Tag: ಗರ್ಬಾ

  • ದೇವಿಯ ಆರಾಧಿಸುವ ನೃತ್ಯವೇ ಗರ್ಬಾ – ಶುರುವಾಗಿದ್ದು ಹೇಗೆ? 

    ದೇವಿಯ ಆರಾಧಿಸುವ ನೃತ್ಯವೇ ಗರ್ಬಾ – ಶುರುವಾಗಿದ್ದು ಹೇಗೆ? 

    ಗರ್ಬಾ (Garba) ಎನ್ನುವುದು ಒಂದು ಸಾಂಸ್ಕೃತಿಕ ನೃತ್ಯ. ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆರಾಧನೆಗಾಗಿ, ತಮ್ಮ ಪ್ರಾರ್ಥನೆಯನ್ನು ಈಡೇರಿಸಲು ಮನಪೂರ್ವಕವಾಗಿ ಮಾಡುವ ಏಕೈಕ ನೃತ್ಯವೇ ಗರ್ಬಾ.

    ಈ ನೃತ್ಯ ಶೈಲಿ ಮೂಲತಃ ಗುಜರಾತ್ (Gujarat) ರಾಜ್ಯದಲ್ಲಿ ಪ್ರಾರಂಭವಾದದ್ದು. ಪ್ರಾಚೀನ ಕಾಲದಿಂದಲೂ ದೇವಿಯ ಆರಾಧನೆಗಾಗಿ ಈ ನೃತ್ಯವನ್ನು ಮಾಡಲಾಗುತ್ತಿತ್ತು ಎನ್ನಲಾಗಿದೆ. ವಿಶೇಷವಾಗಿ ನವರಾತ್ರಿ ಸಂದರ್ಭದಲ್ಲಿ ದೇವಿಯ ಆರಾಧನೆಗಾಗಿ ಮಹಿಳೆಯರ ಗುಂಪು ಈ ನೃತ್ಯವನ್ನು ಮಾಡುತ್ತಿದ್ದರು. ಅಂದಿನಿಂದ ಪ್ರಾರಂಭವಾದ ಈ ನೃತ್ಯ ಇಂದಿಗೂ ನವರಾತ್ರಿ ಸಂದರ್ಭದಲ್ಲಿ ಎಲ್ಲರ ಮನೆ ಮಾತಾಗಿದೆ.

    ಗರ್ಬಾ ಎಂಬುದು ಗರ್ಭ ಎಂಬ ಪದದಿಂದ ಬಂದಿದೆ. ಗರ್ಭ ಎಂದರೆ ಒಂದು ಸೃಷ್ಟಿಸುವ ಶಕ್ತಿ, ಜೀವಶಕ್ತಿ ಎಂಬ ಅರ್ಥವನ್ನು ಹೊಂದಿದೆ. ದೀಪವೊಂದನ್ನು ಮಡಿಕೆಯಲ್ಲಿ ಇಟ್ಟು ಅದನ್ನು ಸುತ್ತುವರೆದು ಮಾಡುವ ನೃತ್ಯವೇ ಗರ್ಬಾ ಎಂದು ಕರೆಯುತ್ತಾರೆ. ಈ ಮೂಲಕ ದೇವಿಗೆ ತಮ್ಮ ಪ್ರಾರ್ಥನೆ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ನೃತ್ಯ ಮಾಡುತ್ತಾರೆ. ಹೀಗೆ ದೀಪವನ್ನ ಮಡಿಕೆಯಲ್ಲಿ ಇಟ್ಟು ಮಾಡುವುದು ಶಕ್ತಿ ಹಾಗೂ ಭಕ್ತಿಯ ಪ್ರತೀಕ ಎನ್ನಲಾಗುತ್ತದೆ. 

    ಪ್ರಾರಂಭವಾಗಿದ್ದು ಹೇಗೆ? 

    ಮಧ್ಯಯುಗದ ಸಂದರ್ಭದಲ್ಲಿ ದೇವಾಲಯಗಳಲ್ಲಿ, ತಮ್ಮ ಊರ ಹಬ್ಬಗಳಲ್ಲಿ ಕೆಲ ಸಮುದಾಯಗಳು ಈ ಆಚರಣೆಯನ್ನು ಪ್ರಾರಂಭಿಸಿದವು. ಅಲ್ಲಿಂದ ಪ್ರಾರಂಭವಾದ ಈ ನೃತ್ಯ 20ನೇ ಶತಮಾನದಲ್ಲಿ ನಗರೀಕರಣ ಆರಂಭವಾದಾಗ ಹಾಗೂ ಜನಸಂಖ್ಯೆ ಸ್ಥಳಾಂತರಗೊಂಡಾಗ ಈ ನೃತ್ಯ ಬೇರೆ ಬೇರೆ ಕಡೆ ಹರಡಿತು. ಇದೀಗ ಇದು ಸಾಂಸ್ಕೃತಿಕ ವಿನಿಮಯದ ಸಂಕೇತವಾಗಿ ಪರಿವರ್ತನೆಗೊಂಡಿದೆ. ಹೆಚ್ಚಾಗಿ ಈ ನೃತ್ಯವನ್ನು ದಕ್ಷಿಣ ಭಾರತದಲ್ಲಿ ಮಾಡುತ್ತಾರೆ. ಆದರೆ ಇದೀಗ ದಸರಾ ಸಂದರ್ಭದಲ್ಲಿ ದಕ್ಷಿಣ ಭಾರತ ಸೇರಿದಂತೆ ಭಾರತದ ವಿವಿಧೆಡೆ ಈ ನೃತ್ಯವನ್ನು ಮಾಡುತ್ತಾರೆ. 

    ಈ ನೃತ್ಯ ದೇವಿ ದುರ್ಗೆಯ ಶಕ್ತಿಯ ಆರಾಧನೆಯೊಂದಿಗೆ ಜನರ ಏಕತೆ ಮತ್ತು ಸಮಾನತೆಯ ಸಂಕೇತವಾಗಿ ಕಾಣಲಾಗುತ್ತದೆ. ಈ ನೃತ್ಯವನ್ನು ಮಾಡುವ ಮೂಲಕ ನಮ್ಮ ತಲೆಮಾರಿಗೂ ಇದನ್ನ ಪರಿಚಯಿಸುವ ಉದ್ದೇಶವನ್ನು ಹೊಂದಿದೆ. ಅದಲ್ಲದೆ ಮುಖ್ಯವಾಗಿ ಜನರು ಒಟ್ಟಾಗಿ ಗರ್ಬಾ ಉತ್ಸವಗಳಲ್ಲಿ ಪಾಲ್ಗೊಳ್ಳುವುದರಿಂದ ಸಾಮಾಜಿಕ ಬಾಂಧವ್ಯ ಹೆಚ್ಚಾಗುತ್ತದೆ. 

    ಇತ್ತೀಚಿನ ದಿನಗಳಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗರ್ಬಾ ಫೆಸ್ಟಿವಲ್ ಹಾಗೂ ದಾಂಡಿಯಾ ನೈಟ್ ಎಂದು ಆಚರಿಸುತ್ತಾರೆ.  ಇಂತಹ ಸಂದರ್ಭದಲ್ಲಿ ಈ ನೃತ್ಯದ ಮೂಲಕ ಸಂಭ್ರಮಿಸುತ್ತಾರೆ. ಅದಲ್ಲದೆ ಕಾಲೇಜುಗಳಲ್ಲಿ, ಇನ್ನಿತರ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮಗಳನ್ನ ಆಯೋಜಿಸುವ ಮೂಲಕ ಜನರನ್ನು ಒಗ್ಗೂಡಿಸುತ್ತಾರೆ. ಸದ್ಯ ಇದು ಗುಜರಾತ್ ರಾಜ್ಯದ ನೃತ್ಯವಾಗಿರದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಒಂದು ಉತ್ಸವವಾಗಿ ಬೆಳೆದು ನಿಂತಿದೆ.

  • ನವರಾತ್ರಿಯಂದು ಕಲ್ಲುತೂರಾಟ – ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು

    ನವರಾತ್ರಿಯಂದು ಕಲ್ಲುತೂರಾಟ – ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು

    ಗಾಂಧೀನಗರ: ನವರಾತ್ರಿಯ (Navratri) ಧಾರ್ಮಿಕ ಕಾರ್ಯಕ್ರಮದ ವೇಳೆ ಕಲ್ಲು ತೂರಾಟ (Stone pelting) ನಡೆಸಿರುವ ಆರೋಪದ ಮೇಲೆ ಬಂಧಿತರಾಗಿದ್ದ ಕೆಲವು ಮುಸ್ಲಿಂ ಯುವಕರನ್ನು ಪೊಲೀಸರು ಕಂಬಕ್ಕೆ ಕಟ್ಟಿ ಹಾಕಿ, ಸಾರ್ವಜನಿಕವಾಗಿ ಲಾಠಿಯಿಂದ ಥಳಿಸಿರುವ ಘಟನೆ ಗುಜರಾತ್‌ನ (Gujarat) ಖೇಡಾ ಜಿಲ್ಲೆಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ ನಿನ್ನೆ ರಾತ್ರಿ ನಗರದ ದೇವಸ್ಥಾನದ ಆವರಣದಲ್ಲಿ ನಡೆದ ಗರ್ಬಾ (Garba) ಕಾರ್ಯಕ್ರಮದಲ್ಲಿ ಸುಮಾರು 150 ಜನರ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಮುಸ್ಲಿಂ ಸಮುದಾಯದ ಸದಸ್ಯರು ದೇವಸ್ಥಾನಕ್ಕೆ ಅಡ್ಡಲಾಗಿರುವ ಮಸೀದಿಯ ಬಳಿ ಗರ್ಬಾ ಕಾರ್ಯಕ್ರಮ ಆಯೋಜಿಸುವುದನ್ನು ವಿರೋಧಿಸಿದ್ದಾರೆ ಎನ್ನಲಾಗಿದೆ.

    ಕಲ್ಲು ತೂರಾಟ ನಡೆಸಿರುವ ಬಗ್ಗೆ ಎಫ್‌ಐಆರ್ ದಾಖಲಿಸಿದ ಮಟರ್ ಪೊಲೀಸ್ ಠಾಣೆಯ (Matar police station) ಪೊಲೀಸರು 13 ಜನರನ್ನು ಬಂಧಿಸಿದ್ದಾರೆ. ಬಳಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸುವಂತೆ ಪೊಲೀಸರು ಕೇಳಿದ್ದಾರೆ. ಈ ವೇಳೆ ಪ್ರದೇಶದ ಉಸ್ತುವಾರಿ ಪೊಲೀಸ್ ಇನ್‌ಸ್ಪೆಕ್ಟರ್ ಕೂಡಾ ಅಲ್ಲಿ ನೆರೆದಿದ್ದರು ಇದನ್ನೂ ಓದಿ: ದೇವಸ್ಥಾನದೊಳಗೆ ಐಟಮ್ ಸಾಂಗ್‍ಗೆ ಡ್ಯಾನ್ಸ್ – ಯುವತಿ ವಿರುದ್ಧ FIR

    ಪೊಲೀಸರು ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಿ ಲಾಠಿಯಿಂದ ಥಳಿಸಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ನೆರೆದವರು ಪೊಲೀಸರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಪೊಲೀಸರ ವರ್ತನೆಯನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ನೈಜೀರಿಯಾದಿಂದ ತಂದ ಚೀತಾಗಳಿಂದ ದೇಶಾದ್ಯಂತ ಲಂಪಿ ವೈರಸ್‌ ಹರಡುತ್ತಿದೆ: ನಾಲಿಗೆ ಹರಿಬಿಟ್ಟ ಕೈ ನಾಯಕ ನಾನಾ ಪಾಟೋಲೆ

    Live Tv
    [brid partner=56869869 player=32851 video=960834 autoplay=true]

  • ನವರಾತ್ರಿಯಲ್ಲಿ ಸಿಎಂ ಭಗವಂತ್ ಮಾನ್ ಗರ್ಬಾ ಡ್ಯಾನ್ಸ್

    ನವರಾತ್ರಿಯಲ್ಲಿ ಸಿಎಂ ಭಗವಂತ್ ಮಾನ್ ಗರ್ಬಾ ಡ್ಯಾನ್ಸ್

    ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವತ್ ಮಾನ್ (Punjab Chief Minister Bhagwant Mann) ಅವರು ಶನಿವಾರ ರಾತ್ರಿ ಗುಜರಾತ್‍ನಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ (Navratri festivities) ಪಾಲ್ಗೊಂಡರು. ಈ ವೇಳೆ ಯಾವುದೇ ಪೂರ್ವಸಿದ್ಧತೆಯಿಲ್ಲದೇ ಗಾರ್ಬಾ ಟ್ಯೂನ್‍ಗೆ (Garba tune) ನೃತ್ಯ ಮಾಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ರಾಜ್‍ಕೋಟ್‍ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರೇಕ್ಷಕರು ಭಗವತ್ ಮಾನ್ ಅವರನ್ನು ಹುರಿದುಂಬಿಸುವುದರೊಂದಿಗೆ ಕೆಲವು ಭಾಂಗ್ರಾ ಸ್ಟೆಪ್ಸ್ (Bhangra moves) ಹಾಕುವಂತೆ ಒತ್ತಾಯಿಸಿದರು. ಹೀಗಾಗಿ ಪ್ರೇಕ್ಷರನ್ನು ಸಂತೋಷ ಪಡಿಸಲು ಭಗವಂತ್ ಮಾನ್ ಅವರು ನೃತ್ಯ ಮಾಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಸುವರ್ಣಸೌಧದಲ್ಲಿ ಈ ವರ್ಷ ಚೆನ್ನಮ್ಮ, ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ- ಬೊಮ್ಮಾಯಿ

    ವರ್ಷಕ್ಕೊಮ್ಮೆ ಬರುವ ಹಿಂದೂ ಹಬ್ಬಗಳಲ್ಲಿ ನವರಾತ್ರಿ ಕೂಡ ದೊಡ್ಡ ಹಬ್ಬವಾಗಿದ್ದು, ಇದರಲ್ಲಿ ಒಂಬತ್ತು ರಾತ್ರಿ ದುರ್ಗಾದೇವಿಯನ್ನು ಪೂಜಿಸಲಾಗುತ್ತದೆ. ಗುಜರಾತ್‍ನ ಫೇಮಸ್ ನೃತ್ಯವನ್ನು ಈ ಸಮಯದಲ್ಲಿ ಆಡುತ್ತಾರೆ. ನವರಾತ್ರಿಯು ವಾರ್ಷಿಕ ಹಿಂದೂ ಹಬ್ಬವಾಗಿದ್ದು, ಇದರಲ್ಲಿ ಒಂಬತ್ತು ರಾತ್ರಿ ದುರ್ಗಾದೇವಿಯನ್ನು ಪೂಜಿಸಲಾಗುತ್ತದೆ, ಗರ್ಬಾ ಗುಜರಾತ್‍ನ ಸಿಗ್ನೇಚರ್ ನೃತ್ಯ ಪ್ರಕಾರವಾಗಿದೆ, ಭಾಂಗ್ರಾಗೂ ಪಂಜಾಬ್‍ಗೂ ವಿಶಿಷ್ಟವಾದ ಸಂಬಂಧವಿದೆ.

    ಇತ್ತೀಚೆಗಷ್ಟೇ ವಡೋದರದಲ್ಲಿ ನಡೆದ ಮತ್ತೊಂದು ಸಾರ್ವಜನಿಕ ಸಮಾರಂಭದಲ್ಲಿ ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ (Raghav Chadha) ಗರ್ಬಾ ನೃತ್ಯ ಮಾಡಿ ಪ್ರೇಕ್ಷಕರೊಂದಿಗೆ ಕುಪ್ಪಳಿಸಿದ್ದರು. ಈ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ರಾಹುಲ್‌, ಸೋನಿಯಾ ಗಾಂಧಿ ಅವರ ತ್ಯಾಗ ಬಹಳಷ್ಟಿದೆ: ಮಲ್ಲಿಕಾರ್ಜುನ ಖರ್ಗೆ

    Live Tv
    [brid partner=56869869 player=32851 video=960834 autoplay=true]

  • ನೃತ್ಯ ವೀಕ್ಷಿಸಿದ್ದಕ್ಕೆ ದಲಿತ ಯುವಕನ ಹತ್ಯೆ

    ನೃತ್ಯ ವೀಕ್ಷಿಸಿದ್ದಕ್ಕೆ ದಲಿತ ಯುವಕನ ಹತ್ಯೆ

    ಅಹಮದಾಬಾದ್: ಗರ್ಬಾ ನೃತ್ಯ ವೀಕ್ಷಿಸಿದ್ದಕ್ಕೆ 21 ವರ್ಷದ ದಲಿತ ಯುವಕನನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಇಲ್ಲಿನ ಆನಂದ್ ಜಿಲ್ಲೆಯಲ್ಲಿ ಶನಿವಾರದಂದು ನವರಾತ್ರಿ ಅಂಗವಾಗಿ ಪಟೇಲ್ ಸಮುದಾಯದವರು ಗರ್ಬಾ ನೃತ್ಯ ಆಯೋಜಿಸಿದ್ದರು. ಈ ವೇಳೆ ಭದ್ರಾನಿಯಾ ಗ್ರಾಮದ ನಿವಾಸಿಯಾದ ಜಯೇಶ್ ಸೋಲಂಕಿ ತನ್ನ ಇತರೆ ನಾಲ್ವರು ದಲಿತ ಸ್ನೇಹಿತರೊಂದಿಗೆ ನೃತ್ಯ ವೀಕ್ಷಿಸುತ್ತಿದ್ದರು. ಇದ್ದಕ್ಕಿದ್ದಂತೆ ಪಟೇಲ್ ಸಮುದಾಯದ ಸದಸ್ಯರೊಬ್ಬರು ಬಂದು ಅವರ ಜಾತಿಯ ಬಗ್ಗೆ ನಿಂದಿಸಲು ಶುರು ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

    ದಲಿತರಿಗೆ ಗರ್ಬಾ ನೃತ್ಯ ವೀಕ್ಷಿಸಲು ಯಾವುದೇ ಹಕ್ಕಿಲ್ಲ ಎಂದು ಹೇಳಿದ ಆರೋಪಿಗಳು, ತನ್ನ ಕಡೆಯವರಾದ ಕೆಲವು ವ್ಯಕ್ತಿಗಳನ್ನು ಸ್ಥಳಕ್ಕೆ ಬರುವಂತೆ ಹೇಳಿದ್ದರು. ನಂತರ ಪಟೇಲ್ ಸಮುದಾಯದವರು ದಲಿತರಿಗೆ ಥಳಿಸಿದ್ದು, ಸೋಲಂಕಿಯ ತಲೆಯನ್ನು ಗೋಡೆಗೆ ಗುದ್ದಿದ್ದಾರೆ ಎಂದು ಭದ್ರಾನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೂಡಲೇ ಸೋಲಂಕಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಆದ್ರೆ ಮರುದಿನ ಬೆಳಿಗ್ಗೆ ಅವರು ಸಾವನ್ನಪಿರುವುದಾಗಿ ವೈದ್ಯರು ಹೇಳಿದ್ದಾರೆ.

    ಈ ಬಗ್ಗೆ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕೊಲೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‍ನಡಿ 8 ಜನರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಈಗಾಗಲೇ ಎಂಟು ಆರೋಪಿಗಳನ್ನ ಬಂಧಿಸಲಾಗಿದೆ.

    ಇದೊಂದು ಪೂರ್ವನಿಯೋಜಿತ ಕೃತ್ಯವಾ ಎಂಬುದನ್ನ ತಳ್ಳಿಹಾಕಿರೋ ಉಪ ಪೊಲೀಸ್ ವರಿಷ್ಠಾಧಿಕಾರಿ ಎಎಮ್ ಪಟೇಲ್, ಆರೋಪಿಗಳಿಗೂ ಜಯೇಶ್‍ಗೂ ಯಾವುದೇ ದ್ವೇಷವಿರಲಿಲ್ಲ. ಆ ಕ್ಷಣದಲ್ಲಿ ಜಗಳ ತಾರಕಕ್ಕೇರಿ ಈ ಕೃತ್ಯ ನಡೆದಿದೆ. ನಾವು ಎಲ್ಲಾ ದೃಷ್ಟಿಯಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.