Tag: ಗಡೇ ದುರ್ಗಾದೇವಿ

  • ನನ್ನನ್ನು ಕರ್ನಾಟಕದ ಡಿಸಿಎಂ ಮಾಡು- ದೇವರಿಗೆ ಶ್ರೀರಾಮುಲು ಲೆಟರ್

    ನನ್ನನ್ನು ಕರ್ನಾಟಕದ ಡಿಸಿಎಂ ಮಾಡು- ದೇವರಿಗೆ ಶ್ರೀರಾಮುಲು ಲೆಟರ್

    ಯಾದಗಿರಿ: ನನ್ನನ್ನು ಕರ್ನಾಟ ಕದ ಉಪಮುಖ್ಯಮಂತ್ರಿಯನ್ನಾಗಿ ಮಾಡು ಎಂದು ಆರೋಗ್ಯ ಸಚಿವ ಶ್ರೀರಾಮುಲು ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿಗೆ ಪತ್ರ ಬರೆದಿದ್ದಾರೆ.

    ಸದ್ಯ ರಾಜ್ಯದಲ್ಲಿ ಎದ್ದಿರುವ ಡ್ರಗ್ಸ್ ಬಿರುಗಾಳಿಯ ಮಧ್ಯೆ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ, ಮುಖ್ಯಮಂತ್ರಿ ಬದಲಾವಣೆ ಸುದ್ದಿ ಕೂಡ ಬಹಳ ಸದ್ದು ಮಾಡುತ್ತಿದೆ. ಬಿಜೆಪಿ ಪ್ರಮುಖ ಶಾಸಕರು ಕೂಡ ಸೂಕ್ತ ಸ್ಥಾನಮಾನಕ್ಕಾಗಿ ತೆರೆಮೆರೆಯಲ್ಲಿ ಭಾರೀ ಕಸರತ್ತನ್ನಾ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದ್ರೆ ಆರೋಗ್ಯ ಸಚಿವ ಶ್ರೀರಾಮುಲು ಅವರು ನನ್ನನ್ನು ಡಿಸಿಎಂ ಮಾಡು ತಾಯಿ ಅಂತ ದೇವರ ಮೊರೆ ಹೋಗಿದ್ದಾರೆ.

    ಸಿಎಂ ಸ್ಥಾನಕ್ಕಾಗಿ ಗಡೇ ದುರ್ಗಾದೇವಿ ಮೊರೆ ಹೋಗಿರುವ ಸಚಿವ ಬಿ .ಶ್ರೀರಾಮುಲು, ಡಿಸಿಎಂ ಸ್ಥಾನ ನೀಡು ಎಂದು ಇಂಗ್ಲಿಷ್ ನಲ್ಲಿ ಪತ್ರ ಬರೆದಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದ ಶ್ರೀರಾಮುಲು, ದೇವಿಯ ದರ್ಶನಕ್ಕೆಂದೆ ಒಂದು ದಿನ ಮುಂಚೆಯೇ ಜಿಲ್ಲೆಗೆ ಬಂದಿದ್ದಾರೆ. ನೇರವಾಗಿ ಗೋನಾಲಕ್ಕೆ ತೆರಳಿ ಗಡೇ ದುರ್ಗಾದೇವಿ ದರ್ಶನ ಪಡೆದ್ರು. ಬಳಿಕ ದೇವಸ್ಥಾನದ ಪೂಜಾರಿ ಮರಿಸ್ವಾಮಿ ಅವರ ಮಾರ್ಗದರ್ಶನದಂತೆ, ದೇವಿಯ ಗರ್ಭಗುಡಿಯೊಳಗೆ ತೆರಳಿ ತಮ್ಮ ಪತ್ರವನ್ನು ದೇವಿಯ ಪಾದದ ಬಳಿ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೂ ಮುಂಚೆ ದೇವಸ್ಥಾನದ ಅರ್ಚಕ ಮರಿಸ್ವಾಮಿಯವರನ್ನು ತಮ್ಮ ನಿವಾಸಕ್ಕೆ ಕರೆಸಿದ್ದು, ಅಲ್ಲಿ ಒಂದು ಹಂತದ ಮಾತುಕತೆ ಬಳಿಕ ದೇವಸ್ಥಾನಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

     

    ಈ ಹಿಂದೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೋನಾಲ ಗ್ರಾಮಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದರು. ಅಂದು ಸಹ ಡಿ.ಕೆ.ಶಿವಕುಮಾರ್ ತಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವಂತೆ ಪತ್ರ ಬರೆದಿದ್ದರು ಎನ್ನಲಾಗಿದೆ. ಪತ್ರದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರಿಗೆ ಅಧ್ಯಕ್ಷ ಪಟ್ಟ ಲಭಿಸಿತು ಅನ್ನೋದು ಭಕ್ತರ ನಂಬಿಕೆ. ಇದೀಗ ಶ್ರೀರಾಮುಲು ಅವರು ಸಹ ದೇವಿಯ ದರ್ಶನ ಪಡೆದು, ತಮ್ಮನ್ನ ಡಿಸಿಎಂ ಮಾಡುವಂತೆ ಕೇಳಿ ಕೊಂಡಿದ್ದಾರೆ.

  • ಸರ್ವ ಸಂಕಷ್ಟದಿಂದ ಪಾರು ಮಾಡುವಂತೆ ಗಡೇ ದುರ್ಗಾದೇವಿಗೆ ಪತ್ರ ಬರೆದ ಡಿಕೆಶಿ

    ಸರ್ವ ಸಂಕಷ್ಟದಿಂದ ಪಾರು ಮಾಡುವಂತೆ ಗಡೇ ದುರ್ಗಾದೇವಿಗೆ ಪತ್ರ ಬರೆದ ಡಿಕೆಶಿ

    ಯಾದಗಿರಿ: ಸರ್ವ ಸಂಕಷ್ಟದಿಂದ ಪಾರು ಮಾಡುವಂತೆ ಯಾದಗಿರಿಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪತ್ರ ಬರೆದು ವಿಶೇಷ ಸಲ್ಲಿಸಿದ್ದಾರೆ.

    ಕಲಬುರಗಿ ಜಿಲ್ಲೆಯಿಂದ ರಸ್ತೆ ಮಾರ್ಗವಾಗಿ ಗೋನಾಲ ಗ್ರಾಮಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಅವರನ್ನು ಗೋನಾಲ ಗ್ರಾಮಸ್ಥರು ಮೇರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಗಡೇ ದುರ್ಗಾದೇವಿ ಜಾತ್ರೆಯಲ್ಲಿ ಭಾಗಿಯಾದ ಡಿಕೆ ಶಿವಕುಮಾರ್ ಅವರು ದುರ್ಗಾದೇವಿ ಮಂದಿರದ ಗರ್ಭ ಗುಡಿಯೊಳಗೆ ಪ್ರವೇಶಿಸಿ, ಅರ್ಚಕ ಮಹಾದೇವಪ್ಪ ಪೂಜಾರಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಿಗೆ ಮೊರೆಯಿಟ್ಟಿದ್ದಾರೆ.

    ಬಳಿಕ ಮಾತನಾಡಿದ ಅವರು, ಕಳೆದ ಬಾರಿ ಬರುತ್ತೇನೆ ಅಂತ ಮಾತುಕೊಟ್ಟಿದ್ದೆ. ಆದರೆ ಮೈತ್ರಿ ಸರ್ಕಾರ ಮತ್ತು ಕೆಲ ಒತ್ತಡದಿಂದ ಬರುವುದಕ್ಕೆ ಆಗಿರಲಿಲ್ಲ. ಈಗ ಬಂದಿದ್ದೇನೆ. ರಾಜ್ಯ ಮತ್ತು ನನ್ನ ಕುಟುಂಬಕ್ಕೆ ಒಳಿತು ಮಾಡುವಂತೆ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.

    ಡಿಕೆ ಶಿವಕುಮಾರ್ ಅವರು ಕೇವಲ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾತ್ರವಲ್ಲ, ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಅಂತ ಗೋನಾಲ ದುರ್ಗಾದೇವಿಯ ಪೂಜಾರಿ ಮಹಾದೇವಪ್ಪ ಭವಿಷ್ಯ ನುಡಿದಿದ್ದಾರೆ.

    ಇದಕ್ಕೂ ಮುನ್ನ ಬೆಳಗ್ಗೆ ಕಲಬುರಗಿಯಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಆಯ್ಕೆಗೆ ನಾನು ಅರ್ಜಿನೂ ಹಾಕಿಲ್ಲ. ಆಕಾಂಕ್ಷಿನೂ ಅಲ್ಲ. ಸದ್ಯ ದಿನೇಶ್ ಗುಂಡೂರಾವ್ ಅವರೇ ಅಧ್ಯಕ್ಷರು. ಅವರ ರಾಜೀನಾಮೆ ಅಂಗೀಕಾರವಾಗಿಲ್ಲ. ಹೀಗಾಗಿ ಕೆಪಿಸಿಸಿ ಹುದ್ದೆ ಖಾಲಿ ಇಲ್ಲ. ಆ ಹುದ್ದೆಯೇ ಕೇಳಿಲ್ಲ ಅಂದ್ರೆ ಯಾರು ತಾನೆ ಅಡ್ಡಗಾಲು ಹಾಕಲು ಸಾಧ್ಯ ಎಂದು ಹೇಳಿದ್ದರು.