ಗದಗ: ಗೋವಾ ರಾಜ್ಯಕ್ಕೆ ಸಂಬಂಧಿಸಿದ ಕದಂಬ ಬಸ್ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ಹರ್ಲಾಪೂರ ಕ್ರಾಸ್ ಬಳಿ ನಡೆದಿದೆ.
ಮೃತರು ಹಾವೇರಿ ಜಿಲ್ಲೆ ಬಂಕಾಪೂರ ತಾಲೂಕಿನ ಹುನಗುಂದ ನಿವಾಸಿ ಎನ್ನಲಾಗ್ತಿದೆ. ಇನ್ನು ಬಸ್ ಚಾಲಕನಿಗೂ ಗಾಯಗಳಾಗಿವೆ. ಹಾವೇರಿ ಜಿಲ್ಲೆ ಪೊಲೀಸ್ ಕಂಟ್ರೋಲ್ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಅರ್ಜುನ್ ನೆಲ್ಲೂರ (32), ಸಹೋದರ ಸಂಬಂಧಿ ರವಿ ನೆಲ್ಲೂರ (35) ಹಾಗೂ ಕೊಪ್ಪಳ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮಿನಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಈರಣ್ಣ ಉಪ್ಪಾರ (36) ಮೃತ ದುರ್ದೈವಿಗಳು.
ಗೋವಾ ರಾಜ್ಯದ ಕದಂಬ ಬಸ್ ಪೋಂಡಾ, ಹುಬ್ಬಳ್ಳಿ, ಗದಗ ಮಾರ್ಗವಾಗಿ ಹೊಸಪೇಟೆ ಹೊರಡಿದ್ದ ಬಸ್ ಇದಾಗಿದೆ. ಗಂಗಾವತಿಯಿಂದ ಕೊಪ್ಪಳ, ಗದಗ ಮಾರ್ಗವಾಗಿ ಬಂಕಾಪೂರ ಕಡೆಗೆ ಹೊರಟಿದ್ದ ಕಾರ್. ಕಾರ್ ಚಾಲಕನ ನಿರ್ಲಕ್ಷ್ಯದಿಂದ ರೋಡ್ ಡಿವೈಡರ್ ದಾಟಿಕೊಂಡು ಎದುರು ಬರುವ ಬಸ್‌ಗೆ ಡಿಕ್ಕಿ ಹೊಡೆದ್ದಾರೆ. ಕಾರ್ ಚಾಲಕನ ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಬಸ್ ಮುಂದಿನ ಭಾಗ ಹಾಗೂ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತ ಹಾಗೂ ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








