Tag: ಗಲ್ವಾನ್ ವ್ಯಾಲಿ

  • ಚೀನಾ-ಭಾರತ ಸಂಘರ್ಷ: ಹುತಾತ್ಮರಾದ 20 ಯೋಧರ ಸ್ಮಾರಕ ಗಲ್ವಾನ್ ವ್ಯಾಲಿಯಲ್ಲೇ ನಿರ್ಮಾಣ

    ಚೀನಾ-ಭಾರತ ಸಂಘರ್ಷ: ಹುತಾತ್ಮರಾದ 20 ಯೋಧರ ಸ್ಮಾರಕ ಗಲ್ವಾನ್ ವ್ಯಾಲಿಯಲ್ಲೇ ನಿರ್ಮಾಣ

    ಲಡಾಖ್: ಚೀನಾ-ಭಾರತದ ಸಂಘರ್ಷದ ವೇಳೆ ಹುತಾತ್ಮರಾದ 20 ವೀರ ಯೋಧರ ನೆನಪಿಗಾಗಿ ಅಂತರಾಷ್ಟ್ರೀಯ ಗಡಿಯ ಹತ್ತಿರವೇ ಸ್ಮಾರಕ ನಿಮಾರ್ಣ ಮಾಡಲಾಗಿದೆ.

    ಗಲ್ವಾನ್ ವ್ಯಾಲಿಯಲ್ಲಿ ಭಾರತ-ಚೀನಾ ಸಂಘರ್ಷದ ವೇಳೆ ಯೋಧರು ಹುತಾತ್ಮರಾಗಿ ಸುಮಾರು ನಾಲ್ಕು ತಿಂಗಳು ಕಳೆದಿದ್ದು, ಇದೀಗ ಸೇನೆಯಿಂದ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಸಂಘರ್ಷದ ವೇಳೆ ವೀರ ಮರಣ ಅಪ್ಪಿದ ಕೆಚ್ಚೆದೆಯ 20 ಸೈನಿಕ ನೆನಪಿಗಾಗಿ ಅಂತರಾಷ್ಟ್ರೀಯ ಗಡಿಯ ಬಳಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಚೈನೀಸ್ ಪೀಪಲ್ಸ್ ಲಿಬರೇಶನ್ ಆರ್ಮಿ ವಿರುದ್ಧ ಸೆಣಸಾಟದಲ್ಲಿ ಗಲ್ವಾನ್ ವ್ಯಾಲಿ ಬಳಿ ಜೂನ್ 15-16ರ ರಾತ್ರಿ ನಡೆದ ಸಂಘರ್ಷದ ವೇಳೆ ಯೋಧರು ಹುತಾತ್ಮರಾಗಿದ್ದಾರೆ. ವೈ-ಜಂಕ್ಷನ್ ಬಳಿಯ ಅಬ್ಸರ್ವೇಶನ್ ಪೋಸ್ಟ್ ಬಳಿ ಅತಿಕ್ರಮಿಸುತ್ತಿದ್ದ ಚೀನಿ ಸೈನಿಕರನ್ನು ಹೊರಹಾಕುವ ಸಂದರ್ಭದಲ್ಲಿ ಘರ್ಷಣೆ ನಡೆದಿತ್ತು. ಈ ವೇಳೆ 20 ಯೋಧರು ಹುತಾತ್ಮರಾಗಿದ್ದರು.

    ಲಡಾಖ್‍ನ ಡರ್ಬುಕ್, ಶ್ಯೋಕ್ ಮತ್ತು ದೌಲತ್ ಬೇಗ್ ಓಲ್ಡಿ ಸಂಪರ್ಕಿಸುವ ಕಾರ್ಯತಂತ್ರದ ರಸ್ತೆಯಲ್ಲಿನ ಕೆಎಂ-120 ಪೋಸ್ಟ್ ಬಳಿಯ ಯುನಿಟ್ ಲೆವೆಲ್ ಬಳಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ಎಲ್ಲ 20 ಸೈನಿಕರ ಹೆಸರು ಹಾಗೂ ಜೂನ್ 15ರ ಕಾರ್ಯಾಚರಣೆಯ ವಿವರಗಳನ್ನು ಈ ಸ್ಮಾರಕ ಒಳಗೊಂಡಿದೆ.

    ಭಾರತ-ಚೀನಾದ ಸೈನಿಕರ ನಡುವೆ ಜೂನ್ 15ರ ರಾತ್ರಿ ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಮ್ಮ ಸೇನೆಯ 20 ಯೋಧರು ಹುತಾತ್ಮರಾಗಿದ್ದರು. ಈ ಯೋಧರಲ್ಲಿ ಗರಿಷ್ಠ 13 ಮಂದಿ ಬಿಹಾರದ ಎರಡು ವಿಭಿನ್ನ ರೆಜಿಮೆಂಟ್‍ಗಳಿಂದ ಬಂದವರಾಗಿದ್ದರು. ಹುತಾತ್ಮ ಕರ್ನಲ್ ಸಂತೋಷ್ ಬಾಬು ಅವರು ಕೂಡ ಬಿಹಾರ್ ರೆಜಿಮೆಂಟ್‍ನವರಾಗಿದ್ದರು.

    ಹುತಾತ್ಮ ಯೋಧರು
    ಕರ್ನಲ್ ಬಿ. ಸಂತೋಷ್ ಬಾಬು, ಹವಾಲ್ದಾರ್ ಸುನಿಲ್ ಕುಮಾರ್, ಕಾನ್ಸ್‌ಟೇಬಲ್‌ ಕುಂದನ್ ಕುಮಾರ್, ಕಾನ್ಸ್‍ಟೇಬಲ್ ಅಮನ್ ಕುಮಾರ್, ದೀಪಕ್ ಕುಮಾರ್, ಕಾನ್ಸ್‍ಟೇಬಲ್ ಚಂದನ್ ಕುಮಾರ್, ಕಾನ್ಸ್‌ಟೇಬಲ್‌ ಗಣೇಶ ಕುಂಜಮ್, ಕಾನ್ಸ್‌ಟೇಬಲ್ ಗಣೇಶ ರಾಮ್, ಕಾನ್ಸ್‌ಟೇಬಲ್ ಕೆ.ಕೆ. ಓಜಾ, ಕಾನ್ಸ್‍ಟೇಬಲ್ ರಾಜೇಶ್ ಒರಾನ್, ಸಿಪಾಯಿ ಸಿ.ಕೆ.ಪ್ರಧಾನ್, ನಾಯಬ್ ಸುಬೇದಾರ್ ನಂದುರಾಮ್, ಕಾನ್ಸ್‌ಟೇಬಲ್ ಗುರ್ತೇಜ್ ಸಿಂಗ್, ಸಿಪಾಯಿ ಅಂಕುಷ್, ಕಾನ್ಸ್‌ಟೇಬಲ್ ಗುರ್ವಿಂದರ್ ಸಿಂಗ್, ನಾಯಬ್ ಸುಬೇದಾರ್ ಸತ್ನಮ್ ಸಿಂಗ್, ನಾಯಬ್ ಸುಬೇದಾರ್ ಮಂದೀಪ್ ಸಿಂಗ್, ಕಾನ್ಸ್‍ಟೇಬಲ್ ಜೈಕಿಶೋರ್ ಸಿಂಗ್, ಹವಾಲ್ದಾರ್ ಬಿಪುಲ್ ರಾಯ್, ಹವಾಲ್ದಾರ್ ಕೆ.ಪಳನಿ ಹುತಾತ್ಮ ಯೋಧರಾಗಿದ್ದಾರೆ. ಇವರೆಲ್ಲರ ಹೆಸರು ಹಾಗೂ ಘಟನೆಯ ಮಾಹಿತಿಯನ್ನು ಸ್ಮಾರಕದ ಮೇಲೆ ಕೆತ್ತಲಾಗಿದೆ.

  • ಚೀನಾದಿಂದ ಕುತಂತ್ರದ ಮೇಲೆ ಕುತಂತ್ರ- ಎಲ್‍ಎಸಿ ಬಳಿ ಶಸ್ತ್ರಸಜ್ಜಿತ ಯೋಧರ ಜಮಾವಣೆ

    ಚೀನಾದಿಂದ ಕುತಂತ್ರದ ಮೇಲೆ ಕುತಂತ್ರ- ಎಲ್‍ಎಸಿ ಬಳಿ ಶಸ್ತ್ರಸಜ್ಜಿತ ಯೋಧರ ಜಮಾವಣೆ

    – ಶಸ್ತ್ರ, ದೊಡ್ಡ ಮೊಳೆಗಳ ರಾಡ್ ಹಿಡಿದು ನಿಂತಿರುವ ಚೀನಿ ಸೇನೆ

    ಲೇಹ್: ಗಡಿ ವಾಸ್ತವ ರೇಖೆ(ಎಲ್‍ಎಸಿ) ಬಳಿ ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಚೀನಿ ಸೈನಿಕರು ಪುಂಡಾಟಿಕೆ ಮೆರೆಯುತ್ತಿದ್ದಾರೆ. ಇದೀಗ ಆಘಾತಕಾರಿ ಚಿತ್ರಗಳು ಸಿಕ್ಕಿದ್ದು, ಎಲ್‍ಎಸಿ ಉದ್ದಕ್ಕೂ ಚೀನಿ ಸೇನೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ದೊಡ್ಡ ಮಟ್ಟದ ಮೊಳೆಗಳನ್ನು ಹೊಂದಿರುವ ರಾಡ್‍ಗಳನ್ನು ಹಿಡಿದು ನಿಂತಿದೆ. ಈ ಚಿತ್ರಗಳು ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಚೀನಿ ಸೈನಿಕರು ಎಲ್‍ಎಸಿಯುದ್ದಕ್ಕೂ ಶಸ್ತ್ರಾಸ್ತ್ರ ಹಾಗೂ ರಾಡ್‍ಗಳನ್ನು ಹಿಡಿದು ಪೂರ್ವ ಲಡಾಖ್ ಭಾಗದಲ್ಲಿ ಜಮಾವಣೆಯಾಗಿರುವ ಫೋಟೋಗಳು ಇದೀಗ ಲಭ್ಯವಾಗಿವೆ. ಭಾರತ ಹಾಗೂ ಚೀನಾ ಮಧ್ಯೆ ಗಡಿ ವಿಚಾರದಲ್ಲಿ ಹಲವು ಸಂಘರ್ಷಗಳ ಮಧ್ಯೆ ಇದೀಗ ಚಿತ್ರಗಳು ಸಿಕ್ಕಿವೆ.

    ಚೀನಿ ಸೇನೆ ದೊಡ್ಡ ಪ್ರಮಾಣದ ಹರಿತವಾದ ಉಗುರು(ಮೊಳೆ)ಗಳುಳ್ಳ ರಾಡ್‍ಗಳನ್ನು ಹಿಡಿದು ನಿಂತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಬಂದೂಕು ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳಿರುವುದನ್ನು ಕಾಣಬಹುದಾಗಿದೆ. ಚೀನಾ ಕುತಂತ್ರ ನಡೆಸಲು ತಯಾರಿ ನಡೆಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ರಾಡ್‍ಗಳನ್ನು ಸಂಗ್ರಹಿಸುತ್ತಿದೆ. ಆದರೆ ಅವರು ಹತ್ತಿರ ಬಾರದಂತೆ ಭಾರತೀಯ ಸೇನೆ ಕಟ್ಟಿ ಹಾಕಿದೆ. ಹೀಗಾಗಿ ಗಲ್ವಾನ್ ವ್ಯಾಲಿಯಲ್ಲಿ ದಾಳಿ ಮಾಡಿದ ರೀತಿ ಮತ್ತೊಂದು ದಾಳಿ ನಡೆಸಲು ಚೀನಾ ಸಂಚು ರೂಪಿಸುತ್ತಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

    ಕಳೆದ ಜೂನ್‍ನಲ್ಲಿ ಗಲ್ವಾನ್ ವ್ಯಾಲಿಯಲ್ಲಿ ನಡೆದ ಘರ್ಷಣೆ ಸಂದರ್ಭದಲ್ಲಿ ಸಹ ಚೀನಾ ಸೈನಿಕರು ಇಂತಹದ್ದೇ ರಾಡ್‍ಗಳನ್ನು ಬಳಸಿದ್ದರು. ಚೀನಾ ಸೈನಿಕರ ದಾಳಿಯಿಂದಾಗಿ ಕರ್ನಲ್ ಸಂತೋಷ್ ಬಾಬು ಸೇರಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಲ್ಲದೆ ಭಾರತೀಯ ಸೈನಿಕರು ನಡೆಸಿದ ಪ್ರತಿ ದಾಳಿಗೆ ಚೀನಾದ ಹಲವು ಸೈನಿಕರು ಸಹ ಸಾವನ್ನಪ್ಪಿದ್ದರು. ಆದರೆ ಚೀನಾ ಈ ಕುರಿತು ಬಾಯ್ಬಿಟ್ಟಿರಲಿಲ್ಲ.

    ಗಲ್ವಾನ್ ವ್ಯಾಲಿ, ಹಾಟ್ ಸ್ಪ್ರಿಂಗ್ಸ್ ಹಾಗೂ ಕೊಂಗ್ರಂಗ್ ನಾಲೆ ಪ್ರದೇಶ ಸೇರಿದಂತೆ ವಿವಿಧ ಭಾಗಗಳಲ್ಲಿ ಚೀನಾ ಸೇನೆ ನಿಯಮ ಉಲ್ಲಂಘಿಸಿ ಅತಿಕ್ರಮಣ ಮಾಡುತ್ತಿದೆ. ಹೀಗಾಗಿ ಏಪ್ರಿಲ್-ಮೇ ತಿಂಗಳಿಂದ ಭಾರತ ಹಾಗೂ ಚೀನಾ ಮಧ್ಯೆ ಸಂಘರ್ಷ ನಡೆಯುತ್ತಿದೆ.

  • ಚೀನಾ ಪುಂಡಾಟಕ್ಕೆ ಭಾರತ ತಕ್ಕ ಉತ್ತರ ನೀಡಿದೆ- ಅಮೆರಿಕ ವಿದೇಶಾಂಗ ಕಾರ್ಯದರ್ಶಿ

    ಚೀನಾ ಪುಂಡಾಟಕ್ಕೆ ಭಾರತ ತಕ್ಕ ಉತ್ತರ ನೀಡಿದೆ- ಅಮೆರಿಕ ವಿದೇಶಾಂಗ ಕಾರ್ಯದರ್ಶಿ

    ನವದೆಹಲಿ: ಚೀನಾದ ಆಕ್ರಮಣಕಾರಿ ಕ್ರಮಗಳಿಗೆ ಭಾರತ ತಕ್ಕ ಉತ್ತರ ನೀಡಿದ್ದು, ಇಂತಹ ಗೊಡ್ಡು ಬೆದರಿಕೆಗಳಿಗೆ ಜಗತ್ತು ಆಸ್ಪದ ಕೊಡಬಾರದು ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಭಾರತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಚೀನಾ ಗಡಿ ವಿವಾದಗಳನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದು ವಿಶ್ವ ಇದಕ್ಕೆ ಆಸ್ಪದ ಕೊಡಬಾರದು. ಅಲ್ಲದೆ ಚೀನಾದ ಆಕ್ರಮಣಕಾರಿ ಕ್ರಮಗಳಿಗೆ ಭಾರತ ತಕ್ಕ ಉತ್ತರ ನೀಡಿದೆ ಎಂದು ಶ್ಲಾಘಿಸಿದ್ದಾರೆ.

    ಚೀನಾದ ಆಕ್ರಮಣಕಾರಿ ಕ್ರಮಗಳ ಕುರಿತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಬಳಿ ಹಲವು ಬಾರಿ ಚರ್ಚಿಸಿದ್ದೇನೆ. ಚೀನಿಯರು ನಂಬಲಾಗದಷ್ಟು ಆಕ್ರಮಣಕಾರಿ ಕ್ರಮಗಳನ್ನು ಕೈಗೊಂಡರು. ಭಾರತ ಅದಕ್ಕೆ ತಕ್ಕ ಉತ್ತರ ನೀಡಿದೆ. ಚೀನಾದ ಪ್ರಧಾನ ಕಾರ್ಯದರ್ಶಿ ಕ್ಸಿ ಜಿನ್‍ಪಿಂಗ್ ನಡೆ ಹಾಗೂ ಗಡಿ ಪ್ರದೇಶದಲ್ಲಿನ ಅವರ ವರ್ತನೆ ಪ್ರಪಂಚದಾದ್ಯಂತ ವಿಸ್ತರಿಸಿದೆ. ಚೀನೀಯ ಕಮ್ಯೂನಿಸ್ಟ್ ಪಾರ್ಟಿಯ ಆಕ್ರಮಣಶೀಲತೆಯನ್ನು ನಾವು ಪ್ರತ್ಯೇಕವಾಗಿ ನೋಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಇದನ್ನು ನೀವು ದೊಡ್ಡ ಸನ್ನಿವೇಶದಲ್ಲಿ ಚರ್ಚಿಸಬೇಕು ಎಂದು ಭಾರತಕ್ಕೆ ಸಲಹೆ ನೀಡಿದ್ದಾರೆ.

    ಜಗತ್ತು ಇಂತಹ ಬೆದರಿಕೆಗಳನ್ನು ಹೆದರಬಾರದು. ಅಲ್ಲದೆ ಇಂತಹ ಕೃತ್ಯವನ್ನು ಮುಂದುವರಿಸಲು ಬಿಡಬಾರದು. ಚೀನಾದ ಕಮ್ಯುನಿಸ್ಟ್ ಪಕ್ಷ ಈ ಕೃತ್ಯಗಳಿಗೆ ತಕ್ಕ ಪ್ರತಿಕ್ರಿಯೆ ನೀಡಲು ಜಗತ್ತು ಒಟ್ಟಾಗಬೇಕು. ಇದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ.

    ಲಡಾಕ್‍ನ ಗಲ್ವಾನ್ ವ್ಯಾಲಿಯಲ್ಲಿ ನಡೆದ ಭಾರತೀಯ ಸೇನೆ ಹಾಗೂ ಚೀನಾ ಮಧ್ಯೆ ನಡೆದ ಗುಂಡಿನ ಚಕಮಕಿ ವೇಳೆ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ. ಇದಾದ ಬಳಿಕ ಎರಡೂ ದೇಶಗಳು ತಮ್ಮ ಗಡಿ ಪ್ರದೇಶದಲ್ಲಿ ಅಪಾರ ಸಂಖ್ಯೆಯಲ್ಲಿ ಸೇನೆಯನ್ನು ಜಮಾವಣೆ ಮಾಡಿದ್ದವು. ಎಲ್‍ಎಸಿ ಸುತ್ತ ಅಪಾರ ಪ್ರಮಾಣದ ಸೇನೆಯನ್ನು ಜಮಾವಣೆ ಮಾಡಲಾಗಿತ್ತು. ಹೀಗಾಗಿ ಯುದ್ಧದ ಭೀತಿ ಎದುರಾಗಿತ್ತು.

    ಇದಾದ ಬಳಿಕ ಭಾನುವಾರವಷ್ಟೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಉನ್ನತ ಮಟ್ಟದ ಸುದೀರ್ಘ ಮಾತುಕತೆ ನಡೆದಿತ್ತು. ಅಲ್ಲದೆ ದೋವಲ್ ಹಾಗೂ ವಾಂಗ್ ಭಾರತ ಹಾಗೂ ಚೀನಾದ ವಿಶೇಷ ಪ್ರತಿನಿಧಿಗಳಾಗಿ ಸಭೆ ನಡೆಸಿದ್ದರು. ಇದಾದ ಬಳಿಕ ಇದೀಗ ಚೀನಾ ಸೇನೆ ಗಡಿಯಿಂದ ಹಿಂದೆ ಸರಿಯುತ್ತಿದೆ.

  • ಡಿಜಿಟಲ್ ಸ್ಟ್ರೈಕ್ ಸಹ ಮಾಡಬಹುದು ಎಂಬುದನ್ನು ತೋರಿಸಿದ್ದೇವೆ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

    ಡಿಜಿಟಲ್ ಸ್ಟ್ರೈಕ್ ಸಹ ಮಾಡಬಹುದು ಎಂಬುದನ್ನು ತೋರಿಸಿದ್ದೇವೆ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

    ನವದೆಹಲಿ: ಚೀನಾದ 59 ಆ್ಯಪ್‍ಗಳನ್ನು ನಿಷೇಧಿಸುವ ಮೂಲಕ ಭಾರತ ಡಿಜಿಟಲ್ ಸ್ಟ್ರೈಕ್ ಕೂಡ ಮಾಡಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಭಾರತೀಯ ಪ್ರಜೆಗಳ ವೈಯಕ್ತಿಕ ಡಾಟಾ ರಕ್ಷಿಸುವ ಉದ್ದೇಶದಿಂದ ಆ್ಯಪ್‍ಗಳನ್ನು ಬ್ಯಾನ್ ಮಾಡಿದ್ದೇವೆ. ಭಾರತದ ಸಾರ್ವಭೌಮತ್ವ, ಭದ್ರತೆ ಕಾಪಾಡುವುದು ಹಾಗೂ ದೇಶದ ಜನತೆಯ ಡಿಜಿಟಲ್ ಸೆಕ್ಯೂರಿಟಿ, ಪ್ರೈವೆಸಿ ಉದ್ದೇಶದಿಂದ ಟಿಕ್ ಟಾಕ್ ಸೇರಿ 59 ಆ್ಯಪ್‍ಗಳನ್ನು ನಿಷೇಧಿಸಿದ್ದೇವೆ ಎಂದು ತಿಳಿಸಿದ್ದಾರೆ.

    ನಮ್ಮ ಸೈನಿಕರು ಹಾಗೂ ದೇಶದ ಜನತೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ಭಾರತಕ್ಕೆ ತಿಳಿದಿದೆ. ಹೀಗಾಗಿ ಡಿಜಿಟಲ್ ಸ್ಟ್ರೈಕ್ ಕೂಡ ಮಾಡಬಹುದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ. ಭಾರತ ಶಾಂತಿ ಬಯಸುತ್ತದೆ. ಆದರೆ ಯಾರಾದರೂ ಕೆಟ್ಟ ಕಣ್ಣು ಹಾಕಿದರೆ, ಕೆಣಕಿದರೆ ತಕ್ಕ ಉತ್ತರ ಕೊಡದೆ ಬಿಡುವುದಿಲ್ಲ ಎಂದು ರವಿಶಂಕರ್ ಪ್ರಸಾದ್ ಎಚ್ಚರಿಸಿದ್ದಾರೆ.

    ಕೇಂದ್ರ ಸರ್ಕಾರ ಟಿಕ್ ಟಾಕ್, ಯುಸಿ ಬ್ರೌಸರ್ ಸೇರಿದಂತೆ ಚೀನಾ ಮೂಲದ 59 ಆ್ಯಪ್‍ಗಳನ್ನು ಇತ್ತೀಚೆಗೆ ನಿಷೇಧಿಸಿದೆ. ಭಾರತದ ಸಾರ್ವಭೌಮತ್ವ, ಸಮಗ್ರತೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಆ್ಯಪ್‍ಗಳನ್ನು ನಿಷೇಧಿಸಿರುವುದಾಗಿ ತಿಳಿಸಿದೆ. 59 ಆ್ಯಪ್‍ಗಳ ಪಟ್ಟಿಯಲ್ಲಿ ಹೆಲೋ, ಲೈಕೀ, ಕ್ಯಾಮ್ ಸ್ಕ್ಯಾನರ್, ವಿಗೋ ವಿಡಿಯೋ, ಎಂಐ ವಿಡಿಯೋ ಕಾಲ್ ಕ್ಸಿಯೋಮಿ, ಕ್ಲ್ಯಾಶ್ ಆಫ್ ಕಿಂಗ್ಸ್, ಕ್ಲಬ್ ಫ್ಯಾಕ್ಟರಿ ಸೇರಿದಂತೆ ಒಟ್ಟು 59 ಆ್ಯಪ್‍ಗಳನ್ನು ಬ್ಯಾನ್ ಮಾಡಿದೆ.

    ಗಾಲ್ವಾನ್ ವ್ಯಾಲಿಯಲ್ಲಿ ಕುದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ಚೀನಾ ಹಾಗೂ ಭಾರತದ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಭಾರತ ಚೀನಿ ಆ್ಯಪ್‍ಗಳನ್ನು ಬ್ಯಾನ್ ಮಾಡಿದೆ.

  • ಸುದೀರ್ಘ 11 ಗಂಟೆಗಳ ಸಭೆ ಯಶಸ್ವಿ- ಗಡಿಯಿಂದ ಹಿಂದೆ ಸರಿಯಲು ಚೀನಾ ಸೇನೆ ಒಪ್ಪಿಗೆ

    ಸುದೀರ್ಘ 11 ಗಂಟೆಗಳ ಸಭೆ ಯಶಸ್ವಿ- ಗಡಿಯಿಂದ ಹಿಂದೆ ಸರಿಯಲು ಚೀನಾ ಸೇನೆ ಒಪ್ಪಿಗೆ

    – ಪಾಂಗೊಂಗ್ ಸರೋವರದ ಬಳಿ ಸುಧಾರಿಸದ ಪರಿಸ್ಥಿತಿ
    – ಚೀನಾ ನಂಬೋದು ಕಷ್ಟ, ಗಡಿಯಲ್ಲಿ ಯಥಾ ಸ್ಥಿತಿ ಕಾಯ್ದುಕೊಂಡ ಭಾರತ

    ನವದೆಹಲಿ: ಸುಧೀರ್ಘ 11 ಗಂಟೆಗಳ ಸಭೆ ಬಳಿಕ ವಾಸ್ತವ ಗಡಿ ರೇಖೆಯಿಂದ ಹಿಂದೆ ಸರಿಯಲು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಒಪ್ಪಿಕೊಂಡಿದ್ದು, ಮಂಗಳವಾರ ನಡೆದ ಸಭೆ ಭಾಗಶಃ ಯಶಸ್ವಿಯಾಗಿದೆ ಎಂದು ಭಾರತೀಯ ಸೇನಾ ಮೂಲಗಳು ಹೇಳಿವೆ.

    ಜೂನ್ 15ರಂದು ಪೂರ್ವ ಲಡಾಕ್‍ನ ಗಡಿ ಪ್ರದೇಶದಲ್ಲಿ ಸೈನಿಕರ ನಡುವೆ ಸಂಘರ್ಷದ ಬಳಿಕ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರಣಿ ಸಭೆಗಳು ನಡೆಯುತ್ತಿದ್ದು, ಮಂಗಳವಾರ ಲಡಾಕ್‍ನ ಚುಶುಲ್ ಪ್ರದೇಶದಲ್ಲಿ ಮೂರನೇ ಹಂತದ ಮಿಲಿಟರಿ ಮಾತುಕತೆ ನಡೆಯಿತು. ಭಾರತದಿಂದ ಲೆಫ್ಟಿನೆಂಟ್ ಜನರಲ್ ಹರೇಂದ್ರ ಸಿಂಗ್ ಮತ್ತು ಚೀನಾ ಸೇನೆ ಪರ ಮೇಜರ್ ಜನರಲ್ ಲಿಯು ಲೀನ್ ಭಾಗಿಯಾಗಿದ್ದರು. ಉದ್ವಿಗ್ನತೆಯಲ್ಲಿರುವ ಭಾರತ- ಚೀನಾ ಗಡಿ ಪ್ರದೇಶದಲ್ಲಿ ಶಾಂತಿ ಕಾಪಡಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ಸಭೆಯಲ್ಲಿ ನಡೆದಿದೆ ಎನ್ನಲಾಗಿದೆ.

    ಬೆಳಗ್ಗೆ 10.30ಕ್ಕೆ ಆರಂಭವಾಗಿದ್ದ ಸಭೆ ರಾತ್ರಿ ಹನ್ನೊಂದು ಗಂಟೆವರೆಗೂ ನಡೆದಿದ್ದು, ಸುಧೀರ್ಘ ಹನ್ನೊಂದು ಗಂಟೆಗಳ ಬಳಿಕ ಭಾರತದ ಆಕ್ರಮಿತ ಪ್ರದೇಶ ಹಾಗೂ ವಾಸ್ತವ ಗಡಿ ರೇಖೆಯಿಂದ ಹಿಂದೆ ಸರಿಯಲು ಚೀನಾ ಸೇನೆ ಒಪ್ಪಿಕೊಂಡಿದೆ ಎಂದು ಮೂಲಗಳ ಹೇಳಿವೆ.

    ಗಲ್ವಾನ್ ಕಣಿವೆಯಲ್ಲಿರುವ ಪಾಯಿಂಟ್ ನಂಬರ್ 14,15 ಹಾಗೂ 17ರಿಂದ ಸೇನೆ ಹಿಂದೆ ಪಡೆಯಲು ಹಾಗೂ ಗಡಿ ಪ್ರದೇಶ ಎಂದು ವಾದಿಸುತ್ತಿರುವ ಭಾರತದ ವಿವಾದಿತ ಪ್ರದೇಶದಿಂದಲೂ ಹಿಂದೆ ಸರಿಯಲು ಮೇಜರ್ ಜನರಲ್ ಲಿಯು ಲೀನ್ ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಭಾರತ ಅಥಾವ ಚೀನಾ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

    ಈ ನಡುವೆ ಮೇ 5 ರಂದು ನಡೆದ ಹಿಂಸಾತ್ಮಕ ಘರ್ಷಣೆಯ ಮೂಲ ಪಾಂಗೊಂಗ್ ಸರೋವರದ ಬಳಿ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಇನ್ನೂ ಎರಡು ಸೇನೆಗಳು ಮುಖಾಮುಖಿಯಲ್ಲಿದ್ದು. ಮಾತುಕತೆ ಬಳಿಕ ಈ ತೀವ್ರತೆ ಕಡಿಮೆ ಮಾಡಬಹುದು ಎನ್ನಲಾಗಿದೆ. ಆದರೆ ಚೀನಾ ಸೇನೆ ಮಾತ್ರ ಈವರೆಗೂ ಪಾಂಗೊಂಗ್ ಸರೋವರದ ಬಳಿ ಹಿಂದೆ ಸರಿದಿಲ್ಲ.

    ಚೀನಾ ನಂಬುವುದು ಕಷ್ಟ
    ಮಾತುಕತೆ ಬಳಿಕವೂ ಭಾರತೀಯ ಸೇನೆ ತಮ್ಮ ಪಡೆಗಳನ್ನು ಹಿಂದೆ ಪಡೆದುಕೊಂಡಿಲ್ಲ. ಗಡಿಯಲ್ಲಿ ಯಥಾಸ್ಥಿತಿಯನ್ನು ಮುಂದುವರಿಸುವುದಾಗಿ ಸೇನಾ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಕಾರಣ ಹಿಂದೆ ನಡೆದ ಎರಡು ಮಾತುಕತೆಯಲ್ಲೂ ಚೀನಾ ಮಾತುಕತೆ ಒಪ್ಪಂದವನ್ನು ಉಲ್ಲಂಘಿಸಿತ್ತು. ಹೀಗಾಗಿ ಇದೀಗ ಕಟ್ಟೆಚ್ಚರ ವಹಿಸಲಾಗಿದೆ.

    ಲಡಾಕ್ ನಲ್ಲಿ ಉದ್ವಿಗ್ನತೆ ಹಿನ್ನೆಲೆ ಜೂನ್ 6 ರಂದು ಮೊದಲ ಸಭೆ ನಡೆಸಲಾಗಿತ್ತು. ಈ ವೇಳೆ ಪೀಪಲ್ಸ್ ಲಿಬರೇಶನ್ ಆರ್ಮಿ ತನ್ನ ಸೇನೆಯನ್ನು ಹಿಂಪಡೆಯುವ ಭರವಸೆ ನೀಡಿತ್ತು. ಆದರೆ ಮಾತುಕತೆ ಬಳಿಕವೂ ಗಡಿ ನಿಯಮಗಳನ್ನು ಉಲ್ಲಂಘಿಸಿದ್ದ ಚೀನಾ, ಪಾಯಿಂಟ್ 14 ಅತಿಕ್ರಮಣ ಮಾಡಿಕೊಂಡು ಭಾರತೀಯ ಸೈನಿಕರ ಜೊತೆ ಜೂನ್ 15 ರಂದು ಘರ್ಷಣೆ ನಡೆಸಿತ್ತು ಇದರಿಂದ ಭಾರತದ 20 ಯೋಧರು ಸಾವನ್ನಪ್ಪಿದ್ದರು.

    ಘರ್ಷಣೆ ಬಳಿಕ ಜೂನ್ 22 ರಂದು ಮತ್ತೊಂದು ಮಿಲಿಟರಿ ಸಭೆಯನ್ನು ನಡೆಸಲಾಗಿತ್ತು. ಮಾತುಕತೆ ನಡುವೆಯೇ ಚೀನಾ ಗಡಿಯಲ್ಲಿ ಭದ್ರತೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದು, ಮೂರನೇ ಮಾತುಕತೆ ಬಳಿಕವೂ ಅಧಿಕೃತವಾಗಿ ಗಡಿಯಿಂದ ಚೀನಾ ಹಿಂದೆ ಸರಿಯುವ ನಂಬಿಕೆ ಇಲ್ಲ. ಈ ಹಿನ್ನಲೆ ಗಡಿಯಿಂದ ಚೀನಾ ಹಿಂದೆ ಸರಿಯುವ ಭರವಸೆ ನೀಡಿದ್ದರೂ ಚೀನಾ ಸೇನೆ ನಡೆ ಆಧರಿಸಿ ಭಾರತೀಯ ಸೇನೆ ನಿರ್ಧಾರ ತೆಗೆದುಕೊಳ್ಳಲು ತಿರ್ಮಾನಿಸಿದೆ.

  • ನೇಪಾಳದ 10 ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ ಚೀನಾ- ನೇಪಾಳ ಸರ್ಕಾರದ ವರದಿ

    ನೇಪಾಳದ 10 ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ ಚೀನಾ- ನೇಪಾಳ ಸರ್ಕಾರದ ವರದಿ

    – ನದಿಗಳ ಹರಿವು ಬದಲಿಸಿ, 33 ಹೆಕ್ಟೇರ್ ಅತಿಕ್ರಮಣ
    – ಈಗಾಗಲೇ ರಸ್ತೆ ನಿರ್ಮಿಸುತ್ತಿದೆ ಪಾಪಿ ಚೀನಾ

    ಕಠ್ಮಂಡು: ಚೀನಾ ತನ್ನ ನೆರೆಯ ಎಲ್ಲ ದೇಶಗಳ ಗಡಿಯನ್ನು ಅತಿಕ್ರಮಣ ಮಾಡಿಕೊಳ್ಳುತ್ತಿರುವುದು ತಿಳಿದ ವಿಚಾರ. ಇತ್ತೀಚೆಗೆ ಭಾರತದೊಂದಿಗೆ ತಂಟೆ ತೆಗೆದಿದೆ. ಇದೀಗ ಇನ್ನೊಂದು ಭಯಾನಕ ಅಂಶವನ್ನು ನೇಪಾಳ ಸರ್ಕಾರ ಬಹಿರಂಗಪಡಿಸಿದೆ. ನೇಪಾಳದ ಬರೋಬ್ಬರಿ 10 ಪ್ರದೇಶಗಳನ್ನು ಚೀನಾ ಈಗಾಗಲೇ ಆಕ್ರಮಿಸಿಕೊಂಡಿದೆ ಎಂದು ನೇಪಾಳ ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.

    ಲಡಾಖ್‍ನ ಗಲ್ವಾನ್ ವ್ಯಾಲಿಯಲ್ಲಿ ಭಾರತದ-ಚೀನಾದ ಗಡಿ ತಂಟೆ ನಡೆದ ಕೆಲವೇ ದಿನಗಳ ನಂತರ ನೇಪಾಳ ಈ ಕುರಿತು ಸರ್ವೇ ವರದಿಯನ್ನು ಬಿಡುಗಡೆ ಮಾಡಿದ್ದು, ಈ ವೇಳೆ 10 ಪ್ರದೇಶಗಳನ್ನು ವಶಪಡಿಸಿಕೊಂಡಿರುವ ಕುರಿತು ಬಹಿರಂಗವಾಗಿದೆ. ನೇಪಾಳದ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲೆಂದೇ ಟಿಬೆಟ್‍ನಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡುತ್ತಿದ್ದು, ನಂತರ ಮುಂದಿನ ದಿನಗಳಲ್ಲಿ ತನ್ನ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಲು ಉದ್ದೇಶಿಸಿದೆ.

    ನೇಪಾಳದ ಕೃಷಿ ಸಚಿವಾಲಯದ ಸರ್ವೇ ಇಲಾಖೆ ಒಟ್ಟು 11 ಸ್ಥಳಗಳನ್ನು ಪಟ್ಟಿ ಮಾಡಿದ್ದು, ಇದರಲ್ಲಿ 10 ಪ್ರದೇಶಗಳನ್ನು ಚೀನಾ ವಶಪಡಿಸಿಕೊಂಡಿದೆ. ಸುಮಾರು 33 ಹೆಕ್ಟೇರ್‍ನಷ್ಟು ಪ್ರದೇಶವನ್ನು ಚೀನಾ ಅತಿಕ್ರಮಣ ಮಾಡಿಕೊಂಡಿದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ ತನ್ನ ಪ್ರದೇಶವನ್ನು ಹೆಚ್ಚಳ ಮಾಡಿಕೊಳ್ಳಲು ನದಿಗಳ ಹರಿವಿನ ದಿಕ್ಕನ್ನೂ ಬದಲಿಸಿದೆಯಂತೆ.

    ಹುಮ್ಲಾ ಜಿಲ್ಲೆಯಲ್ಲಿ ಬಗ್ದಾರೆ ಖೊಲಾ ಹಾಗೂ ಕರ್ನಾಲಿ ನದಿಗಳನ್ನು ತಿರುಗಿಸಿ ಚೀನಾ ನಿರ್ಮಾಣ ಕಾರ್ಯ ನಡೆಸುತ್ತಿದ್ದು, ಒಟ್ಟು 10 ಹೆಕ್ಟೇರ್ ಪ್ರದೇಶವನ್ನು ಅತಿಕ್ರಮಿಸಿಕೊಂಡಿದೆ. ಅಲ್ಲದೆ ಟಿಬೆಟ್‍ನಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾರ್ಯವನ್ನು ರಸುವಾ ಜಿಲ್ಲೆಯ ಸಿಂಜೆನ್, ಭುರ್ಜುಕ್ ಜಾಗೂ ಜಂಬು ಖೊಲಾ ಪ್ರದೇಶಗಳ ಮಾಡಿದ್ದು, ಇದರಿಂದಾಗಿ ಆರು ಹೆಕ್ಟೇರ್ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ.

    ಚೀನಾ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ತನ್ನ ರಸ್ತೆ ಸಂಪರ್ಕವನ್ನು ಭಾರೀ ಪ್ರಮಾಣದಲ್ಲಿ ವಿಸ್ತರಿಸುತ್ತಿದ್ದು, ಈ ಮೂಲಕ ನೇಪಾಳದ ಕಡೆ ಹರಿಯುತ್ತಿದ್ದ ಕೆಲ ನದಿಗಳ ದಿಕ್ಕನ್ನು ಬದಲಿಸುತ್ತಿದೆ. ನದಿಗಳು ಕ್ರಮೇಣವಾಗಿ ನೇಪಾಳಿ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದ್ದು, ಹೀಗೆ ಮುಂದುವರಿದರೆ ನದಿಗಳು ನೇಪಾಳದ ಭೂಮಿಯ ಗರಿಷ್ಟ ಭಾಗ ಚೀನಾದ ಟೆಬೆಟ್ ವಶವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ನದಿಗಳ ಹರಿವನ್ನು ಹೀಗೆ ಬದಲಿಸಿದರೆ ನೇಪಾಳದ ನೂರಾರು ಹೆಕ್ಟೇರ್ ಭೂಮಿ ಸ್ವಾಭಾವಿಕವಾಗಿ ಟೆಬೆಟ್‍ಗೆ ಒಳಪಡುತ್ತದೆ. ಕಾಲಾನಂತರದಲ್ಲಿ ಚೀನಾ ತನ್ನ ಸಶಸ್ತ್ರ ಪೊಲೀಸ್ ಪಡೆಗಳ ಮೂಲಕ ಬಾರ್ಡರ್ ಅಬ್ಸರ್ವೇಶನ್ ಪೋಸ್ಟ್ ನಿರ್ಮಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಲಡಾಖ್‍ನ ಕಲ್ವಾನ್ ವ್ಯಾಲಿಯಲ್ಲಿ ನಡೆದ ಭಾರತ-ಚೀನಾ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ನೇಪಾಳ ಈ ವರದಿಯನ್ನು ಬಿಡುಗಡೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಚೀನಾದ ಪುಂಡಾಟಿಕೆ ಇಲ್ಲಿಗೇ ನಿಲ್ಲುವುದಲ್ಲ ವಿಯಟ್ನಾಂ, ಮಲೇಶಿಯಾ, ತೈವಾನ್ ದೇಶಗಳ ಗಡಿ ವಿಚಾರದಲ್ಲಿ ಸಹ ವಿವಾದ ಹೊಂದಿದೆ.