Tag: ಗಣಿ

  • Prathima Murder Case – ಮನೆಯ ಬಾಗಿಲು ತೆರೆಯುತ್ತಿದ್ದಂತೆ ಹಿಂದಿನಿಂದ ದಾಳಿ

    Prathima Murder Case – ಮನೆಯ ಬಾಗಿಲು ತೆರೆಯುತ್ತಿದ್ದಂತೆ ಹಿಂದಿನಿಂದ ದಾಳಿ

    ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಕಚೇರಿಯಿಂದ ಮನೆಗೆ ಆಗಮಿಸಿದ ಪ್ರತಿಮಾ (Prathima) ಅವರು ಬಾಗಿಲು ತೆರೆಯುತ್ತಿದ್ದಂತೆ ಹತ್ಯೆ (Murder) ಮಾಡಲಾಗಿದೆ.

    ಹೌದು. ಶನಿವಾರ ರಾತ್ರಿ 7:45 ಕ್ಕೆ ಪ್ರತಿಮಾ ಆಫೀಸ್ ಬಿಟ್ಟಿದ್ದು ಮನೆ ಬಳಿ ಬಂದಾಗ 8:30 ಆಗಿತ್ತು. ಮಳೆ ಬರುತ್ತಿದ್ದ ಕಾರಣ ಡ್ರೈವರ್ ಬಳಿ ಹೇಗೆ ಹೋಗ್ತೀಯ ಎಂದು ಕೇಳಿದ್ದರು. ಡ್ರೈವರ್‌ ಪ್ರತಿಮಾರನ್ನು ಇಳಿಸಿ ಕಾರು ಪಾರ್ಕ್ ಮಾಡಿ ಬೈಕಿನಲ್ಲಿ ತೆರಳಿದ್ದರು. ಇದನ್ನೂ ಓದಿ: ಉಪನಿರ್ದೇಶಕಿ ಹತ್ಯೆ ಪ್ರಕರಣ- ವಿಚ್ಛೇದನ ಪಡೆದಿದ್ರಿಂದ ಬೆಂಗಳೂರಲ್ಲಿ ಒಂಟಿಯಾಗಿದ್ದರು ಪ್ರತಿಮಾ

    ಕಾರಿನಿಂದ ಇಳಿದು ಪ್ರತಿಮಾ ಮೊದಲ ಮಹಡಿಯಲ್ಲಿರುವ ಮನೆಗೆ ಬಂದಿದ್ದರು. ಮನೆಯ ಡೋರ್ ತೆಗೆಯುತ್ತಿದ್ದಂತೆ ಹಿಂದಿನಿಂದ ದಾಳಿ ಮಾಡಲಾಗಿದೆ. ಈ ವೇಳೆ ಪ್ರತಿಮಾರ ಬಾಯಿಯನ್ನು ಮುಚ್ಚಿ ಒಳಗೆ ಎಳೆದುಕೊಂಡು ಹೋಗಲಾಗಿದೆ. ದಾಳಿಯಿಂದಾಗಿ ಪ್ರತಿಮಾ ಧರಿಸುತ್ತಿದ್ದ ಕನ್ನಡಕ ಬಾಗಿಲ ಬಳಿಯೇ ಬಿದ್ದಿದೆ. ಪ್ರತಿಮಾ ಆಫೀಸ್‌ಗೆ ಕೊಂಡೊಯ್ದಿದ್ದ ಲಂಚ್ ಬಾಕ್ಸ್ ಕೂಡ ಬಾಗಿಲಿನಲ್ಲೇ ಸಿಕ್ಕಿದೆ.

    ಪ್ರತಿಮಾ ಕಿರುಚಾಡುವುದು ಯಾರಿಗೂ ತಿಳಿಯಬಾರದು ಎಂದು ಬಾಯಿ ಮುಚ್ಚಿ ಕುತ್ತಿಗೆಗೆ ಹಗ್ಗ ಕಟ್ಟಲಾಗಿದೆ. ನಂತರ ಉಸಿರುಗಟ್ಟಿಸಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.  ಬಹಳ ಪೂರ್ವನಿಯೋಜಿತ ಪ್ಲ್ಯಾನ್‌ ಮಾಡಿಕೊಂಡು ಈ ಕೃತ್ಯವನ್ನು ಎಸಗಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ತಡೆದಿದ್ದೇ ಪ್ರತಿಮಾ ಕೊಲೆಗೆ ಕಾರಣವಾಯ್ತಾ? – ಹಲವು ಆಯಾಮಗಳಲ್ಲಿ ಪೊಲೀಸ್‌ ತನಿಖೆ

    ರಾತ್ರಿ 8:30ಕ್ಕೆ ಸಹೋದರ ಪ್ರತಿಮಾಗೆ ಕರೆ ಮಾಡಿದ್ದಾರೆ. ಕಾಲ್‌ ತೆಗೆಯದ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆಗೆ ಕರೆ ಮಾಡಿ ಮಾಡಿದ್ದಾರೆ. ಈಗಲೂ ಕರೆ ಸ್ವೀಕರಿಸದ ಕಾರಣ 9:30ಕ್ಕೆ ಮತ್ತು 10 ಗಂಟೆಗೆ ಕರೆ ಮಾಡಿದ್ದರು. 4 ಬಾರಿಯೂ ಕರೆ ಸ್ವೀಕರಿಸದ ಕಾರಣ ಎಲ್ಲೋ ರೇಡ್‌ಗೆ ಹೋಗಿರಬಹುದು ಎಂದು ಸಹೋದರ ಸುಮ್ಮನಾಗಿದ್ದರು.

    ಬೆಳಗ್ಗೆ 8 ಗಂಟೆಗೆ ಪ್ರತಿಮಾ ಮನೆ ಬಳಿ ಸಹೋದರ ಬಂದಿದ್ದರು. ಈ ವೇಳೆ ಕಬ್ಬಿಣದ ಡೋರ್ ಒಳಗಿನಿಂದ ಲಾಕ್ ಆಗಿತ್ತು. ಲಾಕ್ ತೆಗೆದು ಒಳಹೋದಾಗ ತಂಗಿಯ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

    ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ (Department of Mines and Geology) ಉಪನಿರ್ದೇಶಕಿಯಾಗಿದ್ದ ಪ್ರತಿಮಾ ಅವರನ್ನು ಶನಿವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

     

  • ಜಮ್ಮು ಕಾಶ್ಮೀರದಲ್ಲಿ ಗ್ರೆನೇಡ್‌ ಸ್ಫೋಟ- ಇಬ್ಬರು ಯೋಧರು ಹುತಾತ್ಮ

    ಜಮ್ಮು ಕಾಶ್ಮೀರದಲ್ಲಿ ಗ್ರೆನೇಡ್‌ ಸ್ಫೋಟ- ಇಬ್ಬರು ಯೋಧರು ಹುತಾತ್ಮ

    ಶ್ರೀನಗರ: ಆಕಸ್ಮಿಕವಾಗಿ ನಡೆದ ಗ್ರೆನೇಡ್‌  ಸ್ಫೋಟದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಯೋಧರು ಹುತಾತ್ಮರಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್‍ನ ಎಲ್‍ಒಸಿ ಬಳಿ ನಡೆದಿದೆ.

    ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಸೈನಿಕರು ಎಲ್‍ಒಸಿ ಗಡಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಕಸ್ಮಿಕವಾಗಿ ಗ್ರೆನೇಡ್‌ ಸ್ಫೋಟ ಸಂಭವಿಸಿದೆ.

    ಗಾಯಗೊಂಡ ಸೈನಿಕರನ್ನು ತಕ್ಷಣವೇ ಹೆಲಿಕಾಪ್ಟರ್ ಮೂಲಕ ಉಧಂಪುರ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಸಂದರ್ಭದಲ್ಲಿ ಸೇನಾ ಕ್ಯಾಪ್ಟನ್ ಮತ್ತು ನೈಬ್ ಸುಬೇದಾರ್(ಜೆಸಿಒ) ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕರ ಗುಂಡಿಗೆ CRPF ಯೋಧ ಹುತಾತ್ಮ

    ಭಾನುವಾರ ನಡೆದ ಭಯೋತ್ಪಾದಕರ ಗುಂಡಿನ ದಾಳಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗೊಂಗೂ ಕ್ರಾಸಿಂಗ್ ಬಳಿ ನಡೆದಿತ್ತು. ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಸಿಆರ್‌ಪಿಎಫ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಡಿಕೆಶಿ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ

    Live Tv
    [brid partner=56869869 player=32851 video=960834 autoplay=true]

  • ಬಳ್ಳಾರಿಯಲ್ಲಿ ತಲೆ ಎತ್ತಲಿದೆ ಸ್ಕೂಲ್ ಆಫ್ ಮೈನಿಂಗ್

    ಬಳ್ಳಾರಿಯಲ್ಲಿ ತಲೆ ಎತ್ತಲಿದೆ ಸ್ಕೂಲ್ ಆಫ್ ಮೈನಿಂಗ್

    – ಮುರುಗೇಶ್ ನಿರಾಣಿ ಅಧಿಕೃತ ಘೋಷಣೆ
    – 50 ಎಕರೆಯಲ್ಲಿ ಆರಂಭವಾಗಲಿರುವ ತರಬೇತಿ ಸಂಸ್ಥೆ

    ತುಮಕೂರು: ಗಣಿಗಾರಿಕೆ ನಿರ್ವಾಹಣೆ, ಮಾಲೀಕರು ಮತ್ತು ಕಾರ್ಮಿಕರಿಗೆ ತರಬೇತಿ, ಹಾಗೂ ಭವಿಷ್ಯದಲ್ಲಿ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸಲು ಬಳ್ಳಾರಿಯಲ್ಲಿ ‘ಸ್ಕೂಲ್ ಆಫ್ ಮೈನಿಂಗ್’ ಪ್ರಾರಂಭಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಇಂದಿಲ್ಲಿ ಘೋಷಿಸಿದರು.

    ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ದೇಶದಲ್ಲೇ ಎರಡನೇ ಸ್ಕೂಲ್ ಆಫ್ ಮೈನಿಂಗ್ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಸುಮಾರು 50 ಎಕರೆ ಜಮೀನಿನಲ್ಲಿ ತೆರೆಯಲು ತೀರ್ಮಾನಿಸಲಾಗಿದೆ. ಈಗಾಗಲೇ ವಿಸ್ತೃತ  ಯೋಜನಾ ವರದಿ (ಡಿಪಿಆರ್) ಸಿದ್ದವಾಗಿದೆ ಎಂದರು.

     

    ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು. ಇಲಾಖೆಯ ಸಿಬ್ಬಂದಿ, ಗಣಿ ಮಾಲೀಕರು, ಹಾಗೂ ಸಿಬ್ಬಂದಿಗಳಿಗೆ ಅಂತರಾಷ್ಟ್ರೀಯ ಮಟ್ಟದ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.

    ಅವೈಜ್ಞಾನಿಕ ಗಣಿಗಾರಿಕೆ ತಡೆಯುವುದು, ಜೊತೆಗೆ ಎಲ್ಲಾ ರೀತಿಯ ಗಣಿಗಾರಿಕೆ ತರಬೇತಿ ಪ್ರಾರಂಭಿಸಲಾಗುವುದು. ಮೈನಿಂಗ್ ಆಪರೇಟಿಂಗ್ ಮತ್ತು ಉದ್ದಿಮೆದಾರರಿಗೆ ವೈಜ್ಞಾನಿಕವಾಗಿ ಗಣಿಗಾರಿಕೆಯನ್ನು ಹೇಗೆ ನಿರ್ವಹಿಬೇಕೆಂದು ತರಬೇತಿ ನೀಡುವುದೇ ಎಂಬು ಇದರ ಮುಖ್ಯ ಉದ್ದೇಶ ಎಂದು ವಿವರಿಸಿದರು.

    ಪ್ರತಿಯೊಂದು ಜಿಲ್ಲೆಯಲ್ಲಿ ಇಲಾಖೆ ವತಿಯಿಂದ ಹೊಸ ಹೊಸ ಯೋಜನೆಗಳನ್ನು ರೂಪಿಸಲಾಗುತ್ತದೆ. ನಾಲ್ಕು ಕಂದಾಯ ವಿಭಾಗ ಸೇರಿದಂತೆ ಐದು ಕಡೆ ಗಣಿ ಅದಾಲತ್ ಪ್ರಾರಂಭಿಸಲಿದ್ದೇವೆ. ಇದರಿಂದ ಉದ್ದಿಮೆದಾರರು ಇಲಾಖೆ ಇಲಾಖೆಗೆ ಅರ್ಜಿಗಳನ್ನು ಹಿಡಿದುಕೊಂಡು ಅಲೆಯುವುದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬೇರೆ ಬೇರೆಯವರ ಜೊತೆ ಮದ್ವೆಗೆ ಸಿದ್ಧತೆ – ಅವಳಿ ಸಹೋದರಿಯರು ಆತ್ಮಹತ್ಯೆ

    ಏಕಗವಾಕ್ಷಿ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನ ಮಾಡಲಾಗುವುದು. ಸಣ್ಣ ಸಣ್ಣ ಉದ್ದಿಮೆದಾರರು ಇಲಾಖೆಯಿಂದ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ಇದು ಬಹಳಷ್ಟು ಅನುಕೂಲಕರವಾಗಿದೆ. ಏಕಗವಾಕ್ಷಿ ಯೋಜನೆಯಡಿ ಇಲಾಖೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಿಕೊಳ್ಳಲಾಗುವುದು ಎಂದು ಸಲಹೆ ಮಾಡಿದರು.

    ಗಣಿಗಾರಿಕೆಯಲ್ಲಿ ಸರಳೀಕರಣ ಮಾಡುವ ಸುದ್ದುದೇಶ ನಮ್ಮ ಮುಂದಿದೆ. ಇಲಾಖೆಯಲ್ಲಿ ಸುಮಾರು 6 ಸಾವಿರ ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. 2016ಕ್ಕಿಂತ ಮುಂಚೆ ಅರ್ಜಿ ಸಲ್ಲಿಸಿ ಎಒಸಿ ಪಡೆದವರಿಗೆ ಗಣಿಗಾರಿಕೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

    ಉಳಿದಿರುವ ಅರ್ಜಿಗಳನ್ನು ಮುಂದಿನ ಮೂರು ತಿಂಗಳೊಳಗೆ ವಿಲೇವಾರಿ ಮಾಡಲಾಗುವುದು. ರಾಜ್ಯದಲ್ಲಿ ಉದ್ದಿಮೆದಾರ ಸ್ನೇಹಿ ರಾಜ್ಯವನ್ನಾಗಿ ಮಾಡಲು ನಾವು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

    ರಾಜ್ಯದಲ್ಲಿ ರಫ್ತು ನಿಷೇಧದಿಂದ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟವಾಗುತ್ತಿದೆ. ಹೀಗಾಗಿ ವಿದೇಶಕ್ಕೆ ಅದಿರನ್ನು ರಪ್ತು ಮಾಡಲು ವಿಧಿಸಲಾಗಿರುವ ನಿಬರ್ಂಧ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದರು.

    ರಪ್ತು ನಿಷೇಧದಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುವುದರ ಜೊತೆಗೆ ಕಡಿಮೆ ದರದಲ್ಲಿ ಸರಕು ಖರೀದಿಸಿ ಹೆಚ್ಚಿನ ದರದಲ್ಲಿ ಸ್ಟೀಲ್ ಮಾರಾಟ ಮಾಡಲಾಗುತ್ತದೆ. ಸರಕು ಖರೀದಿಸುವ ರಾಜ್ಯಗಳಲ್ಲಿ ಕಡಿಮೆ ದರದಲ್ಲಿ ಸ್ಟೀಲ್ ಮಾರಾಟ ಮಾಡುತ್ತವೆ. ನಮಗೆ ವಿದೇಶಕ್ಕೆ ಅದಿರನ್ನು ರಫ್ತು ಮಾಡಲು ಅವಕಾಶ ಕೊಟ್ಟರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

    ಗಣಿ ಅಭಿವೃದ್ದಿ ನಿಧಿಯಿಂದ ಮೂರು ವರ್ಷಗಳಲ್ಲಿ ಕೈಗೊಳ್ಳಬಹುದಾದ ಕಾರ್ಯ ಯೋಜನೆಗಳ ಕುರಿತಾಗಿ ನೀಲನಕ್ಷೆಯನ್ನು ರೂಪಿಸಲಾಗಿದೆ. ಸದ್ಯ 32 ಕೋಟಿ ಹಣ ಉಳಿದಿದೆ. ಇದರಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಿದೆ. ಕುಡಿಯುವ ನೀರು ಸರ್ಕಾರಿ ಶಾಲೆಗಳ ದತ್ತು ಪಡೆಯುವುದು, ಸಮುದಾಯ ಭವನ ನಿರ್ಮಾಣ, ಮೂಲಭೂತ ಸೌಕರ್ಯಗಳ ಅಭಿವೃದ್ದಿ ಸೇರಿದಂತೆ ಹಲವು ರೀತಿ ಯೋಜನೆಗಳನ್ನು ರೂಪಿಸಬಹುದು. ಈ ಬಗ್ಗೆ ಸಭೆ ಕರೆದು ಜನಪ್ರತಿನಿಧಿಗಳಿಗೆ ಹಂಚಿಕೆ ಮಾಡುವುದಾಗಿ ತಿಳಿಸಿದರು.

    ದೇಶಕ್ಕೆ ಮಾದರಿಯಾಗುವಂತಹ ಮರಳು ನೀತಿಯನ್ನು ಇಲಾಖೆ ಸಿದ್ದಪಡಿಸಿದೆ. ಬೇರೆ ರಾಜ್ಯದವರು ಕರ್ನಾಟಕವನ್ನು ಮಾದರಿಯಾಗಿಟ್ಟುಕೊಂಡು ಅನುಷ್ಠಾನ ಮಾಡುವಂತಹ ನೀತಿ ಇದಾಗಿದೆ. ಸದ್ಯದಲ್ಲೇ ಮುಖ್ಯಮಂತ್ರಿಯವರೊಂದದಿಗೆ ಚರ್ಚಿಸಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದರು.

    ರಾಜ್ಯದಲ್ಲಿ ಒಟ್ಟು 350 ಮರಳು ಬ್ಲಾಕ್ ಗಳನ್ನು ಗುರುತಿಸಲಾಗಿದೆ. ಈಗಿರುವ ಮರಳು ನೀತಿಗೆ ತಿದ್ದುಪಡಿ ಮಾಡಿ ನದಿ ಮರಳನ್ನು ಸಂಸ್ಕರಿಸಿ ಗ್ರೇಡ್ ಆಧಾರದಲ್ಲಿ ಮಾರಾಟ ಮಾಡಲು ಯೋಜಿಸಲಾಗಿದೆ ಎಂದರು.

    ಕೆಲವು ಕಡೆ ಡಿಜಿಎಂಎಸ್ ಲೈಸೆನ್ಸ್ ಪಡೆಯದೇ ಕಾರ್ಯನಿರ್ವಹಣೆ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ 90 ದಿನಗಳೊಗೆ ಅರ್ಜಿ ಸಲ್ಲಿಸಿ ಗಣಿಗಾರಿಕೆ ನಡೆಸಲು ಅವಕಾಶ ಕೊಡಲಾಗುವುದು. ಅವೈಜ್ಞಾನಿಕ ಪೆನಾಲ್ಟಿ ನಿಗದಿಪಡಿಸಲಾಗಿದೆ. ದಂಡ ನಿಗದಿಪಡಿಸುವ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

    ಪ್ರತಿಯೊಂದು ಜಿಲ್ಲೆಯಲ್ಲಿ ಉದ್ಯಮದಾರರ ಸಮಸ್ಯೆಗಳಿಗೆ ಸ್ಪಂದಿಸಲು ಹೊಸ ಯೋಜನೆ ರೂಪಿಸಲಾಗುತ್ತಿದೆ. 10 ಕಿಲೋ ಸುತ್ತಮುತ್ತಲಿನಲ್ಲಿರುವ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ, 154 ಗಣಿಗಾರಿಕೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

  • ಅಕ್ರಮ ಸ್ಫೋಟಕ ಸಾಗಾಟ – ನಾಲ್ವರ ಬಂಧನ

    ಅಕ್ರಮ ಸ್ಫೋಟಕ ಸಾಗಾಟ – ನಾಲ್ವರ ಬಂಧನ

    ಚಿಕ್ಕಬಳ್ಳಾಪುರ: ಕಾನೂನು ಬಾಹಿರವಾಗಿ ಸ್ಫೋಟಕಗಳನ್ನು ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ರಮೇಶ್, ವೆಂಕಟೇಶ್, ವೇಣು ಹಾಗೂ ಯಾದಗಿರಿ ಎಂದು ಗುರುತಿಸಲಾಗಿದೆ. ಚಿಂತಾಮಣಿ ತಾಲೂಕು ಸೋಮಾಕಲಹಳ್ಳಿ ಬಳಿ ಬೈಕ್‍ನಲ್ಲಿ ಮೂಟೆಗಳನ್ನು ಇಟ್ಟುಕೊಂಡು ಅನುಮಾನಸ್ಪದವಾಗಿ ಹೋಗುತ್ತಿದ್ದವರನ್ನು ತಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಂಗಾರದ ಮೋಹದ ರಾಣಿಯ ಮಹಾವಂಚನೆಯ ಕಥೆ – RBI ಹೆಸರಿನಲ್ಲಿ ನಕಲಿ ದಾಖಲೆ

    ಬಂಧಿತರು ಮೂಲತಃ ತೆಲಂಗಾಣ ರಾಜ್ಯದವರಾಗಿದ್ದು ಸದ್ಯ ದಿಬ್ಬೂರಹಳ್ಳಿಯಲ್ಲಿ ವಾಸವಾಗಿದ್ದಾರೆ. ಮದನಪಲ್ಲಿಯ ನೂರ್ ಎಂಬಾತನಿಂದ ಈ ಸ್ಫೋಟಕಗಳನ್ನು ತೆಗೆದುಕೊಂಡು ಬರುತ್ತಿದ್ದರು ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಬಂಧಿತರ ಬಳಿ 600 ಜಿಲೆಟಿನ್ ಕಡ್ಡಿಗಳು, 1000 ಐಡೆಲ್ ಬ್ಲಾಸ್ಟಿಂಗ್ ಗಳು ಪತ್ತೆಯಾಗಿದ್ದು, ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಹಿಂದೆ ನಡೆದ ಗಣಿ ಬ್ಲಾಸ್ಟಿಂಗ್ ದುರಂತದಿಂದ ಆರು ಮಂದಿ ಸಾವನ್ನಪ್ಪಿದ್ದರು. ಈ ಘಟನೆ ನಂತರವೂ ಗಣಿ ಮಾಲೀಕರು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಮತ್ತೆ ಅದೇ ಹಳೆಯ ರೀತಿ ನಿಯಮ ಬಾಹಿರವಾಗಿ ಸ್ಫೋಟಕಗಳ ಖರೀದಿ, ಸಾಗಾಟ ಮುಂದುವರಿಯುತ್ತಿದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

  • ಸ್ಫೋಟಕ್ಕೆ ಸಂಚು ರೂಪಿಸಿದ್ದ ಕ್ರಷರ್‌ಗೆ ಜಿಲ್ಲಾಡಳಿತ ದಾಳಿ – ನಾಲ್ವರ ಬಂಧನ

    ಸ್ಫೋಟಕ್ಕೆ ಸಂಚು ರೂಪಿಸಿದ್ದ ಕ್ರಷರ್‌ಗೆ ಜಿಲ್ಲಾಡಳಿತ ದಾಳಿ – ನಾಲ್ವರ ಬಂಧನ

    ಕೋಲಾರ: ರಾಜ್ಯದಲ್ಲಿ ನಡೆದ ಅಕ್ರಮ ಜಿಲೆಟಿನ್ ಸ್ಫೋಟ ಪ್ರಕರಣಗಳ ನಂತರ ಎಚ್ಚೆತ್ತಿರುವ ಗಣಿ ಇಲಾಖೆ ರಾಜ್ಯದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ಹದ್ದಿನ ಕಣ್ಣಿಟ್ಟಿದೆ. ಪರಿಣಾಮ ಇಂದು ಜಿಲ್ಲೆಯಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡಲು ಮುಂದಾಗಿದ್ದವರ ಮೇಲೆ ಜಿಲ್ಲಾಡಳಿತ ದಾಳಿ ಮಾಡಿ ನಾಲ್ವರನ್ನು ಬಂಧಿಸಿದೆ.

    ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಆನಿಮಿಟ್ಟನಹಳ್ಳಿ ಗ್ರಾಮದ ಬಳಿ. ಜಿಲ್ಲಾಪಂಚಾಯತ್ ಸದಸ್ಯೆ ಗೀತಾ ಅವರ ಪತಿ ವೆಂಕಟೇಶ್ ಗೌಡ ಎಂಬವರ ಒಡೆತನದ ವೆಂಕಟೇಶ್ವರ ಸ್ಟೋನ್ ಕ್ರಷರ್ ನಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿಗಳ ತಂಡ ದಾಳಿ ಮಾಡಿದಾಗ ಬ್ಲಾಸ್ಟಿಂಗ್ ಮಾಡಲು ಬಂಡೆಗಳಲ್ಲಿ ಸುಮಾರು 70 ಹೋಲ್‍ಗಳನ್ನು ಮಾಡಿ ಅದರಲ್ಲಿ ಜಿಲೆಟಿನ್ ಹಾಗೂ ಮೋನಿಯನ್ ತುಂಬಿರುವುದು ಕಂಡುಬಂದಿದೆ. ದಾಳಿ ವೇಳೆ ಜಿಲ್ಲಾಧಿಕಾರಿಗಳ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಕ್ರಷರ್ ಮಾಲೀಕ ವೆಂಕಟೇಶ್ ಗೌಡ ತಲೆಮರೆಸಿಕೊಂಡಿದ್ದಾರೆ.

    ರಾಜ್ಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣದ ನಂತರ ಕಲ್ಲುಗಣಿಗಾರಿಕೆ ಸ್ಫೋಟಕ್ಕೂ ಮೊದಲು ಡೈರೆಕ್ಟರ್ ಜನರಲ್ ಮತ್ತು ಮೈನ್ಸ್ ಸೇಪ್ಟಿ ಇಲಾಖೆಯಿಂದ ಅನುಮತಿ ಪಡೆಯಬೇಕು, ಬ್ಲಾಸ್ಟಿಂಗ್ ಮಾಡುವ ಮೊದಲು ಅಗತ್ಯ ತಾಂತ್ರಿಕ ಸಿಬ್ಬಂದಿ ನೇಮಕ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಹಾಗಾಗಿ ಅನುಮತಿ ಪಡೆಯುವವರೆಗೂ ಜಿಲ್ಲೆಯಲ್ಲಿ ಬ್ಲಾಸ್ಟಿಂಗ್ ಮಾಡದಂತೆ ಜಿಲ್ಲಾಡಳಿತ ಜಿಲ್ಲೆಯ ಎಲ್ಲಾ ಗಣಿಮಾಲೀಕರಿಗೂ ನೋಟೀಸ್ ನೀಡಿತ್ತು.

    ಆದರೆ ಜಿಲ್ಲೆಯ ಆನಿಮಿಟ್ಟನಹಳ್ಳಿ ವೆಂಕಟೇಶ್ವರ ಸ್ಟೋನ್ ಕ್ರಷರ್‌ ನಲ್ಲಿ ಈ ನಿಯಮವನ್ನು ಗಾಳಿಗೆ ತೂರಿ ಬ್ಲಾಸ್ಟಿಂಗ್ ಮಾಡಲು ಮುಂದಾಗಿತ್ತು. ಈ ವೇಳೆ ದಾಳಿ ಮಾಡಿದ ಜಿಲ್ಲಾಧಿಕಾರಿ ಸೆಲ್ವಮಣಿ ಹಾಗೂ ಎಸ್ಪಿ ಕಾರ್ತಿಕ್ ರೆಡ್ಡಿ ಮತ್ತು ತಂಡ ನಾಲ್ವರನ್ನು ಬಂಧಿಸಿ ಅಕ್ರಮ ಸ್ಫೋಟಕ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.

  • ಗಣಿಗಾರಿಕೆ ಲೈಸೆನ್ಸ್ ನೀಡಲು ಆಫ್‍ಲೈನ್-ಆನ್‍ಲೈನ್ ವ್ಯವಸ್ಥೆ ಜಾರಿ: ಮುರುಗೇಶ್ ನಿರಾಣಿ

    ಗಣಿಗಾರಿಕೆ ಲೈಸೆನ್ಸ್ ನೀಡಲು ಆಫ್‍ಲೈನ್-ಆನ್‍ಲೈನ್ ವ್ಯವಸ್ಥೆ ಜಾರಿ: ಮುರುಗೇಶ್ ನಿರಾಣಿ

    -30 ದಿನದಲ್ಲಿ ನೂತನ ನಿಯಮ ಜಾರಿ
    -ಸ್ಥಳೀಯವಾಗಿಯೇ ಅದಿರು ಬಳಸಲು ಚಿಂತನೆ
    -ಅಧಿಕಾರಿಗಳಿಗೆ ಅನಾಹುತ ತಡೆಗಟ್ಟಲು ತರಬೇತಿ

    ಧಾರವಾಡ: ಗಣಿಗಾರಿಕೆ ನಡೆಸುವ ಉದ್ಯಮಿಗಳಿಗೆ ಶೀಘ್ರದಲ್ಲಿ ಲೈಸೆನ್ಸ್(ಪರಾವನಗಿ) ನೀಡಲು ಅನುಕೂಲವಾಗುವಂತೆ ಆನ್‍ಲೈನ್ ಮತ್ತು ಆಫ್‍ಲೈನ್ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರಾಣಿ, ಆಫ್‍ಲೈನ್, ಆನ್‍ಲೈನ್ ಜಾರಿ ಮಾಡಿದರೆ 30 ದಿನದಲ್ಲಿ ಗಣಿಗಾರಿಕೆ ಲೈಸೆನ್ಸ್ ಪಡೆಯಬಹುದು, 30 ದಿನದೊಳಗೆ ಈ ಎರಡೂ ವ್ಯವಸ್ಥೆಯನ್ನು ಇಲಾಖೆ ಜಾರಿಗೆ ತರಲಿದೆ. ಈಗಾಗಲೇ ಕರಡು ನೀತಿ ಸಿದ್ಧವಾಗಿದ್ದು, ಗಣಿಗಾರಿಕೆ ಅನುಮತಿ ಪಡೆಯುವವರೆಗೆ ತೊಂದರೆಯಾಗದಂತೆ ಸರಳೀಕರಣ ಮಾಡುವುದು ಇದರ ಮುಖ್ಯ ಉದ್ದೇಶ ಎಂದು ಹೇಳಿದರು.

    ಅದಿರನ್ನು ಹೊರಗಿನಿಂದ ಆಮದು ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಇಲ್ಲಿನ ಅದಿರನ್ನು ಬಳಕೆ ಮಾಡಲು ಚಿಂತನೆ ನಡೆಸಲಾಗಿದ್ದು, ಈಗಾಗಲೇ ಜಿಂದಾಲ್, ಬಲ್ಡೋಟಾ, ಕಿರ್ಲೋಸ್ಕರ್ ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳ ಜೊತೆ ಸಭೆ ನಡೆಸಲಾಗಿದೆ. ಹೊರಗಡೆಯಿಂದ ಅದಿರು ಆಮದು ಮಾಡಿಕೊಂಡರೆ ಉಂಟಾಗಬಹುದಾದ ಆರ್ಥಿಕ ಹೊರೆಯನ್ನು ತಗ್ಗಿಸಬಹುದಾಗಿದೆ ಎಂದು ಮಾಹಿತಿ ಹಂಚಿಕೊಂಡರು.

    ಈಗಾಗಲೇ ಅದಿರಿನ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಲಾಗಿದೆ. ಅವರು ಕೂಡ ಸ್ಥಳೀಯ ಸಂಪನ್ಮೂಲವನ್ನು ಬಳಸಿಕೊಳ್ಳಲು ಸೂಚನೆ ಕೊಟ್ಟಿದ್ದಾರೆ. ಸದ್ಯದಲ್ಲೇ ಮತ್ತೊಮ್ಮೆ ಅಕಾರಿಗಳ ಸಭೆ ಕರೆದು ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ರಾಜ್ಯದಲ್ಲಿ ಪದೇ ಪದೇ ಉಂಟಾಗುತ್ತಿರುವ ಅವಘಡಗಳನ್ನು ತಪ್ಪಿಸಲು ಇಲಾಖೆ ಗಂಭೀರ ಚಿಂತನೆ ನಡೆಸುತ್ತಿದೆ. ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ ನಂತರ ನಾವು ಹೊಸ ನಿಯಮಗಳನ್ನು ತಂದಿದ್ದೇವೆ, ಸರ್ಕಾರದಿಂದ ಅನುಮತಿ ಪಡೆದವರು ಮಾತ್ರ ಸ್ಪೋಟಕ ವಸ್ತುಗಳನ್ನು ಬಳಸಬೇಕು. ಅದನ್ನು ಹೊರತುಪಡಿಸಿ ಬೇರೆ ಯಾರು ಕೂಡ ಬಳಸದಂತೆ ಕಾನೂನು ಜಾರಿಗೆ ತರಲಾಗುತ್ತದೆ. ಯಾರಾದರೂ ಕಾನೂನುಬಾಹಿರವಾಗಿ ಸ್ಪೋಟಕಗಳನ್ನು ಇಟ್ಟುಕೊಂಡಿದ್ದರೆ ಕೂಡಲೇ ಹಿಂತಿರುಗಿಸಬೇಕೆಂದು ಸಚಿವರು ಮನವಿ ಮಾಡಿದರು.

    ರಾಜ್ಯದಲ್ಲಿ ಹೊಸದಾಗಿ ಸ್ಕೂಲ್ ಆಫ್ ಮೈನಿಂಗ್ ತೆರೆಯುವ ಉದ್ದೇಶವಿದೆ. ಗಣಿಗಾರಿಕೆ ನಡೆಸುವವರಿಗೆ ಇದರಿಂದ ಅನುಕೂಲವಾಗುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆರಂಭಿಸುವ ಉದ್ದೇಶ ಇದೆ ಹೀಗಾಗಿ ಎಲ್ಲ ಕಡೆ ಅಕಾರಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗುವುದು. ಗಣಿಗಾರಿಕೆ ನಡೆಸುವವರಿಗೆ ಇಲಾಖೆ ವತಿಯಿಂದ ತರಬೇತಿ ನೀಡಲಾಗುವುದು. ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ 12 ಸಾವಿರ ಕೋಟಿ ಹಣವನ್ನು ರಾಜಸ್ವ ಧನದ ಮೂಲಕ ಸಂಗ್ರಹಿಸಲಾಗಿದೆ. ಇದರ ಬಡ್ಡಿ ಸೇರಿಸಿ ಒಟ್ಟು 18 ಸಾವಿರ ಕೋಟಿ ರೂಪಾಯಿಯಾಗಿದೆ. ಇದು ಮೂರು ತಿಂಗಳ ಒಳಗೆ ನಮ್ಮ ಕೈ ಸೇರಿದರೆ ಅಭಿವೃದ್ಧಿ ಕಾರ್ಯಗಳಿಗೆ ಕ್ರಿಯಾ ಯೋಜನೆ ರೂಪಿಸಲಿದ್ದೇವೆ ಈ ಮೂಲಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರುವುದು ನಮ್ಮ ಉದ್ದೇಶವಾಗಿದೆ. ಜನರಿಗೆ ಸರಳವಾಗಿ ಮತ್ತು ಕಡಿಮೆ ದರದಲ್ಲಿ ಮರಳು ಸಿಗಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ನಿತಿನ್ ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಪರಿಸರ ಇಲಾಖೆ ಅಧಿಕಾರಿಗಳು ಹಾಜರಿದ್ದರು.

  • ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಸಿಂಗಲ್ ವಿಂಡೋ ಸಿಸ್ಟಮ್ ತರುವ ಪ್ಲಾನ್ ಇದೆ: ನಿರಾಣಿ

    ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಸಿಂಗಲ್ ವಿಂಡೋ ಸಿಸ್ಟಮ್ ತರುವ ಪ್ಲಾನ್ ಇದೆ: ನಿರಾಣಿ

    ಧಾರವಾಡ: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೆಲ ಬದಲಾವಣೆ ತರಲು ಬಯಸಿದ್ದೇವೆ. ಸಿಂಗಲ್ ವಿಂಡೋ ಸಿಸ್ಟಮ್ ತರುವ ಪ್ಲಾನ್ ಇದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಿರಾಣಿ, ಗಣಿ ಇಲಾಖೆ ಜೊತೆಯಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ಕೂಡಾ ಬರುತ್ತಿವೆ, ಗಣಿ ಲೈಸನ್ಸ್ ಗೆ ಆಫ್‍ಲೈನ್ ಹಾಗೂ ಆನ್‍ಲೈನ್ ಎರಡು ರೀತಿಯಲ್ಲಿ ಅನುಮತಿ ಪಡೆಯಬಹುದು. 30 ದಿನದಲ್ಲಿ ಈ ಗಣಿ ನಿಯಮ ಜಾರಿಗೆ ತರುತ್ತೇವೆ ಅದರ ಡ್ರಾಫ್ಟ್ ಕೂಡಾ ತಯಾರಿದೆ ಎಂದು ಮಾಹಿತಿ ಹಂಚಿಕೊಂಡರು.

    ಗಣಿ ಅನುಮತಿ ಪಡೆಯುವವರಿಗೆ ತೊಂದರೆಯಾಗದಂತೆ ಗಣಿ ನಿಯಮವನ್ನು ಸರಳೀಕರಣ ಮಾಡುತ್ತಿದ್ದೇವೆ ಜಿಂದಾಲ್, ಬಲ್ದೋಟಾ, ಕಿರ್ಲೊಸ್ಕರ್ ಕಂಪನಿಗಳು ಹಾಗೂ ಇತರ ಕಂಪನಿಗಳ ಜೊತೆ ಸಭೆ ನಡೆಸಿದ್ದೇವೆ. ಅದಿರು ಹೊರಗಿನಿಂದ ತರುವುದಕ್ಕೆ ಬೆಲೆ ಹೆಚ್ಚಾಗುತ್ತದೆ ಎಂಬ ಮಾಹಿತಿ ಇದೆ ಇದನ್ನು ಕೂಡಾ ಸಿಎಂ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

    ಸ್ಕೂಲ್ ಆಫ್ ಮೈನಿಂಗ್ ಮಾಡಿದರೆ ಅಕ್ರಮ ಮೈನಿಂಗ್ ಆಗುವುದನ್ನು ಬದಲಾವಣೆ ತರಬಹುದು, ಈ ಹಿನ್ನೆಲೆ ಎಲ್ಲ ಕಡೆ ವರ್ಕ್‍ಶಾಪ್ ಮಾಡಿ ಅಧಿಕಾರಿಗಳಿಗೆ ಹಾಗೂ ಮೈನಿಂಗ್ ಮಾಡುವವರಿಗೆ ತರಬೇತಿ ನೀಡುತ್ತಿದ್ದೇವೆ. ಗಣಿ ಮಾಲಿಕರು ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ 12 ಸಾವಿರ ಕೋಟಿ ರೂಪಾಯಿ ರಾಯಲ್ಟಿ ಕಟ್ಡಿದ್ದಾರೆ. ಅದರ ಬಡ್ಡಿ ಸೇರಿ ಆ ಹಣ 18 ಸಾವಿರ ಕೋಟಿ ಆಗಿದೆ. ಮೂರು ತಿಂಗಳಲ್ಲಿ ಆ ಹಣ ನಮ್ಮ ಕೈ ಸೇರುವ ನಿರೀಕ್ಷೆ ಇದೆ, ಆ ಹಣವನ್ನು ಕ್ರಿಯಾ ಯೋಜನೆಗೆ ಬಳಕೆ ಮಾಡಿಕೊಂಡು ಕೆಲಸಗಳನ್ನು ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

  • ಸಿಬ್ಬಂದಿಯಿಂದ ಶೂ ತೊಡಿಸಿಕೊಂಡ ಸಚಿವ ಮುರುಗೇಶ್ ನಿರಾಣಿ

    ಸಿಬ್ಬಂದಿಯಿಂದ ಶೂ ತೊಡಿಸಿಕೊಂಡ ಸಚಿವ ಮುರುಗೇಶ್ ನಿರಾಣಿ

    ರಾಯಚೂರು: ಜಿಲ್ಲೆಯ ಹಟ್ಟಿ ಚಿನ್ನದ ಗಣಿಗೆ ಭೇಟಿ ನೀಡಿದ ವೇಳೆ ಗಣಿ ಹಾಗೂ ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಸಿಬ್ಬಂದಿಯಿಂದ ಶೂ ತೊಡಿಸಿಕೊಂಡು ವಿವಾದಕ್ಕೀಡಾಗಿದ್ದಾರೆ.

    ಲಿಂಗಸುಗೂರಿನ ಹಟ್ಟಿ ಚಿನ್ನದಗಣಿಗೆ ಭೇಟಿ ನೀಡಿದ ಮುರುಗೇಶ್ ನಿರಾಣಿ, ಅಧಿಕಾರಿಗಳ ಸಭೆ ನಡೆಸಿ ನಂತರ ಗಣಿ ವೀಕ್ಷಣೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಚಿವರು ಅಲ್ಲಿನ ಸಿಬ್ಬಂದಿಯಿಂದ ಸುರಕ್ಷತಾ ಸಾಧನಾ ಮತ್ತು ಕಾಲಿಗೆ ಶೂ ತೊಡಿಸಿಕೊಂಡಿದ್ದಾರೆ.

    ಹಟ್ಟಿ ಚಿನ್ನದಗಣಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾತನಾಡಿದ ನಿರಾಣಿ, ಈ ಆರ್ಥಿಕ ವರ್ಷದಲ್ಲಿ ಹಟ್ಟಿ ಚಿನ್ನದ ಗಣಿಯಿಂದ 1700 ಕೆಜಿ ಚಿನ್ನ ಉತ್ಪಾದನೆಯಾಗಿದೆ. ಗಣಿಯನ್ನು ಆಧುನಿಕರಣಗೊಳಿಸಲು ಚಿಂತನೆ ನಡೆದಿದ್ದು, ಈಗಾಗಲೇ ಆಧುನಿಕರಣಕ್ಕೆ ವರದಿ ತಯಾರಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಚಿನ್ನದ ಉತ್ಪಾದನೆಯ ಪ್ರಮಾಣ ಕಡಿತವಾಗಿತ್ತು ಈಗ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

    ಹಟ್ಟಿ ಚಿನ್ನದಗಣಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವ ನಿರಾಣಿ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಕಂಪನಿಯಲ್ಲಿ ಕೆಲಸ ಮಾಡುವಾಗ ಸತ್ತವರ ಮಕ್ಕಳಿಗೆ ಕೆಲಸ ನೀಡುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಯಾರಿಗೂ ಕೆಲಸ ಕೊಟ್ಟಿಲ್ಲ. 60 ಜನ ಸಂತ್ರಸ್ತರಿಗೆ ಹಟ್ಟಿ ಕಂಪನಿಯಲ್ಲಿ ಕೆಲಸ ನೀಡಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾರ್ಮಿಕರಿಗೆ ಅನ್ಯಾಯವಾಗದಂತೆ ಅಧಿಕಾರಿಗಳೊಂದಿಗೆ ಬೇಡಿಕೆ ಕುರಿತು ಚರ್ಚೆ ಮಾಡುತ್ತೇನೆ. 18 ಸಾವಿರ ಕೋಟಿ ರೂ. ಗಣಿಯ ಹಣವು ಸುಪ್ರೀಂ ಕೋರ್ಟ್‍ನಲ್ಲಿದೆ ಅದನ್ನು ಬಳಸಿಕೊಳ್ಳಲಾಗುವುದು ಎಂದರು.

    ಮೀಸಲಾತಿ ಕೇಳಿ ಹಲವು ಸಮಾಜಗಳು ಹೋರಾಟ ಮಾಡುತ್ತಿವೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ಸಮಿತಿ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಮೀಸಲಾತಿಗೆ ಬಂದಿರು ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ಮೀಸಲಾತಿಗಾಗಿ ಬಂದಿರುವ ಅರ್ಜಿಗಳನ್ನು ಪರಿಗಣಿಸಿ ಅಧ್ಯಯನಕ್ಕೆ ಸಮಯ ಬೇಕಾಗುತ್ತದೆ. ಅಧ್ಯಯನದ ನಂತರ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ವಿವರಿಸಿದರು.

    ಶಿವಮೊಗ್ಗದ ಸ್ಫೋಟ ಪ್ರಕರಣ ಗಣಿ ಕೌಶಲ್ಯ ಹೊಂದದೆ ಇರುವದರಿಂದ ಘಟಿಸಿದೆ. ಹಂತ ಹಂತವಾಗಿ ಗಣಿ ಕೌಶಲ್ಯ ತರಬೇತಿ ನೀಡಲಾಗುವುದು. ಗಣಿ ವಿಷಯಕ್ಕಾಗಿ ಸರ್ಟಿಫಿಕೇಟ್ ನೀಡುವ ಕಾರ್ಯಕ್ಕೆ ಸರ್ಕಾರ ಮುಂದಾಗುತ್ತಿದೆ. ಅಕ್ರಮ ಗಣಿಗಾರಿಕೆಯಲ್ಲಿ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ. ಗಣಿಗಾರಿಕೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ಭಾಗಿಯಾಗಿದ್ದೆ ಇದಕ್ಕೆ ಕಾರಣ ಎಂದು ಟೀಕಿಸಿ, ಮುಂದಿನ ದಿನಗಳಲ್ಲಿ ಗಣಿಗಳಲ್ಲಿ ಎಕ್ಸಪ್ಲೋಸಿವ್ ಇದ್ದರೆ ಗಣಿ ಗುತ್ತಿಗೆ ರದ್ದು ಮಾಡಲಾಗುವುದು ಎಂದು ಗಣಿ ಮಾಲೀಕರಿಗೆ ನಿರಾಣಿ ಎಚ್ಚರಿಕೆ ನೀಡಿದರು.

  • ಬೇಬಿ ಬೆಟ್ಟದ ಗಣಿಗಾರಿಕೆಗೆ ಸಂಪೂರ್ಣ ಬ್ರೇಕ್

    ಬೇಬಿ ಬೆಟ್ಟದ ಗಣಿಗಾರಿಕೆಗೆ ಸಂಪೂರ್ಣ ಬ್ರೇಕ್

    ಮಂಡ್ಯ: ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಮಂಡ್ಯ ಜಿಲ್ಲಾಡಳಿತದಿಂದ ಸಂಪೂರ್ಣ ಬ್ರೇಕ್ ಬಿದ್ದಿದೆ. ಹಳೆ ಮೈಸೂರು ಭಾಗದ ರೈತರ ಜೀವನಾಡಿಯಾಗಿರುವ ಕೆಆರ್‍ಎಸ್ ಡ್ಯಾಂಗೆ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅಪಾಯ ಉಂಟಾಗುತ್ತಿದೆ ಎಂಬ ತಜ್ಞರ ಮನವಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

    ಬೇಬಿ ಬೆಟ್ಟದಲ್ಲಿ ನಡೆಯುವ ಗಣಿಗಾರಿಕೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಡ್ಯಾಂ ಅಪಾಯ ಎದುರಾಗುತ್ತದೆ ಎಂದು ಹಲವು ತಜ್ಞರು ರಾಜ್ಯ ಸರ್ಕಾರಕ್ಕೆ ವರದಿಯನ್ನು ನೀಡಿದ್ದರು. ಆದರೂ ಸಹ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಕಳೆದ ಒಂದು ವರ್ಷದ ಹಿಂದೆ ಗಣಿಗಾರಿಕೆಯನ್ನು ಬಂದ್ ಮಾಡುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿತ್ತು. ಆದರೆ ಮತ್ತೆ ಕೆಲದಿನಗಳ ನಂತರ ಬೇಬಿ ಬೆಟ್ಟದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿತ್ತು. ಪ್ರಭಾವಿಗಳ ಕೈವಾಡದಿಂದಾಗಿ ರಾತ್ರಿ ವೇಳೆ ಬ್ಲಾಸ್ಟಿಂಗ್ ಮಾಡಿ ಗಣಿಗಾರಿಕೆಯನ್ನು ನಡೆಸುತ್ತ ಇದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿತ್ತು. ಆದರೂ ಜಿಲ್ಲಾಡಳಿತ ಈ ಅಕ್ರಮ ಕ್ವಾರಿಯ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ.

     

    ಕಳೆದ ಕೆಲದಿನಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಘಟನೆಯಿಂದ ಮಂಡ್ಯ ಜಿಲ್ಲಾಡಳಿತ ಈಗಲಾದರೂ ಬೇಬಿ ಬೆಟ್ಟದಲ್ಲಿ ಸಂಪೂರ್ಣವಾಗಿ ಗಣಿಗಾರಿಕೆಯನ್ನು ತಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೆಆರ್‍ಎಸ್ ಅಣೆಕಟ್ಟೆಗೆ ಅಪಾಯ ಎದುರಾಗುತ್ತದೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಡಳಿತ ಇದೀಗ ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಅಲ್ಲದೇ ಕದ್ದು ಮುಚ್ಚಿ ಗಣಿಗಾರಿಕೆ ಮಾಡುವುದನ್ನು ತಡೆಗಟ್ಟಲು, ಡ್ರೋಣ್ ಮೂಲಕ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

  • ಗಣಿ ಕಾರ್ಮಿಕನಿಗೆ ಸಿಕ್ತು 35 ಲಕ್ಷ ಮೌಲ್ಯದ ವಜ್ರ

    ಗಣಿ ಕಾರ್ಮಿಕನಿಗೆ ಸಿಕ್ತು 35 ಲಕ್ಷ ಮೌಲ್ಯದ ವಜ್ರ

    ಭೋಪಾಲ್: ಕಾರ್ಮಿಕರೊಬ್ಬನಿಗೆ 35 ಲಕ್ಷ ಮೌಲ್ಯದ ವಜ್ರಗಳು ಸಿಕ್ಕಿರುವ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ವಜ್ರ ಗಣಿಯೊಂದರಲ್ಲಿ ನಡೆದಿದೆ.

    ಪನ್ನಾ ವಜ್ರ ಗಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸುಬಲ್ ಎಂಬವರಿಗೆ ಅಂದಾಜು 30 ಲಕ್ಷದಿಂದ 35 ಲಕ್ಷ ಮೌಲ್ಯದ ಮೂರು ವಜ್ರಗಳನ್ನು ಸಿಕ್ಕಿವೆ. 7.5 ಕ್ಯಾರೆಟ್ ನಿವ್ವಳ ತೂಕದ ಮೂರು ವಜ್ರಗಳನ್ನು ಗಣಿಯಲ್ಲಿ ಸಿಕ್ಕಿವೆ ಎಂದು ಪನ್ನಾ ಜಿಲ್ಲೆಯ ವಜ್ರಾಧಿಕಾರಿ ಆರ್.ಕೆ.ಪಾಂಡೆ ತಿಳಿಸಿದ್ದಾರೆ.

    ಈ ವಜ್ರಗಳನ್ನು ಕಾರ್ಮಿಕರ ಸುಬಲ್ ಜಿಲ್ಲಾ ವಜ್ರದ ಕಚೇರಿಗೆ ನೀಡಿದ್ದಾನೆ. ಅವುಗಳನ್ನು ಸರ್ಕಾರದ ನಿಯಮಗಳ ಪ್ರಕಾರ ಹರಾಜು ಮಾಡಲಾಗುತ್ತದೆ ಎಂದು ಶ್ರೀ ಪಾಂಡೆ ಹೇಳಿದ್ದಾರೆ. ಜೊತೆಗೆ ಇದರ ಮಾರಾಟದಿಂದ ಬಂದ ಹಣದಲ್ಲಿ ಶೇಕಡಾ 12 ರಷ್ಟು ತೆರಿಗೆಯನ್ನು ಕಡಿತಗೊಳಿಸಿದ ನಂತರ, ಉಳಿದ 88 ಶೇಕಡಾ ಮಾರಾಟದ ಆದಾಯವನ್ನು ಸುಬಲ್ ಅವರಿಗೆ ನೀಡುತ್ತೇವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದ ಬುಂದೇಲ್‍ಖಂಡ್ ಪ್ರದೇಶದ ಪನ್ನಾದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ 10.69 ಕ್ಯಾರೆಟ್ ವಜ್ರ ಸಿಕ್ಕಿತ್ತು.