Tag: ಗಾಬಾದಲ್ಲಿ ಟೀಂ ಇಂಡಿಯಾ ಗೆಲುವು

  • 32 ವರ್ಷದ ಬಳಿಕ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾಗೆ ಮೊದಲ ಸೋಲು!

    32 ವರ್ಷದ ಬಳಿಕ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾಗೆ ಮೊದಲ ಸೋಲು!

    – ಆಸೀಸ್‌ ನೆಲದಲ್ಲಿ ಟೀಂ ಇಂಡಿಯಾ ಬಿಗ್‌ ಚೇಸ್‌ ಗೆಲುವು

    ಬ್ರಿಸ್ಬೇನ್:‌ ಪದೇ ಪದೇ ಕೆಣಕುತ್ತಿದ್ದ ಆಸೀಸ್‌ ತಂಡಕ್ಕೆ ಟೀಂ ಇಂಡಿಯಾ ತಕ್ಕ ಶಾಸ್ತಿ ಮಾಡಿದೆ. ಟೆಸ್ಟ್‌ ಸರಣಿಯ ಅಂತಿಮ ಟೆಸ್ಟ್‌ನಲ್ಲಿ 3 ವಿಕೆಟ್‌ಗಳ ಗೆಲುವು ಸಾಧಿಸಿ ಟೀಂ ಇಂಡಿಯಾ ಹೊಸ ಇತಿಹಾಸ ರಚಿಸಿದೆ.

    ಅಲ್ಲದೆ ಆಸ್ಟ್ರೇಲಿಯಾದಲ್ಲಿ 328 ರನ್‌ ಟಾರ್ಗೆಟ್‌ ಚೇಸ್‌ ಮಾಡಿ ಟೀಂ ಇಂಡಿಯಾ ಹೊಸ ದಾಖಲೆ ಬರೆದಿದೆ. ಈ ಮೂಲಕ ಈ ಟೆಸ್ಟ್‌ ಸರಣಿಯನ್ನು 2-1 ಅಂತರದಿಂದ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾ 2003ರಲ್ಲಿ ಆಡಿಲೇಡ್‌ ಟೆಸ್ಟ್‌ನಲ್ಲಿ 233 ರನ್‌ ಚೇಸ್‌ ಮಾಡಿದ್ದೇ ಇದುವರೆಗಿನ ದಾಖಲೆಯಾಗಿತ್ತು.

    ಗಾಬಾದಲ್ಲಿ ಟೀಂ ಇಂಡಿಯಾ ಮೊದಲ ಗೆಲುವು: ಭಾರತ ತಂಡ ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ಇದೇ ಮೊದಲ ಬಾರಿ ಗೆಲುವು ಸಾಧಿಸಿದೆ. ಇದಕ್ಕೂ ಮೊದಲು ಆಡಿದ್ದ 6 ಪಂದ್ಯಗಳಲ್ಲಿ 5ನ್ನು ಸೋತಿದ್ದರೆ, 1 ಪಂದ್ಯ ಡ್ರಾ ಆಗಿತ್ತು.

    ರಿಷಭ್ ಪಂತ್‌ ಮ್ಯಾನ್‌ ಆಫ್‌ ದಿ ಮ್ಯಾಚ್:‌ 2ನೇ ಇನ್ನಿಂಗ್ಸ್‌ನಲ್ಲಿ ಅಜೇಯ 89 ರನ್‌ ಗಳಿಸಿದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು. ಮೊದಲ ಇನ್ನಿಂಗ್ಸ್‌ನಲ್ಲೂ ಕೂಡಾ ಪಂತ್‌ 23 ರನ್‌ ಗಳಿಸಿದ್ದರು. ‌

    ಗಾಬಾದಲ್ಲಿ ಮೊದಲ 300 ಪ್ಲಸ್‌ ಚೇಸ್:‌ ಇದೇ ಮೊದಲ ಬಾರಿಗೆ ಗಾಬಾ ಕ್ರೀಡಾಂಗಣದಲ್ಲಿ 300ಕ್ಕೂ ಹೆಚ್ಚು ರನ್‌ ಚೇಸ್‌ ಮಾಡಿ ಗೆದ್ದ ಮೊದಲ ತಂಡ ಎಂಬ ಕೀರ್ತಿಗೆ ಟೀಂ ಇಂಡಿಯಾ ಪಾತ್ರವಾಗಿದೆ. ಇದಕ್ಕೂ ಮುನ್ನ 1951ರಲ್ಲಿ ಆಸ್ಟ್ರೇಲಿಯಾ ಇದೇ ಕ್ರೀಡಾಂಗಣದಲ್ಲಿ 236 ರನ್‌ ಟಾರ್ಗೆಟ್‌ ರೀಚ್‌ ಮಾಡಿದ್ದೇ ಇದುವರೆಗಿನ ದಾಖಲೆಯಾಗಿತ್ತು.

    3 ದಶಕದ ಬಳಿಕ ಆಸೀಸ್‌ಗೆ ಸೋಲಿನ ಕಹಿ!: ಆತಿಥೇಯ ಆಸ್ಟ್ರೇಲಿಯಾ 32 ವರ್ಷಗಳ ಬಳಿಕ ಬ್ರಿಸ್ಬೇನ್‌ನಲ್ಲಿ ಮೊದಲ ಕಹಿ ಉಂಡಿದೆ. 1988ರಲ್ಲಿ ವೆಸ್ಟ್‌ ಇಂಡೀಸ್‌ ತಂಡ ಬ್ರಿಸ್ಬೇನ್‌ನಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವನ್ನು 9 ವಿಕೆಟ್‌ಗಳಿಂದ ಪರಾಭವಗೊಳಿಸಿತ್ತು. 1988ರ ಬಳಿಕ ಆಸ್ಟ್ರೇಲಿಯಾ 31 ಪಂದ್ಯಗಳನ್ನು ಆಡಿತ್ತು. ಇದರಲ್ಲಿ 24 ಪಂದ್ಯಗಳನ್ನು ಗೆದ್ದು, 7 ಪಂದ್ಯಗಳನ್ನು ಡ್ರಾಗೊಳಿಸಿತ್ತು.

    16ರಲ್ಲಿ 10 ಬಾರಿ ಭಾರತದ ಮೇಲುಗೈ: 1996ರ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್‌ ಸರಣಿ ನಡೆಯುತ್ತಿದೆ. ಒಟ್ಟು 16 ಬಾರಿ ನಡೆದ ಸರಣಿಯಲ್ಲಿ ಭಾರತ ಇದುವರೆಗೆ 10 ಬಾರಿ ಗೆದ್ದಿದೆ ಅಥವಾ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಆದರೆ ಆಸ್ಟ್ರೇಲಿಯಾ ಕೇವಲ 5 ಬಾರಿ ಮಾತ್ರ ಟ್ರೋಫಿ ತನ್ನದಾಗಿಸಿಕೊಂಡಿದೆ.

    ಈ ಪಂದ್ಯದಲ್ಲಿ ಏನಾಯ್ತು?: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆಸೀಸ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 369 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರ ನೀಡಿದ ಟೀಂ ಇಂಡಿಯಾ 336 ರನ್‌ಗಳಿಗೆ ಆಲೌಟ್‌ ಆಗಿ ಮೊದಲ ಇನ್ನಿಂಗ್ಸ್‌ ಅಂತ್ಯಗೊಳಿಸಿತ್ತು. ಬಳಿಕ ಎರಡನೇ ಇನ್ನಿಂಗ್ಸ್‌ ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ 294 ರನ್‌ ಗಳಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್‌ ತಂಡಕ್ಕೆ 33 ರನ್‌ಗಳ ಮುನ್ನಡೆ ಸಿಕ್ಕಿತ್ತು. ಈ ಮೂಲಕ ಭಾರತಕ್ಕೆ 328 ರನ್‌ ಟಾರ್ಗೆಟ್‌ ನೀಡಿತು. ಚೇಸ್‌ ಆರಂಭಿಸಿದ ಟೀಂ ಇಂಡಿಯಾ 7 ವಿಕೆಟ್‌ ನಷ್ಟಕ್ಕೆ 329 ರನ್‌ ಗಳಿಸಿ ಗೆಲುವು ಸಾಧಿಸಿತು.

    18 ರನ್‌ಗೆ ಮೊದಲ ವಿಕೆಟ್‌ ಬಿತ್ತು!: 5ನೇ ದಿನ ವಿಕೆಟ್‌ ನಷ್ಟವಿಲ್ಲದೆ 4 ರನ್‌ ಎಂಬಲ್ಲಿಂದ ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾಗೆ 9ನೇ ಓವರ್‌ನಲ್ಲಿ ಪ್ಯಾಟ್‌ ಕಮಿನ್ಸ್‌ ಮೊದಲ ಆಘಾತ ನೀಡಿದರು. ಆಗ ತಂಡದ ಮೊತ್ತ 18. 7 ರನ್‌ ಗಳಿಸಿದ್ದ ರೋಹಿತ್‌ ಶರ್ಮಾ ವಿಕೆಟ್‌ ಕೀಪರ್‌ ಟಿಮ್‌ ಪೇನ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

    ಇದಾದ ಬಳಿಕ ಶುಭ್‌ಮನ್‌ ಗಿಲ್‌ ಹಾಗೂ ಚೇತೇಶ್ವರ್‌ ಪೂಜಾರ 2ನೇ ವಿಕೆಟ್‌ಗೆ 114 ರನ್‌ಗಳ ಜೊತೆಯಾಟ ನೀಡಿದರು. 146 ಎಸೆತಗಳಲ್ಲಿ 91 ರನ್‌ ಗಳಿಸಿದ್ದ ಗಿಲ್‌ ಶತಕ ವಂಚಿತರಾದರು. ಇದು ಗಿಲ್‌ ಟೆಸ್ಟ್‌ ಜೀವನದ ಬೆಸ್ಟ್‌ ಸ್ಕೋರ್‌ ಹಾಗೂ 2ನೇ ಅರ್ಧ ಶತಕವಾಗಿತ್ತು.