Tag: ಗಿಳಿಗಳು

  • ಹಕ್ಕಿ ಜ್ವರದ ಎಫೆಕ್ಟ್ – 3 ಸಾವಿರ ಗಿಳಿಗಳ ಆರೈಕೆಗೆ ಮುಂದಾದ ಸ್ವಾಮೀಜಿ

    ಹಕ್ಕಿ ಜ್ವರದ ಎಫೆಕ್ಟ್ – 3 ಸಾವಿರ ಗಿಳಿಗಳ ಆರೈಕೆಗೆ ಮುಂದಾದ ಸ್ವಾಮೀಜಿ

    ಮೈಸೂರು: ಜಿಲ್ಲೆಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಶ್ರೀ ಗಣಪತಿ ಆಶ್ರಮದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು 3 ಸಾವಿರ ಗಿಳಿಗಳ ಆರೈಕೆಗೆ ಇಳಿದಿದ್ದಾರೆ.

    ಆಶ್ರಮದ ಶುಕವನದಲ್ಲಿ ಸುಮಾರು 3 ಸಾವಿರ ಗಿಳಿಗಳಿದ್ದು, 450 ಪ್ರಭೇದದ ಗಿಳಿಗಳನ್ನ ಸಂರಕ್ಷಿಸಲಾಗಿದೆ. ಸ್ವತಃ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳೇ ಗಿಳಿಗಳ ಆರೈಕೆಯಲ್ಲಿ ತೊಡಗಿದ್ದು, ಸ್ವತಃ ತಾವೇ ನೀರು ಆಹಾರ ನೀಡಿ ಆರೈಕೆ ಮಾಡುತ್ತಿದ್ದಾರೆ. ಆಶ್ರಮಕ್ಕೆ ಹೊರಗಿನ ಹಕ್ಕಿಗಳು ಸಂಪರ್ಕ ಮಾಡದಂತೆ ಸುತ್ತಲೂ ಬಲೆ ಹಾಕಲಾಗಿದೆ. ಆಶ್ರಮದ ಸುತ್ತ ಮುತ್ತ ಕೋಳಿಗಳು,ಕೊಕ್ಕರೆಗಳು ಸುಳಿಯದಂತೆ ನೋಡಿಕೊಳ್ಳಲಾಗಿದೆ.

    ಮೈಸೂರಿನ ಕುಂಬಾರಕೊಪ್ಪಲು ಮನೆಯೊಂದರಲ್ಲಿ ಇತ್ತೀಚೆಗೆ ಸತ್ತಿದ್ದ ಕೋಳಿ ಹಾಗೂ ಸ್ಮಶಾನದಲ್ಲಿ ಮೃತಪಟ್ಟಿದ್ದ ಪಕ್ಷಿಯ ಮೃತದೇಹದ ಮಾದರಿಗಳನ್ನು ಭೂಪಾಲ್‍ನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಹೈಸೆಕ್ಯೂರಿಟಿ ಅನಿಮಲ್ ಡೀಸಿಸ್‍ಗೆ ಕಳುಹಿಸಲಾಗಿತ್ತು. ಮೈಸೂರಿನಿಂದ ಕಳುಹಿಸಿದ್ದ ಏಳು ಮಾದರಿಗಳಲ್ಲಿ ಎರಡು ಮಾದರಿಗಳು ಪಾಸಿಟಿವ್ ಬಂದಿದೆ.

    ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ತಕ್ಷಣವೇ ಸಾಕು ಪಕ್ಷಿಗಳ ಸರ್ವೆ ನಡೆಸಿ, ಮೂರ್ನಾಲ್ಕು ದಿನಗಳಲ್ಲಿ 6,436 ಪಕ್ಷಿಗಳನ್ನು ಕೊಲ್ಲಲು ರ್ನಿಧರಿಸಿದೆ. ಜೊತೆಗೆ ಹಕ್ಕಿಜ್ವರ ಪತ್ತೆಯಾದ ಮೈಸೂರಿನ ಕುಂಬಾರಕೊಪ್ಪಲಿನ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ. ಈವರೆಗೆ ಒಟ್ಟು 6,436 ಪಕ್ಷಿಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಹೀಗಾಗಿ ಕುಂಬಾರಕೊಪ್ಪಲಿನ 10 ಕಿ.ಮೀ. ವ್ಯಾಪ್ತಿಯನ್ನು ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿದೆ.

    ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಒಟ್ಟು 17,820 ಮನೆಗಳಿವೆ. ಅದರಲ್ಲಿ 144 ಮನೆಗಳಲ್ಲಿ ಪಕ್ಷಿಗಳಿವೆ. ಈ ಪೈಕಿ ನೈಸರ್ಗಿಕ ಪಕ್ಷಿಗಳು 1,252, ಔದ್ಯಮಿಕ ಪಕ್ಷಿಗಳು 5,100 ಹಾಗೂ ಸಾಕು ಪಕ್ಷಿಗಳು 254 ಎಂದು ಗುರುತಿಸಲಾಗಿದೆ. ಇದರಲ್ಲಿ ಕ್ವೈಲ್ಸ್ 12 ಹಾಗೂ ಟರ್ಕಿ 18 ಸೇರಿ ಒಟ್ಟು 6,436 ಪಕ್ಷಿಗಳಿದ್ದು, ಎಲ್ಲವನ್ನೂ ನಾಶಪಡಿಸಲು ನಿರ್ಧರಿಸಲಾಗಿದೆ.

  • ಕೋರ್ಟ್ ಮೆಟ್ಟಿಲೇರಿದ್ವು ಶೂ ಬಾಕ್ಸಿನಲ್ಲಿದ್ದ 13 ಗಿಳಿಗಳು

    ಕೋರ್ಟ್ ಮೆಟ್ಟಿಲೇರಿದ್ವು ಶೂ ಬಾಕ್ಸಿನಲ್ಲಿದ್ದ 13 ಗಿಳಿಗಳು

    ನವದೆಹಲಿ: ದೆಹಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವಿಚಿತ್ರ ಪ್ರಕರಣಕ್ಕೆ ಸಂಬಂಧ ಪಟ್ಟ 13 ಗಿಳಿಗಳನ್ನು ನ್ಯಾಯಾಲಯದ ಮುಂದೆ ಬುಧವಾರ ಹಾಜರು ಪಡಿಸಲಾಯಿತು.

    ಈ ಸುದ್ದಿ ಕೇಳಿದ ತಕ್ಷಣ ಪಾಪ ಆ ಮುಗ್ಧ ಪಕ್ಷಿಗಳು ಏನು ತಪ್ಪು ಮಾಡಿತ್ತು? ಅವುಗಳನ್ನು ನ್ಯಾಯಾಲಯಕ್ಕೆ ಯಾಕೆ ಕರೆದೊಯ್ದರು ಅಂತ ಹಲವು ಪ್ರಶ್ನೆ ಕಾಡುತ್ತೆ. ಅಚ್ಚರಿ ಕೂಡ ಆಗುತ್ತೆ. ಆದರೆ ನ್ಯಾಯಾಲಯಕ್ಕೆ ಅವುಗಳನ್ನು ಕರೆದಂದಿದ್ದು ಅವುಗಳ ತಪ್ಪಿಗಲ್ಲ, ಬದಲಾಗಿ ಅವನ್ನು ಕದ್ದೊಯ್ಯುತ್ತಿದ್ದ ಆರೋಪಿಯಿಂದಾಗಿ ಈ ಗಿಳಿಗಳನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು.

    ವನ್ಯಜೀವಿ ಕಾಯ್ದೆಯ ಅನ್ವಯ ಗಿಳಿಗಳನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ. ಆದರೂ ಭಾರತದಿಂದ 13 ಜೀವಂತ ಗಿಳಿಗಳನ್ನು ಆರೋಪಿ ಅನ್ವರ್ಜೋನ್ ರಾಖಮತ್ಜೊನೊವ್ ಶೂ ಪೆಟ್ಟಿಗೆಗಳಲ್ಲಿ ಇರಿಸಿ ವಿದೇಶಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸಿದ್ದನು. ಈ ವೇಳೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್‍ಎಫ್(ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿ ಆತನನ್ನು ಬಂಧಿಸಿದ್ದರು. ಆಗ ಆತನ ಬಳಿಯಿದ್ದ ಗಿಳಿಗಳನ್ನು ಸಿಐಎಸ್‍ಎಫ್ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು.

    ಗಿಳಿಗಳನ್ನು ಕಳ್ಳ ಸಾಗಾಣಿಕೆ ಮಾಡುವ ಆರೋಪಿ ವಿರುದ್ಧ ಕಸ್ಟಮ್ಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡಿತ್ತು. ಕಾನೂನಿನ ಪ್ರಕಾರ, ನ್ಯಾಯಾಲಯದಲ್ಲಿ ಯಾವುದೇ ಪ್ರಕರಣದ ವಿಚಾರಣೆ ನಡೆದರೂ ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಹೀಗಾಗಿ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿದ್ದ ಗಿಳಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಗಿಳಿಗಳು ಜೀವಂತವಾಗಿದ್ದ ಕಾರಣಕ್ಕೆ ಅವುಗಳನ್ನು ವನ್ಯಜೀವಿ ಅಧಿಕಾರಿಗಳಿಗೆ ಹಸ್ತಾಂತರಿಸುವುದಕ್ಕಾಗಿ ನ್ಯಾಯಾಲಯಕ್ಕೆ ಕರೆತರಲಾಯಿತು ಎಂದು ಕಸ್ಟಮ್ಸ್ ವಕೀಲ ಪಿಸಿ ಶರ್ಮಾ ತಿಳಿಸಿದರು.

    ಗಿಳಿಗಳ ಜೊತೆ ಆರೋಪಿಯನ್ನು ಕೂಡ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆತ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದನು. ಆದರೆ ನ್ಯಾಯಾಲಯ ಆತನ ಅರ್ಜಿಯನ್ನು ವಜಾಗೊಳಿಸಿದ್ದು ಅಕ್ಟೋಬರ್ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

    ಸದ್ಯ ವಶಪಡಿಸಿಕೊಂಡಿದ್ದ ಎಲ್ಲಾ ಗಿಳಿಗಳನ್ನು ಓಖ್ಲಾ ಪಕ್ಷಿಧಾಮಕ್ಕೆ ಕಳುಹಿಸುವಂತೆ ನ್ಯಾಯಾಧೀಶರು ಸೂಚಿಸಿದ್ದು, ಪಕ್ಷಿಗಳನ್ನು ಸುರಕ್ಷಿತವಾಗಿ ಪಕ್ಷಿಧಾಮಕ್ಕೆ ಬಿಟ್ಟು ಬರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.