Tag: ಗಿಡ

  • ಗಿಡ ಕಿತ್ತಳು ಎಂದು ಸೀಮೆಎಣ್ಣೆ ಸುರಿದು ಬೆಂಕಿ ಇಟ್ಟರು

    ಗಿಡ ಕಿತ್ತಳು ಎಂದು ಸೀಮೆಎಣ್ಣೆ ಸುರಿದು ಬೆಂಕಿ ಇಟ್ಟರು

    ಪಾಟ್ನಾ: ಆಟವಾಡುತ್ತಿದ್ದ ಬಾಲಕಿ ಮನೆಯಂಗಳದಲ್ಲಿದ್ದ ಗಿಡವನ್ನು ಕಿತ್ತುಳು ಎಂದು ಸಿಟ್ಟಿಗೆದ್ದ ಒಂದು ಕುಟುಂಬ ಬಾಲಕಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಬಿಹಾರದ ಬೇಗುಸರಾಯ್‍ನಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಬಾಲಕಿ 12 ವರ್ಷದವಳಾಗಿದ್ದಾಳೆ. ಸಿಖಂದರ್ ಯಾದವ್ ಬಾಲಕಿ ಮೇಲೆ ಹಲ್ಲೆ ಮಾಡಿದ್ದಾನೆ. ಈತ ಸಿವರಾಣ ಗ್ರಾಮದ ನಿವಾಸಿಯಾಗಿದ್ದಾನೆ.

    12 ವರ್ಷದ ಬಾಲಕಿ ಸಿಖಂದರ್ ಯಾದವ್ ಎನ್ನುವರ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಆಕೆ ತಿಳಿಯದೆ ಮನೆಯ ಅಂಗಳದಲ್ಲಿದ್ದ ಒಂದು ಗಿಡವನ್ನು ಕಿತ್ತಿದ್ದಾಳೆ. ಇದನ್ನು ಗಮನಿಸಿದ ಸಿಖಂದರ್ ಮತ್ತು ಆತನ ಪತ್ನಿ, ಮಗಳು ಸೇರಿ ಬಾಲಕಿಗೆ ಹೊಡೆದು ಹಿಂಸೆ ಮಾಡಿದ್ದಾರೆ.

    ಬಾಲಕಿ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲದೆ ಬಾಲಕಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ಸಿಖಂದರ್ ಯಾದವ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಬೇಗುಸರಾಯ್ ಪೊಲೀಸ್ ವರಿಷ್ಠಾಧಿಕಾರಿ ನಿಶಿತ್ ಪ್ರಿಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

  • ನಾಡಿನೊಳಗೆ ಕಾಡು ಬೆಳೆಸಲು ಹೊರಟ ಸಂವೇದನಾ ಯುವಕರು

    ನಾಡಿನೊಳಗೆ ಕಾಡು ಬೆಳೆಸಲು ಹೊರಟ ಸಂವೇದನಾ ಯುವಕರು

    ಉಡುಪಿ: ಕಾಡು ನಾಶ ಆಗುತ್ತಿದ್ದು, ಕಾಡಿರುವ ಜಾಗದಲ್ಲಿ ನಾಡು ನಿರ್ಮಾಣ ಆಗಿದೆ ಎಂಬ ಒಂದು ದೊಡ್ಡ ಕೂಗು ಪರಿಸರವಾದಿಗಳಿಂದ ಕೇಳಿ ಬರುತ್ತಿದೆ. ಹೀಗಾಗಿಯೇ ನಾಡಿನೊಳಗೆ ಕಾಡು ನಿರ್ಮಾಣ ಮಾಡಲು ಉಡುಪಿಯ ಸಂಸ್ಥೆಯೊಂದು ಮುಂದಾಗಿದೆ. ಪೇಟೆಯೊಳಗೆ ಒಂದು ಚಿಕ್ಕ ಜಾಗ ಸಿಕ್ಕರೂ ಸಾಕು ಅಲ್ಲಿ ದೊಡ್ಡ ಕಾಡು ನಿರ್ಮಾಣ ಮಾಡಬೇಕು ಎಂಬ ಕನಸು ಈ ಸಂಸ್ಥೆಯದ್ದಾಗಿದೆ.

    ಉಡುಪಿಯ ಸಂವೇದನಾ ಸಂಸ್ಥೆ ಸದ್ದಿಲ್ಲದೆ ಇಂತಹದೊಂದು ಕೆಲಸವನ್ನು ಮಾಡುತ್ತಿದೆ. ತನ್ನ ವನ ಸಂವೇದನಾ ಯೋಜನೆಯ ಅಂಗವಾಗಿ ಉಡುಪಿಯ ಮಲ್ಪೆ ಸಮೀಪದ ಕಂಗಣಬೆಟ್ಟು ಅಣ್ಣಪ್ಪ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಅರ್ಧ ಎಕರೆ ಜಮೀನಿನಲ್ಲಿ ಸಿರಿವನವನ್ನು ನಿರ್ಮಿಸಿದೆ. ಇದು ಸಂಸ್ಥೆಯ ಎರಡನೇ ವನ. ಇಲ್ಲಿ 23 ಜಾತಿಯ 600 ಗಿಡಗಳನ್ನು ತಿಂಗಳ ಹಿಂದೆ ನೆಟ್ಟಾಗಿದೆ.

    ಬಿಲ್ವ ಪತ್ರೆ, ಮುತ್ತುಗ, ಶಿವಾನಿ, ಬಾಗೆ ಮರೆ, ಸಿಲ್ವರ್ ಓಕ್, ಬೀಟೆ, ರಕ್ತ ಚಂದನ ಹೀಗೆ 15 ಜಾತಿ ಆಯುರ್ವೇದ ಗಿಡ ನೆಡಲಾಗಿದೆ. ಅದರ ಪಾಲನೆ ಪೋಷಣೆಗೆ ಸ್ವಯಂ ಸೇವಕರ ತಂಡಕ್ಕೆ ಜವಾಬ್ದಾರಿ ಕೊಡಲಾಗಿದೆ.

    ಸಿರಿವನದಲ್ಲಿ ಹಕ್ಕಿಗಳನ್ನು ಸೆಳೆಯುವ ಶಕ್ತಿಯಿರುವ ಮರಗಳನ್ನು ಬೆಳೆಸಲಾಗುತ್ತಿದೆ. ಈ ಪೈಕಿ ಮುತ್ತುಗ ಸಂಪೂರ್ಣ ಆಯುರ್ವೇದಿಕ್ ಸಸ್ಯ. ಎಲ್ಲಾ ಹಕ್ಕಿಗಳನ್ನು ಮುತ್ತುಗದ ಹೂವು ಆಕರ್ಷಿಸುತ್ತದೆ. ಮುತ್ತುಗಕ್ಕೆ ಆ ಶಕ್ತಿಯಿದೆ. ಸುಮಾರು 20ಕ್ಕೂ ಹಕ್ಕಿಗಳನ್ನು ಸೆಳೆಯುವ ಗಿಡಗಳನ್ನು ನೆಡಲಾಗಿದೆ. ಕಾಗೆಯನ್ನು ಯಾವ ಹೂವುಗಳೂ ಆಕರ್ಷಿಸುವುದಿಲ್ಲ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂವೇದನಾ ಸಂಸ್ಥೆಯ ಸಂಸ್ಥಾಪಕ ಪ್ರಕಾಶ್, ಸಮಾನ ಮನಸ್ಕರ ತಂಡ ಪರಿಸರದ ಬಗ್ಗೆ ಚಿಂತನೆ ಮಾಡಿದಾಗ ಯೋಜನೆ ಚರ್ಚೆಗೆ ಬಂತು. ನಾಡಿನೊಳಗೊಂದು ಕಾಡು ನಿರ್ಮಾಣ ಆಗಬೇಕು. ಅದು ಮನುಷ್ಯನಿಗೂ ಪ್ರಾಣಿ ಪಕ್ಷಿಗಳಿಗೂ ಉಪಯೋಗ ಆಗಬೇಕು ಎಂಬುದು ನಮ್ಮ ಉದ್ದೇಶ. ನಮ್ಮ ಊರಿನ, ರಾಜ್ಯದ ಅಲ್ಲಲ್ಲಿ ಪುಟ್ಟ ಪುಟ್ಟ ಕಾಡುಗಳನ್ನು ನಾವು ನಿರ್ಮಾಣ ಮಾಡುವ ಸಂಕಲ್ಪ ಹೊಂದಿದ್ದೇವೆ. ಇದರ ಜೊತೆ ಪರಿಸರ ಕಾಳಜಿಯ ಹತ್ತು ಹಲವು ಕೆಲಸಗಳನ್ನು ಮಾಡುತ್ತಿದ್ದೇವೆ. ನಮಗೆ ಖಾಲಿ ಜಮೀನು ಮತ್ತು ಊರಿನ ಆಸಕ್ತ ಯುವಕ ತಂಡ ಸಿಕ್ಕರೆ ನಿಮ್ಮೂರಲ್ಲೂ ಇಂತಹ ವನ ಕಟ್ಟುತ್ತೇವೆ ಎಂದು ಹೇಳಿದರು.

  • ಗಿಡ ಉಳಿಸಲು ಹೋಗಿ ಪ್ರಾಣಿಗಳ ಜೀವಕ್ಕೆ ಕುತ್ತು ತಂದ ಅರಣ್ಯ ಇಲಾಖೆ – ನಾಲ್ಕು ಹಸು ಸಾವು

    ಗಿಡ ಉಳಿಸಲು ಹೋಗಿ ಪ್ರಾಣಿಗಳ ಜೀವಕ್ಕೆ ಕುತ್ತು ತಂದ ಅರಣ್ಯ ಇಲಾಖೆ – ನಾಲ್ಕು ಹಸು ಸಾವು

    ಶಿವಮೊಗ್ಗ: ಅರಣ್ಯ ಇಲಾಖೆಯ ಎಡವಟ್ಟಿನಿಂದ ವನ್ಯ ಜೀವಿಗಳ ಪ್ರಾಣಕ್ಕೆ ಸಂಚಕಾರ ಉಂಟಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಆಗುಂಬೆ ಸಮೀಪದ ಕಾರೀ ಕುಂಬ್ರಿ ಅರಣ್ಯದಲ್ಲಿ ಅರಣ್ಯ ಇಲಾಖೆ ಹೊಸದಾಗಿ ನೆಡುತೋಪು ನಿರ್ಮಿಸಿದ್ದು, ಇಲ್ಲಿ ಹಲವು ಜಾತಿಯ ವಿವಿಧ ಗಿಡಗಳನ್ನು ನೆಡಲಾಗಿದೆ. ಈ ಗಿಡಗಳನ್ನು ವನ್ಯಜೀವಿಗಳು ತಿನ್ನುತ್ತವೆ. ಇದರಿಂದ ಗಿಡಗಳು ಹಾಳಾಗಿ ಹೋಗುತ್ತವೆ ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಗಿಡಗಳ ಬುಡದಲ್ಲಿ ವಿಷಪೂರಿತ ಔಷಧಿಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿ ಪ್ರತಿಯೊಂದು ಗಿಡಕ್ಕೂ ಕಟ್ಟಿದ್ದಾರೆ.

    ಈ ಮೂಲಕ ವನ್ಯ ಜೀವಿಗಳ ಸಂರಕ್ಷಿಸಬೇಕಾದ ಅರಣ್ಯ ಇಲಾಖೆಯೇ ವನ್ಯಜೀವಿಗಳ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ಅಲ್ಲದೇ ಅರಣ್ಯ ಪ್ರದೇಶದಲ್ಲಿ ಮೇವು ಅರಸಿ ಹೋಗುವ ಜಾನುವಾರುಗಳಿಗೂ ಕುತ್ತು ಉಂಟಾಗಿದೆ. ಈ ವಿಷಪೂರಿತ ಔಷಧಿ ಸೇವನೆಯಿಂದ ಆಗುಂಬೆ ಸುತ್ತಮುತ್ತಲಿನ ಗ್ರಾಮದಲ್ಲಿ ಇಂದು ನಾಲ್ಕು ಹಸುಗಳು ಸಹ ಪ್ರಾಣ ಕಳೆದುಕೊಂಡಿವೆ.

    ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಾನುವಾರುಗಳ ಸಾವಿಗೆ ಕಾರಣವಾಗಿರುವ ಅರಣ್ಯ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

  • ಮೂರು ಸಾವಿರ ದಾಳಿಂಬೆ ಗಿಡಗಳ ಸ್ಥಳಾಂತರ- ಕೋಟಿ ರೂ. ಲಾಭ ಗಳಿಸಿ ರೈತನ ಹೊಸ ಸಾಹಸ

    ಮೂರು ಸಾವಿರ ದಾಳಿಂಬೆ ಗಿಡಗಳ ಸ್ಥಳಾಂತರ- ಕೋಟಿ ರೂ. ಲಾಭ ಗಳಿಸಿ ರೈತನ ಹೊಸ ಸಾಹಸ

    ರಾಯಚೂರು: ದಾಳಿಂಬೆ ಬೆಳೆಯಲ್ಲಿ ಒಂದು ಕೋಟಿ ರೂ. ಲಾಭ ಗಳಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದ ರೈತರೊಬ್ಬರು, ಇದೀಗ ಮೂರು ಸಾವಿರ ದಾಳಿಂಬೆ ಗಿಡಗಳನ್ನು ಬೇರು ಸಮೇತ ಸ್ಥಳಾಂತರಿಸುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

    ಜಿಲ್ಲೆಯ ಲಿಂಗಸುಗೂರಿನ ರೈತ ಬಸವರಾಜಗೌಡ ಗಣೇಕಲ್ ಅವರು ತಮ್ಮ ಇಪ್ಪತ್ತು ಎಕರೆ ಜಮೀನಿನಲ್ಲಿ ದಾಳಿಂಬೆ ಮತ್ತು ಪಪ್ಪಾಯಿ ಬೆಳೆದಿದ್ದಾರೆ. ಪಪ್ಪಾಯಿಂದ ನಷ್ಟ ಉಂಟಾದರೂ, ದಾಳಿಂಬೆಯಿಂದ ಕೋಟಿ ರೂ. ಲಾಭ ಗಳಿಸಿ, ಇತರರಿಗೆ ಮಾದರಿಯಾಗಿದ್ದರು. ಇದೀಗ ಮತ್ತೊಂದು ಸಾಹಸ ಮಾಡುವ ಮೂಲಕ ರೈತರಿಗೆ ಮಾದರಿಯಾಗಿದ್ದು, ಜಮೀನಿನಲ್ಲಿರುವ ಹೆಚ್ಚುವರಿ ದಾಳಿಂಬೆ ಗಿಡಗಳನ್ನು ಬೇರು ಸಹಿತ ಮತ್ತೊಂದು ಜಮೀನಿಗೆ ಸ್ಥಳಾಂತರಿಸಿ, ಯಶಸ್ವಿಯಾಗಿದ್ದಾರೆ.

    ಈ ಮೂಲಕ ಕೃಷಿ ತಂತ್ರಜ್ಞರು ಮಾಡುವ ಕಾರ್ಯವನ್ನು ರೈತ ಬಸವರಾಜಗೌಡ ಅವರು ತಮ್ಮದೇ ಯೋಜನೆಯೊಂದಿಗೆ ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ ಗಿಡಗಳನ್ನು ಸ್ಥಳಾಂತರ ಮಾಡಿದ್ದಾರೆ. ಜೆಸಿಬಿ, ಕೂಲಿಕಾರರ ಸಹಾಯದಿಂದ ಮೂರು ಸಾವಿರ ದಾಳಿಂಬೆ ಗಿಡಗಳನ್ನು ಬೇರು ಸಹಿತ ಸ್ಥಳಾಂತರಿಸಲಾಗಿದೆ.

    ರೈತ ಬಸವರಾಜಗೌಡ ಅವರು ಈ ಹಿಂದೆ ಹೆಚ್ಚುವರಿಯಾಗಿದ್ದ 10ಕ್ಕೂ ಹೆಚ್ಚು ಗಿಡಗಳನ್ನು ಸ್ಥಳಾಂತರಿಸಿ, ಉತ್ತಮ ಫಸಲು ಪಡೆದಿದ್ದರು. ಅದೇ ಮಾದರಿಯಲ್ಲಿ ಇದೀಗ 3 ಸಾವಿರ ಗಿಡಗಳನ್ನು ಸ್ಥಳಾಂತರಿಸುತ್ತಿದ್ದಾರೆ. ದಾಳಿಂಬೆಯಿಂದ ನಾಲ್ಕು ವರ್ಷ ಲಾಭ ಗಳಿಸಿ, ಇಳುವರಿ ಕಡಿಮೆಯಾದ ಕಾರಣ ಗಿಡಗಳ ನಡುವೆ ಅಂತರ ಕಾಪಾಡುವುದಕ್ಕಾಗಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಗಿಡಗಳನ್ನು ಬೇರು ಸಹಿತ ಕಿತ್ತು ಬೇರೆ ಜಾಗದಲ್ಲಿ ನೆಟ್ಟು ಉತ್ತಮ ಫಸಲು ಪಡೆಯುತ್ತಿದ್ದಾರೆ. ಇದಕ್ಕಾಗಿ ಅಗತ್ಯ ಮಾಹಿತಿ ಪಡೆದು ಗೊಬ್ಬರ ಸಿಂಪರಣೆ ಸೇರಿದಂತೆ ವಿವಿಧ ತಾಂತ್ರಿಕ ನಿಯಮಗಳನ್ನು ಅನುಸರಿಸಿ ಸ್ಥಳಾಂತರ ಕಾರ್ಯ ನಡೆಸಿದ್ದಾರೆ.

  • ಸಾಯುವ ಹಂತದಲ್ಲಿದ್ದೇನೆ ಎಂದು ತಿಳಿದು 30 ಸಾವಿರ ಸಸಿನೆಟ್ಟ ಯುವತಿ

    ಸಾಯುವ ಹಂತದಲ್ಲಿದ್ದೇನೆ ಎಂದು ತಿಳಿದು 30 ಸಾವಿರ ಸಸಿನೆಟ್ಟ ಯುವತಿ

    ಗಾಂಧಿನಗರ: ಕೊನೆಯ ಹಂತದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದೇನೆ ಎನ್ನುವುದನ್ನು ತಿಳಿದ ಯುವತಿ 30 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ.

    ಗುಜರಾತಿನ ಸೂರತ್ ನಿವಾಸಿಯಾಗಿರುವ ಶ್ರುಚಿ ವಡಲಿಯಾ ಅವರಿಗೆ ಕೆಲವು ತಿಂಗಳ ಹಿಂದೆ ತಾನು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವುದು ತಿಳಿಯಿತು. ಹಾಗಾಗಿ ಅವರು ಪರಿಸರವನ್ನು ಉಳಿಸುವ ಅಭಿಯಾನವನ್ನು ಶುರು ಮಾಡಿದ್ದರು.

    ವಾಯು ಮಾಲಿನ್ಯದಿಂದ ನನಗೆ ಈ ಕಾಯಿಲೆ ಬಂದಿರುವುದು ತಿಳಿಯಿತು. ಮರಗಳನ್ನು ನೆಟ್ಟರೆ ಅನೇಕರನ್ನು ಮಾರಕ ಕಾಯಿಲೆಗಳಿಂದ ರಕ್ಷಿಸಬಹುದು. ನಾನು ಶೀಘ್ರದಲ್ಲೇ ಸಾಯಬಹುದು. ಆದರೆ ಹೆಚ್ಚಿನ ಮರಗಳನ್ನು ನೆಡುವುದರ ಮೂಲಕ ಜನರ ಉಸಿರಾಟದಲ್ಲಿ ಬದುಕಲು ನಾನು ಬಯಸುತ್ತೇನೆ ಎಂದು ಶ್ರುಚಿ ತಿಳಿಸಿದ್ದಾರೆ.

    ನಾನು 30 ಸಾವಿರ ಗಿಡಗಳನ್ನು ನೆಟ್ಟಿದ್ದೇನೆ. ಅಲ್ಲದೆ ಅದೇ ರೀತಿ ಮಾಡಲು ಅನೇಕರನ್ನು ಪ್ರೇರೇಪಿಸಿದ್ದೇನೆ. ಬ್ರೈನ್ ಟ್ಯೂಮರ್ ನಂತಹ ಮಾರಕ ಕಾಯಿಲೆಯಿಂದ ಬಳಲುತ್ತಿದ್ದರೂ ನಾನು ನನ್ನ ಉದ್ದೇಶದ ಅರ್ಥವನ್ನು ಕಳೆದುಕೊಳ್ಳಲಿಲ್ಲ ಎಂದರು.

    ನನ್ನ ಜೀವನವನ್ನು ನಡೆಸಲು ಹಾಗೂ ಕನಸುಗಳನ್ನು ಈಡೇರಿಸಲು ನನಗೆ ಹೆಚ್ಚು ಸಮಯವಿಲ್ಲ. ಆದರೆ ಬೇರೆಯವರು ನನ್ನ ಎದುರಿಸಿದ ಕಷ್ಟವನ್ನು ಬೇರೆಯವರು ಎದುರಿಸಬಾರದು. ಹಾಗಾಗಿ ಎಲ್ಲರು ಸಸಿಗಳನ್ನು ನೆಡಬೇಕು. ಅದು ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಕ್ಯಾನ್ಸರ್ ತಡೆಗಟ್ಟುತ್ತದೆ ಎಂದು ಶ್ರುಚಿ ಹೇಳಿದ್ದಾರೆ.

    ನಾನು ಹಲವು ಹಳ್ಳಿಗಳಿಗೆ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಗಿಡ ನೆಡುವಂತೆ ಮನವಿ ಮಾಡಿದ್ದೇನೆ. ನಮ್ಮೆಲ್ಲರ ಭವಿಷ್ಯವನ್ನು ಉಳಿಸಲು ಮಕ್ಕಳಿಗೆ ಈ ಬಗ್ಗೆ ಶಿಕ್ಷಣ ನೀಡುವುದು ಉತ್ತಮ ಕೆಲಸ ಎಂದು ಶ್ರುಚಿ ತಿಳಿಸಿದ್ದಾರೆ.

  • ಮಗ್ಳ ಮದ್ವೆಗೆ ಅತಿಥಿಗಳಿಗೆ ಪರಿಸರವಾದಿಯಿಂದ 5,000ಕ್ಕೂ ಹೆಚ್ಚು ಸಸಿಗಳ ಉಡುಗೊರೆ

    ಮಗ್ಳ ಮದ್ವೆಗೆ ಅತಿಥಿಗಳಿಗೆ ಪರಿಸರವಾದಿಯಿಂದ 5,000ಕ್ಕೂ ಹೆಚ್ಚು ಸಸಿಗಳ ಉಡುಗೊರೆ

    ಚಾಮರಾಜನಗರ: ಸಾಮಾನ್ಯವಾಗಿ ಮದುವೆಯಲ್ಲಿ ಬಂದ ಅತಿಥಿಗಳಿಗೆ ತಾಂಬೂಲದ ಜೊತೆ ಉಡುಗೊರೆಗಳನ್ನು ಕೊಡುವುದು ವಾಡಿಕೆ. ಆದರೆ ಕೊಳ್ಳೇಗಾಲದಲ್ಲಿ ಮದುವೆಯಲ್ಲಿ ಬಂದ ಅತಿಥಿಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಗಿಡಗಳನ್ನು ಗಿಫ್ಟ್ ಆಗಿ ನೀಡುವ ಮೂಲಕ ಹಸಿರೇ ಉಸಿರು ಎನ್ನುವುದನ್ನು ಸಾಬೀತು ಮಾಡಿದ್ದಾರೆ.

    ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪರಿಸರವಾದಿ ಕೃಷ್ಣಮೂರ್ತಿ ಅವರು ಕಳೆದ ಒಂದು ದಶಕದಿಂದ ಪರಿಸರ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಮರಗಳ ಹನನ, ಅಕ್ರಮ ಮರಳು ಸಾಗಾಣಿಕೆ, ಪ್ರಾಣಿಗಳ ಬೇಟೆ, ಮರಗಳ್ಳತನ ವಿರುದ್ಧ ಹೋರಾಟ ನಡೆಸುತ್ತಿರುವ ಇವರು ತಮ್ಮ ಮಗಳ ಮದುವೆಯಲ್ಲೂ ಪರಿಸರ ಕಾಳಜಿ ಮೆರೆದಿದ್ದಾರೆ.

    ಕೃಷ್ಣಮೂರ್ತಿ ತಮ್ಮ ಮಗಳ ಮದುವೆಗೆ ಬಂದ ಅತಿಥಿಗಳಿಗೆ ಹಾಗು ಬಂಧು- ಬಾಂಧವರಿಗೆ ತಟ್ಟೆ, ಲೋಟ ಮತ್ತಿತರ ಉಡುಗೊರೆ ಬದಲಿಗೆ ಗಿಡಗಳನ್ನು ನೀಡಿದರೆ ಹೇಗೆ ಎಂದು ಚಿಂತಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

    ಕೊಳ್ಳೇಗಾಲದಲ್ಲಿ ನಡೆದ ತಮ್ಮ ಮಗಳು ಕಾವೇರಿಯ ಮದುವೆಗೆ ಬಂದ ಅತಿಥಿಗಳಿಗೆಲ್ಲಾ ಐದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೀಡುವ ಮೂಲಕ ತಮ್ಮ ಪರಿಸರ ಕಾಳಜಿ ಮೆರೆದಿದ್ದಾರೆ. ಮಾವು, ಬೇವು, ನೇರಳೆ, ಸೀಬೆ, ನಿಂಬೆ, ಸಪೋಟ, ಹೊಂಗೆ ಮತ್ತಿತರ ಜಾತಿಯ ಗಿಡಗಳನ್ನು ಅತಿಥಿಗಳಿಗೆ ಉಡುಗೊರೆಯಾಗಿ ನೀಡಲಾಯಿತು.

    ಕೃಷ್ಣಮೂರ್ತಿ ಅವರ ಈ ಕಾಳಜಿಗೆ ಅರಣ್ಯ ಇಲಾಖೆಯೂ ಕೈಜೋಡಿಸಿತ್ತು. ಜೊತೆಗೆ ಮದುವೆಯಲ್ಲಿ ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ರೋಲ್ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳಿಗೆ ಕಡಿವಾಣ ಹಾಕಲಾಗಿತ್ತು. ಈ ವಿವಾಹ ಮಹೋತ್ಸವಕ್ಕೆ ಬಂದ ಪ್ರತಿಯೊಬ್ಬರಲ್ಲೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಇದೊಂದು ವಿಭಿನ್ನ ಪ್ರಯತ್ನವಾಗಿತ್ತು.

  • ಗಿಡ ನೆಟ್ಟು ನನಗೆ ಫೋಟೋ ಕಳುಹಿಸಿ- ಸಂಸದೆ ಸುಮಲತಾರಿಂದ ಪರಿಸರ ಜಾಗೃತಿ

    ಗಿಡ ನೆಟ್ಟು ನನಗೆ ಫೋಟೋ ಕಳುಹಿಸಿ- ಸಂಸದೆ ಸುಮಲತಾರಿಂದ ಪರಿಸರ ಜಾಗೃತಿ

    ಮಂಡ್ಯ: ಸಂಸದೆಯಾದ ಬಳಿಕ ಸುಮಲತಾ ಅವರು ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು, ಈ ವೇಳೆ ಅಲ್ಲಿ ಹಾರ, ಶಾಲು, ಪೇಟ ತೊಡಿಸಬೇಡಿ. ಬದಲಾಗಿ ಗಿಡ ನೆಡಿ ಎಂದು ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದ್ದಾರೆ.

    ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದ ಮುಗಿದ ಬಳಿಕ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದೇನೆ. ಮಳವಳ್ಳಿ, ಶ್ರೀರಂಗಪಟ್ಟಣ, ಮದ್ದೂರು, ಕೆ.ಆರ್ ನಗರ, ಮಂಡ್ಯ ಹೀಗೆ ಎಲ್ಲಾ ತಾಲೂಕುಗಳಿಗೂ ಹೋಗುತ್ತಿದ್ದೇನೆ. ಜನ ತುಂಬಾ ಪ್ರೀತಿಯಿಂದ ನನ್ನನ್ನು ಸ್ವಾಗತಿಸುತ್ತಿದ್ದಾರೆ ಎಂದರು.

    ಹೋದ ಕಡೆಯೆಲ್ಲಾ ನನಗೆ ಜನ ಪ್ರೀತಿಯಿಂದ ಹೂವಿನ ಹಾರ, ಶಾಲು, ಪೇಟ ತೆಗೆದುಕೊಂಡು ಬಂದು ಸನ್ಮಾನ ಮಾಡುತ್ತಾರೆ. ಈ ಮೂಲಕ ಅವರು ನನ್ನ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಆದರೆ ನಿಜಕ್ಕೂ ಅದು ನನಗೆ ಬೇಡ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ಪ್ರೀತಿಯನ್ನು ತೋರಿಸಿಕೊಳ್ಳುವುದಕ್ಕೆ ಅವರು ಎಲ್ಲಿಯಾದರೂ ಒಂದು ಸಸಿ ನೆಟ್ಟು ಆ ಫೋಟೋ ನನಗೆ ಕಳುಹಿಸಿದರೆ ಅವರ ಹೆಸರು ಹಾಕಿ ನನ್ನ ಫೇಸ್ ಬುಕ್ ಪೇಜಿನಲ್ಲಿ ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.

    ದುಡ್ಡು ವೇಸ್ಟ್ ಆಗಬಾರದು, ಪರಿಸರಕ್ಕೆ ಒಳ್ಳೆಯದಾಗಬೇಕು. ಇಲ್ಲವೆಂದಲ್ಲಿ ಬಡವರಿಗೆ ಒಂದುಷ್ಟು ಏನಾದರೂ ಕೊಡುವುದಾದರೆ ಕೊಡಲಿ. ಸನ್ಮಾನಕ್ಕಾಗಿ ಹಣ ವ್ಯರ್ಥ ಮಾಡದಂತೆ ಕಾರ್ಯಕರ್ತರು, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

    ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಅಲ್ಲಿ ಸಂತ್ರಸ್ತರಿದ್ದಾರೆ. ಅವರಿಗೆ ಸಹಾಯ ಮಾಡಲಿ. ಬರುವ ವಾರದಲ್ಲಿ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವ ದೃಷ್ಟಿಯಿಂದ ಯಾರು ಯಾರು ಏನೇನು ಮಾಡಬೇಕು ಎಂಬುದನ್ನು ಯೋಚನೆ ಮಾಡುತ್ತೇನೆ. ಒಟ್ಟಿನಲ್ಲಿ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂಬುದನ್ನು ಒದೇ ವೇಳೆ ಮಂಡ್ಯ ಯುವಕರಲ್ಲಿ ಮನವಿ ಮಾಡಿಕೊಂಡರು.

  • ಮಗುವಿನ ನಾಮಕರಣಕ್ಕೆ ನಕ್ಷತ್ರ, ರಾಶಿಗೆ ಅನುಗುಣವಾಗಿ ಗ್ರೀನ್ ಗಿಫ್ಟ್

    ಮಗುವಿನ ನಾಮಕರಣಕ್ಕೆ ನಕ್ಷತ್ರ, ರಾಶಿಗೆ ಅನುಗುಣವಾಗಿ ಗ್ರೀನ್ ಗಿಫ್ಟ್

    ಉಡುಪಿ: ಸಾಮಾನ್ಯವಾಗಿ ಮನೆಯಲ್ಲಿ ಮಗು ಹುಟ್ಟಿದರೆ ಸಿಹಿ ಹಂಚುವ ಸಂಪ್ರದಾಯ ಇದೆ. ನಾಮಕರಣಕ್ಕೆ ನೂರಾರು ಜನ ಬಂಧು-ಮಿತ್ರರಿಗೆ ಊಟ ಹಾಕಿ ಖುಷಿ ಹಂಚಿಕೊಳ್ಳುತ್ತಾರೆ. ಆದರೆ ಜಿಲ್ಲೆಯಲ್ಲಿ ನಾಮಕರಣಕ್ಕೆ ಬಂದ ಬಂಧು-ಮಿತ್ರರಿಗೆಲ್ಲ ಸ್ಪೆಷಲ್ ಗಿಫ್ಟ್ ಕೊಡಲಾಗಿದೆ.

    ಉಡುಪಿಯಲ್ಲಿ ನಡೆದ ಧಾರ್ಮಿಕ ಕಾರ್ಯದ ಸಭಾಂಗಣಕ್ಕೆ ಬಂದ ಎಲ್ಲರ ರಾಶಿ ನಕ್ಷತ್ರ ಕೇಳಿದ್ದು ವಿಶೇಷವಾಗಿದೆ. ಉಡುಪಿಯ ಮಟ್ಟುವಿನಲ್ಲಿ ವಿಶಿಷ್ಟ ಕಾರ್ಯಕ್ರಮವೊಂದು ನಡೆದಿದೆ. ಇಲ್ಲಿನ ವಿಷ್ಣುಮೂರ್ತಿ ದೇವಸ್ಥಾನದ ತಂತ್ರಿಗಳಿಗೆ ಪುತ್ರ ಸಂತಾನವಾಗಿದೆ. ಈ ಪ್ರಯುಕ್ತ ಊರಿಗೆಲ್ಲಾ ಊಟ ಹಾಕಿಸಿದರು. ಊಟ ಮಾಡಿ ಕೈ ತೊಳೆಯುವಷ್ಟರಲ್ಲಿ ಅಪರೂಪದ ತಳಿಯ ಗಿಡಗಳನ್ನು ಹಂಚಿದ್ದಾರೆ. ಗಿಡಗಳನ್ನು ಹಂಚುವಾಗಲು ಕೂಡ ಧಾರ್ಮಿಕ ಪ್ರಜ್ಞೆಯನ್ನು ಮೆರೆದಿದ್ದಾರೆ. ತಮ್ಮ ಬಂಧುಗಳು ಹಾಗೂ ಸ್ನೇಹಿತರ ನಕ್ಷತ್ರ ಮತ್ತು ರಾಶಿಗೆ ಅನುಗುಣವಾಗಿ ಗಿಡಗಳನ್ನು ಕೊಟ್ಟು ವಿಶಿಷ್ಟ ಪರಂಪರೆಗೆ ನಾಂದಿ ಹಾಡಿದ್ದಾರೆ.

    ನಮ್ಮ ನಕ್ಷತ್ರಕ್ಕೂ ನಮ್ಮ ಸುತ್ತಲೂ ಇರಬೇಕಾದ ಸಸ್ಯ ಸಂಪತ್ತಿಗೂ ಒಂದು ನಂಟಿದೆ. ನಮ್ಮ ಜಾತಕದ ಅನುಸಾರ ನಮಗೆ ಬಾಧಿಸಬಹುದಾದ ಅನಾರೋಗ್ಯಗಳನ್ನು ಹೋಗಲಾಡಿಸುವ ಗಿಡಗಳನ್ನು ನೆಟ್ಟರೆ ಹೆಚ್ಚು ಅನುಕೂಲವಾಗುತ್ತದೆ. ಉದಾಹರಣೆಗೆ ಭರಣಿ ನಕ್ಷತ್ರದವರು ನೆಲ್ಲಿಯ ಗಿಡನೆಟ್ಟರೆ ದಾತು ವೃದ್ಧಿಯಾಗುತ್ತೆ ಅನ್ನೋದು ಶಾಸ್ತ್ರ. ರೋಹಿಣಿ ನಕ್ಷತ್ರವರಿಗೆ ನೇರಳೆ ಮರ, ಪುನರ್ವಸು ನಕ್ಷತ್ರಕ್ಕೆ ಬಿದಿರು, ಪುಷ್ಯ ನಕ್ಷತ್ರಕ್ಕೆ ಅಶ್ವತ್ಥ ಮರ. ಹೀಗೆ 27 ನಕ್ಷತ್ರಕ್ಕೂ ನಾನಾ ಬಗೆಯ ಗಿಡಗಳು ಅನುಕೂಲಕರವಾಗಲಿದೆ ಎಂದು ಧಾರ್ಮಿಕ ವಿದ್ವಾಂಸರು ನವೀನ್ ತಂತ್ರಿ ತಿಳಿಸಿದ್ದಾರೆ.

    ತಮ್ಮ ಮನೆಗೆ ಬಂದ ಪುಟ್ಟ ಕಂದಮ್ಮ ಕೇವಲ ತಮ್ಮ ಮನೆ ಬೆಳಗಿದರೆ ಸಾಲದು, ಊರನ್ನೂ ತಂಪಾಗಿಡಬೇಕು ಅನ್ನೋ ಪ್ರವೀಣ್ ತಂತ್ರಿಗಳ ಪರಿಸರ ಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ವಿಷ್ಣುಮೂರ್ತಿ ದೇವರ ಸನ್ನಿಧಾನದಲ್ಲಿ ಪಡೆದ ಈ ಗಿಡಗಳನ್ನು ದೇವರ ಪ್ರಸಾದವೆಂದೇ ಭಾವಿಸಿ ಜನರು ಲಾಲನೆ ಪಾಲನೆ ಮಾಡುವುದರಿಂದ ಪರಿಸರಕ್ಕೂ ಅನುಕೂಲವಾಗಲಿದೆ.

  • ವಿನೂತನವಾಗಿ ನಿಶ್ಚಿತಾರ್ಥ ಮಾಡ್ಕೊಂಡ ಜೋಡಿ

    ವಿನೂತನವಾಗಿ ನಿಶ್ಚಿತಾರ್ಥ ಮಾಡ್ಕೊಂಡ ಜೋಡಿ

    ಚಿಕ್ಕಮಗಳೂರು: ಹೊಸ ಜೀವನಕ್ಕೆ ಕಾಲಿಡುತ್ತಿರುವ ವಧು-ವರರು ಉಂಗುರ, ಹೂವಿನ ಹಾರ ಹಾಕಿ ನಿಶ್ಚಿತಾರ್ಥ ಮಾಡಿಕೊಳ್ಳೋದು ಸಾಮಾನ್ಯವಾಗಿದೆ. ಆದರೆ ಜಿಲ್ಲೆಯಲ್ಲಿ ಜೋಡಿಯೊಂದು ಗಿಡ ನೆಡುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಚಿಕ್ಕಮಗಳೂರು ನಗರದ ಕಾವ್ಯ ಹಾಗೂ ರಂಜಿತ್ ಮಾವಿನ ಗಿಡ ನೆಡುವ ಮೂಲಕ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದಾರೆ. ಇವರು ಉಂಗುರ ಹಾಗೂ ಹಾರ ಬದಲಿಸಿಕೊಳ್ಳುವ ಬದಲು ಪರಿಸರ ಕಾಳಜಿ ಮೆರೆದು ಉಳಿದವರಿಗೂ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಉಪನಯನದಲ್ಲಿ ಸಿಹಿ ಬದಲಾಗಿ ಬೀಜದುಂಡೆ ನೀಡಿ ಪರಿಸರ ಕಾಳಜಿ ಮೆರೆದ ಕುಟುಂಬ

    ಕೇವಲ ಗಿಡ ನೆಡುವುದಲ್ಲದೇ ಮದುವೆ ದಿನಾಂಕ ನಿಗದಿಯಾಗಿ ತಾಳಿ ಕಟ್ಟುವ ಕೊನೆಯ ಘಳಿಗೆವರೆಗೂ ಗಿಡವನ್ನ ಸಂರಕ್ಷಿಸಿ, ಪೋಷಿಸುವ ಜವಾಬ್ಧಾರಿ ನವ ಜೋಡಿ ಹೊತ್ತಿರುವುದು ವಿಶೇಷವಾಗಿದೆ. ಗಿಡ ನೆಡುವ ಮೂಲಕ ಪರಿಸರ ಉಳಿಸಿ ಅಭಿಯಾನ ಆರಂಭಿಸುವ ಮೂಲಕ ಮದುವೆಗೂ ಮುನ್ನ ಈ ಜೋಡಿಗಳು ಪರಿಸರ ಜವಾಬ್ದಾರಿ ಮೆರೆದಿದ್ದಾರೆ.

    ಇತ್ತೀಚೆಗೆ ಮದುವೆಗೆ ಬಂದವರಿಗೆ ಉಡುಗೊರೆಯಾಗಿ ಗಿಡವನ್ನು ಕೊಡುವುದು ರೂಢಿಯಾಗಿದೆ. ಆದರೆ ಈ ಜೋಡಿ ಮದುವೆಗೂ ಮುನ್ನವೇ ಪರಿಸರದ ಬಗ್ಗೆ ಕಾಳಜಿ ಮೂಡಿಸುವಂತಹ ಕಾರ್ಯ ಮಾಡಿದ್ದಾರೆ.

  • ಚಾಮರಾಜನಗರದಲ್ಲೊಂದು ವಿಶೇಷ ಮದ್ವೆ – ಜೋಡಿಯಿಂದ ಅತಿಥಿಗಳಿಗೆ ಸಸಿ ಗಿಫ್ಟ್

    ಚಾಮರಾಜನಗರದಲ್ಲೊಂದು ವಿಶೇಷ ಮದ್ವೆ – ಜೋಡಿಯಿಂದ ಅತಿಥಿಗಳಿಗೆ ಸಸಿ ಗಿಫ್ಟ್

    ಚಾಮರಾಜನಗರ: ಸಾಮಾನ್ಯವಾಗಿ ಮದುವೆ ಅಂದಮೇಲೆ ಬಂದ ಅಥಿತಿಗಳಿಗೆ ತಾಂಬೂಲದ ವೇಳೆ ಉಡುಗೊರೆಗಳನ್ನು ಕೊಡುವುದು ಸಾಮಾನ್ಯ. ಆದರೆ ಇಲ್ಲೊಂದು ಮದುವೆ ಮನೆಯಲ್ಲಿ ಅತಿಥಿಗಳಿಗೆ ಪರಿಸರ ರಕ್ಷಣೆಯ ಬಗ್ಗೆ ಪಾಠ ಮಾಡುವುದರ ಜೊತೆಗೆ, ಪರಿಸರ ಸಂರಕ್ಷಣೆಗೆಂದು ಒಂದು ಗಿಫ್ಟ್ ಕೂಡ ನೀಡಿದ್ದಾರೆ.

    ಮರ ಬೆಳೆಸಿ ಪರಿಸರ ರಕ್ಷಿಸಿ ಎನ್ನುವ ಸಂದೇಶದೊಂದಿಗೆ ದಿವ್ಯಜ್ಯೋತಿ ಮತ್ತು ನಂದೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಧುನಿಕರಣ ಜನರನ್ನು ಆವರಿಸುತ್ತಿರುವ ದಿನಗಳಲ್ಲಿ ಪರಿಸರವೂ ಕೂಡ ನಾಶವಾಗುತ್ತಿದೆ. ಈ ಪರಿಸರದ ಅವನತಿ ಆಗಬಾರದು ಎಂದು ನವ ಜೋಡಿಗಳು ಹಾಗೂ ಅವರ ಪೋಷಕರು ಜನರಿಗೆ ಪರಿಸರದ ಪಾಠ ಹೇಳಿ ಕೊಡುವುದರ ಜೊತೆಗೆ ಬಂದಿದ್ದ ಅತಿಥಿಗಳಿಗೆ ತಾಂಬೂಲದ ಜೊತೆಗೆ ಸಸಿಗಳನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.

    ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯ ಬಂಡೀಪುರ, ಬಿಳಿಗಿರಿ ರಂಗನಬೆಟ್ಟ, ಮಲೆಮಹದೇಶ್ವರ ಬೆಟ್ಟದ ಕಾಡುಗಳು ಬೆಂಕಿ ಬಿದ್ದು ನಾಶವಾಗಿತ್ತು. ಈ ರೀತಿ ಕಾಡು ನಾಶವಾದರೆ ನಮ್ಮ ಪರಿಸರ ಸಂಪೂರ್ಣವಾಗಿ ಹಾಳಾಗುತ್ತದೆ. ಹೀಗಾಗಿ ಪರಿಸರಕ್ಕೆ ನಮ್ಮದೊಂದು ಕಾಣಿಕೆ ಇರಲಿ ಎಂದು ಬಂದ ಅಥಿತಿಗಳಿಗೆ ಬೇವು, ಸಿಲ್ವರ್, ಸೀಬೆ, ನಿಂಬೆ ಸೇರಿದಂತೆ ಇತರೆ ಜಾತಿಯ ಗಿಡಗಳನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ ಎಂದು ಮದುವೆಗೆ ಬಂದ ಅತಿಥಿ ರವೀಶ್‍ಮೂರ್ತಿ ಹೇಳಿದ್ದಾರೆ.