Tag: ಗಾಲ್ವಾನ್ ಕಣಿವೆ

  • ಬೇಹುಗಾರಿಕೆ ಭೀತಿ – 11 ಚೀನಾ ಬ್ರ್ಯಾಂಡ್ ಮೂಬೈಲ್ ಬಳಸದಂತೆ ಸೈನಿಕರಿಗೆ ಸಲಹೆ

    ಬೇಹುಗಾರಿಕೆ ಭೀತಿ – 11 ಚೀನಾ ಬ್ರ್ಯಾಂಡ್ ಮೂಬೈಲ್ ಬಳಸದಂತೆ ಸೈನಿಕರಿಗೆ ಸಲಹೆ

    ನವದೆಹಲಿ: ಚೀನಾ (China) ಬ್ರ್ಯಾಂಡ್‍ಗಳ ಮೂಬೈಲ್ ಬಳಸದಂತೆ ಮಿಲಿಟರಿ ಗುಪ್ತಚರ ಸಂಸ್ಥೆಗಳು ಸೈನಿಕರಿಗೆ ಸಲಹೆ ನೀಡಿವೆ. ಆಪ್‍ಗಳು ಮಾತ್ರವಲ್ಲದೇ ಮೂಬೈಲ್ ಮೂಲಕವೂ ಚೀನಾ ಬೇಹುಗಾರಿಕೆ (Spyware) ನಡೆಸುವ ಸಾಧ್ಯತೆ ಹಿನ್ನೆಲೆ ಮಾರ್ಚ್ ಅಂತ್ಯದೊಳಗೆ ಮೂಬೈಲ್ ಬದಲಿಸುವಂತೆ ಸೈನಿಕರಿಗೆ ಸಲಹೆ ನೀಡಲಾಗಿದೆ.

    ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತ (India) ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಬಿಕ್ಕಟ್ಟಿನ ಮಧ್ಯೆ ಭಾರತೀಯ ಸೈನಿಕರಿಗೆ ಈ ಮಹತ್ವದ ಸಲಹೆ ನೀಡಲಾಗಿದೆ. ವಿಶೇಷವಾಗಿ ಎಲ್‍ಎಸಿಯಲ್ಲಿ ಕರ್ತವ್ಯದಲ್ಲಿರುವ ಸೈನಿಕರು ಕೂಡಲೇ ಚೀನಾ ಮೂಲದ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ನೌಕಾಸೇನೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಮೂವರು ಪೈಲೆಟ್‌ಗಳ ರಕ್ಷಣೆ

    ಒನ್‍ಪ್ಲಸ್ (OnePlus), ಒಪ್ಪೋ (Oppo), ರಿಯಲ್ ಮೀ (Realme) ಸೇರಿದಂತೆ ಮಾರುಕಟ್ಟೆಯಲ್ಲಿರುವ 11 ಚೀನಾದ ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್‍ಗಳ ಬಳಕೆಯಿಂದ ದೂರವಿರಲು ಸೂಚಿಸಿದೆ. ಸೈನಿಕರ ಕುಟುಂಬಸ್ಥರು ಈ ಬ್ರ್ಯಾಂಡ್ ಮೂಬೈಲ್‍ಗಳನ್ನು ಬಳಸದಂತೆ ಕೋರಲಾಗಿದೆ.

    ಗಾಲ್ವಾನ್ ಕಣಿವೆ (Galwan valley) ಘರ್ಷಣೆಯ ನಂತರ, ಭಾರತ ಸರ್ಕಾರವು ಹಲವು ಚೀನೀ ಮೊಬೈಲ್ ಅಪ್ಲಿಕೇಶನ್‍ಗಳನ್ನು ನಿಷೇಧಿಸಿತ್ತು. ಆದರೆ ಅಪಾಯ ಅಪ್ಲಿಕೇಶನ್‍ಗಳಿಗೆ ಸೀಮಿತವಾಗಿಲ್ಲ. ಫೋನ್‌ಗಳಿಂದಲೂ ಅಪಾಯವಿರುವ ಬಗ್ಗೆ ತಜ್ಞರು ಅನುಮಾನಿಸಿದ್ದಾರೆ. ಫೋನ್ ಮೂಲಕ ಬೇಹುಗಾರಿಕೆ ಅಥವಾ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಚೀನಾ ಬಳಸಬಹುದಾದ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಇಂಡಿಗೊ ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ತಂದೊಡ್ಡಿದ ಯುವತಿ

  • ಭಾರತೀಯ ವ್ಯವಹಾರಗಳ ಮೇಲೆ ಚೀನಾ ಹ್ಯಾಕರ್ಸ್ ಗುರಿ!

    ಭಾರತೀಯ ವ್ಯವಹಾರಗಳ ಮೇಲೆ ಚೀನಾ ಹ್ಯಾಕರ್ಸ್ ಗುರಿ!

    -ಮುಂದಿನ ಹತ್ತು ದಿನಗಳು ಹುಷಾರ್!

    ನವದೆಹಲಿ: ಲಡಾಕ್ ಗಡಿಯಲ್ಲಿನ ಉದ್ವಿಗ್ನತೆ ಕಡಿಮೆಯಾಗ್ತಿಲ್ಲ. ಮಾತುಕತೆ ನಡುವೆ ಯುದ್ಧ ಸಿದ್ದತೆಗಳು ನಡೆದಿದ್ದು ಗಾಲ್ವಾನ್ ಗಡಿಯಲ್ಲಿ ಕದನ ಕಾರ್ಮೋಡ ಕವಿದಿದೆ. ಡ್ರ್ಯಾಗನ್ ದೇಶ ದಾಳಿಯ ಆತಂಕ ನಡುವೆ ಈಗ ಭಾರತದಲ್ಲಿ ಚೀನಾ ಮತ್ತೊಂದು ಕೃತ್ಯ ಎಸೆಸಲು ಪ್ಲ್ಯಾನ್ ನಡೆಯುತ್ತಿದೆ ಎನ್ನಲಾಗುತ್ತಿದೆ.

    ಜೂನ್ 15ರಂದು ಗಾಲ್ವಾನ್ ಗಡಿ ಪ್ರದೇಶದಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟ ಮೇಲೆ ಚೀನಾ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಎಲ್ಲೆಡೆ ಚೀನಾ ವಸ್ತುಗಳು ಮತ್ತು ಸಾಫ್ಟ್ ವೇರ್ ಮೊಬೈಲ್ ಆ್ಯಪ್ ಗಳನ್ನು ಬೈಕಾಟ್ ಮಾಡುವ ಮಾತುಗಳು ಕೇಳಿ ಬರ್ತಿದೆ. ಇದಕ್ಕಾಗಿ ಅಭಿಯಾನ ಆರಂಭವಾಗಿದ್ದು ಕೇಂದ್ರ ಸರ್ಕಾರದಿಂದ ಕಾಮನ್ ಮ್ಯಾನ್‍ವರೆಗೂ ಈ ಬಾರಿ ನಿಶ್ಚಿತ ನಿರ್ಧಾರ ಮಾಡಿದ್ದಾರೆ. ಭಾರತೀಯರ ಈ ದಿಟ್ಟ ನಿರ್ಧಾರದಿಂದ ಚೀನಾ ಸಾಫ್ಟ್‍ವೇರ್ ವಲಯ ತೀವ್ರ ಆಕ್ರೋಶಗೊಂಡಿದೆ. ಇದೇ ಸೇಡಿಟ್ಟುಕೊಂಡಿರುವ ಚೀನಾ ಹ್ಯಾಕರ್ಸ್ ಭಾರತೀಯ ವ್ಯವಹಾರಗಳನ್ನು ಟಾರ್ಗೇಟ್ ಮಾಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿಗಳು ಬಿತ್ತರವಾಗಿವೆ.

    ಎಚ್ಚರ ಎಚ್ಚರ: ಮುಂದಿನ ಹತ್ತು ದಿನಗಳಲ್ಲಿ ಭಾರತೀಯ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ವ್ಯವಹಾರಗಳ ಮೇಲೆ ಹ್ಯಾಕರ್ಸ್ ಕಣ್ಣಿಟ್ಟಿದ್ದು ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಸೂಕ್ಷ್ಮ ಡಾಟಾ ಕದಿಯುವುದು, ಸೇವೆಗಳಿಗೆ ತೊಡಕುಂಟು ಮಾಡುವ ಪ್ರಯತ್ನ ನಡೆಯಲಿದೆಯಂತೆ. ಇದಕ್ಕಾಗಿ ತಯಾರಿ ನಡೆಯುತ್ತಿದ್ದು ಈ ಸಂಬಂಧ ಡಾರ್ಕ್ ವೆಬ್‍ನಲ್ಲಿ ನಡೆದ ಸಂಭಾಷಣೆ ಬಹಿರಂಗವಾಗಿದೆ. ಸಿಂಗಾಪುರ ಮೂಲದ ಸೈಬರ್ ಭದ್ರತಾ ಸಂಸ್ಥೆ ಸೈಫಿರ್ಮಾ ಇಂತದೊಂದು ಎಚ್ಚರಿಕೆ ನೀಡಿದೆ. ಈ ಸಂಸ್ಥೆ ಪ್ರಕಾರ ದೂರಸಂಪರ್ಕ, ಫಾರ್ಮಾ, ಸ್ಮಾರ್ಟ್‍ಫೋನ್ ಮತ್ತು ನಿರ್ಮಾಣ ಉದ್ಯಮಗಳಲ್ಲಿ ಭಾರತೀಯ ಸರ್ಕಾರಿ ವೆಬ್‍ಸೈಟ್‍ಗಳು ಮತ್ತು ಕಾರ್ಪೊರೇಟ್‍ಗಳನ್ನು ಗುರಿಯಾಗಿಸುವ ದುರುದ್ದೇಶ ಹೊಂದಿದೆ ಎನ್ನಲಾಗಿದೆ.

    ಅತಿ ಹೆಚ್ಚು ಚೀನಾ ಮೊಬೈಲ್: ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಡಿಸಿ ನಡೆಸಿದ ಸರ್ವೇ ಪ್ರಕಾರ, ಮಾರ್ಚ್ 2020ರ ಮೊದಲ ತ್ರೈಮಾಸಿಕದಲ್ಲಿ ಭಾರತಕ್ಕೆ ರವಾನೆಯಾದ 3.25 ಕೋಟಿ ಸ್ಮಾರ್ಟ್ ಫೋನ್‍ಗಳಲ್ಲಿ ಸುಮಾರು 76 ಪ್ರತಿಶತವು ಚೀನಾದ ಬ್ರಾಂಡ್‍ಗಳಾಗಿವೆ. ಅದೇ ಐಡಿಸಿ ದತ್ತಾಂಶವು ಭಾರತದ ಐದು ಉನ್ನತ ಸ್ಮಾರ್ಟ್ ಫೋನ್ ಬ್ರಾಂಡ್‍ಗಳಲ್ಲಿ ನಾಲ್ಕು ಚೀನಾದವು ಎಂದು ತೋರಿಸಿದೆ. ಚೀನಾದ ಬ್ರಾಂಡ್ ಶಿಯೋಮಿ ಭಾರತದಲ್ಲಿ ಅತಿ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ ವಿವೊ ಇದೆ. ಮೂರನೆಯ ಸ್ಥಾನದಲ್ಲಿ ಚೀನಾದ್ದು ಅಲ್ಲದ ಸ್ಯಾಮ್‍ಸಂಗ್ ಇದ್ದರೆ ನಂತರದ ಸ್ಥಾನದಲ್ಲಿ ಮತ್ತೆ ಚೀನಾದ ರಿಯಲ್‍ಮೆ ಮತ್ತು ಒಪ್ಪೊ ಸ್ಥಾನ ಪಡೆದಿವೆ. ಭಾರತ ತಂತ್ರಜ್ಞಾನದಲ್ಲಿ ಚೀನಾವನ್ನು ಹೆಚ್ಚು ಅವಲಂಬಿಸಿದ್ದು ಇದನ್ನೇ ಹ್ಯಾಕರ್ಸ್ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

  • 5,000 ಕೋಟಿ ಮೌಲ್ಯದ ಯೋಜನೆ- ಚೀನಿ ಕಂಪನಿಗಳ ಜೊತೆಗಿನ ಒಪ್ಪಂದಕ್ಕೆ ‘ಮಹಾ’ ಸರ್ಕಾರದ ಬ್ರೇಕ್

    5,000 ಕೋಟಿ ಮೌಲ್ಯದ ಯೋಜನೆ- ಚೀನಿ ಕಂಪನಿಗಳ ಜೊತೆಗಿನ ಒಪ್ಪಂದಕ್ಕೆ ‘ಮಹಾ’ ಸರ್ಕಾರದ ಬ್ರೇಕ್

    ಮುಂಬೈ: ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ಚೀನಾ-ಭಾರತದ ಸಂಘರ್ಷದ ಬಳಿಕ ದೇಶದಲ್ಲಿ ಚೀನಾ ವಸ್ತುಗಳು ಹಾಗೂ ಸೇವೆಗಳನ್ನು ಕೈಬಿಡುವಂತೆ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

    ಮಹಾರಾಷ್ಟ್ರ ಸರ್ಕಾರವು ಇತ್ತೀಚೆಗೆ ಮಹಾ ವಿಕಾಸ್ ಅಘಾಡಿ ನಡೆದ ಮ್ಯಾಗ್ನೆಟಿಕ್ ಮಹಾರಾಷ್ಟ್ರ 2.0 ಹೂಡಿಕೆದಾರರ ಸಭೆಯಲ್ಲಿ ಚೀನಾದ ಕಂಪನಿಗಳೊಂದಿಗೆ ಸಹಿ ಮಾಡಿತ್ತು. ಆದರೆ ಈಗ ಆ ಮೂರೂ ಒಪ್ಪಂದಗಳನ್ನು ತಡೆಹಿಡಿಯಲಾಗಿದೆ. ಈ ಮೂಲಕ 5,000 ಕೋಟಿ ರೂ. ಮೌಲ್ಯದ ಯೋಜನೆಗೆ ಬ್ರೇಕ್ ಹಾಕಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರದ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ, “ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೂರು ಯೋಜನೆಗೆ ಈ ಮೊದಲು ಸಹಿ ಹಾಕಲಾಗಿತ್ತು. ಇಂಡೋ-ಚೀನಾ ಗಡಿಯ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾದ ಹಿನ್ನೆಲೆಯಲ್ಲಿ ಚೀನಾದ ಕಂಪನಿಗಳೊಂದಿಗೆ ಯಾವುದೇ ಒಪ್ಪಂದಗಳಿಗೆ ಸಹಿ ಹಾಕದಂತೆ ವಿದೇಶಾಂಗ ಸಚಿವಾಲಯವು ಸೂಚಿಸಿದೆ” ಎಂದು ಹೇಳಿದರು.

    ಮಹಾರಾಷ್ಟ್ರ ಸರ್ಕಾರವು ಕೋವಿಡ್-19 ನಂತರದ ಆರ್ಥಿಕತೆಯನ್ನು ಉತ್ತಮಗೊಳಿಸಲು ‘ಮ್ಯಾಗ್ನೆಟಿಕ್ ಮಹಾರಾಷ್ಟ್ರ 2.0’ ಪ್ಲಾನ್ ರೂಪಿಸಿತ್ತು. ಇದರ ಅಡಿ ಎಲ್ಲಾ 12 ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಈ ಒಪ್ಪಂದದಲ್ಲಿ ಸಿಂಗಾಪುರ, ದಕ್ಷಿಣ ಕೊರಿಯಾ, ಅಮೆರಿಕದಿಂದ ಹಲವಾರು ಭಾರತೀಯ ಕಂಪನಿಗಳು ಸೇರಿವೆ. ರಾಜ್ಯ ಸರ್ಕಾರವು ಇತರ ಒಂಬತ್ತು ಒಪ್ಪಂದಗಳನ್ನು ಮುಂದುವರಿಸಲಿದೆ ಎಂದು ಸುಭಾಷ್ ದೇಸಾಯಿ ದೇಸಾಯಿ ಹೇಳಿದರು.

    ಯಾವ ಯಾವ ಒಪ್ಪಂದ?:
    ಕಳೆದ ಸೋಮವಾರ ನಡೆದ ಆನ್‍ಲೈನ್ ಸಮ್ಮೇಳನದಲ್ಲಿ ಚೀನಾದ ರಾಯಭಾರಿ ಸನ್ ವೀಡಾಂಗ್ ಭಾಗವಹಿಸಿದ್ದರು. ಮೂರು ಒಪ್ಪಂದಗಳಲ್ಲಿ ಪುಣೆ ಬಳಿಯ ತಲೆಗಾಂವ್‍ನಲ್ಲಿ ಆಟೋಮೊಬೈಲ್ ಪ್ಲಾಂಟ್ ಸ್ಥಾಪಿಸಲು ಗ್ರೇಟ್ ವಾಲ್ ಮೋಟಾರ್ಸ್ (ಜಿಡಬ್ಲ್ಯೂಎಂ) ನೊಂದಿಗೆ 3,770 ಕೋಟಿ ರೂ. ಯೋಜನೆ, ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಫೋಟಾನ್ (ಚೀನಾ) ಹಾಗೂ ಜಂಟಿ ಸಹಭಾಗಿತ್ವದಲ್ಲಿ 1,000 ಕೋಟಿ ರೂ.ಗಳ ಘಟಕ ಸ್ಥಾಪನೆಯ ಒಪ್ಪಂದವಾಗಿತ್ತು. ಈ ಮೂಲಕ 1,500 ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರ ನಿರ್ಧರಿಸಿತ್ತು. ಜೊತೆಗೆ 150 ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಯಾದ ತಲೇಗಾಂವ್‍ನಲ್ಲಿ ಎರಡನೇ ಹಂತದ ವಿಸ್ತರಣೆಯ ಭಾಗವಾಗಿ 250 ಕೋಟಿ ರೂ.ಗಳ ಹೂಡಿಕೆಗಾಗಿ ಹೆಂಗ್ಲಿ ಎಂಜಿನಿಯರಿಂಗ್ ಬದ್ಧವಾಗಿತ್ತು. ಆದರೆ ಈಗ ಯೋಜನೆಯನ್ನು ಅನಿರ್ದಿಷ್ಟಾವಧಿಗೆ ತಡೆ ಹಿಡಿಯಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕರೆದ ಸರ್ವಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ಭಾಗಿಯಾಗಿದ್ದರು. ಈ ವೇಳೆ ಪ್ರಧಾನಿ ಮೋದಿ, “ಭಾರತಕ್ಕೆ ಶಾಂತಿ ಬೇಕು. ಆದರೆ ಇದರರ್ಥ ನಾವು ದುರ್ಬಲರು ಎಂದಲ್ಲ. ಚೀನಾದ ಸ್ವಭಾವವು ದ್ರೋಹವನ್ನು ಹೊಂದಿದೆ. ಭಾರತವು ಪ್ರಬಲವಾಗಿದೆ, ಅಸಹಾಯಕರಲ್ಲ” ಎಂದು ಹೇಳಿದ್ದರು.

    ಪ್ರಧಾನಿ ಮೋದಿ ಅವರಿಗೆ ವಿಶ್ವಾಸ ವ್ಯಕ್ತಪಡಿಸಿದ ಠಾಕ್ರೆ, “ನಮ್ಮ ಸರ್ಕಾರವು ಸೂಕ್ತವಾದ ಉತ್ತರವನ್ನು ನೀಡುವ ಸಾಮಥ್ರ್ಯವನ್ನು ಹೊಂದಿದೆ. ನಾವೆಲ್ಲರೂ ಒಂದಾಗಬೇಕಿದೆ. ದೇಶದ ಪ್ರದೇಶ ರಕ್ಷಣೆ ನಮ್ಮ ಉದ್ದೇಶವಾಗಿರಬೇಕು. ಇದು ಭಾವನೆ ಕೂಡ ಹೌದು. ನಾವು ನಿಮ್ಮೊಂದಿಗೆ ಇದ್ದೇವೆ. ನಮ್ಮ ಸೈನಿಕರು ಹಾಗೂ ಅವರ ಕುಟುಂಬಗಳೊಂದಿಗೆ ನಾವಿದ್ದೇವೆ” ತಿಳಿಸಿದ್ದರು. ಸಭೆಯ ಬಳಿಕ ಮಹಾರಾಷ್ಟ್ರದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ‘ಮಗ ಕರ್ತವ್ಯ ಮುಗಿಸಿ ಹೋದ, ಈಗ ಮೊಮ್ಮಕ್ಕಳ ಸರದಿ’

    ‘ಮಗ ಕರ್ತವ್ಯ ಮುಗಿಸಿ ಹೋದ, ಈಗ ಮೊಮ್ಮಕ್ಕಳ ಸರದಿ’

    ಪಾಟ್ನಾ: ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ 20 ಸೈನಿಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹೀಗಿದ್ದರೂ ಮಗ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾನೆ ಎಂದು ಪೋಷಕರು ನುಡಿದು ಹೆಮ್ಮೆಪಡುತ್ತಿದ್ದಾರೆ.

    ಕರ್ನಲ್ ಸಂತೋಷ್ ಬಾಬು ಅವರ ತಾಯಿ ಮಂಜುಳಾ ಅವರು ಕೂಡ ಮಗ ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದಾರೆ ಎಂದು ಹೇಳಿದ್ದರು. ಈಗ ಬಿಹಾರದ ಸಹರ್ಸಾ ಮೂಲದ ಸಿಪಾಯಿ ಕುಂದನ್ ಕುಮಾರ್ ಅವರ ತಂದೆ ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ದೇಶದ ಸೇವೆಗೆ ಮೊಮ್ಮಕ್ಕಳನ್ನು ಕಳುಹಿಸಿಕೊಡುವ ಮಾತಾಗಳನ್ನಾಡಿದ್ದಾರೆ. ಇದನ್ನೂ ಓದಿ: ನನಗೆ ಒಬ್ಬನೇ ಮಗ- ಕಣ್ಣೀರಿಟ್ಟ ಕರ್ನಲ್ ಸಂತೋಷ್ ಬಾಬು ತಾಯಿ

    ಮಗ ಹುತಾತ್ಮನಾದ ಸುದ್ದಿ ತಿಳಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ನನ್ನ ಮಗ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಕುಂದನ್ ಕುಮಾರ್ ತನ್ನ ಕರ್ತವ್ಯವನ್ನು ನಿಭಾಯಿಸಿದ್ದಾನೆ. ಮುಂದೆ ನನ್ನ ಇಬ್ಬರು ಮಕ್ಕಳು ಸೇನೆ ಸೇರಿ ದೇಶಸೇವೆ ಮಾಡುತ್ತಾರೆ. ಈ ಮೂಲಕ ದೇಶ ಸೇವೆ ಪರಂಪರೆಯನ್ನು ಮುಂದುವರಿಸುತ್ತೇವೆ” ಎಂದು ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ತಾಳ್ಮೆಯನ್ನು ಕೆಣಕಬೇಡಿ -ವೈರಿ ಚೀನಾಗೆ ಮೋದಿ ಖಡಕ್ ಸಂದೇಶ

    ಪರಿಹಾರ:
    ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಹುತಾತ್ಮ ಯೋಧರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದಾರೆ. ಇಂಡೋ-ಚೀನಾ ಸಂಘರ್ಷದಲ್ಲಿ ಹುತಾತ್ಮರಾದ ಸೈನಿಕರಿಗೆ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಂತಾಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ರಾಜ್ಯದ ಇಬ್ಬರು ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿ ಮಾದರಿಯಾಗಿದ್ದಾರೆ.

    ಇಂಡೋ-ಚೀನಾ ದಾಳಿಯಲ್ಲಿ ಪಶ್ಚಿಮ ಬಂಗಾಳದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಹೀಗಾಗಿ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಅವರು, ವೀರ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದ್ದಾರೆ.

  • ಒಡಿಶಾದ ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಘೋಷಿಸಿದ ಪಟ್ನಾಯಕ್

    ಒಡಿಶಾದ ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಘೋಷಿಸಿದ ಪಟ್ನಾಯಕ್

    ಭುವನೇಶ್ವರ: ಇಂಡೋ-ಚೀನಾ ಸಂಘರ್ಷದಲ್ಲಿ ಹುತಾತ್ಮರಾದ ಸೈನಿಕರಿಗೆ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಂತಾಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ರಾಜ್ಯದ ಇಬ್ಬರು ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿ ಮಾದರಿಯಾಗಿದ್ದಾರೆ.

    ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ 20 ಸೈನಿಕರಲ್ಲಿ ಒಡಿಶಾದ ಇಬ್ಬರು ಜವಾನರು ಇದ್ದಾರೆ. ಕಂಧಮಾಲ್ ಜಿಲ್ಲೆಯ ಬಿಯರ್ ಪಂಗದಿಂದ ಚಂದ್ರಕಾಂತ್ ಪ್ರಧಾನ್ ಮತ್ತು ರೈರಂಗ್‍ಪುರದ ನಂದೂರಂ ಸೊರೆನ್ ಅವರು ಚೀನಾ ಸೇನೆ ಜೊತೆಗೆ ಹೋರಾಡಿ ಮಡಿದಿದ್ದಾರೆ. ಇದನ್ನೂ ಓದಿ: ಇಂಡೋ-ಚೀನಾ ಸಂಘರ್ಷ- ಹುತಾತ್ಮರಲ್ಲಿ ಬಿಹಾರ್ ರೆಜಿಮೆಂಟ್‍ನ ಯೋಧರೇ ಹೆಚ್ಚು 

    ಈ ಕುಡಿತು ಟ್ವೀಟ್ ಮಾಡಿರುವ ನವೀನ್ ಪಟ್ನಾಯಕ್ ಅವರು, “ನಮ್ಮ ರಾಷ್ಟ್ರದ ಸಮಗ್ರತೆಯನ್ನು ಕಾಪಾಡಿ ಗಾಲ್ವಾನ್ ಕಣಿವೆಯಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಭಾರತೀಯ ಸೇನೆಯ ಧೈರ್ಯಶಾಲಿಗಳಿಗೆ ಧನ್ಯವಾದ. ಕೆಚ್ಚೆದೆಯ ಹುತಾತ್ಮರ ಕುಟುಂಬಗಳಿಗೆ ಅಗಲಿಕೆ ನೋವು ಸಹಿಸುವ ಶಕ್ತಿ ಸಿಗಲಿ” ಎಂದು ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ತಾಳ್ಮೆಯನ್ನು ಕೆಣಕಬೇಡಿ -ವೈರಿ ಚೀನಾಗೆ ಮೋದಿ ಖಡಕ್ ಸಂದೇಶ

    ಇಂಡೋ-ಚೀನಾ ಸಂಘರ್ಷದಲ್ಲಿ ಮಡಿದ ರಾಜ್ಯದ ಇಬ್ಬರು ಯೋಧರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ. ನೀಡಲಾಗುವುದು. ಯೋಧರ ಕುಟುಂಬದ ನೆರವಿಗೆ ಸರ್ಕಾರ ನಿಂತಿದೆ ಎಂದು ಪಟ್ನಾಯಕ್ ಟ್ವಿಟ್ ಮಾಡಿದ್ದಾರೆ. ಇದನ್ನೂ ಓದಿ: ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ಯಾವಗಲೂ ನಮಗೆ ಸೇರಿದ್ದು- ಮತ್ತೆ ಕೆಣಕಿದ ಚೀನಾ

  • ಇಂಡೋ-ಚೀನಾ ಸಂಘರ್ಷ- ಹುತಾತ್ಮರಲ್ಲಿ ಬಿಹಾರ್ ರೆಜಿಮೆಂಟ್‍ನ ಯೋಧರೇ ಹೆಚ್ಚು

    ಇಂಡೋ-ಚೀನಾ ಸಂಘರ್ಷ- ಹುತಾತ್ಮರಲ್ಲಿ ಬಿಹಾರ್ ರೆಜಿಮೆಂಟ್‍ನ ಯೋಧರೇ ಹೆಚ್ಚು

    ನವದೆಹಲಿ: ಭಾರತ-ಚೀನಾದ ಸೈನಿಕರ ನಡುವೆ ಸೋಮವಾರ ರಾತ್ರಿ ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಮ್ಮ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ.

    ಈ ಯೋಧರಲ್ಲಿ ಗರಿಷ್ಠ 13 ಮಂದಿ ಬಿಹಾರದ ಎರಡು ವಿಭಿನ್ನ ರೆಜಿಮೆಂಟ್‍ಗಳಿಂದ ಬಂದವರಾಗಿದ್ದರು. ಹುತಾತ್ಮ ಕರ್ನಲ್ ಸಂತೋಷ್ ಬಾಬು ಅವರು ಕೂಡ ಬಿಹಾರ್ ರೆಜಿಮೆಂಟ್‍ನವರಾಗಿದ್ದಾರೆ. ಇದನ್ನೂ ಓದಿ: ನಮ್ಮ ತಾಳ್ಮೆಯನ್ನು ಕೆಣಕಬೇಡಿ -ವೈರಿ ಚೀನಾಗೆ ಮೋದಿ ಖಡಕ್ ಸಂದೇಶ

    ಯಾವ ರೆಜಿಮೆಂಟ್‍ನಿಂದ ಎಷ್ಟು ಹುತಾತ್ಮರು?
    16 ಬಿಹಾರ್ ರೆಜಿಮೆಂಟ್: 12 ಯೋಧರು
    3 ಪಂಜಾಬ್ ರೆಜಿಮೆಂಟ್: 3 ಯೋಧರು
    3 ಮಧ್ಯಮ ರೆಜಿಮೆಂಟ್: 2 ಯೋಧರು
    12 ಬಿಹಾರ್ ರೆಜಿಮೆಂಟ್: ಓರ್ವ ಯೋಧ
    81 ಮೌಂಟ್ ಬ್ರಿಗೇಡ್ ಸಿಗ್ನಲ್ ಕಂಪನಿ: ಓರ್ವ ಯೋಧ
    81 ಫೀಲ್ಡ್ ರೆಜಿಮೆಂಟ್: ಓರ್ವ ಯೋಧ ಇದನ್ನೂ ಓದಿ: ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ಯಾವಗಲೂ ನಮಗೆ ಸೇರಿದ್ದು- ಮತ್ತೆ ಕೆಣಕಿದ ಚೀನಾ

    16 ಬಿಹಾರ್ ರೆಜಿಮೆಂಟ್:
    > ಕರ್ನಲ್ ಬಿ. ಸಂತೋಷ್ ಬಾಬು – ತೆಲಂಗಾಣ (ಹೈದರಾಬಾದ್)
    > ಹವಾಲ್ದಾರ್ ಸುನಿಲ್ ಕುಮಾರ್- ಬಿಹಾರ (ಪಾಟ್ನಾ)
    > ಕಾನ್ಸ್‌ಟೇಬಲ್ ಕುಂದನ್ ಕುಮಾರ್ – ಬಿಹಾರ (ಸಹರ್ಸಾ)
    > ಕಾನ್ಸ್‌ಟೇಬಲ್ ಅಮನ್ ಕುಮಾರ್ – ಬಿಹಾರ (ಸಮಸ್ತಿಪುರ)
    > ದೀಪಕ್ ಕುಮಾರ್ – ಮಧ್ಯಪ್ರದೇಶ (ರೇವಾ)
    > ಕಾನ್ಸ್‌ಟೇಬಲ್ ಚಂದನ್ ಕುಮಾರ್ – ಬಿಹಾರ (ಭೋಜ್‍ಪುರ)
    > ಕಾನ್ಸ್‌ಟೇಬಲ್ ಗಣೇಶ ಕುಂಜಮ್ – ಪಶ್ಚಿಮ ಬಂಗಾಳ (ಸಿಂಗ್‍ಭೂಮ್)
    > ಕಾನ್ಸ್‌ಟೇಬಲ್ ಗಣೇಶ ರಾಮ್ – ಛತ್ತೀಸಗಢ (ಕಾಂಕರ್)
    > ಕಾನ್ಸ್‌ಟೇಬಲ್ ಕೆ.ಕೆ. ಓಜಾ – ಜಾರ್ಖಂಡ್ (ಸಾಹಿಬ್‍ಗಂಜ್)
    > ಕಾನ್ಸ್‌ಟೇಬಲ್ ರಾಜೇಶ್ ಒರಾನ್ – ಪಶ್ಚಿಮ ಬಂಗಾಳ (ಬಿರ್ಭುಮ್)
    > ಸಿಪಾಯಿ ಸಿ.ಕೆ.ಪ್ರಧಾನ್ – ಒಡಿಶಾ (ಕಂಧಮಾಲ್)
    > ನಾಯಬ್ ಸುಬೇದಾರ್ ನಂದುರಾಮ್ – ಒಡಿಶಾ (ಮಯೂರ್ಭಂಜ್)

    3 ಪಂಜಾಬ್ ರೆಜಿಮೆಂಟ್:
    > ಕಾನ್ಸ್‌ಟೇಬಲ್ ಗುರ್ತೇಜ್ ಸಿಂಗ್ – ಪಂಜಾಬ್ (ಮಾನ್ಸಾ)
    > ಸಿಪಾಯಿ ಅಂಕುಷ್ – ಹಿಮಾಚಲ ಪ್ರದೇಶ (ಹಮೀರ್‍ಪುರ)
    > ಕಾನ್ಸ್‌ಟೇಬಲ್ ಗುರ್ವಿಂದರ್ ಸಿಂಗ್ – ಪಂಜಾಬ್ (ಸಂಗ್ರೂರ್)

    3 ಮಧ್ಯಮ ರೆಜಿಮೆಂಟ್:
    > ನಾಯಬ್ ಸುಬೇದಾರ್ ಸತ್ನಮ್ ಸಿಂಗ್ – ಪಂಜಾಬ್ (ಗುರುದಾಸ್‍ಪುರ)
    > ನಾಯಬ್ ಸುಬೇದಾರ್ ಮಂದೀಪ್ ಸಿಂಗ್ – ಪಂಜಾಬ್ (ಪಟಿಯಾಲ)

    12 ಬಿಹಾರ ರೆಜಿಮೆಂಟ್:
    > ಕಾನ್ಸ್‌ಟೇಬಲ್ ಜೈಕಿಶೋರ್ ಸಿಂಗ್ – ಬಿಹಾರ (ವೈಶಾಲಿ)
    81 ಮೌಂಟ್ ಬ್ರಿಗೇಡ್ ಸಿಗ್ನಲ್ ಕಂಪನಿ:
    > ಹವಾಲ್ದಾರ್ ಬಿಪುಲ್ ರಾಯ್ – ಉತ್ತರ ಪ್ರದೇಶ (ಮೀರತ್)
    81 ಫೀಲ್ಡ್ ರೆಜಿಮೆಂಟ್:
    > ಹವಾಲ್ದಾರ್ ಕೆ.ಪಳನಿ – ತಮಿಳುನಾಡು (ಮಧುರೈ)

    ಕರ್ನಲ್ ಸಂತೋಷ್:
    ತೆಲಂಗಾಣದ ಸೂರ್ಯಪೇಟೆಯ ಹುತಾತ್ಮ ಕರ್ನಲ್ ಸಂತೋಷ್ ಬಾಬು ಅವರನ್ನು ಭಾರತದ ಗಡಿಯ ರಕ್ಷಣೆಗಾಗಿ 18 ತಿಂಗಳು ಲಡಾಖ್‍ನಲ್ಲಿ ನಿಯೋಜಿಸಲಾಗಿತ್ತು. ಅವರು ಕಮಾಂಡಿಂಗ್ ಅಧಿಕಾರಿಯಾಗಿದ್ದರು. ಮಗನ ನಿಧನದ ಸುದ್ದಿ ಕೇಳುತ್ತಿದ್ದಂತೆ ಸಂತೋಷ್ ಬಾಬು ಅವರ ತಾಯಿ, “ಒಬ್ಬನೇ ಮಗ ಕಳೆದುಹೋದ ಎನ್ನುವ ದುಃಖವಿದೆ. ಆದರೆ ಅವನು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾನೆ ಎಂಬ ಹೆಮ್ಮೆ ಇದೆ” ಎಂದು ಮಂಗಳವಾರ ಹೇಳಿದ್ದರು.

    ಕುಂದನ್ ಓಜಾ:
    26 ವರ್ಷದ ಹುತಾತ್ಮ ಕುಂದನ್ ಓಜಾ ಅವರ ಪತ್ನಿ 17 ದಿನಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದರು. ಆದರೆ ಕುಂದನ್ ಓಜಾ ಅವರ ಮಗಳ ಮುಖವನ್ನು ಸಹ ನೋಡಲಾಗಲಿಲ್ಲ. ಅವರ ತಂದೆ ರವಿಶಂಕರ್ ಓಜಾ ಕೃಷಿಕಯಾಗಿದ್ದಾರೆ. ಕುಂದನ್ ಅವರನ್ನು 2011ರಲ್ಲಿ ಬಿಹಾರ ರೆಜಿಮೆಂಟ್ ಕತಿಹಾರ್ ಗೆ ನಿಯೋಜಿಸಲಾಗಿತ್ತು. ಅವರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು.

  • ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ಯಾವಗಲೂ ನಮಗೆ ಸೇರಿದ್ದು- ಮತ್ತೆ ಕೆಣಕಿದ ಚೀನಾ

    ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ಯಾವಗಲೂ ನಮಗೆ ಸೇರಿದ್ದು- ಮತ್ತೆ ಕೆಣಕಿದ ಚೀನಾ

    – ಭಾರತದ ಕಡೆಯಿಂದಲೇ ತಪ್ಪು ನಡೆದಿದೆ
    – ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸೋಣ

    ನವದೆಹಲಿ: ಚೀನಾ ಪದೇ ಪದೇ ಭಾರತವನ್ನು ಕೆರಳಿಸುವ ಕೆಲಸವನ್ನು ಮಾಡುತ್ತಿದೆ. ಈಗ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗಾಲ್ವಾನ್ ನದಿ ಕಣಿವೆಯ ಸಾರ್ವಭೌಮತ್ವ ಯಾವಗಲೂ ಚೀನಾಗೆ ಸೇರಿದ್ದು, ಎಂದು ಹೇಳಿದ್ದಾರೆ.

    ಗಾಲ್ವಾನ್ ಕಣುವೆಯಲ್ಲಿ ಖ್ಯಾತೆ ತೆಗೆಯುತ್ತಿರುವ ಚೀನಾ, ತನ್ನ ಹೇಳಿಕೆಗಳ ಮೂಲಕ ಭಾರತವನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಈಗ ಈ ವಿಚಾರವಾಗಿ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೀವೋ ಲಿಜಿಯಾನ್, ನಾವು ಭಾರತದ ಜೊತೆಗೆ ಹೆಚ್ಚಿನ ಸಂಘರ್ಷ ಬಯಸುವುದಿಲ್ಲ. ಆದರೆ ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ಯಾವಗಲೂ ಚೀನಾಗೆ ಸೇರಿದ್ದು ಎಂದು ಹೇಳಿದ್ದಾರೆ.

    ಭಾರತವು ಗಡಿಯಲ್ಲಿರುವ ತಮ್ಮ ಮುಂಚೂಣಿ ಸೈನಿಕರಿಗೆ ಶಿಸ್ತುಬದ್ಧವಾಗಿ ಇರಲು ತಿಳಿಸಬೇಕು ಮತ್ತು ಗಡಿಭಾಗದಲ್ಲಿ ಪ್ರಚೋದನೆ ಮಾಡುವುದು ಹಾಗೂ ನಿಯಮವನ್ನು ಉಲ್ಲಂಘನೆ ಮಾಡುವುದನ್ನು ಸೈನಿಕರು ನಿಲ್ಲಸಬೇಕು. ಮೊದಲಿನಂತೆ ಚೀನಾದ ಜೊತೆ ಕೆಲಸ ಮಾಡಿಕೊಂಡು ಮಾತುಕತೆಯ ಮೂಲಕ ಭಾರತ ಸಮಸ್ಯೆಯನ್ನು ಬಗಹರಿಸಿಕೊಳ್ಳಬೇಕು ಎಂದು ಚೀನಾ ಭಾರತಕ್ಕೆ ಉಪದೇಶ ಮಾಡಿದೆ.

    ನಾವು ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಭಾರತದ ಜೊತೆಗೆ ನಾವು ಸಂವಹನ ನಡೆಸುತ್ತಿದ್ದೇವೆ. ಇದರ ಸರಿ ಮತ್ತು ತಪ್ಪು ಬಹಳ ಸ್ಪಷ್ಟವಾಗಿದೆ. ಈ ಘಟನೆ ಚೀನಾದ ಎಲ್‍ಎಸಿಯ ಕಡೆಯಿಂದ ನಡೆದಿದ್ದು, ಇದಕ್ಕೆ ಚೀನಾ ಕಾರಣವಲ್ಲ. ಚೀನಾ ಇನ್ನೂ ಮುಂದೆ ಸಂಘರ್ಷವನ್ನು ಬಯಸುವುದಿಲ್ಲ. ಗಡಿ-ಸಂಬಂಧಿತ ವಿಚಾರದಲ್ಲಿ ನಮ್ಮ ಗಡಿ ನಿಯಮಾವಳಿಗಳನ್ನು ಮತ್ತು ನಮ್ಮ ಕಮಾಂಡರ್ ಮಟ್ಟದ ಮಾತುಕತೆಯ ಒಮ್ಮತವನ್ನು ಭಾರತೀಯ ಸೈನಿಕರು ಗಂಭೀರವಾಗಿ ಉಲ್ಲಂಘಿಸಿದ್ದಾರೆ ಎಂದು ಜೀವೋ ವಿತ್ತಂಡ ವಾದವನ್ನು ಮುಂದಿಟ್ಟಿದ್ದಾರೆ.

    ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ 17 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯು ಚೀನಾದ 40ಕ್ಕೂ ಹೆಚ್ಚು ಮಂದಿ ಯೋಧರನ್ನು ಸೆದೆಬಡಿದಿದೆ. ಇದರಲ್ಲಿ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಯೋಧರ ಮೃತದೇಹವನ್ನು ಹೊತ್ತೊಯ್ಯಲು ಚೀನಾ ಹೆಲಿಕಾಪ್ಟರ್ ಗಳು ಎಲ್‍ಎಸಿ ಬಳಿ ಹಾರಾಟ ನಡೆಸಿವೆ ಎಂದು ವರದಿಯಾಗಿದೆ.

  • ಗಡಿ ವಿಚಾರದಲ್ಲಿ ರಾಜಿ ಮಾತೇ ಇಲ್ಲ- ಜೆಪಿ ನಡ್ಡಾ

    ಗಡಿ ವಿಚಾರದಲ್ಲಿ ರಾಜಿ ಮಾತೇ ಇಲ್ಲ- ಜೆಪಿ ನಡ್ಡಾ

    ನವದೆಹಲಿ: ಗಡಿ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾತೇ ಇಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಚೀನಾ ಕುತಂತ್ರದ ವಿರುದ್ಧ ಗುಡುಗಿದ್ದಾರೆ.

    ಟ್ವೀಟ್ ಮಾಡಿರುವ ಜೆ.ಪಿ.ನಡ್ಡಾ ಅವರು, ಚೀನಾ ಕುತಂತ್ರದಿಂದ ನಮ್ಮ ಕೆಚ್ಚೆದೆಯ ಸೈನಿಕರನ್ನು ಕಳೆದುಕೊಂಡಿದ್ದೇವೆ. ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ನಮ್ಮ ಸೈನ್ಯವು ಎಲ್ಲದಕ್ಕೂ ಸಂಪೂರ್ಣವಾಗಿ ಸಜ್ಜುಗೊಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನಗೆ ಒಬ್ಬನೇ ಮಗ- ಕಣ್ಣೀರಿಟ್ಟ ಕರ್ನಲ್ ಸಂತೋಷ್ ಬಾಬು ತಾಯಿ

    ಪೂರ್ವ ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಷ್ಟೇ ಅಲ್ಲದೆ 17 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆಯು ಖಚಿತಪಡಿಸಿದೆ.

    ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯು ಚೀನಾದ 43 ಮಂದಿ ಯೋಧರನ್ನು ಸೆದೆಬಡಿದಿದೆ. ಅಷ್ಟೇ ಅಲ್ಲದೆ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಯೋಧರ ಮೃತದೇಹವನ್ನು ಹೊತ್ತೊಯ್ಯಲು ಚೀನಾ ಹೆಲಿಕಾಪ್ಟರ್ ಗಳು ಎಲ್‍ಎಸಿ ಬಳಿ ಹಾರಾಟ ನಡೆಸಿವೆ ಎಂದು ವರದಿಯಾಗಿದೆ.