Tag: ಗಾಯಾಳುಗಳು

  • ಆಟೋಗೆ ಡಿಕ್ಕಿ ಹೊಡೆದ ಕಾರು – 9 ಗಾಯಾಳುಗಳಿಗೆ ಅಂಬುಲೆನ್ಸ್ ಸಿಗದೇ ಪರದಾಟ

    ಆಟೋಗೆ ಡಿಕ್ಕಿ ಹೊಡೆದ ಕಾರು – 9 ಗಾಯಾಳುಗಳಿಗೆ ಅಂಬುಲೆನ್ಸ್ ಸಿಗದೇ ಪರದಾಟ

    ಚಿಕ್ಕಬಳ್ಳಾಪುರ: ಕಾರು (Car) ಚಾಲಕನೊಬ್ಬ ಆಟೋ ರಿಕ್ಷಾಗೆ (Auto Rickshaw) ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ 9 ಮಂದಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ (ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ನಡೆದಿದೆ. ಕಾರು ಚಾಲಕ ಕಂಠಪೂರ್ತಿ ಹೆಂಡ (ನೀರಾ) ಕುಡಿದು ಗಾಡಿ ಚಲಾಯಿಸಿದ್ದಾನೆ ಎಂದು ಗಾಯಾಳುಗಳ ಸಂಬಂಧಿಕರು ಆರೋಪಿಸಿದ್ದಾರೆ.

    ಕಾರು ಚಾಲಕ ಆಂಧ್ರ ಪ್ರದೇಶದ ಹಿಂದೂಪುರದಿಂದ ಗೌರಿಬಿದನೂರಿನ ಕಡೆ ಬರುತ್ತಿದ್ದಾಗ ಹಳೆಯ ಆರ್‌ಟಿಒ ಕಚೇರಿ ಬಳಿಯಿದ್ದ ಹಂಪ್ಸ್ ಬಳಿ ವೇಗವಾಗಿ ಬಂದಿದ್ದಾನೆ. ಈ ವೇಳೆ ಆಟೋ ರಿಕ್ಷಾಗೆ ಹಿಂಬದಿಯಿಂದ ಗುದ್ದಿದ್ದಾನೆ. ಘಟನೆಯಲ್ಲಿ ಆಟೋ ಹಿಂಬದಿಯಲ್ಲಿ ಕೂತಿದ್ದ ನಾಲ್ವರು ಸೇರಿದಂತೆ 9 ಮಂದಿಗೆ ಗಾಯಗಳಾಗಿವೆ.

    ಗಾಯಾಳುಗಳು ದೊಡ್ಡಬಳ್ಳಾಪುರದವರಾಗಿದ್ದು, ಬೈಚಾಪುರ ಗ್ರಾಮದ ಸಂಬಂಧಿಕರ ಮನೆಯ ಶುಭ ಕಾರ್ಯಕ್ಕೆ ಆಗಮಿಸಿ ವಾಪಾಸಾಗುತ್ತಿದ್ದರು. ಘಟನೆಯ ನಂತರ ಗಾಯಾಳುಗಳ ಸಂಬಂಧಿಕರು ಕಾರಿನ ಮೇಲೆ ಸೈಜುಗಲ್ಲು ಎತ್ತಿ ಹಾಕಿ ಗಾಜನ್ನು ಪುಡಿ ಮಾಡಿದ್ದಾರೆ. ಕಾರು ಚಾಲಕ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಎಂದು ಆರೋಪಿಸಲಾಗಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ನೀರಾ ಬಾಟಲಿಯೊಂದು ಗೇರ್ ಲಿವರ್ ಬಳಿ ಪತ್ತೆಯಾಗಿದೆ. ಘಟನೆಯ ಬಳಿಕ ಗೌರಿಬಿದನೂರು ನಗರ ಪೊಲೀಸರು ವಾಹನಗಳ ಸಮೇತ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

    ಅಂಬುಲೆನ್ಸ್ ಇಲ್ಲದೇ ಪರದಾಟ:
    ಘಟನೆಯಲ್ಲಿ ಗಾಯಗೊಂಡ 9 ಮಂದಿಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಗಂಭೀರವಾಗಿ ಗಾಯಗೊಂಡ 7 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದಾರೆ. ಈ ವೇಳೆ ಸರ್ಕಾರಿ ಆಸ್ಪತ್ರೆ ಅಂಬುಲೆನ್ಸ್‌ಗಳು (Ambulance) ಇಲ್ಲದೇ ಹೋಗಿದ್ದು, ಆಸ್ಪತ್ರೆ ಮುಂಭಾಗದಲ್ಲೇ ಇದ್ದ 4 ಒಮ್ನಿ ಖಾಸಗಿ ಅಂಬುಲೆನ್ಸ್‌ಗಳಿಗೆ ಗಾಯಾಗಳುಗಳನ್ನು ಶಿಫ್ಟ್ ಮಾಡಲಾಗಿದೆ.

    ಗಾಯಾಳುಗಳ ಸಂಬಂಧಿಗಳು ಇವು ಸರ್ಕಾರದ್ದೇ ಇರಬೇಕು ಎಂದುಕೊಂಡು ಹೊರಟಿದ್ದಾರೆ. ಆದರೆ ಮಾರ್ಗಮಧ್ಯೆ ತಲಾ ಅಂಬುಲೆನ್ಸ್‌ಗೆ 3,500 ರೂ. ಕೊಡಬೇಕು ಅಂದಾಗ ಸಂಬಂಧಿಕರು ಅಷ್ಟೊಂದು ಹಣವಿಲ್ಲ ಎಂದಿದ್ದಾರೆ. ಇದರಿಂದ ಗಾಯಾಳುಗಳನ್ನು ಕರೆದುಕೊಂಡು ಹೋಗಿದ್ದ ಖಾಸಗಿ ಅಂಬುಲೆನ್ಸ್ ಚಾಲಕರು ಮರಳಿ ಗೌರಿಬಿದನುರು ಆಸ್ಪತ್ರೆಗೆ ತಂದುಬಿಟ್ಟಿದ್ದಾರೆ.

    ಗಂಟೆಗಟ್ಟಲೆ ಕಾದ ಬಳಿಕ ಸರ್ಕಾರಿ ಆಸ್ಪತ್ರೆಯ 1 ಅಂಬುಲೆನ್ಸ್ ಸ್ಥಳಕ್ಕೆ ಆಗಮಿಸಿದ್ದು, ಅದರಲ್ಲಿ ಮೂವರನ್ನು ಬೆಂಗಳೂರಿಗೆ ರವಾನಿಸಲಾಗಿದೆ. ನಂತರ ಸಮಾಜಸೇವಕ ಕೆಂಪರಾಜು ಕಡೆಯಿಂದ 2 ಅಂಬುಲೆನ್ಸ್ಗಳ ಮೂಲಕ ನಾಲ್ವರನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಪಘಾತಕ್ಕೀಡಾಗಿ ನರಳುತಿದ್ದವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಹೊರಟ್ಟಿ

    ಅಪಘಾತಕ್ಕೀಡಾಗಿ ನರಳುತಿದ್ದವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಹೊರಟ್ಟಿ

    ಚಿತ್ರದುರ್ಗ: ಅಪಘಾತವಾಗಿ ರಸ್ತೆಯಲ್ಲಿ ನರಳುತ್ತಿದ್ದ ಅಪರಿಚಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಸಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾನವೀಯತೆ ಮೆರೆದಿದ್ದಾರೆ.

    ತಾಲೂಕಿನ ಸಿರಿಗೆರೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಾಳಾಗಿ ರಸ್ತೆ ಮಧ್ಯೆ ನರಳಾಡುತ್ತಿದ್ದರು. ಈ ವೇಳೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಬಸವರಾಜ ಹೊರಟ್ಟಿಯವರು ರಸ್ತೆಯಲ್ಲಿ ನಡೆದ ಅಪಘಾತ ಗಮನಿಸಿ, ತಕ್ಷಣವೇ ಕಾರು ನಿಲ್ಲಿಸಿ ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುಗಳ ಬಳಿಗೆ ಧಾವಿಸಿದ್ದಾರೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಹಾಗೂ ಪುತ್ರನಿಗೆ ಪ್ರಥಮ ಚಿಕಿತ್ಸೆ ಮಾಡಿಸಿ, ಕೆಲ ಕಾಲ ಸ್ಥಳದಲ್ಲೇ ಇದ್ದು, ಗಾಯಾಳುಗಳಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ನಂತರ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

    ಅತಿ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದರೆ ಇಂತಹ ಅವಘಡ ಸಂಭವಿಸುತ್ತದೆ. ಅದೇ ರೀತಿ ಈಗ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದರು. ಅಲ್ಲದೆ ಗಾಯಾಳುಗಳಿಗೆ ಸಾಂತ್ವಾನ ಹೇಳಿ ಅವರ ಪ್ರಯಾಣ ಮುಂದುವರೆಸಿದ್ದಾರೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಪಾಕಿಸ್ತಾನದ ಲಾಹೋರ್​ನಲ್ಲಿ ಬಾಂಬ್ ಸ್ಫೋಟ- ನಾಲ್ವರ ದುರ್ಮರಣ

    ಪಾಕಿಸ್ತಾನದ ಲಾಹೋರ್​ನಲ್ಲಿ ಬಾಂಬ್ ಸ್ಫೋಟ- ನಾಲ್ವರ ದುರ್ಮರಣ

    ಲಾಹೋರ್: ಏಷ್ಯಾದ ಅತಿದೊಡ್ಡ ದೇವಾಲಯಗಳಲ್ಲಿ ಒಂದಾದ ಡಾಟಾ ದರ್ಬಾರ್ ಸಮೀಪ ಇಂದು ಬಾಂಬ್ ಸ್ಫೋಟವಾಗಿದೆ. ಈ ವೇಳೆ 4 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

    ಸ್ಫೋಟ ಸಂಭವಿಸಿದಾಗ ನೂರಾರು ಯಾತ್ರಿಕರು ಡಾಟಾ ದರ್ಬಾರ್ ದೇವಾಲಯದ ಒಳಗೆ ಮತ್ತು ಹೊರಗಡೆ ಇದ್ದರು. ರಂಜಾನ್ ಹಬ್ಬದ ಉಪವಾಸ ನಡೆಯುತ್ತಿರುವುದರಿಂದ ಯಾತ್ರಿಕರು ಈ ಸಮಯದಲ್ಲಿ ಡಾಟಾ ದರ್ಬಾರ್ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

    ನಗರದ ಪೊಲೀಸ್ ಅಧಿಕಾರಿ ಮುಖ್ಯಸ್ಥ ಘಝನ್ಫರ್ ಅಲಿ ಅವರು ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿ, ಈ ದೇವಾಲಯದ ಹೊರಗೆ ಇದ್ದ ಪೊಲೀಸ್ ಅಧಿಕಾರಿಗಳು ಬಾಂಬ್ ದಾಳಿಗೆ ಗುರಿಯಾಗಿದ್ದಾರೆ ಎಂದು ಹೇಳಿದರು.

    ಸ್ಥಳೀಯ ಮಾಧ್ಯಮಗಳಲ್ಲಿ ಪ್ರಸಾರವಾದ ಸ್ಫೋಟದ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಪೊಲೀಸ್ ಅಧಿಕಾರಿಗಳನ್ನೇ ದಾಳಿಕೋರರು ಟಾರ್ಗೆಟ್ ಮಾಡಿದ್ದರು ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ಈ ಸ್ಫೊಟದಲ್ಲಿ ಹಾನಿಗೊಳಗಾದ ಪೊಲೀಸ್ ವಾಹನವೇ ತಾಜಾ ಉದಾಹರಣೆಯಾಗಿದೆ. ಸದ್ಯ ಬಾಂಬ್ ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಆದರೆ ಸ್ಫೋಟದ ತೀವ್ರತೆ ನೋಡಿದರೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

    ಪಾಕಿಸ್ತಾನದವರು ದೊಡ್ಡ ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ಹಿಂದೆ 2010 ರಲ್ಲಿ ಇದೇ ಪ್ರದೇಶದಲ್ಲಿ ಎರಡು ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ಆಗ 40ಕ್ಕೂ ಹೆಚ್ಚು ಮಂದಿ ಯಾತ್ರಿಕರು ಬಲಿಯಾಗಿದ್ದರು. ಜೊತೆಗೆ ಹಲವರು ಗಾಯಗೊಂಡಿದ್ದರು.

  • ಅಪರಿಚಿತ ವಾಹನ ಡಿಕ್ಕಿಯಾಗಿ ಕಾರಿನ ಹಿಂಭಾಗ ಛಿದ್ರ ಛಿದ್ರ- ಮಹಿಳೆ ಸಾವು, ಮೂವರು ಗಂಭೀರ

    ಅಪರಿಚಿತ ವಾಹನ ಡಿಕ್ಕಿಯಾಗಿ ಕಾರಿನ ಹಿಂಭಾಗ ಛಿದ್ರ ಛಿದ್ರ- ಮಹಿಳೆ ಸಾವು, ಮೂವರು ಗಂಭೀರ

    ಬೆಂಗಳೂರು: ಕಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಹೊಸನಿಜಗಲ್ ಗೇಟ್ ಬಳಿ ನಡೆದಿದೆ.

    ಶನಿವಾರ ತಡರಾತ್ರಿ 2 ಗಂಟೆ ಸುಮಾರಿಗೆ ಕ್ರೇಟ ಕಾರಿಗೆ ಭಾರೀ ಗಾತ್ರದ ವಾಹನ ಡಿಕ್ಕಿಯಾದ ಪರಿಣಾಮ ಕಾರಿನ ಹಿಂಬದಿ ಛಿದ್ರ ಛಿದ್ರವಾಗಿದೆ. ಕಾರಿನಲ್ಲಿ ಓರ್ವ ಮಹಿಳೆ ಸೇರಿ ಒಟ್ಟು ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು. ಈ ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನಲ್ಲಿದ್ದವರ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

    ಘಟನೆ ಕುರಿತು ಸ್ಥಳೀಯರೊಬ್ಬರು ಮಾತನಾಡಿ, ಕಾರಿನಲ್ಲಿದ್ದ ಪ್ರಯಾಣಿಕರು ಪಾನಮತ್ತರಾಗಿದ್ದರು. ಸ್ಥಳೀಯರೆಲ್ಲ ಸೇರಿ ಮೃತಪಟ್ಟ ಮಹಿಳೆಯ ದೇಹ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದೇವೆ. ಗಾಯಗೊಂಡ ಮೂವರ ಸ್ಥಿತಿ ಗಂಭೀರವಾಗಿದೆ. ಅಪಘಾತ ಸಂಭವಿಸಿದ ನಂತರ ಸುಮಾರು ಗಂಟೆಗಳ ಕಾಲ ಕಾರ್ ಹೆದ್ದಾರಿಯಲ್ಲೇ ನಿಂತಿತ್ತು. ಇದರಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಈ ಕುರಿತು ಸಂಚಾರಿ ಪೊಲೀಸರು ಹಾಗೂ ಟೋಲ್ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ರಾತ್ರಿಯೇ ಮಾಹಿತಿ ತಿಳಿಸಿದರು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ದೂರಿದರು.

    ಈ ಘಟನೆ ಕುರಿತು ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv