Tag: ಗಾಂಧಿ ಜಯಂತಿ

  • ಯಾದಗಿರಿಯಲ್ಲೊಂದು ಗಾಂಧಿ ದೇವಸ್ಥಾನ, ನಿತ್ಯ ನಡೆಯುತ್ತೆ ಪೂಜೆ

    ಯಾದಗಿರಿಯಲ್ಲೊಂದು ಗಾಂಧಿ ದೇವಸ್ಥಾನ, ನಿತ್ಯ ನಡೆಯುತ್ತೆ ಪೂಜೆ

    ಯಾದಗಿರಿ: ಮಹಾತ್ಮ ಗಾಂಧಿ ಹೆಸರಿನ ವೃತ್ತಗಳು, ಭವನಗಳು, ರಸ್ತೆಗಳ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈ ಗ್ರಾಮದಲ್ಲಿ ಜನ ಮಹಾತ್ಮ ಗಾಂಧಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಿದ್ದಾರೆ.

    ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ್ ಗ್ರಾಮದಲ್ಲಿ ಮಹಾತ್ಮಾ ಗಾಂಧೀಜಿ ದೇವಸ್ಥಾನವಿದೆ. ಕೇವಲ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಮಾತ್ರವಲ್ಲ, ದಿನ ನಿತ್ಯ ಬಾಪೂಜಿಗೆ ಗ್ರಾಮಸ್ಥರು ಪೂಜೆ ಮಾಡಿ ಮಹಾತ್ಮನನ್ನು ಸ್ಮರಿಸುತ್ತಾರೆ.

    ಬಲಶೆಟ್ಟಿಹಾಳ ಗ್ರಾಮಸ್ಥರು ಗಾಂಧೀಜಿ ಮೇಲಿನ ಅಭಿಮಾನದಿಂದ ಸ್ವಾತಂತ್ರ್ಯಾನಂತರ 1948ರಲ್ಲಿ ಈ ದೇವಸ್ಥಾನ ನಿರ್ಮಿಸಿದ್ದಾರೆ. ಇಲ್ಲಿನ ಆದರ್ಶ ಶಿಕ್ಷಕ ದಿ.ಹಂಪಣ್ಣ ಸಾಹುಕಾರ್ ಎನ್ನುವವರು, ಸ್ವತಃ ಗಾಂಧೀಜಿ ಅವರ ಪುತ್ಥಳಿ ತಯಾರಿಸಿ, ದೇವಸ್ಥಾನ ನಿರ್ಮಿಸಿದ್ದಾರಂತೆ. ಅಂದಿನಿಂದ ಇಂದಿನವರೆಗೆ ಇಲ್ಲಿನ ಗ್ರಾಮಸ್ಥರು ಗಾಂಧೀಜಿಯವರ ಈ ಪುತ್ಥಳಿಗೆ ದೇವತಾ ಸ್ಥಾನಮಾನ ನೀಡಿ, ಇತರೆ ದೇವಸ್ಥಾನಗಳಲ್ಲಿ ನಿತ್ಯ ಪೂಜೆ ನಡೆಯುವಂತೆ ಈ ದೇವಸ್ಥಾನದಲ್ಲೂ ಸುಮಾರು 70 ವರ್ಷಗಳಿಂದ ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ.

    ಬಲಶೆಟ್ಟಿಹಾಳ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿಯೇ ಗಾಂಧಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಶಾಲಾ ಮಕ್ಕಳು ದಿನ ಮಹಾತ್ಮ ಗಾಂಧಿಜೀಯವರ ಮೂರ್ತಿಯನ್ನು ಸ್ವಚ್ಛಗೊಳಿಸಿ ಅದಕ್ಕೆ ಪುಷ್ಪಾಲಂಕಾರಗಳಿಂದ ಸಿಂಗರಿಸಿ ಪೂಜೆ ಮಾಡುತ್ತಾರೆ. ಅಲ್ಲದೆ ಈ ಗ್ರಾಮದ ಯಾವುದೇ ಸಮಸ್ಯೆಗಳನ್ನು ಮತ್ತು ನ್ಯಾಯ ಪಂಚಾಯತಿಗಳನ್ನು, ಇದೇ ಗಾಂಧಿ ದೇವಸ್ಥಾನದ ಕಟ್ಟೆಯಲ್ಲೇ ಇಲ್ಲಿನ ಗ್ರಾಮಸ್ಥರು ಬಗೆಹರಿಸಿಕೊಳ್ಳುತ್ತಾರೆ. ಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸೆಯ ನಿಷ್ಠೆಯ ತತ್ವ ಸಾರುವ ಕೆಲಸಗಳು ಇಲ್ಲಿ ನಡೆಯುತ್ತವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಅಹಿಂಸೆಯ ಮೂಲಕ ರಕ್ಷಿಸಿದ ಮಹಾತ್ಮ ಗಾಂಧೀಜಿಯವರನ್ನು ದೇವರ ಸ್ಥಾನದಲ್ಲಿಟ್ಟು, ದೇವಾಲಯ ಕಟ್ಟಿ ಎಲ್ಲ ದೇವರಿಗೆ ಪೂಜಿಸುವಂತೆ, ನಿತ್ಯ ಪೂಜಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

  • ಇಂದು ಭಾಷಣ ಮಾಡಬೇಕಿದ್ದ ಬಾಲಕಿ ಅಪಘಾತಕ್ಕೆ ಬಲಿ

    ಇಂದು ಭಾಷಣ ಮಾಡಬೇಕಿದ್ದ ಬಾಲಕಿ ಅಪಘಾತಕ್ಕೆ ಬಲಿ

    ಹಾಸನ: ಗಾಂಧಿ ಜಯಂತಿ ದಿನ ಭಾಷಣ ಮಾಡಬೇಕು ಎಂದು ಕಲಿತುಕೊಂಡಿದ್ದ ಬಾಲಕಿ ಅಪಘಾತದಲ್ಲಿ ಮೃತಪಟ್ಟ ಘಟನೆ ಹಾಸನದ ಅರಕಲಗೂಡು ಪಟ್ಟಣದ ಪೇಟೆ ಮುಖ್ಯರಸ್ತೆಯಲ್ಲಿ ನಡೆದಿದೆ.

    ಮನಿಷಾ(9) ಮೃತಪಟ್ಟ ಬಾಲಕಿ. ಮನಿಷಾ 3ನೇ ತರಗತಿಯ ವಿದ್ಯಾರ್ಥಿನಿ. ಇಂದು ಗಾಂಧಿ ಜಯಂತಿಯಾಗಿದ್ದರಿಂದ ಶಾಲೆಯಲ್ಲಿ ಮನಿಷಾ ಭಾಷಣ ಮಾಡುವವಳಿದ್ದಳು. ಅದಕ್ಕಾಗಿ ಪೂರ್ವ ತಯಾರಿ ಕೂಡ ಮಾಡಿಕೊಂಡಿದ್ದಳು. ಆದರೆ ಭಾಷಣಕ್ಕೂ ಮೊದಲೇ ಆಕೆ ಅಪಘಾತಕ್ಕೆ ಬಲಿಯಾದಳು.

    ಆಗಿದ್ದೇನು..?
    ತನ್ನ ಅಜ್ಜಿ ನೀಡಿದ ಚುರುಮುರಿಯನ್ನು ತಿಂದು ಮನಿಷಾ ಎದುರುಗಡೆ ಮನೆಗೆ ಪಾತ್ರೆ ಕೊಟ್ಟು ಬರುತ್ತೇನೆ ಎಂದು ಮನೆಯ ಹೊರಗೆ ಹೋಗಿದ್ದಳು. ಈ ವೇಳೆ ಮನೆಯ ಎದುರೇ ವೇಗವಾಗಿ ಬಂದ ಬೈಕ್ ಸವಾರ ಮನಿಷಾಳಿಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾನೆ.

    ಬೈಕ್ ಡಿಕ್ಕಿ ಹೊಡೆದ ಪರಿಣಾಮ ಆಟವಾಡಿಕೊಂಡು ಮನೆಯ ಬಳಿಯೇ ಇದ್ದ ಮನಿಷಾ ಮೃತಪಟ್ಟಿದ್ದಾಳೆ. ಬಳಿಕ ಬಾಲಕಿ ಮೃತದೇಹ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಈ ವೇಳೆ ಪೋಷಕರ ಆಕ್ರಂದನ ಮನಕಲಕುವಂತಿತ್ತು. ಈ ಬಗ್ಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಜಾಗರೂಕ ಬೈಕ್ ಸವಾರನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

    ತಮ್ಮ ತೆವಲಿಗೋ ಅಥವಾ ಇನ್ಯಾವುದೋ ಕಾರಣಕ್ಕೆ ಬೇಕಾಬಿಟ್ಟಿ ಬೈಕ್ ಚಲಾಯಿಸುವ ಸವಾರರು ಈ ರೀತಿ ಮುಗ್ಧ ಮಕ್ಕಳಿಗೆ ಡಿಕ್ಕಿ ಹೊಡೆಯುವುದು ನಗರಗಳಲ್ಲಿ ಪದೇ ಪದೇ ನಡೆಯುತ್ತಿವೆ. ಜನನಿಬಿಡ ಮತ್ತು ಬಡಾವಣೆಗಳ ರಸ್ತೆಗಳಲ್ಲಿಯೇ ಬೇಜವಾಬ್ದಾರಿ ಬೈಕ್ ರೇಡ್‍ಗೆ ಪುಟ್ಟ ಮಗುವಿನ ಪ್ರಾಣ ಪಕ್ಷಿ ಹಾರಿದೆ.

  • ಕಳೆದ 1 ವರ್ಷದಿಂದ 20 ಲಕ್ಷ ಬಟ್ಟೆಯ ಬ್ಯಾಗ್ ನೀಡಿದ ಶಿವಾಚಾರ್ಯ ಸ್ವಾಮೀಜಿ

    ಕಳೆದ 1 ವರ್ಷದಿಂದ 20 ಲಕ್ಷ ಬಟ್ಟೆಯ ಬ್ಯಾಗ್ ನೀಡಿದ ಶಿವಾಚಾರ್ಯ ಸ್ವಾಮೀಜಿ

    ಬೆಳಗಾವಿ: ಪ್ರಧಾನಿ ಮೋದಿ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಕೈ ಜೋಡಿಸಿದ್ದಾರೆ.

    ಅಲ್ಲದೇ ಕಳೆದ ಒಂದು ವರ್ಷದಿಂದ ಹುಕ್ಕೇರಿ ಹಿರೇಮಠ ಪರಿಸರ ರಕ್ಷಣೆ ಹಿನ್ನೆಲೆಯಲ್ಲಿ 20 ಲಕ್ಷ ಬಟ್ಟೆಯ ಬ್ಯಾಗ್‍ಗಳನ್ನು ನೀಡಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಲು ಶ್ರಮ ವಹಿಸುತ್ತಿದೆ ಎಂದು ಹೇಳಿದ್ದಾರೆ.

    ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕರೆ ನೀಡಿರುವ ಪ್ಲಾಸ್ಟಿಕ್ ಮುಕ್ತ ಭಾರತ ಆಂದೋಲನಕ್ಕೆ ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಚಂದ್ರಶೇಖರ ಶಿವಾಚಾರ್ಯ ಶ್ರೀಗಳಿಂದ ಜಾಗೃತಿ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ರ‍್ಯಾಲಿ ಹಮ್ಮಿಕೊಳ್ಳಲಾಯಿತು.

    ಹುಕ್ಕೇರಿ ಪಟ್ಟಣದ ಪ್ರಮುಖ ಬೀದಿ ಬದಿಯ ಕಸವನ್ನು ಸ್ವತಃ ಸ್ವಾಮೀಜಿಗಳೇ ಸ್ವಚ್ಛ ಮಾಡಿ ಇತರರಿಗೂ ಮಾದರಿಯಾದರು. ಈ ರ‍್ಯಾಲಿ ಮೂಲಕ ಶ್ರೀಗಳು ವ್ಯಾಪಾರಿಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿಕೊಂಡರು.

    ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಮೊದಲು ದೇವಸ್ಥಾನಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕರೆ ನೀಡುವುದರ ಜೊತೆಗೆ ಪಟ್ಟಣದ ದೇವಸ್ಥಾನಗಳಿಗೆ ಸ್ಟೀಲ್ ಕಸದ ಬುಟ್ಟಿ ನೀಡಿ ಪ್ಲಾಸ್ಟಿಕ್ ಬಳಸದಂತೆ ದೇವಸ್ಥಾನಗಳ ಅರ್ಚಕರಲ್ಲಿ ಮನವಿ ಮಾಡಿಕೊಂಡರು.

  • ಗುಂಡಿ ಬಿದ್ದ ರಸ್ತೆಗೆ ಕಾಂಕ್ರೀಟ್ ಹಾಕಿ ಗಾಂಧಿ ಜಯಂತಿ ಆಚರಿಸಿದ ವಿದ್ಯಾರ್ಥಿಗಳು

    ಗುಂಡಿ ಬಿದ್ದ ರಸ್ತೆಗೆ ಕಾಂಕ್ರೀಟ್ ಹಾಕಿ ಗಾಂಧಿ ಜಯಂತಿ ಆಚರಿಸಿದ ವಿದ್ಯಾರ್ಥಿಗಳು

    ಚಿಕ್ಕಬಳ್ಳಾಪುರ: ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ, ವಾಹನ ಸವಾರರ ಪ್ರಾಣ ಉಳಿಸುವ ಮೂಲಕ ರಾಷ್ಟ್ರಪಿತ ಗಾಂಧೀಜಿಯವರ 150ನೇ ಜಯಂತೋತ್ಸವವನ್ನು ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಆಚರಿಸಿದರು.

    ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯ ಪ್ರಸಿಡೆನ್ಸಿ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಈ ರೀತಿ ವಿನೂತನವಾಗಿ ಗಾಂಧೀಜಿಯನ್ನು ಸ್ಮರಿಸಿದ್ದಾರೆ. ಈ ರೀತಿಯ ವಿಭಿನ್ನ ಸಮಾಜಮುಖಿ ಕಾಯಕ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 224ರ ಮಹಾತ್ಮ ಗಾಂಧಿ ರಸ್ತೆಯಲ್ಲಿ(ಎಂಜಿ ರಸ್ತೆ) ಬಿದ್ದಿದ್ದ ಬೃಹತ್ ಗಾತ್ರದ ಗುಂಡಿಗಳಿಗೆ ಜಲ್ಲಿ, ಸಿಮೆಂಟ್ ಕಾಂಕ್ರೀಟ್ ಹಾಕಿ ಮುಚ್ಚುವ ಮೂಲಕ ಗುಂಡಿಗಳಿಗೆ ವಿದ್ಯಾರ್ಥಿಗಳು ಮುಕ್ತಿ ಕಲ್ಪಿಸಿ, ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

    ಎಂಜಿ ರಸ್ತೆಯ ದರ್ಗಾ ಮುಂಭಾಗದಲ್ಲಿ ಬೃಹತ್ ಗಾತ್ರದ ಗುಂಡಿ ಬಿದ್ದು ಮಳೆ ನೀರು ಸಂಗ್ರಹಗೊಂಡಿತ್ತು. ಅದೆಷ್ಟೋ ಮಂದಿ ವಾಹನ ಸವಾರರು ಅದೇ ಗುಂಡಿಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡು ಪರದಾಡಿದ ಉದಹಾರಣೆಗಳಿವೆ. ಅಲ್ಲದೆ ಇದೇ ರಸ್ತೆಯಲ್ಲಿ ಪ್ರತಿನಿತ್ಯ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳು ಸಹ ಇದರಿಂದ ಸಾಕಷ್ಟು ಪರದಾಡುತ್ತಿದ್ದರು. ಆದ್ದರಿಂದ ಗಾಂಧಿ ಜಯಂತಿ ಅಂಗವಾಗಿ ತಮ್ಮ ಶಿಕ್ಷಕರ ಸಹಾಯದಿಂದ ಎಂಜಿ ರಸ್ತೆಯುದ್ದಕ್ಕೂ ಇದ್ದ ಬೃಹತ್ ಗಾತ್ರದ ಗುಂಡಿಗಳನ್ನು ವಿದ್ಯಾರ್ಥಿಗಳು ಮುಚ್ಚುವ ಕೆಲಸವನ್ನ ಮಾಡಿದ್ದಾರೆ.

  • ದಂಡ ಹಾಕಿ ಉಚಿತ ಹೆಲ್ಮೆಟ್ ನೀಡಿ ಗಾಂಧಿ ಜಯಂತಿ ಆಚರಿಸಿದ ಸಂಚಾರಿ ಪೊಲೀಸರು

    ದಂಡ ಹಾಕಿ ಉಚಿತ ಹೆಲ್ಮೆಟ್ ನೀಡಿ ಗಾಂಧಿ ಜಯಂತಿ ಆಚರಿಸಿದ ಸಂಚಾರಿ ಪೊಲೀಸರು

    ರಾಯಚೂರು: ದೇಶದ ಪಿತಾಮಹಾ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಹಿನ್ನೆಲೆ ರಾಯಚೂರಿನಲ್ಲಿ ಪೊಲೀಸ್ ಇಲಾಖೆ ಸಂಚಾರಿ ನಿಯಮಗಳ ಬಗ್ಗೆ ವಿಶೇಷ ರೀತಿಯಲ್ಲಿ ಅರಿವು ಮೂಡಿಸಿದ್ದು, ಸಂಚಾರಿ ಪೊಲೀಸರು ಹೆಲ್ಮೆಟ್ ರಹಿತ ವಾಹನ ಸವಾರರಿಗೆ ದಂಡ ಹಾಕುವ ಜೊತೆಗೆ ಉಚಿತ ಹೆಲ್ಮೆಟ್ ನೀಡಿದರು.

    ನಗರದ ಅಂಬೇಡ್ಕರ್ ವೃತ್ತದಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವ ಸವಾರರಿಗೆ ಬುದ್ಧಿ ಹೇಳಿ, ಉಚಿತವಾಗಿ ಹೆಲ್ಮೆಟ್ ಕೊಟ್ಟು ಧರಿಸಲು ಎಚ್ಚರಿಕೆ ನೀಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ವೇದಮೂರ್ತಿ ಹಾಗೂ ಸಹಾಯಕ ಆಯುಕ್ತ ಸಂತೋಷ್ ಹೆಲ್ಮೆಟ್‍ಗಳನ್ನ ವಾಹನ ಸವಾರರಿಗೆ ವಿತರಿಸಿದರು. ಜೊತೆಗೆ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವ ಸವಾರರಿಂದ ಪ್ರತಿಜ್ಞೆ ಮಾಡಿಸಲಾಯಿತು.

    ಎಷ್ಟೇ ದಂಡ ಹಾಕುವ ಕಠಿಣ ನಿಯಮಗಳನ್ನ ಜಾರಿಗೆ ತಂದರೂ ಸವಾರರು ರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸುತ್ತಿಲ್ಲ. ರಸ್ತೆ ಅಪಘಾತದ ಸಂದರ್ಭದಲ್ಲಿ ತಲೆಗೆ ಪೆಟ್ಟುಬಿದ್ದು ಸಾವನ್ನಪ್ಪುವ ಪ್ರಕರಣಗಳೇ ಹೆಚ್ಚಿರುವ ಕಾರಣ ಜನರಲ್ಲಿ ಅರಿವು ಮೂಡಿಸಲು ಉಚಿತ ಹೆಲ್ಮೆಟ್ ನೀಡಲಾಗಿದೆ ಎಂದು ಎಸ್‍ಪಿ ಹೇಳಿದರು.

    ಇದೇ ವೇಳೆ ಹೆಲ್ಮೆಟ್ ಧರಿಸದ ಸವಾರರಿಗೆ ದಂಡವನ್ನೂ ವಿಧಿಸಲಾಯಿತು. ಆರ್ಯವೈಶ್ಯ ಸಂಘದ ಮುಖಂಡ ಗೋಪಾಲಯ್ಯ ಈ ಜಾಗೃತಿ ಕಾರ್ಯಕ್ರಮಕ್ಕೆ ಉಚಿತವಾಗಿ ಹೆಲ್ಮೆಟ್‍ಗಳನ್ನ ನೀಡುವ ಮೂಲಕ ಮಹಾತ್ಮ ಗಾಂಧಿಯ ಜಯಂತೋತ್ಸವನ್ನು ವಿಭಿನ್ನವಾಗಿ ಆಚರಿಸಿದರು.

  • ಕೋಟೆ ನಾಡಿನಲ್ಲಿ ಗಾಂಧೀಜಿ ದೇಗುಲ

    ಕೋಟೆ ನಾಡಿನಲ್ಲಿ ಗಾಂಧೀಜಿ ದೇಗುಲ

    ಚಿತ್ರದುರ್ಗ: ಗಾಂಧಿ ಜಯಂತಿ ಬಂತಂದ್ರೆ ದೇಶದೆಲ್ಲೆಡೆ ಮಹಾತ್ಮ ಗಾಂಧೀಜಿ ಭಾವಚಿತ್ರವಿಟ್ಟು ಪೂಜಿಸೋದು ವಾಡಿಕೆ. ಆದರೆ ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾಮದಲ್ಲಿ ಮೊಟ್ಟ ಮೊದಲು ಶುರುವಾದ ಸ್ವಾತಂತ್ರ ಹೋರಾಟದ ಕಿಚ್ಚಿನ ಹೋರಾಟದ ಸವಿ ನೆನಪಿಗಾಗಿ ಗಾಂಧೀಜಿ ದೇಗುಲ ನಿರ್ಮಿಸಿ ನಿತ್ಯ ಪೂಜಾ ಕೈಂಕರ್ಯ ಮಾಡಲಾಗುತ್ತಿದೆ.

    ಚಿತ್ರದುರ್ಗ ತಾಲೂಕಿನ ತುರುವನೂರು ಸ್ವತಂತ್ರ್ಯ ಹೋರಾಟದಲ್ಲಿ ತನ್ನದೇ ಛಾಪು ಮೂಡಿಸಿದ ಗ್ರಾಮ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ನೇತೃತ್ವದಲ್ಲಿ ಅನೇಕ ಸ್ವತಂತ್ರ್ಯ ಹೋರಾಟಗಳು ಇಲ್ಲಿ ನಡೆದಿವೆ. ಇದೇ ತುರುವನೂರು ಗ್ರಾಮದಲ್ಲಿ ಈಚಲ ಮರದ ಚಳುವಳಿ ನಡೆದಿದೆ. ಹೀಗಾಗಿ ನೂರಾರು ಜನ ಸ್ವತಂತ್ರ ಹೋರಾಟಗಾರರು ಈ ಗ್ರಾಮದಿಂದಲೇ ಹೋರಾಟಕ್ಕೆ ಧುಮುಕಿದ್ದರು. ಆ ಹೋರಾಟದ ಸವಿನೆನಪಿಗಾಗಿ ಈ ತುರುವನೂರು ಗ್ರಾಮದಲ್ಲಿ ಸ್ವತಂತ್ರ್ಯ ಹೋರಾಟಗಾರರ ನೇತಾರ ಮಹಾತ್ಮ ಗಾಂಧೀಜಿಯವರ ದೇವಸ್ಥಾನವನ್ನೇ ನಿರ್ಮಿಸಲಾಗಿದೆ. ಅಲ್ಲದೇ ಏಳು ಅಡಿ ಎತ್ತರದ ಗಾಂಧೀಜಿಯವರ ಕಂಚಿನ ಪ್ರತಿಮೆಯು ದೆಹಲಿಯಲ್ಲಿ ಬಿಟ್ಟರೆ, ಈ ತುರುವನೂರು ಗ್ರಾಮದಲ್ಲಿ ಮಾತ್ರ ಇರೋದು ಈ ದೇಗುಲದ ವಿಶೇಷ.

    ಈ ದೇಗುಲವನ್ನು ಅಕ್ಟೋಬರ್ 1, 1968 ರಂದು ಎಸ್.ನಿಜಲಿಂಗಪ್ಪನವರು ಈ ದೇಗುಲವನ್ನು ಉದ್ಘಾಟಿಸಿದ್ದರು. ಕೆಲ ದಿನಗಳ ಕಾಲ ದೇಗುಲವನ್ನು ಸೂಕ್ತ ನಿರ್ವಹಣೆ ಮಾಡುವವರಿಲ್ಲದೆ ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಆಗ ಈ ಗ್ರಾಮದ ಹಿರಿಯರ ಸಲಹೆ ಮೇರೆಗೆ ಯುವಕರೆಲ್ಲ ಒಟ್ಟಾಗಿ ಈ ಅವಿಸ್ಮರಣೀಯ ಸ್ಮಾರಕವನ್ನು ಉಳಿಸಲು ಮುಂದಾಗಿದ್ದಾರೆ. ದೇಗುಲ ಪ್ರಾರಂಭವಾದಾಗಿನಿಂದ ಒಮ್ಮೆಯೂ ಜೀಣೋದ್ಧಾರವಾಗಿಲ್ಲ. ಹೀಗಾಗಿ ಈ ಗಾಂಧಿ ದೇಗುಲವನ್ನು ಸರ್ಕಾರ ಇನ್ನಷ್ಟು ಅಭಿವೃದ್ಧಿಪಡಿಸಿ ಐತಿಹಾಸಿಕ ಪ್ರವಾಸಿ ತಾಣವನ್ನಾಗಿಸುವ ಮೂಲಕ ಹೋರಾಟದ ಸವಿನೆನಪು ಅಚ್ಚಳಿಯದಂತೆ ಉಳಿಸಬೇಕೆಂಬ ಆಗ್ರಹ ಕೇಳಿಬಂದಿದೆ.

    ಸ್ವತಂತ್ರ ಹೋರಾಟಗಾರರ ಸವಿ ನೆನಪಿಗಾಗಿ ತುರುವನೂರು ಗ್ರಾಮದಲ್ಲಿ ಗಾಂಧೀಜಿ ದೇಗುಲ ನಿರ್ಮಾಣವಾಗಿದ್ದು, ನಿತ್ಯವೂ ಪೂಜಾ ಕೈಂಕಾರ್ಯಗಳು ನಡೆಯುತ್ತಿವೆ. ಅಭಿವೃದ್ಧಿ ಹೆಸರಲ್ಲಿ ಮಠ-ಮಂದಿರಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ನೀಡುವ ಸರ್ಕಾರ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾಪುರುಷನ ದೇಗುಲವನ್ನು ಅಭಿವೃದ್ಧಿಪಡಿಸದೆ ನಿರ್ಲಕ್ಷ್ಯ ತೋರಿರೋದು ಮಾತ್ರ ವಿಷಾದನೀಯ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

  • ಕ್ಷೇತ್ರಾದ್ಯಂತ 150 ಕಿ.ಮೀ.ಪಾದಯಾತ್ರೆ ಮಾಡಿ: ಸಂಸದರಿಗೆ ಮೋದಿ ಸೂಚನೆ

    ಕ್ಷೇತ್ರಾದ್ಯಂತ 150 ಕಿ.ಮೀ.ಪಾದಯಾತ್ರೆ ಮಾಡಿ: ಸಂಸದರಿಗೆ ಮೋದಿ ಸೂಚನೆ

    ನವದೆಹಲಿ: ಎಲ್ಲ ಸಂಸದರು ನಿಮ್ಮ ಕ್ಷೇತ್ರಗಳಲ್ಲಿ 150 ಕಿ.ಮೀ.ಪಾದಯಾತ್ರೆ ಮಾಡಿ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ.

    ಬಿಜೆಪಿ ಸಂಸದರೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ‘ಗಾಂಧಿ 150’ ಕಾರ್ಯಕ್ರಮದ ಅಂಗವಾಗಿ ಪಾದಯಾತ್ರೆ ಮಾಡುವಂತೆ ಈ ಸೂಚನೆ ನೀಡಿದ್ದಾರೆ.

    ಅ.2 ಹಾಗೂ ಅ.31 ಗಾಂಧೀಜಿ ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ಅ.2ರಿಂದ 31ರ ನಡುವೆ ಪ್ರತಿ ದಿನ 15 ಕಿ.ಮೀ. ಪಾದಯಾತ್ರೆ ಮೂಲಕ ಕ್ರಮಿಸುವಂತೆ ಎಲ್ಲ ಸಂಸದರಿಗೂ ಸೂಚಿಸಿದ್ದಾರೆ. ಅಲ್ಲದೆ, ರಾಜ್ಯಸಭಾ ಸದಸ್ಯರೂ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದು, ಪಕ್ಷ ಸಂಘಟನೆ ದುರ್ಬಲ ಇರುವ ಕಡೆ ಪಾದಯಾತ್ರೆ ನಡೆಸುವಂತೆ ಸೂಚಿಸಿದ್ದಾರೆ.

    ರಾಜ್ಯಸಭಾ ಸದಸ್ಯರಿಗೆ ಕ್ಷೇತ್ರವನ್ನು ಹಂಚಿಕೆ ಮಾಡಲಾಗುವುದು. ಪ್ರತಿಯೊಂದು ಕ್ಷೇತ್ರದಲ್ಲೂ ಕನಿಷ್ಠ 15ರಿಂದ 20 ತಂಡಗಳನ್ನು ರಚಿಸಬೇಕು. ಅವರ ನೇತೃತ್ವದಲ್ಲಿ ಪ್ರತಿದಿನ 15 ಕಿಲೋ ಮೀಟರ್ ಪಾದಯಾತ್ರೆ ನಡೆಸಬೇಕು. ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟ ಹಾಗೂ ಸಸಿ ನಡೆಯುವ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಮೋದಿ ಸಭೆಯಲ್ಲಿ ಹೇಳಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ, ಹಳ್ಳಿಗಳ ಪುನರ್‍ಜೀವನ ಮತ್ತು ಸ್ವಾವಲಂಬಿಗಳನ್ನಾಗಿ ಮಾಡುವುದು. ಗಿಡ ನೆಡುವುದು ಹಾಗೂ ಶೂನ್ಯ ಬಜೆಟ್ ಕೃಷಿಯತ್ತ ಗಮನಹರಿಸುವಂತೆ ತಿಳುವಳಿಕೆ ನೀಡುವ ಉದ್ದೇಶದಿಂದ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

    ನಾವು ‘ಸಂಕಲ್ಪ ಪತ್ರ’ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದು ನಮ್ಮ ಭವಿಷ್ಯದ ಗುರಿಯಾಗಬೇಕೆಂದು ಮೋದಿ ಸಭೆಯಲ್ಲಿ ಸೂಚಿಸಿದ್ದಾರೆ ಎಂದು ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.

    ಪ್ರತಿ ದಿನ 15 ಕಿ.ಮೀ.ಪಾದಯಾತ್ರೆ ಮಾಡುವುದರಿಂದ ಎಲ್ಲ ಬೂತ್‍ಗಳನ್ನು ಕವರ್ ಮಾಡಬಹುದು. ಇದೇ ಅವಕಾಶವನ್ನು ಬಳಸಿಕೊಂಡು ಸಂಸದರು ಮಹಾತ್ಮಾ ಗಾಂಧಿ ಅವರ ಸಂದೇಶ, ಸಿದ್ಧಾಂತ ಹಾಗೂ ಜೀವನದ ಕುರಿತು ವಿವರಿಸಿ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಕುರಿತು ಸಂಸದರಿಗೆ ವಿವರಿಸಿದ್ದು, ದೂರದೃಷ್ಟಿ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಇದೇ ವೇಳೆ ಬಜೆಟ್ ಒಳ್ಳೆಯ ಅಂಶಗಳನ್ನು ಜನರಿಗೆ ತಲುಪಿಸುವಂತೆ ತಿಳಿಸಿದ್ದಾರೆ.

  • ನನ್ ಮಾತು ಕೇಳದಿದ್ರೆ, ನೀನೇನೂ ಕೀಳೋಕೆ ಇಲ್ಲಿ ಇರ್ತಿಯಾ: ಅಧಿಕಾರಿಗೆ ದುರ್ಯೋಧನ ಐಹೊಳೆ ಅವಾಜ್

    ನನ್ ಮಾತು ಕೇಳದಿದ್ರೆ, ನೀನೇನೂ ಕೀಳೋಕೆ ಇಲ್ಲಿ ಇರ್ತಿಯಾ: ಅಧಿಕಾರಿಗೆ ದುರ್ಯೋಧನ ಐಹೊಳೆ ಅವಾಜ್

    ಚಿಕ್ಕೋಡಿ: ಗಾಂಧಿ ಜಯಂತಿ ದಿನದಂದೇ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅಧಿಕಾರಿ ಮೇಲೆ ಗುಂಡಾಗಿರಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.

    ನನ್ನ ಮಾತು ಕೇಳದಿದ್ದರೆ ನೀನೇನೂ ಕೀಳೋಕೆ ಇಲ್ಲಿ ಇರ್ತಿಯಾ ಎಂದು ದುರ್ಯೋಧನ ಐಹೊಳೆ ರಾಯಭಾಗ ಕೆಎಸ್ಆರ್‌ಟಿಸಿ ಡಿಪೋ ಮ್ಯಾನೇಜರ್‌ಗೆ ನೇರವಾಗಿ ಧಮ್ಕಿ ಹಾಕಿದ್ದಾರೆ.

    ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಅಧಿಕಾರಿ ಮೇಲೆ ಶಾಸಕರು ದರ್ಪ ತೋರುವುದರ ಜೊತೆಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ನೀವು ಹಣ ತಿನ್ನಲಿ ಬಿಡಲಿ, ನೀವು ಹಣ ತಿಂದಿದ್ದೀರಿ ಎಂದು ನಾನು ಜಿಲ್ಲಾಧಿಕಾರಿಗೆ ನಾನು ದೂರು ನೀಡುತ್ತೇನೆ ಎಂದು ಹೇಳಿದ್ದಲ್ಲೇ ಜನರ ನಡುವೆ ಡಿಪೋ ಮ್ಯಾನೇಜರ್ ಎಆರ್ ಚಬ್ಬಿ ಅವರಿಗೆ ಶಾಸಕ ದುರ್ಯೋಧನ ಹೊಡೆಯಲು ಯತ್ನಿಸಿದ್ದಾರೆ.

    ಶಾಸಕರ ಅವತಾರ ಕಂಡು ಸಾರಿಗೆ ಇಲಾಖೆ ಅಧಿಕಾರಿಗಳು ತಬ್ಬಿಬ್ಬು ಆಗಿದ್ದಾರೆ. ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತೆರವುಗೊಳಿಸದೇ ಇದ್ದಿದ್ದಕ್ಕೆ ನಾವು ಕಸ ಹೊಡೆಯಲು ಬಂದರೆ ನೀವು ಆರಾಮಾಗಿ ಬನ್ನಿ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಾಂಧಿ ಜಯಂತಿ ಆಚರಣೆ: ಬಹಿರಂಗವಾಗಿಯೇ ಶಾಸಕರ ವಿರುದ್ಧ ಭಿನ್ನಮತ ಹೊರಹಾಕಿದ ಸಚಿವ ಶಿವಶಂಕರರೆಡ್ಡಿ

    ಗಾಂಧಿ ಜಯಂತಿ ಆಚರಣೆ: ಬಹಿರಂಗವಾಗಿಯೇ ಶಾಸಕರ ವಿರುದ್ಧ ಭಿನ್ನಮತ ಹೊರಹಾಕಿದ ಸಚಿವ ಶಿವಶಂಕರರೆಡ್ಡಿ

    ಚಿಕ್ಕಬಳ್ಳಾಪುರ: ಕಾಲ್ನಡಿಗೆಯ ಮೂಲಕವೇ ಗಿರಿಧಾಮವನ್ನು ಏರಿ ಗಾಂಧಿ ಜಯಂತಿಯನ್ನು ಆಚರಿಸಿದ ಕೃಷಿ ಸಚಿವ ಶಿವಶಂಕರರೆಡ್ಡಿ ಅವರು ಸ್ಥಳೀಯ ಶಾಸಕರ ವಿರುದ್ಧ ಬಹಿರಂಗವಾಗಿಯೇ ಭಿನ್ನಮತ ಹೊರಹಾಕಿದ್ದಾರೆ.

    ವಿಶ್ವವಿಖ್ಯಾತ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ತಪ್ಪಲಿನ ಸುಲ್ತಾನ ಪೇಟೆಯ ಕಲ್ಲಿನ ಮೆಟ್ಟಿಲುಗಳ ಮಾರ್ಗದ ಬಳಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್ ಎಚ್ ಶಿವಶಂಕರರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅವರು, ಜಿಲ್ಲೆಯ ಯಾವುದೇ ಸಭೆ ಸಮಾರಂಭ-ಕಾರ್ಯಕ್ರಮಗಳಿಗೆ ನಾನು ಆಹ್ವಾನ ಮಾಡಿದ್ದರೂ ಕೂಡ ಶಾಸಕ ಸುಧಾಕರ್ ಬರಲ್ಲ ಅಂತ ಸಚಿವ ಶಿವಶಂಕರರೆಡ್ಡಿ ಶಾಸಕ ಸುಧಾಕರ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ನಲ್ಲಿನ ಭಿನ್ನಮತವಿರುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

    ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಸುಧಾಕರ್ ಗೈರು ಆಗಿದ್ದು, ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನೇ ಸ್ವತಃ ಕೆಲ ಸಭೆ-ಕಾರ್ಯಕ್ರಮಗಳಿಗೆ ಕರೆದಿದ್ದೇನೆ. ಆದರೆ ಸುಧಾಕರ್ ಬಂದಿಲ್ಲ, ಅವರು ಬಂದಿಲ್ಲ ಅಂದರೆ ನಾನು ಏನು ಮಾಡೋಕು ಆಗಲ್ಲ. ಮಂತ್ರಿಯಾಗಿ ನನ್ನ ಜವಾಬ್ದಾರಿಯನ್ನ ನಾನು ನಿಭಾಯಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಹೆಚ್ಚು ಅಲ್ಲ ಕಡಿಮೆ ಅಲ್ಲ. ಪಾಳೇಗಾರಿಕೆನೂ ಇಲ್ಲ, ಪಾಳೇಗಾರಿಕೆ ಕಾಲ ಮುಗಿದು ಹೋಗಿದೆ ಎಂದು ಹೇಳಿದರು.

    ಜನಪ್ರತಿನಿಧಿಗಳಾದ ಮಾತ್ರಕ್ಕೆ ಯಾರಿಗೇನು ಕೊಂಬುಗಳಿಲ್ಲ. ಜನ ನಮ್ಮನ್ನ ಆಯ್ಕೆ ಮಾಡಿದ್ದಾರೆ, ಒಂದು ವೇಳೆ ಜನ ಮನಸ್ಸು ಮಾಡಿದ್ರೇ ನಮ್ಮನ್ನ ಕೆಳಗಿಳಿಸ್ತಾರೆ. ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಬೇಕೇ ಹೊರತು, ಯಾರು ಹೆಚ್ಚೇನು ಅಲ್ಲ ಕಡಿಮೆ ಅಲ್ಲ. ಇದನ್ನ ಶಾಸಕ ಸುಧಾಕರ್ ಅರ್ಥ ಮಾಡಿಕೊಳ್ಳಬೇಕಿದೆ. ಇಲ್ಲ ಅಂತ ದೂರ ಹೋದರೆ, ಯಾವುದು ನಿಲ್ಲಲ್ಲ. ಹೀಗಾಗಿ ನಾನು ಏನೂ ಮಾಡಕ್ಕಾಗಲ್ಲ ಅಂತ ಶಾಸಕ ಸುಧಾಕರ್ ವಿರುದ್ದ ಸಚಿವ ಶಿವಶಂಕರರೆಡ್ಡಿ ಬಹಿರಂಗವಾಗಿಯೇ ತಮ್ಮ ಬೇಸರ ಹೊರಹಾಕಿದ್ದಾರೆ.

    ಗಾಂಧೀಜಿ ನಂಧಿಗಿರಿಧಾಮವನ್ನು ಕಾಲ್ನಡಿಗೆ ಮೂಲಕವೇ ಏರಿದ್ದರು. ಹೀಗಾಗಿ ಗಾಂಧಿ ಜಯಂತಿಯ ಅಂಗವಾಗಿ ಇಂದು ಸಹ ವಿವಿಧ ಶಾಲೆಯ ಎನ್‍ಎಸ್‍ಎಸ್ ನ ವಿದ್ಯಾರ್ಥಿಗಳು ನಂದಿಬೆಟ್ಟದ ಕಲ್ಲಿನ ಮೆಟ್ಟಿಲುಗಳನ್ನು ಮೂಲಕ ಬೆಟ್ಟು ಹತ್ತುವುದರ ಜೊತೆಗೆ ಶ್ರಮದಾನ ಮಾಡಿ ಗಾಂಧಿ ಜಯಂತಿ ಆಚರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವ ಶಿವಶಂಕರರೆಡ್ಡಿ ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಸಹ ಸ್ವಲ್ಪ ನಂದಿಬೆಟ್ಟ ಏರಿ ಗಾಂಧೀಜಿಯನ್ನ ನೆನೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಾಂಧಿ ಜಯಂತಿ ಅಂಗವಾಗಿ ಚರಂಡಿ ಸ್ವಚ್ಛಗೊಳಿಸಿದ ಗದಗ್ ಜಿಲ್ಲಾಧಿಕಾರಿ

    ಗಾಂಧಿ ಜಯಂತಿ ಅಂಗವಾಗಿ ಚರಂಡಿ ಸ್ವಚ್ಛಗೊಳಿಸಿದ ಗದಗ್ ಜಿಲ್ಲಾಧಿಕಾರಿ

    ಗದಗ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಅಂಗವಾಗಿ ಗದಗ್ ನಲ್ಲಿ ನಡೆದ ಸ್ವಚ್ಛತಾ ಶ್ರಮದಾನಕ್ಕೆ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಚರಂಡಿ ಸ್ವಚ್ಛಗೊಳಿಸುವ ಮೂಲಕ ಚಾಲನೆ ನೀಡಿದರು.

    ಜಿಲ್ಲಾಡಳಿತ, ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ವತಿಯಿಂದ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಹಿರೇಮಠ ಹ್ಯಾಂಡ್ ಗ್ಲೌಸ್ ಹಾಗೂ ಮಾಸ್ಕ್ ಹಾಕಿಕೊಂಡು ಪೊರಕೆ ಹಿಡಿದು ಮುಂದಾಳತ್ವ ವಹಿಸಿ ಕ್ಲೀನ್ ಮಾಡಲು ಮುಂದಾದರು. ನಗರ ಮುಳಗುಂದ ನಾಕಾ, ಹಸಿರುಕೆರಿ, ಚನ್ನಮ್ಮ ವೃತ್ತ ಸೇರಿದಂತೆ ಅನೇಕ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

    ಈ ಮೂಲಕ ಸ್ಥಳೀಯ ಸಾರ್ವಜನಿಕರಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದರು. ಪ್ರತಿಯೊಬ್ಬರೂ ಕಾಳಜಿ ನಿಷ್ಠೆಯಿಂದ ಸ್ವಚ್ಛತೆ ಕೆಲಸ ಮಾಡಬೇಕು. ಮನೆ, ಓಣಿ, ಊರು ಸುತ್ತಲಿನ ಪರಿಸರ ಹಾಗೂ ಮಾಲಿನ್ಯ ಹಾಳಾಗದಂತೆ ನೋಡಿಕೊಳ್ಳಬೇಕು. ಇದು ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರುಗಳಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.

    ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್, ಉಪವಿಭಾಗಾಧಿಕಾರಿ ಪಿ.ಎಸ್ ಮಂಜುನಾಥ್, ನಗರಸಭೆ ಪೌರಾಯುಕ್ತ ಮನ್ಸೂರ ಅಲಿ ಸೇರಿದಂತೆ ವಿವಿಧ ಶಾಲಾ-ಕಾಲೇಜಿನ ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕರು ಇದರಲ್ಲಿ ಪಾಲ್ಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv