Tag: ಗದ್ದುಗೆ

  • 1 ಸಾವಿರ ವಿದ್ಯಾರ್ಥಿಗಳಿಂದ ಗುಲಾಬಿ ಹೂವನ್ನಿಟ್ಟು ಶ್ರೀಗಳಿಗೆ ಶ್ರದ್ಧಾಂಜಲಿ

    1 ಸಾವಿರ ವಿದ್ಯಾರ್ಥಿಗಳಿಂದ ಗುಲಾಬಿ ಹೂವನ್ನಿಟ್ಟು ಶ್ರೀಗಳಿಗೆ ಶ್ರದ್ಧಾಂಜಲಿ

    ತುಮಕೂರು: ಇಲ್ಲಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಸಾವಿರಾರು ವಿದ್ಯಾರ್ಥಿಗಳು ಗುಲಾಬಿ ಹೂ ಸಮರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ತುಮಕೂರು ನಗರದ ವರಿ ಇಂಟರ್ ನ್ಯಾಷನಲ್ ಶಾಲೆಯ 1 ಸಾವಿರ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಬಂದು ಶ್ರೀಗಳ ಗದ್ದುಗೆಗೆ ಗುಲಾಬಿ ಹೂವನ್ನಿಟ್ಟು ನಮಸ್ಕರಿಸಿದ್ದಾರೆ. 65 ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಶ್ರೀಗಳ ಗದ್ದುಗೆ ದರ್ಶನ ಮಾಡಿಸಿದ್ದಾರೆ.

    ಇತ್ತ ಜನವರಿ 31 ರಂದು ನಡೆಯಲಿರುವ ಸಿದ್ದಗಂಗಾ ಶ್ರೀಗಳ ಪುಣ್ಯಾರಾಧನೆಯ ಸಕಲ ತಯಾರಿ ನಡೆಯುತ್ತಿದೆ. ಭಕ್ತಾದಿಗಳಿಗಾಗಿ ಭಕ್ಷ್ಯ ಭೋಜನ ತಯಾರಾಗುತ್ತಿದೆ. ಎರಡು ಲಕ್ಷ ಜಹಾಂಗೀರ್, 80 ಕ್ವಿಂಟಾಲ್ ಬೋಂದಿ, 50 ಚೀಲ ಮಾಲ್ದಿ ಪುಡಿ ತಯಾರಾಗುತ್ತಿದೆ. ಇದನ್ನೂ ಓದಿ: ಶ್ರೀಗಳ ಪುಣ್ಯಾರಾಧನೆಗೆ ಭಕ್ತರಿಂದ 11 ಟನ್ ಅಕ್ಕಿ ಕಾಣಿಕೆ!

    ಒಟ್ಟು 65 ಕ್ಕೂ ಹೆಚ್ಚು ಅಡುಗೆ ಭಟ್ಟರು ಮಠದ ಮೂರು ಕಡೆ ತಯಾರಿ ಕಾರ್ಯದಲ್ಲಿ ತೊಡಗಿದ್ದಾರೆ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮಠದ ಶಿಕ್ಷಕರಿಂದ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತಿದೆ. ಸಿದ್ದಗಂಗಾ ವಿದ್ಯಾಸಂಸ್ಥೆ ಶಿಕ್ಷಕರಿಂದ ಮಠದ ಆವರಣದಲ್ಲಿರುವ ಕಲ್ಯಾಣಿ ಸ್ವಚ್ಛತೆ ನಡೆಯುತ್ತಿದೆ. ಹತ್ತಾರು ಶಿಕ್ಷಕರು ಕಲ್ಯಾಣಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ(111) ಅವರು ಜನವರಿ 21ರ ಸೋಮವಾರ ಲಿಂಗೈಕ್ಯರಾಗಿದ್ದು, ಗುರುವಾರ ಪುಣ್ಯಾರಾಧನೆ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೂಜೆ ಬಳಿಕ ಭಕ್ತಾಧಿಗಳಿಗೆ ಸಿಗಲಿದೆ ಶ್ರೀಗಳ ಗದ್ದುಗೆಯ ದರ್ಶನ ಭಾಗ್ಯ

    ಪೂಜೆ ಬಳಿಕ ಭಕ್ತಾಧಿಗಳಿಗೆ ಸಿಗಲಿದೆ ಶ್ರೀಗಳ ಗದ್ದುಗೆಯ ದರ್ಶನ ಭಾಗ್ಯ

    ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾದ ಗದ್ದುಗೆಗೆ ಭಕ್ತರು ಬುಧವಾರವೇ ಭೇಟಿ ನೀಡಬಹುದು. ಈಗ ಸಿದ್ಧಲಿಂಗ ಸ್ವಾಮೀಜಿ ಜೊತೆ ವಿವಿಧ ಮಠಾಧಿಶರು ಪೂಜೆ ನಡೆಸುತ್ತಿದ್ದು, ಪೂಜೆ ಮುಗಿದ ಬಳಿಕ ಭಕ್ತಾಧಿಗಳಿಗೆ ಗದ್ದುಗೆ ದರ್ಶನ ಪಡೆಯಲು ಅವಕಾಶ ನೀಡಲಾಗುತ್ತದೆ.

    ನಡೆದಾಡುವ ದೇವರು ಲಿಂಗೈಕ್ಯರಾದ ಗದ್ದುಗೆಯಲ್ಲಿ ಇಂದಿನ ಪೂಜಾ ವಿಧಾನಗಳು ಆರಂಭವಾಗಿದೆ. ಈ ಪೂಜೆ ಸಂದರ್ಭದಲ್ಲಿ ಸಿದ್ಧಲಿಂಗೇಶ್ವರ ಸ್ವಾಮಿಗೆ ಅಭಿಷೇಕ ಹಾಗೂ ಮಂತ್ರಪಠಣೆ ಮಾಡಿ ಪೂಜೆ ಮಾಡಲಾಗುತ್ತದೆ. ಸಿದ್ದಗಂಗೆಯ ಉದ್ದಾನ ಶಿವಯೋಗಿಗಳ ಗದ್ದುಗೆಯಲ್ಲಿ ಪೂಜಾ ವಿಧಾನಗಳು ಆರಂಭಗೊಂಡಿದ್ದು, ಈ ಪೂಜೆ ಪೂರ್ಣಗೊಂಡ ಬಳಿಕ ಶ್ರೀಗಳ ಗದ್ದುಗೆಗೂ ಪೂಜೆ ಸಲ್ಲಿಸಲಾಗುತ್ತದೆ. ಪೂಜೆಯ ನಂತರ ಭಕ್ತರಿಗೆ ಸಿದ್ದಗಂಗಾ ಶ್ರೀಗಳ ಗದ್ದುಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇದನ್ನೂ ಓದಿ: ಖಾಕಿಗಳಿಗೆ ಸರ್ಕಾರದಿಂದ ವೇತನ ಹೆಚ್ಚಳದ ಉಡುಗೊರೆ!

    ಗದ್ದುಗೆ ಪ್ರವೇಶಕ್ಕೆ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಮಠಕ್ಕೆ ಬಂದಿರುವ ಭಕ್ತಾಧಿಗಳು ಶ್ರೀಗಳು ಕೂರುತ್ತಿದ್ದ ವೇದಿಕೆಯ ದರ್ಶನ ಪಡೆಯುತ್ತಿದ್ದಾರೆ. ಮಠದ ಮುಂಭಾಗದ ಪ್ರಸಾದ ನಿಲಯದ ಪಕ್ಕದಲ್ಲಿಯೇ ಈ ವೇದಿಕೆ ಇದೆ. ಹಾಗೆಯೇ ರಾತ್ರಿ ಬಂದಿರುವ ಭಕ್ತರು ಮಠದ ಆವರಣದಲ್ಲಿ ವಿಶ್ರಾಂತಿ ಪಡೆದು ಬೆಳಗ್ಗೆ ವೇದಿಕೆಯ ದರ್ಶನ ಪಡೆದು ಹಿಂದಿರುಗಿದ್ದಾರೆ. ಸಿದ್ದಗಂಗಾ ಮಠದ ಸುತ್ತ ಪೊಲೀಸ್ ಭದ್ರತೆಯನ್ನು ಮುಂದುವರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 70ರ ದಶಕದಲ್ಲೇ ಗದ್ದುಗೆ ನಿರ್ಮಾಣಕ್ಕೆ ಜಾಗ ಸೂಚಿಸಿದ್ದ ಶ್ರೀ: ಭವನದ ವಿಶೇಷತೆ ಏನು?

    70ರ ದಶಕದಲ್ಲೇ ಗದ್ದುಗೆ ನಿರ್ಮಾಣಕ್ಕೆ ಜಾಗ ಸೂಚಿಸಿದ್ದ ಶ್ರೀ: ಭವನದ ವಿಶೇಷತೆ ಏನು?

    ತುಮಕೂರು: ನಡೆದಾಡುವ ದೇವರು, ಶತಮಾನದ ಸಂತ, ಶತಾಯುಷಿ ಶ್ರೀ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿದ್ದು, ಲಿಂಗಾಯತ ಸಂಪ್ರದಾಯದಂತೆ ಶ್ರೀಗಳ ಕ್ರಿಯಾ ಸಮಾಧಿ ನೆರವೇರಲಿದೆ.

    ಇಂದು ಸಂಜೆ 4 ಗಂಟೆ 30 ನಿಮಿಷಕ್ಕೆ ಕ್ರಿಯಾ ಸಮಾಧಿ ನಡೆಯಲಿದೆ. ಹಳೆಯ ಮಠಕ್ಕೆ ಅಂಟಿಕೊಂಡಂತೆ ಗದ್ದುಗೆ ನಿರ್ಮಾಣವಾಗಿದ್ದು, ಶ್ರೀಗಳು ಈ ಸ್ಥಳದಲ್ಲಿ ಲಿಂಗೈಕ್ಯವಾಗಿ ಲಿಂಗದ ರೂಪದಲ್ಲಿ ದರ್ಶನ ನೀಡಲಿದ್ದಾರೆ. ಶ್ರೀಗಳು ಲಿಂಗೈಕ್ಯರಾಗಲಿರುವ ಗರ್ಭಗುಡಿಯಲ್ಲಿ 12 ಅಡಿ ಆಳದ ಸಮಾಧಿ ಗುಂಡಿ ತೆಗೆಯಲಾಗಿದೆ.

    ಶ್ರೀಗಳ ಕ್ರಿಯಾ ಸಮಾಧಿ ನಡೆಯಲಿರುವ ಭವನವನ್ನು ತಳಿರು ತೋರಣ, ಹೂಗಳಿಂದ ಅಲಂಕರಿಸಲಾಗುತ್ತಿದೆ. ಸಿದ್ದಗಂಗಾ ಶ್ರೀಗಳ ಸಮಾಧಿ ಕಾರ್ಯದ ವೇಳೆ ವಿಭೂತಿ ಗಟ್ಟಿ ಮತ್ತು ಉಪ್ಪನ್ನು ಬಳಸಲಾಗುತ್ತದೆ. ಗದ್ದುಗೆಯ ಗರ್ಭಗುಡಿಯಲ್ಲಿ. ಸ್ಥಳಶುದ್ಧಿ, ಪಂಚಕಳಸ ಪೂಜೆ, ಅಷ್ಟ ದಿಕ್ಪಾಲಕರು, ಸಪ್ತರ್ಷಿಗಳ ಪೂಜೆ ನಡೆಯಲಿದೆ.

    ತಮ್ಮ ಗುರುಗಳಾದ ಉದ್ಧಾನ ಶಿವಯೋಗಿಗಳ ಗದ್ದುಗೆಯ ಪಕ್ಕದಲ್ಲೇ ಸಿದ್ದಗಂಗಾ ಶ್ರೀ ಚಿರಸ್ಥಾಯಿಯಾಗಲಿದ್ದಾರೆ. 70ನೇ ವರ್ಷದಲ್ಲಿದ್ದಾಗ ಶ್ರೀಗಳು ಐಕ್ಯವಾಗುವ ಸ್ಥಳವನ್ನು ಸೂಚಿಸಿದ್ದರು. ಈ ಸ್ಥಳ ಸೂಚಿಸಲು ಕಾರಣವಿದೆ. ಐಕ್ಯ ಸ್ಥಳಕ್ಕಾಗಿ ಜಾಗ ಹುಡುಕುತ್ತಿದ್ದಾಗ ತಮ್ಮ ಗುರುಗಳಾದ ಉದ್ಧಾನ ಶಿವಯೋಗಿಗಳು ನೀರನ್ನು ಎರೆದು ಪೋಷಿಸಿದ್ದ ಬೃಹತ್ ಆಲದ ಮರ ಉರುಳಿಬಿದ್ದಿತ್ತು. ಈ ಸ್ಥಳವನ್ನು ಶ್ರೀಗಳು ಆಯ್ಕೆ ಮಾಡಿದ್ದರು.

    1982ರಲ್ಲಿ ಭವನ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಆಗ ಕನಕಪುರದ ದೇಗುಲ ಮಠದ ಇಮ್ಮಡಿ ಮಹಾಲಿಂಗ ಸ್ವಾಮೀಜಿ ಈ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಸಿದ್ದಗಂಗಾ ಶ್ರೀ ಮತ್ತು ಮಹಾಲಿಂಗ ಸ್ವಾಮೀಜಿ ಇಬ್ಬರೂ ಉದ್ಧಾನ ಶಿವಯೋಗಿಗಳ ಶಿಷ್ಯರಾಗಿದ್ದರು. ಕಾರಣಾಂತರಗಳಿಂದ ನಿಧಾನಗತಿಯಲ್ಲಿ ಸಾಗಿದ್ದ ಕಾಮಗಾರಿ ಕೆಲಸ ಕೆಲ ವರ್ಷಗಳಿಂದ ವೇಗವಾಗಿ ಸಾಗಿ ಎರಡು ವರ್ಷಗಳ ಹಿಂದೆಯಷ್ಟೇ ಗದ್ದುಗೆ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿತ್ತು.

    ಗದ್ದುಗೆಯ ವಿಶೇಷತೆ ಏನು?
    ಗದ್ದುಗೆ ನಾಲ್ಕು ಮೂಲೆಗಳಲ್ಲಿ ಕರಡಿಗೆಯ ಚಿತ್ರವನ್ನು ಕೆತ್ತಲಾಗಿದೆ. ಈ ಭವನ ಸಂಪೂರ್ಣ ಅಮೃತಶಿಲೆಯಿಂದ ನಿರ್ಮಾಣಗೊಂಡಿದೆ. ಸ್ವಾಮೀಜಿ ನಿತ್ಯ ಓಡಾಡುತ್ತಿದ್ದ ತೇರಿನ ಬೀದಿಯಲ್ಲೇ ಈ ಭವನ ಇದೆ. ಲಿಂಗೈಕ್ಯರಾಗಲಿರುವ ಗದ್ದುಗೆ ಗರ್ಭಗುಡಿ ಶಿಲಾ ಬಾಗಿಲ ಮೇಲೆ 26 ದೇವರನ್ನು ಕೆತ್ತಲಾಗಿದೆ. ಬಾಗಿಲ ಎಡ, ಬಲ ಭಾಗದಲ್ಲಿ ಅಷ್ಟ ದಿಕ್ಪಾಲಕರು, ಸಿದ್ದಗಂಗಾ ಮಠದ ದೇವರಾದ ಸಿದ್ದಲಿಂಗೇಶ್ವರ ಸ್ವಾಮೀಜಿ, ಬಸವಣ್ಣ, ಲಿಂಗೈಕ್ಯ ಗೋಸಲ ಸಿದ್ದೇಶ್ವರ, ಉದ್ದಾನ ಶಿವಯೋಗಿ, ಯಡಿಯೂರು ಸಿದ್ದಲಿಂಗೇಶ್ವರ, ಅಟವಿ ಶಿವಯೋಗಿ, ಬೇಡರ ಕಣ್ಣಪ್ಪ, ಅಕ್ಕಮಹಾದೇವಿ ಸೇರಿದಂತೆ 26 ಮೂರ್ತಿಗಳನ್ನು ಕೆತ್ತಲಾಗಿದೆ.