ಬೆಂಗಳೂರು: ತಾಯಿಯನ್ನು ಹಳೆ ಸ್ಕೂಟರ್ ನಲ್ಲಿ ಕರೆದುಕೊಂಡು ತೀರ್ಥಯಾತ್ರೆಯನ್ನು ಮಾಡುತ್ತಿರುವ ಮೈಸೂರು ನಿವಾಸಿಯಾಗಿರುವ ಕೃಷ್ಣ ಕುಮಾರ್ ಹಾಗೂ ತಾಯಿ ರತ್ನಮ್ಮ ಅವರ ಜರ್ನಿಯ ಕಥೆ ಮಹೀಂದ್ರ ಸಂಸ್ಥೆಯ ಆನಂದ್ ಮಹೀಂದ್ರಾ ವರೆಗೂ ತಲುಪಿದ್ದು, ಅಮ್ಮ-ಮಗನ ಈ ವರದಿಯನ್ನು ಕೇಳಿದ ಆನಂದ್ ಮಹೀಂದ್ರಾ ಅವರು ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದಾರೆ.
ವೃದ್ಧ ತಂದೆ, ತಾಯಿಯನ್ನು ಭಾರವೆಂದು ವೃದ್ಧಾಶ್ರಮಗಳಿಗೆ ದಾಖಲು ಮಾಡುತ್ತಿರುವ ಮಕ್ಕಳ ನಡುವೆ ಕೃಷ್ಣ ಕುಮಾರ್ ಅವರ ಈ ಕಾರ್ಯ ಹಲವರ ಮೆಚ್ಚುಗೆಗೆ ಕಾರಣವಾಗಿತ್ತು. ಸದ್ಯ ಆನಂದ್ ಮಹೀಂದ್ರಾ ಅವರು ಕೂಡ ಕೃಷ್ಣ ಕುಮಾರ್ ಅವರ ಕಾರ್ಯಕ್ಕೆ ಫಿದಾ ಆಗಿದ್ದು, ತಾಯಿ ಹಾಗೂ ದೇಶದ ಬಗ್ಗೆ ಇರುವ ಪ್ರೀತಿಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ವೈಯಕ್ತಿಕವಾಗಿ ಅವರಿಗೆ ಮಹೀಂದ್ರ ಕೆಯುವಿ 100 ಎನ್‍ಎಕ್ಸ್‍ಟಿ ಕಾರನ್ನು ಗಿಫ್ಟ್ ನೀಡುವುದಾಗಿ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ.
ಕೃಷ್ಣ ಕುಮಾರ್ ಅವರು ಮಾಧ್ಯಮವೊಂದಕ್ಕೆ ತಮ್ಮ ಕಾರ್ಯದ ಕುರಿತು ಹೇಳಿಕೆ ನೀಡಿದ್ದು, ಈ ವಿಡಿಯೋವನ್ನು ಟ್ವಿಟ್ಟಗರೊಬ್ಬರು ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಈ ಟ್ವಿಟ್ಟನ್ನು ರಿಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಅವರು ನನ್ನನ್ನು ಸಂಪರ್ಕ ಮಾಡಿದರೆ ಕಾರನ್ನು ಗಿಫ್ಟ್ ನೀಡುವುದಾಗಿ ತಿಳಿಸಿದ್ದು, ಮುಂದಿನ ತಮ್ಮ ಪ್ರಯಾಣವನ್ನು ಕಾರಿನಲ್ಲಿ ನಡೆಸಬಹುದು ಎಂದು ಹೇಳಿದ್ದಾರೆ.
ಯಾರು ಕೃಷ್ಣ ಕುಮಾರ್: ಮೂಲತಃ ಮೈಸೂರಿನವರಾಗಿದ್ದು, ಅವರ ತಂದೆ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಒಂದು ದಿನ ರತ್ಮಮ್ಮನವರು, ನಿಮ್ಮ ತಂದೆ ಕೊನೆಗೂ ನನಗೆ ವೆಲ್ಲೂರು ದೇವಸ್ಥಾನ ತೋರಿಸಲಿಲ್ಲ. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿಬಿಟ್ಟರು ಎಂದು ನೋವು ತೋಡಿಕೊಂಡಿದ್ದರು. ಅಂದು ಕೃಷ್ಣ ಕುಮಾರ್, ಕೇವಲ ವೆಲ್ಲೂರು ಏಕೆ, ದೇಶದ ನಾಲ್ಕು ದಿಕ್ಕಿನಲ್ಲಿರುವ ಕ್ಷೇತ್ರಗಳ ದರ್ಶನ ಮಾಡಿಸುತ್ತೇನೆ ಎಂದು ತೀರ್ಥಯಾತ್ರೆ ಆರಂಭಿಸಿದ್ದಾರೆ.

ತಾಯಿಗೆ ನೀಡಿದ ಮಾತಿನಂತೆ ತಂದೆಯ ನಲವತ್ತು ವರ್ಷದ ಹಳೆಯ ಸ್ಕೂಟರ್ ಮೇಲೆ ಅಮ್ಮನ ಜೊತೆ ಕೃಷ್ಣ ಕುಮಾರ್ ತೀರ್ಥಯಾತ್ರೆ ಆರಂಭಿಸಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ಪುದುಚೇರಿ, ಸೇರಿದಂತೆ ನೇಪಾಳ, ಮ್ಯಾನ್ಮಾರ್ ಸೇರಿದಂತೆ ಹಲವು ಸ್ಥಳಗಳಿಗೆ ಸ್ಕೂಟರ್ ಮೇಲೆಯೇ ಭೇಟಿ ನೀಡಿದ್ದಾರೆ.
ತಂದೆ-ತಾಯಿ ಸೇವೆಯಲ್ಲಿ ತೊಡಗಿಕೊಂಡಿರುವ ಕೃಷ್ಣಕುಮಾರ್ ಅವರಿಗೆ ಮದುವೆ ಆಗಿಲ್ಲ. ತಂದೆಯ ನಿಧನದ ಬಳಿಕ ತಾಯಿಯೇ ಕೃಷ್ಣ ಕುಮಾರ್ ಅವರ ದೊಡ್ಡ ಆಸ್ತಿಯಾಗಿದ್ದಾರೆ. ತೀರ್ಥಯಾತ್ರೆಯನ್ನ ಬಸ್ ಅಥವಾ ಬೇರೆ ವಾಹನದ ಮೂಲಕ ಕೈಗೊಳ್ಳಬಹುದಿತ್ತು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಸ್ಕೂಟರ್ ನಮ್ಮ ಜೊತೆಯಲ್ಲಿದ್ದರೆ ತಂದೆಯೊಂದಿಗೆ ಪ್ರಯಾಣ ಮಾಡುತ್ತಿದ್ದೇವೆ ಅನ್ನಿಸುತ್ತದೆ ಎಂದಿದ್ದಾರೆ.

ತಾಯಿಯ ಸೇವೆ ಮಾಡುವುದರಲ್ಲಿಯೇ ನನಗೆ ಖುಷಿ ಹಾಗೂ ತೃಪ್ತಿ ಸಿಗುತ್ತದೆ. ಸ್ಕೂಟರ್ ಜೊತೆ ತಂದೆಯ ನೆನಪುಗಳು ಬೆಸೆದುಕೊಂಡಿವೆ. ಒಂದು ಸ್ಟೆಪ್ನಿ ಜೊತೆ ಪ್ರಯಾಣ ಮಾಡುತ್ತಿದ್ದು, ಹೋದ ಸ್ಥಳಗಳಲ್ಲಿ ಒಳ್ಳೆಯ ಜನರು ಸಿಗುತ್ತಿದ್ದು, ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಕೃಷ್ಣ ಕುಮಾರ್ ಈ ಹಿಂದೆ ತಿಳಿಸಿದ್ದರು.
ಮಗ ನನಗಾಗಿ ಮದುವೆ ಮಾಡಿಕೊಳ್ಳಲಿಲ್ಲ. ಕೃಷ್ಣ ಕುಮಾರನನೇ ನನಗೆ ಮಗ ಮತ್ತು ಮಗಳಾಗಿ ನೋಡಿಕೊಳ್ಳುತ್ತಿದ್ದಾನೆ. ಪ್ರಯಾಣದಲ್ಲಿ ಇದೂವರೆಗೂ ಯಾವುದೇ ತೊಂದರೆ ಆಗಿಲ್ಲ. ಇಂತಹ ಮಗನನ್ನು ಎಲ್ಲರಿಗೂ ದೇವರು ಕರುಣಿಸಲಿ ಎಂದು ತಾಯಿ ರತ್ನಮ್ಮ ಪುತ್ರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
