Tag: ಗಸ್ತು

  • ಗಸ್ತಿನಲ್ಲಿದ್ದಾಗ ಕಾರು ಡಿಕ್ಕಿ – ಕಾನ್‍ಸ್ಟೇಬಲ್ ಸಾವು, ಎಎಸ್‍ಐಗೆ ಗಂಭೀರ ಗಾಯ

    ಗಸ್ತಿನಲ್ಲಿದ್ದಾಗ ಕಾರು ಡಿಕ್ಕಿ – ಕಾನ್‍ಸ್ಟೇಬಲ್ ಸಾವು, ಎಎಸ್‍ಐಗೆ ಗಂಭೀರ ಗಾಯ

    ಚಾಮರಾಜನಗರ: ಗಸ್ತಿನಲ್ಲಿದ್ದ ವೇಳೆ ಕಾರು ಡಿಕ್ಕಿಯಾಗಿ ಕಾನ್‍ಸ್ಟೇಬಲ್ ಒಬ್ಬರು ಸಾವನ್ನಪ್ಪಿದ್ದು, ಎಎಸ್‍ಐಗೆ ಗಂಭೀರ ಗಾಯವಾದ ಘಟನೆ ಚಾಮರಾಜನಗರ ತಾಲೂಕಿನ ಕೆಂಪನಪುರ ಸಮೀಪ ಮಧ್ಯರಾತ್ರಿ ನಡೆದಿದೆ.

    ಸಂತೇಮರಹಳ್ಳಿ ಪೊಲೀಸ್ ಠಾಣೆ ಕಾನ್‍ಸ್ಟೇಬಲ್ ಪ್ರಸಾದ್ ಮೃತ ದುರ್ದೈವಿ. ಎಎಸ್‍ಐ ರಾಜು ಅವರಿಗೆ ಗಂಭೀರ ಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ವಿದ್ಯುತ್ ತಗುಲಿ ಅಣ್ಣ, ತಮ್ಮ ಧಾರುಣ ಸಾವು

    ಕೆಂಪನಪುರ ಗ್ರಾಮದ ಸಮೀಪ ಗಸ್ತು ನಡೆಸುತ್ತಿರಬೇಕಾದರೇ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಸದ್ಯ ಕಾರಿನ ನೋಂದಣಿ ಸಂಖ್ಯೆ ಪತ್ತೆ ಹಚ್ಚಲಾಗಿದೆ. ಈ ಸಂಬಂಧ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊರೊನಾ ಸಂಕಷ್ಟ – ಖಾಕಿತೊಟ್ಟು ಫೀಲ್ಡಿಗಿಳಿದ ರೈಡರ್ ಅಜಯ್ ಠಾಕೂರ್

    ಕೊರೊನಾ ಸಂಕಷ್ಟ – ಖಾಕಿತೊಟ್ಟು ಫೀಲ್ಡಿಗಿಳಿದ ರೈಡರ್ ಅಜಯ್ ಠಾಕೂರ್

    ಶಿಮ್ಲಾ: ಭಾರತದ ಪರ ಮಿಂಚಿನಂತ ರೈಡ್ ಗೆಲುವಿನ ದಡ ಸೇರಿಸುತ್ತಿದ್ದ ಕಬಡ್ಡಿ ಆಟಗಾರ ರೈಡರ್ ಅಜಯ್ ಠಾಕೂರ್ ಅವರು, ಕೊರೊನಾ ವೈರಸ್ ತಡಗಟ್ಟುವ ಸಲುವಾಗಿ ಖಾಕಿ ತೊಟ್ಟು ಹಿಮಾಚಲ ಪ್ರದೇಶದಲ್ಲಿ ಡ್ಯೂಟಿ ಮಾಡುತ್ತಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದ ಪ್ರಧಾನಿ ಮೋದಿ ಅವರು ಇಡೀ ಭಾರತವನ್ನು 21 ದಿನಗಳ ಕಾಲ ಅಂದರೆ ಎಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ದೇಶಾದ್ಯಂತ ಪೊಲೀಸರು ಹರಸಹಾಸ ಪಡುತ್ತಿದ್ದಾರೆ. ಈಗ ಈ ಪಟ್ಟಿಗೆ ಸ್ಟಾರ್ ಕಬಡ್ಡಿ ಆಟಗಾರ ಅಜಯ್ ಠಾಕೂರ್ ಅವರು ಸೇರಿಕೊಂಡಿದ್ದು, ಹಿಮಾಚಲ ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ ಗಸ್ತು ತಿರುಗಿ ಮನೆಯಲ್ಲೇ ಇರಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.

    https://www.instagram.com/p/B-KW8fgAvd9/

    ಕೊರೊನಾ ವೈರಸ್ ಬಗ್ಗೆ ಜನರಿಗೆ ತಿಳಿಸಲು ಗಲ್ಲಿ ಗಲ್ಲಿ ಗಸ್ತು ತಿರುಗುತ್ತಿರುವ ಅಜಯ್ ಠಾಕೂರ್ ಅವರು, ತಮ್ಮ ಇನ್‍ಸ್ಟಾಗ್ರಾಮ್‍ನಲ್ಲೂ ಕೂಡ ಪೋಸ್ಟ್ ಹಾಕಿಕೊಂಡಿದ್ದಾರೆ. ನೀವು ಮನೆಯಲ್ಲೇ ಇರುವ ಮತ್ತು ಬೇರೆಯವರಿಗೆ ಮನೆಯಲ್ಲೇ ಇರಿ ಎಂದು ಹೇಳುವ ಸಮಯವಿದು. ರಾಜ್ಯದ ಅಡಳಿತವರ್ಗಕ್ಕೆ ನಿಮ್ಮ ಸಹಕಾರ ಮುಖ್ಯ. ನೀವು ಹೀಗೆ ಮಾಡಿದರೆ ಮಾತ್ರ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯ. ಮನೆಯಲ್ಲೇ ಇರಿ ಎಂದು ಬರೆದು ತಾವು ಗಸ್ತು ತಿರುಗುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

    https://www.instagram.com/p/B-KSNe2A_ou/

    ಅಜಯ್ ಠಾಕೂರ್ ಹಿಮಾಚಲ ಪ್ರದೇಶ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾರೆ ಮತ್ತು ಬಿಲಾಸ್ಪುರ ಪಟ್ಟಣದಲ್ಲಿ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ವೈರಸ್ ಬಗ್ಗೆ ಮಾತನಾಡಿರುವ ಅಜಯ್ ಠಾಕೂರ್ ಅವರು, ಜನರು ಈಗಲೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಳ್ಳಿಗಳಲ್ಲಿ ಅಡ್ಡಹಾದಿಯಲ್ಲಿ ಗುಂಪುಗಳಾಗಿ 10-15 ಜನರು ಪರಸ್ಪರ ಮಾತನಾಡುತ್ತಿರುವುದನ್ನು ನೋಡಿದ್ದೇನೆ. ದಯವಿಟ್ಟು ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಅವರು ಮನವಿ ಮಾಡಿದ್ದಾರೆ.

    ಕಬಡ್ಡಿಯಲ್ಲಿ ಭಾರತದ ಪರ ಸ್ಟಾರ್ ರೈಡರ್ ಆಗಿ ಮಿಂಚಿರುವ ಅಜಯ್ ಅವರು, ಹಿಮಾಚಲ ಪ್ರದೇಶದ ದಾಭೋಟ ಎಂಬ ಗ್ರಾಮದಲ್ಲಿ ಜನಿಸಿದ್ದಾರೆ. ಇವರು 2014 ರ ಏಷ್ಯನ್ ಗೇಮ್ ಮತ್ತು 2016ರ ಕಬಡ್ಡಿ ವಿಶ್ವ ಕಪ್ ನಲ್ಲಿ ಭಾರತ ಚಿನ್ನದ ಪದಕ ಗೆದ್ದಾಗ ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದರು. ಅಜಯ್ ಠಾಕೂರ್ ಅವರಿಗೆ 2019ರಲ್ಲಿ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    https://www.instagram.com/p/B5UF5h1gV-b/

    ದೇಶಕ್ಕೆ ಮಹಾಮಾರಿಯಾಗಿ ಬಂದಿರುವ ಕೊರೊನಾ ವೈರಸ್‍ಗೆ ಇಲ್ಲಿಯವರೆಗೂ ಸುಮಾರು 13 ಜನ ಮೃತಪಟ್ಟಿದ್ದಾರೆ. ಜೊತೆಗೆ ಸುಮಾರು 649 ಜನ ಸೋಂಕಿಗೆ ತುತ್ತಾಗಿದ್ದಾರೆ. ಈ ವೈರಸ್ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ದೊಡ್ಡದಾಗಿ ಮಾಡಿಕೊಳ್ಳುತ್ತಿದೆ. ಹೀಗಾಗಿ ಹಿಮಾಚಲ ಪ್ರದೇಶದಲ್ಲೂ ಮೂರು ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹೀಗಾಗಿ ಅಲ್ಲಿನ ಸರ್ಕಾರ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುತ್ತಿದೆ.

  • ಗಣೇಶ ಹಬ್ಬದಂದು ಕರ್ತವ್ಯ ನಿರ್ವಹಿಸದೇ ಮನೆಯಲ್ಲಿ ಮಲಗಿದ್ದ ಪಿಎಸ್‍ಐ ಅಮಾನತು

    ಗಣೇಶ ಹಬ್ಬದಂದು ಕರ್ತವ್ಯ ನಿರ್ವಹಿಸದೇ ಮನೆಯಲ್ಲಿ ಮಲಗಿದ್ದ ಪಿಎಸ್‍ಐ ಅಮಾನತು

    ಧಾರವಾಡ: ಗಣೇಶ ಹಬ್ಬದ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ನಿರ್ವಹಿಸದೇ ಮನೆಗೆ ಹೋಗಿ ಮಲಗಿ ಕರ್ತವ್ಯಲೋಪ ಎಸಗಿದ್ದ ಪಿಎಸ್‍ಐಯನ್ನು ಧಾರವಾಡ ಎಸ್‍ಪಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.

    ಧಾರವಾಡ ಜಿಲ್ಲೆಯ ಗರಗ ಠಾಣೆಯ ಪಿಎಸ್‍ಐ ಸಮೀರ್ ಮುಲ್ಲಾ ಅಮಾನತಾಗಿದ್ದಾರೆ. ಗರಗ ಠಾಣಾ ವ್ಯಾಪ್ತಿಯ ಕೋಟೂರ ಗ್ರಾಮದಲ್ಲಿ ಗಣೇಶ ಪ್ರತಿಷ್ಠಾಪನೆಯ ದಿನ ಮೆರವಣಿಗೆ ಸಾಗುವಾಗ ಸ್ವಲ್ಪ ದ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ, ಮಧ್ಯರಾತ್ರಿ 2 ಗಂಟೆಗೆ ಖುದ್ದು ಜಿಲ್ಲಾ ಮಹಿಳಾ ಎಸ್‍ಪಿ ವರ್ತಿಕಾ ಕಟಿಯಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.

    ಈ ವೇಳೆ ಪಿಎಸ್‍ಐಗೆ ರಾತ್ರಿ ಗಸ್ತು ತಿರುಗುವಂತೆ ಸೂಚಿಸಿ ಹೋಗಿದ್ದರು. ಆದರೆ, ಪಿಎಸ್‍ಐ ಸಮೀರ್ ಮುಲ್ಲಾ ಎಸ್‍ಪಿ ಹೋಗುತ್ತಿದ್ದಂತೆ ಮನೆಗೆ ವಾಪಸ್ ತೆರಳಿದ್ದಾರೆ. ಎಸ್‍ಪಿ ಮತ್ತೆ 4 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆಗ ಅಲ್ಲಿ ಪಿಎಸ್‍ಐ ಸಮೀರ್ ಮುಲ್ಲಾ ಗಸ್ತು ನಿರ್ವಹಿಸದೇ ಮನೆಗೆ ಹೋಗಿದ್ದನ್ನು ಗಮನಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಎಸ್‍ಪಿ ವರ್ತಿಕಾ ಕಟಿಯಾರ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಮೀರ್ ಮುಲ್ಲಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

  • ಪೊಲೀಸರ ಜೊತೆ ಗಸ್ತು ತಿರುಗುತ್ತಿದ್ದಾರೆ ಪಬ್ಲಿಕ್ಸ್..!

    ಪೊಲೀಸರ ಜೊತೆ ಗಸ್ತು ತಿರುಗುತ್ತಿದ್ದಾರೆ ಪಬ್ಲಿಕ್ಸ್..!

    – ಇಲಾಖೆಯಿಂದ ಐಡಿ ಕಾರ್ಡ್ ಭರವಸೆ

    ಧಾರವಾಡ: ಸಾಮಾನ್ಯವಾಗಿ ನೀವು ಪೊಲೀಸರು ಗಸ್ತು ತಿರುಗುತ್ತಿರುವ ಬಗ್ಗೆ ಕೇಳಿದ್ದೀರಿ. ಪ್ರತಿದಿನ ರಾತ್ರಿ ಪೊಲೀಸರು ಗಸ್ತು ತಿರುಗುವುದು ಸರ್ವೇ ಸಾಮಾನ್ಯ ಕೂಡಾ. ಆದರೆ ಧಾರವಾಡದಲ್ಲಿ ಪೊಲೀಸರ ಜೊತೆ ಸಾರ್ವಜನಿಕರು ಕೂಡ ಗಸ್ತು ತಿರುಗುತ್ತಾರೆ.

    ಹೌದು.. ಇಂತಹ ಹೊಸ ಗಸ್ತು ನಿಮಯವನ್ನು ಪೊಲೀಸರು ಆರಂಭ ಮಾಡಿದ್ದಾರೆ. ಕಳ್ಳತನ ಹಾಗೂ ರಾತ್ರಿ ನಡೆಯುವ ಅನೈತಿಕ ಚಟುವಟಿಕೆ ತಡೆಗಟ್ಟಲು ಈ ಹೊಸ ಬೀಟ್ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಆರಂಭ ಮಾಡಿದೆ. ಸೈಕಲ್ ಇರುವ ಕೆಲ ಸೈಕ್ಲಿಸ್ಟ್ ಗಳು ಇವರ ಜೊತೆ ಕೈ ಜೋಡಿಸಿದರೆ, ಇನ್ನೊಂದು ಕಡೆ ಕೆಲ ಯುವಕರು ಕೂಡ ನಡೆದಾಡುತ್ತಲೇ ಗಸ್ತು ತಿರುಗುತ್ತಿದ್ದಾರೆ. ಪ್ರತಿ ದಿನ ರಾತ್ರಿ ಸುಮಾರು 12 ಗಂಟೆಗೆ ಈ ಗಸ್ತು ಆರಂಭ ಮಾಡಿ, ಬೆಳಗ್ಗಿನ ಜಾವ 3 ರಿಂದ 4.00 ಗಂಟೆಯವರೆಗೆ ಗಸ್ತು ತಿರುಗಲಾಗುತ್ತಿದೆ.

    ಪ್ರತಿದಿನ ಒಂದು ಬಡಾವಣೆಯಲ್ಲಿ ಓಡಾಡುವ ಈ ಗಸ್ತು ತಂಡಕ್ಕೆ ಮುಂದಿನ ದಿನಗಳಲ್ಲಿ ಐಡಿ ಕಾರ್ಡ್ ಕೂಡ ಮಾಡಿಸಿಕೊಡುವ ಭರವಸೆಯನ್ನು ಪೊಲೀಸ್ ಇಲಾಖೆ ನೀಡಿದೆ. ಸದ್ಯಕ್ಕೆ 50ಕ್ಕೂ ಹೆಚ್ಚು ಸೈಕ್ಲಿಸ್ಟ್ ಗಳು ಇದಕ್ಕೆ ಕೈ ಜೋಡಿಸಿದ್ದಾರೆ. ಅವರಲ್ಲಿ ಕೆಲವರು ವೈದ್ಯರು ಹಾಗೂ ಸರ್ಕಾರಿ ನೌಕರರು ಕೂಡ ಇದ್ದಾರೆ. ಇದರಿಂದ ನಾವು ಇಲ್ಲಿ ನಡೆಯುವ ಕಳ್ಳತನವನ್ನು ತಡೆಗಟ್ಟಬಹುದು. ಈ ಮೂಲಕ ಸಾರ್ವಜನಿಕರು ಮತ್ತು ಪೊಲೀಸರು ಒಟ್ಟಿಗೆ ಸೇರಿದರೆ ಏನು ಬೇಕಾದ್ರೂ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದೇವೆ ಎಂದು ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ಮುರುಗೇಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಗಳೂರು: ಗಸ್ತಿನಲ್ಲಿ ತಿರುಗುತ್ತಿದ್ದ ಎಎಸ್‍ಐ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

    ಮಂಗಳೂರು: ಗಸ್ತಿನಲ್ಲಿ ತಿರುಗುತ್ತಿದ್ದ ಎಎಸ್‍ಐ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

    ಮಂಗಳೂರು: ಉರ್ವಾ ಪೊಲೀಸ್ ಠಾಣೆ ಎಎಸ್‍ಐ ಮೇಲೆ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಹಲ್ಲೆ ನಡೆಸಿದ್ದಾರೆ. ಲೇಡಿಹಿಲ್ ಸರ್ಕಲ್ ಬಳಿ ಬೈಕಿನಲ್ಲಿ ಬಂದ ಇಬ್ಬರು, ರಾತ್ರಿ ಗಸ್ತಿನಲ್ಲಿದ್ದ ಐತಪ್ಪ ಅವರನ್ನು ಅಡ್ಡಗಟ್ಟಿ ಅವರ ತಲೆಗೆ ರಾಡ್‍ನಿಂದ ಹೊಡೆದು ಪರಾರಿಯಾಗಿದ್ದಾರೆ.

    ತೀವ್ರ ರಕ್ತಸ್ತ್ರವವಾಗಿ ಬಿದ್ದಿದ್ದ ಎಎಸ್‍ಐ ಐತಪ್ಪ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗ್ತಿದ್ದು ಚೇತರಿಸಿಕೊಂಡಿದ್ದಾರೆ.

    ಮಂಗಳವಾರದಂದು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ಎದುರು ಅನುಮತಿ ಇಲ್ಲದೆ ಪ್ರತಿಭಟಿಸಿದ್ದ ಪಿಎಫ್‍ಐ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ರು. ಈ ವೇಳೆ 7 ಮಂದಿ ಪೊಲೀಸ್ ಸೇರಿದಂತೆ ಹಲವು ಪ್ರತಿಭಟನಾಕಾರರಿಗೂ ಗಾಯಗಳಾಗಿತ್ತು. ಆದ್ರೆ ಪ್ರತಿಭಟನಾಕಾರರು ಪೊಲೀಸರು ದೌರ್ಜನ್ಯ ನಡೆಸಿದ್ದಾರೆ, ಅವರನ್ನ ಸುಮ್ಮನೆ ಬಿಡೋದಿಲ್ಲ ಎಂದು ಘೋಷಣೆ ಕೂಗಿದ್ದರು. ಹೀಗಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರಿಂದಲೇ ಎಎಸ್‍ಐ ಐತಪ್ಪ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಇದನ್ನೂ ಓದಿ: ಅನುಮತಿ ಇಲ್ಲದೇ ಮಂಗಳೂರಿನಲ್ಲಿ ಪ್ರತಿಭಟನೆ: ಪಿಎಫ್‍ಐ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.