Tag: ಗಿರ್ ಗಿಟ್ಲೆ

  • ಭೂಗತದ ಗಿರ್ ಗಿಟ್ಲೆಯಲ್ಲಿ ಬದುಕಿನ ದರ್ಶನವಿದೆ!

    ಭೂಗತದ ಗಿರ್ ಗಿಟ್ಲೆಯಲ್ಲಿ ಬದುಕಿನ ದರ್ಶನವಿದೆ!

    ಬೆಂಗಳೂರು: ಇದು ಯಾವ ಬಗೆಯ ಚಿತ್ರ ಎಂಬ ಗೊಂದಲವನ್ನೇ ಕುತೂಹಲವನ್ನಾಗಿ ಪರಿವರ್ತಿಸಿಕೊಂಡು ಬಹು ನಿರೀಕ್ಷಿತ ಚಿತ್ರವಾಗಿ ಹೊರಹೊಮ್ಮಿದ್ದ ಚಿತ್ರ ಗಿರ್ ಗಿಟ್ಲೆ. ರವಿಕಿರಣ್ ನಿರ್ದೇಶನದ ಈ ಚಿತ್ರವೀಗ ಬಿಡುಗಡೆಗೊಂಡಿದೆ. ಪಕ್ಕಾ ಕಮರ್ಶಿಯಲ್ ಸಿನಿಮಾವಾದರೂ ಆ ಸೂತ್ರದಾಚೆಗೂ ಹಬ್ಬಿಕೊಂಡಿರೋ ಮೂವರು ಹುಡುಗರತ ಸುತ್ತಾ ಘಟಿಸೋ ಈ ಕಥನ ಪ್ರೇಕ್ಷಕರನ್ನು ತನ್ನದೇ ಆದ ರೀತಿಯಲ್ಲಿ ಸೆಳೆದುಕೊಂಡಿದೆ.

    ರೌಡಿಸಂ ಹುದುಲಿಗೆ ಕಾಲಿಡೋ ಹುಡುಗರು, ಭೂಗತ ಜಗತ್ತು, ಪ್ರೀತಿ ಮುಂತಾದವುಗಳೆಲ್ಲ ಸಾಕಷ್ಟು ಸಂಖ್ಯೆಯಲ್ಲಿ ಸಿನಿಮಾ ವಸ್ತುಗಳಾಗಿವೆ. ಆದರೆ ಭಿನ್ನ ಒಳನೋಟ ಮತ್ತು ಸೂಕ್ಷ್ಮತೆ ಇದ್ದರೆ ಖಂಡಿತಾ ಇಂಥಾ ಕಥೆಯೇ ಬೇರೆ ರೀತಿಯಲ್ಲಿ ಕಾಡಬಲ್ಲದೆಂಬುದಕ್ಕೆ ಗಿರ್ ಗಿಟ್ಲೆ ಚಿತ್ರ ತಾಜಾ ಉದಾಹರಣೆಯಂತಿರೋ ಚಿತ್ರ. ಈ ಮೂಲಕ ಬಿಡುಗಡೆಯ ಪೂರ್ವದಲ್ಲಿ ಹುಟ್ಟಿಕೊಂಡಿದ್ದ ಕ್ಯೂರಿಯಾಸಿಟಿಗಳೆಲ್ಲವನ್ನು ನಿರ್ದೇಶಕ ರವಿಕಿರಣ್ ತಣಿಸಿದ್ದಾರೆ.

    ಇದು ದಿಕ್ಕುದೆಸೆಗಳಿಲ್ಲದ ಮೂವರು ಅನಾಥ ಹುಡುಗರ ಸುತ್ತಾ ಸುತ್ತವ ಕಥೆ. ಅನಾಥರಾಗಿ ಹುಟ್ಟಿ ಬೆಳೆದ, ವಿದ್ಯೆಯನ್ನೂ ಮೈಗೂಡಿಸಿಕೊಂಡ ಈ ಯುವಕರು ಅದು ಹೇಗೋ ಹಾದಿ ಬಿಟ್ಟು ಭೂಗತದತ್ತ ಆಕರ್ಷಿತರಾಗುತ್ತಾರೆ. ನಗರ ಪ್ರದೇಶದ ಡಾನುಗಳನ್ನು ಕೊಂದು ಕೆಡವಿದರೆ ನೇಮು ಫೇಮು ಬರುತ್ತದೆಂಬ ಪಿತ್ಥವೂ ನೆತ್ತಿಗೇರಿಕೊಳ್ಳುತ್ತೆ. ಇದರಿಂದಲೇ ಕೈ ತುಂಬಾ ಕಾಸು ಗಿಟ್ಟಿಸುವ ತಂತ್ರವನ್ನೂ ಮೈಗೂಡಿಸಿಕೊಳ್ಳುತ್ತಾರೆ. ಒಬ್ಬ ಡಾನ್ ನನ್ನು ಮುಗಿಸಲು ಮತ್ತೊಬ್ಬರಿಂದ ಸುಪಾರಿ ಪಡೆದು ಇದನ್ನೇ ಪುನರಾವರ್ತಿಸುತ್ತಾರೆ.

    ಹೀಗೆ ಅನೇಕರ ಕೊಲೆಗೆ ಸುಪಾರಿ ಪಡೆಯುತ್ತಲೇ ಹೋಗೋ ಈ ಹುಡುಗರು ಒಪ್ಪಿಕೊಂಡ ಕೆಲಸ ಮುಗಿಸುತ್ತಾರಾ ಅಥವಾ ತಾವೇ ಮುಗಿದು ಹೋಗುತ್ತಾರಾ ಅನ್ನೋದು ಗಿರ್ ಗಿಟ್ಲೆಯ ನಿಜವಾದ ಕುತೂಹಲ. ಅದನ್ನು ಥೇಟರಿನಲ್ಲಿ ನೋಡಿ ತಣಿಸಿಕೊಂಡರೇನೇ ಉತ್ತಮ. ಕೇವಲ ಈ ಭೂಗತದ ಆಚೀಚೆಯ ಕಥೆ ಮಾತ್ರವಾಗಿದ್ದರೆ ಇದೊಂದು ಸಾಧಾರಣ ಚಿತ್ರವಾಗಿ ದಾಖಲಾಗಿತ್ತು. ಆದರೆ ನಿರ್ದೇಶಕ ರವಿಕಿರಣ್ ಇದರೊಂದಿಗೇ ಬದುಕಿನ ಕಗ್ಗಂಟುಗಳಿಗೆ ಉತ್ತರ ಹುಡುಕೋ ಪ್ರಯತ್ನ ಮಾಡಿದ್ದಾರೆ. ತಮ್ಮೊಳಗಿನ ಪ್ರಶ್ನೆಗಳನ್ನು ಪಾತ್ರಗಳ ಮೂಲಕ ಎಲ್ಲರಿಗೂ ಕಾಡುವಂತೆ ಮಾಡಿದ್ದಾರೆ.

    ರಗಡ್ ಡೈಲಾಗುಗಳು, ಮಾಸ್ ಸನ್ನಿವೇಶಗಳ ಮೂಲಕವೇ ಈ ಚಿತ್ರ ಎಲ್ಲರಿಗೂ ಆಪ್ತವಾಗುತ್ತೆ. ನಿರೀಕ್ಷೆಯಂತೆಯೇ ರಂಗಾಯಣ ರಘು ಪಕ್ಕಾ ಡಿಫರೆಂಟಾದ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂವರು ಹುಡುಗರು ರಘು ಜೊತೆ ಪಳಗಿದ ನಟರಂತೆಯೇ ನಟಿಸಿದ್ದಾರೆ. ಒಟ್ಟಾರೆಯಾಗಿ ರೌಡಿಸಂ ಹಿನ್ನೆಲೆಯೊಂದಿಗೆ ಭಿನ್ನವಾದ ಚಿತ್ರವೊಂದನ್ನು ರವಿಕಿರಣ್ ಕೊಟ್ಟಿದ್ದಾರೆ. ಈ ಮೂಲಕವೇ ಅವರು ಭಿನ್ನ ಪಥದ ನಿರ್ದೇಶಕರಾಗಿ ನೆಲೆ ನಿಲ್ಲೋ ಲಕ್ಷಣಗಳೂ ಕಾಣಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಿರ್ ಗಿಟ್ಲೆ: ಮರೆಯಾದ ಉದಯ್ ಅಬ್ಬರಿಸಿದ ಕೊನೆಯ ಚಿತ್ರ!

    ಗಿರ್ ಗಿಟ್ಲೆ: ಮರೆಯಾದ ಉದಯ್ ಅಬ್ಬರಿಸಿದ ಕೊನೆಯ ಚಿತ್ರ!

    ಬೆಂಗಳೂರು: ಇದೀಗ ರವಿ ಕಿರಣ್ ನಿರ್ದೇಶನದ ಗಿರ್ ಗಿಟ್ಲೆ ಚಿತ್ರದತ್ತ ಪ್ರೇಕ್ಷಕರೆಲ್ಲ ಆಕರ್ಷಿತರಾಗಿದ್ದಾರೆ. ಟ್ರೈಲರ್, ಹಾಡುಗಳ, ಪೋಸ್ಟರ್ ಸೇರಿದಂತೆ ಪ್ರತಿಯೊಂದಕ್ಕೂ ಸಕಾರಾತ್ಮಕ ಸ್ಪಂದನೆಯೇ ಸಿಗುತ್ತಿದೆ. ಈ ಖುಷಿಯ ನಡುವಲ್ಲಿಯೂ ದುಃಖದ ಮಡುವಿಗೆ ಕೆಡಹುವಂಥಾ ಬೇಸರವೊಂದು ಗಿರ್ ಗಿಟ್ಲೆ ಚಿತ್ರತಂಡವನ್ನು ಬಿಟ್ಟೂ ಬಿಡದಂತೆ ಕಾಡುತ್ತಿದೆ.

    ಅದಕ್ಕೆ ಕಾರಣವಾಗಿರೋದು ಮಾಸ್ತಿ ಗುಡಿ ದುರಂತದಲ್ಲಿ ಮರೆಯಾದ ಯುವ ನಟ ಉದಯ್. ಯಾಕೆಂದರೆ, ಗಿರ್ ಗಿಟ್ಲೆ ಸಿನಿಮಾದಲ್ಲಿಯೂ ಕೂಡಾ ಉದಯ್ ಪ್ರಧಾನ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇದು ಉದಯ್ ಪಾಲಿನ ಕಡೆಯ ಚಿತ್ರವೂ ಹೌದು. ಇದನ್ನೂ ಓದಿ: ಅಗ್ನಿಸಾಕ್ಷಿ ಸುಂದರಿಯ ಗಿರ್ ಗಿಟ್ಲೆ!

    ಉದಯ್ ಅಪಾರವಾದ ಸಿನಿಮಾ ಪ್ರೀತಿ ಹೊಂದಿದ್ದ ನಟ. ಯಾವುದೇ ಒಂದು ಚಿತ್ರದಲ್ಲಿ ಅವಕಾಶ ಸಿಕ್ಕರೂ ತನ್ನ ಪಾತ್ರಕ್ಕೆ ಜೀವ ತುಂಬಿ ಹೊರಟು ಬಿಡೋದು ಅವರ ಜಾಯಮಾನವಾಗಿರಲಿಲ್ಲ. ಇಡೀ ಚಿತ್ರ ತಂಡದೊಂದಿಗೆ ಬೆರೆತು ಹೋಗುತ್ತಿದ್ದರು. ಗಿರ್ ಗಿಟ್ಲೆ ಚಿತ್ರ ಕೂಡಾ ಅದಕ್ಕೆ ಹೊರತಾಗಿರಲಿಲ್ಲ. ಇದನ್ನೂ ಓದಿ: ಗಿರ್ ಗಿಟ್ಲೆ: ರಂಗಾಯಣ ರಘು ಪಾತ್ರದ ರಂಪ ರಾಮಾಯಣ!

    ಈ ಚಿತ್ರದ ಕಥೆಯನ್ನು ಕೇಳಿ ಥ್ರಿಲ್ ಆಗಿಯೇ ಉದಯ್ ನಟಿಸಲು ಒಪ್ಪಿಕೊಂಡಿದ್ದರಂತೆ. ಅವರ ಪಾತ್ರವಂತೂ ಅವರಿಗೇ ಹಿಡಿಸಿ ಹೋಗಿತ್ತು. ಬಹುಶಃ ಉದಯ್ ಬದುಕಿದ್ದಿದ್ದರೆ ಅವರ ವೃತ್ತಿ ಬದುಕಿಗೆ ಬೇರೆಯದ್ದೇ ದಿಕ್ಕು ತೋರಿಸುವಂತೆ ಗಿರ್ ಗಿಟ್ಲೆಯಲ್ಲಿ ಉದಯ್ ಪಾತ್ರವಿದೆಯಂತೆ. ಅದರಲ್ಲಿ ಉದಯ್ ಅದ್ಭುತವಾಗಿಯೇ ನಟಿಸಿದ್ದರು. ಇದೀಗ ಹಲವಾರು ಅಡೆತಡೆಗಳಾಚೆಗೂ ಗಿರ್ ಗಿಟ್ಲೆ ಬಿಡುಗಡೆಗೆ ರೆಡಿಯಾಗಿದೆ. ಈ ಕ್ಷಣದಲ್ಲಿ ಉದಯ್ ಬದುಕಿರ ಬೇಕಿತ್ತೆಂಬ ಆಸೆ ಕೊರಗು ಭಾವನೆ ಚಿತ್ರತಂಡವನ್ನು ಕಾಡುತ್ತಿದೆ. ಇದನ್ನೂ ಓದಿ: ಗಿರ್ ಗಿಟ್ಲೆ: ಮರೆಯಾದ ಉದಯ್ ಅಬ್ಬರಿಸಿದ ಕೊನೆಯ ಚಿತ್ರ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಗಿರ್ ಗಿಟ್ಲೆ: ರಂಗಾಯಣ ರಘು ಪಾತ್ರದ ರಂಪ ರಾಮಾಯಣ!

    ಗಿರ್ ಗಿಟ್ಲೆ: ರಂಗಾಯಣ ರಘು ಪಾತ್ರದ ರಂಪ ರಾಮಾಯಣ!

    ಬೆಂಗಳೂರು: ರಂಗಾಯಣ ರಘು ಅಂದ್ರೆ ಕನ್ನಡದ ಪ್ರತಿಭಾವಂತ ನಟ. ಅವರು ನಿರ್ವಹಿಸಿರೋ ಪಾತ್ರಗಳು, ವಿಶಿಷ್ಟವಾದ ಮ್ಯಾನರಿಸಂ ಕನ್ನಡಿಗರನ್ನೆಲ್ಲ ಆವರಿಸಿಕೊಂಡಿವೆ. ಆದರೆ ಅದೇಕೋ ಒಂದಷ್ಟು ಕಾಲ ರಘು ಒಂದೇ ವೆರೈಟಿಯ ಪಾತ್ರಗಳಲ್ಲಿ ಬಂಧಿಯಾಗಿದ್ದರೆಂಬ ಅಳಲು ಅವರನ್ನು ಮೆಚ್ಚಿಕೊಳ್ಳುವ ಮಂದಿಯಲ್ಲಿಯೇ ಇತ್ತು. ಆದರೆ ಗಿರ್ ಗಿಟ್ಲೆ ಚಿತ್ರ ಅಂಥಾ ಎಲ್ಲ ಕೊರಗನ್ನೂ ನೀಗಿ ರಂಗಾಯಣ ರಘು ಅವರಿಗೆ ಹೊಸಾ ಇಮೇಜ್ ಕಟ್ಟಿ ಕೊಡೋದಂತೂ ನಿಶ್ಚಿತ! ಇದನ್ನೂ ಓದಿ: ನೋಡುಗರನ್ನೆಲ್ಲ ಗಿರಕಿ ಹೊಡೆಸಲು ರೆಡಿಯಾಯ್ತು ಗಿರ್ ಗಿಟ್ಲೆ!

    ಈಗಾಗಲೇ ಸೆಕೆಂಡುಗಳ ಲೆಕ್ಕದಲ್ಲಿರೋ ಗಿರ್ ಗಿಟ್ಲೆ ಪ್ರೋಮೋಗಳು ವೈರಲ್ ಆಗಿ ಬಿಟ್ಟಿವೆ. ಅದಕ್ಕೆ ಕಾರಣವಾಗಿರೋದು ರಂಗಾಯಣ ರಘು ಅವರ ಡೈಲಾಗ್ ಮೋಡಿ. ಅವರಿಲ್ಲಿ ಬೇರೆಯದ್ದೇ ಥರದ ಪಾತ್ರದಲ್ಲಿ ಮಿಂಚಿದ್ದಾರೆಂಬ ಸ್ಪಷ್ಟ ಸೂಚನೆ ಈ ಮೂಲಕ ಸಿಕ್ಕಿದೆ. ಇದನ್ನೂ ಓದಿ:  ಅಗ್ನಿಸಾಕ್ಷಿ ಸುಂದರಿಯ ಗಿರ್ ಗಿಟ್ಲೆ!

    ಅಂತೂ ಇದರಲ್ಲಿ ರಂಗಾಯಣ ರಘು ಅವರದ್ದು ಖುಲ್ಲಂ ಖುಲ್ಲಾ ಪಾತ್ರ. ಎಲ್ಲವನ್ನೂ ಬಿಡು ಬೀಸಾಗಿ ಹೇಳುವ, ಆ ಮೂಲಕವೇ ಖಡಕ್ ಡೈಲಾಗುಗಳ ಮೂಲಕ ಕಚಗುಳಿ ಇಡುವ ಕ್ಯಾರೆಕ್ಟರ್ ಅವರದ್ದು. ಈ ಪಾತ್ರದ ರಂಪ ರಾಮಾಯಣಗಳು ಚಿತ್ರದುದ್ದಕ್ಕೂ ಇರಲಿವೆ. ಆದರೆ ರಂಗಾಯಣ ರಘು ಯಾವ ಪಾತ್ರ ಮಾಡಿದ್ದಾರೆಂಬುದನ್ನು ಚಿತ್ರ ತಂಡ ಗೌಪ್ಯವಾಗಿಟ್ಟಿದೆ. ಅದನ್ನು ಒಂದೇ ಮಾತಿನಲ್ಲಿ ಹೇಳಲೂ ಸಾಧ್ಯವಿಲ್ಲ. ಯಾಕೆಂದರೆ ಅವರಿಲ್ಲಿ ಹಲವಾರು ಶೇಡುಗಳಲ್ಲಿ ಅವತರಿಸಲಿದ್ದಾರಂತೆ! ಇದನ್ನೂ ಓದಿ: ಗಿರ್ ಗಿಟ್ಲೆ ನಿರ್ದೇಶಕರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಗ್ನಿಸಾಕ್ಷಿ ಸುಂದರಿಯ ಗಿರ್ ಗಿಟ್ಲೆ!

    ಅಗ್ನಿಸಾಕ್ಷಿ ಸುಂದರಿಯ ಗಿರ್ ಗಿಟ್ಲೆ!

    ಬೆಂಗಳೂರು: ರವಿಕಿರಣ್ ನಿರ್ದೇಶನದ ಗಿರ್ ಗಿಟ್ಲೆ ಈಗ ಎಲ್ಲಾ ವರ್ಗದ ಪ್ರೇಕ್ಷಕರ ಆಸಕ್ತಿಯ ಕೇಂದ್ರಬಿಂದು. ಟ್ರೈಲರ್, ಹಾಡುಗಳು ಮತ್ತು ಒಂದಕ್ಕಿಂತ ಒಂದು ಭಿನ್ನವಾದ ಪೋಸ್ಟರ್ ಗಳ ಮೂಲಕವೇ ಈ ಚಿತ್ರವೀಗ ಎಲ್ಲ ವರ್ಗದ ಪ್ರೇಕ್ಷಕರನ್ನೂ ತುದಿಗಾಲಲ್ಲಿ ನಿಲ್ಲಿಸಿದೆ. ಹೀಗೆ ಗಿರ್ ಗಿಟ್ಲೆ ಬಗ್ಗೆ ಎಲ್ಲೆಡೆ ಸೃಷ್ಟಿಯಾಗಿರೋ ಕ್ರೇಜ್ ಗೆ ತಕ್ಕುದಾದ ಹೊಸತನಗಳೇ ಅದೊರಳಗೂ ಇರೋದು ಸುಳ್ಳಲ್ಲ!

    ಗಿರ್ ಗಿಟ್ಲೆಯೊಳಗೆ ಹೆಸರಿಸಲಾಗದಷ್ಟು ಪ್ರಮಾಣದಲ್ಲಿ ವಿಶೇಷತೆಗಳಿವೆ. ಸಾಕಷ್ಟು ವಿಚಾರಗಳಲ್ಲಿ ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಮೊದಲಾಗೋ ಲಕ್ಷಣಗಳೂ ಇವೆ. ಅದರಲ್ಲಿಯೂ ಈ ಸಿನೆಮಾ ಮೂಲಕ ಸೀರಿಯಲ್ ಸ್ಟಾರ್ ವೈಷ್ಣವಿ ಗೌಡ ನಾಯಕಿಯಾಗಿ ಹಿರಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಇಲ್ಲಿ ಅವರ ಪಾತ್ರ ಕೂಡಾ ಒಟ್ಟಾರೆ ವಿಶೇಷತೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ! ಇದನ್ನೂ ಓದಿ:  ನೋಡುಗರನ್ನೆಲ್ಲ ಗಿರಕಿ ಹೊಡೆಸಲು ರೆಡಿಯಾಯ್ತು ಗಿರ್ ಗಿಟ್ಲೆ!

    ವೈಷ್ಣವಿ ಗೌಡ ಅಂದರೆ ತಕ್ಷಣಕ್ಕೆ ಗೊತ್ತಾಗೋದು ಕಷ್ಟ. ಆದರೆ ಅಗ್ನಿಸಾಕ್ಷಿ ಸನ್ನಿಧಿ ಅಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಕಿರುತೆರೆಯ ಪ್ರಸಿದ್ಧ ಧಾರಾವಾಹಿ ಅಗ್ನಿಸಾಕ್ಷಿಯ ಮೂಲಕ ಸನ್ನಿಧಿಯಾಗಿ ವೈಷ್ಣವಿ ಗೌಡ ಮಾಡಿರೋ ಮೋಡಿಯೇ ಅಂಥಾದ್ದು. ತನ್ನ ಸುತ್ತ ಎಂಥಾದ್ದೇ ಪಿತೂರಿಗಳು ನಡೆದರೂ ಬಂಧಗಳೇ ಬದುಕೆಂದುಕೊಳ್ಳೋ ಹುಡುಗಿಯಾಗಿ ನಟಿಸುತ್ತಿರೋ ವೈಷ್ಣವಿ ಕಿರುತೆರೆ ಪ್ರೇಕ್ಷಕರ ಪಾಲಿಗೆ ಮನೆ ಮಗಳಾಗಿ ಹೋಗಿದ್ದಾರೆ.  ಇದನ್ನೂ ಓದಿ: ಗಿರ್ ಗಿಟ್ಲೆ ನಿರ್ದೇಶಕರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ!

    ಇಂಥಾ ವೈಷ್ಣವಿ ಗಿರ್ ಗಿಟ್ಲೆ ಚಿತ್ರದ ಮೂಲಕ ಹಿರಿತೆರೆಗೂ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ವೈಷ್ಣವಿ ಅಭಿಮಾನಿ ಬಳಗವೂ ಕಾತರದಿಂದಿದೆ. ಈ ಚಿತ್ರದಲ್ಲಿಯೂ ವೈಷ್ಣವಿ ಅಗ್ನಿಸಾಕ್ಷಿಯಂಥಾದ್ದೇ ಮುಗ್ಧ ಪಾತ್ರದಲ್ಲಿ ನಟಿಸಿದ್ದಾರಾ ಎಂಬಂಥಾ ಕುತೂಹಲವೂ ಇದೆ. ಆದ್ರೆ ಗಿರ್ ಗಿಟ್ಲೆಯಲ್ಲಿನ ವೈಷ್ಣವಿ ಪಾತ್ರ ಎಲ್ಲರನ್ನೂ ಬೆರಗಾಗಿಸಲಿದೆ ಅನ್ನೋದು ಚಿತ್ರತಂಡದ ಕಡೆಯಿಂದ ಹೊರ ಬಿದ್ದಿರೋ ಮಾಹಿತಿ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನೋಡುಗರನ್ನೆಲ್ಲ ಗಿರಕಿ ಹೊಡೆಸಲು ರೆಡಿಯಾಯ್ತು ಗಿರ್ ಗಿಟ್ಲೆ!

    ನೋಡುಗರನ್ನೆಲ್ಲ ಗಿರಕಿ ಹೊಡೆಸಲು ರೆಡಿಯಾಯ್ತು ಗಿರ್ ಗಿಟ್ಲೆ!

    ಬೆಂಗಳೂರು: ಇದೇ ಮಾರ್ಚ್ 15ರಂದು ಬಿಡುಗಡೆಗೆ ರೆಡಿಯಾಗಿರೋ ಗಿರ್ ಗಿಟ್ಲೆ ಈಗ ಪ್ರೇಕ್ಷಕರ ನಡುವಿನ ಹಾಟ್ ಟಾಪಿಕ್. ಈ ಚಿತ್ರದ ನಿರ್ದೇಶಕ ರವಿಕಿರಣ್ ರಿಯಲ್ ಸ್ಟಾರ್ ಉಪೇಂದ್ರ ಅವರ ಗರಡಿಯಲ್ಲಿಯೇ ಪಳಗಿಕೊಂಡವರು. ಹಾಗಿದ್ದ ಮೇಲೆ ಈ ಸಿನಿಮಾದಲ್ಲಿಯೂ ಹೊಸತನ ಗ್ಯಾರೆಂಟಿ ಎಂಬ ನಂಬಿಕೆ ಜನರಲ್ಲಿದೆ. ಈಗಾಗಲೇ ಹೊರ ಬಂದಿರೋ ಟ್ರೈಲರ್, ಪ್ರೋಮೋ ಮತ್ತು ಪೋಸ್ಟರ್ ಗಳು ಅದನ್ನು ನಿಜವಾಗಿಸೋ ಲಕ್ಷಣಗಳನ್ನೇ ರವಾನಿಸಿವೆ.

    ರವಿಕಿರಣ್ ಅವರು ಒಂದಿಡೀ ಚಿತ್ರವನ್ನು ಎಲ್ಲ ಥರದಲ್ಲಿಯೂ ಡಿಫರೆಂಟಾಗಿರಬೇಕೆಂಬ ಛಲದೊಂದಿಗೇ ರೂಪಿಸಿದ್ದಾರೆ. ಕಥೆ, ಸಂಭಾಷಣೆ ಮತ್ತು ತಾಂತ್ರಿಕವಾಗಿಯೂ ಕೂಡಾ ಈ ಸಿನಿಮಾ ಬಹು ಮುಖ್ಯವಾಗಿ ದಾಖಲಾಗಲಿದೆಯಂತೆ. ಈ ಸಿನಿಮಾದ ಅಸಲೀ ಶಕ್ತಿಯೇ ಸ್ಕ್ರೀನ್ ಪ್ಲೇ. ಮತ್ತೊಂದು ಶಕ್ತಿ ಸಮ್ಮೋಹಕವಾದ ಸಂಭಾಷಣೆ!

    ಈಗಾಗಲೇ ಟ್ರೈಲರ್ ಮತ್ತು ಪ್ರೋಮೋಗಳ ಮೂಲಕ ಗಿರ್ ಗಿಟ್ಲೆ ಡೈಲಾಗುಗಳು ಪ್ರೇಕ್ಷಕರನ್ನು ಗಿರಕಿ ಹೊಡೆಸಿವೆ. ನೇರಾ ನೇರ ಕನೆಕ್ಟ್ ಆಗುವಂಥಾ, ಹಾಸ್ಯದೊಂದಿಗೇ ಕಚಗುಳಿಯಿಡುವ ಶಾರ್ಪ್ ಡೈಲಾಗ್ ಗಳಿಗೆ ಜನ ಮಾರು ಹೋಗಿದ್ದಾರೆ. ಈ ಮೂಲಕ ಚಿತ್ರ ತಂಡ ಸ್ಯಾಂಪಲ್ ಮಾತ್ರ ಬಿಟ್ಟು ಕೊಟ್ಟಿದೆ. ಒಟ್ಟಾರೆ ಚಿತ್ರದುದ್ದಕ್ಕೂ ಇಂಥಾ ಮಜವಾದ ಡೈಲಾಗುಗಳಿವೆಯಂತೆ.

    ಚಿತ್ರ ಬಿಡುಗಡೆಯಾದ ನಂತರದಲ್ಲಿ ಅದರಲ್ಲಿನ ಡೈಲಾಗುಗಳೆಲ್ಲ ವೈರಲ್ ಆಗೋದು ಗ್ಯಾರೆಂಟಿ ಎಂಬ ಭರವಸೆ ಚಿತ್ರತಂಡದಲ್ಲಿದೆ. ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ಈ ಚಿತ್ರ ತೆರೆ ಕಾಣಲು ರೆಡಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಿರ್ ಗಿಟ್ಲೆ ನಿರ್ದೇಶಕರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ!

    ಗಿರ್ ಗಿಟ್ಲೆ ನಿರ್ದೇಶಕರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ!

    ಬೆಂಗಳೂರು: ‘ನಾನು ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗ ನನ್ನ ಹೆಸರಿನ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಹೆಸರಿನ ಪ್ರಭೆ ಮಾತ್ರ ಇರಬೇಕು…’ ಹೀಗೊಂದು ಪ್ರತಿಜ್ಞೆ ಮಾಡಿಯೇ ಚಿತ್ರರಂಗದ ತೆಕ್ಕೆಗೆ ಬಿದ್ದವರು ರವಿಕಿರಣ್. ತನ್ನ ಇಂಗಿತದಂತೆಯೇ ಉಪೇಂದ್ರ ಅವರ ಆತ್ಮೀಯ ಸಾಂಗತ್ಯ ಪಡೆದು, ಅವರದ್ದೊಂದು ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ ರವಿಕಿರಣ್ ಈಗ ತಮ್ಮ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅವರು ನಿರ್ದೇಶನ ಮಾಡಿರೋ ಹೊಸತನದ ಚಿತ್ರ ಗಿರ್ ಗಿಟ್ಲೆ ಇದೇ ಮಾರ್ಚ್ 15ರಂದು ಬಿಡುಗಡೆಯಾಗಲು ರೆಡಿಯಾಗಿದೆ..!

    ಉಪ್ಪಿ ಅಭಿಮಾನದಿಂದಲೇ, ಅವರ ಸ್ಫೂರ್ತಿಯಿಂದಲೇ ಚಿತ್ರರಂಗಕ್ಕೆ ಬಂದವರು ಸಾಕಷ್ಟು ಮಂದಿಯಿದ್ದಾರೆ. ಅವರಲ್ಲಿ ರವಿಕಿರಣ್ ಕೂಡಾ ಒಬ್ಬರು. ಆದರೆ ಅಂದುಕೊಂಡಿದ್ದನ್ನು ಪಟ್ಟು ಹಿಡಿದು ಮಾಡುವ, ಮಾಡಿದ್ದೆಲ್ಲವೂ ಡಿಫರೆಂಟಾಗಿರಬೇಕೆಂದೇ ಬಯಸುವ ರವಿಕಿರಣ್ ಈ ವಿಚಾರದಲ್ಲಿಯೂ ಅಪ್ಪಟ ಉಪ್ಪಿ ಶಿಷ್ಯ. ಬಹುಶಃ ಅಂಥಾದ್ದೊಂದು ಛಲ ಇಲ್ಲದೇ ಹೋಗಿದ್ದರೆ ಎದುರಾದ ಅಡೆತಡೆಗಳಿಂದ ತಲೆತಪ್ಪಿಸಿಕೊಂಡು ಎಲ್ಲಿಯೋ ಕಳೆದು ಹೋಗಬೇಕಾಗುತ್ತಿತ್ತು. ಅಖಂಡ ಆರು ವರ್ಷಗಳ ಕಾಲ ಬಿದ್ದ ಏಟು, ಆದ ಆಘಾತಗಳನ್ನೆಲ್ಲ ಸಹಿಸಿಕೊಂಡು ಗಿರ್ ಗಿಟ್ಲೆ ಅಂತೊಂದು ಸಿನಿಮಾವನ್ನು ರೂಪಿಸೋದು ಖಂಡಿತಾ ಸಾಧ್ಯವಿರುತ್ತಿರಲಿಲ್ಲ.

    ಇಂಥಾ ಸವಾಲಿನ ಹಾದಿಯಲ್ಲಿ ಸಾಗಿ ಬಂದರೂ ಕೂಡಾ ಗಿರ್ ಗಿಟ್ಲೆ ಚಿತ್ರವನ್ನು ಹೊಸಾ ಥರದಲ್ಲಿ ಪೊರೆದ ಖುಷಿಯೊಂದು ರವಿಕಿರಣ್ ಅವರಿಗಿದೆ. ಅದಕ್ಕೆ ಈಗ ಈ ಸಿನಿಮಾ ಬಗ್ಗೆ ಹುಟ್ಟಿಕೊಂಡಿರೋ ಕ್ರೇಜ್‍ಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಹೀಗೆ ಕಷ್ಟದ ಹಾದಿಯಲ್ಲಿ ಸಾಗಿ ಬಂದು ತಮ್ಮ ಕನಸನ್ನು ನನಸು ಮಾಡಿಕೊಂಡಿರೋ ರವಿಕಿರಣ್ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವರು. ಚೆಂದಗೆ ಓದಿ ಖಾಸಗಿ ಕಂಪೆನಿಯೊಂದರಲ್ಲಿ ಎಚ್ ಆರ್ ರಿಕ್ರೂಟರ್ ಆಗಿ ಕೈತುಂಬಾ ಸಂಬಳವನ್ನೂ ಅವರು ಪಡೆಯುತ್ತಿದ್ದರು. ಆದರೆ ಇದೆಲ್ಲದರ ನಡುವೆಯೂ ಅವರಿಗೆ ಉಪೇಂದ್ರ ಅವರ ಸಿನಿಮಾಗಳ ಮೇಲೆ, ಉಪ್ಪಿಯ ಭಿನ್ನ ಆಲೋಚನೆಗಳ ಮೇಲೆ ಎಂಥಾದ್ದೋ ಮೋಹವಿತ್ತು.

    ಹೀಗಿರುವಾಗಲೇ ಅದೊಂದು ಸಲ ಗೆಳೆಯರೆಲ್ಲ ಕಿರು ಚಿತ್ರವೊಂದನ್ನು ಮಾಡಲು ಮುಂದಾಗಿದ್ದರು. ಅದರಲ್ಲಿ ಒಂದು ಸಣ್ಣ ಪಾತ್ರ ನಿರ್ವಹಿಸೋ ಸದವಕಾಶ ರವಿಕಿರಣ್ ಪಾಲಿಗೆ ಕೂಡಿ ಬಂದಿತ್ತು. ಹಾಗೆ ಚಿತ್ರೀಕರಣಕ್ಕೆ ಹೋದಾಗ ಎಲ್ಲ ವಿಭಾಗಗಳೂ ಅವರನ್ನು ಸೆಳೆದುಕೊಂಡಿದ್ದವು. ಕ್ಯಾಮೆರಾ ವರ್ಕ್ ಅಂತೂ ಅವರನ್ನು ಅಪಾರವಾಗಿ ಸೆಳೆದುಕೊಂಡಿತ್ತು. ಅದಾಗಲೇ ಉಪ್ಪಿ ಪ್ರಭಾವ ಬೇರೆ ಇತ್ತಲ್ಲಾ? ಅದೆಲ್ಲವೂ ಸೇರಿಕೊಂಡು ಕೈತುಂಬಾ ಸಂಬಳ ಬರೋ ಕೆಲಸ ಬಿಟ್ಟು ಸಿನಿಮಾ ಮಾಡಬೇಕೆಂಬ ಆಸೆಯಿಂದ ಹೊರ ಬಂದು ನಿಂತವರು ರವಿಕಿರಣ್. ಹೇಗೋ ಮಾಡಿ ಉಪೇಂದ್ರ ಅವರ ಪರಿಚಯ ಮಾಡಿಕೊಂಡ ಅವರ ಮುಂದೆ ಗುರಿ ಮತ್ತಷ್ಟು ಸ್ಪಷ್ಟವಾಗಲಾರಂಭಿಸಿತ್ತು.

    ಈ ನಡುವೆ ಒಂದೆರಡು ತಮಿಳು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಬಂದ ರವಿಕಿರಣ್ ತದ ನಂತರ ಗಿರ್ ಗಿಟ್ಲೆ ಕಥೆ ರೆಡಿ ಮಾಡಿಕೊಂಡಿದ್ದರು. 2012ರ ಸುಮಾರಿಗೆ ಪ್ರಚಾರದ ಶೋಕಿಯ ಆಸಾಮಿಯೊಬ್ಬರು ನಿರ್ಮಾಣ ಮಾಡೋದಾಗಿ ಮುಂದೆ ಬಂದು ಮುಹೂರ್ತ ನಡೆಸಿ, ಭರ್ಜರಿ ಪ್ರಚಾರ ಪಡೆದು ನಾಪತ್ತೆಯಾಗಿ ಬಿಟ್ಟಿದ್ದರು. ಇದರ ಆಫ್ಟರ್ ಎಫೆಕ್ಟ್ ರವಿಕಿರಣ್ ಅವರನ್ನು ಮೂರೂವರೆ ವರ್ಷಗಳ ಕಾಲ ಬಿಡದೆ ಬಾಧಿಸಿತ್ತು. ಆದರೂ ಪಟ್ಟು ಬಿಡದೆ ಪ್ರಯತ್ನಿಸಿದ ಫಲವಾಗಿಯೇ ಗಿರ್ ಗಿಟ್ಲೆ ಈವತ್ತು ದೊಡ್ಡ ಮಟ್ಟದ ಕ್ರೇಜ್ ನೊಂದಿಗೆ ಬಿಡುಗಡೆಗೆ ರೆಡಿಯಾಗಿದೆ. ಈ ಮೂಲಕ ಒಂದು ಹಿಟ್ ಚಿತ್ರ ಮತ್ತು ಭಿನ್ನ ಒಳನೋಟದ ನಿರ್ದೇಶಕ ಕನ್ನಡಕ್ಕೆ ಸಿಗೋದು ಪಕ್ಕಾ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv