Tag: ಗಾಜಿನ ಮನೆ

  • ಅಧಿಕಾರಿಗಳ ಎಡವಟ್ಟು – ಕೋಟ್ಯಂತರ ರೂ. ಖರ್ಚು ಮಾಡಿ ಕೆರೆಯಲ್ಲೇ ಗಾಜಿನ ಮನೆ ನಿರ್ಮಾಣ

    ಅಧಿಕಾರಿಗಳ ಎಡವಟ್ಟು – ಕೋಟ್ಯಂತರ ರೂ. ಖರ್ಚು ಮಾಡಿ ಕೆರೆಯಲ್ಲೇ ಗಾಜಿನ ಮನೆ ನಿರ್ಮಾಣ

    ಚಿಕ್ಕಬಳ್ಳಾಪುರ: ನಗರ ಹೊರವಲಯ ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಹೊಂದಿಕೊಂಡಿರುವ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ನಿರ್ಮಾಣ ಮಾಡಿರುವ ನೂತನ ಗಾಜಿನ ಮನೆ ತೆರವುಗೊಳಿಸಿ, ಕೆರೆಯ ಮೂಲ ಸ್ವರೂಪ ಮರುಸೃಷ್ಟಿ ಮಾಡುವಂತೆ ಲೋಕಾಯುಕ್ತ ಸಂಸ್ಥೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಆದೇಶಿಸಿದೆ.

    ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ, ಒಂದಲ್ಲ ಎರಡಲ್ಲ ಅಂತ ಸರಿ ಸುಮಾರು ಆರೂವರೆ ಕೋಟಿ ರೂಪಾಯಿ ಖರ್ಚು ಮಾಡಿ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೆರೆಯಂಗಳದಲ್ಲೇ 70 ಎಕೆರೆ ಪ್ರದೇಶಕ್ಕೆ ಕಾಂಪೌಂಡ್ ಹಾಕಿ, ಅದರೊಳಗೆ ಗಾಜಿನ ಮನೆ, ಉದ್ಯಾನವನ ಎಂದು ಗಿಡ ನೆಟ್ಟು ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದೆ.

    70 ಎಕೆರೆ ವಿಶಾಲವಾದ ಪ್ರದೇಶದಲ್ಲಿ ಜಿಲ್ಲಾಡಳಿತದ ಅನುದಾನದಿಂದ ಮೂರೂವರೆ ಕೋಟಿ ಖರ್ಚು ಮಾಡಿ ಸುಸಜ್ಜಿತ ಗಾಜಿನ ಮನೆ ನಿರ್ಮಾಣವಾಗಿದ್ದು, ತೋಟಗಾರಿಕಾ ಇಲಾಖೆ ವತಿಯಿಂದ ಸರಿ ಸುಮಾರು 3 ಕೋಟಿ ರೂಪಾಯಿ ಖರ್ಚು ಮಾಡಿ, 70 ಎಕೆರೆ ಪ್ರದೇಶಕ್ಕೆ ತಡೆಗೋಡೆ, ತಡೆಗೋಡೆಗೆ ಮುಖ್ಯ ದ್ವಾರ ಬಾಗಿಲು. ಅದರಲ್ಲಿ ಉದ್ಯಾನವನ ಅಭಿವೃದ್ಧಿ ಉದ್ಯಾನವನಕ್ಕೆ ನೀರೊದಗಿಸಲು ಕೊಳವೆಬಾವಿ, ಹಾಗೂ ನೀರು ಶೇಖರಿಸಲು ತೊಟ್ಟಿ, ವಾಚ್ ಗಾರ್ಡ್ ಮನೆ ಸೇರಿದಂತೆ ವಿವಿಧ ಕಾಮಗಾರಿಗಳನ್ನ ನಡೆಸಲಾಗಿದೆ.

    ಆದರೆ ಕೆರೆಗಳನ್ನು ಉಳಿಸಬೇಕಾದ ಅಧಿಕಾರಿಗಳೇ ಕೆರೆಗೆ ಕಂಟಕವಾಗಿದ್ದಾರೆ ಎಂದು ಬೆಂಗಳೂರು ಮೂಲದ ನಾರಾಯಣ ಎನ್ನುವವರು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಿಸಿದ್ರು. ಕೆರೆಯ ನೀರು ಮುಳುಗಡೆ ಪ್ರದೇಶವನ್ನು ಸರ್ಕಾರಿ ಖರಾಬ್ ಅಂತ ಅಧಿಕಾರಿಗಳು ದಾಖಲೆಗಳಲ್ಲಿ ತಿದ್ದಿತೀಡಿ ಅದರಲ್ಲಿ 70 ಎಕೆರೆಯನ್ನು ಉದ್ಯಾನವನ ಮಾಡಿ ಗಾಜಿನ ಮನೆ ನಿರ್ಮಾಣ ಮಾಡಿದ್ದಾರೆ ಅಂತ ನಾರಾಯಣ ಎಂಬವರು ಲೋಕಾಯುಕ್ತ ಸಂಸ್ಥೆ ಮೊರೆ ಹೋದ ಕಾರಣ, ಪರ ವಿರೋಧ ವಾದ ಆಲಿಸಿದ ಲೋಕಾಯುಕ್ತರು, ಕೆರೆಯಲ್ಲಿ ಕಾಮಗಾರಿ ಮಾಡಿದ್ದು ತಪ್ಪು ಅಂತ ಎತ್ತಿ ಹಿಡಿದಿದ್ದು, ಕೆರೆಯಂಗಳದಲ್ಲಿ ನಿರ್ಮಿಸಿರುವ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಬೇಗ ತೆರವುಗೊಳಿಸಿ ಮೊದಲಿನಂತೆಯೇ ಕೆರೆಯನ್ನು ಮರುಸೃಷ್ಟಿಸಿ ಅಂತ ಆದೇಶ ಮಾಡಿದ್ದಾರೆ.

    ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಚಿಕ್ಕಬಳ್ಳಾಪುರ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗೆ ಪತ್ರ ಬರೆದು ಲೋಕಾಯುಕ್ತರ ಆದೇಶ ಅನುಷ್ಠಾನ ಮಾಡುವಂತೆ ಸೂಚಿಸಿದೆ. ಕೆರೆ ಹಾಗೂ ಕರೆಯಂಗಳದಲ್ಲಿ ಯಾವುದೇ ಕಾಮಗಾರಿಗಳನ್ನ ಮಾಡಬಾರದು ಎಂಬ ಕಟ್ಟುನಿಟ್ಟಿನ ಆದೇಶವಿದ್ದರೂ, ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಈಗ ಸರಿಸುಮಾರು ಆರೂವರೆ ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರೋ ಗಾಜಿನಮನೆ ಎಲ್ಲವೂ ಕೆರೆಗೆ ಆಹಾರವಾಗಲಿದೆ ಎಂಬ ಆತಂಕ ಕಾಡುತ್ತಿದೆ.

    ಇದ್ರಿಂದ ಸದ್ಯ ಪೇಚಿಗೆ ಸಿಲಿಕಿರೋ ಅಧಿಕಾರಿಗಳು ಗಾಜಿನಮನೆ ತೆರವು ಮಾಡೋದಾ ಇಲ್ಲ ಸುಮ್ಮನಿರೋದಾ ಎಂದು ಇಕ್ಕಟ್ಟಿಗೆ ಸಿಲುಕಿ ಮೀನಾಮೇಷ ಎಣಿಸುತ್ತಿದ್ದಾರೆ. ಇದೆಲ್ಲದರ ನಡುವೆ ಜನರ ತೆರಿಗೆ ಹಣದ ಆರೂವರೆ ಕೋಟಿ ಕೆರೆಯ ನೀರಿಗೆ ಹೋಮ ಮಾಡಿದಂತಾಗುತ್ತಿದೆಯಲ್ಲಾ ಎಂಬುದು ಸಹ ಬೇಸರದ ಸಂಗತಿ ಎಂದು ಸಾರ್ವಜನಿಕರು ಅಸಮಾಧಾನ ತೋಡಿಕೊಂಡಿದ್ದಾರೆ.

  • ವಿಶ್ವಶಾಂತಿಗಾಗಿ ಹೊಗೆ ಇಲ್ಲದ ಮಹಾ ಯಜ್ಞ

    ವಿಶ್ವಶಾಂತಿಗಾಗಿ ಹೊಗೆ ಇಲ್ಲದ ಮಹಾ ಯಜ್ಞ

    ತುಮಕೂರು: ನಗರದ ಗಾಜಿನ ಮನೆಯಲ್ಲಿ ವಿಶ್ವಶಾಂತಿಗಾಗಿ ಹೊಗೆ ಇಲ್ಲದ ಮಹಾ ಯಜ್ಞ ನಡೆಯುತ್ತಿದೆ. ಜೈನ ಧರ್ಮಿಯರಿಂದ ಈ ವಿಶಿಷ್ಟ ಹೊಗೆಯಿಲ್ಲದ ‘ಕಲ್ಪದ್ರುಮ ಮಾಹಾಮಂಡಳ ಆರಾಧನಾ ಯಜ್ಞ’ ಆಯೋಜನೆಗೊಂಡಿದೆ. ಜೈನ ಮುನಿಗಳಾದ ಅರ್ಮೋ ಕೀರ್ತಿ ಮತ್ತು ಅಮರ ಕೀರ್ತಿಗಳ ಉಪಸ್ಥಿತಿಯಲ್ಲಿ ಆರಾಧನೆ ನಡೆಯುತ್ತಿದೆ.

    9 ದಿನಗಳ ಕಾಲ ಈ ಮಹಾ ಯಜ್ಞ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಭಕ್ತರು ಪಾಲ್ಗೊಂಡಿದ್ದಾರೆ. ಚಕ್ರವರ್ತಿಗಳು ದಿಗ್ವಿಜಯ ಯಾತ್ರೆ ಮಾಡಿ ಬಂದಾಗ ವಿಶ್ವಶಾಂತಿಗಾಗಿ ಈ ಆರಾಧನೆ ಮಾಡುತ್ತಿದ್ದರು. ಅದೇ ಇಲ್ಲಿ ಸೇರಿದ ನೂರಾರು ಭಕ್ತಾಧಿಗಳು ಮುಖುಟ ಧರಿಸಿ, ಮಾಲಾಧಾರಿಗಳಾಗಿ ಸಾಕ್ಷಾತ್ ಚಕ್ರವರ್ತಿಗಳಂತೆ ಕಂಗೊಳಿಸಿಕೊಂಡು ಶಾಂತಿಗಾಗಿ ಆರಾಧನೆ ನಡೆಸುತ್ತಿದ್ದಾರೆ. ಜಲ, ಚಂದನ, ಅಕ್ಷತ, ಫಲ, ಪುಷ್ಪ, ದೀಪ, ದೂಪ ಹಾಗೂ ಅಷ್ಟ ದ್ರವ್ಯಗಳಿಂದ ಅರ್ಚನೆ ನಡೆಸಿ ವಿಶ್ವಶಾಂತಿಗಾಗಿ ಹೊಗೆ ಇಲ್ಲದ ಯಜ್ಞ ನಡೆಸುತ್ತಿದ್ದಾರೆ.

    ಬೆಳಗ್ಗೆ 6 ರಿಂದ 8ರ ವರೆಗೆ ಆರಾಧನೆ, ಮಧ್ಯಾಹ್ನ 1ಕ್ಕೆ ಮಂಗಳಾರತಿ, ಭಾವಚಿತ್ರ ಅನಾವರಣ, ದೀಪ ಬೆಳಗುವಿಕೆ ಕಾರ್ಯಕ್ರಮ ನಡೆದಿದೆ. ತುಮಕೂರಿನಲ್ಲಿ ಈ ಯಜ್ಞವನ್ನು ಇದೇ ಮೊದಲ ಬಾರಿ ಆಯೋಜನೆ ಮಾಡಲಾಗಿದೆ. ಹಾಗಾಗಿ ವಿವಿಧ ಜಿಲ್ಲೆಗಳಿಂದ ಭಕ್ತಾಧಿಗಳು ಬಂದು ಪಾಲ್ಗೊಳ್ಳುತ್ತಿದ್ದಾರೆ.

  • ತುಮಕೂರಿನಲ್ಲೇ ಅನಿರ್ಧಿಷ್ಟಾವಧಿ ಧರಣಿ ನಡೆಸಲಿದ್ದಾರೆ ಅಂಗನವಾಡಿ ಕಾರ್ಯಕರ್ತೆಯರು

    ತುಮಕೂರಿನಲ್ಲೇ ಅನಿರ್ಧಿಷ್ಟಾವಧಿ ಧರಣಿ ನಡೆಸಲಿದ್ದಾರೆ ಅಂಗನವಾಡಿ ಕಾರ್ಯಕರ್ತೆಯರು

    ತುಮಕೂರು: ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರು ಪಾದಯಾತ್ರೆಗೆ ಹೋಗದಿರಲು ನಿರ್ಧರಿಸಿದ್ದಾರೆ. ತುಮಕೂರಿನ ಗಾಜಿನ ಮನೆಯಲ್ಲೇ ಇದ್ದುಕೊಂಡು ಅನಿರ್ಧಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ.

    ಎಲ್‍ಕೆಜಿ, ಯುಕೆಜಿ ತರಗತಿಗಳನ್ನ ಅಂಗನವಾಡಿ ಕೇಂದ್ರದಲ್ಲಿ ಮಾತ್ರ ನಡೆಸಲು ಸರ್ಕಾರ ಆದೇಶ ಹೊರಡಿಸಬೇಕು ಎಂಬ ಪ್ರಮುಖ ಬೇಡಿಕೆ ಇಟ್ಟುಕೊಂಡು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಡಲು ಸಜ್ಜಾಗಿದ್ದರು. ಆದರೆ ಪೊಲೀಸರು ಕಾರ್ಯಕರ್ತೆಯರನ್ನ ತಡೆದಿದ್ದರಿಂದ ತುಮಕೂರಿನಲ್ಲೇ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಸ್ಥಳಕ್ಕೆ ಬಂದು ತಮ್ಮ ಅಹವಾಲು ಸ್ವೀಕರಿಸಿ, ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

    ಮಂಗಳವಾರ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಕಾರ್ಯಕರ್ತೆಯರು ತುಮಕೂರಿನ ಗಾಜಿನ ಮನೆಯಲ್ಲಿ ಸೇರಿದ್ದರು. ಅಲ್ಲಿಂದಲೇ ಪಾದಯಾತ್ರೆ ಹೋಗಲು ಸಿದ್ದರಾಗಿದ್ದರು. ಪಾದಯಾತ್ರೆ ಕೈ ಬಿಟ್ಟು ಸಿಎಂ ಜೊತೆ ಮಾತುಕತೆ ಮಾಡಲು ಅಧಿಕಾರಿಗಳು ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ತಾತ್ಕಾಲಿಕವಾಗಿ ತಡೆಕೊಟ್ಟಿದ್ದಾರೆ. ಆದರೆ ಸಿಎಂ ಜೊತೆಗಿನ ಮಾತುಕತೆ ತೃಪ್ತಿ ತಂದಿಲ್ಲವಾದರಿಂದ ಗಾಜಿನ ಮನೆಯಲ್ಲೇ ಧರಣಿಗೆ ಮುಂದಾಗಿದ್ದಾರೆ.

  • ಏಷ್ಯಾದ ಅತಿ ದೊಡ್ಡ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ

    ಏಷ್ಯಾದ ಅತಿ ದೊಡ್ಡ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ

    ದಾವಣಗೆರೆ: ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯು ಏಷ್ಯಾದ ಅತಿ ದೊಡ್ಡ ಗಾಜಿನ ಮನೆಯಲ್ಲಿ 5 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ. ವಿವಿಧ ಹೂಗಳಿಂದ ರಚಿಸಿರುವ ಕಲಾಕೃತಿಗಳು ಎಲ್ಲರನ್ನು ಆಕರ್ಷಿಸುತ್ತಿವೆ. ಕೆಂಪು, ಬಿಳಿ ರೋಸ್ ಬಳಸಿ ಐಫೆಲ್ ಟವರ್ ರಚಿಸಲಾಗಿದೆ.

    ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆಯಿಂದ ಒಮ್ಮೆ ಮಾತ್ರ ಆಯೋಜನೆ ಮಾಡಲಾಗುತ್ತಿತ್ತು. ಆದರೆ ಈ ವರ್ಷದಲ್ಲಿ ಎರಡನೇ ಬಾರಿಗೆ ಫಲಪುಪ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಫಲಪುಷ್ಪ ಪ್ರದರ್ಶನದಲ್ಲಿ ಐಫೆಲ್ ಟವರ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 30 ಅಡಿ ಎತ್ತರ, 23 ಅಡಿ ಅಗಲದಲ್ಲಿ ಕೆಂಪು, ಬಿಳಿ ಗುಲಾಬಿ ಹೂವುಗಳಿಂದ ಐಫೆಲ್ ಟವರ್ ನಿರ್ಮಾಣ ಮಾಡಲಾಗಿದೆ. ಗಾಜಿನ ಮನೆಯ ಮಧ್ಯ ಭಾಗದಲ್ಲಿ ಈ ಐಫೆಲ್ ಟವರ್ ತಲೆ ಎತ್ತಿದ್ದು ಜನರು ಫೋಟೋ ಕ್ಲಿಕ್ಕಿಸಿಕೊಂಡು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: ದಾವಣಗೆರೆಯಲ್ಲಿ ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಇಂದು ಲೋಕಾರ್ಪಣೆ

    ಐಫೆಲ್ ಟವರ್ ಜೊತೆಗೆ ಆರು ಅಡಿ ಎತ್ತರ, ನಾಲ್ಕು ಅಡಿ ಅಗಲದ ಅಣಬೆ ಆಕಾರದ ಹೂವಿನ ಕಲಾಕೃತಿಯನ್ನು ಎರಡು ಸಾವಿರ ಗುಲಾಬಿ, ಸೇವಂತಿಗೆ ಬಳಸಿ ನಿರ್ಮಿಸಲಾಗಿದೆ. ಇದರ ಜೊತೆ ಫೋಟೋ ಫ್ರೇಮ್, ವಿದೇಶಿ ಹೂವುಗಳನು ಜನರನ್ನು ಆಕರ್ಷಿಸಿತು. ಅಲ್ಲದೆ ಹಣ್ಣಿನೊಳಗೆ ಮಾಡಿದ್ದ ಕಲಾಕೃತಿಗಳು ಮಕ್ಕಳ ಅಚ್ಚುಮೆಚ್ಚಿಗೆ ಕಾರಣವಾದವು. ಇದನ್ನು ನೋಡಿ ಜನರು ಫುಲ್ ಖುಷಿಯಾದರು. ಗ್ಲಾಸ್ ಹೌಸ್‍ನಲ್ಲಿ ಹೂ, ಹಣ್ಣಿನ ಅಲಂಕಾರಕ್ಕೆ ಬಂದ ಜನರು ಮನಸೋತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

  • ಕಳಪೆ ಕಾಮಗಾರಿಯಿಂದ ಸೌಂದರ್ಯ ಕಳೆದುಕೊಳ್ಳುತ್ತಿದೆಯೇ ದಾವಣಗೆರೆಯ ಗ್ಲಾಸ್ ಹೌಸ್?

    ಕಳಪೆ ಕಾಮಗಾರಿಯಿಂದ ಸೌಂದರ್ಯ ಕಳೆದುಕೊಳ್ಳುತ್ತಿದೆಯೇ ದಾವಣಗೆರೆಯ ಗ್ಲಾಸ್ ಹೌಸ್?

    ದಾವಣಗೆರೆ: ಕ್ಯೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಗಾಜಿನ ಮನೆ ಈಗ ಕಳಪೆ ಕಾಮಗಾರಿಯಿಂದ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯೊಂದು ಇದೀಗ ಎದ್ದಿದೆ.

    ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಆಕರ್ಷಕವಾದ ಗಾಜಿನ ಮನೆ ಇದಾಗಿದ್ದು, ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಜಿ ಸಿ ಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದರು. ಇಡೀ ರಾಜ್ಯಕ್ಕೆ ಈ ಗಾಜಿನ ಮನೆ ಒಂದು ಪ್ರವಾಸಿ ತಾಣವಾಗುತ್ತೆ ಎನ್ನುವ ದೃಷ್ಟಿಯನ್ನು ಇಟ್ಟುಕೊಂಡು ಗಾಜಿನ ಮನೆಯನ್ನು ನಿರ್ಮಾಣ ಮಾಡಲಾಗಿತ್ತು. ಆದ್ರೆ ಲೋಕಾರ್ಪಣೆಗೊಂಡು ಮೂರು ತಿಂಗಳಾಗಿಲ್ಲ. ಆಗ್ಲೇ ತನ್ನ ಕಳಪೆ ಕಾಮಗಾರಿಯ ನಿಜ ಸ್ವರೂಪ ಬಯಲಾಗುತ್ತಿದೆ.

    ಸುಮಾರು 13.35 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಗಾಜಿನ ಮನೆ ಬೆಂಗಳೂರು ಲಾಲ್ ಬಾಗ್ ನ ಗಾಜಿನ ಮನೆಗಿಂತ ದೊಡ್ಡದಾಗಿದ್ದು, ಸುಂದರ ಗಾಜಿನ ಅರಮನೆ ಲೋಕಾರ್ಪಣೆಗೊಂಡು ಮೂರು ತಿಂಗಳಾಗಿಲ್ಲ ಆಗ್ಲೆ ಅರಮನೆ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಇದನ್ನೂ ಓದಿ: ದಾವಣಗೆರೆಯಲ್ಲಿ ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಇಂದು ಲೋಕಾರ್ಪಣೆ

    ಇದು ಸಂಪೂರ್ಣವಾಗಿ ಗಾಜಿನಿಂದಲೇ ನಿರ್ಮಾಣವಾಗಿದ್ದು, ಗಾಜಿನಿಂದ ಗಾಜಿಗೆ ಹಾಕಿರುವ ನಟ್, ಬೋಲ್ಟ್ ಗಳು ಕಳಚಿ ಬಿದ್ದಿವೆ. ಮೇಲ್ಛಾವಣಿಗೆ ಹೊದಿಸಿದ್ದ ಗಾಜು ಪುಡಿಪುಡಿಯಾಗಿದ್ದು, ಅಲ್ಲಿಂದ ನೀರು ಸೋರುತ್ತಿವೆ. ಮಳೆ ಬಂದ್ರೆ ಸಾಕು ಅರಮನೆಯ ಒಳಗೆ ಕೆರೆ ನಿರ್ಮಾಣವಾಗುತ್ತೆ. ಇಲ್ಲಿಗೆ ಬರುವ ಪ್ರವಾಸಿಗರು ಅವ್ಯವಸ್ಥೆ ಹಾಗೂ ಕಳೆಪೆ ಕಾಮಗಾರಿ ನೋಡಿ ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

    ಕಾಂಗ್ರೆಸ್ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿದ್ದ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಕನಸಿನ ಯೋಜನೆಯಾಗಿದ್ದು, ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿದೆ. ಎಸ್.ಎಸ್.ಮಲ್ಲಿಕಾರ್ಜುನ್ ಕೂಡ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದು, ಅಧಿಕಾರಿಗಳಿಗೆ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಸುಂದರವಾದ ಗಾಜಿನ ಅರಮನೆ ದೇವನಗರಿಗೆ ಮುಕುಟಪ್ರಾಯವಾಗಿತ್ತು. ಆದ್ರೆ ಇದೀಗ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅರಮನೆ ಶಿಥಿಲಗೊಳ್ಳುತ್ತಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ದುರಸ್ತಿಗೊಳಿಸಬೇಕು ಹಾಗೂ ಕಳಪೆ ಕಾಮಗಾರಿ ಮಾಡಿದವರವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.