Tag: ಗದಗ್

  • ಬಡ್ಡಿ ಹಣಕ್ಕೆ ಮನಬಂದಂತೆ ಹಲ್ಲೆ – ಬೆತ್ತಲೆಗೊಳಿಸಿ ಚಿತ್ರಹಿಂಸೆ

    ಬಡ್ಡಿ ಹಣಕ್ಕೆ ಮನಬಂದಂತೆ ಹಲ್ಲೆ – ಬೆತ್ತಲೆಗೊಳಿಸಿ ಚಿತ್ರಹಿಂಸೆ

    – ಬೆಲ್ಟ್, ಕೇಬಲ್ ವಯರ್, ಲಾಠಿಯಿಂದ ಹೊಡೆತ

    ಗದಗ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ (Micro Finance) ಹಾವಳಿ ಬೆನ್ನಲ್ಲೇ, ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದೆ. 1 ಲಕ್ಷ ರೂ ಸಾಲದ ಬಡ್ಡಿ ನೀಡದ್ದಕ್ಕೆ ಮನಬಂದಂತೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಗರದ ಬೆಟಗೇರಿಯಲ್ಲಿ (Gadag Betageri) ನಡೆದಿದೆ.

    ದಶರಥ ಬಳ್ಳಾರಿ ಮೇಲೆ ನಾಲ್ಕು ಜನ ಸೇರಿ ಮಾರಣಾಂತಿಕ ಮನಬಂದಂತೆ ಹಲ್ಲೆಮಾಡಿದ್ದಾರೆ. ಬೆಟಗೇರಿ ನಿವಾಸಿ ದಶರಥ ಅವರು ಮಂಜುನಾಥ ಹಂಸನೂರ ಎಂಬಾತನ ಬಳಿ ಎರಡು ವರ್ಷದ ಹಿಂದೆ 1 ಲಕ್ಷ ರೂ.ಹಣ ಪಡೆದಿದ್ದರು. ಈ ಸಾಲಕ್ಕೆ ಅವರಿಗೆ ಬಡ್ಡಿ ಸಹ ನೀಡುತ್ತಾ ಬಂದಿದ್ದರು.  ಇದನ್ನೂ ಓದಿ:ಮೀಟರ್ ಬಡ್ಡಿ ದಂಧೆಕೋರರ ಟಾರ್ಚರ್ – ಯುವಕ ನೇಣಿಗೆ ಶರಣು

    ಇತ್ತೀಚೆಗೆ ಕೆಲಸ ಇಲ್ಲದಕ್ಕೆ ಬಡ್ಡಿ ಹಣ ತುಂಬಲು ವಿಳಂಬ ಮಾಡಿದ್ದಾರೆ. ವಿಳಂಬ ಮಾಡಿದ್ದಕ್ಕೆ ಜ.21 ರಂದು ರಾತ್ರಿ ದಶರಥ ಅವರನ್ನು ಸೆಟಲ್ಮೆಂಟ್ ನಗರದ ಮನೆಯೊಂದರಲ್ಲಿ ಕರೆದೊಯ್ದ ಚಿತ್ರ ಹಿಂಸೆ ನೀಡಿದ್ದಾರೆ.

    ಮಂಜುನಾಥ ಹಂಸನೂರ, ಮಹೇಶ್ ಹಂಸನೂರ, ಡಿಸ್ಕವರಿ ಮಂಜು ಹಾಗೂ ಹನುಮಂತ ಕ್ರೌರ್ಯ ಮೆರೆದಿದ್ದಾರೆ. ದಶರಥ ಅವರನ್ನು ಕೂಡಿಹಾಕಿ ಬಟ್ಟೆ ಬಿಚ್ಚಿ, ಬಾಯಿ ಬಟ್ಟೆ ತುಂಬಿ ಕುಡಿಯುತ್ತಾ ರಾತ್ರಿ 10 ಗಂಟೆಗೆ ಹೊಡೆಯಲು ಆರಂಭಿಸಿದವರು ತಡರಾತ್ರಿ 3 ಗಂಟೆಯವರೆಗೆ ಹಲ್ಲೆ ಮಾಡಿದ್ದಾರೆ. ಬೆಲ್ಟ್, ಕೇಬಲ್ ವಯರ್, ಲಾಠಿಯಿಂದ ಮೈ, ಕೈ, ಕಾಲು, ಬೆನ್ನು, ಮುಖ, ತಲೆ ಎಲ್ಲಾ ಬಾಸುಂಡೆ ಬರುವಂತೆ ಚಿತ್ರ ಹಿಂಸೆ ಕೊಟ್ಟಿದ್ದಾರೆ.

    ನಸುಕಿನ ಜಾವ 3 ಗಂಟೆ ನಂತರ ಅವರನ್ನು ತಳ್ಳಿ ಬಾಗಿಲು ಹಾಕಿಕೊಂಡು ದಶರಥ ಮನೆಗೆ ಬಂದಿದ್ದಾರೆ. ಈಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಜ.23 ರಂದು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಶೇಷ ಕಾರ್ಯಾಚರಣೆ – ರಾತ್ರಿ ಕುಡುಕರಿಗೆ ಚಳಿ ಬಿಡಿಸಿದ ಗದಗ ಎಸ್‌ಪಿ

    ವಿಶೇಷ ಕಾರ್ಯಾಚರಣೆ – ರಾತ್ರಿ ಕುಡುಕರಿಗೆ ಚಳಿ ಬಿಡಿಸಿದ ಗದಗ ಎಸ್‌ಪಿ

    ಗದಗ: ಕುಡಿದ ಮತ್ತಲ್ಲಿ ನಗರದಲ್ಲಿ ಚಾಕು ಇರಿತ, ಗಲಾಟೆಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕುಡುಕರಿಗೆ ಎಸ್‌ಪಿ ಚಳಿ ಬಿಡಿಸಿದ ಘಟನೆ ಗದಗ್‌ನಲ್ಲಿ (Gadag) ನಡೆದಿದೆ.

    ಗದಗ ಬೆಟಗೇರಿ ಅವಳಿ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ನೇತೃತ್ವದಲ್ಲಿ ಡ್ರಿಂಕ್ & ಡ್ರೈವ್ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಯಿತು.

    ಹೊಸ ಬಸ್ ನಿಲ್ದಾಣ, ಓಲ್ಡ್ ಡಿಸಿ ಆಫೀಸ್ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್, ಹುಯಿಲಗೋಳ ನಾರಾಯಣರಾವ್ ಸರ್ಕಲ್, ಮುಳಗುಂದ ನಾಕಾ, ಬೆಟಗೇರಿ ಬಸ್ ನಿಲ್ದಾಣ ಭಾಗ ಸೇರಿದಂತೆ ಅನೇಕ ಕಡೆಗಳಲ್ಲಿ ಎಸ್‌ಪಿ ಕಾರ್ಯಾಚರಣೆ ನಡೆಸಿದರು. ಇದನ್ನೂ ಓದಿ: ಸೈಫ್‌ ಮೇಲೆ ಹಲ್ಲೆ: ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ – ಆರೋಪಿ 5 ದಿನ ಪೊಲೀಸ್‌ ಕಸ್ಟಡಿಗೆ

    ರಾತ್ರೋರಾತ್ರಿ ದಿಢೀರ್ ಎಸ್‌ಪಿ ಹಾಗೂ ಅನೇಕ ಪೊಲೀಸ್ ಅಧಿಕಾರಿಗಳು ಡ್ರೈವಿಂಗ್ ಮಾಡುವವರನ್ನು ತಡೆದು ತಪಾಸಣೆ ಮಾಡಿದರು. ಪಾನ ಮತ್ತರಾದವರಿಗೆ ದಂಡ ವಿಧಿಸುವುದರ ಮೂಲಕ ನಶೆ ಇಳಿಸುವ ಕೆಲಸ ಮಾಡಿದರು. ಈ ವೇಳೆ ಪ್ರಬಾರಿ ಎಸ್.ಪಿ, ಡಿವೈಎಸ್ಪಿ, ಸಿಪಿಐ ಸೇರಿದಂತೆ ಅನೇಕ ಸಿಬ್ಬಂದಿ ಇದ್ದರು.

     

  • ಗದಗದಲ್ಲಿ ನಿಂತಿಲ್ಲ ಪ್ರವಾಹ ಸಂತ್ರಸ್ತರ ಕಣ್ಣೀರು – ಪರಿಹಾರ ಹಂಚಿಕೆಯಲ್ಲಿ ವಿಳಂಬಕ್ಕೆ ಆಕ್ರೋಶ

    ಗದಗದಲ್ಲಿ ನಿಂತಿಲ್ಲ ಪ್ರವಾಹ ಸಂತ್ರಸ್ತರ ಕಣ್ಣೀರು – ಪರಿಹಾರ ಹಂಚಿಕೆಯಲ್ಲಿ ವಿಳಂಬಕ್ಕೆ ಆಕ್ರೋಶ

    ಗದಗ: ನೆರೆಹಾವಳಿಯಿಂದ ಮನೆ-ಮಠ ಕಳೆದುಕೊಂಡ ಸಾವಿರಾರು ಮಂದಿ ಬೀದಿಗೆ ಬಿದ್ದಿದ್ದಾರೆ. ನೆರೆಬಂದು ಹೋಗಿ ಒಂದೂವರೆ ತಿಂಗಳಾದರೂ ನೆರೆಸಂತ್ರಸ್ತರ ಕಣ್ಣಿರು ಮಾತ್ರ ಇನ್ನೂ ನಿಲ್ಲುತ್ತಿಲ್ಲ. ಕಾರಣ ಇನ್ನೂ ಸಂತ್ರಸ್ತರಿಗೆ 10 ಸಾವಿರ ಪರಿಹಾರ ಕೂಡುವಲ್ಲಿ ಸರ್ಕಾರ ವಿಫಲವಾಗಿದೆ.

    ಹೌದು. ಜಲಪ್ರಳಯಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ನಲುಗಿ ಹೋಗಿತ್ತು. ಅಗತ್ಯ ವಸ್ತುಗಳ ಖರೀದಿಗೆ 10 ಸಾವಿರ ರೂಪಾಯಿ ನೀಡಿತ್ತು. ಆದರೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ವಾಸನ ಗ್ರಾಮದ ಇನ್ನೂ ನೂರಾರು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ. ಕೆಲವರಿಗೆ ಚೆಕ್ ನೀಡಿದ್ದಾರೆ. ಇನ್ನೂ ಕೆಲವರಿಗೆ ಪರಿಹಾರ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಸಂತ್ರಸ್ತರು ಕಿಡಿಕಾರಿದ್ದಾರೆ. ಸರ್ಕಾರದ 10 ಸಾವಿರ ಕೊಟ್ಟರೆ ಕೊನೆಪಕ್ಷ ಅಗತ್ಯ ವಸ್ತುಗಳು ಖರೀದಿ ಮಾಡಬೇಕು ಅಂದುಕೊಂಡ ಸಂತ್ರಸ್ತರು ಪರಿಹಾರ ಸಿಗದೇ ಪರದಾಡುತ್ತಿದ್ದಾರೆ. ಪರಿಹಾರ ಚೆಕ್ ನಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ನೊಂದ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಕ್ಷೇತ್ರದ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ಕಾಟಾಚಾರಕ್ಕೆ ಬಂದು ಹೋಗುತ್ತಾರೆ. ಕಾರಿನಿಂದ ಇಳಿದು ಜನರ ಕಷ್ಟ ಆಲಿಸಲ್ಲ ಅನ್ನೋದು ಸ್ಥಳೀಯರ ಆರೋಪವಾಗಿದೆ. ವಾಸನ ಗ್ರಾಮದಲ್ಲಿ 480 ಮನೆಗಳಿದ್ದು, 2,500 ಕ್ಕೂ ಅಧಿಕ ಜನ ಸಂಖ್ಯೆಯಿದೆ. ಇನ್ನೂ 180 ಜನರಿಗೆ 10 ಸಾವಿರ ಪರಿಹಾರ ಚೆಕ್ ಬಂದಿಲ್ಲ ಎಂದು ಸಂತ್ರಸ್ತರು ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರ ಎಲ್ಲವೂ ಜನರ ಕಣ್ಣೊರೆಸುವ ತಂತ್ರ ಅನುಸರಿಸುತ್ತದೆ. ಸಿ.ಎಂ ಯಡಿಯೂರಪ್ಪ ಮಾತ್ರ ಎಲ್ಲರಿಗೂ ಮೊದಲ ಹಂತದ ಪರಿಹಾರ ನೀಡಿದ್ದೇವೆ ಅಂತಾರೆ. ಆದರೆ ಇಲ್ಲಿ ಇನ್ನೂ ನೂರಾರು ಜನರು ಚೆಕ್ ನೀಡದ್ದಕ್ಕೆ ಕಣ್ಣೀರಿಡುತ್ತಿದ್ದಾರೆ. ಸಂಬಂಧಿಸಿದ ಗ್ರಾಮ ಪಂಚಾಯತ್ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಕೇಳಿದರೆ ನಿಮ್ಮ ಲಿಸ್ಟ್ ಕಳುಹಿಸಲಾಗಿದೆ ತಹಶೀಲ್ದಾರ್ ಕೇಳ್ರಿ ಅಂತಾರೆ. ಮೇಲಾಧಿಕಾರಿ ಕೇಳಿದರೆ, ನಿಮ್ಮ ಲೋಕಲ್ ಅಧಿಕಾರಿಗಳನ್ನ ಕೇಳ್ರಿ ಅಂತಾರೆ. ಹೀಗೆ ಒಬ್ಬರನ್ನೊಬ್ಬರು ಬೆರಳು ತೋರಿಸಿ ಸಾಗು ಹಾಕುತ್ತಿದ್ದಾರೆ. ಅಧಿಕಾರಿಗಳೇ ನಾವು ಬದುಕು ನಡೆಸುವುದಾದರೂ ಹೇಗೆ ಎಂದು ಸಂತ್ರಸ್ತರು ಕಿಡಿಕಾರಿದ್ದಾರೆ.

    ಬಿದ್ದ ಮನೆಗಳ ಪರಿಹಾರ ನೀಡುವಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಕೆಲವರ ಸಂಪೂರ್ಣ ಮನೆ ಬಿದ್ರೂ “ಬಿ”-“ಸಿ” ಗ್ರೇಡ್ ಹಾಕಿದ್ದಾರೆ. ಅಲ್ಪಸ್ವಲ್ಪ ಬಿದ್ದ ಮನೆಗಳಿಗೆ “ಎ” ಅಂತ ನಮೂದನೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬರುತ್ತಿದೆ. ಅದೇನೇ ಇರಲಿ ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರು ಮಾತ್ರ ನಮ್ಮ ಪರಿಹಾರ ಇವತ್ತು ಬಂದಿತ್ತು ನಾಳೆ ಬಂದಿತು ಎಂದು ಆಸೆ ಕಣ್ಣಲ್ಲಿ ಕಾಯುತ್ತಿದ್ದಾರೆ.

  • ಡರ್ಟಿ ಕೇಕ್, ಪ್ರಾಣ ತೆಗೆಯೋ ರಾಸಾಯನಿಕ- ನ್ಯೂ ಇಯರ್ ಕಲರ್‌ಫುಲ್‌ ಕೇಕಿನ ಹಿಂದಿದೆ ಕಿಲ್ಲರ್ ಕೆಮಿಕಲ್..!

    ಡರ್ಟಿ ಕೇಕ್, ಪ್ರಾಣ ತೆಗೆಯೋ ರಾಸಾಯನಿಕ- ನ್ಯೂ ಇಯರ್ ಕಲರ್‌ಫುಲ್‌ ಕೇಕಿನ ಹಿಂದಿದೆ ಕಿಲ್ಲರ್ ಕೆಮಿಕಲ್..!

    ಬೆಂಗಳೂರು: ಇಂದು ಮಧ್ಯರಾತ್ರಿ ಹೊಸ ವರ್ಷದ ಆಚರಣೆ ಕೇಕ್ ಕತ್ತರಿಸುವ ಮೂಲಕ ಆರಂಭವಾಗುತ್ತದೆ. ಹೊಸ ವರ್ಷಕ್ಕೆ ಸ್ಪೆಷಲ್ ಕೇಕ್ ಹುಡ್ಕೊಂಡು ಹೊರಡುವ ಮಂದಿಯೇ ಎಚ್ಚರವಾಗಿರಿ. ಯಾಕಂದ್ರೆ ಹೊಸ ವರ್ಷದ ಮೂಡ್ ಕೆಡಿಸಲು ಸಪ್ಲೈ ಆಗುತ್ತಿದೆ ಕಿಲ್ಲರ್ ಕೇಕ್.

    ಹೌದು. ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾ ಕಣ್ಣಿನಲ್ಲಿ ಹಾಗೂ ರಿಯಾಲಿಟಿ ಚೆಕ್‍ನಲ್ಲಿ ಕಲರ್ ಕೇಕ್‍ನ ಅಸಲಿ ಬಣ್ಣಗಳು ಬಯಲಾಗಿದೆ. ಜೀವನದಲ್ಲಿ ಮತ್ತೆಂದೂ ಕೇಕ್ ತಿನ್ನಬಾರದು ಅಂತಾ ಅನ್ನಿಸುವಷ್ಟು ಕೆಟ್ಟದಾಗಿ ಕೇಕ್ ತಯಾರಾಗುತ್ತದೆ. ಬೆಂಗಳೂರು ಮಾತ್ರವಲ್ಲದೇ ಗದಗ್ ಹಾಗೂ ಹುಬ್ಬಳ್ಳಿಯಲ್ಲೂ ಇದೇ ರೀತಿಯಲ್ಲಿ ಕೇಕ್ ಗಳು ತಯಾರಾಗುತ್ತವೆ.

    ಅದೇನ್ ಕಲರ್ರು. ಅದೇನು ಸಾಫ್ಟು. ವೆರೈಟಿ ಡಿಸೈನು. ಬೆಣ್ಣೆಯಂತಹ ಕ್ರೀಂನಲ್ಲಿ ಸ್ಟ್ರಾಬರಿ, ಚೆರ್ರಿ, ಹಿಂಗೆ ಕಣ್ಣು ಕುಕ್ಕುವಂತಹ ಡಿಸೈನ್ಸ್ ಗಳು. ಇದು ಹೊಸ ವರ್ಷಕ್ಕೆ ರೆಡಿಯಾಗಿರೋ ವೆರೈಟಿ ವೆರೈಟಿ ಕೇಕುಗಳು. ನ್ಯೂ ಇಯರ್ ಸೆಲಬ್ರೇಷನ್‍ಗೆ ಎಣ್ಣೆ ಹೊಡೆಯೋ ಮುಂಚೆ ಕೇಕ್ ಕಟ್ಟಿಂಗ್ ಮಾಡೋದು ಕಾಮನ್. ಆದ್ರೆ ಈ ಕಲರ್‍ಫುಲ್ ಕೇಕ್‍ನ ಅಸಲಿ ಕಥೆ ಇಲ್ಲಿದೆ. ಇದನ್ನೂ ಓದಿ: ‘ವೆಲ್’ಕಂ 2019- ಆರೋಗ್ಯಕರ ರೀತಿಯಲ್ಲಿ ವರ್ಷಾಚರಣೆ

    ನಾಗಾವರ ಬೇಕರಿ:
    ಬೇಕರಿಯ ಗ್ಲಾಸ್‍ನಲ್ಲಿ ಅತ್ಯಾಕರ್ಷಕವಾಗಿ ಕಾಣೋ ಕೇಕ್ ಗಳು ಹೇಗೆ ತಯಾರಾಗ್ತವೆ ಅನ್ನೋದನ್ನು ನೋಡಲು ಕೇಕ್ ರೆಡಿಮಾಡ್ತೀರೋ ನಾಗವಾರದ ಒಂದು ಬೇಕರಿ ಬಳಿ ಹೋಗಿದ್ವಿ. ಆದ್ರೆ ಅಲ್ಲಿ ಹೋಗಿ ಕಿಚನ್ ಕಡೆ ದೃಷ್ಟಿ ಹಾಯಿಸಿದ್ರೆ ವಾಕರಿಕೆ ಬರೋದೊಂದು ಬಾಕಿಯಿತ್ತು. ಕೋಳಿಫಾರಂಗೆ ಹೊಂದಿಕೊಂಡಂತೆ ಇರುವ ಈ ಬೇಕರಿಯವನದ್ದು ಬೆಂಗಳೂರಿನಲ್ಲಿ ಮೂರು ಬ್ರ್ಯಾಂಚ್ ಇದ್ಯಂತೆ. ಜಗತ್ತಿನ ಅಷ್ಟು ಗಲೀಜುಗಳನ್ನು ಈತನ ಬೇಕರಿಯ ಕಿಚನ್‍ನಲ್ಲಿಯೇ ಇದ್ಯೋ ಅನ್ನೋ ಹಾಗಿತ್ತು ಆ ಬೇಕರಿಯ ಸ್ಥಿತಿ. ಇದನ್ನೂ ಓದಿ: ಮನೆಯಲ್ಲೇ ಸಿಂಪಲ್ ಎಗ್‍ಲೆಸ್ PLUM CAKE ಮಾಡೋದು ಹೇಗೆ?

    ಅಲಲ್ಲಿ ಕಸ, ಗಲೀಜು ಬಟ್ಟೆ ಧರಿಸಿ ಕೇಕ್ ಲಟ್ಟಿಸೋ ಈತ ಕಪ್ಪು ಕಪ್ಪಾಗಿ ಅಲ್ಲಲ್ಲಿ ತುಕ್ಕು ಹಿಡಿದಿರುವ ಕಬ್ಬಿಣದ ಟ್ರೇನಲ್ಲಿ ಬ್ರೆಡ್‍ಗಳನ್ನು ಇಟ್ಟಿದ್ದಾನೆ. ಜೊತೆಗೆ ನೊಣಗಳ ಹಾರಾಟ, ಬ್ರೆಡ್‍ಗಳಿಗೆ ಮಾಸಿದ ಬಣ್ಣದ ಪೇಪರ್‍ಗಳನ್ನೂ ಇಟ್ಟಿದ್ದಾರೆ. ಜನರಿಗೆ ವಿಷವನ್ನು ಉಣಿಸೋ ರಾಕ್ಷಸನಂತಿರುವ ಈ ಮನುಷ್ಯನತ್ರ ಹೊಸ ವರ್ಷಕ್ಕೆ ಕೇಕ್ ಸಿಗುತ್ತಾ ಅಂತಾ ಮಾತಾನಾಡಿಸಿದಾಗ, ನಮ್ಮಲ್ಲಿ ಫುಲ್ ಫ್ರೆಶ್ ಕೇಕ್ ಸಿಗೋದು, ಇಡೀ ಹೊಸ ವರ್ಷದ ಅಷ್ಟು ಆರ್ಡರ್ ತನಗೆ ಸಿಗುತ್ತೆ ಅನ್ನೋ ರೇಂಜಿಗೆ ಮಾತನಾಡಿದ್ದಾನೆ.

    ಪ್ರತಿನಿಧಿ: ಇಲ್ಲೇ ರೆಡಿ ಮಾಡೋದಾ ಕೇಕ್?
    ಬೇಕರಿ ಮಾಲೀಕ:  ನಮ್ಮದು ಮೂರು ಅಂಗಡಿ ಇದೆ. ಕಂಟ್ಮೋನ್ಮೆಂಟ್‍ನಲ್ಲಿ ಇದೆ. ಇಲ್ಲೆ ಎರಡು ಇದೆ.
    ಪ್ರತಿನಿಧಿ: ಇಲ್ಲೆ ರೆಡಿ ಮಾಡ್ತೀರಾ, ಈ ಸ್ಪಾಟ್‍ನಲ್ಲೇ?

    ಬೇಕರಿ ಮಾಲೀಕ: ಹೌದು
    ಪ್ರತಿನಿಧಿ: ಪ್ರೆಶ್ ಸಿಗುತ್ತಾ?
    ಬೇಕರಿ ಮಾಲೀಕ: ಫ್ರೆಶ್ಶೆ ಸಿಗುತ್ತೆ. ನಮ್ಮಲ್ಲಿ ನ್ಯೂ ಇಯರ್‍ಗೆ , ಪ್ಲೇನ್ ಕೇಕ್ ಇದೆ. ಕ್ರೀಂ ಹಾಕ್ತೀವಿ.
    ಪ್ರತಿನಿಧಿ: ಕೆಮಿಕಲ್ ಹಾಕ್ತೀರಾ ಲೈಟ್ ಆಗಿ?

    ಬೇಕರಿಮಾಲೀಕ: ಕೆಮಿಕಲ್ ಯೂಸ್ ಮಾಡೇ ಮಾಡ್ತೀವಿ..
    ಪ್ರತಿನಿಧಿ: ಕೆಮಿಕಲ್ ಬಳಸಿದ್ರೆ ಮಕ್ಕಳಿಗೆ ಕೊಟ್ರೆ ಪ್ರಾಬ್ಲಂ ಆಗಲ್ವಾ?
    ಬೇಕರಿ ಮಾಲೀಕ: ಏನಿಲ್ಲ ಮಕ್ಕಳಿಗೆ ಏನು ಆಗಲ್ಲ. ಈ ಕ್ರೀಂ ಯ್ಯೂಸ್ ಮಾಡ್ತೀವಿ…ಸ್ವಲ್ಪ ತಿನ್ನಿ ಬೇಕಾದ್ರೆ.. ಹೀಗಂತ ಹೇಳಿ ಕಿತ್ತೋಗಿರೋ ಗಲೀಜು ಗ್ರೈಂಡರ್‍ಗೆ ತನ್ನ ಕೊಳಕು ಕೈ ಹಾಕಿ ಕ್ರೀಂ ತಂದು ತಿಂದು ನೋಡಿ ಅಂತಾ ಬೇರೆ ಹೇಳಿದ್ದಾನೆ. ಜೊತೆಗೆ ನಮ್ಮಲ್ಲಿ ಐಸ್ ಕ್ರೀಂ ಕೇಕ್ ಅಂತೆಲ್ಲ ವೆರೈಟಿ ಸಿಗುತ್ತೆ. ಕಲರ್‍ಗೆ ಯಾವ ಕೆಮಿಕಲ್ ಯೂಸ್ ಮಾಡ್ತೀರಾ ಅಂತಾ ಕೇಳಿದಾಗ ಆ ಡಬ್ಬನೂ ತೋರಿಸಿದ. ಅದ್ನ ನೋಡಿ ನಾವು ಫುಲ್ ಶಾಕ್ ಆದೆವು. ಆತ ಈ ಕೇಕ್‍ಗೆ ಹಾಕುವ ಲಿಕ್ವಿಡ್ ಕಲರ್ ಕೆಮಿಕಲ್ ಬಾಟಲ್ ಕೂಡ ಪಬ್ಲಿಕ್ ಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಸಿಂಪಲ್ ಕೇಕ್ ರೆಸಿಪಿ

    ಬಾಣಸವಾಡಿ ಬೇಕರಿ:
    ಇದು ತೀರಾ ಸ್ಲಂ ಏರಿಯಾ ಅಲ್ವೇ ಅಲ್ಲ. ಹೈ-ಫೈ ಏರಿಯಾ, ಬೇಕರಿ ಕೂಡ ಹೊಚ್ಚ ಹೊಸದು. ಈ ಬೇಕರಿಯ ಹೊರಗಡೆ ಅದೇನು ನೀಟ್ ನೆಸ್. ಫಳ ಫಳ ಅಂತ ಹೊಳೆಯುವ ಗ್ಲಾಸ್. ಥಳ ಥಳ ಅಂತಾ ಕಣ್ಣಿಗೆ ರಾಚುವಂತೆ ಸ್ವಚ್ವವಿರುವ ಟೈಲ್ಸ್. ಹೊಚ್ಚ ಹೊಸ ಈ ಬೇಕರಿನಲ್ಲಿ ಕೇಕ್‍ನ್ನು ಹಾಯಾಗಿ ತಿನ್ನಬಹುದು ಬಿಡಿ ಅಂತಾ ಕಾನ್ಫಿಡೆನ್ಸ್ ಮೇಲೆನೇ ನಾವು ಹೆಂಗೋ ಕಿಚನ್‍ಗೆ ಎಂಟ್ರಿ ಪಡ್ಕೊಂಡ್ವಿ.

    ಆದ್ರೆ ಹೊರಗಡೆ ನೋಡಿದ ಬ್ಯೂಟಿಫುಲ್ ಬೇಕರಿಯ ಕಲರ್ ಫುಲ್ ಡಿಸೈನ್ ಕೇಕ್ ತಯಾರೋಗೋದು ಕೊಳಕು ಸ್ಥಳದಲ್ಲಿ. ಹೊರಗಡೆ ಥಳಕು ಒಳಗಡೆ ಹುಳುಕು. ಕಸದ ರಾಶಿ, ಅಲ್ಲಲ್ಲಿ ಬಿದ್ದಿರೋ ಮೊಟ್ಟೆ ಸಿಪ್ಪೆ. ಕಪ್ಪು ಕಪ್ಪು ಹಿಟ್ಟು ನೆಲದ ಮೇಲೆ ಕಸದ ಜೊತೆ ಅಂಟಿ ಹೋಗಿದ್ರೂ ಅದರ ಮೇಲೆಯೇ ಕೇಕ್ ತಯಾರಿಸುವ ಬ್ರೆಡ್ ಹಾಕಲಾಗಿತ್ತು. ಇದನ್ನೂ ಓದಿ: ಸಿಂಪಲ್ ಚಾಕ್ಲೇಟ್ ಕೇಕ್

    ಹನುಮಂತ ನಗರ:
    ಬಳಿಕ ಹನುಮಂತ ನಗರದ ಬಳಿ ಇರುವ ಶ್ರೀ ಕೃಷ್ಣ ಬೇಕರಿಯತ್ತ ರಿಯಾಲಿಟಿ ಚೆಕ್‍ಗೆ ಇಳಿದ್ವಿ. ಈ ಏರಿಯಾದ ತೀರಾ ಡಿಮ್ಯಾಂಡ್‍ನಲ್ಲಿರುವ ಬೇಕರಿಯಿದು. ಇಲ್ಲಿನ ಸ್ವೀಟ್ಸ್, ಕೇಕ್ ಅಂದ್ರೆ ಜನ ಕಣ್ಣುಮುಚ್ಚಿ ದೇವ್ರ ಪ್ರಸಾದಂತೆ ತಿನ್ನುತ್ತಾರೆ. ಆದ್ರೆ ಈ ಬೇಕರಿಗೂ ಈ ಹಿಂದೆ ತೋರಿಸಿದ ಬೇಕರಿಗೂ ಯಾವುದೇ ವ್ಯತ್ಯಾಸ ಇರಲಿಲ್ಲ.

    ಗೋರಿಪಾಳ್ಯ:
    ಇದೊಂಥರ ತಿಪ್ಪೆಗುಂಡಿನೇ ಬಿಡಿ. ವರ್ಣನೆ ಬೇರೆ ಇಲ್ಲ. ಈ ಬೇಕರಿಯಲ್ಲಿ ಕೇಕ್‍ಗಿಂತ ಹೆಚ್ಚಾಗಿ ಕಣ್ಣಿಗೆ ರಾಚುವಂತೆ ಇದ್ದಿದ್ದು ಡೇಂಜರಸ್ ಕೆಮಿಕಲ್ ಬಾಟಲ್ಸ್. ಜೆಲ್, ಕ್ರೀಂ, ಚಾಕ್ಲೇಟ್ ಅಂತಾ ಇರೋ ಬರೋ ಕೆಮಿಕಲ್ ದ್ರಾವಣನಾ ಕೇಕ್ ಮೇಲೆ ಸಿಂಪರಣೆ ಮಾಡ್ತಾರೆ.

    ಕೇಕ್‍ಗೆ ನಾನಾ ಪ್ಲೇವರ್ ಹಾಗೂ ಬಣ್ಣಗಳು ಬರೋದಕ್ಕೆ ಡೇಂಜರಸ್ ಕೆಮಿಕಲ್ ದ್ರಾವಣ ಬಳಸಲಾಗುತ್ತೆ. ಅದ್ರಲ್ಲೂ ಎಕ್ಸ್‍ಪೈರಿ ಡೇಟ್ ಮೀರಿದ ವಿಷಕಾರಿ ಕೆಮಿಕಲ್‍ಗಳ ಬಳಕೆಯನ್ನು ಕೂಡ ಮಾಡಲಾಗುತ್ತದೆ. ಅಶುಚಿತ್ವದ ಕೇಕ್ ವಿಷವಾಗೋದ್ರ ಜೊತೆಗೆ ಇಲ್ಲಿ ಬಳಸಲಾಗುವ ವಿಷಯುಕ್ತ ಕೆಮಿಕಲ್‍ನಿಂದ ಕ್ಯಾನ್ಸರ್, ಹೊಟ್ಟೆ ಹುಣ್ಣು, ಕರುಳಿನ ಬೇನೆ, ಹೃದಯ ಸಂಬಂಧಿ ಕಾಯಿಲೆಗಳು ಕೂಡ ಬರುವ ಸಾಧ್ಯತೆಗಳಿವೆ.

    ಒಟ್ಟಿನಲ್ಲಿ ಹೊಸ ವರ್ಷದ ಆಚರಣೆ ಸಿಹಿಯಾಗಿರಲಿ, ಸವಿಯಾಗಿರಲಿ ಅಂತಾ ನಾವು ಕೇಕ್ ಕಟ್ ಮಾಡಿ ಅಚರಣೆ ಮಾಡೋಕೆ ರೆಡಿಯಾದ್ರೇ ಅದ್ರೊಳಗೆ ವಿಷದ ಬಾಂಬ್ ಅನ್ನೇ ಇಟ್ಟಿದ್ದಾರೆ ಅಂದ್ರೆ ತಪ್ಪಾಗಲಾರದು. ಹೀಗಾಗಿ ಸಿಕ್ಕ ಸಿಕ್ಕಲ್ಲಿ ಕೇಕ್ ಖರೀದಿಸಿ ಬಾಯಿ ಚಪ್ಪರಿಸಿಕೊಂಡು ತಿನ್ನುವ ಮೊದಲು ಎಚ್ಚರವಾಗಿರಿ.

    https://www.youtube.com/watch?v=Re5e1teDMiQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಪಾದನೆ ಬದಿಗಿಟ್ಟು ಬಡವರು, ವಯಸ್ಕರಿಗೆ ಉಚಿತ ಚಿಕಿತ್ಸೆ ನೀಡ್ತಿದ್ದಾರೆ ಗದಗ್‍ನ ಡಾ.ಕಲ್ಲೇಶ್

    ಸಂಪಾದನೆ ಬದಿಗಿಟ್ಟು ಬಡವರು, ವಯಸ್ಕರಿಗೆ ಉಚಿತ ಚಿಕಿತ್ಸೆ ನೀಡ್ತಿದ್ದಾರೆ ಗದಗ್‍ನ ಡಾ.ಕಲ್ಲೇಶ್

    ಗದಗ್: ಈ ಕಾಲದಲ್ಲಿ ವೈದ್ಯರು ಅಂದ್ರೆ ಬಹುತೇಕರಲ್ಲಿ ಹಣ ಮಾಡೋದೇ ಕಾಯಕ ಅಂತಾರೆ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಡಾ. ಕಲ್ಲೇಶ್ ಅವರು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.

    ನಗರದ ನಿವಾಸಿ ಡಾಕ್ಟರ್ ಕಲ್ಲೇಶ್ ಮೂರಶಿಳ್ಳಿನ ಸಿಟಿಯಲ್ಲಿ ಕೈ ತುಂಬ ಸಂಪಾದನೆ ಮಾಡೋದು ಬಿಟ್ಟು ಹಳ್ಳಿಯ ಬಡಜನರ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಬಡವರ ಅನುಕೂಲಕ್ಕಾಗಿ ಆಸ್ಪತ್ರೆ ತೆರೆದಿದ್ದು, ರೋಗಿಗಳಿಂದ 10 ರಿಂದ 30 ರೂಪಾಯಿ ಮಾತ್ರ ತೆಗೆದುಕೊಳ್ತಾರೆ. ತುಂಬಾ ಬಡವರು, ವಯಸ್ಕರು ಬಂದ್ರೆ ನಯಾ ಪೈಸೆ ಪಡೆಯಲ್ಲ. ಹೀಗೆ, 22 ವರ್ಷಗಳಿಂದ ಸೇವೆ ಸಾಗಿದೆ.

    ವೈದ್ಯರಾಗಿ ಮಾತ್ರವಲ್ಲ, ಪರಿಸರ ಪ್ರೇಮಿಯಾಗಿ, ಶಿಕ್ಷಣ ಪ್ರೇಮಿಯಾಗಿ, ಯೋಗಪಟುವಾಗಿ ಸಮಾಜ ಸೇವಕರಾಗಿ ಶ್ರಮಿಸುತ್ತಿದ್ದಾರೆ. ಬಡ ಕುಟುಂಬದಿಂದ ಬಂದವನಾಗಿರೋ ನನಗೆ ಬಡವರ ಕಷ್ಟ ಗೊತ್ತಿದೆ. ಅದಕ್ಕಾಗಿ ನನ್ನಿಂದ ಆಗೋ ಕೆಲಸವನ್ನ ಮಾಡ್ತಿದ್ದೇನೆ ಅಂತ ಡಾಕ್ಟರ್ ಕಲ್ಲೇಶ್ ಹೇಳ್ತಾರೆ.

    ಹಳ್ಳಿಗಳ ಸುಧಾರಣೆ, ಕುಡಿಯುವ ನೀರು, ಮೂಲಭೂತ ಸೌಲಭ್ಯಗಳು, ದೇವಸ್ಥಾನ, ಮಠ, ಮಸೀದಿ, ಮಂದಿರ ಅಭಿವೃದ್ಧಿಗೆ ಪ್ರತಿ ವರ್ಷ ಲಕ್ಷಾಂತರ ನೀಡುತ್ತಿದ್ದಾರೆ. ಪರಿಸರ ಕಾಳಜಿ, ಸಾಮಾಜಿಕ ಕಾರ್ಯಗಳ ಬಗ್ಗೆ ಅನೇಕ ಕಥೆ, ಕಾದಂಬರಿ ಬರೆದಿದ್ದಾರೆ. ಪ್ರತಿಷ್ಠೆಯ ಈ ದಿನಮಾನದಲ್ಲೂ ಗದಗ್‍ನಿಂದ ಮಲ್ಲಸಮುದ್ರ ಗ್ರಾಮಕ್ಕೆ ನಿತ್ಯ 8 ರಿಂದ 10 ಕಿಲೋಮೀಟರ್ ಸೈಕಲ್ ತುಳಿದು ಬರುತ್ತಾರೆ ಅಂತ ಸ್ಥಳೀಯರಾದ ಶಿವಪ್ಪ ತಿಳಿಸಿದ್ದಾರೆ.

    ಪತ್ನಿ ಸಹ ವೈದ್ಯರಾಗಿದ್ದು, ಆಸ್ಪತ್ರೆ ಕೆಲಸದ ನಂತರ ಜೊತೆಗೆ ಸ್ವಂತ ಜುವೇಲರಿ ಶಾಪ್ ಅನ್ನ ಇಬ್ಬರೂ ನಿರ್ವಹಿಸ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=TTCkvOSxBz4

  • ತೋಂಟದಾರ್ಯ ಶ್ರೀ ಅಂತಿಮ ದರ್ಶನ- ಸಂಜೆ 4 ಗಂಟೆಗೆ ಕ್ರಾಂತಿಯೋಗಿಯ ಅಂತ್ಯಕ್ರಿಯೆ

    ತೋಂಟದಾರ್ಯ ಶ್ರೀ ಅಂತಿಮ ದರ್ಶನ- ಸಂಜೆ 4 ಗಂಟೆಗೆ ಕ್ರಾಂತಿಯೋಗಿಯ ಅಂತ್ಯಕ್ರಿಯೆ

    ಗದಗ: ಲಿಂಗಾಯತ ಧರ್ಮದ ಪ್ರಮುಖ ರೂವಾರಿ, ಸಮಾಜ ಸುಧಾರಕ, ಗದಗಿನ ತೋಂಟದಾರ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ನಿನ್ನೆ ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ. ಶ್ರೀಗಳ ಅಗಲಿಕೆಯಿಂದ ಅವರ ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದು, ಅಂತಿಮ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಮಠದತ್ತ ಬರ್ತಿದ್ದಾರೆ.

    ಶನಿವಾರ ರಾತ್ರಿವರೆಗೂ ಗದುಗಿನ ತೋಂಟದಾರ್ಯ ಮಠದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಪಾರ್ಥಿವ ಶರೀರವನ್ನು ಡಂಬಳದ ತೋಂಟದಾರ್ಯ ಮೂಲ ಮಠಕ್ಕೆ ರವಾನಿಸಿ, ಬೆಳಗ್ಗೆ 4 ಗಂಟೆವರೆಗೂ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತ್ರ ಪುನಃ ಗದುಗಿನ ತೋಂಟದಾರ್ಯ ಮಠಕ್ಕೆ ತರಲಾಯ್ತು. ಅಲ್ಲದೆ ಬೆಳಗ್ಗೆ 11 ಗಂಟೆವರೆಗೆ ಮಠದ ಆವರಣದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.


    ಇಂದು ಬೆಳಗ್ಗೆ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಶ್ರೀಗಳ ಅಂತಿಮ ದರ್ಶನ ಪಡೆಯಲಿದ್ದಾರೆ. ಇದಾದ ಬಳಿಕ 11 ಘಂಟೆಯ ನಂತರ ಗದಗ ಬೆಟಗೇರಿ ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ, ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಗದಗ ತೋಂಟದಾರ್ಯ ಮಠಕ್ಕೆ ಪಿಠಾಧಿಪತಿ ಇಲ್ಲದ ಕಾರಣ ಶಿವಮೊಗ್ಗದ ಆನಂದಪುರ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಜಿ ಅಂತಿಮ ವಿಧಿವಿಧಾನ ನೆರವೇರಿಸಲಿದ್ದಾರೆ ಅಂತ ಮುಂಡರಗಿ ತೋಂಟದಾರ್ಯ ಮಠಸ ನಿಜಗುಣಾನಂದ ಸ್ವಾಮಿಜಿ ತಿಳಿಸಿದ್ದಾರೆ.

    ಶ್ರೀಗಳ ನಿಧನದಿಂದ ಗದಗದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ. ನಿನ್ನೆ ಮತ್ತು ಇಂದು ಚಿತ್ರಪ್ರದರ್ಶನಗಳನ್ನೂ ರದ್ದು ಮಾಡಲಾಗಿದೆ. ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಧಾರವಾಡ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=E_XsKW_w2yA

  • ಬಿಂದಿಗೆ ತುಂಬೋಕೆ ಹತ್ತಾರು ಸಲ ಬಾವಿ ಸೇದಬೇಕು!

    ಬಿಂದಿಗೆ ತುಂಬೋಕೆ ಹತ್ತಾರು ಸಲ ಬಾವಿ ಸೇದಬೇಕು!

    ಅರುಣ್ ಸಿ ಬಡಿಗೇರ್
    ಬೆಂಗಳೂರು: ರಾಜ್ಯದಲ್ಲಿ 2500 ಕಿಮೀ ಸಂಚರಿಸಿ ಪಬ್ಲಿಕ್ ಟಿವಿಯ ತಂಡ ಪ್ರತ್ಯಕ್ಷ ವರದಿ ಮಾಡಿತು. ಈ ಸಂದರ್ಭದಲ್ಲಿ ನಮ್ಮ ತಂಡಕ್ಕೆ ಕಂಡಿರೋ ಬರಗಾಲದ ಸ್ಥಿತಿಯನ್ನ ನಿಮ್ಮ ಮುಂದೆ ಇಡುವ ಪ್ರಯತ್ನವಿದು.

    ಬಿಂದಿಗೆ ತುಂಬೋಕೆ ಹತ್ತಾರು ಸಲ ಬಾವಿ ಸೇದಬೇಕು:
    ಈ ಗ್ರಾಮದಲ್ಲಿರೋದು ಒಂದೇ ಒಂದು ಬಾವಿ. ಬೇಸಿಗೆ ಬಂದ್ರೆ ಈ ಬಾವಿಯ ನೀರು ತಳ ಸೇರುತ್ತೆ. ಈ ನೀರನ್ನ ಸೇದಿ ಬಿಂದಿಗೆ ತುಂಬಿಕೊಳ್ಳಬೇಕು ಅಂದ್ರೆ ಹತ್ತಾರು ಬಾರಿ ಬಾವಿಯಿಂದ ನೀರು ಸೇದಬೇಕು. ಇಂತಹ ಬಾವಿ ಇರೋದು ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಹಳ್ಳಿಕೇರಿ ಗ್ರಾಮ. ಇಲ್ಲಿರೋ ಬಾವಿಯಲ್ಲಿ ಒಂದು ಸಲಕ್ಕೆ ಒಂದು ಬಿಂದಿಗೆಯಲ್ಲಿ ನೀರು ಬರೋದು ಒಂದು ಚೊಂಬಿನಷ್ಟು ಮಾತ್ರ. ಇದೇ ನೀರನ್ನ ಮನೆಗೆ ಒಯ್ದು ಶುದ್ಧಿಕರಿಸಿ ನಂತ ತಿಳಿಯಾದ ಮೇಲೆ ನೀರು ಕುಡಿಬೇಕಾದ ಸ್ಥಿತಿ ಇದೆ. ಈ ಬಾವಿ ಹಾಗೂ ಈ ಗ್ರಾಮದಲ್ಲಿ ಬತ್ತಿ ಹೋಗಿರೋ ಕರೆಯೇ ಗ್ರಾಮಕ್ಕೆ ಜೀವಜಲದ ಮೂಲ. ಆದ್ರೆ, ಈಗ ಈ ಗ್ರಾಮದ ಜನರ ದಾಹ ತಿರಿಸೋಕೆ ಉಳಿದಿರೋದು ಅಲ್ಪ ಪ್ರಮಾಣದ ನೀರು ಮಾತ್ರ. ಇಂತಹ ಸ್ಥಿತಿ ಬೆಂಗಳೂರಿಗರಿಗೆ ಬಂದೊದಗಿದಿಯಾ..?

    6 ವರ್ಷದಿಂದ ಟ್ಯಾಂಕರ್ ನೀರೇ ಗತಿ:
    ಈ ಊರಿಗೆ 6 ವರ್ಷದಿಂದ ಟ್ಯಾಂಕರ್ ನೀರು ಗತಿ. ಇಂತಹ ದುಸ್ಥಿತಿ ಬಂದೊದಗಿರೋದು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮಕ್ಕೆ. ಹುಬ್ಬಳ್ಳಿ ತಾಲೂಕಿನಿಂದ 25 ಕಿಮೀ ದೂರದಲ್ಲಿರೋ ಈ ಗ್ರಾಮಕ್ಕೆ ಟ್ಯಾಂಕರ್‍ನಲ್ಲಿ ನೀರು ತಂದು ನೀರನ್ನ ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್ ಬಂದಾಗ ಇಲ್ಲಿ ನೀರಿಗಾಗಿ ಹೊಡೆದಾಟ ಕೂಡ ನಡೆಯುತ್ತೆ. ಈ ಗ್ರಾಮದಲ್ಲಿ ದೊಡ್ಡ ಕೆರೆ ಇದ್ದರು ಸಹ ಈ ಕೆರೆ ತುಂಬಿಸಬೇಕು ಅನ್ನೋ ಕನಿಷ್ಟ ಜ್ಞಾನವೂ ಈ ಕ್ಷೇತ್ರದ ಶಾಸಕರಿಗೆ ಬಂದಿಲ್ಲ. ಬದಲಾಗಿ 6 ವರ್ಷದಿಂದ ಗ್ರಾಮಕ್ಕೆ ಟ್ಯಾಂಕರ್‍ನಿಂದಲೇ ನೀರು ಸರಬರಾಜು ಮಾಡುತ್ತಿದ್ದಾರೆ. ಈ ರೀತಿಯ ಸ್ಥಿತಿ ಬೆಂಗಳೂರಿನಲ್ಲಿರುವ ಜನರಿಗೆ ಬಂದೊದಗಿದಿಯಾ…?

    ಕಣ್ಣೀರಿಡುತ್ತಿರೋ ಮಕ್ಕಳು:
    ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ಸ್ಥಿತಿಯನ್ನ ಕೇಳಿದ್ರೆ ಕರುಳು ಹಿಂಡಿದಂತಾಗುತ್ತೆ. ಇಲ್ಲಿ ಮಕ್ಕಳು ಶಾಲೆಗೆ ಹೋದರು ಹೊಡಿಸಿಕೊಳ್ತಾರೆ, ಹೋಗದೆ ಇದ್ದರು ಬೈಯಿಸಿಕೊಳ್ತಾರೆ. ಈ ಹಳ್ಳಿಗೆ ಮಧ್ಯಾಹ್ನ 3 ರಿಂದ 6 ಮತ್ತು ಮಧ್ಯರಾತ್ರಿ 2 ರಿಂದ 6 ಗಂಟೆ ವರೆಗೆ ಮಾತ್ರ ವಿದ್ಯುತ್ ಪೂರೈಕೆ. ಹಾಗಾಗಿ ಬೆಳಿಗ್ಗೆ ಎದ್ದು ಶಾಲೆಗೆ ಹೋದ ಮಕ್ಕಳು ಮಧ್ಯಾಹ್ನ ಎಷ್ಟೊತ್ತಿದ್ರು ಶಾಲೆಗೆ ಚಕ್ಕರ್ ಹೊಡೆದು ಮನೆಗೆ ಹೋಗಲೇ ಬೇಕು. ಯಾಕಂದ್ರೆ ಕರೆಂಟ್ ಬಂದಾಗಲೇ ಈ ಗ್ರಾಮಕ್ಕೆ ನೀರು ಬರೋದು. ಅದು ಗ್ರಾಮದಿಂದ 2 ಕಿ.ಮೀ ದೂರದಲ್ಲಿ. ಮನೆಗೆ ಹೋಗಿದ್ದೆ ತಡ ಬಿಂದಿಗೆ ಹಿಡಿದುಕೊಂಡು ಉರಿಬಿಸಿಲಿನಲ್ಲಿ ಊರಾಚೆ ನೀರು ತರಲು ಹೋಗಬೇಕು. ಹೋಗದೆ ಇದ್ದರೆ ಅಪ್ಪ ಅಮ್ಮ ಹೊಡಿತಾರೆ. ಶಾಲೆ ಬಿಟ್ಟು ಮನೆಗೆ ಹೋಗಿದ್ದಕ್ಕೆ ಶಾಲೆಯ ಶಿಕ್ಷಕರು ಬೈಯ್ತಾರೆ. ಇವರಿಬ್ಬರ ನಡುವೆ ಮಕ್ಕಳು ಕಣ್ಣೀರಿಡುತ್ತಿದ್ದಾರೆ. ಇಂತಹ ಸ್ಥಿತಿ ಬೆಂಗಳೂರಿನಲ್ಲಿರೋ ಮಕ್ಕಳಿಗೆ ಬಂದಿದಿಯಾ..? ಯೋಚಿಸಿ ನೋಡಿ…

    ಈ ಊರಿಗೆ ಹೆಣ್ಣು ಕೊಡಲ್ಲ:
    ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ಸ್ಥಿತಿ ಇಲ್ಲಿಗೆ ಮುಗಿಯಲ್ಲ. ಈ ಗ್ರಾಮಕ್ಕೆ ನೀರಿನ ಸಮಸ್ಯೆ ಇರೋದ್ರಿಂದ ಗ್ರಾಮದ ಯಾವ ಯುವಕನಿಗೂ ಹೆಣ್ಣು ಕೊಡಲ್ವಂತೆ. ಹಾಗೋ ಹೀಗೋ ಮನವೊಲಿಸಿ ಮದುವೆ ಮಾಡಿದ ಮೇಲೆ ಆ ಹೆಣ್ಮಕ್ಕಳು ನೀರಿಗಾಗೆ ಅಲೆದಾಡಬೇಕು ಅಂತಾ ಖುದ್ದು ಈ ಗ್ರಾಮದ ಹೆಣ್ಮಕ್ಕಳೆ ತಮ್ಮ ಗೋಳು ಹೇಳಿಕೊಳ್ತಾರೆ. ಇದಲ್ಲದೆ ಕೆಲವು ಮಹಿಳೆಯರಿಗೆ ಕುಡಿದು ಬಂದ ಗಂಡ ನೀರು ಯಾಕೆ ತಂದಿಲ್ಲ ಅಂತಾ ಕಾಲಿನಿಂದ ಸಿಕ್ಕಸಿಕ್ಕ ಜಾಗಕ್ಕೆ ಒದಿತಾರಂತೆ. ಇಂತಹ ಸ್ಥಿತಿ ಬೆಂಗಳೂರಿನಲ್ಲಿದಿಯಾ.? ಒಂದು ಸಲ ಈ ಹಳ್ಳಿಯಲ್ಲಿದ್ರೆ ಹೇಗಿರುತ್ತೆ ಅಂತಾ ಬೆಂಗಳೂರಿನ ಜನ ಯೋಚಿಸಿ ನೀರು ಬಳಸಿ.