Tag: ಗಲ್ವಾನ್‌ ಗರ್ಷಣೆ

  • ಧೋವಲ್‌ ಸಂಧಾನ – ಗಡಿಯಿಂದ ಪೂರ್ಣ ಸೇನೆ ವಾಪಸ್‌ಗೆ ಚೀನಾ ಒಪ್ಪಿಗೆ

    ಧೋವಲ್‌ ಸಂಧಾನ – ಗಡಿಯಿಂದ ಪೂರ್ಣ ಸೇನೆ ವಾಪಸ್‌ಗೆ ಚೀನಾ ಒಪ್ಪಿಗೆ

    – ಭಾರತ ಚೀನಾ ಮಧ್ಯೆ ನಡೆದಿತ್ತು 15 ಸಭೆ
    – ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ಪಡೆದ ಬಳಿಕವಷ್ಟೇ ಚೀನಾಗೆ ಭೇಟಿ

    ನವದೆಹಲಿ: ಲಡಾಖ್‌ ಗಡಿಯಲ್ಲಿ ಎರಡು ವರ್ಷಗಳಿಂದ ನಡೆಯುತ್ತಿರುವ ಸಂಘರ್ಷ ಕೊನೆಯಾಗುವ ಸುಳಿವು ಸಿಕ್ಕಿದೆ. ಭಾರತದ ಗಡಿಯಲ್ಲಿ ನಿಯೋಜನೆಗೊಂಡಿರುವ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಕೊನೆಗೂ ಚೀನಾ ಹೇಳಿದೆ.

    ಗಡಿಯಲ್ಲಿ ಸಂಘರ್ಷ ನಡೆದ ಬಳಿಕ ಮೊದಲ ಬಾರಿಗೆ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಭಾರತಕ್ಕೆ ಆಗಮಿಸಿದ್ದಾರೆ. ಶುಕ್ರವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮತ್ತು ವಾಂಗ್‌ ಯಿ ಸುಮಾರು ಒಂದು ಗಂಟೆಗಳ ಕಾಲ ಮಾತನಾಡಿದರು. ಈ ವೇಳೆ ಎರಡೂ ದೇಶಗಳು ಗಡಿಯಿಂದ ಪೂರ್ಣ ಪ್ರಮಾಣದಲ್ಲಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿವೆ.

    ಮಾತುಕತೆಯ ವೇಳೆ ವಾಂಗ್‌ ಯಿ ಎರಡು ದೇಶಗಳ ಮಧ್ಯೆ ಇರುವ ಗಡಿ ವಿವಾದ ಬಗೆ ಹರಿಸಿಕೊಳ್ಳುವ ಸಂಬಂಧ ಅಜಿತ್‌ ದೋವಲ್‌ ಅವರನ್ನು ಚೀನಾಗೆ ಬರುವಂತೆ ಆಹ್ವಾನಿಸಿದರು. ಇದನ್ನೂ ಓದಿ: Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು – ಭಾರತದ ಸೇನೆಗೆ ಹೆದರಿ ಪರಾರಿಯಾದ ಚೀನಿ ಸೈನಿಕರು

    ಈ ವೇಳೆ ಅಜಿತ್‌ ದೋವಲ್‌, ವಾಸ್ತವ ಗಡಿ ರೇಖೆ(ಎಲ್‌ಎಸಿ) ಬಳಿ ನಿಯೋಜನೆಗೊಂಡಿರುವ ಸೇನೆಯನ್ನು ಚೀನಾ ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ಪಡೆದ ಬಳಿಕವಷ್ಟೇ ಭೇಟಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಸಂಪೂರ್ಣವಾಗಿ ಸೇನೆ ಹಿಂದಕ್ಕೆ ಪಡೆದು ಮೊದಲಿನ ಸ್ಥಿತಿ ನಿರ್ಮಾಣವಾಗಬೇಕು. ಮಾತುಕತೆಯ ಮೂಲಕ ವಿವಾದವನ್ನು ಇತ್ಯರ್ಥ ಮಾಡಬೇಕು ಎಂದು ಮಾತುಕತೆಯ ವೇಳೆ ಮನವರಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಾಂಗ್‌ಯಿ ಎರಡೂ ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳೋಣ ಎಂದು ಹೇಳಿದ್ದಾರೆ. ಇದಕ್ಕೆ ಧೋವಲ್‌ ಸಹಮತ ವ್ಯಕ್ತಪಡಿಸಿದರು ಎಂದು ಎಂದು ಮೂಲಗಳು ತಿಳಿಸಿವೆ.

    ಚೀನಾದ ಸರ್ಕಾರದಲ್ಲಿ ಉನ್ನತ, ಪ್ರಭಾವಿ ಸ್ಥಾನವನ್ನು ವಾಂಗ್‌ ಯಿ ಹೊಂದಿದ್ದಾರೆ. ಅಲ್ಲದೆ, ಅವರು ಭಾರತ ಚೀನಾ ಗಡಿ ಮಾತುಕತೆಯಲ್ಲಿ ಚೀನಾದ ವಿಶೇಷ ಪ್ರತಿನಿಧಿ ಆಗಿದ್ದಾರೆ.

    2020ರ ಗಲ್ವಾನ್‌ ಘರ್ಷಣೆಯ ಬಳಿಕ ಲಡಾಖ್‌ ಗಡಿಯಲ್ಲಿ ಎರಡೂ ಕಡೆ ಭಾರೀ ಸಂಖ್ಯೆಯಲ್ಲಿ ಸೇನೆ ಜಮಾವಣೆಗೊಂಡಿದ್ದವು. ನಂತರ ನಡೆದ ಮಾತುಕತೆಯಿಂದ ಕೆಲ ಪ್ರದೇಶಗಳಿಂದ ಸೇನೆ ಹಿಂದಕ್ಕೆ ಪಡೆದರೂ ಈಗಲೂ ಎರಡು ದೇಶಗಳ ಹೆಚ್ಚಿನ ಸಂಖ್ಯೆಯ ಸೈನಿಕರು ಗಡಿಯಲ್ಲಿ ನಿಯೋಜನೆಗೊಂಡಿದ್ದಾರೆ.

    ಘರ್ಷಣೆಯ ಬಳಿಕ ಚೀನಾ ಮತ್ತು ಭಾರತದ ಸೇನಾ ಅಧಿಕಾರಿಗಳ ಮಧ್ಯೆ ಒಟ್ಟು 15 ಬಾರಿ ಸಭೆ ನಡೆದಿದೆ. 15 ಸಭೆಗಳಲ್ಲಿ ಸಾಧ್ಯವಾಗದ್ದು ಧೋವಲ್‌ ಮತ್ತು ವಾಂಗ್‌ ಯಿ ನಡುವಿನ ಒಂದೇ ಭೇಟಿಯಲ್ಲಿ ಸಾಧ್ಯವಾಗಿದೆ.