಗೆ ಗಾಯವಾಗಿ ಅದು ಹಾರಾಡಲು ಸಾಧ್ಯವಿರದಿದ್ದಾಗ ನಾನದನ್ನು ದತ್ತು ತೆಗೆದುಕೊಂಡಿದ್ದೆ. ನನ್ನ ಮಗನಿಗಿಂತಲೂ ಹೆಚ್ಚಾಗಿ ಅದಕ್ಕೆ ಆರೈಕೆ ಮಾಡಿದ್ದೆ ಎಂದು ಮಿತ್ತಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

    ಮಿತ್ತಲ್ ಕುಟುಂಬಸ್ಥರು ಗಿಳಿಯ ಅವಶೇಷಗಳನ್ನು ಗಂಗಾ ನದಿಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಹಿಂದೂ ಸಂಪ್ರದಾಯದಂತೆ ಗಿಳಿಯ ಅಂತ್ಯಕ್ರಿಯೆ ನಡೆಸಿದ್ದಷ್ಟೇ ಅಲ್ಲದೆ ಪ್ರಾರ್ಥನೆಯನ್ನು ಕೂಡ ಆಯೋಜಿಸಿದ್ದರು ಎಂದು ವರದಿಯಾಗಿದೆ.