Tag: ಗಣೇಶ ವಿಸರ್ಜನೆ ಮೆರವಣಿಗೆ

  • ಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ

    ಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ

    ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕೆಟ್ಟ ಆಡಳಿತ, ನಡವಳಿಕೆಯಿಂದಲೇ ಮದ್ದೂರಿನಲ್ಲಿ (Maddur Stone Pelting) ಗಣಪತಿ ಮೆರವಣಿಗೆ ಮೇಲೆ ಕಲ್ಲು ಎಸೆಯುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D.Kumaraswamy) ಆರೋಪಿಸಿದರು.

    ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಮಾತನಾಡಿ ಮಾಹಿತಿ ಪಡೆದುಕೊಂಡ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಇಂಥ ಕೆಟ್ಟ ಘಟನೆಗಳು ನಡೆಯಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ದೂರಿದರು.

    ಶಾಂತಿ ನೆಮ್ಮದಿಗೆ ಹೆಸರಾಗಿದ್ದ ಮಂಡ್ಯ ಜಿಲ್ಲೆಗೆ ಬೆಂಕಿ ಹಚ್ಚುವ ಕೆಲಸವಾಗುತ್ತಿದೆ. ಹಿಂದೆಂದೂ ಈ ಜಿಲ್ಲೆಯಲ್ಲಿ ಇಂಥ ಘಟನೆಗಳು ಆಗಿಲ್ಲ. ನಾಗಮಂಗಲದಲ್ಲಿ ಕೆಲ ದುಷ್ಟಶಕ್ತಿಗಳು ಬೆಂಕಿ ಹಾಕುವ ಕೆಲಸ ಮಾಡಿದವು. ಈಗ ಮದ್ದೂರಿನಲ್ಲಿಯೂ ಅಂತಹ ಶಕ್ತಿಗಳೇ ಜನರ ನೆಮ್ಮದಿ ಕೆಡಿಸುವ ಹುನ್ನಾರ ನಡೆಸಿವೆ ಎಂದು ಆಪಾದಿಸಿದರು. ಇದನ್ನೂ ಓದಿ: ನಾಳೆ ಮದ್ದೂರು ಸ್ವಯಂ ಪ್ರೇರಿತ ಬಂದ್‌ಗೆ ಕರೆ – ಹಿಂದೂ ಮುಖಂಡರ ತೀರ್ಮಾನ

    ಮಂಡ್ಯ ಜಿಲ್ಲೆ ಯಾವಾಗಲೂ ಶಾಂತಿ ಸೌಹಾರ್ದತೆಗೆ ಹೆಸರಾಗಿದೆ. ಜನರು ಕಷ್ಟಪಟ್ಟು ಕೆಲಸ ಮಾಡುತ್ತಾ ನೆಮ್ಮದಿ ಜೀವನ ಮಾಡುತ್ತಿದ್ದಾರೆ. ಕುವೆಂಪು ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಆದರೆ ಕೆಲ ಶಕ್ತಿಗಳು ವ್ಯವಸ್ಥಿತವಾಗಿ ಜನರ ನೆಮ್ಮದಿ ಹಾಳು ಮಾಡುವ ಕೆಲಸ ಮಾಡುತ್ತಿವೆ. ಕಾಂಗ್ರೆಸ್‌ ಪಕ್ಷದ ಓಲೈಕೆ ರಾಜಕಾರಣದಿಂದ ಇಂಥ ಕೆಟ್ಟ ಪರಿಸ್ಥಿತಿ ರಾಜ್ಯದ ಉದ್ದಗಲಕ್ಕೂ ಸೃಷ್ಟಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಶಾಂತಿ ನೆಲೆಸುವುದಕ್ಕೆ ಎಲ್ಲರೂ ಸಹಕಾರ ನೀಡಬೇಕು. ನಾನು ಈಗಾಗಲೇ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದರು. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ – ಮದ್ದೂರು ಉದ್ವಿಗ್ನ

    ಸರ್ವ ಜನಾಂಗದ ಶಾಂತಿಯ ತೋಟವಾದ ರಾಜ್ಯಕ್ಕೆ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಕಾಂಗ್ರೆಸ್ ನಡವಳಿಕೆ, ಅವರ ಆಡಳಿತವೇ ಈ ಘಟನೆಗೆ ಕಾರಣ. ಹಿಂದೂಗಳು ಅಸಮಾಧಾನವಾಗುವ ರೀತಿಯಲ್ಲಿ ‌ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಇದನ್ನು ನಾನು ರಾಜಕೀಯ ಉದ್ದೇಶದಿಂದ ಹೇಳುತ್ತಿಲ್ಲ. ರಾಜ್ಯದ ಹಲವೆಡೆ ಗಲಾಟೆಗಳು ನಡೆಯಲು ಕಾಂಗ್ರೆಸ್ ಪಕ್ಷವೇ ಕಾರಣ. ಈ ಮೂಲಕ ಕಾಂಗ್ರೆಸ್ ಪಕ್ಷವು ತನ್ನ ಅವನತಿಯನ್ನು ತಾನೇ ತಂದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಹಿಂದೆ ಇಂಥ ಘಟನೆಗಳು ಒಂದೆರಡು ಜಿಲ್ಲೆಗಳಲ್ಲಿ ಅಲ್ಲೊಂದು ಇಲ್ಲೊಂದು ನಡೆಯುತ್ತಿದ್ದವು. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿ ಭಾಗದಲ್ಲಿಯೂ ಅವ್ಯಾಹತವಾಗಿ ನಡೆಯುತ್ತಿವೆ. ಆ ಕೆಟ್ಟ ಪರಿಸ್ಥಿತಿ ಕಾಂಗ್ರೆಸ್ ಆಡಳಿತದಲ್ಲಿ ಇಡೀ ರಾಜ್ಯಕ್ಕೆ ವ್ಯಾಪಿಸಿದೆ. ಕೇವಲ ಓಲೈಕೆ ರಾಜಕಾರಣದಿಂದ ಇಷ್ಟೆಲ್ಲಾ ನಡೆಯುತ್ತಿದೆ ಎಂದು ದೂರಿದರು.

    ಇಂಥ ಗಲಭೆಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷದ ಅವನತಿ ಆರಂಭವಾಗಿದೆ ಎಂದು ಅರ್ಥವಾಗುತ್ತದೆ. ಇದೆಲ್ಲವನ್ನೂ ಕಾಂಗ್ರೆಸ್ ಅರ್ಥ ಮಾಡಿಕೊಳ್ಳದಿದ್ದರೆ ಇದು ಸೆಲ್ಪ್ ಸೂಸೈಡ್ (ಆತ್ಮಹತ್ಯೆ) ಆಗಲಿದೆ. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಆಗಬಾರದು. ಕಟ್ಟುನಿಟ್ಟಿನ ಕ್ರಮಕೈಗೊಂಡು ಕಿಡಿಗೇಡಿಗಳ ಹೆಡೆಮುರಿ ಕಟ್ಟುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

  • ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಚಾಕು ಇರಿತ

    ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಚಾಕು ಇರಿತ

    ಮಂಡ್ಯ: ಹಳೇ ದ್ವೇಷ ಹಿನ್ನೆಲೆ ಗಣೇಶ ವಿಸರ್ಜನೆ ಮೆರವಣಿಗೆ (Ganesh Idol Procession) ವೇಳೆ ಡ್ಯಾನ್ಸ್ ಮಾಡುತ್ತಿದ್ದ ಯುವಕನಿಗೆ ಚಾಕು ಇರಿತವಾಗಿರುವ ಘಟನೆ ಮಂಡ್ಯದ (Mandya) ಮಾಚಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜರುಗಿದೆ.

    ಮಾಚಹಳ್ಳಿ ಗ್ರಾಮದ ಸಚ್ಚಿನ್ (24) ಎಂಬಾತನ ಕೈ ಹಾಗೂ ಹೊಟ್ಟೆ ಭಾಗಕ್ಕೆ ಚಾಕು ಇರಿತವಾಗಿದ್ದು, ನಂಜುಂಡಸ್ವಾಮಿ (26) ಎಂಬಾತನಿಗೆ ತಲೆ ಹಾಗೂ ಕಣ್ಣಿ ಭಾಗಕ್ಕೆ ಕಲ್ಲಿನಿಂದ ಹಲ್ಲೆ ಮಾಡಲಾಗಿದೆ. ಇದನ್ನೂ ಓದಿ: ಕಂಟೇನರ್ ಡಿಕ್ಕಿ ಹೊಡೆದು ಈರುಳ್ಳಿ ಟೆಂಪೋ ಪಲ್ಟಿ – ಓರ್ವ ಸಾವು

    ದರ್ಶನ್, ಲೋಕೇಶ್, ಪ್ರಜ್ವಲ್ ಸೇರಿದಂತೆ ಹಲವರಿಂದ ಈ ಕೃತ್ಯ ನಡೆದಿದೆ. ನಿನ್ನೆ ರಾತ್ರಿ ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಸ್ನೇಹಿತರೊಂದಿಗೆ ಸಚ್ಚಿನ್ ಹಾಗೂ ನಂಜುಂಡಸ್ವಾಮಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ದರ್ಶನ್ & ಗ್ಯಾಂಗ್‌ನಿಂದ ಏಕಾಏಕಿ ಹಳೇ ದ್ವೇಷದಿಂದ ಗಲಾಟೆ ಆಗಿದೆ. ಬಳಿಕ ಇವರು ಚಾಕು ಇರಿದಿದ್ದು, ಕಲ್ಲಿನಿಂದಲೂ‌ ಹಲ್ಲೆ ಮಾಡಿದ್ದಾರೆ.

    ಕಳೆದ 3 ವರ್ಷದಿಂದ ಗಾಯಾಳು ಸಚ್ಚಿನ್ ಹಾಗೂ ಆರೋಪಿ ದರ್ಶನ್ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಆಗಾಗ್ಗೆ ಕಿರಿಕ್ ಆಗುತ್ತಿತ್ತು. 5 ಇಬ್ಬರ ನಡುವೆ ದೊಡ್ಡ ಗಲಾಟೆ ನಡೆದು ಪೊಲೀಸ್ ಠಾಣೆಯಲ್ಲಿ ರಾಜಿಯಾಗಿತ್ತು. ನಿನ್ನೆ ಮತ್ತೆ ಗಲಾಟೆ ನಡೆದು ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಗಾಯಾಳುಗಳಿಗೆ ಮಂಡ್ಯ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಈ‌ ಬಗ್ಗೆ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ – 4 ದಿನಗಳಲ್ಲಿ 4 ಸಾವು