Tag: ಗಡ್ಕರಿ

  • ಉಗ್ರರಿಗೆ ಸಹಕಾರ ನೀಡಿದ್ರೆ ನದಿ ನೀರು ಕೊಡಲ್ಲ: ಪಾಕಿಗೆ ಗಡ್ಕರಿ ಎಚ್ಚರಿಕೆ

    ಉಗ್ರರಿಗೆ ಸಹಕಾರ ನೀಡಿದ್ರೆ ನದಿ ನೀರು ಕೊಡಲ್ಲ: ಪಾಕಿಗೆ ಗಡ್ಕರಿ ಎಚ್ಚರಿಕೆ

    ಅಮೃತಸರ: ಉಗ್ರರಿಗೆ ಸಹಕಾರ ನೀಡುವುದನ್ನು ಮುಂದುವರಿಸಿದರೆ ಮುಂದೆ ಸಂಪೂರ್ಣವಾಗಿ ಭಾರತದಿಂದ ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸಲಾಗುವುದು ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.

    ಪಾಕಿಸ್ತಾನ ನಿರಂತರವಾಗಿ ಉಗ್ರರಿಗೆ ಸಹಕಾರ ನೀಡುತ್ತಾ ಬಂದಿದೆ. ಇನ್ನು ಮುಂದೆಯೂ ಸಹಕಾರ ನೀಡಿದರೆ ಭಾರತದಿಂದ ಹರಿಯುವ ನೀರನ್ನು ನಿಲ್ಲಿಸುತ್ತೇವೆ. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಹರ್ಯಾಣ, ಪಂಜಾಬ್, ರಾಜಸ್ಥಾನಕ್ಕೆ ಹರಿಸಲಾಗುವುದು. ಈ ಸಂಬಂಧ ಈಗಾಗಲೇ ಅಧ್ಯಯನ ಆರಂಭಗೊಂಡಿದೆ ಎಂದು ತಿಳಿಸಿದರು.

    ಮೂರು ನದಿಗಳ ನೀರು ಪಾಕಿಸ್ತಾನಕ್ಕೆ ಹರಿಯುತ್ತಿದೆ. ಈ ನೀರನ್ನು ನಿಲ್ಲಸಬೇಕು ಎನ್ನುವ ಇಚ್ಛೆ ನಮಗಿಲ್ಲ. ನದಿ ನೀರಿನ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸ್ನೇಹಯುತ ಸಂಬಂಧ ಇದ್ದ ಕಾರಣ ಈ ನದಿ ಒಪ್ಪಂದ ನಡೆದಿದೆ. ಆದರೆ ಈಗ ಎರಡು ದೇಶಗಳ ನಡುವಿನ ಸಂಬಂಧ ಮುರಿದು ಬಿದ್ದಿದೆ. ಹೀಗಾಗಿ ಈ ಒಪ್ಪಂದವನ್ನು ಪಾಲನೆ ಮಾಡಬೇಕಾದ ಅಗತ್ಯ ನಮಗಿಲ್ಲ ಎಂದು ಗಡ್ಕರಿ ಖಡಕ್ ಮಾತುಗಳನ್ನು ಆಡಿದ್ದಾರೆ.

    ಮಾಜಿ ಪ್ರಧಾನಿ ಜವಾಹರ‌ಲಾಲ್ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯುಬ್ ಖಾನ್ ನಡುವೆ 1960 ರಲ್ಲಿ ಇಂಡಸ್ ನದಿ ಯೋಜನೆ ಒಪ್ಪಂದ ನಡೆದಿತ್ತು. ಈ ಒಪ್ಪಂದದ ಪ್ರಕಾರ ಮೂರು ನದಿಗಳು ಭಾರತಕ್ಕೆ ಹಂಚಿಕೆಯಾದರೆ ಮೂರು ನದಿಗಳು ಪಾಕಿಸ್ತಾನಕ್ಕೆ ಹಂಚಿಕೆಯಾಗಿದೆ.

    ಇಂಡಸ್ ನದಿ ನೀರಿನ ಒಪ್ಪಂದದ ಪ್ರಕಾರ ರಾವಿ, ಸಟ್ಲೇಜ್, ಬೀಯಾಸ್ ನದಿ ನೀರಿನ ಬಳಕೆ ಭಾರತಕ್ಕೆ ಮೀಸಲಾಗಿದ್ದರೆ, ಜೇಲಂ, ಚೀನಾಬ್ ಮತ್ತು ಇಂಡಸ್ ನದಿ ನೀರು ಪಾಕಿಸ್ತಾನಕ್ಕೆ ಹಂಚಿಕೆಯಾಗಿದೆ. ಈ ಒಪ್ಪಂದದ ಪ್ರಕಾರ ಭಾರತಕ್ಕೆ ಮೀಸಲಾಗಿರುವ ಮೂರು ನದಿಗಳ ನೀರನ್ನು ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಬಹುದಾಗಿದೆ.

    ಈ ಹಿಂದೆ ಪುಲ್ವಾಮಾ ದಾಳಿ ನಡೆದ ಬಳಿಕ ಗಡ್ಕರಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಈಗಾಗಲೇ ಯಮುನಾ ನದಿಯ ಪುನಶ್ಚೇತನಕ್ಕೆ ಹಲವು ಯೋಜನೆಗಳನ್ನು ಆರಂಭಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಮೂರು ನದಿಗಳು ಭಾರತಕ್ಕೆ, ಮೂರು ನದಿಗಳನ್ನು ಪಾಕಿಸ್ತಾನಕ್ಕೆ ನೀಡಲಾಯಿತು. ಆದರೆ ಭಾರತ ಉದಾರ ಮನಸ್ಸಿನಿಂದ ನಿರಂತರವಾಗಿ ಪಾಕಿಸ್ತಾನಕ್ಕೆ ನೀರನ್ನು ನೀಡುತ್ತಲೇ ಇದೆ. ಆದರೆ ಈಗ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಸಂಗ್ರಹಿಸಿ ನೀರಾವರಿ ಯೋಜನೆಯ ಮೂಲಕ ಜಮ್ಮು ಕಾಶ್ಮೀರ ಮತ್ತು ಪಂಜಾಬ್‍ಗೆ ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ದರು.

    ಈಗಾಗಲೇ ಪಂಜಾಬಿನ ಪಠಾಣ್‍ಕೋಟ್ ಜಿಲ್ಲೆಯ ಶಾಪಕುರ್ಕಿಂಡಿಯಲ್ಲಿ ರವಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣವಾಗುತ್ತಿದೆ. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಈ ಜಲಾಶಯದಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ರವಿ ನದಿ ವ್ಯಾಪ್ತಿಯ ರಾಜ್ಯಗಳಿಗೆ ಈ ನೀರನ್ನು ಹರಿಸಲಾಗುತ್ತದೆ. ಈ ಯೋಜನೆಗಳು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸಲ್ಪಟ್ಟಿವೆ ಎಂದು ಗಡ್ಕರಿ ಟ್ವೀಟ್ ಮಾಡಿ ತಿಳಿಸಿದ್ದರು.

    2016ರಲ್ಲಿ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆದ ಬಳಿಕ ಸರ್ಕಾರ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಭಾರತದತ್ತ ತಿರುಗಿಸಲು ಯೋಜನೆ ರೂಪಿಸಿತ್ತು. ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ಕಿತ್ತೆಸೆದು ಅಲ್ಲಿಂದ ದೇಶಕ್ಕೆ ರಫ್ತಾಗುತ್ತಿದ್ದ ಉತ್ಪನ್ನಗಳ ಮೇಲೆ ಶೇ.200 ರಷ್ಟು ಆಮದು ಸುಂಕವನ್ನು ಭಾರತ ವಿಧಿಸಿದೆ.

  • 1800 ಕೋಟಿ  ಬಿಎಸ್‌ವೈ ಡೈರಿ ಬಾಂಬ್ – ಗಡ್ಕರಿಗೆ 150 ಕೋಟಿ, ಅಡ್ವಾಣಿಗೆ 50 ಕೋಟಿ!

    1800 ಕೋಟಿ ಬಿಎಸ್‌ವೈ ಡೈರಿ ಬಾಂಬ್ – ಗಡ್ಕರಿಗೆ 150 ಕೋಟಿ, ಅಡ್ವಾಣಿಗೆ 50 ಕೋಟಿ!

    – ದೆಹಲಿಯಲ್ಲಿ ಕಾಂಗ್ರೆಸ್ ಆರೋಪ
    – ಮೋದಿ ಮೌನವಹಿಸಿದ್ದು ಯಾಕೆ?

    ನವದೆಹಲಿ: ಲೋಕಸಭಾ ಚುನಾವಣೆಯ ಬೆನ್ನಲ್ಲೇ ಯಡಿಯೂರಪ್ಪ ಕೇಂದ್ರ ನಾಯಕರಿಗೆ ಹಣ ಸಂದಾಯ ಮಾಡಿದ್ದಾರೆ ಎಂದು ಉಲ್ಲೇಖಗೊಂಡಿರುವ ಡೈರಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

    ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಕೇಂದ್ರ ನಾಯಕರಿಗೆ 1800 ಕೋಟಿ ರೂ. ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಕಾರವಾನ್ ಮ್ಯಾಗಜಿನ್ ವರದಿಯನ್ನು ಆಧಾರಿಸಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಡೈರಿಯ ಪ್ರತಿ ಪುಟದಲ್ಲಿ ಬಿಎಸ್ ಯಡಿಯೂರಪ್ಪ ಅವರ ಹಸ್ತ ಬರಹದ ಜೊತೆ ಸಹಿ ಇದೆ. ಅಷ್ಟೇ ಅಲ್ಲದೇ ಈ ಪ್ರಕರಣ ವಿಚಾರಣೆಗೆ ಯೋಗ್ಯವಾಗಿದ್ದು, ಹೊಸದಾಗಿ ನೇಮಕಗೊಂಡಿರುವ ಲೋಕಪಾಲರಿಗೆ ಈ ಡೈರಿಯ ಬಗ್ಗೆ ತನಿಖೆ ನಡೆಸಲು ಆದೇಶ ನೀಡಬೇಕೆಂದು ಅವರು ಹೇಳಿದ್ದಾರೆ.

    2017 ರಿಂದ ಈ ಡೈರಿ ಆದಾಯ ತೆರಿಗೆ ಇಲಾಖೆಯಲ್ಲಿದ್ದು, ಮೋದಿ ಯಾಕೆ ಈ ಪ್ರಕರಣದಲ್ಲಿ ಮೌನ ವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಈ ಡೈರಿಯಲ್ಲಿರುವ ವಿಚಾರಗಳು ಸರಿಯೇ ತಪ್ಪೇ ಎನ್ನುವುದರ ಬಗ್ಗೆ ಹೆಸರು ಪ್ರಸ್ತಾಪವಾಗಿರುವ ನಾಯಕರು ಮುಂದೆ ಬಂದು ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಡೈರಿಯಲ್ಲಿ ಏನಿದೆ?
    ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ 1 ಸಾವಿರ ಕೋಟಿ, ಅರುಣ್ ಜೇಟ್ಲಿ ಮತ್ತು ಗಡ್ಕರಿ ಅವರಿಗೆ 150 ಕೋಟಿ, ರಾಜನಾಥ್ ಸಿಂಗ್ ಅವರಿಗೆ 100 ಕೋಟಿ, ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ 50 ಕೋಟಿ ರೂ. ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

    ನಿತಿನ್ ಗಡ್ಕರಿ ಮಗಳ ಮದುವೆಗೆ 10 ಕೋಟಿ ನೀಡಿದ್ದು, ತನ್ನ ವಿರುದ್ಧದ ಕೇಸ್‍ಗಳ ವಕಾಲತ್ತಿಗೆ 50 ಕೋಟಿ ರೂ. ಹಣವನ್ನು ಯಡಿಯೂರಪ್ಪ ನೀಡಿದ್ದಾರೆ ಎಂದು ಸುರ್ಜೆವಾಲಾ ಆರೋಪಿಸಿದ್ದಾರೆ.

  • ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ಗಡ್ಕರಿ

    ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ಗಡ್ಕರಿ

    ಮುಂಬೈ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ.

    ಅಹ್ಮದ್‍ನಗರದಲ್ಲಿರುವ ಮಹಾತ್ಮ ಪುಲೆ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಪಾಲ್ಗೊಂಡಿದ್ದರು.

    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಗಡ್ಕರಿ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ಕುಸಿದ ಬಿದ್ದ ನಂತರ ಗಡ್ಕರಿ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಗಡ್ಕರಿ ಲೋ ಬಿಪಿಯಿಂದ ಬಳಲಿ ಬಿದ್ದಿದ್ದಾರೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ. ಗಡ್ಕರಿ ಬಿದ್ದ ಕೂಡಲೇ ವೈದ್ಯರು ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡಿದ್ದಾರೆ. ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರು ಆಯ್ತು, ಈಗ ದೆಹಲಿಯಲ್ಲೂ ಶುರುವಾಗಿದೆ ಸಚಿವ ರೇವಣ್ಣ ಖದರ್!

    ಬೆಂಗ್ಳೂರು ಆಯ್ತು, ಈಗ ದೆಹಲಿಯಲ್ಲೂ ಶುರುವಾಗಿದೆ ಸಚಿವ ರೇವಣ್ಣ ಖದರ್!

    ನವದೆಹಲಿ: ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಅವರು ಸೂಪರ್ ಸಿಎಂ ಆಗಲು ಹೊರಟಿದ್ದಾರಾ ಎನ್ನುವ ಪ್ರಶ್ನೆ ಮತ್ತೆ ಹುಟ್ಟಿಕೊಂಡಿದೆ. ಮಂಗಳವಾರ ಸಿಎಂ ಕುಮಾರಸ್ವಾಮಿಯವರು ಕೇಂದ್ರ ಸಾರಿಗೆ ಸಚಿವ ಗಡ್ಕರಿ ಭೇಟಿ ವೇಳೆ ರೇವಣ್ಣ ಅವರು ನಡೆದುಕೊಂಡ ರೀತಿಯಿಂದಾಗಿ ಈ ಪ್ರಶ್ನೆ ಮತ್ತೆ ಎದ್ದಿದೆ.

    ರಾಜ್ಯದ ವಿವಿಧ ಹೆದ್ದಾರಿ ಯೋಜನೆ ಸಂಬಂಧ ಕುಮಾರಸ್ವಾಮಿಯವರು ಗಡ್ಕರಿ ಜೊತೆ ಚರ್ಚಿಸಿದರು. ಈ ವೇಳೆ ಎಚ್‍ಡಿ ರೇವಣ್ಣ ಸಹ ಉಪಸ್ಥಿತರಿದ್ದರು.

    ಮಾತುಕತೆಯ ವೇಳೆ ಎಚ್‍ಡಿ ರೇವಣ್ಣ ಅವರೇ ಗಡ್ಕರಿ ಜೊತೆ ಹೆಚ್ಚು ಮಾತನಾಡುತ್ತಿದ್ದರು. ಸಭೆಯಲ್ಲಿ ಕುಮಾರಸ್ವಾಮಿಗಿಂತಲೂ ರೇವಣ್ಣ ಅವರೇ ಜಾಸ್ತಿ ಮಾತನಾಡುತ್ತಿದ್ದರು ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ:  ವಾಸ್ತು ಪ್ರಕಾರ ಶಿರಾಡಿ ಘಾಟ್ ಉದ್ಘಾಟಿಸಿದ ಸಚಿವ ಹೆಚ್.ಡಿ.ರೇವಣ್ಣ

    ರೇವಣ್ಣ ಅವರು ಕುಮಾರಸ್ವಾಮಿ ಜೊತೆ ಸಭೆಗಳಲ್ಲಿ ಭಾಗವಹಿಸುವುದು ಇದೇ ಮೊದಲಲ್ಲ. ಈ ಹಿಂದೆ ವಿಧಾನಸೌಧದಲ್ಲಿ ಹಾಸನ ವೈದ್ಯಕೀಯ ಕಾಲೇಜಿಗೆ ಸಂಬಂಧಪಟ್ಟ ಸಭೆ ನೆಪದಲ್ಲಿ ರೇವಣ್ಣ ಮೂರು ಸಭೆಗಳಲ್ಲಿ ಹಾಜರಿದ್ದರು. ಅಷ್ಟೇ ಅಲ್ಲದೇ ಹೆಚ್‍ಡಿಕೆ ಸುದ್ದಿಗೋಷ್ಠಿ ಕರೆದಾಗಲೂ ರೇವಣ್ಣ ಮಾತಾಡೋದಕ್ಕೆ ಶುರು ಮಾಡಿ ಸಿಎಂಗೆ ಮುಜುಗರ ತಂದಿಟ್ಟರು.

    ಹಾಲಿನ ದರ ವಿಚಾರಕ್ಕೆ ಏನು ಮಾಹಿತಿ ಅದು ಅಂತಾ ಹೆಚ್‍ಡಿಕೆ ರೇವಣ್ಣ ಅವರನ್ನ ಪ್ರಶ್ನಿಸಿದರು. ಆಗ ಪ್ರೆಸ್‍ಮೀಟ್ ನಲ್ಲಿ ತಾವೇ ಮಾತಾಡಲು ರೇವಣ್ಣ ಶುರು ಮಾಡಿದ್ರು. ಈ ವೇಳೆ ಮಧ್ಯಪ್ರವೇಶ ಮಾಡಿದ ಹೆಚ್‍ಡಿಕೆ, ನೀನು ಒಂದು ಪ್ರೆಸ್‍ಮೀಟ್ ಕರೆದು ಎಲ್ಲ ಹೇಳಿಬಿಡು ಎಂದು ಹೇಳಿ ಸುಮ್ಮನಾಗಿಸಿದ್ದರು.

    ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎಚ್‍ಡಿ ದೇವೇಗೌಡ ಮತ್ತು ರಾಹುಲ್ ಗಾಂಧಿ ಹೈಕಮಾಂಡ್ ಆಗಿರುವ ಜೊತೆಗೆ ಈಗ ರೇವಣ್ಣನವರ ವರ್ತನೆಯಿಂದ ಅವರು ಮೂರನೇ ಹೈಕಮಾಂಡ್ ಆಗಿದ್ದಾರಾ ಎನ್ನುವ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.  ಇದನ್ನೂ ಓದಿ:ಸೂಪರ್ ಸಿಎಂನ ಸೂಪರ್ ಪವರ್: ಆಪ್ತರಿಗೆ ಎರಡೆರಡು ಜವಾಬ್ದಾರಿ ಹೊರಿಸಿದ ಎಚ್‍ಡಿ ರೇವಣ್ಣ!