Tag: ಗರ್ಭಿಣಿಯರು

  • 108 ಅಂಬುಲೆನ್ಸ್‌ನಲ್ಲಿ ಒಂದೇ ದಿನ ಎರಡು ಹೆರಿಗೆ: ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು

    108 ಅಂಬುಲೆನ್ಸ್‌ನಲ್ಲಿ ಒಂದೇ ದಿನ ಎರಡು ಹೆರಿಗೆ: ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು

    ರಾಯಚೂರು: ಜಿಲ್ಲೆಯಲ್ಲಿ ಒಂದೇ ದಿನ ಎರಡು ಕಡೆ 108 ಆರೋಗ್ಯ ಕವಚ ವಾಹನದಲ್ಲಿ ಗರ್ಭಿಣಿಯರು ಮಗುವಿಗೆ ಜನ್ಮ ನೀಡಿದ್ದಾರೆ.

    ದೇವದುರ್ಗ ತಾಲೂಕಿನ ಕೊತ್ತದೊಡ್ಡಿಯ ಮಾನಸಮ್ಮ ಹಾಗೂ ಸಿರವಾರ ತಾಲೂಕಿನ ಮಾಡಗಿರಿಯ ಪದ್ದಮ್ಮ ಅವರಿಗೆ 108 ವಾಹನದಲ್ಲೇ ಹೆರಿಗೆಯಾಗಿದೆ. ವಿಶೇಷವೆಂದರೆ ಗರ್ಭಿಣಿಯರಿಬ್ಬರೂ ಸಹ ಗಂಡು ಮಗುವಿಗೆ ಜನ್ಮನೀಡಿದ್ದಾರೆ.

    ಇಬ್ಬರನ್ನೂ ಪ್ರತ್ಯೇಕವಾಗಿ 108ರಲ್ಲಿ ರಾಯಚೂರಿನ ರಿಮ್ಸ್‌ಗೆ ಕರೆತರುವಾಗ ಹೆರಿಗೆಯಾಗಿವೆ. 108 ಆರೋಗ್ಯ ಕವಚ ವಾಹನದ ಸಿಬ್ಬಂದಿ ಇಬ್ಬರಿಗೂ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಂದಿರು ರಾಯಚೂರಿನ ರಿಮ್ಸ್‌ಗೆ ದಾಖಲಾಗಿದ್ದಾರೆ. ಶಿಶುಗಳು ಹಾಗೂ ಬಾಣಂತಿಯರು ಆರೋಗ್ಯದಿಂದಿದ್ದಾರೆ.

    108 ವಾಹನದಲ್ಲಿ ಹೆರಿಗೆಯಾಗುವುದು ಜಿಲ್ಲೆಯಲ್ಲಿ ಹೊಸದೇನಲ್ಲವಾದರೂ ಒಂದೇ ದಿನ ಎರಡು ಕಡೆಗಳಲ್ಲಿ ಹೆರಿಗೆಯಾಗಿರುವುದು ವಿಶೇಷವಾಗಿದೆ. ಹಾಳಾದ ರಸ್ತೆಗಳಿಂದಾಗಿ ಗರ್ಭಿಣಿಯರು ಆಸ್ಪತ್ರೆ ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿದ ಉದಾಹರಣೆಗಳು ಸಹ ಇದೆ. ಆದರೆ ಈ ಎರಡು ಪ್ರಕರಣಗಳಲ್ಲಿ ಗರ್ಭಿಣಿಯರು ಹೆರಿಗೆ ನೋವು ಕಾಣಿಸಿಕೊಂಡು ಸಹಜವಾಗಿ ಮಗುವಿಗೆ ಜನ್ಮ ನೀಡಿದ್ದಾರೆ.

  • ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕಕ್ಕೆ ಆಗಲ್ವಾ – ಕ್ಯೂ ನಿಂತಿದ್ದ ಗರ್ಭಿಣಿಯರನ್ನ ನೋಡಿ ಸಚಿವರ ತರಾಟೆ

    ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕಕ್ಕೆ ಆಗಲ್ವಾ – ಕ್ಯೂ ನಿಂತಿದ್ದ ಗರ್ಭಿಣಿಯರನ್ನ ನೋಡಿ ಸಚಿವರ ತರಾಟೆ

    ಬೀದರ್: ಸ್ಕ್ಯಾನಿಂಗ್ ಗಾಗಿ ಎರಡು ಗಂಟೆಗಳಿಂದ ಕ್ಯೂನಲ್ಲಿ ನಿಂತಿರುವ ಗರ್ಭಿಣಿಯರು ಹಾಗೂ ರೋಗಿಗಳನ್ನು ನೋಡಿ ಕೆಂಡಾಮಂಡಲರಾದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಬ್ರಿಮ್ಸ್ ನಿರ್ದೇಶಕರಿಗೆ ಫುಲ್ ತರಾಟೆ ತೆಗೆದುಕೊಂಡು ಘಟನೆ ನಡೆದಿದೆ.

    ಕ್ಯೂನಲ್ಲಿ ನಿಂತಿರುವ ಗರ್ಭಿಣಿಯರಿಗೆ ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕುವುದಕ್ಕೆ ಆಗಲ್ವಾ. ಗರ್ಭಿಣಿಯರು ಬೆಳಗ್ಗೆಯಿಂದಲೂ ನಿಂತಿದ್ದರು ಕುರ್ಚಿ ಹಾಕಲು ನಿಮ್ಮ ಬಳಿ ಹಣ ಇಲ್ವಾ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಬ್ರಿಮ್ಸ್ ನಿರ್ದೇಶಕರಿಗೆ ರೋಗಿಗಳ ಮುಂದೆಯೇ ಫಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಚಿವರು ಗರಂ ಆದ ತಕ್ಷಣ ಬ್ರಿಮ್ಸ್ ನಿರ್ದೇಶಕ ಕ್ಷೀರಸಾಗರ ಇನ್ನು ಟೆಂಡರ್ ಆಗಬೇಕು ಸರ್ ಎಂದಿದ್ದಾರೆ. ಅದಕ್ಕೆ ಸಚಿವರು ಟೆಂಡರ್ ಬಿಡ್ರೀ ಒಂದು ಗಂಟೆಯಲ್ಲಿ ಇಲ್ಲಿ ಕುರ್ಚಿ ಹಾಕಬೇಕು ಎಂದು ಸಚಿವರು ತಾಕೀತು ಮಾಡಿದ್ದಾರೆ. ಬೆಳಗ್ಗೆಯಿಂದ ನಾವು ಸ್ಕ್ಯಾನಿಂಗ್‍ಗಾಗಿ ಕ್ಯೂ ನಿಂತಿದ್ದೇವೆ. ನಮಗೆ ಹೋಗಲಿ ಗರ್ಭಿಣಿಯರು ಕ್ಯೂನಲ್ಲಿ ನಿಂತರೂ ಆರೋಗ್ಯ ಅಧಿಕಾರಿ ಸ್ಕ್ಯಾನಿಂಗ್ ಮಾಡಲು ರೆಡಿ ಇಲ್ಲಾ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮರಗಳ್ಳನ ಹಿಡಿಯುವ ನೆಪದಲ್ಲಿ ಗರ್ಭಿಣಿಯರ ಮೇಲೆ ಹಲ್ಲೆ!

    ಮರಗಳ್ಳನ ಹಿಡಿಯುವ ನೆಪದಲ್ಲಿ ಗರ್ಭಿಣಿಯರ ಮೇಲೆ ಹಲ್ಲೆ!

    ಮೈಸೂರು: ಮರಗಳ್ಳನ ಹುಡುಕುವ ನೆಪದಲ್ಲಿ ಕಾಡಿನೊಳಗಿನ ಹಾಡಿ ಜನರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ಮಾಡಿರುವ ಆರೋಪಗಳು ಕೇಳಿಬಂದಿವೆ. ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕು ಮೇಟಿಕುಪ್ಪೆ ಹಾಡಿಯಲ್ಲಿ ಈ ಘಟನೆ ನಡೆದಿದೆ.

    ಅಕ್ಕಿ ಕುಮಾರ್ ಎಂಬಾತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಮರಗಳ್ಳತನ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಆದ್ದರಿಂದ ಅಕ್ಕಿ ಕುಮಾರನ್ನ ಹುಡುಕುತ್ತಾ ಮೇಟಿಕುಪ್ಪೆ ಹಾಡಿ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿನ ಗರ್ಭಿಣಿಯರ ಮೇಲೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಹಾಡಿ ಜನರು ಆರೋಪಿಸಿದ್ದಾರೆ. ಅಲ್ಲದೆ ಈ ದಾಳಿಯಲ್ಲಿ ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಒಂದೆಡೆ ಈ ಬಗ್ಗೆ ಹಾಡಿ ಜನರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೇ, ಇನ್ನೊಂದೆಡೆ ಹಾಡಿ ಜನರ ಮೇಲೆ ಹಲ್ಲೆ ಮಾಡಿಲ್ಲ. ಇದು ಸುಳ್ಳು ಆರೋಪವೆಂದು ಅರಣ್ಯ ಇಲಾಖೆಯ ಹಿರಿಯ ಅರಣ್ಯಾಧಿಕಾರಿಗಳು ಹೇಳಿದ್ದಾರೆ.