Tag: ಗದ್ದೆ

  • ಮೆಣಸಿಕಾಯಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಮೂವರಿಗೆ ಜೈಲು

    ಮೆಣಸಿಕಾಯಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಮೂವರಿಗೆ ಜೈಲು

    ಧಾರವಾಡ: ಮೆಣಸಿಕಾಯಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಮೂವರು ಜೈಲು ಪಾಲಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಠಾಣೆ ಸರಹದ್ದಿನ ಭೂಕೊಪ್ಪ ಗ್ರಾಮದಲ್ಲಿ ಮೂರು ಪ್ರತ್ಯೇಕ ಜಮೀನುಗಳಲ್ಲಿ ಮೆಣಸಿನಕಾಯಿ ಬೆಳೆಯ ಜೊತೆಗೆ ಗಾಂಜಾ ಗಿಡಗಳನ್ನು ತಮ್ಮ ಅಕ್ರಮ ಲಾಭಕ್ಕಾಗಿ ಬೆಳೆದ ಬಗ್ಗೆ ಮಾಹಿತಿ ತಿಳಿದು, ಪೊಲೀಸರು ದಾಳಿ ಮಾಡಿ ಗಾಂಜಾ ಗಿಡ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು. ಇದನ್ನೂ ಓದಿ: ವೃದ್ಧೆಯ ಹತ್ಯೆ ಮಾಡಿ ಮೃತದೇಹದೊಂದಿಗೆ ಯುವಕ ಸೆಕ್ಸ್!

    ಭೂಕೊಪ್ಪ ಗ್ರಾಮದ ಮೊದಲ ಆರೋಪಿ ತನ್ನ ಜಮೀನಿನಲ್ಲಿ ಅಂದಾಜು 1 ಲಕ್ಷ 25 ಸಾವಿರ ಮೌಲ್ಯದ 31 ಕೆಜಿ ತೂಕದ ಒಟ್ಟು 32 ಹಸಿಗಾಂಜಾ ಗಿಡಗಳನ್ನು ಹಚ್ಚಿದ್ದ, ಎರಡನೇ ಆರೋಪಿಯು 80 ಸಾವಿರ ಮೌಲ್ಯದ 20 ಕೆಜಿ 160 ಗ್ರಾಂ. ತೂಕದ ಒಟ್ಟು 50 ಹಸಿಗಾಂಜಾ ಗಿಡಗಳು ಹಾಗೂ ಮೂರನೇ ಆರೋಪಿು 25 ಸಾವಿರ ಮೌಲ್ಯದ 8.5 ಕೆಜಿ ತೂಕದ 17 ಹಸಿಗಾಂಜಾ ಒಟ್ಟು 59 ಕೆಜಿ 760 ಗ್ರಾಂ ಹಸಿ ಗಾಂಜಾ ಗಿಡಗಳನ್ನು ಬೆಳಸಿದ್ದರು. ಇದನ್ನೂ ಓದಿ: ನಿರುದ್ಯೋಗ ದಿನ ಆಚರಿಸಿ ಪಿಎಂಗೆ ನಿಮ್ಮ ಪದವಿ ಪ್ರಮಾಣ ಪತ್ರ ಹಿಂದಿರುಗಿಸಿ: ಡಿ.ಕೆ. ಶಿವಕುಮಾರ್ ಕರೆ

    ಸದ್ಯ ಒಟ್ಟು ಅಂದಾಜು ಮೊತ್ತ ರೂ. 2 ಲಕ್ಷ 30 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ಜಿಲ್ಲಾ ಸತ್ರನ್ಯಾಯಾಲಯದಲ್ಲಿ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

  • ಕಬ್ಬಿನ ಗದ್ದೆಗೆ ಬೆಂಕಿ- ನೂರಾರು ಟನ್ ಕಬ್ಬು ಬೆಂಕಿಗಾಹುತಿ

    ಕಬ್ಬಿನ ಗದ್ದೆಗೆ ಬೆಂಕಿ- ನೂರಾರು ಟನ್ ಕಬ್ಬು ಬೆಂಕಿಗಾಹುತಿ

    ಚಿಕ್ಕೋಡಿ: ಆಕಸ್ಮಿಕವಾಗಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದ ಪರಿಣಾಮ 50 ಎಕರೆಗೂ ಹೆಚ್ಚು ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ನಡೆದಿದೆ.

    ಒಟ್ಟು 15ಕ್ಕೂ ಹೆಚ್ಚು ರೈತರ ಜಮೀನುಗಳ ಕಬ್ಬಿನ ಬಳೆಗೆ ಬೆಂಕಿ ಬಿದ್ದಿದ್ದು, ಬೆಂಕಿ ನಂದಿಸಲು ಸ್ಥಳೀಯರು ಹಾಗೂ ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಹರಸಾಹಸಪಟ್ಟರು. ಯಾವುದೇ ಪ್ರಯೋಜನೆ ಆಗದೇ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ. ಇದನ್ನೂ ಓದಿ: ಡೆಂಘೀ ಜ್ವರಕ್ಕೆ ಐದು ವರ್ಷದ ಕಂದಮ್ಮ ಬಲಿ

    ಕಬ್ಬು ಬೆಳೆ ನಾಶದಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ. ಲಕ್ಷಾಂತರ ರೂಪಾಯಿ ಬೆಳೆ ಹಾನಿಯಿಂದ 15ಕ್ಕೂ ಹೆಚ್ಚು ರೈತರಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅಂಕಲಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಐಟಿ ಉದ್ಯೋಗಿಗಳಿಗೆ ಗದ್ದೆಯಲ್ಲಿ ನಾಟಿ ಕಾರ್ಯಾಗಾರ

    ಐಟಿ ಉದ್ಯೋಗಿಗಳಿಗೆ ಗದ್ದೆಯಲ್ಲಿ ನಾಟಿ ಕಾರ್ಯಾಗಾರ

    ಮಡಿಕೇರಿ: ಐಟಿ ಕಂಪನಿ ಉದ್ಯೋಗಿಗಳು ಇಂದು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

    ಸೋಮವಾರಪೇಟೆ ನಗರದ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಸಮೀಪದ ಕಿರಗಂದೂರು ಗ್ರಾ.ಪಂ. ವ್ಯಾಪ್ತಿಯ ತಾಕೇರಿ ಗ್ರಾಮದಲ್ಲಿ 3ನೇ ವರ್ಷದ ಗದ್ದೆ ನಾಟಿ ಕಾರ್ಯಕ್ರಮ ನಡೆಯಿತು. ಐಟಿ ಕಂಪನಿಯ ಉದ್ಯೋಗಿಗಳು ಸಂತಸದಿಂದ ಭಾಗವಹಿಸಿ ಭತ್ತ ನಾಟಿ ಮಾಡಿದರು. ನಾಟಿ ಮಾಡುವ ಕುರಿತು ಮಾಹಿತಿ ನೀಡುವ ಮೂಲಕ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳೀಯವಾಗಿ ವರ್ಕ್ ಫ್ರಂ ಹೋಮ್‍ನಲ್ಲಿರುವ ಐಟಿ ಕಂಪನಿಗಳ ಉದ್ಯೋಗಿಗಳು, ವೈದ್ಯರು, ವಕೀಲರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ತಾಕೇರಿಯ ಜಿ.ಎಂ.ರಾಣಿ ಪಾಪಯ್ಯ ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಹೊರಭಾಗದಲ್ಲಿರುವ ಉದ್ಯೋಗಿಗಳು ಕೃಷಿ ಸಮಯದಲ್ಲಾರೂ ತಮ್ಮ ಗ್ರಾಮಕ್ಕೆ ಬಂದು ಗದ್ದೆ ಕೃಷಿ ಮಾಡಬೇಕು. ಹಾಗಾದಾಗ ಮಾತ್ರ ಕೃಷಿಯ ಬಗ್ಗೆ ಅರಿವು ಹಾಗೂ ಕೃಷಿಯ ಮಹತ್ವದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ 82 ಲಕ್ಷ ರೂ. ಹವಾಲಾ ಹಣ ಜಪ್ತಿ

    ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಸ್ಥಳೀಯ ಯುವ ಜನಾಂಗ ಕೃಷಿ ಕಾರ್ಯಗಳಲ್ಲಿ ಮನಸು ಮಾಡಿದರೆ ಕಾರ್ಮಿಕರ ಸಮಸ್ಯೆ ದೂರಾಗಲಿದೆ. ಗದ್ದೆ ಕೃಷಿಯ ಬಗ್ಗೆ ಬಹುತೇಕ ಐಟಿ ಉದ್ಯೋಗಿಗಳಿಗೆ ಮಾಹಿತಿ ಇರುವುದಿಲ್ಲ. ಭತ್ತ ಬೆಳೆಯುವ ವಿಧಾನವೂ ತಿಳಿದಿರುವುದಿಲ್ಲ. ಅಂತಹವರಿಗೆ ಗದ್ದೆ ನಾಟಿಯ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

    ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಕಾಫಿ ಮಂಡಳಿಯ ಅಧಿಕಾರಿ ಲಕ್ಷ್ಮೀಕಾಂತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ಗದ್ದೆಯ ಬದುವಿನ ಮೇಲೆ ರೈತರಂತೆ ನಡೆದ ಹುಲಿ- ಆತಂಕದಲ್ಲಿ ಹಳ್ಳಿಗರು

    ಗದ್ದೆಯ ಬದುವಿನ ಮೇಲೆ ರೈತರಂತೆ ನಡೆದ ಹುಲಿ- ಆತಂಕದಲ್ಲಿ ಹಳ್ಳಿಗರು

    ಚಿಕ್ಕಮಗಳೂರು: ಇತ್ತೀಚೆಗೆ ತಾಲೂಕಿನ ಸಾರಾಗೋಡು ಬಳಿ ಹೊರನಾಡಿಗೆ ಹೋಗುತ್ತಿದ್ದವರ ಮೇಲೆ ಕಾಡಾನೆ ದಾಳಿ ಮಾಡಿತ್ತು. ಮೂಡಿಗೆರೆ ತಾಲೂಕಿನಲ್ಲಿ ಒಂದೆಡೆ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದರೆ, ಮತ್ತೊಂದೆಡೆ ಗದ್ದೆಯಲ್ಲಿ ಹುಲಿ ಹೆಜ್ಜೆ ಕಂಡು ಹಳ್ಳಿಗರು ಕಂಗಾಲಾಗಿದ್ದಾರೆ.

    ಮೂಡಿಗೆರೆ ತಾಲೂಕಿನ ಬಿಳಗುಲಿ ಸಮೀಪದ ಗದ್ದೆಯ ಬದುವಿನ ಮೇಲೆ ಹುಲಿಯೊಂದು ಜನಸಾಮಾನ್ಯರಂತೆ ನಡೆದು ಹೋಗಿದೆ. ಹುಲಿ ಹೆಜ್ಜೆಯನ್ನು ಕಂಡು ರೈತರು ಕಂಗಾಲಾಗಿದ್ದಾರೆ. ಬಿಳಗುಲಿ ಗ್ರಾಮದ ಉಮೇಶ್ ಅವರ ಗದ್ದೆಯಲ್ಲಿ ಭಾರೀ ಗಾತ್ರದ ಹುಲಿ ಹೆಜ್ಜೆ ಕಂಡಿದೆ. ಹುಲಿಯ ದೊಡ್ಡ ಹೆಜ್ಜೆಯ ಪಂಜ ಕಂಡ ಹಳ್ಳಿಗರು ಭಯಭೀತರಾಗಿದ್ದು, ಹೊಲ, ಗದ್ದೆ, ತೋಟಕ್ಕೆ ಹೋಗಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ರಾಷ್ಟ್ರೀಯ ನಾಯಕರು ನಮ್ಮವರೇ, ಯಾರೂ ಹಗುರವಾಗಿ ಮಾತನಾಡಬಾರದು : ಶೋಭಾ ಕರಂದ್ಲಾಜೆ

    ಬಿಳಗಲಿ ಹಾಗೂ ಹುತ್ತಿನಕೊಳಲು ಗ್ರಾಮದಲ್ಲಿ ಹುಲಿ ಓಡಾಡಿರುವ ಶಂಕೆಯಿಂದ ಕತ್ತಲಾಗುತ್ತಿದ್ದಂತೆ ಜನ ಮನೆಯಿಂದ ಹೊರಬರೋದಕ್ಕೂ ಹೆದರುತ್ತಿದ್ದಾರೆ. ಬಿಳಗುಲಿ, ಹುತ್ತಿನಕೊಳಲು ಗ್ರಾಮವಷ್ಟೇ ಅಲ್ಲದೆ ಭಾರತೀಬೈಲು ಗ್ರಾಮದಲ್ಲೂ ಹುಲಿ ಹಾವಳಿ ಹೆಚ್ಚಿತ್ತು. ಜನ ಹಗಲಲ್ಲೂ ಓಡಾಡೋದಕ್ಕೆ ಭಯ ಬೀಳುತ್ತಿದ್ದರು. ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತಿದ್ದ ಹುಲಿ ಹೊಲಗದ್ದೆಗಳಲ್ಲಿ ಓಡಾಡೋದನ್ನ ಸ್ಥಳಿಯರು ನೋಡಿ ಭಯಭೀತರಾಗಿದ್ದರು. ಈಗ ಮತ್ತೆ ಹುಲಿಯ ದೊಡ್ಡ ಹೆಜ್ಜೆ ಕಾಣಿಸಿಕೊಂಡಿದ್ದು, ಜನ ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ಕಳೆದ ಕೆಲ ತಿಂಗಳಿಂದ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದೆ. ಈ ಮಧ್ಯೆ ಹುಲಿಯ ಹೆಜ್ಜೆ ಕಂಡು ಜನ ಕಂಗಾಲಾಗಿದ್ದಾರೆ. ಕೂಡಲೇ ಅರಣ್ಯ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿದು ಸ್ಥಳಾಂತರಿಸಿ ಹಳ್ಳಿಗರ ಆತಂಕವನ್ನ ದೂರ ಮಾಡುವಂತೆ ಆಗ್ರಹಿಸಿದ್ದಾರೆ.

  • ಭತ್ತದ ಪೈರು ನಾಟಿ ಮಾಡಿದ  ಶೆಟ್ಟರ್

    ಭತ್ತದ ಪೈರು ನಾಟಿ ಮಾಡಿದ ಶೆಟ್ಟರ್

    ಉಡುಪಿ: ಭತ್ತದ ಪೈರು ನಾಟಿ ಮಾಡಿ ಕೃಷಿ ಬೇಸಾಯಕ್ಕೆ ಸರರ್ಕಾರ ಬೆಂಬಲಿಸುವುದಾಗಿ ಉಡುಪಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಇದನ್ನೂ ಓದಿ:  ಯತ್ನಾಳ್, ಯೋಗೇಶ್ವರ್ ಖಾಲಿ ಪಾತ್ರೆಗಳು-ಡಿಕೆಶಿ

    ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಗದ್ದೆ ಪುನರುತ್ಥಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 30 ಎಕರೆ ಹಡಿಲು ಭೂಮಿಯನ್ನು ಸಾವಯುವ ಕೃಷಿ ಮಾಡಲಾಗುತ್ತಿದೆ. ಗದ್ದೆಗೆ ಹಾಲನ್ನು ಅರ್ಪಿಸಿ ನೇಜಿ ನೇಡುವ ಮೂಲಕ ಯಂತ್ರ ನಾಟಿ ಹಾಗೂ ಕೈ ನಾಟಿಗೆ ಚಾಲನೆ ನೀಡಿದರು. ಸ್ಥಳೀಯರೊಂದಿಗೆ ಸೇರಿ ನೇಜಿ ನೆಟ್ಟರು. ಆರೂರು ರಂಜ ಬೈಲಿನಲ್ಲಿ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಶೆಟ್ಟರ್ ಚಾಲನೆ ನೀಡಿದರು.

    ಮಾಧ್ಯಮದವರೊಂದಿಗೆ ಅವರು, ಹಡಿಲು ಭೂಮಿಯನ್ನು ಸಾವಯವ ಕೃಷಿ ಮಾಡುತ್ತಿರುವುದು ದೊಡ್ಡ ದಾಖಲೆಯಾಗಿದೆ. ಸದಾ ಸಮಾಜಮುಖಿಯಾಗಿ ಯೋಚಿಸಿ ಟ್ರಸ್ಟ್‍ನ್ನು ರಚಿಸಿ ಸ್ಥಳೀಯರನ್ನು ಒಳಗುಡಿಸಿಕೊಂಡು ಭೂಮಿಯನ್ನು ಹಸಿರಾಗಿಸುತ್ತಿರುವುದು ಶ್ಲಾಘನೀಯ ಎಂದರು.

    ರಾಜ್ಯ ಕೇಂದ್ರ ಸರರ್ಕಾರ ಸದಾ ನಿಮ್ಮೊಂದಿಗಿರುತ್ತದೆ. ಈ ಭಾಗದಲ್ಲಿ ಹಡಿಲು ಭೂಮಿ ಆಂದೋಲನಕ್ಕೆ ಸಹಕರಿಸಿದ ಸಂಘ – ಸಂಸ್ಥೆಯವರಿಗೆ, ಭೂ ಮಾಲಕರಿಗೆ, ಸ್ಥಳೀಯರಿಗೆ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿದರು. ಬಿಜೆಪಿ ನಾಯಕರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ನಾಟಿ ಕಾರ್ಯದಲ್ಲಿ ಭಾಗಿಯಾದರು.

  • ಉಡುಪಿಯ ಗದ್ದೆಯಲ್ಲಿ ಹೂತುಹೋದ ಕೃಷಿ ಸಚಿವರ ಕಾರು

    ಉಡುಪಿಯ ಗದ್ದೆಯಲ್ಲಿ ಹೂತುಹೋದ ಕೃಷಿ ಸಚಿವರ ಕಾರು

    – 2000 ಎಕ್ರೆ ಬೇಸಾಯ ನಾಟಿಗೆ ಚಾಲನೆ

    ಉಡುಪಿ: ಕೃಷಿ ಚಟುವಟಿಕೆಯನ್ನು ಗಮನಿಸಿ ನೂತನ ಬೇಸಾಯ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದ್ದ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಸಂಚರಿಸುತ್ತಿದ್ದ ಕಾರು ಜಿಲ್ಲೆಯ ಕಡೆಕಾರು ಎಂಬಲ್ಲಿ ಕೆಸರಿನಲ್ಲಿ ಹೂತು ಹೋಗಿದೆ. ಭಾರೀ ಮಳೆಗೆ ತೇವಗೊಂಡಿದ್ದ ಗದ್ದೆಗೆ ಕಾರು ಇಳಿಸಿದ್ದೇ ಈ ಪಜೀತಿಗೆ ಕಾರಣವಾಗಿದೆ.

    ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕೇದಾರೋತ್ಥಾನ ಬೇಸಾಯ ಅಭಿಯಾನ ಆರಂಭಗೊಂಡಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಬೀಳುಬಿಟ್ಟ 2000 ಎಕರೆ ಗದ್ದೆಯನ್ನು ಬೇಸಾಯ ಮಾಡಲಾಗುತ್ತಿದೆ. ಈ ಪುನಶ್ಚೇತನ ಕಾರ್ಯಕ್ರಮದ ನಾಟಿ ಕಾರ್ಯಕ್ಕೆ ಕೃಷಿ ಸಚಿವರು ಆಗಮಿಸಿದ್ದರು. ಈ ಸಂದರ್ಭ ಕೆಸರಿನಲ್ಲಿ ಸಚಿವರ ಕಾರು ಹೂತಿದೆ. ಉಡುಪಿಯ ಕಡೆಕಾರು ಎಂಬಲ್ಲಿ ಘಟನೆ ನಡೆದಿದ್ದು, ಕಾರು ಮೇಲೆತ್ತಲು ಬಿಜೆಪಿ ನಾಯಕರು, ಸ್ಥಳೀಯ ಜನ ಪ್ರತಿನಿಧಿಗಳು ಕೆಲಕಾಲ ಪರದಾಟ ಮಾಡಿದರು. ನಂತರ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಯುವಕರು ಓಡೋಡಿ ಬಂದು ಸಚಿವರ ಕಾರನ್ನು ತಳ್ಳಿ ಮೇಲೆ ಎತ್ತಿದರು. ಇದನ್ನೂ ಓದಿ: ಆನ್‍ಲೈನ್ ಕ್ಲಾಸ್‍ಗಾಗಿ 2 ಕಿ.ಮೀ ದೂರದಲ್ಲಿ ತಾವೇ ಕ್ಲಾಸ್ ರೂಂ ರೆಡಿ ಮಾಡಿದ ವಿದ್ಯಾರ್ಥಿಗಳು

    ಉಡುಪಿ ನಗರದಾದ್ಯಂತ ಮುಂಜಾನೆಯಿಂದ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಗೆ ಸುತ್ತಮುತ್ತಲ ಗದ್ದೆಗಳು ತೇವಗೊಂಡಿದ್ದು, ಜಿಲ್ಲೆಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಜಿಲ್ಲೆಯಾದ್ಯಂತ ಮೋಡ ಮುಸುಕಿದೆ.

  • ಲಾಕ್‍ಡೌನ್ ಎಫೆಕ್ಟ್- ರಾಜಕೀಯದಿಂದ ಗದ್ದೆ ಬೇಸಾಯಕ್ಕಿಳಿದ ಶಕುಂತಲಾ ಶೆಟ್ಟಿ

    ಲಾಕ್‍ಡೌನ್ ಎಫೆಕ್ಟ್- ರಾಜಕೀಯದಿಂದ ಗದ್ದೆ ಬೇಸಾಯಕ್ಕಿಳಿದ ಶಕುಂತಲಾ ಶೆಟ್ಟಿ

    – ಗದ್ದೆ ಕೆಲಸದ ಖುಷಿ ಹಂಚಿಕೊಂಡ ಮಾಜಿ ಶಾಸಕಿ

    ಮಂಗಳೂರು: ವಿಶ್ವದಾದ್ಯಂತ ಹಬ್ಬಿರುವ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲೆಡೆ ಲಾಕ್‍ಡೌನ್ ಜಾರಿಯಲ್ಲಿದೆ. ಲಾಕ್‍ಡೌನ್ ಕೆಲವರ ಜೀವನ ವಿಧಾನದಲ್ಲೂ ಕೊಂಚ ಬದಲಾವಣೆ ತಂದಿದೆ. ಹಾಗೆಯೇ ಸದಾ ಸಭೆ-ಸಮಾರಂಭಗಳಲ್ಲಿ ಬ್ಯುಸಿಯಾಗುತ್ತಿದ್ದ ರಾಜಕಾರಣಿಗಳನ್ನೂ ಮನೆಯಿಂದ ಹೊರ ನಡೆಯದಂತೆ ಪರಿಸ್ಥಿತಿಗೆ ಕೊರೊನಾ ತಂದಿದೆ. ಇದೇ ಪರಿಸ್ಥಿತಿಯನ್ನು ಸದುಪಯೋಗಪಡಿಸಿಕೊಳ್ಳಲು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರಾಜಕೀಯ ಫೀಲ್ಡ್ ಬಿಟ್ಟು ಭತ್ತದ ಫೀಲ್ಡ್‍ಗೆ ಇಳಿದಿದ್ದಾರೆ.

    ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ, ಕಾಂಗ್ರೆಸ್ ಮುಖಂಡೆ ಶಕುಂತಲಾ ಶೆಟ್ಟಿಯವರಿಗೆ ಕೂಡ ಲಾಕ್‍ಡೌನ್ ಘೋಷಣೆಯಾದ ಬಳಿಕ ಮನೆಯಿಂದಲೇ ಫೋನ್ ಮೂಲಕ ರಾಜಕೀಯದಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಮನೆಯಲ್ಲೇ ಇದ್ದು ಬೇಸರವಾದಾಗ ತನ್ನ ತವರು ಮನೆಯಲ್ಲಿ ಗದ್ದೆಯ ಬೇಸಾಯಕ್ಕೆ ಅಣಿಯಾಗುತ್ತಿರುವ ವಿಚಾರ ಶಕುಂತಲಾ ಅವರಿಗೆ ತಿಳಿಯಿತು. ತಕ್ಷಣ ತವರು ಮನೆಯಲ್ಲಿನ ಗದ್ದೆ ಬೇಸಾಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಲಾಕ್‍ಡೌನ್ ಸಮಯವನ್ನು ಭರಪೂರವಾಗಿ ಉಪಯೋಗಿಸಿಕೊಂಡಿದ್ದಾರೆ.

    ನಾಟಿ ಮಾಡುವುದರಿಂದ ಹಿಡಿದು, ನಾಟಿ ಸಂಗ್ರಹಿಸುವ ಕಾರ್ಯದಲ್ಲೂ ತೊಡಗಿಸಿಕೊಂಡ ಶಕುಂತಲಾ ಶೆಟ್ಟಿ, ಗದ್ದೆಯ ಕೆಲಸ ಖುಷಿ ತರುತ್ತದೆ ಎಂದು ಸಂತಸವನ್ನೂ ಕೂಡ ಹಂಚಿಕೊಂಡಿದ್ದಾರೆ. ಎಲ್ಲಾ ಕೆಲಸಗಳಿಗಿಂತಲೂ ಶ್ರೇಷ್ಠವಾದುದು ಕೃಷಿ ಕೆಲಸ. ಭತ್ತ ಬೆಳೆದರೆ ಮಾತ್ರ ದೇಶದ ಪ್ರಧಾನಿಯಾದಿಯಾಗಿ ಎಲ್ಲಾ ಜನರಿಗೂ ಆಹಾರ ಪೂರೈಕೆಯಾಗುತ್ತದೆ. ಇದರಿಂದಾಗಿ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಾ, ಉಳಿದವರನ್ನೂ ಪ್ರೋತ್ಸಾಹಿಸುವ ಕಾರ್ಯದಲ್ಲೂ ಶಕುಂತಲಾ ಶೆಟ್ಟಿ ನಿರತರಾಗಿದ್ದಾರೆ.

    ಮಂಗಳೂರು ಹೊರವಲಯದ ಕುತ್ತಾರಿನ ಬೋಳ್ಯಗುತ್ತು ಮಾಜಿ ಶಾಸಕಿಯ ತವರು ಮನೆ. ಈ ಗುತ್ತಿನ ಮನೆಗೆ ಸೇರಿದ 15 ವರ್ಷ ಬೇಸಾಯ ಮಾಡದೇ ಉಳಿದಿದ್ದ ಗದ್ದೆಯಲ್ಲಿ ಈ ವರ್ಷ ಭತ್ತದ ನಾಟಿ ಮಾಡಲಾಗುತ್ತಿದೆ. ಲಾಕ್‍ಡೌನ್ ಘೋಷಣೆಯಾಗುವುದಕ್ಕೂ ಮೊದಲು ಮುಂಬಯಿಯಿಂದ ಊರಿಗೆ ಬಂದಿದ್ದ ಶಕುಂತಲಾ ಶೆಟ್ಟಿಯವರ ತವರು ಮನೆಯ ಹಲವು ಸದಸ್ಯರೂ ಇದೀಗ ಊರಲ್ಲೇ ಉಳಿಯುವಂತಾಗಿದೆ. ಇದರಿಂದಾಗಿ ಅವರು ಕೂಡ ಬೇಸಾಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

    ಜೀವಮಾನದಲ್ಲಿ ಗದ್ದೆಗೆ ಇಳಿಯದಿದ್ದ ಜನ ಇದೀಗ ಗದ್ದೆಯಲ್ಲಿ ಮಣ್ಣು ಮೆತ್ತಿಸಿಕೊಂಡು ನಾಟಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಭತ್ತದ ನಾಟಿಯ ಅನುಭವವನ್ನು ಕೊರೊನಾ ಲಾಕ್‍ಡೌನ್ ಕಲ್ಪಿಸಿದೆ ಎಂದು ಮುಂಬಯಿಯಿಂದ ಊರಿಗೆ ಬಂದು ಲಾಕ್‍ಡೌನ್‍ನಲ್ಲಿ ಸಿಲುಕಿಕೊಂಡ ಮಹಿಳೆ ಗುಣವತಿ ಹೇಳುತ್ತಾರೆ.

    ಒಟ್ಟಿನಲ್ಲಿ ಸದಾ ಅಲ್ಲೊಂದು ಇಲ್ಲೊಂದು ರಾಜಕೀಯ ಸಭೆ, ಹೇಳಿಕೆ ನೀಡುತ್ತಾ ಸುದ್ದಿಯಲ್ಲಿದ್ದ ಶಕುಂತಲಾ ಶೆಟ್ಟಿ ಇದೀಗ ಗದ್ದೆ ಬೇಸಾಯದಲ್ಲಿ ತೊಡಗಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ. ಲಾಕ್‍ಡೌನ್ ಸಮಯವನ್ನು ಈ ರೀತಿಯ ಒಳ್ಳೆಯ ಕೆಲಸಗಳಲ್ಲಿ ತೊಡಗಿಕೊಂಡ ತೃಪ್ತಿ ಶಕುಂತಲಾ ಶೆಟ್ಟಿಯವರಲ್ಲಿದೆ.

  • ಬೇಸಿಗೆ ಬೆಳೆ ನಾಟಿ ಆರಂಭ – ಎತ್ತ ನೋಡಿದರೂ ಬೆಳ್ಳಕ್ಕಿ ಕಲರವ

    ಬೇಸಿಗೆ ಬೆಳೆ ನಾಟಿ ಆರಂಭ – ಎತ್ತ ನೋಡಿದರೂ ಬೆಳ್ಳಕ್ಕಿ ಕಲರವ

    ಕೊಪ್ಪಳ: ಹೊಲ ಗದ್ದೆಗಳಲ್ಲಿ ಬೇಸಿಗೆ ಬೆಳೆಯ ಭತ್ತ ನಾಟಿ ಮಾಡುವ ಚಟುವಟಿಕೆಗಳು ಚುರುಕುಗೊಳ್ಳುತ್ತಿದ್ದಂತೆ ಆಹಾರ ಅರಸಿ ಹೊಲಗಳಿಗೆ ಆಗಮಿಸುತ್ತಿರುವ ಬೆಳ್ಳಕ್ಕಿಗಳ ಹಿಡ್ಡು ಗದ್ದೆಗಳಿಗೆ ರಂಗು ಮೂಡಿಸುತ್ತಿವೆ.

    ಪ್ರತಿ ವರ್ಷ ಮುಂಗಾರು ಬೆಳೆ ಕಟಾವು ಮಾಡಿದ ನಂತರ ಬೇಸಿಗೆ ಬೆಳೆಗಾಗಿ ಭತ್ತದ ಸಸಿ ಮಡಿಗಳನ್ನು ಹಾಕಿ, ಎರಡ್ಮೂರು ತಿಂಗಳುಗಳ ಕಾಲ ಸಾವಯುವ ಗೊಬ್ಬರ, ಸಗಣೆ ಗೊಬ್ಬರಗಳನ್ನು ಹಾಕಿ ಭೂಮಿಯನ್ನು ಸಜ್ಜುಗೊಳಿಸುತ್ತಿದ್ದರು. ಆದರೆ ಈ ಬಾರಿ ಕಟಾವು ಮಾಡಿದ 15 ದಿನಗಳಲ್ಲಿಯೇ ಪುನಃ ಬೇಸಿಗೆ ಬೆಳೆಯನ್ನು ನಾಟಿ ಮಾಡಲು ಜಮೀನು ಸಿದ್ಧಗೊಳಿಸಲು ರೈತರು ಮುಂದಾಗಿದ್ದಾರೆ. ಅದಕ್ಕಾಗಿ ಹೊಲಗಳಿಗೆ ನೀರು ಹರಸಿ ಭೂಮಿಯನ್ನು ಹದಗೊಳಿಸಲಾಗುತ್ತಿದೆ.

    ಈ ವೇಳೆಯಲ್ಲಿ ಬೆಳ್ಳಕ್ಕಿಗಳಿಗೆ ಬೇಕಾಗುವ ಕೀಟಗಳು ಜಮೀನಿನಲ್ಲಿ ಸುಲಭವಾಗಿಯೇ ದೊರೆಯುತ್ತವೆ. ಕೀಟಗಳ ಜೊತೆಗೆ ನೀರು ದೊರೆಯುತ್ತಿರುವುದರಿಂದ ಕೆಲವು ದಿನಗಳಿಂದ ಗಂಗಾವತಿ ತಾಲೂಕಿನ ನಾನಾ ಭಾಗಗಳ ಜಮೀನುಗಳಲ್ಲಿ ನೂರಾರು ಬೆಳ್ಳಕ್ಕಿಗಳ ಹಿಂಡು ಸ್ವಚ್ಛಂದವಾಗಿ ಹಾರಾಡುವ ಮೂಲಕ ರೈತರಿಗೂ ಸಹ ಆನಂದವನ್ನು ನೀಡುತ್ತಿವೆ.

    ಎಲ್ಲೆಲ್ಲಿ ಹೆಚ್ಚಾಗಿವೆ ಹಕ್ಕಿಗಳ ಕಲರವ?
    ತುಂಗಭದ್ರಾ ನದಿ ಪಾತ್ರಗಳಲ್ಲಿ ಹಾಗೂ ಕೊಳವೆ ಬಾವಿ ಹೊಂದಿರುವ ರೈತರು ಸೇರಿ ಒಟ್ಟು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡಲಾಗುತ್ತದೆ. ನದಿ ಪಾತ್ರ ಮತ್ತು ಕೊಳವೆ ಬಾವಿ ನೀರು ಬಳಸಿ ರೈತರು ಬೇಸಿಗೆ ಬೆಳೆಯನ್ನು ನಾಟಿ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸರಿಸುಮಾರು 400ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡುವ ಕಾರ್ಯ ಜೋರಾಗಿಯೇ ನಡೆಯುತ್ತಿದೆ. ಹಾಗಾಗಿಯೇ ಹಕ್ಕಿಗಳು ಆಹಾರವನ್ನು ಅರಸಿ ತಾಲೂಕಿನ ಆನೆಗೊಂದಿ, ಚಿಕ್ಕರಂಪೂರ, ಮಲ್ಲಾಪೂರ, ಸಣಾಪೂರ, ಢಣಾಪೂರ, ಚಿಕ್ಕಜಂತಕಲ್, ಮುಸ್ಟೂರು, ವಡ್ಡರಹಟ್ಟಿ, ಸಂಗಾಪೂರ, ಬಸವನದುರ್ಗ, ಹನುಮನಹಳ್ಳಿ, ಹಿರೇಜಂತಕಲ್, ಸಿದ್ದಿಕೇರಿ, ಮರಳಿ, ಪ್ರಗತಿನಗರ ಸೇರಿದಂತೆ ನಾನಾ ಗ್ರಾಮಗಳಲ್ಲಿ ಬೆಳ್ಳಕ್ಕಿಗಳ ಹಿಂಡು ಬೀಡು ಬಿಟ್ಟಿವೆ.

    ಕೃಷಿ ಕಾರ್ಮಿಕರಲ್ಲಿ ಸಂತಸ:
    ಭತ್ತ ನಾಟಿ ಮಾಡುವ ಜಮೀನುಗಳಲ್ಲಿ ಮುಂಚಿತವಾಗಿಯೇ ಭೂಮಿಗೆ ನೀರು ಬಿಟ್ಟು, ಟ್ರ್ಯಾಕ್ಟರ್ ಗಳ ಸಹಾಯದಿಂದ ಹದಗೊಳಿಸಲಾಗುವುದು. ಹದಗೊಳಿಸುವ ವೇಳೆಯಲ್ಲಿ ಭೂಮಿಯಲ್ಲಿ ಇರುವ ಕೀಟಗಳು ಮೇಲೆ ಕಾಣಿಸಿಕೊಳ್ಳುತ್ತವೆ. ಅವುಗಳು ತಿನ್ನುವ ಉದ್ದೇಶದಿಂದ ಬೆಳ್ಳಕ್ಕಿಗಳು ಗುಂಪು ಗುಂಪಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ಬೆಳಗಿನ ಜಾವದಲ್ಲಿ ಕಾಣಿಸಿಕೊಳ್ಳುವ ಹಕ್ಕಿಗಳ ಗುಂಪಿನ ಕಲರವ ಕೃಷಿ ಕಾರ್ಮಿಕರನ್ನು ಸಂತಸಗೊಳಿಸುತ್ತಿದೆ.

    ಅಲ್ಲದೆ ದಾರಿಯಲ್ಲಿ ಹೋಗುವ ಜನರು ಜಮೀನಿನಲ್ಲಿ ಹಾರಾಡುವ ಬೆಳ್ಳಕ್ಕಿಗಳ ಗುಂಪುಗಳನ್ನು ನೋಡಿ, ಫೋಟೊ ಸೆರೆ ಹಿಡಿದು ಸಂತಸ ಪಡುತ್ತಿದ್ದಾರೆ. ಬೆಳ್ಳಕ್ಕಿಗಳು ಆಹಾರ ಅರಸಿ ಜಮೀನುಗಳ ಕಡೆ ಬಂದಿರುವುದು ನೋಡುಗರಿಗೆ ಹಾಗೂ ರೈತರ ಕಣ್ಣುಗಳನ್ನು ತಂಪಾಗಿಸುತ್ತಿವೆ.

  • ಬೈಕ್ ತಪ್ಪಿಸಲು ಹೋಗಿ ಗದ್ದೆಗೆ ಉರುಳಿದ ಬಸ್- ಹಲವರಿಗೆ ಗಾಯ, ಮಹಿಳೆ ಗಂಭೀರ

    ಬೈಕ್ ತಪ್ಪಿಸಲು ಹೋಗಿ ಗದ್ದೆಗೆ ಉರುಳಿದ ಬಸ್- ಹಲವರಿಗೆ ಗಾಯ, ಮಹಿಳೆ ಗಂಭೀರ

    ಹಾಸನ: ಮಂಡ್ಯದ ಕನಗನಮರಡಿ ದುರಂತ ಮರೆಯುವ ಮುನ್ನವೇ ಅಂತಹದ್ದೇ ಘಟನೆಯೊಂದು ಹಾಸನದಲ್ಲಿ ನಡೆದಿದ್ದು, ಭಾರೀ ಅವಘಡವೊಂದು ತಪ್ಪಿದಂತಾಗಿದೆ. ಬೈಕ್ ತಪ್ಪಿಸಲು ಹೋಗಿ ಖಾಸಗಿ ಬಸ್ ಗದ್ದೆಗೆ ಉರುಳಿದ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಹುಳ್ಳೇನಹಳ್ಳಿ ಬಳಿ ನಡೆದಿದೆ.

    ಕೊಡಗು ಜಿಲ್ಲೆಯ ಗದ್ದೆಹೊಸೂರು ಗ್ರಾಮದಿಂದ ಸಂಬಂಧಿಗಳು ಹಾಸನ ಜಿಲ್ಲೆಯ ಗೊರೂರು ಪಟ್ಟಣಕ್ಕೆ ಬೀಗರ ಔತಣಕೂಟಕ್ಕೆ ಬಸ್ ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎದುರಿನಿಂದ ಬರುತ್ತಿರುವ ಬೈಕ್ ತಪ್ಪಿಸಲು ಹೋಗಿ ಬಸ್ ನೇರವಾಗಿ ಗದ್ದೆಗೆ ಉರುಳಿದೆ. ಪರಿಣಾಮ ಬಸ್ ನಲ್ಲಿದ್ದ ಸುಮಾರು 8 ಮಂದಿಗೆ ಗಾಯಗಳಾಗಿದ್ದು, ಅದರಲ್ಲಿ 55 ವರ್ಷದ ಗಂಗಮ್ಮ ಎಂಬವರ ಸ್ಥಿತಿ ಗಂಭೀರವಾಗಿದೆ.

    ಸದ್ಯ ಗಾಯಾಳುಗಳನ್ನು ಅರಕಲಗೂಡು, ಹಾಸನ ಮತ್ತು ಕೊಣನೂರು ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ದ್ವಿಚಕ್ರ ಸವಾರನಿಗೂ ಸಹ ಅಲ್ಪ ಪ್ರಮಾಣದ ಗಾಯಗಳಾಗಿದ್ದು ಸುರಕ್ಷಿತವಾಗಿದ್ದಾನೆ. ಬಸ್ಸಿನಲ್ಲಿ ಒಟ್ಟು 35 ಮಂದಿಯಿದ್ದರು ಎಂಬುದಾಗಿ ತಿಳಿದುಬಂದಿದೆ.

    ಅಪಘಾತ ಸ್ಥಳದಿಂದ ಕೊಂಚ ದೂರದಲ್ಲಿ ನೀರಿನ ಕಾಲುವೆಯಿದೆ. ಆದ್ರೆ ಅದೃಷ್ಟವಶಾತ್ ಹೆಚ್ಚಿನ ಅಪಾಯವಾಗಿಲ್ಲ. ಇದರಿಂದಾಗಿ ಪ್ರಯಾಣಿಕರು ನಿಟ್ಟಿಸಿರು ಬಿಟ್ಟಿದ್ದಾರೆ. ಕೊಣನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಅಪಘಾತಕ್ಕೀಡಾದ ಬಸ್ಸನ್ನು ಸ್ಥಳದಿಂದ ತೆರವುಗೊಳಿಸಲಾಗುತ್ತಿದೆ.

    ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಕ್ಕರೆ ಕಾರ್ಖಾನೆಯ ಫ್ರೀಜರ್ ಬಾಯ್ಲರ್ ಬ್ಲಾಸ್ಟ್- ಗದ್ದೆಗೆ ಕೆಮಿಕಲ್ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟ

    ಸಕ್ಕರೆ ಕಾರ್ಖಾನೆಯ ಫ್ರೀಜರ್ ಬಾಯ್ಲರ್ ಬ್ಲಾಸ್ಟ್- ಗದ್ದೆಗೆ ಕೆಮಿಕಲ್ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟ

    ಮಂಡ್ಯ: ಸಕ್ಕರೆ ಕಾರ್ಖಾನೆಯಲ್ಲಿ ಫ್ರೀಜರ್ ಬಾಯ್ಲರ್ ಬ್ಲಾಸ್ಟ್ ಆದ ಪರಿಣಾಮ ಗದ್ದೆಗೆ ರಾಸಾಯನಿಕ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

    ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪದಲ್ಲಿರುವ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಸುಮಾರು ಆರು ಲಕ್ಷ ಲೀಟರ್ ಸಾಮಥ್ರ್ಯದ ಬಾಯ್ಲರ್ ಬ್ಲಾಸ್ಟ್ ಆಗಿದೆ. ಸ್ಫೋಟದ ರಭಸಕ್ಕೆ ಪಕ್ಕದಲ್ಲಿ ಇದ್ದು ಕಾಂಪೌಂಡ್ ಗೋಡೆ ಛಿದ್ರವಾಗಿದೆ. ಬಾಯ್ಲರ್ ಅಕ್ಕಪಕ್ಕ ಸುಮಾರು 20 ಮೀಟರ್ ವ್ಯಾಪ್ತಿಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ವೇಳೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಪರಿಣಾಮ ಓರ್ವನಿಗಷ್ಟೇ ಗಾಯವಾಗಿದ್ದು ಭಾರೀ ದುರಂತ ತಪ್ಪಿದೆ.

    ಬಾಯ್ಲರ್ ಸ್ಪೋಟಗೊಂಡ ಪರಿಣಾಮ ಅದರೊಳಗಿದ್ದ ಡಿಸ್ಟಿಲರಿ ವಾಟರ್ ಕಾರ್ಖಾನೆ ಸುತ್ತಮುತ್ತಲ ಗದ್ದೆಗಳಿಗೆ ನುಗ್ಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದೆ ಎಂದು ರೈತ ಉಮೇಶ್ ಪ್ರತಿಕ್ರಿಯಿಸಿದ್ದಾರೆ.

    ಗದ್ದೆಗೆ ಮಾತ್ರ ಅಲ್ಲದೇ ಕೆಮಿಕಲ್ ನೀರು ಶಿಂಷಾ ನದಿಗೆ ಹರಿದು ಹೋಗುತ್ತಿದ್ದು ಜಲಚರಗಳಿಗೂ ಕಂಟಕವಾಗುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv