Tag: ಗಣೇಶ್

  • ಶಾಸಕರಿಬ್ಬರ ಬಡಿದಾಟ ಪ್ರಕರಣಕ್ಕೆ ಅಂತ್ಯ ಹಾಡಲು ಮುಂದಾದ ಗಣೇಶ್

    ಶಾಸಕರಿಬ್ಬರ ಬಡಿದಾಟ ಪ್ರಕರಣಕ್ಕೆ ಅಂತ್ಯ ಹಾಡಲು ಮುಂದಾದ ಗಣೇಶ್

    ಬೆಂಗಳೂರು: ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕರಿಬ್ಬರ ಬಡಿದಾಟ ಪ್ರಕರಣಕ್ಕೆ ಅಂತ್ಯ ಹಾಡಲು ಶಾಸಕ ಗಣೇಶ್ ಮುಂದಾಗಿದ್ದಾರೆ.

    ಪರಸ್ಪರ ರಾಜಿ ಸಂಧಾನದ ಮಾಡಿಕೊಳ್ಳುವ ಮೂಲಕ ಪ್ರಕರಣಕ್ಕೆ ಎಳ್ಳು ನೀರು ಬಿಡಲಾಗುತ್ತಿದೆ ಎಂದು ಶಾಸಕ ಕಂಪ್ಲಿ ಗಣೇಶ್ ಪರ ವಕೀಲರು ಹೈಕೋರ್ಟಿಗೆ ಮೆಮೋ ಸಲ್ಲಿಸಿದ್ದಾರೆ. ಇದನ್ನೂ ಓದಿ: ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

    ಪ್ರಕರಣ ಬಹುತೇಕ ಮುಕ್ತಾಯದ ಹಂತದಲ್ಲಿದೆ. ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ಮಾಡಿಕೊಡಲು ನ್ಯಾ.ಬಿ.ಎ.ಪಾಟೀಲ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಶಾಸಕ ಗಣೇಶ್ ಪರ ವಕೀಲ ಮೆಮೋ ಸಲ್ಲಿಸಿದ್ದಾರೆ. ಪ್ರಕರಣದ ಬಗ್ಗೆ ಉಭಯ ಕಕ್ಷಿದಾರರು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರಾಗಲಿ ನಂತರ ಮೆಮೋ ಪರಿಗಣಿಸಲಾಗುವುದು ಎಂದು ಪೀಠ ಹೇಳಿದೆ. ಇದನ್ನೂ ಓದಿ: `ಪಿಸ್ತೂಲ್ ಕೊಡಿ ಈತನನ್ನು ಇಲ್ಲೇ ಮುಗಿಸಿ, ಪ್ರಾಣ ತೆಗೆಯುತ್ತೇನೆ’ – ರೆಸಾರ್ಟ್ ಕಿತ್ತಾಟದ ಇಂಚಿಂಚು ಮಾಹಿತಿ ಕೊಟ್ಟ ಆನಂದ್ ಸಿಂಗ್

    ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಈಗಲ್ ಟನ್ ರೆಸಾರ್ಟ್ ನಲ್ಲಿ ಗಣೇಶ್ ಮಾರಣಾಂತಿಕ ಹಲ್ಲೆ ನಡೆಸಿದ ಸಂಬಂಧ ತಮ್ಮ ವಿರುದ್ಧ ದಾಖಲಿರುವ ಎಫ್‍ಐಆರ್ ರದ್ದು ಕೋರಿ ಗಣೇಶ್ ಅರ್ಜಿ ಸಲ್ಲಿಸಿದ್ದಾರೆ.

    ಕಳೆದ ವರ್ಷ ಮಾಚ್ ನಲ್ಲಿ ಕಾಂಗ್ರೆಸ್ ಶಾಸಕರು ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಉಳಿದಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್‍ಪಿ ಸಭೆ ಮುಗಿದ ನಂತರ ಕೈ ಶಾಸಕರು ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದ್ದು, ಗಲಾಟೆಯಲ್ಲಿ ಶಾಸಕ ಗಣೇಶ್ ಕೋಪಗೊಂಡು ಬಾಟಲ್‍ನಿಂದ ಆನಂದ್ ಸಿಂಗ್ ತಲೆಗೆ ಹೊಡೆದಿದ್ದರು.

  • ಕನ್ನಡತನದ ಗೋಲ್ಡನ್ ಕ್ಷಣಗಳನ್ನು ಪ್ರೇಕ್ಷಕರ ಮುಂದಿಟ್ಟ ‘ಗೀತಾ’!

    ಕನ್ನಡತನದ ಗೋಲ್ಡನ್ ಕ್ಷಣಗಳನ್ನು ಪ್ರೇಕ್ಷಕರ ಮುಂದಿಟ್ಟ ‘ಗೀತಾ’!

    ಬೆಂಗಳೂರು: ಗೋಕಾಕ್ ಚಳುವಳಿ ಮತ್ತು ಕನ್ನಡಪ್ರೇಮದ ಕಥಾನಕವೆಂಬ ಸುಳಿವಿನ ಮೂಲಕವೇ ಕನ್ನಡಿಗರ ನಡುವೆ ಕುತೂಹಲದ ಸೆಳೆಮಿಂಚು ಹರಿಸಿದ್ದ ಚಿತ್ರ ಗೀತಾ. ಗೋಲ್ಡನ್ ಸ್ಟಾರ್ ಗಣೇಶ್ ಟ್ರೇಲರ್ ಮೂಲಕ ಕನ್ನಡ ಪರ ಹೋರಾಟಗಾರನಾಗಿ ಅಬ್ಬರಿಸಿದ್ದ ರೀತಿ ಮತ್ತಷ್ಟು ಜನರನ್ನು ಆಕರ್ಷಿಸಿತ್ತು. ಅಷ್ಟಕ್ಕೂ ಗೋಕಾಕ್‍ನಂಥಾ ಐತಿಹಾಸಿಕ ಚಳುವಳಿಯನ್ನು ಕಮರ್ಶಿಯಲ್ ಚೌಕಟ್ಟಿನಲ್ಲಿ, ಪ್ರೇಮಕಥಾನಕದೊಂದಿಗೆ ಹೇಳೋದೇ ಮಹಾ ಸವಾಲು. ನಿರ್ದೇಶಕ ವಿಜಯ್ ಕಿರಣ್ ಮೊದಲ ಹೆಜ್ಜೆಯಲ್ಲಿಯೇ ಅದನ್ನು ಸ್ವೀಕರಿಸಿದ್ದಾರೆಂದರೆ, ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡಪರ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆಂದರೆ ಗೀತಾ ಬಗ್ಗೆ ಬೆರಗು ಮೂಡದಿರಲು ಸಾಧ್ಯವೇ? ಈ ಕಾರಣದಿಂದಲೇ ದಶ ದಿಕ್ಕುಗಳಿಂದಲೂ ಕುತೂಹಲಕ್ಕೆ ಕಾರಣವಾಗಿದ್ದ ಗೀತಾ ಇದೀಗ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.

    ಗೋಲ್ಡನ್ ಸ್ಟಾರ್ ಗಣೇಶ್ ಇಲ್ಲಿ ಎರಡು ಪಾತ್ರಗಳನ್ನು ಸಂಭಾಳಿಸಿದ್ದಾರೆ. ಅವೆರಡರಲ್ಲಿಯೂ ಕನ್ನಡಿಗರೆಲ್ಲರ ಮನ ಮುಟ್ಟುವಂತೆ ನಟಿಸಿದ್ದಾರೆ. ಆಕಾಶ್ ಮತ್ತು ಶಂಕರನಾಗಿ ಅವರು ನಟಿಸಿದ್ದಾರೆ. ಈ ಆಕಾಶ್ ತಂದೆ ತಾಯಿಯರಿದ್ದರೂ ತೊಳಲಾಟವನ್ನೇ ಹೊದ್ದು ಬದುಕುವ ಹುಡುಗ. ಯಾಕೆಂದರೆ ತಂದೆ ತಾಯಿ ಬೇರೆಯಾಗಿ ಎರಡು ಧ್ರುವಗಳಂತಾಗಿರುತ್ತಾರೆ. ಇಬ್ಬರನ್ನೂ ಬೇರೆ ಬೇರೆಯಾಗಿಯೇ ಕಾಣುತ್ತಾ, ಅಪೂರ್ಣ ಪ್ರೀತಿಯ ಕೊರತೆಯನ್ನು ಮನಸೊಳಗೆ ಸಾಕಿಕೊಂಡೆ ಇರೋ ಆತನ ಪಾಲಿಗೆ ಅಪ್ಪ ಅಮ್ಮ ಹೀಗಾಗಲು ಕಾರಣವೇನೆಂಬುದು ಸದಾ ಕಾಡುವ ಪ್ರಶ್ನೆ. ಕಡೆಗೂ ಅದಕ್ಕೆ ಉತ್ತರ ಹುಡುಕಿದಾಗ ಕನ್ನಡಪ್ರೇಮಿ ಶಂಕರನ ಕಥೆ ತೆರೆದುಕೊಳ್ಳುತ್ತೆ. ಇಡೀ ಕಥೆಗೊಂದು ಹೊಸಾ ಆವೇಗ ಬರುವುದು ಆ ಕ್ಷಣದಿಂದಲೇ.

    ಅಲ್ಲಿಂದಾಚೆಗೆ ಗೋಕಾಕ್ ಚಳುವಳಿಯ ಹಿನ್ನೆಲೆಯ ಅಪ್ಪಟ ಕನ್ನಡ ಪ್ರೇಮ ಹೊದ್ದುಕೊಂಡ ಕಥೆ ಬಿಚ್ಚಿಕೊಳ್ಳುತ್ತದೆ. ಅದರ ಜೊತೆ ಜೊತೆಗೇ ಎಂಥವರ ಎದೆಗಾದರೂ ನೇರವಾಗಿ ಸೋಕುವಂಥಾ ಪ್ರೇಮ ಕಥೆಯೂ ಬಿಚ್ಚಿಕೊಳ್ಳುತ್ತದೆ. ಅಷ್ಟಕ್ಕೂ ಈ ಆಕಾಶ್ ಯಾರು? ಆತನಿಗೂ ಶಂಕರನ ಕಥೆಗೂ ಇರೋ ಕನೆಕ್ಷನ್ನುಗಳೇನೆಂಬುದನ್ನು ಕುತೂಹಲ ಕಾಯ್ದಿಟ್ಟುಕೊಂಡೇ ಅನಾವರಣಗೊಳಿಸುವಲ್ಲಿ ನಿರ್ದೇಶಕ ವಿಜಯ್ ನಾಗೇಂದ್ರರ ಜಾಣ್ಮೆಯ ಅನಾವರಣವಾಗುತ್ತದೆ. ಗೋಕಾಕ್‍ನಂಥಾ ಗಂಭೀರ ಚಳುವಳಿ ಮತ್ತು ಪ್ರೀತಿಯನ್ನು ಹದಮುದವಾಗಿ ಬೆರೆಸುತ್ತಲೇ ಮನೋರಂಜನೆಗೂ ಕೂಡಾ ಕೊರತೆಯಾಗದಂತೆ ಮೂಡಿ ಬಂದಿರೋದು ಈ ಚಿತ್ರದ ನಿಜವಾದ ಹೆಚ್ಚುಗಾರಿಕೆ.

    ಇಲ್ಲಿ ಗೋಕಾಕ್ ಚಳುವಳಿಯನ್ನು ಮರು ರೂಪಿಸಿದ ರೀತಿಯೇ ಕನ್ನಡದ ಮನಸುಗಳನ್ನೆಲ್ಲ ಥ್ರಿಲ್ ಆಗಿಸುವಂತಿದೆ. ಕಥೆ ಬೇರೆ ಬೇರೆ ದಿಕ್ಕುಗಳಲ್ಲಿ ಹರಡಿಕೊಂಡಿದ್ದರೂ ಯಾವುದೂ ಕೃತಕ ಅನ್ನಿಸದಂತೆ, ಬೇರೆ ಬೇರೆಯೆಂಬ ಭಾವ ಮೂಡಿಸದಂತೆ ಕೂಡಿಸುವಲ್ಲಿಯೂ ಕೂಡಾ ನಿರ್ದೇಶನದ ಕಸುಬುದಾರಿಕೆ ಜಾಹೀರಾಗುತ್ತದೆ. ಇನ್ನುಳಿದಂತೆ ಗಣೇಶ್ ಇಲ್ಲಿ ಬೇರೆಯದ್ದೇ ಲುಕ್ಕಿನಲ್ಲಿ, ಹದಗೊಂಡ ನಟನೆಯ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡುತ್ತಾರೆ. ಮೂವರು ನಾಯಕಿಯರು ಮತ್ತು ಇತರೇ ಪಾತ್ರವರ್ಗವೂ ಕೂಡಾ ಅದಕ್ಕೆ ತಕ್ಕುದಾಗಿಯೇ ಸಾಥ್ ಕೊಟ್ಟಿದ್ದಾರೆ. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಮತ್ತು ಹಾಡುಗಳೆಲ್ಲವೂ ಒಂದಕ್ಕೊಂದು ಪೂರಕವಾಗಿವೆ.

    ಈ ಚಿತ್ರದಲ್ಲಿ ಪ್ರಧಾನ ಕುತೂಹಲವಿದ್ದದ್ದೇ ಗೋಕಾಕ್ ಚಳುವಳಿಯ ಮರುಸೃಷ್ಟಿಯ ಬಗ್ಗೆ. ಅದನ್ನು ನಿರ್ಮಾಪಕರಾದ ಸೈಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ಪರಿಣಾಮಕಾರಿಯಾಗಿ, ರಿಚ್ ಆಗಿ ಮೂಡಿ ಬರುವಂತೆ ಮಾಡಿದ್ದಾರೆ. ನಿರ್ದೇಶಕ ವಿಜಯ್ ನಾಗೇಂದ್ರ ಮೊದಲ ಹೆಜ್ಜೆಯಲ್ಲಿಯೇ ಸಂಕೀರ್ಣವಾದ ಕಥೆಯನ್ನು ಆರಿಸಿಕೊಂಡಿದ್ದರೂ ಕೂಡಾ ಎಲ್ಲಿಯೂ ಸಿಕ್ಕಾಗದಂತೆ ಕಲಾತ್ಮಕ ಕೈಚಳಕ ತೋರಿಸಿದ್ದಾರೆ. ಈ ಕಾರಣದಿಂದಲೇ ವಿರಳ ಕಥೆಯ ಮೂಲಕ ಗೀತಾ ಕನ್ನಡತನದ ಗೋಲ್ಡನ್ ಕ್ಷಣಗಳನ್ನು ಸಮರ್ಥವಾಗಿಯೇ ಪ್ರೇಕ್ಷಕರ ಮುಂದಿಟ್ಟಿದ್ದಾಳೆ!

    ರೇಟಿಂಗ್: 3.5/4

  • ಎರಡು ವರ್ಷದ ಹಿಂದೆಯೇ ನಸುನಕ್ಕಿದ್ದಳು ‘ಗೀತಾ’!

    ಎರಡು ವರ್ಷದ ಹಿಂದೆಯೇ ನಸುನಕ್ಕಿದ್ದಳು ‘ಗೀತಾ’!

    ಬೆಂಗಳೂರು: ಒಂದು ಸಿನಿಮಾ ರೂಪುಗೊಳ್ಳೋದರ ಹಿಂದೆ ನಾನಾ ಘಟ್ಟಗಳಿರುತ್ತವೆ. ಹೇಳಲಾರದಂಥಾ ಪಡಿಪಾಟಲುಗಳೂ ಇರುತ್ತವೆ. ದಿನ, ತಿಂಗಳುಗಳಲ್ಲ; ವರ್ಷಗಟ್ಟಲೆ ಪಟ್ಟಾಗಿ ಕೂತು ಕಾವು ಕೊಡದಿದ್ದರೆ ಗಟ್ಟಿ ಕಥೆಯೊಂದು ರೂಪುಗೊಳ್ಳಲು ಸಾಧ್ಯವಾಗೋದಿಲ್ಲ. ಇದೀಗ ಭಾರೀ ಅಬ್ಬರದೊಂದಿಗೆ ಇದೇ ತಿಂಗಳ 27ರಂದು ಬಿಡುಗಡೆಗೆ ರೆಡಿಯಾಗಿರೋ ಗೀತಾ ಚಿತ್ರದ ಹುಟ್ಟಿನ ಹಿಂದೆಯೂ ಅಂಥಾದ್ದೇ ಪರಿಶ್ರಮಗಳ ಕಥೆಯಿದೆ. ಅಷ್ಟಕ್ಕೂ ಈಗ ಬಿಡುಗಡೆಯ ಹೊಸ್ತಿಲಲ್ಲಿರೋ ಗೀತಾ ಎರಡು ವರ್ಷದ ಹಿಂದೆಯೇ ಒಂದೆಳೆಯ ಕಥೆಯ ಮೂಲಕ ನಸುನಕ್ಕಿದ್ದಳು.

    ಸಂತೋಷ್ ಆನಂದ್ ರಾಮ್ ನಿರ್ದೇಶನದ ಸೂಪರ್ ಹಿಟ್ ಚಿತ್ರ ರಾಜಕುಮಾರದಲ್ಲಿ ಕೋ ರೈಟರ್, ಡೈರೆಕ್ಟರ್ ಆಗಿದ್ದವರು ವಿಜಯ್ ನಾಗೇಂದ್ರ. ಆ ಚಿತ್ರ ತೆರೆ ಕಂಡು ಸಾರ್ವಕಾಲಿಕ ದಾಖಲೆ ಮಾಡಿದ್ದೀಗ ಇತಿಹಾಸ. ಈ ರಾಜಕುಮಾರ ಚಿತ್ರಕ್ಕೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ವಿಜಯ್ ನಾಗೇಂದ್ರರಿಗೆ ಗೀತಾ ಚಿತ್ರದ ಒಂದೆಳೆ ಕಥೆ ಹೊಳೆದು ಅದಕ್ಕೊಂದಷ್ಟು ಸಿನಿಮಾ ರೂಪುರೇಷೆಗಳನ್ನೂ ನೀಡಿದ್ದರು. ಆಗ ವಿಜಯ್ ಅವರ ಮನಸಲ್ಲಿ ನಾಯಕನಾಗಿ ನೆಲೆಗೊಂಡಿದ್ದದ್ದು ಗೋಲ್ಡನ್ ಸ್ಟಾರ್ ಗಣೇಶ್ ಅವರೇ!

    ರಾಜಕುಮಾರ ಚಿತ್ರ ಬಿಡುಗಡೆಯಾಗುತ್ತಲೇ ವಿಜಯ್ ನಾಗೇಂದ್ರ ಗಣೇಶ್‍ರನ್ನು ಭೇಟಿಯಾಗಿ ಈ ಕಥೆಯನ್ನು ಹೇಳಿದ್ದರಂತೆ. ಅದನ್ನು ಕೇಳಿದಾಕ್ಷಣವೇ ಖುಷಿಗೊಂಡಿದ್ದ ಗಣೇಶ್ ನಟಿಸಲೂ ಒಪ್ಪಿಗೆ ಸೂಚಿಸಿದ್ದರು. ಹಾಗೆ ಹೊಳೆದ ಒಂದೆಳೆಯನ್ನು ಗೋಕಾಕ್ ಚಳವಳಿಯ ಬಗ್ಗೆ ಅಧ್ಯಯನ ನಡೆಸಿ, ಹಿರಿಯರಿಂದ ಮಾರ್ಗದರ್ಶನ ಪಡೆದು ಕಡೆಗೂ ಒಂದು ರೂಪಕ್ಕೆ ತರಲಾಗಿತ್ತು. ಇದರೊಂದಿಗೆ ಮಸ್ತ್ ಆಗಿರೋ ಪ್ರೇಮ ಕಥಾನಕವನ್ನು ಬ್ಲೆಂಡ್ ಮಾಡಿ ಗಟ್ಟಿ ಕಥೆಯೊಂದನ್ನು ಸಿದ್ಧಪಡಿಸಿಕೊಂಡ ವಿಜಯ್ ನಾಗೇಂದ್ರ ಚಿತ್ರೀಕರಣಕ್ಕಿಳಿದಿದ್ದರು. ಆ ನಂತರದ್ದೇನಿದ್ದರೂ ಸೆನ್ಸೇಷನಲ್ ಪಯಣ. ಹಾಗೆ ಸಾಗಿ ಬಂದಿರೋ ಗೀತಾ ಚಿತ್ರ ಇದೇ ತಿಂಗಳ 27ರಂದು ತೆರೆಗಾಣಲಿದೆ. ಈ ಚಿತ್ರವನ್ನು ಕನ್ನಡ ಚಿತ್ರರಂಗದ ಯಶಸ್ವೀ ನಿರ್ಮಾಪಕ ಸೈಯದ್ ಸಲಾಮ್ ಅವರ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ್ದಾರೆ.

  • ನಿಮ್ಮ ಮೇಲೆ ಪ್ರೀತಿ ಇದ್ದಷ್ಟೇ ಕೋಪವೂ ಇದೆ ಅಪ್ಪಾಜಿ- ಸುದೀಪ್

    ನಿಮ್ಮ ಮೇಲೆ ಪ್ರೀತಿ ಇದ್ದಷ್ಟೇ ಕೋಪವೂ ಇದೆ ಅಪ್ಪಾಜಿ- ಸುದೀಪ್

    – ಸ್ಯಾಂಡಲ್‍ವುಡ್ ನಟರಿಂದ ವಿಷ್ಣುದಾದನಿಗೆ ವಿಶ್

    ಬೆಂಗಳೂರು: ಇಂದು ಚಂದನವನದ ವಿಷ್ಣುವರ್ಧನ್, ಉಪೇಂದ್ರ ಹಾಗೂ ನಟಿ ಶೃತಿ ಅವರ ಹುಟ್ಟುಹಬ್ಬವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

    ಇತ್ತ ಕಿಚ್ಚ ಸುದೀಪ್ ಅವರು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಸುದೀಪ್ ಅವರು ತಮ್ಮ ಟ್ವಿಟ್ಟರಿನಲ್ಲಿ ವಿಷ್ಣುವರ್ಧನ್ ಅವರ ಫೋಟೋವನ್ನು ಹಾಕಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ “ಹುಟ್ಟು ಹಬ್ಬದ ಶುಭಾಶಯ ಅಪ್ಪಾಜಿ. ನಿಮ್ಮ ಮೇಲೆ ಪ್ರೀತಿ ಎಷ್ಟು ಇದೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವೂ ಅಷ್ಟೇ ಇದೆ. ಅನಾಥರಾಗಿದ್ದೀವಿ. ಬಹಳ ಬೇಗ ಹೋಗಿಬಿಟ್ರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ, ಆದರೆ ನಿಮ್ಮ ಅಗತ್ಯ ನಮಗಿತ್ತು. ನಿಮ್ಮನ್ನು ನೆನೆಯುವ, ಪ್ರೀತಿಸುವ, ಅಭಿಮಾನಿಯಲ್ಲೊಬ್ಬ ಕಿಚ್ಚ” ಎಂದು ಬರೆದುಕೊಂಡಿದ್ದಾರೆ.

    ಕಿಚ್ಚ ಸುದೀಪ್ ಅಲ್ಲದೆ ನವರಸನಾಯಕ ಜಗ್ಗೇಶ್ ಅವರು, “ನೆನಪಿದೆ ಆ ದಿನ. ನನ್ನ ಹರಸಿದ ನಿಮ್ಮ ಮನ. ದೇಹ ತ್ಯಾಗ ನಶ್ವರ ಜಗದ ಸಹಜ ಕ್ರಿಯೆ. ಆದರೆ ಸವಿ ನೆನಪು ಬಿಟ್ಟು ಹೋಗುವುದು ಆತ್ಮೀಯ ಹೃದಯ ಮಾತ್ರ. ನಾ ಕಂಡ ಕೆಲ ಆತ್ಮೀಯ ಹೃದಯಗಳಲ್ಲಿ ನೀವೂ ಒಬ್ಬರು. ನಿಮ್ಮ ಕಾಲದಲ್ಲಿ ನಾನು ಇದ್ದೆ ಎಂಬ ಹೆಮ್ಮೆಯಿದೆ. ಹುಟ್ಟುಹಬ್ಬದ ಶುಭಾಶಯಗಳು ವಿಷ್ಣು ಸಾರ್” ಎಂದು ಟ್ವೀಟ್ ಮಾಡಿದ್ದಾರೆ.

    ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಟ್ವಿಟ್ಟರಿನಲ್ಲಿ ವಿಷ್ಣುವರ್ಧನ್ ಅವರ ಜೊತೆಯಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ಸಾಹಸಸಿಂಹ ಡಾ. ವಿಷ್ಣುವರ್ಧನ್ ಜನ್ಮದಿನದ ಸವಿ ನೆನಪು, ದಾದಾ ನಿಮ್ಮ ನೆನಪು ಸದಾ ಹಸಿರು” ಎಂದು ಟ್ವೀಟ್ ಮಾಡಿದ್ದಾರೆ. ನಟ ರಮೇಶ್ ಅರವಿಂದ್ ಅವರು ಕೂಡ ಟ್ವಿಟ್ಟರಿನಲ್ಲಿ ವಿಷ್ಣುವರ್ಧನ್ ಅವರ ಜೊತೆಯಿರುವ ಫೋಟೋ ಹಾಕಿ ಅದಕ್ಕೆ, ನೂರೊಂದು ನೆನಪು ಎದೆಯಾಳದಿಂದ ಎಂದು ಬರೆದು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

    ಇಂದು ಅಭಿಮಾನಿಗಳ ಆರಾಧ್ಯ ದೈವ ಸಾಹಸಸಿಂಹ ವಿಷ್ಣುವರ್ಧನ್ ಅವರ 69ನೇ ಜಯಂತೋತ್ಸವ. ಹೀಗಾಗಿ ಅಭಿಮಾನಿಗಳು ವಿಷ್ಣುವರ್ಧನ್ ನಿವಾಸದಲ್ಲಿ ಮತ್ತು ಅಭಿಮಾನ್ ಸ್ಟುಡಿಯೋ 2 ಕಡೆ ಹುಟ್ಟುಹಬ್ಬವನ್ನ ಆಚರಿಸುತ್ತಿದ್ದಾರೆ.

  • ದಸರಾದ ಮೊದಲ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಚಾಲನೆ

    ದಸರಾದ ಮೊದಲ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಚಾಲನೆ

    ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಮೊದಲ ಕಾರ್ಯಕ್ರಮ ಯುವ ಸಂಭ್ರಮಕ್ಕೆ ಚಾಲನೆ ಸಿಕ್ಕಿದೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ದೀಪ ಬೆಳಗಿಸಿ, ನಗಾರಿ ಬಾರಿಸುವ ಮೂಲಕ ಯುವ ಸಂಭ್ರಮಕ್ಕೆ ಚಾಲನೆ ನೀಡಿದ್ದಾರೆ.

    ಯುವ ಸಂಭ್ರಮದ ಕಾರ್ಯಕ್ರಮದ ಮೂಲಕ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಶುರುವಾಗುತ್ತದೆ. ಈ ಮೊದಲ ಕಾರ್ಯಕ್ರಮಕ್ಕೆ ನಟ ಗೋಲ್ಡನ್ ಸ್ಟಾರ್ ಗಣೇಶ್ ದೀಪ ಬೆಳಗಿಸಿ, ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದ್ದಾರೆ.

    ನಟ ಗಣೇಶ್ ಅವರಿಗೆ ಸಚಿವ ವಿ.ಸೋಮಣ್ಣ, ಶಾಸಕ ನಾಗೇಂದ್ರ, ಸಂದೇಶ್ ನಾಗರಾಜ್ ಸೇರಿ ಹಲವು ಅಧಿಕಾರಿ ವರ್ಗ ಸಾಥ್ ನೀಡಿತು. ಇದಾದ ಬಳಿಕ ನಟ ಗಣೇಶ್ ಯುವ ಮನಸ್ಸುಗಳಿಗೆ ತಮ್ಮ ಚಿತ್ರದ ಡೈಲಾಗ್ ಹಾಗೂ ಹಾಡುಗಳನ್ನು ಹಾಡಿ ರಂಜಿಸಿದರು.

    ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಯುವ ಸಂಭ್ರಮದ ದರ್ಬಾರ್ ಶುರುವಾಗಿದೆ. ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡುವ ನೃತ್ಯ ರೂಪಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತ್ತು. ವಿಶೇಷ ಮಕ್ಕಳ ಪ್ರವಾಹದ ಥೀಮ್ ಹಾಗೂ ಜಾನಪದ ಸಾಹಿತ್ಯದ ಮಹದೇಶ್ವರ ಸ್ವಾಮಿಯ ಗೀತೆಯೊಂದಿಗಿನ ಕಂಸಾಳೆ ನೃತ್ಯ ಯುವಕ ಯುವತಿಯರು ಭಕ್ತಿಭಾವದಲ್ಲಿ ತೇಲುವಂತೆ ಮಾಡಿತು.

    ಮೊದಲ ದಿನದ ದಸರಾ ಯುವ ಸಂಭ್ರಮಕ್ಕೆ ಗೋಲ್ಡನ್ ಟಚ್ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಇಂದು ದಸರಾ ಯುವ ಸಂಭ್ರಮದ ವಿಶೇಷ ವಿಭಿನ್ನ ಕಾರ್ಯಕ್ರಮಗಳು ನಡೆಯಲಿದ್ದು, ಯುವಮನಸ್ಸುಗಳನ್ನ ಮತ್ತಷ್ಟು ರಂಜಿಸಲಿದೆ.

  • ಒಡೆಯನಾಗಿ ಬಂದು ಹಬ್ಬಕ್ಕೆ ಶುಭಕೋರಿದ ದಚ್ಚು

    ಒಡೆಯನಾಗಿ ಬಂದು ಹಬ್ಬಕ್ಕೆ ಶುಭಕೋರಿದ ದಚ್ಚು

    ಬೆಂಗಳೂರು: ದೇಶದ್ಯಾಂತ ಆಚರಿಸುವ ಗೌರಿ ಗಣೇಶ ಹಬ್ಬಕ್ಕೆ ಒಡೆಯ ಪೋಸ್ಟರ್ ಹಾಕುವ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಡಿನ ಸಮಸ್ತ ಜನತೆಗೆ ಶುಭಕೋರಿದ್ದಾರೆ.

    ಈ ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ದರ್ಶನ್ ಅವರು ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು, ನಿಮ್ಮ ಎಲ್ಲ ಕನಸುಗಳು ಈಡೇರಲಿ, ಆ ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್‍ನಲ್ಲಿ ಸಂದೇಶ್ ಪ್ರೊಡಕ್ಷನ್‍ನಲ್ಲಿ ಎಂ.ಡಿ ಶ್ರೀಧರ್ ಅವರು ನಿರ್ದೇಶನ ಮಾಡುತ್ತಿರುವ ಒಡೆಯ ಸಿನಿಮಾದ ಪೋಸ್ಟರ್ ಹಾಕಿದ್ದಾರೆ. ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನೀಡಿದ್ದಾರೆ.

    ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಹಬ್ಬಕ್ಕೆ ಶುಭಕೋರಿದ್ದು, ಅವರ ಅಭಿನಯದ ಗೀತಾ ಚಿತ್ರದ ಪೋಸ್ಟರ್ ಹಾಕಿ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

  • 39ನೇ ವಸಂತಕ್ಕೆ ಕಾಲಿಟ್ಟ ಗೋಲ್ಡನ್ ಸ್ಟಾರ್ – ಹುಟ್ಟುಹಬ್ಬಕ್ಕೆ ಗೀತಾ ಟೀಸರ್ ರಿಲೀಸ್

    39ನೇ ವಸಂತಕ್ಕೆ ಕಾಲಿಟ್ಟ ಗೋಲ್ಡನ್ ಸ್ಟಾರ್ – ಹುಟ್ಟುಹಬ್ಬಕ್ಕೆ ಗೀತಾ ಟೀಸರ್ ರಿಲೀಸ್

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬಕ್ಕೆ ‘ಗೀತಾ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ.

    ಗಣೇಶ್ ಅವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರಿನಲ್ಲಿ ಸ್ಪಷ್ಟನೆ ಕೂಡ ನೀಡಿದ್ದರು. ಇಂದು ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಅವರು ಅಭಿನಯದ ‘ಗೀತಾ’ ಚಿತ್ರದ ಟೀಸರ್ ರಿಲೀಸ್ ಆಗಿದೆ.

    ಗೀತಾ ಚಿತ್ರದ ಟೀಸರ್ ನಲ್ಲಿ ಗಣೇಶ್ ಕನ್ನಡ ಭಾಷೆಗಾಗಿ ಹೋರಾಟ ನಡೆಸಿದ್ದಾರೆ. ಅಲ್ಲದೆ ಗಣೇಶ್ ‘ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ’, ‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ’ ಎಂಬ ಪಂಚಿಂಗ್ ಡೈಲಾಗ್‍ನಲ್ಲಿ ಹೊಡೆದಿದ್ದಾರೆ. ಈ ಚಿತ್ರದ ಚಿತ್ರೀಕರಣವನ್ನು ಮನಾಲಿ, ಕೋಲ್ಕತ್ತಾ, ಮೈಸೂರು, ಹೈದರಾಬಾದ್, ಬೆಂಗಳೂರು ಮತ್ತು ಇನ್ನಿತರ ಸ್ಥಳಗಳಲ್ಲಿ ನಡೆಸಲಾಗಿದೆ. ಗಣೇಶ್ ಅವರೊಡನೆ ಸಾನ್ವಿ, ಪಾರ್ವತಿ, ಪ್ರಯಾಗ ಮಾರ್ಟಿನ್, ಸುಧಾರಾಣಿ, ದೇವರಾಜ್, ಅಚ್ಯುತ್, ರಂಗಾಯಣ ರಘು ಮತ್ತು ಇನ್ನಿತರರು ಅಭಿನಯಿಸಿದ್ದಾರೆ.

    ಹುಟ್ಟುಹಬ್ಬ ಏಕೆ ಆಚರಿಸುತ್ತಿಲ್ಲ:
    ಗಣೇಶ್ ತಮ್ಮ ಟ್ವಿಟ್ಟರಿನಲ್ಲಿ, ನನ್ನ ಅಚ್ಚು ಮೆಚ್ಚಿನ ಪ್ರೀತಿಯ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರಲ್ಲಿ ಒಂದು ಕಳಕಳಿಯ ವಿನಂತಿ. ಈ ಸಲ ನಾನು ಹುಟ್ಟುಹಬ್ಬ ಆಚರಿಸುತ್ತಿಲ್ಲ. ಕಾರಣ ಕೆಲವು ತಿಂಗಳ ಹಿಂದೆಯಷ್ಟೇ ನನ್ನ ತಂದೆಯವರನ್ನು ಅಗಲಿದ್ದೇನೆ ಅಲ್ಲದೇ ಈ ಸಂದರ್ಭದಲ್ಲಿ ಮನೆಯಲ್ಲಿ ನಾವ್ಯಾರೂ ಇರುವುದಿಲ್ಲ. ಆದ್ದರಿಂದ ದೂರದ ಊರುಗಳಿಂದ ಬಂದು ಕಾಯುವ ಪ್ರಯತ್ನ ಮಾಡಬೇಡಿ. ನನ್ನ ಹುಟ್ಟುಹಬ್ಬ ಆಚರಿಸಲು ದೂರದಿಂದ ಹಲವು ಸಿದ್ಧತೆಗಳೊಂದಿಗೆ ಬಂದು ಶುಭಕೋರಿ ಸಂಭ್ರಮಿಸುವ ನಿಮ್ಮ ಪ್ರೀತಿಗೆ ನಾನೆಂದೂ ಋಣಿ.

    ಆದ್ದರಿಂದ ಅಭಿಮಾನಿಗಳು ದಯವಿಟ್ಟು ಹಾರ, ಕೇಕ್, ಬ್ಯಾನರ್ ಗಳಿಗಾಗಿ ಹಣ ಖರ್ಚು ಮಾಡದೇ ಹತ್ತಿರದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯವಾಗುವಂತಹ ಕೆಲಸ ಮಾಡಿದರೆ ಅದೇ ನನಗೆ ನೀವು ಕೊಡುವ ಅತ್ಯುತ್ತಮ ಉಡುಗೊರೆ, ಇಷ್ಟು ಪ್ರೀತಿ, ಅಭಿಮಾನ ಹೊಂದಿರುವ ನೀವು ನನ್ನ ಕೋರಿಕೆಯನ್ನು ಅರ್ಥ ಮಾಡಿಕೊಂಡು, ಗಂಭೀರವಾಗಿ ಪರಿಗಣಿಸುವಿರಿ ಎಂಬ ಸಂಪೂರ್ಣ ವಿಶ್ವಾಸವಿದೆ. ದಯವಿಟ್ಟು ಸಹಕರಿಸಿ. ನಿಮ್ಮ ಪ್ರೀತಿ ಸದಾ ಇರಲಿ ಎಂದು ಗಣೇಶ್ ವಿನಂತಿಸಿಕೊಂಡಿದ್ದಾರೆ.

  • ಚುನಾವಣೆ ಬಳಿಕ ‘ಚೌಕಿದಾರ್’ ಆದ ಗೋಲ್ಡನ್ ಸ್ಟಾರ್ ಗಣೇಶ್

    ಚುನಾವಣೆ ಬಳಿಕ ‘ಚೌಕಿದಾರ್’ ಆದ ಗೋಲ್ಡನ್ ಸ್ಟಾರ್ ಗಣೇಶ್

    ಬೆಂಗಳೂರು: ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು, ಬೆಂಬಲಿಗರು ತಮ್ಮ ಟ್ವಿಟ್ಟರ್ ಖಾತೆಯ ಹೆಸರಿನ ಮುಂದೆ ‘ಚೌಕಿದಾರ್’ ಎಂದು ಬರೆದುಕೊಂಡಿದ್ದರು. ಫಲಿತಾಂಶದ ದಿನದಂದೇ ಪ್ರಧಾನಿಗಳ ನಿರ್ದೇಶನದಂತೆ ಎಲ್ಲರೂ ಚೌಕಿದಾರ್ ಹೆಸರನ್ನು ತೆಗೆದುಕೊಂಡಿದ್ದರು. ಇದೀಗ ಕನ್ನಡದ ಗೋಲ್ಡನ್ ಸ್ಟಾರ್ ಚೌಕಿದಾರ್ ಆಗಿ ಗಾಂಧಿ ನಗರದಲ್ಲಿ ಧೂಳೆಬ್ಬಿಸಲು ಸಜ್ಜಾಗುತ್ತಿದ್ದಾರೆ.

    ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್’ ಚಿತ್ರದಲ್ಲಿ ಗಣೇಶ್ ನಟಿಸುತ್ತಿದ್ದಾರೆ. ಫಿಲಂ ಚೇಂಬರ್ ನಿಂದ ಈಗಾಗಲೇ ಚಿತ್ರತಂಡ ‘ಚೌಕಿದಾರ್’ ಟೈಟಲ್ ಗೆ ಅನುಮತಿಯನ್ನು ಪಡೆದುಕೊಂಡಿದೆ.

    ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಗಳಲ್ಲಿ ಹೊಸ ಪ್ರಯೋಗಗಳಿಗೆ ಮುಂದಾಗಿದ್ದು, ಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಚೌಕಿದಾರ್ ಸಿನಿಮಾದಲ್ಲಿ 55 ವರ್ಷದ ವ್ಯಕ್ತಿಯ ಪಾತ್ರದಲ್ಲಿ ಗಣೇಶ್ ನಟಿಸುತ್ತಿದ್ದು, ರಾಜಕೀಯಕ್ಕೂ ಈ ಕಥೆಗೂ ಏನಾದರೂ ಸಂಬಂಧ ಇದೆಯಾ ಎಂಬ ಸಸ್ಪೆನ್ಸ್ ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

  • ನನ್ನ, ಆನಂದ್ ಸಿಂಗ್ ಗಲಾಟೆಯಿಂದ ಮೂರನೇಯವರಿಗೆ ಲಾಭ: ಕಂಪ್ಲಿ ಗಣೇಶ್

    ನನ್ನ, ಆನಂದ್ ಸಿಂಗ್ ಗಲಾಟೆಯಿಂದ ಮೂರನೇಯವರಿಗೆ ಲಾಭ: ಕಂಪ್ಲಿ ಗಣೇಶ್

    ಬಳ್ಳಾರಿ: ನನ್ನ ಅಮಾನತು ವಾಪಸ್ ಪಡೆಯೋದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟಿದ್ದು, ಒಂದು ವೇಳೆ ಅಮಾನತು ವಾಪಸ್ ಪಡೆಯದಿದ್ದರೆ ಕ್ಷೇತ್ರದ ಮುಖಂಡರ, ಕಾರ್ಯಕರ್ತರ ಮತ್ತು ಜನರ ನಿರ್ಧಾರಕ್ಕೆ ಬದ್ಧ ಎಂದು ಹೇಳುವ ಶಾಸಕ ಜೆ.ಎನ್.ಗಣೇಶ್ ಹೊಸಬಾಂಬ್ ಸಿಡಿಸಿದ್ದಾರೆ. ಅಲ್ಲದೇ ನನ್ನ ಹಾಗೂ ಆನಂದ್ ಸಿಂಗ್ ಗಲಾಟೆಯಿಂದ ಮೂರನೇಯವರಿಗೆ ಲಾಭ ಆಗಿದೆ ಎಂದು ಹೇಳಿದ್ದಾರೆ.

    ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ 4ನೇ ವಾರ್ಡಿನಲ್ಲಿಂದು ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಗಣೇಶ್, ಲೋಕಸಭಾ ಚುನಾವಣೆಯಲ್ಲಿ ದೂರ ಉಳಿದಿದ್ದಾಗ ಕಂಪ್ಲಿ ಕ್ಷೇತ್ರದಲ್ಲಿ ಮತದಾರರು ಕಾಂಗ್ರೆಸ್‍ಗೆ ಲೀಡ್ ಕೊಟ್ಟಿದ್ದಾರೆ. ನಮ್ಮ ಬಗ್ಗೆ ಏನೇ ಹೇಳಿದ್ದರೂ ಚುನಾವಣೆ ಸಂದರ್ಭದಲ್ಲಿ ಮತದಾರರು ನಮ್ಮ ಕೈಹಿಡಿದಿದ್ದಾರೆ. ಹೀಗಾಗಿ ಕಂಪ್ಲಿ ಕ್ಷೇತ್ರದ ಜನರ ಋಣ ತೀರಿಸಬೇಕಾಗಿದೆ ಎಂದರು. ಇದನ್ನೂ ಓದಿ: ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

    ನಾವು ಕ್ಷೇತ್ರದಲ್ಲಿ ಇಲ್ಲದೇ ಇದ್ದರೂ ಕಾಂಗ್ರೆಸ್‍ಗೆ ಲೀಡ್ ನೀಡುವ ಮೂಲಕ ಕಂಪ್ಲಿ ಕ್ಷೇತ್ರದಲ್ಲಿ ಮತದಾರರು ಶ್ರಮವಹಿಸಿದ್ದಾರೆ. ಶಾಸಕ ಆನಂದ್ ಸಿಂಗ್ ಹಾಗೂ ನಾನು 25 ವರ್ಷಗಳಿಂದ ಅಣ್ಣ ತಮ್ಮಂದಿರಂತೆ ಇದ್ದೇವೆ. ಆದರೆ ಯಾವುದೋ ಒಂದು ಕೆಟ್ಟ ಗಳಿಗೆಯಿಂದ ಗಲಾಟೆ ನಡೆದಿದೆ. ಈಗಲೂ ಆನಂದ್ ಸಿಂಗ್ ಅವರ ಜೊತೆ ಸಂಪರ್ಕದಲ್ಲಿದ್ದೇವೆ. ಈಗಲ್ ಟನ್ ರೆಸಾರ್ಟ್ ನಲ್ಲಿ ಮೂರನೇ ವ್ಯಕ್ತಿಯ ಲಾಭಕ್ಕಾಗಿ ಗಲಾಟೆ ನಡೆದಿದೆ ಎನ್ನುವುದು ನನ್ನ ಅನಿಸಿಕೆ ಎಂದು ಹೇಳಿದ್ದಾರೆ.

    ಅಮಾನತನ್ನು ವಾಪಸ್ ಪಡೆಯುವಂತೆ ನಾನು ಕೇಳುವುದಿಲ್ಲ. ಅಮಾನತು ವಾಪಸ್ ವಿಷಯ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟಿದ್ದು. ಇದೇ ಅಮಾನತು ಮುಂದುವರಿದರೆ, ಹಿರಿಯರ, ಕಾರ್ಯಕರ್ತರ ಹಾಗೂ ಕ್ಷೇತ್ರ ಜನರ ಮುಂದಿನ ನಿರ್ಧಾರಕ್ಕೆ ಬದ್ಧರಾಗಿರುವೆ. ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆಧ್ಯತೆ ನೀಡಲಾಗುವುದು ಎಂದು ಪರೋಕ್ಷವಾಗಿ ಕಾಂಗ್ರೆಸ್‍ಗೆ ಟಾಂಗ್ ನೀಡಿದರು.

  • ಆನಂದ್ ಸಿಂಗ್ ತಂದೆ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಕಂಪ್ಲಿ ಗಣೇಶ್

    ಆನಂದ್ ಸಿಂಗ್ ತಂದೆ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಕಂಪ್ಲಿ ಗಣೇಶ್

    ಬಳ್ಳಾರಿ: ಹೊಸಪೇಟೆಯ ಶಾಸಕ ಆನಂದ್ ಸಿಂಗ್ ತಂದೆ ಪೃಥ್ವಿರಾಜ್ ಸಿಂಗ್ ಅವರ ಕಾಲು ಮುಗಿದು ತಪ್ಪಾಯಿತು ಕ್ಷಮಿಸಿ ಎಂದು ಕಂಪ್ಲಿ ಶಾಸಕ ಗಣೇಶ ಕೇಳಿಕೊಂಡಿದ್ದಾರೆ.

    ಹೊಸಪೇಟೆಯ ವೇಣುಗೋಪಾಲ ದೇವಸ್ಥಾನಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಶಾಸಕರು, ಪೃಥ್ವಿರಾಜ್ ಸಿಂಗ್ ಅವರ ಕಾಲು ಮುಗಿದು ತಪ್ಪು ನಡೆದು ಹೋಗಿದೆ. ದಯವಿಟ್ಟು ಕ್ಷಮಿಸಿ ಎಂದು ಅಂಗಲಾಚಿದ್ದಾರೆ. ಇದೇ ವೇಳೆ ಆನಂದ್ ಸಿಂಗ್ ಅವರ ಕೈಹಿಡಿದು ತಪ್ಪಾಯ್ತು ಅಣ್ಣಾ, ಕ್ಷಮಿಸು ಎಂದು ಕೇಳಿಕೊಂಡಿದ್ದಾರೆ.

    ರಾಮನಗರ ರೆಸಾರ್ಟ್ ನಲ್ಲಿ ಆನಂದ್ ಸಿಂಗ್ ಅವರ ಮೇಲೆ ಮಾರಣಂತಿಕ ಹಲ್ಲೆ ಮಾಡಿದ್ದ ಕಂಪ್ಲಿ ಶಾಸಕ ಗಣೇಶ್ ಜೈಲು ಸೇರಿದ್ದರು. ಜಾಮೀನು ಪಡೆದ ಶಾಸಕರು ಹೊರ ಬಂದಿದ್ದಾರೆ. ಹೊಸಪೇಟೆಯಲ್ಲಿ ಶುಕ್ರವಾರ ಕಾರ್ಯಕರ್ತರ ಸಭೆ ನಡೆಸಿದ್ದ ಗಣೇಶ್ ಅವರು, ನಾನು ಆನಂದ್ ಸಿಂಗ್ ಅಣ್ಣ ತಮ್ಮಂದಿರು ಎಂದಿದ್ದರು. ಅಷ್ಟೇ ಅಲ್ಲದೆ ತಮ್ಮ ಗೆಲುವಿಗೆ ಕಾರಣರಾದ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರನ್ನು ಭೇಟಿ ಮಾಡಿದರು.