Tag: ಗಣರಾಜೋತ್ಸವ

  • ಕೇರಳವನ್ನು ಪ್ರಶ್ನಿಸಬೇಕೇ ಹೊರತು ಕೇಂದ್ರವನ್ನಲ್ಲ: ಸಿದ್ದುಗೆ ಬಿಜೆಪಿ ತಿರುಗೇಟು

    ಕೇರಳವನ್ನು ಪ್ರಶ್ನಿಸಬೇಕೇ ಹೊರತು ಕೇಂದ್ರವನ್ನಲ್ಲ: ಸಿದ್ದುಗೆ ಬಿಜೆಪಿ ತಿರುಗೇಟು

    ಬೆಂಗಳೂರು: ಗಣರಾಜ್ಯೋತ್ಸವದ ಸ್ಥಬ್ಧ ಚಿತ್ರದ ವಿಚಾರದಲ್ಲಿ ಕೇರಳ ಸರ್ಕಾರ ಮಾಡಿದ ತಪ್ಪಿಗೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಪ್ರಶ್ನಿಸಬೇಕಿರುವುದು ಕೇರಳದ ಸಿಪಿಐಎಂ ಪಕ್ಷವನ್ನೇ ಹೊರತು ಕೇಂದ್ರವನ್ನಲ್ಲ ಎಂದು ಕರ್ನಾಟಕ ಬಿಜೆಪಿ ತಿರುಗೇಟು ನೀಡಿದೆ.

    ಭಾನುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ತಳಸಮುದಾಯದ ಮಹಾಪುರುಷರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಇರುವ ಪೂರ್ವಗ್ರಹ ಮತ್ತು ತಿರಸ್ಕಾರಕ್ಕೆ ಸಾಕ್ಷಿ. ಶತಮಾನದ ಹಿಂದೆಯೇ ಅಸ್ಪøಶ್ಯತೆ ಮತ್ತು ಪುರೋಹಿತಷಾಹಿ ವ್ಯವಸ್ಥೆ ವಿರುದ್ಧ ಸಿಡಿದೆದ್ದು, ಹಿಂದೂ ಧರ್ಮದ ಸುಧಾರಣೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ನಾರಾಯಣ ಗುರುಗಳಿಗೆ ಅವಮಾನಿಸಿರುವ ಕೇಂದ್ರ ಸರ್ಕಾರಕ್ಕೆ ಹಿಂದೂ ಧರ್ಮದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್‍ಗೆ ಬಿಜೆಪಿ ತಿರುಗೇಟು ನೀಡಿದ್ದು, ಗಣರಾಜೋತ್ಸವ ಪರೇಡ್‍ನಲ್ಲಿ ಪ್ರದರ್ಶನಗೊಳ್ಳಲಿರುವ ಟ್ಯಾಬ್ಲೊ ವಿಚಾರವಾಗಿ ಕೇರಳದ ಸ್ಥಬ್ಧ ಚಿತ್ರವನ್ನು ಯಾಕೆ ತೆಗೆದು ಹಾಕಿದೆ ಎನ್ನುವುದಕ್ಕೆ ಪ್ರತಿಕ್ರಿಯೆ ನೀಡಿದೆ.

    ಟ್ವೀಟ್‍ನಲ್ಲಿ ಏನಿದೆ?: ಮೊಸರಿನಲ್ಲೂ ಕಲ್ಲು ಹುಡುಕುವ ಜಾಯಮಾನ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹೊಸತೇನಲ್ಲ. ಆದರೂ ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸ್ತಬ್ಧ ಚಿತ್ರದ ವಿಚಾರದಲ್ಲಿ ಕೇಂದ್ರ ಸರ್ಕಾರ ಸೂಕ್ತ ಮಾರ್ಗದರ್ಶಿ ಸೂತ್ರವನ್ನು ಕೇರಳ ಸರ್ಕಾರಕ್ಕೆ ಕಳುಹಿಸಿತ್ತು. ಈ ಶಿಷ್ಟಾಚಾರವನ್ನು ಉಲ್ಲಂಘಿಸಿದ ಕೇರಳ ಸರ್ಕಾರದ ರಾಜಕೀಯ ಕುತಂತ್ರದಿಂದ ಈಗ ವಿವಾದ ಸೃಷ್ಟಿಯಾಗಿದೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊರೊನಾ ನೆಗೆಟಿವ್

    ಮಾಜಿ ಮುಖ್ಯಮಂತ್ರಿಗಳಿಬ್ಬರು ಸತ್ಯದ ಪರವಾಗಿ ನಿಲ್ಲುವವರಾದರೆ ಈ ವಿಚಾರದಲ್ಲಿ ಮೋದಿಯವರನ್ನು ಬೆಂಬಲಿಸಬೇಕಲ್ಲವೇ? ಪ್ರಧಾನಿ ಮೋದಿ ಅವರು ನಾರಾಯಣ ಗುರುಗಳ ವಿಚಾರದಲ್ಲಿ ಅಪಾರ ಗೌರವ ಹೊಂದಿದ್ದಾರೆ. ಶ್ರೀಗಳ ಐಕ್ಯ ಸ್ಥಳಕ್ಕೂ ಭೇಟಿ ನೀಡಿದ್ದಾರೆ. ತಮ್ಮ ಭಾಷಣದಲ್ಲಿ ನಾರಾಯಣ ಗುರುಗಳ ಸಾಧನೆಯನ್ನು ಪ್ರಸ್ತಾಪಿಸಿದ್ದಾರೆ. ಈ ಮಹಾನ್ ದಾರ್ಶನಿಕನ ಬಗ್ಗೆ ಪ್ರಧಾನಿ ಹೊಂದಿರುವ ಗೌರವವನ್ನು ಪ್ರಶ್ನಿಸುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರದು ಎಂದು ಬಿಜೆಪಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ಟ್ಯಾಬ್ಲೊ ವಿಚಾರದಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ – ಸಿಡಿದೆದ್ದ ರಾಜ್ಯಗಳು

  • ಟ್ಯಾಬ್ಲೊ ವಿಚಾರದಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ – ಸಿಡಿದೆದ್ದ ರಾಜ್ಯಗಳು

    ಟ್ಯಾಬ್ಲೊ ವಿಚಾರದಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ – ಸಿಡಿದೆದ್ದ ರಾಜ್ಯಗಳು

    ನವದೆಹಲಿ : ಗಣರಾಜೋತ್ಸವ ಪರೇಡ್ ನಲ್ಲಿ ಪ್ರದರ್ಶನಗೊಳ್ಳಲಿರುವ ಟ್ಯಾಬ್ಲೊ ವಿಚಾರವಾಗಿ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗೇ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

    ಪ್ರತಿ ವರ್ಷದಂತೆ ಈ ವರ್ಷವೂ ಗಣರಾಜೋತ್ಸವ ಪರೇಡ್‌ನಲ್ಲಿ ಭಾಗಿಯಾಗಲು ರಾಜ್ಯಗಳು ತಮ್ಮ ಟ್ಯಾಬ್ಲೊ ವಿಷಯಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿವೆ. ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ 125ನೇ ಜನ್ಮದಿನದ ಹಿನ್ನಲೆ ಪಶ್ಚಿಮ ಬಂಗಾಳ ಅವರ ಐಎನ್‌ಎ ವಿಷಯಾಧಾರಿತ ಟ್ಯಾಬ್ಲೊ‌ವನ್ನು, ಕೇರಳ ಸರ್ಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಷಯವನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿತ್ತು.

    ಮೊದಲ ಹಂತದಲ್ಲಿ ಆಯ್ಕೆಯಾಗಿದ್ದ ಈ ವಿಷಯಗಳಿಗೆ ಏಕಾಏಕಿ ತಡೆ ನೀಡಲಾಗಿದೆ. ಈ ಟ್ಯಾಬ್ಲೊ‌ಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ನಿರಾಕರಿಸಿದೆ. ತನ್ನ ನಿರ್ಧಾರದ ಹಿಂದಿನ ಕಾರಣವೇನು ಎನ್ನುವುದನ್ನು ಈವರೆಗೂ ಸ್ಪಷ್ಟಪಡಿಸಿಲ್ಲ. ಇದರಿಂದ ಕೇರಳ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ತಮ್ಮ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಮಮತಾ, ಕೇಂದ್ರ ಸರ್ಕಾರದ ಈ ಮನೋಭಾವದಿಂದ ಬಂಗಾಳಿ ಜನರಿಗೆ ಅತೀವ ನೋವಾಗಿದೆ, ನೇತಾಜಿ ಅವರ ಟ್ಯಾಬ್ಲೋ ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ನೇತಾಜಿ ಅವರ ಹೋರಾಟವನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಮಾನ್ಯ ಡಿಕೆಶಿ ಅವರೇ, ನಿಮ್ಮ ಆರೋಗ್ಯ ಹೇಗಿದೆ?: ಬಿಜೆಪಿ

    ದಕ್ಷಿಣದ ರಾಜ್ಯಗಳಿಗೂ ಅನ್ಯಾಯ: ಈ ಬಾರಿ ಕೇಂದ್ರ ಸರ್ಕಾರ 12 ರಾಜ್ಯಗಳಿಗೆ ಮಾತ್ರ ಟ್ಯಾಬ್ಲೊ ಪ್ರದರ್ಶನಕ್ಕೆ ಅವಕಾಶ ನೀಡಿದೆ. ದಕ್ಷಿಣ ಭಾರತದಿಂದ ಕರ್ನಾಟಕ ಮಾತ್ರ ಟ್ಯಾಬ್ಲೊ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಗೋವಾ, ಆಂಧ್ರಪ್ರದೇಶ ಕೂಡಾ ತಮ್ಮ ವಿಷಯಗಳ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದವು, ಆದರೆ ಈ ನಾಲ್ಕು ರಾಜ್ಯಗಳ ಪ್ರಸ್ತಾಪವನ್ನು ಕೇಂದ್ರ ತಿರಸ್ಕರಿಸಿದೆ‌. ಮಾಹಿತಿಗಳ ಪ್ರಕಾರ ಈ ಬಾರಿ ತೆಲಂಗಾಣ ಯಾವುದೇ ಪ್ರಸ್ತಾಪ ಕಳುಹಿಸಿಲ್ಲ.

    ತಮ್ಮ ಟ್ಯಾಬ್ಲೊ ವಿಷಯಗಳನ್ನು ನಿರಾಕರಿಸಿರುವುದಕ್ಕೆ ದಕ್ಷಿಣದಲ್ಲಿ ಕೇರಳ ಹೊರತುಪಡಿಸಿ ಮಹಾರಾಷ್ಟ್ರ, ತಮಿಳುನಾಡು, ಗೋವಾ, ಆಂಧ್ರಪ್ರದೇಶ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ ಕರ್ನಾಟಕ ಹೊರತುಪಡಿಸಿ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳನ್ನು ಟ್ಯಾಬ್ಲೊ ಪ್ರದರ್ಶನದಿಂದ ಏಕಕಾಲದಲ್ಲಿ ಕೈಬಿಟ್ಟಿರುವುದಕ್ಕೆ ಜನ ಸಾಮಾನ್ಯರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರದ ನಡೆಯಿಂದ ಈ ಬಾರಿ ಗಣರಾಜೋತ್ಸವ ಪರೇಡ್ ನಲ್ಲಿ ದಕ್ಷಿಣ ಭಾರತದ ಅನುಪಸ್ಥಿತಿ ದೊಡ್ಡ ಪ್ರಮಾಣದಲ್ಲಿ ಕಾಣಲಿದೆ ಎಂದು ಸಮಾಜಿಕ ಜಾಲತಾಣಗಳಲ್ಲಿ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

    ಕಾರಣ ನೀಡದ ಕೇಂದ್ರ: ಇನ್ನು ರಾಜ್ಯಗಳು ನೀಡಿದ ಟ್ಯಾಬ್ಲೊ‌ಗಳ ವಿಷಯಗಳನ್ನು ಯಾಕೆ ನಿರಾಕರಿಸಿದೆ ಎಂದು ಈವರೆಗೂ ಕೇಂದ್ರ ಸರ್ಕಾರ ಎಲ್ಲೂ ಹೇಳಿಲ್ಲ. ನಿಯಮಗಳ ಪ್ರಕಾರ ರಾಜ್ಯಗಳು ಮೂರು ವಿಷಯಗಳನ್ನು ಕೇಂದ್ರದ ಆಯ್ಕೆ ಸಮಿತಿಗೆ ಕಳುಹಿಸಿಕೊಡಲಾಗಿರುತ್ತದೆ. ಅಲ್ಲದೇ ಆ ವಿಷಯದ ಮಹತ್ವವನ್ನು ವಿವರಿಸಲಾಗಿರುತ್ತದೆ. ಒಂದು ವೇಳೆ ರಾಜ್ಯದ ಮೊದಲ ಆದ್ಯತೆಯ ವಿಷಯ ಕೇಂದ್ರದ ತಕರಾರುಗಳಿದ್ದಲ್ಲಿ ಎರಡು ಅಥಾವ ಮೂರನೇ ವಿಷಯವನ್ನು ಆಯ್ಕೆ ಮಾಡುವ ಅವಕಾಶಗಳಿರುತ್ತದೆ. ಇದನ್ನೂ ಓದಿ: ಒಬಿಸಿ ನಾಯಕರಿಂದ ಬಿಜೆಪಿಗೆ ರಾಜೀನಾಮೆ – ದಲಿತರ ಮನೆಯಲ್ಲಿ ಊಟ ಮಾಡಿದ ಯೋಗಿ

    ಆದರೆ ಕೇಂದ್ರ ಸರ್ಕಾರ ಮಾತ್ರ ಈ ನಿಯಮ ಪಾಲಿಸದೇ ಏಕಾಏಕಿ ಕರ್ನಾಟಕ ಹೊರತುಪಡಿಸಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಟ್ಯಾಬ್ಲೊಗಳ ವಿಷಯಗಳನ್ನು ನಿರಾಕರಿಸಿದೆ. ರಾಜ್ಯಗಳ ವಿಷಯಗಳನ್ನು ನಿರಾಕರಿಸಿದ್ದೇಕೆ? ಇದರ ಹಿಂದಿನ ಕಾರಣ ಏನು ಈವರೆಗೂ ತಿಳಿದು ಬಂದಿಲ್ಲ ಮತ್ತು ಕೇಂದ್ರ ಸರ್ಕಾರವೂ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದನ್ನೂ ಓದಿ:  ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

    ದಕ್ಷಿಣ ಭಾರತ ಪ್ರತಿನಿಧಿಸಲಿರುವ ಕರ್ನಾಟಕ: ದಕ್ಷಿಣ ಭಾರತದಿಂದ ಕರ್ನಾಟಕ ಏಕೈಕ ಟ್ಯಾಬ್ಲೊ ಆಯ್ಕೆಯಾಗಿದ್ದು ರಾಜಪಥ್ ನಲ್ಲಿ ಇಡೀ ದಕ್ಷಿಣ ಭಾರತವನ್ನು ಕರ್ನಾಟಕ ಪ್ರತಿನಿಧಿಸಲಿದೆ. ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ವಿಷಯ ಆಧಾರಿತ ಟ್ಯಾಬ್ಲೊ ಕರ್ನಾಟಕದಿಂದ ಆಯ್ಕೆಯಾಗಿದೆ. ಸತತವಾಗಿ 13 ನೇ ಬಾರಿ ಟ್ಯಾಬ್ಲೊ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ.

  • ಯಾದಗಿರಿ ಪಬ್ಲಿಕ್ ಟಿವಿಯ ಕ್ಯಾಮೆರಾಮ್ಯಾನ್ ರೂಪೇಶ್‍ಗೆ ಗಣರಾಜ್ಯೋತ್ಸವ ಪ್ರಶಸ್ತಿ

    ಯಾದಗಿರಿ ಪಬ್ಲಿಕ್ ಟಿವಿಯ ಕ್ಯಾಮೆರಾಮ್ಯಾನ್ ರೂಪೇಶ್‍ಗೆ ಗಣರಾಜ್ಯೋತ್ಸವ ಪ್ರಶಸ್ತಿ

    ಯಾದಗಿರಿ: ಪಬ್ಲಿಕ್ ಟಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಾದಗಿರಿ ಜಿಲ್ಲೆಯ ಕ್ಯಾಮೆರಾ ಮ್ಯಾನ್ ರೂಪೇಶ್ ಹುಲಿಕಾರರವರು ಜಿಲ್ಲಾಡಳಿತ ನೀಡುವ ಗಣರಾಜೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

    ರೂಪೇಶ್‍ರವರು ಯಾದಗಿರಿ ಜಿಲ್ಲೆಯ ವೀಡಿಯೋ ಪತ್ರಕರ್ತರಾಗಿ ಪಬ್ಲಿಕ್ ಟಿವಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಾರಿ ಯಾದಗಿರಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದ ಸಂಧರ್ಭದಲ್ಲಿ ಸಾಕಷ್ಟು ಸಾಹಸಮಯ ಸನ್ನಿವೇಶಗಳು ಎದುರಿಸಿ, ಅತ್ಯುತ್ತಮವಾಗಿ ದೃಶ್ಯಗಳನ್ನು ಸೆರೆಹಿಡಿದಿದ್ದರು. ಅಲ್ಲದೆ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಜಿಲ್ಲಾಡಳಿತದಿಂದ ನಿರ್ಮಾಣಗೊಂಡ, ಜಾಗೃತಿ ಎಂಬ ಕಿರು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದರು.

    ರೂಪೇಶ್ ಅವರ ಈ ಕಾರ್ಯಗಳನ್ನು ಗುರುತಿಸಿರುವ ಯಾದಗಿರಿ ಜಿಲ್ಲಾಡಳಿತ, ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಗಣರಾಜ್ಯೋತ್ಸವದಂದು ನೀಡುವ ಪ್ರಶಸ್ತಿಗೆ ಈ ಬಾರಿ ಆಯ್ಕೆ ಮಾಡಿ ಗೌರವಿಸಿದೆ.

    ಗಣರಾಜೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ನೀಡುವ ಅತ್ಯುತ್ತಮ ಛಾಯಾಗ್ರಹಕ ಪ್ರಶಸ್ತಿಗೆ ಆಯ್ಕೆಯಾಗಿರುವ ರೂಪೇಶ್ ಹುಲಿಕಾರರವರಿಗೆ, ನಾಳೆ ಧ್ವಜಾರೋಹಣ ಬಳಿಕ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

  • ಗಣರಾಜ್ಯೋತ್ಸವ ಪರೇಡ್: ಕೆಚ್ಚೆದೆಯ ಪ್ರದರ್ಶನ ನೀಡಿದ ಮಹಿಳಾ ಬಿಎಸ್‍ಎಫ್ ಬೈಕ್ ತಂಡ

    ಗಣರಾಜ್ಯೋತ್ಸವ ಪರೇಡ್: ಕೆಚ್ಚೆದೆಯ ಪ್ರದರ್ಶನ ನೀಡಿದ ಮಹಿಳಾ ಬಿಎಸ್‍ಎಫ್ ಬೈಕ್ ತಂಡ

    ನವದೆಹಲಿ: ದೆಹಲಿಯ ರಾಜ್‍ಪಥ್‍ನಲ್ಲಿ ನಡೆದ 69ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಈ ಬಾರಿ ಹಲವು ವಿಶೇಷಗಳಿಂದ ಕೂಡಿತ್ತು. ಪ್ರಮುಖವಾಗಿ ಮೊದಲ ಬಾರಿಗೆ ಆಸಿಯಾನ್ ರಾಷ್ಟ್ರಗಳ ನಾಯಕರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಾರಂಭದ ಪೆರೇಡ್ ನಲ್ಲಿ ದೇಶದ ಸಂಸ್ಕೃತಿ ಹಾಗೂ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು.

    ಈ ಬಾರಿಯ ಪರೇಡ್ ನಲ್ಲಿ ಪ್ರಮುಖವಾಗಿ ಇದೇ ಮೊದಲ ಬಾರಿಗೆ ಬಿಎಎಸ್‍ಎಫ್ ನ ಮಹಿಳಾ ತಂಡ ರೋಮಾಂಚನಕಾರಿ ಬೈಕ್ ಸ್ಟಂಟ್ ಪ್ರದರ್ಶನವನ್ನು ನೀಡಿತು. ಸಮಾರಂಭದಲ್ಲಿ ಭಾವಹಿಸದ್ದ ಜನರ ಹರ್ಷೋದ್ಗಾರ ಮಹಿಳಾ ಯೋಧರ ಸಾಹಸ ಪ್ರದರ್ಶನಕ್ಕೆ ಮತ್ತಷ್ಟು ಶಕ್ತಿ ನೀಡಿತು.

    ರಾಯಲ್ ಎನ್‍ಫೀಲ್ಡ್ 350 ಸಿಸಿ ಬೈಕ್ ಏರಿ ಬಂದ `ಸೀಮಾ ಭವಾನಿ’ ಹೆಸರಿನ 113 ಮಂದಿ ಮಹಿಳಾ ಬಿಎಸ್‍ಎಫ್ ತಂಡ ತಮ್ಮ ಕೌಶಲ್ಯ ಹಾಗೂ ಧೈರ್ಯದ ಕೆಚ್ಚೆದೆಯ ಪ್ರದರ್ಶನ ನೀಡಿತು.

    ಸಬ್ ಇನ್ಸ್ ಪೆಕ್ಟರ್ ಸ್ಟ್ಯಾನ್ಜಿನ್ ನಿರೊಯಾಂಗ್ (28) ಮುನ್ನಡೆಯಲ್ಲಿ ಪ್ರದರ್ಶನ ನೀಡಿದ ತಂಡ ತಾವು ಯಾವುದೇ ಪುರುಷರಿಗೆ ಕಮ್ಮಿ ಇಲ್ಲ ಎಂಬುವುದನ್ನು ಸಾಬೀತು ಪಡಿಸಿತು. ಬಿಎಸ್‍ಎಫ್ ನ ವಿವಿಧ ರ‍್ಯಾಂಕ್ ಗಳಿಂದ ಆಯ್ಕೆ ಮಾಡಲಾಗಿದ್ದ 25 ರಿಂದ 30 ವರ್ಷದೊಳಗಿನ 113 ಮಹಿಳೆಯರಿಗೆ ತರಬೇತಿಯನ್ನು ನೀಡಲಾಗಿತ್ತು. ಮಹಿಳಾ ಯೋಧರ ಪ್ರದರ್ಶನ ಕಂಡ ಅತಿಥಿಗಳು ಅವರ ಧೈರ್ಯವನ್ನು ಪ್ರಶಂಸಿದರು.

    ಮೊದಲ ಬಾರಿಗೆ ಸೀಮಾ ಭವಾನಿ ತಂಡಕ್ಕೆ ಆಯ್ಕೆ ಮಾಡಲಾಗಿದ್ದ ಮಹಿಳಾ ಯೋಧರಿಗೆ ಬಿಎಸ್‍ಎಫ್ ಗೆ ಆಯ್ಕೆಯಾದ ಸಮಯದಲ್ಲಿ ಬೈಕ್ ಸವಾರಿಯೇ ತಿಳಿದಿರಲಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ. ನಂತರ ಅವರಿಗೆ ಕಠಿಣ ತರಬೇತಿ ನೀಡಲಾಗಿತ್ತು. ತಂಡದಲ್ಲಿ ಪಶ್ಚಿಮ ಬಂಗಾಳ, ಪಂಜಾಬ್, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ, ಕೇರಳ, ದೆಹಲಿ, ಮೇಘಾಲಯ ಮತ್ತು ಹಿಮಾಲಯ ಪ್ರದೇಶ ರಾಜ್ಯಗಳಿಗೆ ಸೇರಿದ್ದ ಮಹಿಳಾ ಸೈನಿಕರು ಸ್ಥಾನ ಪಡೆದಿದ್ದರು. ಪ್ರತಿ ದಿನ ತರಬೇತಿ ನೀಡಲಾಗಿದ್ದು ಈ ವೇಳೆ ಹಲವು ಮಂದಿ ಬಿದ್ದು ಗಾಯಗೊಂಡಿದ್ದರು. ಆದರೆ ಇವೆಲ್ಲವನ್ನೂ ಬದಿಗಿಟ್ಟು ಗಣರಾಜ್ಯೋತ್ಸವ ದಿನ ಅತ್ಯುತ್ತಮ ಪ್ರದರ್ಶನ ನೀಡಿದರು.

    https://www.youtube.com/watch?v=lurFLE-A1K0