Tag: ಗವಿಯಪ್ಪ

  • ಕ್ಷೇತ್ರದ ಅಭಿವೃದ್ಧಿಗೆ ಅನುದಾನವೇ ಸಿಗುತ್ತಿಲ್ಲ: ಸರ್ಕಾರದ ವಿರುದ್ಧವೇ ಕೈ ಶಾಸಕ ಗವಿಯಪ್ಪ ಆಕ್ರೋಶ

    ಕ್ಷೇತ್ರದ ಅಭಿವೃದ್ಧಿಗೆ ಅನುದಾನವೇ ಸಿಗುತ್ತಿಲ್ಲ: ಸರ್ಕಾರದ ವಿರುದ್ಧವೇ ಕೈ ಶಾಸಕ ಗವಿಯಪ್ಪ ಆಕ್ರೋಶ

    – ಜನರು ಕೇಳುವ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ
    – ಆನಂದ್‌ ಸಿಂಗ್‌ ತಂದ ಅನುದಾನಲ್ಲಿ ಒಂದೂವರೆ ವರ್ಷ ಕೆಲಸ

    ಬಳ್ಳಾರಿ: ಇಲ್ಲಿಯವರೆಗೆ ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡುತ್ತಿಲ್ಲ ಎಂದು ಬಿಜೆಪಿ ಶಾಸಕರು (BJP MLA’s) ಕಾಂಗ್ರೆಸ್‌ ಸರ್ಕಾರದ ವಿರುದ್ಧ ದೂರುತ್ತಿದ್ದರು. ಆದರೆ ಈಗ ಕಾಂಗ್ರೆಸ್‌ ಶಾಸಕರೇ ಅನುದಾನದ ವಿಚಾರವನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲು ಆರಂಭಿಸಿದ್ದಾರೆ.

    ನೀವು ಶಾಸಕರಾಗಿ ಎರಡು ವರ್ಷ ಆಗುತ್ತಾ ಬಂದಿದೆ. ಏನು ಕೆಲಸ ಮಾಡಿದ್ದೀರಿ ತೋರಿಸಿ ಎಂದು ಜನ ನನ್ನನ್ನು ಕೇಳುತ್ತಿದ್ದಾರೆ. ಆದರೆ ನನ್ನ ಕ್ಷೇತ್ರ ಅಭಿವೃದ್ಧಿ ಮಾಡಲು ಹಣ ಇಲ್ಲ. ನಮ್ಮದೇ ಸರ್ಕಾರ ಇದ್ದರೂ ಅನುದಾನ ಬಿಡುಗಡೆ  ಆಗುತ್ತಿಲ್ಲ ಎಂದು ವಿಜಯನಗರ (Vijayanagara) ಜಿಲ್ಲೆಯ ಹೊಸಪೇಟೆ (Hosapete) ಶಾಸಕ ಎಚ್ ಆರ್ ಗವಿಯಪ್ಪ (H. R. Gaviyappa) ತಮ್ಮದೇ ಸರ್ಕಾರದ ವಿರುದ್ದ ಸಿಟ್ಟು ಹೊರಹಾಕಿದ್ದಾರೆ. ಇದನ್ನೂ ಓದಿ: VRS ತೆಗೆದುಕೊಳ್ಳಿ ಅಥವಾ ವರ್ಗಾವಣೆಯಾಗಿ – ಹಿಂದೂಯೇತರ ಸಿಬ್ಬಂದಿ ಬೇಡ: ತಿರುಪತಿ ಬೋರ್ಡ್‌

    ಬೇರೆ ಬೇರೆ ಕಡೆ ಅನುದಾನ ಸಿಗುತ್ತಿದೆ. ಆದರೆ ನನ್ನ ಕ್ಷೇತ್ರಕ್ಕೆ KKRDB ಸೇರಿದಂತೆ ಯಾವ ಅನುದಾನವೂ ಸರಿಯಾಗಿ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಎಲ್ಲವನ್ನು ತಿಳಿದುಕೊಳ್ಳುವುದ್ದಕ್ಕೆ ಒಂದೂವರೆ ವರ್ಷ ಕಳೆದು ಬಿಟ್ಟೆ. ಇನ್ನು ಎಷ್ಟು ವರ್ಷ ಹೀಗೆ ಅನುದಾನವಿಲ್ಲದೇ ಇರಲು ಸಾಧ್ಯ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದರು.

    ಈ ಹಿಂದೆ ಇದ್ದ ಬಿಜೆಪಿ ಶಾಸಕ ಆನಂದ್ ಸಿಂಗ್ (Anand Singh) ತಂದ ಅನುದಾನದಲ್ಲಿಯೇ ಒಂದೂವರೆ ವರ್ಷ ಕೆಲಸ ನಡೆದಿದೆ. ಈಗಲಾದರೂ ನಮಗೆ ಕೆಲಸ ಮಾಡಲು ಅನುದಾನ ಬೇಕಲ್ವಾ? ಕೆಕೆಆರ್‌ಡಿಬಿಯಿಂದ ನೂತನ ವಿಜಯನಗರ ಜಿಲ್ಲೆಗೆ ಒಟ್ಟು 348 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.‌ ವಿಜಯನಗರ ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಿಗೆ 60, 70 ಕೋಟಿ ರೂ. ಅನುದಾನ ನೀಡಿದ್ದಾರೆ. ವಿಜಯನಗರ ಕ್ಷೇತ್ರಕ್ಕೆ ಕೇವಲ 22 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.ಅದರಲ್ಲಿ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ 12 ಕೋಟಿ ರೂ. ಅನುದಾನ ನೀಡಿದ್ದೇನೆ.‌ ಉಳಿದ 8 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರದಲ್ಲಿ ಏನು ಕೆಲಸ ಮಾಡಲು ಸಾಧ್ಯವಾಗುತ್ತೆ ಎಂದು ಪ್ರಶ್ನಿಸಿದ್ದಾರೆ.

     

    ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದವೂ ಅಸಮಾಧಾನ ಹೊರ ಹಾಕಿದ ಅವರು, ಜಿಲ್ಲೆಗೆ ಬರುವ ಅನುದಾನದಲ್ಲಿ ಜಿಲ್ಲಾ ಕೇಂದ್ರದ‌ ಅಭಿವೃದ್ಧಿಗೆ ಉಸ್ತುವಾರಿ ಸಚಿವರು 25% ರಷ್ಟು ಅನುದಾನ ಮೀಸಲಿಡಬೇಕು. ಅದು ಜಿಲ್ಲಾ ಉಸ್ತುವಾರಿ‌ ಸಚಿವರ ಕೈಯಲ್ಲಿ ಇರುತ್ತದೆ. ನಮ್ಮ ಜಿಲ್ಲಾ ಉಸ್ತುವಾರಿ ಜಮೀರ್‌ ಅಹ್ಮದ್‌ ಅವರು ಅದನ್ನು ಮಾಡಿಲ್ಲ. ಬೇಕಾದ್ರೆ ಅವರ ವಿವೇಚನೆಗೆ ಬಂದಂತೆ ಅನುದಾನ‌ ಬಳಸಲಿ. ನಾನು ಏನೂ ಕೇಳಲ್ಲ. ಒಟ್ಟಿನಲ್ಲಿ ನನ್ನ ಕ್ಷೇತ್ರದಲ್ಲಿ ಕೆಲಸ ಆಗಬೇಕು ಎಂದು ನೇರವಾಗಿಗೆ ಸಿಟ್ಟು ಹೊರ ಹಾಕಿದರು.

     

  • ಮೋದಿ, ಶಾ ಕಾರ್ಯವೈಖರಿ ಮೆಚ್ಚಿ ಬಿಜೆಪಿಗೆ ಕೈ ನಾಯಕರಾದ ಗವಿಯಪ್ಪ, ಕಾರ್ತಿಕೇಯ ಸೇರ್ಪಡೆ

    ಮೋದಿ, ಶಾ ಕಾರ್ಯವೈಖರಿ ಮೆಚ್ಚಿ ಬಿಜೆಪಿಗೆ ಕೈ ನಾಯಕರಾದ ಗವಿಯಪ್ಪ, ಕಾರ್ತಿಕೇಯ ಸೇರ್ಪಡೆ

    ನವದೆಹಲಿ/ಬಳ್ಳಾರಿ: ವಿಧಾನಸಭಾ ಚುನಾವಣೆ ಸಮಯ ಸಮೀಸುತ್ತಿದಂತೆ ಪಕ್ಷಾಂತರ ಪರ್ವ ಆರಂಭವಾಗಿದ್ದು, ಬಳ್ಳಾರಿ ಜಿಲ್ಲೆಯ ಗಣಿ ಉದ್ಯಮಿ, ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಗವಿಯಪ್ಪ, ಕಾರ್ತಿಕೇಯ ಘೋರ್ಪಡೆ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಇಂದು ದೆಹಲಿಯಲ್ಲಿ ಸಂಸದ ಶ್ರೀರಾಮುಲು ಅವರ ಜೊತೆ ಪಕ್ಷದ ಕಚೇರಿಗೆ ಆಗಮಿಸಿದ ಗವಿಯಪ್ಪ ಹಾಗೂ ಮಾಜಿ ಸಚಿವ ಎಂ.ವೈ. ಘೋರ್ಪಡೆ ಪುತ್ರರಾಗಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಾರ್ತಿಕೇಯ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್, ಕೇಂದ್ರ ಸಚಿವ ಅನಂತ್ ಕುಮಾರ್, ಸಚಿವ ಸದಾನಂದ ಗೌಡರ ಸಮಕ್ಷಮದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಪ್ರಕಾಶ ಜಾವೇಡ್ಕರ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.

    ಈ ವೇಳೆ ಮಾತನಾಡಿದ ಕಾರ್ತಿಕೇಯ ಘೋರ್ಪಡೆ, ಇತ್ತೀಚೆಗೆ ಕಾಂಗ್ರೆಸ್ ನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಬಳ್ಳಾರಿಯಲ್ಲಿ ಹಣದ ಬಲ ನಡೆಯುತ್ತಿದೆ. ಇದನ್ನು ಬದಲಾಯಿಸಲು ಬಿಜೆಪಿ ಸೇರಿದ್ದೇವೆ. ಮೋದಿ ಶಾ ಕಾರ್ಯವೈಖರಿಯನ್ನು ಮೆಚ್ಚಿ ಬಿಜೆಪಿಗೆ ಬಂದಿದ್ದೇವೆ. ಈ ಹಿಂದೆ ಬಳ್ಳಾರಿಯಲ್ಲಿ ಕಾಂಗ್ರೆಸಿಗೆ ಭದ್ರ ಬುನಾದಿ ನಿರ್ಮಿಸಿದ್ದೆವು. ಈ ಬಾರಿ ನಮ್ಮ ಬಲವನ್ನು ಫಲಿತಾಂಶದಲ್ಲಿ ಪ್ರದರ್ಶಿಸುತ್ತೇವೆ. ಬಳ್ಳಾರಿಯ 9 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದರು.

    ಕಳೆದ ಕೆಲ ದಿನಗಳ ಹಿಂದೆ ಶಾಸಕ ಆನಂದ್ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಇದರಿಂದ ಬಳ್ಳಾರಿ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ಹೊಗೆ ಕಾಣಿಸಿಕೊಂಡಿತ್ತು. ಇದರ ಬೆಳವಣಿಗೆ ಎಂಬಂತೆ ಕಾಂಗ್ರೆಸ್ ನಾಯಕರಾದ ಗವಿಯಪ್ಪ ಮತ್ತು ಕಾರ್ತಿಕೇಯ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

    ಶಾಸಕ ಆನಂದ್ ಸಿಂಗ್ ಅವರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವಿಚಾರದಲ್ಲಿ ಪಕ್ಷ ಹೈಕಮಾಂಡ್ ಸಂಪೂರ್ಣವಾಗಿ ಗವಿಯಪ್ಪ ಅವರ ಅಭಿಪ್ರಾಯವನ್ನು ಕಡೆಗಣಿಸಿದ ಕಾರಣ ಪಕ್ಷ ನಾಯಕರ ಕುರಿತು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳೆರಡು ಗವಿಯಪ್ಪ ಅವರಿಗೆ ಪಕ್ಷಕ್ಕೆ ಆಹ್ವಾನ ನೀಡಿತ್ತು.

    ಮೊದಲ ಬಾರಿಗೆ ಎಸ್ ಎಂ ಕೃಷ್ಣ ಸಿಎಂ ಆಗಿದ್ದ ವೇಳೆ ಹೊಸಪೇಟೆ ಬಳ್ಳಾರಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಪಡೆದಿದ್ದ ಗವಿಯಪ್ಪ ಅವರು ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬಳ್ಳಾರಿಯಲ್ಲಿ ಇವರ ಕುಟುಂಬ ಎಚ್‍ಆರ್ ಜಿ ಕುಟುಂಬ ಎಂದೇ ಹೆಸರು ಪಡೆದಿದ್ದು, ಗಣಿ ಉದ್ಯಮಿಗಳಾಗಿದ್ದಾರೆ. ಇವರ ಕುಟುಂಬದಿಂದ ಎಸ್‍ಜಿ ರಾಮುಲು ಅವರು ಐದು ಬಾರಿ ಕೊಪ್ಪಳ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಗವಿಯಪ್ಪ ಅವರ ತಾತ ಬಸವರಾಜು ಅವರು ರಾಜ್ಯಸಭಾ ಸದಸ್ಯರು, ಎಚ್ ಜಿ ಶ್ರೀನಾಥ್ ಎಂಎಲ್‍ಸಿ ಯಾಗಿದ್ದರು. ಗಂಗಾವತಿಯಲ್ಲಿ ನಾರಾಯಣಸ್ವಾಮಿ ಎಂಎಲ್‍ಎ ಆಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ ಕುಟುಂಬಕ್ಕೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಭದ್ರಬುನಾದಿ ನಿರ್ಮಿಸಿತ್ತು. ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರಿಗೆ ಸಿದ್ದರಾಮಯ್ಯ ಅವರನ್ನು ಗವಿಯಪ್ಪ ಪರಿಚಯಿಸಿದ್ದರು.

    ಬಳ್ಳಾರಿ ಹೊಸಪೇಟೆ ಭಾಗದಲ್ಲಿ ಪ್ರಮುಖ ನಾಯಕರಾಗಿದ್ದ ಮಾಜಿ ಸಚಿವ ದಿವಂಗತ ಎಂ.ವೈ. ಘೋರ್ಪಡೆ ಪುತ್ರ, ಕಾರ್ತಿಕೇಯ ಅವರು ಸಂಡೂರು ಘೋರ್ಪಡೆ ರಾಜನಮನೆತನದವರಾಗಿದ್ದಾರೆ.