Tag: ಗಿಫ್ಟ್

  • ತುಪ್ಪದ ಬೆಡಗಿ ರಾಗಿಣಿ ಬರ್ತ್ ಡೇಗೆ ವಿದೇಶದಿಂದ ವಿಶೇಷ ಉಡುಗೊರೆ

    ತುಪ್ಪದ ಬೆಡಗಿ ರಾಗಿಣಿ ಬರ್ತ್ ಡೇಗೆ ವಿದೇಶದಿಂದ ವಿಶೇಷ ಉಡುಗೊರೆ

    ಬೆಂಗಳೂರು: ಇಂದು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅವರಿಗೆ ತಮ್ಮ ಸಹೋದರ ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ.

    ರಾಗಿಣಿ 28ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ವರ್ಷದ ಹುಟ್ಟುಹಬ್ಬವನ್ನು ತಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ರಾಗಿಣಿ ಹುಟ್ಟುಹಬ್ಬಕ್ಕೆ ಮುನ್ನವೇ ಅವರಿಗೆ ವಿದೇಶದಿಂದ ವಿಶೇಷ ಉಡುಗೊರೆಗಳು ಬಂದಿದೆ.

    ರಾಗಿಣಿ ದ್ವಿವೇದಿ ಸಹೋದರ ರುದ್ರಾಕ್ಷ್ ದ್ವಿವೇದಿ ಅವರು ತಮ್ಮ ಪ್ರೀತಿಯ ಸಹೋದರಿಗೆ ವಿದೇಶದಿಂದ ಗಿಫ್ಟ್ ಕಳುಹಿಸಿದ್ದಾರೆ. ಸಹೋದರಿಗೆ ಏನು ಇಷ್ಟ ಇದೆ ಎಂದು ತಿಳಿದುಕೊಂಡು ಅವೆಲ್ಲವನ್ನು ಉಡುಗೊರೆ ರೂಪದಲ್ಲಿ ರುದ್ರಾಕ್ಷ್ ನೀಡಿದ್ದಾರೆ. ಸುಮಾರು ಐದು ಅಡಿ ಎತ್ತರವಿರುವ ಟೆಡ್ಡಿ ಬೇರ್ ಗೊಂಬೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರ ಜೊತೆಗೆ ಶಾರ್ಕ್ ಸೂಟ್ ಒಂದನ್ನೂ ಉಡುಗೊರೆಯಾಗಿ ಕೊಟ್ಟಿದ್ದಾರೆ.

    ಸಹೋದರನಿಂದ ಸರ್ಪ್ರೈಸ್  ಉಡುಗೊರೆಗಳು ಸಿಕ್ಕ ನಂತರ ರಾಗಿಣಿ ಅವರು, ಗಿಫ್ಟ್ ಗಳ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಫೋಸ್ಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

    ರಾಗಿಣಿ `ವೀರ ಮದಕರಿ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ `ಕೆಂಪೇಗೌಡ’, `ವಿಕ್ಟರಿ’, `ಕಳ್ಳ ಮಳ್ಳ ಸುಳ್ಳ’, `ಶಿವಂ’, ಇತ್ತೀಚೆಗೆ ಬಿಡುಗಡೆಗೊಂಡ `ಕಿಚ್ಚು’ ಸಿನಿಮಾದಲ್ಲೂ ರಾಗಿಣಿ ದ್ವಿವೇದಿ ಅಭಿನಯಿಸಿದ್ದಾರೆ.

  • ಪುಣೆ ಕ್ರೀಡಾಂಗಣ ಸಿಬ್ಬಂದಿಗೆ ವಿಶೇಷ ಗಿಫ್ಟ್ ಕೊಟ್ಟ ಧೋನಿ

    ಪುಣೆ ಕ್ರೀಡಾಂಗಣ ಸಿಬ್ಬಂದಿಗೆ ವಿಶೇಷ ಗಿಫ್ಟ್ ಕೊಟ್ಟ ಧೋನಿ

    ಪುಣೆ: ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಕ್ರೀಡಾಂಗಣವಾಗಿದ್ದ ಪುಣೆಯ ಮಹಾರಾಷ್ಟ್ರ ಅಸೋಸಿಯೇಷನ್ ಕ್ರೀಡಾಂಗಣದ ಸಿಬ್ಬಂದಿಗೆ ಚೆನ್ನೈ ತಂಡದ ನಾಯಕ ಧೋನಿ ವಿಶೇಷ ಕೊಡುಗೆ ನೀಡಿದ್ದಾರೆ.

    ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಕೊನೆಯ ಪಂದ್ಯದ ಬಳಿಕ ಕ್ರೀಡಾಂಗಣದ ಸಿಬ್ಬಂದಿಯ ಶ್ರಮವನ್ನು ಗುರುತಿಸಿ ತಲಾ 20 ಸಾವಿರ ರೂ. ನಗದು ಗಿಫ್ಟ್ ನೀಡಲಾಗಿದೆ. ಬಳಿಕ ಸಿಬ್ಬಂದಿಯೊಂದಿಗೆ ಧೋನಿ ಹಾಗೂ ಚೆನ್ನೈ ತಂಡ ಆಟಗಾರರು ಫೋಟೋ ಸಹ ತೆಗೆಸಿಕೊಂಡಿದ್ದಾರೆ.

    ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಚೆನ್ನೈ ತಂಡದ ವಕ್ತಾರರು, ಇದು ಸಿಬ್ಬಂದಿ ಶ್ರಮಕ್ಕೆ ನೀಡಿದ ಸಣ್ಣ ಕೊಡುಗೆ ಮಾತ್ರ. ಕಡಿಮೆ ಅವಧಿಯಲ್ಲಿ ಕ್ರೀಡಾಂಗಣವನ್ನು ಸಿದ್ಧಪಡಿಸಿ ಅವಕಾಶ ನೀಡಿದ್ದರು. ಅದ್ದರಿಂದ ಧೋನಿ ಸೇರಿದಂತೆ ಆಟಗಾರರ ಸಲಹೆ ಮೇರೆಗೆ ಈ ನಿರ್ಧಾರ ಮಾಡಲಾಯಿತು ಎಂದು ತಿಳಿಸಿದ್ದಾರೆ.

    ಈ ಬಾರಿ ಟೂರ್ನಿಯ ಆರಂಭದ ಪಂದ್ಯಗಳು ಚೆನ್ನೈ ನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿತ್ತು. ಆದರೆ ಕಾವೇರಿ ಕುರಿತ ವಿಚಾರವಾಗಿ ತಮಿಳುನಾಡಿನಲ್ಲಿ ನಡೆದ ಗಲಾಟೆ ಬಳಿಕ ಐಪಿಎಲ್ ಪಂದ್ಯಗಳಿಗೆ ವಿರೋಧ ವ್ಯಕ್ತವಾಗಿತ್ತು. ಈ ಕಾರಣದಿಂದ ಪಂದ್ಯಗಳನ್ನು ಚೆನ್ನೈ ನಿಂದ ಪುಣೆಗೆ ವರ್ಗಾವಣೆ ಮಾಡಲಾಗಿತ್ತು.

    ಬಳಿಕ ಪುಣೆಯ ಕ್ರೀಡಾಂಗಣದಲ್ಲಿ ಚೆನ್ನೈ ತಂಡ ಆಡಿದ 6 ಪಂದ್ಯಗಳಲ್ಲಿ 5 ರಲ್ಲಿ ಗೆದ್ದು ಬೀಗಿದೆ. ಪಂಜಾಬ್ ವಿರುದ್ಧದ ಪಂದ್ಯವನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 18 ಅಂಕಗಳೊಂದಿಗೆ 2ನೇ ಸ್ಥಾನಗಳಿಸಿದೆ.

  • ಮೇಕಪ್‍ಮೆನ್ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಗಿಫ್ಟ್ ನೀಡಿದ ಜಾಕ್ವೆಲಿನ್!- ವಿಡಿಯೋ

    ಮೇಕಪ್‍ಮೆನ್ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಗಿಫ್ಟ್ ನೀಡಿದ ಜಾಕ್ವೆಲಿನ್!- ವಿಡಿಯೋ

    ಮುಂಬೈ: ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ತನ್ನ ಜೊತೆ ಕೆಲಸ ಮಾಡುವ ಸಿಬ್ಬಂದಿಯನು ಕುಟುಂಬದವರಂತೆ ನೋಡಿಕೊಳ್ಳುತ್ತಾರೆ. ಜಾಕ್ವೆಲಿನ್ ತನ್ನ ಮೆಕಪ್‍ಮೆನ್ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಗಿಫ್ಟ್ ನೀಡಿದ್ದಾರೆ.

    ಜಾಕ್ವೆಲಿನ್ ಫರ್ನಾಂಡಿಸ್ ತನ್ನ ಮೆಕಪ್‍ಮೆನ್ ಶಾನ್ ಮುತಾತಿಲ್‍ನ 34ನೇ ವರ್ಷದ ಹುಟ್ಟುಹಬ್ಬಕ್ಕೆ ಬ್ರ್ಯಾಂಡ್ ನ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಶಾನ್ ಮುತಾತಿಲ್ ಜಾಕ್ವೆಲಿನ್ ಜೊತೆ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

    ಜಾಕ್ವೆಲಿನ್ ಸರ್ಪ್ರೈಸ್ ನೀಡುತ್ತಿರುವ ವಿಡಿಯೋವನ್ನು ಶಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ನನ್ನ ಧನ್ಯವಾದಗಳು. ಕೆಲಸದಿಂದಲ್ಲೇ ನನ್ನ ಹುಟ್ಟುಹಬ್ಬದ ದಿನ ಶುರುವಾಗಿದೆ. ಈ ವರ್ಷ ಜಾಕ್ವೆಲಿನ್ ನೀನು ನನಗೆ ಅದ್ಭುತವಾದ ಸರ್ಪ್ರೈಸ್ ನೀಡಿದೆ. ನೀನು ಅಪಾರ್ಟ್ ಮೆಂಟ್ ಕೆಳಗೆ ಕಾರಿನವರೆಗೂ ಹೋಗುವುದನ್ನು ವಿಡಿಯೋ ಮಾಡು ಎಂದು ಹೇಳಿದೆ. ನನಗಾಗಿ ಈ ಸರ್ಪ್ರೈಸ್ ನೀಡುತ್ತೀಯ ಎಂದು ನನಗೆ ಯಾವುದೇ ಸುಳಿವು ಸಹ ಇರಲಿಲ್ಲ. ನನಗೆ ತುಂಬಾ ಖುಷಿಯಾಗಿದೆ ಎಂದು ಶಾನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ಸದ್ಯ ಜಾಕ್ವೆಲಿನ್ ಫರ್ನಾಂಡಿಸ್ ರೇಸ್-3 ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಚಿತ್ರದಲ್ಲಿ ಸಲ್ಮಾನ್ ಖಾನ್‍ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಸಾಕೀಬ್ ಸಲೀಮ್, ಅನಿಲ್ ಕಪೂರ್, ಬಾಬಿ ಡಿಯೋಲ್ ಹಾಗೂ ಡೈಸಿ ಶಾ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ತನ್ನ ಹುಟ್ಟುಹಬ್ಬದಂದು ಡ್ರೈವರ್ ಗೆ12 ಲಕ್ಷದ ಕಾರನ್ನು ಉಡುಗೊರೆಯಾಗಿ ಕೊಟ್ಟ ಅನುಷ್ಕಾ ಶೆಟ್ಟಿ!

    https://www.instagram.com/p/BhgS3cEDnLi/?utm_source=ig_embed

  • ವ್ಯಾಲೆಂಟೈನ್ಸ್ ಡೇ ವಿಶೇಷ – ಸುದೀಪ್‍ಗೆ ಪತ್ನಿ ಪ್ರಿಯಾರಿಂದ ಸ್ಪೆಷಲ್ ಗಿಫ್ಟ್!

    ವ್ಯಾಲೆಂಟೈನ್ಸ್ ಡೇ ವಿಶೇಷ – ಸುದೀಪ್‍ಗೆ ಪತ್ನಿ ಪ್ರಿಯಾರಿಂದ ಸ್ಪೆಷಲ್ ಗಿಫ್ಟ್!

    ಬೆಂಗಳೂರು: ಫೆಬ್ರವರಿ 14 ಎಲ್ಲಾ ಜೋಡಿಗಳು ಪ್ರೇಮಿಗಳ ದಿನವನ್ನು ಆಚರಿಸಿದ್ದು, ಅವರಿಗೆ ಇಷ್ಟವಾದ ಉಡುಗೊರೆಯನ್ನು ನೀಡಿದ್ದಾರೆ. ಅದೇ ರೀತಿ ಕನ್ನಡ ಸಿನಿಮಾರಂಗದ ಹ್ಯಾಂಡ್ ಸಮ್ ಜೋಡಿ ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ ಕೂಡ ಪ್ರೇಮಿಗಳ ದಿನಾಚರಣೆಯನ್ನ ಆಚರಿಸಿದ್ದಾರೆ.

    ಸುದೀಪ್ ಸದಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಫ್ಯಾಮಿಲಿಗಾಗಿ ಸಮಯ ಕೊಡುತ್ತಿದ್ದಾರೆ. ಅಭಿನಯ, ಗಾಯನ, ನಿರ್ಮಾಣ, ನಿರೂಪಣೆ ಇದರ ಮಧ್ಯೆ ಕ್ರೀಡೆ ಹೀಗೆ ಹತ್ತು ಹಲವಾರು ಕಡೆಗಳಲ್ಲಿ ತೊಡಗಿಕೊಂಡಿರುವ ಕಿಚ್ಚನಿಗಾಗಿ ಪತ್ನಿ ಪ್ರಿಯಾ ಅವರು ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

    ಸುದೀಪ್- ಪ್ರಿಯಾ ಅವರದ್ದು ಲವ್ ಮ್ಯಾರೆಜ್ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಮದುವೆ ಆಗಿ ಸಾಕಷ್ಟು ವರ್ಷಗಳು ಕಳೆದ ನಂತರ ಕಿಚ್ಚ ಹಾಗೂ ಪ್ರಿಯಾ ಮತ್ತೆ ಪ್ರೇಮಿಗಳ ದಿನಾಚರಣೆಯನ್ನ ಆಚರಣೆ ಮಾಡಿದ್ದಾರೆ. ಪ್ರಿಯಾ ಅವರು ಮನಸ್ಸಿಗೆ ಹತ್ತಿರವಾಗುವ ಉಡುಗೊರೆಯನ್ನು ಪ್ರೇಮಿಗಳ ದಿನಾಚರಣೆಗಾಗಿ ಉಡುಗೊರೆಯನ್ನ ಪತಿಗೆ ನೀಡಿದ್ದಾರೆ. ಸುದೀಪ್ ಅವರು ಕಾಫಿ ಪ್ರಿಯರಾಗಿದ್ದು, ಅವರಿಗಾಗಿ ಎರಡು ಕಾಫಿ ಕಪ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

    ರಾಜ-ರಾಣಿಯಂತಾದ ಜೋಡಿ ಪ್ರಿಯಾ ಸುದೀಪ್ ಅವರು ನೀಡಿರುವ ಉಡುಗೊರೆಯ ಮೇಲೆ ಪ್ರೀತಿಯಿಂದ ಸಂದೇಶವನ್ನ ಬರೆಯಲಾಗಿದೆ. ಎರಡು ಕಪ್ ಮೇಲೆ ಸುದೀಪ್ ಹಾಗೂ ಪ್ರಿಯಾ ಎಂದು ಬರೆದಿದ್ದು, ಮತ್ತೆರಡರಲ್ಲಿ `ಕ್ವೀನ್ ಆಫ್ ಎವರಿಥಿಂಗ್’, `ಕಿಂಗ್ ಆಫ್ ವಾಟ್ ಎವರ್ಸ್ ಲೆಫ್ಟ್’ ಎಂದು ಬರೆಯಲಾಗಿದೆ.

    ಸದ್ಯಕ್ಕೆ ಸುದೀಪ್ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಜೊತೆಗೆ ಪೈಲ್ವಾನ್ ಸಿನಿಮಾಗಾಗಿ ಜಿಮ್‍ಗೆ ಹೋಗಿ ವರ್ಕ್ ಔಟ್ ಮಾಡುತ್ತಿದ್ದಾರೆ. ಇದನ್ನು ಓದಿ: ತನ್ನ ವ್ಯಾಲಂಟೈನ್ ಯಾರು ಎಂಬುದನ್ನು ಹೇಳಿದ ವಿಶ್ವಸುಂದರಿ ಮಾನುಷಿ ಚಿಲ್ಲರ್!

  • ಅಳಿಯ ಕೊಹ್ಲಿಗೆ ಸ್ಪೆಷಲ್ ಗಿಫ್ಟ್ ನೀಡಿದ ಅನುಷ್ಕಾ ಶರ್ಮಾ ತಂದೆ

    ಅಳಿಯ ಕೊಹ್ಲಿಗೆ ಸ್ಪೆಷಲ್ ಗಿಫ್ಟ್ ನೀಡಿದ ಅನುಷ್ಕಾ ಶರ್ಮಾ ತಂದೆ

    ಮುಂಬೈ: ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆಯಾದಾಗಿನಿಂದ ಅವರ ಪ್ರೇಮ ದಿನದಿಂದ ದಿನಕ್ಕೆ ಇಮ್ಮಡಿಗೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿರುಷ್ಕಾ ದಂಪತಿ ಹಾಕುವ ಪೋಸ್ಟ್ ಗಳೇ ಇದಕ್ಕೆ ಸಾಕ್ಷಿ. ಇದೀಗ ಅನುಷ್ಮಾ ಶರ್ಮಾ ಅವರ ತಂದೆ, ಅಳಿಯ ವಿರಾಟ್ ಕೊಹ್ಲಿಗೆ ವಿಶೇಷ ಉಡುಗೊರೆಯೊಂದನ್ನ ನೀಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಅನುಷ್ಕಾ ತಂದೆ ನಿವೃತ್ತ ಕರ್ನಲ್ ಅಜಯ್ ಕುಮಾರ್ ಶರ್ಮಾ, ಕೊಹ್ಲಿಗೆ ಪ್ರೇಮ ಕವನಗಳ ಪುಸ್ತಕವೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ತೇಜಸ್ವಿನಿ ದಿವ್ಯಾ ನಾಯ್ಕ್ ಬರದಿರುವ 42 ಪದ್ಯಗಳಿರುವ ‘ಸ್ಮೋಕ್ಸ್ ಅಂಡ್ ವಿಸ್ಕಿ’ ಎಂಬ ಪುಸ್ತವನ್ನ ಗಿಫ್ಟ್ ಆಗಿ ನೀಡಿದ್ದಾರೆಂದು ವರದಿಯಾಗಿದೆ.

    ಅನುಷ್ಕಾ ಪೋಷಕರು ಕಳೆದ ವಾರ ತೇಜಸ್ವಿನಿ ದಿವ್ಯಾ ನಾಯ್ಕ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಅನುಷ್ಕಾ ತಂದೆಗೆ ನಾಯ್ಕ್ ಅವರ ಕೃತಿ ಇಷ್ಟವಾಗಿ ಕೊಹ್ಲಿಗಾಗಿ ಪುಸ್ತಕದ ಪ್ರತಿಯೊಂದನ್ನ ತಂದಿದ್ದಾರೆ ಎಂದು ವರದಿಯಾಗಿದೆ. ಈ ಪುಸ್ತಕದಲ್ಲಿ ಪ್ರೀತಿ ಹಾಗೂ ಸಂಬಂಧಗಳು, ಅದರ ಏರಿಳಿತಗಳ ಬಗೆಗಿನ ಪದ್ಯಗಳಿದ್ದು, ಫೆಬ್ರವರಿ 3ರಂದು ಮುಂಬೈನಲ್ಲಿ ಪುಸ್ತಕ ಬಿಡುಗಡೆ ಮಾಡಲಾಗಿದೆ.

    ವಿರುಷ್ಕಾ ದಂಪತಿ ಕೂಡ ಪ್ರೇಮ ಪದ್ಯಗಳನ್ನ ಇಷ್ಟಪಡುವವರಾಗಿದ್ದು, ಮದುವೆ ಆರತಕ್ಷತೆಗೆ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಕವಿ ರೂಮಿಯ ಕವನ ಸಂಕಲವನ್ನ ಉಡುಗೊರೆಯಾಗಿ ನೀಡಿದ್ದರು.

    ಅನುಷ್ಕಾ ಸದ್ಯ ತಮ್ಮ ಪರಿ ಚಿತ್ರದ ಬಿಡುಗಡೆಗಾಗಿ ಕಾಯ್ತಿದ್ದಾರೆ. ಈ ಚಿತ್ರಕ್ಕೆ ಸ್ವತಃ ಅನುಷ್ಮಾ ನಿರ್ಮಾಪಕರಾಗಿದ್ದಾರೆ. ಮುಂದೆ ರಾಜ್‍ಕುಮಾರ್ ಹಿರಾನಿ ಅವರ ಸಂಜಯ್ ದತ್ ಜೀವನಾಧಾರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರಣ್‍ಬೀರ್ ಕಪೂರ್ ನಾಯಕರಾಗಿ ನಟಿಸಿದ್ದಾರೆ.

  • ದೀಪಿಕಾ ಹುಟ್ಟುಹಬ್ಬಕ್ಕೆ ರಣ್‍ವೀರ್ ಸಿಂಗ್ ಪೋಷಕರಿಂದ ದುಬಾರಿ ಸ್ಪೆಷಲ್ ಗಿಫ್ಟ್!

    ದೀಪಿಕಾ ಹುಟ್ಟುಹಬ್ಬಕ್ಕೆ ರಣ್‍ವೀರ್ ಸಿಂಗ್ ಪೋಷಕರಿಂದ ದುಬಾರಿ ಸ್ಪೆಷಲ್ ಗಿಫ್ಟ್!

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಇತ್ತೀಚಿಗೆ ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ತಮ್ಮ ಗೆಳೆಯ ರಣ್‍ವೀರ್ ಸಿಂಗ್ ಜೊತೆ ಶ್ರೀಲಂಕಾದಲ್ಲಿ ಹೊಸ ವರ್ಷವನ್ನು ಸ್ವಾಗತಿಸಿ ಅಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ವಿರುಷ್ಕಾ ಮದುವೆಯ ನಂತರ ದೀಪಿಕಾ ಕೂಡ ತಮ್ಮ ಹುಟ್ಟುಹಬ್ಬದಂದು ರಣ್‍ವೀರ್ ಸಿಂಗ್ ಜೊತೆ ಎಂಗೇಜ್ ಆಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಈ ಸುದ್ದಿಗೆ ಬ್ರೇಕ್ ಬಿದ್ದಿದ್ದು, ಆ ಗಾಸಿಪ್ ಎಲ್ಲ ಸುಳ್ಳು ಎಂದು ದೀಪಿಕಾ ನಿರೂಪಿಸಿದ್ದಾರೆ.

    ಒಂದು ಸುದ್ದಿಗೆ ಬ್ರೇಕ್ ಬಿದ್ದ ಹಿನ್ನಲ್ಲೆಯಲ್ಲೇ ಮತ್ತೊಂದು ಗಾಸಿಪ್ ಹುಟ್ಟಿಕೊಂಡಿದೆ. ರಣ್‍ವೀರ್ ಸಿಂಗ್ ಅವರ ಪೋಷಕರು ದೀಪಿಕಾ ಹುಟ್ಟುಹಬ್ಬದಂದು ಅವರಿಗೆ ಡೈಮಂಡ್ ಸೆಟ್ ಹಾಗೂ ಡಿಸೈನರ್ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.

    ವರದಿಗಳ ಪ್ರಕಾರ ರಣ್‍ವೀರ್ ಪೋಷಕರು ದೀಪಿಕಾ ಅವರಿಗೆ ದುಬಾರಿಯಾದ ಡೈಮಂಡ್ ಸೆಟ್ ಹಾಗೂ ಸಬ್ಯಸಾಚಿಯ ಸೀರೆಯನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಈ ಉಡುಗೊರೆ ಸಿಕಿದ್ದು ದೀಪಿಕಾ ಸಾಕಷ್ಟು ಖುಷಿಯಾಗಿದ್ದಾರೆ.

    ಸದ್ಯ ದೀಪಿಕಾ ನಟನೆಯ ಪದ್ಮಾವತಿ ಚಿತ್ರ ಸೆನ್ಸಾರ್ ಬೋರ್ಡ್‍ನಲ್ಲಿ ಯು/ಎ ಸರ್ಟಿಫಿಕೆಟ್ ಪಡೆದುಕೊಂಡು ಪದ್ಮಾವತ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ದೀಪಿಕಾ ರಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ಕಾಣಿಸಿಕೊಂಡರೆ, ರಣ್‍ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  • ಹೊಸವರ್ಷಕ್ಕೆ ಅಪ್ಪು ‘ಪವರ್ ಫುಲ್’ ವಿಶ್: ವಿಡಿಯೋ

    ಹೊಸವರ್ಷಕ್ಕೆ ಅಪ್ಪು ‘ಪವರ್ ಫುಲ್’ ವಿಶ್: ವಿಡಿಯೋ

    – ಪಿಆರ್‍ ಕೆ ಆಡಿಯೋ ಮೂಲಕ ಟಗರು ಮೇಕಿಂಗ್ ರಿಲೀಸ್

    ಬೆಂಗಳೂರು: ಹೊಸ ವರ್ಷಕ್ಕಂತೂ ದೊಡ್ಮನೆಯದ್ದೇ ಸುದ್ದಿ. ಈ ಹೊಸ ವರ್ಷಕ್ಕೆ ಪುನೀತ್ ಜಬರ್ದಸ್ತ್ ಆಗಿ ವಿಶ್ ಮಾಡಿದ್ದಾರೆ. ಅಷ್ಟೇ ಅಲ್ಲ ಅವರ ಪಿಆರ್‍ಕೆ ಆಡಿಯೋ ಪೇಜ್ ಮೂಲಕ ಟಗರು ಚಿತ್ರದ ಹೊಚ್ಚ ಹೊಸ ಮೇಕಿಂಗ್ ರಿಲೀಸ್ ಮಾಡಿದ್ದಾರೆ.

    ಹೊಸ ವರ್ಷಕ್ಕೆ ಎಲ್ಲಾ ತಾರೆಗಳೂ ವಿಶ್ ಮಾಡಿದ್ದು, ಪುನೀತ್ ಮಾತ್ರ ಡಿಫೇರೆಂಟ್ ಆಗಿ ವಿಶ್ ಮಾಡಿದ್ದಾರೆ. ಎಲ್ಲರೂ ನಿಂತು ಹೊಸ ವರ್ಷಕ್ಕೆ ಶುಭಾಶಯ ಹೇಳಿದರೆ ಪವರ್ ಸ್ಟಾರ್ ಮಾತ್ರ ವೆರಿ ಡಿಫರೆಂಟ್ ಆಗಿ ಸ್ಟಂಟ್ ಮಾಡುತ್ತಾ ವಿಶ್ ಮಾಡಿದ್ದಾರೆ.

    ಪುನೀತ್ ಅವರ ಈ ಖುಷಿಗೆ ಸಾಕಷ್ಟು ಕಾರಣಗಳಿವೆ. ಅಂಜನಿಪುತ್ರನಿಗೆ ಎದುರಾಗಿದ್ದ ಕಂಟಕ ನಿವಾರಣೆ, ಹೊಸ ಚಿತ್ರದ ಆರಂಭ, ಜೊತೆಗೆ ಅಣ್ಣನ ಚಿತ್ರಕ್ಕೆ ಸ್ವಾಗತ ಕೋರುವ ಘಳಿಗೆ ಎಲ್ಲ ಖುಷಿಯನ್ನೂ ಪುನೀತ್ ಒಟ್ಟೊಟ್ಟಿಗೆ ಅನುಭವಿಸುತ್ತಿದ್ದಾರೆ. ಇದೇ ಖುಷಿಯಲ್ಲಿ ಹೊಸ ವರ್ಷದ ದಿನವೇ ಪುನೀತ್ ಒಡೆತನದ ಪಿಆರ್‍ಕೆ ಆಡಿಯೋ ಯೂಟ್ಯೂಬ್ ಪೇಜ್‍ನಲ್ಲಿ ಟಗರು ಚಿತ್ರದ ಹೊಚ್ಚ ಹೊಸ ಮೇಕಿಂಗ್ ವಿಡಿಯೋ ರಿಲೀಸ್ ಮಾಡಲಾಗಿದೆ.

    https://twitter.com/PuneethOfficial/status/947691838202298368

    ಶಿವರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಟಗರು. ಸೂರಿ ನಿರ್ದೇಶನದಲ್ಲಿ ಮೂಡಿಬಂದಿರೋ ಈ ಚಿತ್ರದ ಅದ್ಧೂರಿ ಆಡಿಯೋ ಲಾಂಚ್ ಹೊಸಪೇಟೆಯಲ್ಲಿ ನಡೆಯಿತು. ಟ್ರೇಲರ್ ಕೂಡ ಭರ್ಜರಿ ಹಿಟ್ ಆಗಿದೆ. ಪಿಆರ್‍ಕೆ ಕಂಪನಿಯ ರೈಟ್ಸ್ ನಲ್ಲಿ ಚಿತ್ರದ ಹಾಡಿನ ಮ್ಯಾಷಪ್ ಮೇಕಿಂಗ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.

    ಸೂರಿ ಸಾರಥ್ಯದಲ್ಲಿ ಮೂಡಿಬಂದಿರುವ ಮೇಕಿಂಗ್ ಅದ್ಭುತವಾಗಿದ್ದು ಚಿತ್ರ ನೋಡುವ ಉತ್ಸಾಹವನ್ನ ಇಮ್ಮಡಿಗೊಳಿಸಿದೆ. ಬೆಂಗಳೂರು, ಮಂಗಳೂರು, ಗೋವಾದಲ್ಲಿ ತೆಗೆದ ಸನ್ನಿವೇಷಗಳ ಚಿತ್ರಣದ ಸ್ಯಾಂಪಲ್ ಚಿತ್ರದ ಮೇಲೆ ನಿರೀಕ್ಷೆ ಹುಟ್ಟಿಸಿದೆ. ಶಿವರಾಜ್‍ಕುಮಾರ್ ಜೊತೆ ಭಾವನಾ ಮೆನನ್, ಮಾನ್ವಿತಾ ಹರೀಶ್ ನಟಿಸಿದ್ದು ಹಾಡುಗಳ ಮೇಕಿಂಗ್ ಸ್ಯಾಂಡಲ್‍ವುಡ್‍ನಲ್ಲಿ ಕಲರವ ಮಾಡುತ್ತಿದೆ.

    ಅಣ್ಣ ಶಿವಣ್ಣನ ಚಿತ್ರಕ್ಕೆ ಪುನೀತ್ ಸ್ಪೆಷಲ್ ಕಾಳಜಿಯಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಸದ್ಯಕ್ಕೆ ಈ ತಿಂಗಳು ಅಪ್ಪು ಯಾವುದೇ ಶೂಟಿಂಗ್ ಒಪ್ಪಿಕೊಳ್ಳದೇ ರಿಲ್ಯಾಕ್ಸ್ ಆಗಿರುತ್ತಾರೆ. ಹೀಗಾಗಿ ಟಗರಿಗಾಗಿ ಪುನೀತ್ ವಿಶೇಷ ಗಮನ ಇರುತ್ತೆ ಎನ್ನುವುದಕ್ಕೆ ವರ್ಷಾರಂಭದಲ್ಲಿ ಮೇಕಿಂಗ್ ರಿಲೀಸ್ ಮಾಡಿರುವುದು ಸಾಕ್ಷಿ. ಒಟ್ಟಿನಲ್ಲಿ ಟಗರು ಆರ್ಭಟ ನೋಡೋಕೆ ಪ್ರೇಕ್ಷಕರು ಕಾಯುತ್ತಿದ್ದಾರೆ.

     

  • ಹೊಸವರ್ಷದಂದು 12.05 ಕ್ಕೆ ಹೆಣ್ಣುಮಗು ಜನನ- ಬಿಬಿಎಂಪಿಯಿಂದ ದಂಪತಿಗೆ ಸಿಕ್ತು ಭರ್ಜರಿ ಗಿಫ್ಟ್!

    ಹೊಸವರ್ಷದಂದು 12.05 ಕ್ಕೆ ಹೆಣ್ಣುಮಗು ಜನನ- ಬಿಬಿಎಂಪಿಯಿಂದ ದಂಪತಿಗೆ ಸಿಕ್ತು ಭರ್ಜರಿ ಗಿಫ್ಟ್!

    ಬೆಂಗಳೂರು: ಹೊಸವರ್ಷದಂದು ರಾತ್ರಿ 12 ಗಂಟೆಗೆ ಹುಟ್ಟಿದ ಹೆಣ್ಣು ಮಗುವಿಗೆ 5 ಲಕ್ಷ ರೂ. ನೀಡೋ ಮೂಲಕ ಬಿಬಿಎಂಪಿ ಭರ್ಜರಿ ಗಿಫ್ಟ್ ನೀಡಿದೆ.

    ಹೊಸವರ್ಷದ ಮೊದಲ ದಿನವೇ ಗೋಪಿ-ಪುಷ್ಪಾ ದಂಪತಿಗೆ ಹುಟ್ಟಿದ ಹೆಣ್ಣು ಮಗುವಿಗೆ ಬಿಬಿಎಂಪಿ ಈ ಭರ್ಜರಿ ಗಿಫ್ಟ್ ಘೋಷಿಸಿದ್ದಾರೆ. ರಾಜಾಜಿನಗರದ ಡಾ.ನಾಗರಾಜ್ ಸ್ಮಾರಕ ಆಸ್ಪತ್ರೆಯಲ್ಲಿ 12.05 ಕ್ಕೆ ಹೆಣ್ಣು ಮಗು ಜನಿಸಿದೆ. ಕೂಡಲೇ ಸ್ಥಳಕ್ಕೆ ಮೇಯರ್ ಸಂಪತ್ ರಾಜ್ ತೆರಳಿ ಬಹುಮಾನ ಘೋಷಿಸಿದ್ದಾರೆ.

    ತಮ್ಮ ಮಗುವಿಗೆ ಒಲಿದ ಈ ಅದೃಷ್ಟದಿಂದ ದಂಪತಿ ಖುಷಿಯಾಗಿದ್ದಾರೆ. ಮೇಯರ್ ಇದೇ ಮೊದಲ ಬಾರಿ ಈ ಬಗೆಯ ಬಹುಮಾನ ಘೋಷಿಸಿದ್ದಾರೆ. ಬಿಬಿಎಂಪಿ ಆಯುಕ್ತರು ಹಾಗೂ ಮಗುವಿನ ಹೆಸರಿನಲ್ಲಿ ಐದು ಲಕ್ಷ ಹಣ ಠೇವಣಿ ಇಡಲು ನಿರ್ಧರಿಸಲಾಗಿದೆ. ಈ ಹಣವನ್ನು 18 ವರ್ಷದ ನಂತರ ಮಗುವಿನ ಉನ್ನತ ಶಿಕ್ಷಣಕ್ಕೆ ಬಳಕೆ ಮಾಡಬಹುದು. ಐದು ಲಕ್ಷದ ಠೇವಣಿಯ ಬಡ್ಡಿ ಹಣವನ್ನು ಪ್ರತಿ ವರ್ಷ ಶಿಕ್ಷಣಕ್ಕೆ ಉಪಯೋಗಿಸಬಹುದು. ಹಣವನ್ನು ಮಗುವಿನ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕೆ ಬಳಸಲು ದಂಪತಿ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷದಂದು ಹುಟ್ಟುವ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿಯಿಂದ ಬಂಪರ್ ಆಫರ್!

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೇಯರ್ ಸಂಪತ್ ರಾಜ್, ಬಡವರ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ್ರೆ ಕಷ್ಟ ಅಂದುಕೊಳ್ಳುವ ಜನ ತುಂಬಾ ಇದ್ದಾರೆ. ಆದ್ರೇ ಇದೀಗ ಪರಿಸ್ಥಿತಿ ಬದಲಾಗಿದೆ. ಬಿಬಿಎಂಪಿಯಲ್ಲಿಯೇ 102 ಜನ ಮಹಿಳೆಯರು ಜನಪ್ರತಿನಿಧಿಗಳಿದ್ದಾರೆ. ಮಗು ಹಾಗೂ ಬಿಬಿಎಂಪಿ ಕಮಿಷನರ್ ಹೆಸರಿನಲ್ಲಿ ಐದು ಲಕ್ಷ ರೂ. ಹಣ ಠೇವಣಿ ಇಡಲಾಗಿದೆ. ಮಗುವಿನ ಶಿಕ್ಷಣಕ್ಕೆ ಮಾತ್ರ ಈ ಹಣ ಬಳಕೆಯಾಗಲಿದೆ. ಹೆಣ್ಣು ಮಕ್ಕಳ ಜನನವನ್ನು ಪ್ರೋತ್ಸಾಹಿಸೋ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದ್ರು.

    ಮಗುವಿನ ತಾಯಿ ಪುಷ್ಪಾ ಸಿಎಂ ಸಿದ್ದರಾಮಯ್ಯನವರ ತವರು ಸಿದ್ದರಾಮನಹುಂಡಿಯವರು ಎಂದು ತಿಳಿದುಬಂದಿದೆ.

  • ಬೇನಾಮಿ ಗಿಫ್ಟ್ ಪಡೆಯೋದ್ರಲ್ಲಿ ಡಿಕೆಶಿ ನಿಸ್ಸೀಮರು, ಮುಂದೆ ದಾಖಲೆ ಬಿಡುಗಡೆ: ಯೋಗೇಶ್ವರ್

    ಬೇನಾಮಿ ಗಿಫ್ಟ್ ಪಡೆಯೋದ್ರಲ್ಲಿ ಡಿಕೆಶಿ ನಿಸ್ಸೀಮರು, ಮುಂದೆ ದಾಖಲೆ ಬಿಡುಗಡೆ: ಯೋಗೇಶ್ವರ್

    ರಾಮನಗರ: ಇಂಧನ ಸಚಿವ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿದ್ದಾರೆ. ಬೇನಾಮಿ ಗಿಫ್ಟ್ ಪಡೆಯೋದರಲ್ಲಿ ಅವರು ನಿಸ್ಸೀಮರು. ಅದರ ದಾಖಲೆಗಳಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಜನರ ಮುಂದಿಡ್ತೇನೆಂದು ಶಾಸಕ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

    ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಹಾಗೂ ಪಾವಗಡದಲ್ಲಿ ಸಚಿವ ಡಿಕೆಶಿ ಬೇನಾಮಿ ಆಸ್ತಿ ಮಾಡಿದ್ದಾರೆ. ನನಗೆ ಬೇನಾಮಿ ಆಸ್ತಿಯ ಗಿಫ್ಟ್ ಕೊಡುವ ಆಗತ್ಯವಿಲ್ಲ. ತಾಲೂಕಿನ ಜನ ಎಲ್ಲ ಗಿಫ್ಟ್ ಕೊಟ್ಟಿದ್ದು ಅವರ ಗಿಫ್ಟ್ ಬೇಕಾಗಿಲ್ಲ. ಡಿಕೆಶಿ ರಾಜಕೀಯ ಜೀವನ ಬಹುಶಃ ಇಲ್ಲಿಗೆ ಮುಗಿಯುತ್ತಿದ್ದು, ಸ್ವಾರ್ಥಕ್ಕಾಗಿ ಸಾರ್ವಜನಿಕ ಜೀವನ ಬಳಸಿಕೊಂಡಿದ್ದಾರೆ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

    ಪರಿವರ್ತನ ಯಾತ್ರೆಯ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಂದು ಪರಿವರ್ತನೆಯ ವಾತಾವರಣ ಸೃಷ್ಟಿಯಾಗ್ತಿದೆ. ಮುಂದಿನ ದಿನದಲ್ಲಿ ಬಿಜೆಪಿ ರಾಜ್ಯಕ್ಕೆ ಬೇಕೆಂದು ಜನರು ಕೈ ಜೋಡಿಸ್ತಿದ್ದಾರೆ. ತಾಲೂಕು ಮುಖಂಡರೆಲ್ಲಾ ಬಿಜೆಪಿಗೆ ಸೇರ್ಪಡೆಯಾಗ್ತಿದ್ದೇವೆ. ಕನಕಪುರದ ನಂದಿನಿಗೌಡರವರು ಕೂಡಾ ಬಿಜೆಪಿ ಸೇರುತ್ತಿದ್ದಾರೆ. ನಾನು ಯಾವುದೇ ನಿಬಂಧನೆಗಳನ್ನ ಒಡ್ಡಿ ಪಕ್ಷ ಸೇರುತ್ತಿಲ್ಲ. ಯೋಗ್ಯತೆಗೆ ತಕ್ಕಂತೆ ದುಡಿಸಿಕೊಳ್ಳುತ್ತೆ ಎನ್ನುವ ಭರವಸೆಯಿದೆ ಎಂದರು.

    ಡಿಕೆಶಿಗೆ ನಾವು ಬೆಂಬಲ ಕೊಟ್ಟಾಗ ರಾಜಕೀಯವಾಗಿ ಬಹಳ ಶಕ್ತಿವಂತರಾಗಿದ್ದರು. ಇವತ್ತು ಯಾರಿಗೆ ಶಕ್ತಿ ಕೊಟ್ಟಿದ್ದೇವೆ ಅಂತಾ ಅರ್ಥವಾಗಿದೆ. ಅವರಿಂದ ತಾಲೂಕಿಗೆ ಕೊಡುಗೆ ಶೂನ್ಯ, ಅವರು ಕೆಲಸಗಳೇನು ಮಾಡಿಲ್ಲ. ಮತ ಹಾಕಿಸಿಕೊಂಡು ಮುಖಂಡರ ಮನೆಗೆ ಹೋಗಿ ಅವರ ಸಂತೃಪ್ತಿಗೊಳಿಸುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಬಂದು ಸಹಾಯ ಬೇಡಿದ್ರು, ಸಹಾಯ ಮಾಡಿದ್ವಿ. ಆದರೆ ಸರ್ಕಾರ ಮುಗಿಯುತ್ತಾ ಬಂದ್ರೂ ಅನುಕೂಲವಾಗದಿದ್ದಾಗ ಮಾತನಾಡಲೇಬೇಕಾಗಿದೆ. ನಾನು ಬಿಜೆಪಿಗೆ ಹೋಗ್ತಿರುವ ಸಂಕಟ ಅವರನ್ನ ಕಾಡ್ತಿದೆ ಎಂದು ಹೇಳಿದ್ದಾರೆ.

    ಬುಧವಾರ ಆಪ್ತರ ಮನೆಗೆ ಸಚಿವ ಡಿಕೆಶಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ಅವರು ಭೇಟಿ ಮಾಡಿದ್ದ ಮುಖಂಡರೆಲ್ಲಾ ಈಗ ನಮ್ಮ ಜೊತೆಯಲ್ಲಿಯೇ ಇದ್ದಾರೆ. ಅವರು ಬರ್ತಾರೆ, ಬಲವಂತಕ್ಕೆ ಬಂದು ಡ್ರಾಮಾ ಮಾಡಿ ಹೋಗ್ತಾರೆ. ಅವರನ್ನ ತಾಲ್ಲೂಕಿನ ಜನ ನಂಬುವ ಸ್ಥಿತಿಯಲ್ಲಿಲ್ಲ. ಅದಕ್ಕೆ ಅಂತಹ ಮಹತ್ವ ಕೊಡುವ ಅಗತ್ಯ ಸಹ ಇಲ್ಲ. ಜನಗಳ ಕೆಲಸ ಮಾಡಬೇಕಾದ್ದು ಅವರ ಕರ್ತವ್ಯ. ಅವರು 30 ವರ್ಷಗಳಿಂದ ಈ ಕೆಲಸ ಮಾಡಬೇಕಿತ್ತು. ಇಂದು ಕಾಂಗ್ರೆಸ್ ಅಧಿಕಾರ ಮುಗಿಸುವಂತಹ ಸಮಯ. ಕೊನೆಯಗಳಿಗೆಯಲ್ಲಿ ವಾರಕ್ಕೊಮ್ಮೆ ಬರ್ತೀನಿ ಅಂತಿದ್ದಾರೆ. ಅವರಿಗೆ ನಾನು ಬಿಜೆಪಿಗೆ ಸೇರುತ್ತಿರುವುದು ನೋವಿದೆ. ಅವರ ರಾಜಕೀಯ ಉನ್ನತಿಗೆ ತಾಲೂಕು ಮುಖ್ಯವಾಗಿತ್ತು. ತಾಲೂಕಿನ ಜನ ಪರಿವರ್ತನೆ ಆಗ್ತಿರೋದು ಅವರ ಹತಾಶೆಗೆ ಕಾರಣವಾಗಿದೆ. ಇವತ್ತು ನಮಗೆ ಶುಭದಿನ, ಮುಂದಿನ ದಿನಗಳಲ್ಲಿ ಅವರ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆಂದು ಹೇಳಿದರು.

  • ಪಾಕಿಸ್ತಾನಿ ಪ್ರಜೆಗಳಿಗೆ ದೀಪಾವಳಿ ಗಿಫ್ಟ್ ನೀಡಿದ ಸುಷ್ಮಾ ಸ್ವರಾಜ್

    ಪಾಕಿಸ್ತಾನಿ ಪ್ರಜೆಗಳಿಗೆ ದೀಪಾವಳಿ ಗಿಫ್ಟ್ ನೀಡಿದ ಸುಷ್ಮಾ ಸ್ವರಾಜ್

    ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನಿ ಪ್ರಜೆಗಳಿಗೆ ದೀಪಾಳಿ ಉಡುಗೊರೆಯನ್ನು ನೀಡಿದ್ದಾರೆ. ವೈದ್ಯಕೀಯ ವೀಸಾಗಾಗಿ ಅರ್ಜಿ ಸಲ್ಲಿಸಿರುವ ಪಾಕ್ ಪ್ರಜೆಗಳಲ್ಲಿ ಅರ್ಹರಾಗಿರುವ ಎಲ್ಲಾ ಅರ್ಜಿದಾರರಿಗೆ ವೀಸಾ ನೀಡಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

    ಸುಷ್ಮಾ ಅವರು ತಮ್ಮ ಟ್ವೀಟ್‍ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಅರ್ಜಿ ಸಲ್ಲಿಸಿದ್ದ ಎಲ್ಲಾ ಅರ್ಹ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ.

    ಅಕ್ಟೋಬರ್ 18 ರಂದು ಪಾಕಿಸ್ತಾನದ 5 ಪ್ರಜೆಗಳಿಗೆ ಸುಷ್ಮಾ ಸ್ವರಾಜ್ ಸ್ವತಃ ತಾವೇ ವೈದ್ಯಕೀಯ ವೀಸಾಗಳನ್ನು ಮಂಜೂರು ಮಾಡಲು ತಿಳಿಸಿ ಅನುಮತಿಯನ್ನು ನೀಡಿದ್ದರು. ಅಲ್ಲದೇ ಈ ಹಿಂದೆಯೂ ಹಲವು ಬಾರಿ ಪಾಕ್ ಪ್ರಜೆಗಳಿಗೆ ವೈದ್ಯಕೀಯ ವೀಸಾಗಳನ್ನು ಮಂಜೂರು ಮಾಡಲಾಗಿತ್ತು.

    ಸುಷ್ಮಾ ಸ್ವರಾಜ್ ಅವರ ಈ ಗುಣ ಹಲವು ಭಾರತೀಯ ಪ್ರಜೆಗಳ ಮನಸ್ಸನ್ನು ಗೆದ್ದಿದೆ. ಅಲ್ಲದೇ  ಈ ಹಿಂದೆ ಭಾರತದ ವೀಸಾ ಪಡೆದ ಪಾಕ್ ಪ್ರಜೆಯೊಬ್ಬರು ಪಾಕಿಸ್ತಾನಕ್ಕೆ ಸುಷ್ಮಾ ಅವರು ಪ್ರಧಾನಿಯಾಗಿದ್ದಾರೆ ಚೆನ್ನಾಗಿರುತ್ತಿತ್ತು ಎಂದು ಟ್ವಿಟ್ಟರ್‍ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.