Tag: ಗಣೇಶ ಮೆರವಣಿಗೆ

  • ಗಣೇಶ ವಿಸರ್ಜನೆ ವೇಳೆ ಕಲ್ಲು – ನಾಳೆ ಬೆಳಗ್ಗೆಯವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ

    ಗಣೇಶ ವಿಸರ್ಜನೆ ವೇಳೆ ಕಲ್ಲು – ನಾಳೆ ಬೆಳಗ್ಗೆಯವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ

    ಮಂಡ್ಯ: ಗಣೇಶ ಮೆರವಣಿಗೆ (Ganesh Procession) ವೇಳೆ ಕಲ್ಲುತೂರಾಟ ನಡೆಸಿ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆವರೆಗೆ ಮದ್ದೂರು (Madduru)  ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

    ಘಟನಾ ನಡೆದ ಸ್ಥಳಕ್ಕೆ ರಾತ್ರಿಯೇ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಆಗಮಿಸಿ ರೌಂಡ್‌ ಹಾಕಿದರು. ಇಂದು ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಂಗಳವಾರ ಬೆಳಗ್ಗೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.   ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ ಮದ್ದೂರು ಉದ್ವಿಗ್ನ

    ತಮಿಳು ಕಾಲೋನಿಯ ಯುವಕರು ಗಣೇಶ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲು ಮೆರವಣಿಗೆ ಮಾಡಿದ್ದಾರೆ. ರಾಮ್ ರಹೀಮ್ ನಗರದಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಕಲ್ಲು ಬಿದ್ದಿದೆ. ನಂತರ ಎರಡೂ ಕಡೆಯಿಂದ ಕಲ್ಲು ತೂರಾಟ ಆಗಿದೆ. ಲೈಟ್ ಆಫ್ ಮಾಡಿ ಕಲ್ಲು ತೂರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು.

    ಸಂಬಂಧ ಒಂದು ಸ್ವಯಂಪ್ರೇರಿತ ಇನ್ನೊಂದು ಅಜಯ್ ಎಂಬ ಗಾಯಾಳು ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದೇವೆ. 21 ಜನರನ್ನು ವಶಕ್ಕೆ ಪಡೆದಿದ್ದೇವೆ. ವಶಕ್ಕೆ ಪಡೆದವರ ಪೈಕಿ ಇಬ್ಬರು ಮಾತ್ರ ಚನ್ನಪಟ್ಟಣದವರು ಉಳಿದವರು ಸ್ಥಳೀಯರಾಗಿದ್ದಾರೆ. ಸದ್ಯ ಬಿಗಿ ಭದ್ರತೆ ಮಾಡಿದ್ದೇವೆ ಎಂದು ಹೇಳಿದರು.

    ಇಬ್ಬರು ಸಿಬ್ಬಂದಿಗೆ ಸಹ ಏಟು ಬಿದ್ದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಇದ್ದ ಕಾರಣ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ವಿವರಿಸಿದರು.

  • ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ – ಮದ್ದೂರು ಉದ್ವಿಗ್ನ

    ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ – ಮದ್ದೂರು ಉದ್ವಿಗ್ನ

    – ಇವರ ಹಬ್ಬಕ್ಕೆ ನಾವು ಕಲ್ಲು ತೂರಿದ್ದೀವಾ?

    ಮಂಡ್ಯ: ಮದ್ದೂರಿನಲ್ಲಿ ಗಣಪತಿ ವಿಸರ್ಜನೆ (Madduru Ganesh Procession) ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಗಣಪತಿ ಮೆರವಣಿಗೆ ಮೇಲೆ ಅನ್ಯ ಕೋಮಿನ ಯುವಕರ ಗುಂಪು ಕಲ್ಲುತೂರಿದೆ.

    ಕಳೆದ ವರ್ಷ ಇದೇ ಸಂದರ್ಭದಲ್ಲಿ ಮಂಡ್ಯದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ಕಲ್ಲುತೂರಾಟ (Stone Pelting) ಮಾಡಲಾಗಿತ್ತು. ಈ ವೇಳೆ ಕೋಟ್ಯಾಂತರ ರೂ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿತ್ತು. ಇದೀಗ ಅಂತಹುದೆ ಘರ್ಷಣೆ ಪರಿಸ್ಥಿತಿ ಎದುರಾಗಿದ್ದು, ತಕ್ಷಣವೇ ಎಚ್ಚೆತ್ತ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

    ಮದ್ದೂರಿನ ಚನ್ನೇಗೌಡ ಬಡಾವಣೆ ನಿವಾಸಿಗಳು ಭಾನುವಾರ ರಾತ್ರಿ ಮದ್ದೂರಿನ ಬೀದಿಗಳಲ್ಲಿ ಗಣಪತಿ ಮೆರವಣಿ ನಡೆಸುತ್ತಿದ್ದರು. ಈ ವೇಳೆ ಮಸೀದಿ ಬಳಿಗೆ ಮೆರವಣಿಗೆ ಬಂದಿದ್ದು ಈ ವೇಳೆ ಗಣಪತಿ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಿದ್ದಾರೆ. ಈ ವೇಳೆ ಕಲ್ಲು ತೂರಿದವರ ಮೇಲೆ ಪ್ರತಿಯಾಗಿ ಕಲ್ಲು ತೂರಿದ್ದಾರೆ. ಈ ವೇಳೆ ನಾಲ್ವರು ಹೋಮ್‌ ಗಾರ್ಡ್‌ ಸೇರಿದಂತೆ ಎಂಟು ಮಂದಿಗೆ ಗಾಯವಾಗಿದೆ.

    ರಾತ್ರಿ 7.30ರ ಸಂಧರ್ಭದಲ್ಲಿ ಈ ಗಲಾಟೆ ನಡೆದಿದೆ. ಮೊದಲಿಗೆ ಪ್ರಮುಖ ಬೀದಿಗಳಲ್ಲಿ ಗಣಪತಿ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಮಸೀದಿ ಬಳಿ ಬಂದಾಗ ಯಾವುದೇ ಘೋಷಣೆ ಕೂಗಬಾರದು, ಮೈಕ್ ಹಾಕಬಾರದು ಎಂದು ಎಚ್ಚರಿಕೆ ನೀಡಿದ್ದರಂತೆ. ಅದರಂತೆ ಮೈಕ್ ಆಫ್ ಮಾಡಿ ಮೆರವಣಿಗೆ ಮಾಡಲಾಗಿತ್ತು. ಇದಾದ ಬಳಿಕ ಲೈಟ್ ಆಫ್ ಮಾಡಿ ಏಕಾಏಕಿ ಗಣಪತಿ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಾಟ ಮಾಡಲಾಗಿದೆ. ಕಲ್ಲು ತೂರಾಟದಿಂದ ಕ್ಷಣಕಾಲ ಗಾಬರಿಗೊಂಡ ಯುವಕರು ಕಲ್ಲು ತೂರಿದ ಕಡೆಗೆ ಇವರು ಕಲ್ಲು ಎಸೆದಿದ್ದಾರೆ.

    ನಾವು ಸುಮ್ಮನಿದ್ದರೂ ನಮ್ಮ ಮೇಲೆ ಈ ರೀತಿ ದಾಳಿ ಮಾಡಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಅವರ ಹಬ್ಬ ಮಾಡಿದಾಗ ನಾವು ಗಲಾಟೆ ಮಾಡಿದ್ದವ ಎಂದು ಹಿಂದೂ ಯುವಕರು ಪ್ರಶ್ನೆ ಮಾಡುತ್ತಿದ್ದಾರೆ.

    ಒಂದು ವರ್ಷದ ಹಿಂದೆ ನಡೆದಿದ್ದ ನಾಗಮಂಗಲ ಗಲಾಟೆ ಮಾಸುವ ಮುನ್ನವೇ ಮತ್ತೊಂದು ಅದೇ ರೀತಿಯ ಘಟನೆ ಮರುಕಳಿಸಿದ್ದು, ಸದ್ಯ ಪರಿಸ್ಥಿತಿ ಮಾತ್ರ ಬೂದಿಮುಚ್ಚಿದ ಕೆಂಡದಂತಿದೆ.

  • ಗಣೇಶ ಮೆರವಣಿಗೆ ವೇಳೆ ಹುಚ್ಚಾಟ; ಪೊಲೀಸರ ಮೇಲೆ ಹಲ್ಲೆಗೆ ಯತ್ನ – ಲಘು ಲಾಠಿಚಾರ್ಜ್

    ಗಣೇಶ ಮೆರವಣಿಗೆ ವೇಳೆ ಹುಚ್ಚಾಟ; ಪೊಲೀಸರ ಮೇಲೆ ಹಲ್ಲೆಗೆ ಯತ್ನ – ಲಘು ಲಾಠಿಚಾರ್ಜ್

    ಧಾರವಾಡ: ಗಣೇಶ ಮೆರವಣಿಗೆ ವೇಳೆ ಜನರ ಹುಚ್ಚಾಟವನ್ನು ತಡೆಯಲು ಹೋದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಪರಿಣಾಮ ಪೊಲೀಸರು ಲಘು ಲಾಠಿಚಾರ್ಜ್ ಮಾಡಿರುವ ಘಟನೆ ಧಾರವಾಡದ ನರೇಂದ್ರ ಗ್ರಾಮದಲ್ಲಿ ನಡೆದಿದೆ.

    ಶನಿವಾರ ಸಂಜೆ ಗ್ರಾಮದ ಎರಡು ಓಣಿಯವರು ಗಣೇಶ ವಿಸರ್ಜನೆಯನ್ನು ಏಕಕಾಲಕ್ಕೆ ಆರಂಭ ಮಾಡಿದ್ದರು. ಈ ಮೆರವಣಿಗೆ ವೇಳೆ ಎರಡೂ ಓಣಿಯವರು ಎದುರು ಬದುರು ಡಿಜೆ ಹಾಕಿ ಹುಚ್ಚೆದು ಕುಣಿಯಲು ಆರಂಭಿಸಿದ್ದರು. ಆಗ ಪೊಲೀಸರು ಎರಡು ಡಿಜೆಯನ್ನು ಬೇರೆ ಬೇರೆ ಕಡೆ ತಿರುಗಿಸಲು ಯತ್ನಿಸಿದ್ದರು. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ತುಂಗಾ ನದಿಯ ಉಪನದಿಗೆ ಬಿದ್ದ ಕಾರು – ನಾಲ್ವರು ಪಾರು

     ಆದರೆ ಅಲ್ಲಿದ್ದ ಜನರು ಎರಡು ಡಿಜೆಯನ್ನು ಬೇರೆ ಕಡೆ ತಿರುಗಿಸದಂತೆ ಒತ್ತಾಯಿಸಿದ್ದರು. ಜನರ ನಿಯಂತ್ರಣ ಮಾಡಲು ಪ್ರಯತ್ನಿಸಿದಾಗ ಪೊಲೀಸರಿಗೆ ಅವಾಜ್ ಹಾಕಿ, ಜನರು ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದರು.

    ಇದರಿಂದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಬಳಿಕ ಪೊಲೀಸರು ಡಿಜೆ ಬಂದ್ ಮಾಡಿಸಿ, ಶಾಂತಿಯುತವಾಗಿ ಗಣೇಶನ ವಿಸರ್ಜನೆ ಮಾಡಿಸಿದರು.

  • ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ – ಇಬ್ಬರು ಯುವಕರ ಬಂಧನ

    ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ – ಇಬ್ಬರು ಯುವಕರ ಬಂಧನ

    ರಾಯಚೂರು: ಹಳೆಯ ದ್ವೇಷ ಹಿನ್ನೆಲೆ ಗಣೇಶ ಮೆರವಣಿಗೆ (Ganesha Procession) ವೇಳೆ ಇಬ್ಬರು ಯುವಕರು ಕಲ್ಲು ತೂರಾಟ (Stone Pelting) ನಡೆಸಿ ಪುಂಡಾಟ ಮೆರೆದಿರುವ ಘಟನೆ ರಾಯಚೂರು (Raichur) ನಗರದ ಗಂಗಾನಿವಾಸ ರಸ್ತೆಯಲ್ಲಿ ನಡೆದಿದೆ.

    ಪ್ರಶಾಂತ್ ಹಾಗೂ ಪ್ರವೀಣ್ ಮಳಿಗೆಯೊಂದರ ಟೆರೆಸ್ ಮೇಲೆ ನಿಂತು ಕಲ್ಲು ತೂರಿದ್ದಾರೆ. ಗಂಗಾನಿವಾಸ ಮಾರ್ಗ ಮೂಲಕ ಮೆರವಣಿಗೆ ಬಂದಿದ್ದಕ್ಕೆ ಯುವಕರು ವಿನಯ್ ಕುಮಾರ್ ಹಾಗೂ ಗಣೇಶ್ ಇಬ್ಬರನ್ನ ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಇವಿಎಂಗಳ ಮೇಲೆ ನಂಬಿಕೆ ಇಲ್ಲದಿದ್ರೆ ರಾಜೀನಾಮೆ ಕೊಟ್ಟು ಸರಿಯಿಲ್ಲ ಅಂತ ಹೇಳಲಿ: ಬೊಮ್ಮಾಯಿ

    ಘಟನೆಯಲ್ಲಿ ವಿನಯ್ ಕುಮಾರ್ ಹಾಗೂ ಗಣೇಶ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಲ್ಲು ತೂರಿದ ಯುವಕರನ್ನ ಕೂಡಲೇ ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಹಿನ್ನೆಲೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್‌ಗೆ ರೈತರ ಸ್ವಾಗತ – 1.5 ಕೋಟಿಯಿಂದ 2.5 ಕೋಟಿ ರೂ. ಪರಿಹಾರಕ್ಕೆ ಸಂತಸ

  • ಗಣೇಶ ವಿಸರ್ಜನೆ ವೇಳೆ ಕರೆಂಟ್ ಶಾಕ್ – ಯುವಕ ಬಲಿ, ಇಬ್ಬರ ಸ್ಥಿತಿ ಗಂಭೀರ

    ಗಣೇಶ ವಿಸರ್ಜನೆ ವೇಳೆ ಕರೆಂಟ್ ಶಾಕ್ – ಯುವಕ ಬಲಿ, ಇಬ್ಬರ ಸ್ಥಿತಿ ಗಂಭೀರ

    ವಿಜಯಪುರ: ಗಣೇಶ ವಿಸರ್ಜನೆ ವೇಳೆ ವಿದ್ಯುತ್ ಪ್ರವಹಿಸಿ (Current Shock) ಓರ್ವ ಯುವಕ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ವಿಜಯಪುರ (Vijayapura) ನಗರದ ಗಾಂಧಿಚೌಕ್ ವೃತ್ತದ ಟಾಂಗಾ ಸ್ಟ್ಯಾಂಡ್ ಬಳಿ ನಡೆದಿದೆ.

    ನಗರದ ಡೋಬಲೆ ಗಲ್ಲಿ ನಿವಾಸಿ ಶುಭಂ ಸಂಕಳ (21) ಮೃತ ದುರ್ದೈವಿ. ಸೋಲಾಪುರದ ಡಿಜೆ ಯುವಕ ಪ್ರಭಾಕರ್ ಜಂಗಲೆ (22), ಡೋಬಲೆ ಗಲ್ಲಿಯ ಲಖನ್ ಶ್ರೀಕಾಂತ್ ಚವ್ಹಾಣ್ (28) ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ವೈರಲ್ ಫೀವರ್ ಹಾವಳಿ; ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಇಲ್ಲದೇ ರೋಗಿಗಳ ಪರದಾಟ

     7ನೇ ದಿನ ಗಣೇಶನ ವಿಸರ್ಜನೆಗೆ ಮೂರ್ತಿಯನ್ನು ಸಾಗಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಣೇಶ ಮೆರವಣಿಗೆ (Ganesha Procession) ವೇಳೆ ಯುವಕರು ಡಿಜೆ ಬಾಕ್ಸ್ ಮೇಲೆ ಕುಳಿತು ಕೋಲಿನಿಂದ ವಿದ್ಯುತ್ ತಂತಿಯನ್ನು ಎತ್ತಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ ಶುಭಂ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನುಳಿದ ಇಬ್ಬರು ಯುವಕರ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮುಂದುವರಿದ ಅಮೆರಿಕ ಸುಂಕ ಸಮರ; ತೈಲ ಖರೀದಿಗೆ ಭಾರತಕ್ಕೆ ದೊಡ್ಡ ಡಿಸ್ಕೌಂಟ್‌ ಕೊಟ್ಟ ರಷ್ಯಾ

    ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದ ಯುವಕ – ಫಿಟ್ಸ್‌ನಿಂದ ಸಾವು

    ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದ ಯುವಕ – ಫಿಟ್ಸ್‌ನಿಂದ ಸಾವು

    ರಾಯಚೂರು: ಗಣೇಶ ವಿಸರ್ಜನೆ ಮೆರವಣಿಗೆ (Ganesha Procession) ವೇಳೆ ಡಿಜೆ ಸೌಂಡ್‌ಗೆ ಡಾನ್ಸ್ ಮಾಡುವಾಗ ಕುಸಿದು ಬಿದ್ದ ಯುವಕನಿಗೆ ಏಕಾಏಕಿ ಫಿಟ್ಸ್ ಕಾಣಿಸಿಕೊಂಡು ಮೃತಪಟ್ಟಿರುವ ಘಟನೆ ನಗರದ ತೀನ್ ಖಂದಿಲ್ ವೃತ್ತದ ಬಳಿ ನಡೆದಿದೆ.

    ರಾಯಚೂರು (Raichur) ನಗರದ ಮಂಗಳವಾರ ಪೇಟೆಯ ಅಭಿಷೇಕ್ (24) ಮೃತ ಯುವಕ. ಗಣೇಶ ವಿಸರ್ಜನೆಯ ವೇಳೆ ರಾತ್ರಿಯಿಡೀ ಡ್ಯಾನ್ಸ್ ಮಾಡಿ ಅಭಿಷೇಕ್ ಸುಸ್ತಾಗಿ ಕುಸಿದು ಬಿದ್ದಿದ್ದ. ಈ ವೇಳೆ ಆತನಿಗೆ ಫಿಟ್ಸ್ ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅವಾಂತರ – ಮಣ್ಣು ಕುಸಿದು ಓರ್ವ ಕಾರ್ಮಿಕ ಬಲಿ

    ಕೂಡಲೇ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಭಿಷೇಕ್ ಮೃತಪಟ್ಟಿದ್ದಾನೆ. ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ದಾವಣಗೆರೆ | ಡಿಜೆಗೆ ಅನುಮತಿ ನಮ್ಮ ಹೋರಾಟಕ್ಕೆ ಸಿಕ್ಕ ಫಲ – ರಾಜಕೀಯ ಮುಖಂಡರಿಂದ ಸುಳ್ಳು ಪೋಸ್ಟ್

    ದಾವಣಗೆರೆ | ಡಿಜೆಗೆ ಅನುಮತಿ ನಮ್ಮ ಹೋರಾಟಕ್ಕೆ ಸಿಕ್ಕ ಫಲ – ರಾಜಕೀಯ ಮುಖಂಡರಿಂದ ಸುಳ್ಳು ಪೋಸ್ಟ್

    ದಾವಣಗೆರೆ: ದೇಶದೆಲ್ಲೆಡೆ ಗಣೇಶ ಚತುರ್ಥಿಗೆ ಭರ್ಜರಿಯಾಗಿ ಆಚರಣೆ ನಡೆಯುತ್ತಿದೆ. ಅಲ್ಲದೆ ಈಗಾಗಲೇ ಬಹುತೇಕ ಗಣೇಶ ಮೆರವಣಿಗೆಗಳು ಮುಗಿದು ಹೋಗಿವೆ. ಆದರೆ ದಾವಣಗೆರೆಯಲ್ಲಿ ಮಾತ್ರ ಇನ್ನೂ ಡಿಜೆಗಾಗಿ ಫೈಟಿಂಗ್ ಮಾಡುತ್ತಲೇ ಇದ್ದಾರೆ. ಇತ್ತ ಡಿಜೆಯನ್ನೇ ರಾಜಕೀಯವಾಗಿ ಬಳಕೆ ಮಾಡಿದಕೊಂಡ ರಾಜಕಾರಣಿಗಳು ಡಿಜೆಗಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಅಲ್ಲದೆ ಯುವ ಜನತೆಯಲ್ಲಿ ಗೊಂದಲ ಸೃಷ್ಟಿ ಮಾಡುವ ಕೆಲಸಗಳಾಗುತ್ತಿವೆ.

    ಬೆಣ್ಣೆ ನಗರಿ ದಾವಣಗೆರೆಯಲ್ಲಿ (Davanagere) ಗಣೇಶ ಮೆರವಣಿಗೆಯಲ್ಲಿ ಸೃಷ್ಟಿಯಾದ ಡಿಜೆ (DJ) ಗೊಂದಲ, ಗಣೇಶ ಪ್ರತಿಷ್ಠಾಪನೆಗಿಂತ ಮುಂಚಿತವಾಗಿ ದಾವಣಗೆರೆ ಯುವಜನತೆ ಡಿಜೆ ಹಾಕಿ ಅದ್ದೂರಿಯಾಗಿ ಗಣೇಶ ಮೆರವಣಿಗೆ ಮಾಡಿ ಎಂಜಾಯ್ ಮಾಡಿಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರು. ಆದರೆ ಕಳೆದ ಬಾರಿ ಗಣೇಶೋತ್ಸವ ಮೆರವಣಿಗೆಯಲ್ಲಿ ಬೇತೂರು ರಸ್ತೆಯಲ್ಲಿ ಕಲ್ಲು ತೂರಾಟವಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಈದ್ ಮಿಲಾದ್ ಹಾಗೂ ಗಣೇಶ ಮೆರವಣಿಗೆಯಲ್ಲಿ ಡಿಜೆ ಯನ್ನು ಸಂಪೂರ್ಣ ಬ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ಭೋವಿ ನಿಗಮದಲ್ಲಿ 60% ಕಮಿಷನ್‌, ಅಧ್ಯಕ್ಷರಿಂದಲೇ ಬೇಡಿಕೆ – ವಿಡಿಯೋ ರಿಲೀಸ್‌

     ಇದರಿಂದ ಯುವಜನತೆ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಡಿಜೆ ಮಾಲೀಕರು ಹಾಗೂ ಯುವಜನತೆ, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರಿಗೆ ಡಿಜೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಸಚಿವರು ಡಿಸಿ, ಎಸ್‌ಪಿ ನಿರ್ಧಾರ ಮಾಡುತ್ತಾರೆ ವಿನಃ ನಾನೇನು ಮಾಡೋಕೆ ಆಗೋದಿಲ್ಲ ಎಂದು ಹೇಳಿದ್ದಾರೆ. ಆದರೆ ಇತ್ತ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮಾತ್ರ ಯಾವುದೇ ಕಾರಣಕ್ಕೂ ಡಿಜೆಗೆ ಅನುಮತಿ ನೀಡೋದಿಲ್ಲ. ಈಗಾಗಲೇ ಆದೇಶ ಹೊರಡಿಸಿದ್ದು, ಅದೇಶವನ್ನು ಮೀರಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ನಡೆಯಲಾರದ ನಾಣ್ಯಗಳು ಚಾಲ್ತಿಗೆ ಬರೋಕೆ ದಸರಾ ಬಗ್ಗೆ ಮಾತು – ಪ್ರಿಯಾಂಕ್ ಖರ್ಗೆ

    ಇನ್ನು, ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಡಿಜೆಗೆ ಪರ್ಮಿಷನ್ ನೀಡಲಾಗಿದೆ ಎಂದು ವೈರಲ್ ಆಗುತ್ತಿದ್ದು, ಇದನ್ನು ನಂಬಿ ಬಸವನಾಳ್ ಗೊಲ್ಲರಹಟ್ಟಿ ಗ್ರಾಮದಲ್ಲಿ ಡಿಜೆ ಹಾಕಿದ್ದು, ಪೊಲೀಸರು ಡಿಜೆ ಸೌಂಡ್ ಸಿಸ್ಟಮ್ ಹಾಗೂ ಲಾರಿಯನ್ನು ಸೀಜ್ ಮಾಡಿದ್ದಾರೆ. ಅಲ್ಲದೇ ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

    ಆದರೆ ಸುಖಾ ಸುಮ್ಮನೆ ರಾಜಕೀಯ ಮುಖಂಡರು ಡಿಜೆಗೆ ಅನುಮತಿ ನೀಡಲಾಗಿದೆ. ಇದು ನಮ್ಮ ಹೋರಾಟದ ಫಲ ಎಂದು ಪೋಸ್ಟ್ರ್‌ಗಳನ್ನು ಹಾಕುತ್ತಿದ್ದು. ಇದು ಗೊಂದಲವನ್ನು ಸೃಷ್ಟಿ ಮಾಡಿದೆ. ಆದರೆ ಡಿಜೆಗೆ ಮಾತ್ರ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ನೀಡಿಲ್ಲ. ಇದರಿಂದ ಯುವಜನತೆ ಗೊಂದಲದಲ್ಲಿ ಇದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳು ಮಾಡಿದ ಆದೇಶ ವಾಪಪ್ ಪಡೆಯಲು ಆಗೋದಿಲ್ಲ. ಡಿಜೆ ಹಾಕುವುದರಿಂದ ಪರಿಸರಕ್ಕೆ ತೊಂದರೆಯಾಗುವುದರ ಜೊತೆಗೆ ಜನರ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಸುಖಾಸುಮ್ಮನೆ ಯುವಜನತೆಯಲ್ಲಿ ಗೊಂದಲ ಮೂಡಿಸುವುದನ್ನು ರಾಜಕೀಯ ಮುಖಂಡರು ಬಿಡಬೇಕು ಎಂದು ಪರಿಸರ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದಾರೆ.

    ಸದ್ಯ ಜಿಲ್ಲಾಡಳಿತ ಡಿಜೆಗೆ ಅನುಮತಿ ನೀಡಿಲ್ಲ. ಏನಾದರೂ ರಾಜಕೀಯ ಮುಖಂಡರ ಮಾತು ನಂಬಿ ಡಿಜೆ ಹಾಕಿದ್ರೆ ಕೇಸ್ ಬೀಳೋದಂತು ಗ್ಯಾರಂಟಿ.

  • ಗಣೇಶನ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶ – ಯುವಕ ಸ್ಥಳದಲ್ಲೇ ಸಾವು

    ಗಣೇಶನ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶ – ಯುವಕ ಸ್ಥಳದಲ್ಲೇ ಸಾವು

    ರಾಯಚೂರು: ಗಣೇಶನ ಮೆರವಣಿಗೆ (Ganesha procession) ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ರಾಯಚೂರು (Raichur) ತಾಲೂಕಿನ ಗಟ್ಟುಬಿಚ್ಚಾಲಿ ಗ್ರಾಮದಲ್ಲಿ ನಡೆದಿದೆ.

    ನರಸಿಂಹ (22) ಮೃತ ದುರ್ದೈವಿ. ಹನುಮಾಪುರ ಬಳಿ ರಾಜೊಳ್ಳಿಬಂಡಾ ಕಾಲುವೆಯಲ್ಲಿ ಗಣೇಶ ವಿಸರ್ಜನೆಗೆ ಹೊರಟಿದ್ದ ವೇಳೆ ಬೊಲೆರೋ ಪಿಕಪ್ ಮೇಲೆ ಗಣೇಶನನ್ನ ಹಿಡಿದು ಕುಳಿತಿದ್ದ ಯುವಕನಿಗೆ ವಿದ್ಯುತ್ ಸ್ಪರ್ಶಿಸಿದೆ. ಇದನ್ನೂ ಓದಿ: 15 ವರ್ಷದ ಬಾಲಕಿ ವಿವಾಹವಾಗಿ ಸಿಕ್ಕಿಬಿದ್ದ ಗ್ರಾಮ ‌ಪಂಚಾಯಿತಿ ಅಧ್ಯಕ್ಷ

    ಬೊಲೆರೋ ಪಿಕಪ್‌ನಲ್ಲಿದ್ದ ಇನ್ನುಳಿದ ಯುವಕರು ವಿದ್ಯುತ್ ಸ್ಪರ್ಶಿಸಿದ ಕೂಡಲೇ ಕೆಳಗೆ ಬಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಯ ನಡುವೆಯೇ ಅದ್ದೂರಿಯಾಗಿ ಗಣೇಶನ ಮೆರವಣಿಗೆ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಯರಗೇರಾ ಪೊಲೀಸ್ (Yaragera Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Davanagere Violence | ಕಲ್ಲು ತೂರಾಟ – ಗಣೇಶ ಸಮಿತಿ 8 ಜನ ಸೇರಿ 18 ಮಂದಿಗೆ ನ್ಯಾಯಾಂಗ ಬಂಧನ

    Davanagere Violence | ಕಲ್ಲು ತೂರಾಟ – ಗಣೇಶ ಸಮಿತಿ 8 ಜನ ಸೇರಿ 18 ಮಂದಿಗೆ ನ್ಯಾಯಾಂಗ ಬಂಧನ

    ದಾವಣಗೆರೆ: ಜಿಲ್ಲೆಯ ಬೇತೂರು ರಸ್ತೆಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ (Davanagere Stone Pelting Case) ಸಂಬಂಧಿಸಿದಂತೆ 18 ಜನರಿಗೆ ನ್ಯಾಯಾಧೀಶರಾದ ಪ್ರಶಾಂತ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ ಸಮಿತಿಯ 8 ಜನ ಸೇರಿ ಎರಡು ಕೋಮಿನ ಒಟ್ಟು 18 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ದಾವಣಗೆರೆಯ ಎಂಸಿಸಿ ʻಎʼ ಬ್ಲಾಕ್‌ನಲ್ಲಿರುವ ನ್ಯಾಯಾಧೀಶರಾದ ಪ್ರಶಾಂತ್ ಅವರ ನಿವಾಸದಲ್ಲಿ ಆರೋಪಿಗಳನ್ನು ಹಾಜರುಪಡಿಸಿದ್ದರು. ಆರೋಪಿಗಳ ವಿಚಾರಣೆ ಬಳಿಕ 18 ಜನರಿಗೆ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ (Judicial Custody) ವಿಧಿಸಿದರು.

    ಏನಿದು ಗಲಭೆ ಪ್ರಕರಣ?
    ದಾವಣಗೆರೆಯ ಮುದ್ದ ಬೋವಿ ಕಾಲೋನಿ ಹಾಗೂ ವೆಂಕಬೋವಿ ಕಾಲೋನಿಯ ಗಣೇಶ ಮೆರವಣಿಗೆ (Ganesh Procession) ನಡೆಯುವಾಗ ಕಲ್ಲು ತೂರಾಟ (Stone Pelting) ನಡೆದಿತ್ತು. ಘಟನೆಯಲ್ಲಿ ಪೊಲೀಸರೂ ಗಾಯಗೊಂಡಿದ್ದರು. ಕೂಡಲೇ ಮುಸ್ಲಿಂ ಮುಖಂಡರು ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಿದ್ದರು. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಾಗಿದ ಮೂರು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು. ಕೂಡಲೇ ಪೊಲೀಸರು ಇಡೀ ನಗರದಲ್ಲಿ ಸಂಚಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ಶುಕ್ರವಾರ ಬೆಳಗ್ಗಿನ ವೇಳೆಗೆ ಘಟನೆಗೆ ಕಾರಣರಾದವರನ್ನ ಬಂಧಿಸಿದ್ದರು.

    ಕಲ್ಲು ತೂರಾಟಕ್ಕೆ ಕಾರಣ ಏನು?
    ಕಳೆದ ಎರಡು ದಿನಗಳ ಹಿಂದೆ ಹಿಂದೂ ಮುಖಂಡರು ನಾಗಮಂಗಲ ಕಲ್ಲುತೂರಾಟ ಪ್ರಕರಣ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್‌ ಧ್ವಜ ಪ್ರದರ್ಶನ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಸಂಚಾಲಕ ಸತೀಶ್ ಪೂಜಾರ್ ವಿವಾದಾತ್ಮಕ ಹೇಳಿಕೆ‌ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಮುಸ್ಲಿಂ ಮುಖಂಡನೊಬ್ಬ ತಾಕತ್ ಇದ್ದರೆ ಬೇತೂರು ರಸ್ತೆಗೆ ಬಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗುರುವಾರ ಗಣೇಶ ಮೆರವಣಿಗೆಯಲ್ಲಿ ಸತೀಶ್ ಪೂಜಾರಿ ಭಾಗವಹಿಸಿದ್ದರು. ಮೆರವಣಿಗೆ ಸಾಗುವ ಅರಳಿಮರ ಸರ್ಕಲ್ ಬಳಿ ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು ಸೇರಿದ್ದರು. ಗಣೇಶನ ಮೆರವಣಿಗೆ ಹೋಗುತ್ತಿದ್ದಾಗ ಇಸ್ಲಾಂ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.

    ಈ ವೇಳೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಮುಸ್ಲಿಂ ಮುಖಂಡರೇ ಜನಸಂದಣಿಯನ್ನು ನಿಯಂತ್ರಣ ಮಾಡಿದ್ದಾರೆ. ನಂತರ ಕೆ ಅರ್ ರಸ್ತೆ ಹಂಸಭಾವಿ ಸರ್ಕಲ್ ನಲ್ಲಿ ಕಲ್ಲು ತೂರಾಟ ನಡೆದಿದೆ.

  • ನಾಗಮಂಗಲ ಬಳಿಕ ದಾವಣಗೆರೆಯಲ್ಲೂ ಧಗಧಗ – ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡ!

    ನಾಗಮಂಗಲ ಬಳಿಕ ದಾವಣಗೆರೆಯಲ್ಲೂ ಧಗಧಗ – ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡ!

    ದಾವಣಗೆರೆ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣದಿಂದಾಗಿ ದಾವಣಗೆರೆ ನಗರ ಬೂದಿ ಮುಚ್ಚಿದ ಕೆಂಡದಂತಾಗಿದೆ. ದಾವಣಗೆರೆ ನಗರಾದಾದ್ಯಂತ ಭಯದ ವಾತಾವರಣಮನೆ ಮಾಡಿದ್ದು,ಕಲ್ಲು ತೂರಾಟ ನಡೆದ ಇಮಾಂನಗರದಲ್ಲಿ ರಸ್ತೆಯುದ್ದಕ್ಕು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಹಾವೇರಿ, ಶಿವಮೊಗ್ಗ ಜಿಲ್ಲೆಗಳ ರಿಸರ್ವ್ ಪೊಲೀಸ್ ತುಕಡಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ರಾತ್ರಿಯಿಡೀ ನಿದ್ರೆಗಟ್ಟು ಗಸ್ತು ನಡೆಸಿವೆ. ಮತ್ತೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ದಾವಣಗೆರೆ ಎಸ್ಪಿ ಉಮಾ ಅವರು, ಪರಿಸ್ಥಿತಿ ಹತೋಟಿಗೆ ತರಲು ಮುಂದಾಗಿದ್ದಾರೆ.

    ಈ ಘಟನೆಯಿಂದಾಗಿ ಬೆಳ್ಳಂಬೆಳಿಗ್ಗೆ ಜನಜಂಗುಲಿಯಿಂದ ತುಂಬಿರ್ತಿದ್ದ ಇಮಾಂ ನಗರದ ಜನನಿಬಿಡ ರಸ್ತೆಗಳು ಖಾಲಿಖಾಲಿಯಾಗಿದ್ದು ಬಿಕೊ ಎನ್ನುತ್ತಿವೆ. ಇಲ್ಲಿರುವ ಮಸೀದಿ ಬಳಿ 10ಕ್ಕೂ ಹೆಚ್ಚು ಪೊಲೀಸ್ ವಾಹನಗಳನ್ನು ನಿಲ್ಲಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. ಹಾಗೆಯೇ ಬೆಳಗಿನ ಜಾವ 5 ಗಂಟೆಗೆ ವ್ಯಾಪಾರ ವಹಿವಾಟಿಗೆ ತೆರಳುತಿದ್ದ ಜನರು ತಡವಾಗಿ ಹೊರಬರ್ತಿದ್ದು, ನಾಗರೀಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಚಿಕಿತ್ಸೆ ಪಡೆಯುತ್ತಿದ್ದ 27ರ ಒಡಿಶಾ ಗಾಯಕಿ ರುಕ್ಸಾನಾ ಬಾನೊ ಆಸ್ಪತ್ರೆಯಲ್ಲೇ ಸಾವು!

    ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ ನಡೆಸಿದ್ದು, ಏಕಾಏಕಿ ಮೆರವಣೆಗೆಯಲ್ಲಿ ಕಿಡಿಗೇಡಿಗಳು ಕಲ್ಲುತೂರಾಟ ಮಾಡಿದ್ದಾರೆ. ನಗರದ ಅರಳಿಮರ ಸರ್ಕಲ್ ಬಳಿ ಮೊದಲು ಕಲ್ಲು ತೂರಾಟ ಶುರುವಾಗಿದ್ದು, ಬಳಿಕ ಕೆ.ಆರ್ ರಸ್ತೆ, ಹಂಸಬಾವಿ ಸರ್ಕಲ್, ಕೆಆರ್ ಮಾರ್ಕೇಟ್ ಸೇರಿದಂತೆ ಬಂಬೂ ಬಜಾರ್ ರಸ್ತೆ, ಮಟ್ಟಿಕಲ್ಲು ಏರಿಯಾದಲ್ಲಿಯೂ ಕಲ್ಲುತೂರಾಟ ನಡೆದಿದೆ. ತಕ್ಷಣವೇ ಘಟನಾಸ್ಥಳಕ್ಕೆ ಆಗಮಿಸಿದ ಪೊಲೀಸರು ಎಷ್ಟೇ ನಿಯಂತ್ರಿಸಿದರೂ ಕಿಡಿಗೇಡಿಗಳು ಕಲ್ಲು ತೂರಾಟ ಮುಂದುವರಿಸಿದ್ದು, ಪೊಲೀಸರ ಎದುರೇ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಕೂಡ ಕಲ್ಲಿನಿಂದ ರಕ್ಷಿಸಿಕೊಳ್ಳಲು ಬೋರ್ಡ್ ಹಿಡಿದುಕೊಂಡು ತಿರುಗಾಡುವಂತಾಗಿದೆ.

    ಸ್ಥಳಕ್ಕೆ ಪೊಲೀಸರು ಆಗಮಿಸುತ್ತಲೇ ಕಿಡಿಗೇಡಿಗಳು ಅಲ್ಲಿಂದ ಪಾರಾಗಿ, ಏರಿಯಾಗಳಿಗೆ ನುಗ್ಗಿ, ಮಟ್ಟಿಕಲ್ಲು, ಅನೆಕೊಂಡಗಳಲ್ಲಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪುಂಡರ ಕಲ್ಲು ತೂರಾಟಕ್ಕೆ ಮಟ್ಟಿಕಲ್ಲು ನಿವಾಸಿಗಳು ದೊಣ್ಣೆ ಹಿಡಿದು ಓಡಿಸಿಕೊಂಡು ಹೋಗಿದ್ದಾರೆ.

    60 ರಿಂದ 70 ಯುವಕರ ಗುಂಪು ಮಟ್ಟಿಕಲ್ಲು, ಅನೆಕೊಂಡದ ಹಲವು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಿದ್ದು, ಜೊತೆಗೆ ಮನೆ ಮುಂಭಾಗದಲ್ಲಿ ಇರುವ ವಾಹನಗಳಿಗೆ ಹಾನಿ ಮಾಡಿದ್ದಾರೆ. ಅಲ್ಲದೆ ಏಕಾಎಕಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಹಿನ್ನಲೆ ಭಯದ ವಾತಾವರಣ ಸೃಷ್ಟಿಯಾಗಿದೆ. ಮನೆಗಳಿಗೂ ಕೂಡ ಬೀಗ ಹಾಕಿಕೊಂಡು ಹೋಗಿದ್ದಾರೆ. ಇದರಿಂದಾಗಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ʻಉಪೇಂದ್ರʼ ಸಿನಿಮಾ ವೀಕ್ಷಿಸಿದ ಉಪೇಂದ್ರ!

    ಸದ್ಯ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದು, ಇದುವರೆಗೂ ಎರಡು ಕಡೆಯಿಂದ 20ಕ್ಕೂ ಹೆಚ್ಚು ಜನರನ್ನು ಸೆರೆಹಿಡಿದಿದ್ದಾರೆ. ಇಡೀ ರಾತ್ರಿ ಹಳೇ ದಾವಣಗೆರೆಯನ್ನು ಪೊಲೀಸರು ಗಸ್ತು ಹೊಡೆದಿದ್ದಾರೆ. ಬೆಳ್ಳಂಬೆಳಿಗ್ಗೆ ಜನಜಂಗುಳಿಯಿಂದ ತುಂಬಿರುತ್ತಿದ್ದ ರಸ್ತೆಗಳು ಖಾಲಿಯಾಗಿದ್ದು, ಬಿಕೊ ಎನ್ನುತ್ತಿವೆ. ಹಾಲು ಖರೀದಿಸಲು ಕೂಡ ಅರಳಿಮರ ಸರ್ಕಲ್ ಜನ ಮನೆಯಿಂದ ಹೊರಬರುತ್ತಿಲ್ಲ. ಒಟ್ಟಿನಲ್ಲಿ ದಾವಣಗೆರೆಯ ಇಮಾಂನಗರ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ.