Tag: ಗಣಪತಿ ದೇವಸ್ಥಾನ

  • ಈಶ್ವರಪ್ಪ ರಾಜೀನಾಮೆಗೂ ಮುನ್ನ ಗಣಪನ ಬಲಭಾಗದಿಂದ ಬಿತ್ತು ಹೂ ಪ್ರಸಾದ

    ಈಶ್ವರಪ್ಪ ರಾಜೀನಾಮೆಗೂ ಮುನ್ನ ಗಣಪನ ಬಲಭಾಗದಿಂದ ಬಿತ್ತು ಹೂ ಪ್ರಸಾದ

    ಶಿವಮೊಗ್ಗ: ಕಳೆದ 3-4 ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಟರ್ನಿಂಗ್ ಪಾಯಿಂಟ್ ತೆಗೆದುಕೊಂಡಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದಲ್ಲಿ ಆರೋಪ ಹೊತ್ತಿರುವ ಸಚಿವ ಈಶ್ವರಪ್ಪ ಅವರ ರಾಜೀನಾಮೆ ವರೆಗೆ ಬಂದು ನಿಂತಿದೆ. ತಾವು ಕೊನೆಯದಾಗಿ ಸಚಿವರಾಗಿದ್ದುಕೊಂಡು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಸಂದರ್ಭದಲ್ಲಿ ಶುಭಶಕುನವೊಂದು ನಡೆದಿದೆ.

    ರಾಜೀನಾಮೆಗೂ ಮುನ್ನ ಈಶ್ವರಪ್ಪ ಶಿವಮೊಗ್ಗದ ತರಳಬಾಳು ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶುಭಶ್ರೀ ಸುಮುದಾಯ ಭವನವನ್ನು ಶುಕ್ರವಾರ ಉದ್ಘಾಟಿಸಿದರು. ಇದಕ್ಕೂ ಮುನ್ನ ಸಮುದಾಯ ಭವನದ ಆವರಣದಲ್ಲೇ ಇದ್ದ ಗಣಪತಿಗೆ ಪೂಜೆ ನಡೆಸುತ್ತಿದ್ದ ವೇಳೆ, ಗಣಪತಿ ಬಲಭಾಗದಿಂದ ಹೂವಿನ ಪ್ರಸಾದ ಬಿದ್ದಿದೆ. ಇದನ್ನು ಕಂಡ ಪುರೋಹಿತರು ಹಾಗೂ ನೆರೆದವರು ಶುಭ ಶಕುನವೆಂದಿದ್ದಾರೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್‍ನಲ್ಲಿ ಒಬ್ಬೊಬ್ಬರು ಲೋಫರ್‌ಗಳಿದ್ದಾರೆ: ಬೊಮ್ಮಾಯಿ

    ಈ ಘಟನೆಯನ್ನು ಸಂತೋಷದಿಂದಲೇ ಸ್ವಾಗತಿಸಿದ ಈಶ್ವರಪ್ಪ ಮುಖದಲ್ಲಿ ಸಂತೋಷ ಮೂಡಿತ್ತು. ಈ ರೀತಿಯಾಗಿ ದೇವರ ಆಶೀರ್ವಾದ ಈ ಹಿಂದೆ ಎಲ್ಲಿಯೂ ಆಗಿರಲಿಲ್ಲ ಎಂದು ಆಶ್ಚರ್ಯಪಟ್ಟರು.

    ಮಹಿಳಾ ಕಾರ್ಯಕರ್ತೆಯರಿಗೆ ಸಾಂತ್ವನ:
    ರಾಜ್ಯದ ಪ್ರಭಾವಿ ಸಚಿವರಾಗಿದ್ದ ಈಶ್ವರಪ್ಪ ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ರಾಜೀನಾಮೆ ವಿಚಾರ ರಾಜ್ಯ ರಾಜಕೀಯದಲ್ಲೀಗ ತಲ್ಲಣ ಉಂಟು ಮಾಡಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿನ್ನೆಲೆಯಲ್ಲಿ, ರಾಜೀನಾಮೆಗೆ ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ಈಶ್ವರಪ್ಪ ರಾಜೀನಾಮೆ ನೀಡಲಿದ್ದು, ಇದು ತಮ್ಮ ಸ್ವಕ್ಷೇತ್ರದ ಕಾರ್ಯಕರ್ತರಿಗೆ ಬಹಳ ನೋವುಂಟು ಮಾಡಿದೆ. ಮಹಿಳಾ ಕಾರ್ಯಕರ್ತೆಯರು ರಾಜೀನಾಮೆ ನೀಡದಂತೆ ಆಗ್ರಹಿಸಿ ಕಣ್ಣೀರು ಹಾಕಿದ್ದಾರೆ. ಕಣ್ಣೀರು ಹಾಕಿದ ಮಹಿಳೆಯರಿಗೆ ಈಶ್ವರಪ್ಪ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ: ಮುಂದಿನ 3 ದಿನ ರಾಜ್ಯದಲ್ಲಿ ಮುಂದುವರಿಯಲಿದೆ ಗುಡುಗು ಸಹಿತ ಮಳೆ

    ಬಿಎಸ್‌ವೈ ಭೇಟಿ ಇಲ್ಲ:
    ಮಾಜಿ ಸಿಎಂ ಯಡಿಯೂರಪ್ಪ ಶಿವಮೊಗ್ಗದಲ್ಲೇ ಇದ್ದರೂ ಈಶ್ವರಪ್ಪ ಅವರನ್ನು ಭೇಟಿ ಮಾಡದೇ ರಾಜೀನಾಮೆ ನೀಡಲು ತೆರಳಿದ್ದಾರೆ. ಬೆಳಗ್ಗೆ ತರಳಬಾಳು ಬಡಾವಣೆಯಲ್ಲಿ ಶುಭಶ್ರೀ ಸಮುದಾಯ ಭವನ ಉದ್ಘಾಟನೆಯಲ್ಲಿ ಯಡಿಯೂರಪ್ಪ ಕೂಡಾ ಪಾಲ್ಗೊಂಡಿದ್ದರು. ಯಡಿಯೂರಪ್ಪ ಬರುವ ಮೊದಲೇ ಈಶ್ವರಪ್ಪ ತರಾತುರಿಯಲ್ಲಿ ಉದ್ಘಾಟಿಸಿ ಹೊರಟಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ಯಡಿಯೂರಪ್ಪ ಕೂಡಾ ಆಗಮಿಸಿದ್ದು, ಅವರನ್ನು ಭೆಟಿಯಾಗದೇ ಹೋಗಿದ್ದಾರೆ.

    ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ, ರಾಜ್ಯದ ಪ್ರಭಾವಿ ಸಚಿವರೊಬ್ಬರ ತಲೆದಂಡಕ್ಕೆ ಕಾರಣವಾಗಿದೆ. ಈಶ್ವರಪ್ಪ ರಾಜೀನಾಮೆ ನೀಡಿದ ಬಳಿಕ ಮುಂದೇನು ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಸಂತೋಷ್ ಆತ್ಮಹತ್ಯೆ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಾ? ಪೊಲೀಸರು ಈ ಪ್ರಕರಣ ಬೇಗನೇ ಬೇಧಿಸುತ್ತಾರಾ? ಕಾದು ನೋಡಬೇಕಿದೆ.

  • ದೊಡ್ಡ ಗಣಪತಿ ದೇವಾಲಯಕ್ಕೆ ನೋಟಿಸ್ – ಸಿಟಿ ರವಿ ಪ್ರಶ್ನೆಗೆ ಉತ್ತರ ನೀಡಿದ ಆರಗ

    ದೊಡ್ಡ ಗಣಪತಿ ದೇವಾಲಯಕ್ಕೆ ನೋಟಿಸ್ – ಸಿಟಿ ರವಿ ಪ್ರಶ್ನೆಗೆ ಉತ್ತರ ನೀಡಿದ ಆರಗ

    ಬೆಂಗಳೂರು: ದೇವಾಲಯಗಳಲ್ಲಿ ಹೆಚ್ಚು ಸೌಂಡ್ ಇರುವಂತಹ ಧ್ವನಿವರ್ಧಕ ಬಳಸುವಂತಿಲ್ಲ. ಪೂಜೆ ಸಂದರ್ಭದಲ್ಲಿ ಡಮರುಗ, ಧ್ವನಿವರ್ಧಕ, ಭಾರೀ ಸದ್ದಾಗುವ ಘಂಟೆ ಹೊಡೆಯದಂತೆ ಮುಜರಾಯಿ ಇಲಾಖೆಯಡಿಯ ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ. ಈ ಕುರಿತಾಗಿ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೊಡ್ಡ ಗಣಪತಿ ದೇವಸ್ಥಾನಕ್ಕೆ ನೋಟೀಸ್ ನೀಡಿದ ವಿಚಾರ ಪ್ರಸ್ತಾಪಿಸಿದ್ದಾರೆ.

    ಘಂಟೆ ಶಬ್ಧದಿಂದ, ಶಂಖನಾದದಿಂದ ಮಾಲಿನ್ಯ ಅಂತಾರೆ, ಇದೊಂದು ಹೊಸದು, ಘಂಟೆಯಿಂದ ಮಾಲಿನ್ಯ ಆಗುತ್ತಾ? ಯಾರಿಗೆ ಕೆಟ್ಟ ಹೆಸರು ತರಲು ಹೀಗೆ ಮಾಡ್ತಿದ್ದಾರೆ? ತಲತಲಾಂತರಗಳಿಂದಲೂ ಘಂಟೆ, ಶಂಖನಾದ ಮಾಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಸ್ಪಷ್ಟ ಉತ್ತರ ಕೊಡಬೇಕು ಅಂತಾ ಸಿ.ಟಿ.ರವಿ ಒತ್ತಾಯ ಮಾಡಿದ್ದಾರೆ. ಧ್ವನಿಗೂಡಿಸಿದ ಶಾಸಕ ರವಿಸುಬ್ರಮಣ್ಯ, ಇದು ಏಕೆ ಪದೇ ಪದೇ ಬರುತ್ತಿದೆ? ಇದರ ಹಿಂದೆ ಪಿತೂರಿ ಇರಬಹುದು. ಸರ್ಕಾರ ನಿಮ್ದೇ ಇದೆ, ಪಿತೂರಿ ಯಾರು ಮಾಡ್ತಾರೆ ಎಂದು ಶಿವಲಿಂಗೇಗೌಡ ಕಿಡಿ ಕಾರಿದ್ದಾರೆ.

    ಅಧಿಕಾರಿಗಳ ಹಂತದಲ್ಲೇ ಏನೋ ಮಾಡಿರುತ್ತಾರೆ. ಸರ್ಕಾರದ ಉತ್ತರ ಕೇಳೋಣ ಎಂದ ಸ್ಪೀಕರ್, ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ನಮ್ಮ ಇಲಾಖೆಯಿಂದ ಯಾವುದೇ ಆದೇಶ ಆಗಿಲ್ಲ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪತ್ರ ಬಂದಿತ್ತು, ಅದರ ಮೇರೆಗೆ ಪೊಲೀಸ್ ಇಲಾಖೆ ಸೂಚನೆ ಕೊಟ್ಟಿದೆ. ಮೈಕ್ ಮೂಲಕ ಕೂಗೂರಿಗೂ ಸೂಚನೆ ಕೊಟ್ಟಿದ್ದಾರೆ, ಗಂಟೆ ಹೊಡೆಯುವವರಿಗೂ ಕೊಟ್ಟಿದ್ದಾರೆ. ಆದರೆ ಈಗ ನೋಟೀಸ್ ವಾಪಸ್ ಪಡೆದಿದ್ದಾರೆ ಎಂದು ಗೃಹ ಸಚಿವ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ದೇಗುಲಗಳಲ್ಲಿ ಗಂಟೆ ಸೌಂಡ್ ಜಾಸ್ತಿ ಬಂದ್ರೆ ದಂಡ, ಕೇಸ್- ಮುಜರಾಯಿ ಇಲಾಖೆಯಿಂದ ಹೊಸ ಆದೇಶ

    ನಡೆದಿದ್ದೇನು?: ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ ನೋಟಿಸ್ ನೀಡಲಾಗಿದೆ. ಒಂದು ವೇಳೆ ಹೆಚ್ಚು ಸೌಂಡ್ ಬಂದ್ರೆ ಎರಡು ಬಾರಿ ದಂಡ ಹಾಕ್ತಾರೆ. ಮೂರನೇ ಬಾರಿಗೆ ಕೇಸ್ ದಾಖಲಿಸಿಕೊಳ್ತಾರೆ. ಇನ್ನೂ ದೇವಸ್ಥಾನಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಲಿದ್ದಾರೆ. ಈಗಾಗಲೇ ಬೆಂಗಳೂರಿನ ಪ್ರಸಿದ್ಧ ದೊಡ್ಡಗಣಪತಿ, ಬನಶಂಕರಿ, ಮಿಂಟೋ ಆಂಜನೇಯ ಸ್ವಾಮಿ ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯಿಸಿದ್ದು, ನಮ್ಮ ಇಲಾಖೆಯಿಂದ ಯಾವುದೇ ನೊಟೀಸ್ ಕೊಟ್ಟಿಲ್ಲ ಅಂತ ಇಲಾಖೆಯ ಸೆಕ್ರೇಟರಿ ಹೇಳಿದ್ದಾರೆ. ನೊಟೀಸ್ ಪತ್ರದ ಸಂಖ್ಯೆ ನಮ್ಮ ಇಲಾಖೆಯದಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯು ದಿ.ರಾಜೀವ್ ಗಾಂಧಿ ಮಗ ಎಂಬುದಕ್ಕೆ ಬಿಜೆಪಿ ಪುರಾವೆ ಕೇಳಿತ್ತೇ? – ಅಸ್ಸಾಂ ಸಿಎಂ ವಿರುದ್ಧ ಪ್ರಕರಣ