Tag: ಗಡಿ

  • ಕಲಬುರಗಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಕಳ್ಳಾಟ – ರಾತ್ರಿ ಒಂದು ರೇಟ್, ಹಗಲು ಒಂದು ರೇಟ್

    ಕಲಬುರಗಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಕಳ್ಳಾಟ – ರಾತ್ರಿ ಒಂದು ರೇಟ್, ಹಗಲು ಒಂದು ರೇಟ್

    ಕಲಬುರಗಿ: ಮಹಾರಾಷ್ಟ್ರದಿಂದ ಕಲಬುರಗಿ ಬರುವ ಪ್ರಯಾಣಿಕರ ಲಸಿಕೆಗಳ ವಿವರಗಳನ್ನು ಪರಿಶೀಲಿಸದೇ ಅಧಿಕಾರಿಗಳು ಗಡಿ ದಾಟಲು ಬಿಟ್ಟಿರುವ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದಲ್ಲಿ ನಡೆದಿದೆ.

    ಅಧಿಕಾರಿಗಳು ಸಾರ್ವಜನಿಕರಿಂದ ಹಣ ವಸೂಲಿ ಮಾಡಲು ಖಾಸಗಿ ವ್ಯಕ್ತಿಗಳ ನೇಮಕ ಮಾಡಿರುವುದು ತಿಳಿದು ಬಂದಿದೆ. ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಮತ್ತು ಲಸಿಕಾ ವರದಿ ಇಲ್ಲದಿದ್ದರೂ ಹಣ ಕೊಟ್ಟು ಗಡಿಯೊಳಗೆ ಬರಲು ಸಹಾಯ ಮಾಡಿದ್ದಾರೆ. ಜೊತೆಗೆ ಹಗಲಲ್ಲಿ ಬರುವ ಪ್ರಯಾಣಿಕರಿಗೆ ಒಂದು ರೇಟ್, ರಾತ್ರಿ ಹೊತ್ತಲ್ಲಿ ಬರುವ ಪ್ರಯಾಣಿಕರಿಗೆ ಮತ್ತೊಂದು ರೇಟ್ ಇಟ್ಟಿರುವುದು ತಿಳಿದುಬಂದಿದೆ. ಇದನ್ನೂ ಓದಿ: ರೇಷನ್‌ ಕಾರ್ಡ್‌ ಇದೆಯಾ: ಸ್ನಾನ ಮಾಡ್ತಿದ್ದ ವ್ಯಕ್ತಿ ಬಳಿ ಹೋಗಿ ಬಿಜೆಪಿ ಶಾಸಕನ ಪ್ರಶ್ನೆ

    ಗುರುವಾರ ಒಂದೇ ದಿನ ಜಿಲ್ಲೆಯಲ್ಲಿ 346 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಕೊರೊನಾ ಹಾವಳಿಯ ಮಧ್ಯೆಯೂ ಪೊಲೀಸರು ಹಣ ವಸೂಲಿ ಮಾಡಿ ಗಡಿಯೊಳಗೆ ಬಿಟ್ಟಿರುವುದು ಆಘಾತಕಾರಿ ವಿಷಯ. ಇದನ್ನೂ ಓದಿ: ವಿಶೇಷ ವಿಕಲಚೇತನ ಅಪ್ಪು ಅಭಿಮಾನಿಯಿಂದ ಬೆಂಗಳೂರಿಗೆ ಪಾದಯಾತ್ರೆ

  • ಬಾಂಗ್ಲಾ ಯುವತಿಯ ವರಿಸಲು ಗಡಿ ದಾಟಿದ ಭಾರತೀಯ ಯುವಕ- ಇಬ್ಬರೂ ಅರೆಸ್ಟ್

    ಬಾಂಗ್ಲಾ ಯುವತಿಯ ವರಿಸಲು ಗಡಿ ದಾಟಿದ ಭಾರತೀಯ ಯುವಕ- ಇಬ್ಬರೂ ಅರೆಸ್ಟ್

    ಕೋಲ್ಕತ್ತಾ: ಕಾನೂನು ಬಾಹಿರವಾಗಿ ಅಂತರಾಷ್ಟ್ರೀಯ ಗಡಿ ದಾಟಿದ ಹಿನ್ನೆಲೆಯಲ್ಲಿ ಬಿಎಸ್ ಎಫ್ ಸಿಬ್ಬಂದಿ ಶನಿವಾರ ಭಾರತೀಯ ಮೂಲದ ವ್ಯಕ್ತಿ ಹಾಗೂ ಬಾಂಗ್ಲಾ ಮೂಲದ ಯುವತಿಯನ್ನು ಪಶ್ಚಿಮ ಬಂಗಾಳದ ನಡಿಯಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

    ಬಂಧಿಸಿ ವಿಚಾರಣೆ ನಡೆಸಿದ ವೇಳೆ, ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಲು ಆರಂಭಿಸಿದ್ದೇವೆ. ಅಲ್ಲದೆ ಮದುವೆಯಾಗಲು ನಿರ್ಧರಿಸಿರುವುದಾಗಿ ತಿಳಿಸಿದರು.

    ಯುವಕನನ್ನು ಜೈಕಾಂತ್ ಚಂದ್ರ ರೈ(24) ಎಂದು ಗುರುತಿಸಲಾಗಿದ್ದು, ಈತ ನಡಿಯಾ ಜಿಲ್ಲೆಯ ಬಲ್ಲಾವ್ ಪುರ ಗ್ರಾಮದವನು. 18 ವರ್ಷದ ಪರಿಣಿತಿ (ಹೆಸರು ಬದಲಿಸಲಾಗಿದೆ) ಬಾಂಗ್ಲಾದೇಶದ ನೆರೈಲ್ ಮೂಲದವಳು. ಜೂನ್ 26ರಂದು ಸಂಜೆ ಬಿಎಸ್‍ಎಫ್ ಇಂಟಲಿಜೆನ್ಸಿಗೆ ಮಾಹಿತಿಯೊಂದು ರವಾನೆಯಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಮಧುಪುರ ಗಡಿ ಹೊರಠಾಣೆ ಕರ್ತವ್ಯದಲ್ಲಿದ್ದ 82 ಬೆಟಾಲಿಯನ್ ಪಡೆಗಳನ್ನು ಎಚ್ಚರಿಸಲಾಯಿತು. ಸಂಜೆ 4:15 ರ ಸುಮಾರಿಗೆ ಭದ್ರತಾ ಸಿಬ್ಬಂದಿ ದಂಪತಿಯನ್ನು ಗಡಿ ರಸ್ತೆಯಲ್ಲಿ ಗುರುತಿಸಿದರು.

    ಭದ್ರತಾ ಸಿಬ್ಬಂದಿ ದಂಪತಿಯನ್ನು ತನಿಖೆ ನಡೆಸಿದರು. ಈ ವೇಳೆ ವ್ಯಕ್ತಿಯನ್ನು ಭಾರತೀಯ ಎಂದು ಗುರುತಿಸಲಾಗಿದ್ದರೂ, ಮಹಿಳೆ ಮಾತ್ರ ತನ್ನ ಗುರುತನ್ನು ಬಹಿರಂಗಪಡಿಸಲಿಲ್ಲ. ಇದರಿಂದ ಅನುಮಾನಗೊಂಡ ಅವರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ವಿಚಾರಣೆ ನಡೆಸಿದಾಗ, ತಾನು ಮತ್ತು ಪರಿಣಿತಿ ಫೇಸ್‍ಬುಕ್‍ನಲ್ಲಿ ಭೇಟಿಯಾಗಿದ್ದೇವೆ ಎಂದು ರೈ ಹೇಳಿದ್ದಾನೆ. ಅಲ್ಲದೆ ಮಾರ್ಚ್ 8 ರಂದು ತಾರಕ್‍ನಗರದಿಂದ ಅಪ್ಪು ಎಂಬ ಬ್ರೋಕರ್ ಸಹಾಯದಿಂದ ಬಾಂಗ್ಲಾದೇಶಕ್ಕೆ ಹೋಗಿದ್ದೇನೆ. ನಂತರ ಮಾರ್ಚ್ 10 ರಂದು ಅವರು ಪರಿಣಿತಿಯನ್ನು ವಿವಾಹವಾಗಿದ್ದು, ಜೂನ್ 25 ರವರೆಗೆ ಬಾಂಗ್ಲಾದೇಶದಲ್ಲಿದ್ದಿದ್ದಾಗಿ ತಿಳಿಸಿದ್ದಾನೆ.

    ಇತ್ತ ಪರಿಣಿತಿ ತನ್ನ ಹೇಳಿಕೆಯಲ್ಲಿ, ತಾನು ಬಾಂಗ್ಲಾದೇಶ ಮೂಲದವಳು ಮತ್ತು ತನ್ನ ಪತಿಯೊಂದಿಗೆ ಭಾರತಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಳೆ. ಗಡಿ ದಾಟ ರಾಜು ಮಂಡಲ್ ಎಂಬ ಬಾಂಗ್ಲಾದೇಶದ ಟೌಟ್‍ಗೆ 10,000ರೂ ಹಣ ಪಾವತಿಸಿರುವುದಾಗಿ ತಿಳಿಸಿದ್ದಾಳೆ. ಸದ್ಯ ಇಬ್ಬರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಭಿಂಪುರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: 1 ಲಕ್ಷ ಮೌಲ್ಯದ ನಾಲ್ಕು ನಾಯಿಗಳ ಕಳ್ಳತನ – ವಾಟ್ಸಪ್‍ನಿಂದ ಶ್ವಾನ ಕಳ್ಳರು ಅರೆಸ್ಟ್

    ಈ ಬಗ್ಗೆ 82 ಬೆಟಾಲಿಯನ್‍ನ ಕಮಾಂಡಿಂಗ್ ಅಧಿಕಾರಿ ಸಂಜಯ್ ಪ್ರಸಾದ್ ಸಿಂಗ್ ಪ್ರತಿಕ್ರಿಯಿಸಿ, ಬಾಂಗ್ಲಾದೇಶದ ಹುಡುಗಿಯನ್ನು ಮದುವೆಯಾಗಲು ಭಾರತೀಯ ವ್ಯಕ್ತಿ ಅಂತರರಾಷ್ಟ್ರೀಯ ಗಡಿ ದಾಟಿದ್ದಾನೆ. ಅವರಿಬ್ಬರ ಸಂಬಂಧವು ನಿಜವೆಂದು ತೋರುತ್ತದೆ ಎಂದಿದ್ದಾರೆ.  ಇದನ್ನೂ ಓದಿ: ನಿಂಬೇಹಣ್ಣಿನ ಜ್ಯೂಸ್ ಮಾರುತ್ತಿದ್ದ ಮಹಿಳೆ ಇಂದು ಪೊಲೀಸ್

  • ರೈತ ಹೋರಾಟಗಾರರಿಂದ ಇಂದು ಕರಾಳ ದಿನ ಆಚರಣೆ

    ರೈತ ಹೋರಾಟಗಾರರಿಂದ ಇಂದು ಕರಾಳ ದಿನ ಆಚರಣೆ

    ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿ ಭಾಗದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಇಂದು 6 ತಿಂಗಳು ಪೂರ್ಣವಾಗುವ ಹಿನ್ನೆಲೆ ರೈತ ಹೋರಾಟಗಾರರು ಇಂದು ಕರಾಳ ದಿನ ಆಚರಣೆ ಮಾಡಿದ್ದಾರೆ.

    ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಇಂದು 6 ತಿಂಗಳು ಪೂರ್ಣಗೊಂಡ ಕಾರಣ ಇಂದು ರೈತರು ತಮ್ಮ ಮನೆಗಳಲ್ಲಿ, ವಾಹನಗಳಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ ಕಪ್ಪು ಬಾವುಟ ಹಾರಿಸಲು ನಿರ್ಧಾರ ಮಾಡಿದ್ದಾರೆ. ಇದರೊಂದಿಗೆ ಪಂಜಾಬ್‍ನ ರೈತರು ಕಪ್ಪು ಬಣ್ಣದ ಟರ್ಬನ್‍ಗಳನ್ನು ಧರಿಸುವ ಮೂಲಕ ಕರಾಳ ದಿನ ಆಚರಣೆಗೆ ಬೆಂಬಲ ಸೂಚಿಸುತ್ತಿದ್ದಾರೆ. 2020ರ ನವೆಂಬರ್ 26ರಂದು ದೆಹಲಿ ಚಲೋ ಹೆಸರಿನಲ್ಲಿ ಹೋರಾಟ ಆರಂಭಿಸಿದ್ದ ರೈತರು, ದೆಹಲಿ ಪ್ರವೇಶಕ್ಕೆ ಅನುಮತಿ ಸಿಗದ ಹಿನ್ನಲೆಯಲ್ಲಿ ಗಡಿಗಳಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಸತತವಾಗಿ 6 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು, ಕೇಂದ್ರದ 3 ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಪಟ್ಟುಹಿಡಿದಿದ್ದಾರೆ.

    ಈ ನಡುವೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ ಹಲವು ಸುತ್ತಿನ ಮಾತುಕತೆಗಳು ಕೂಡ ವಿಫಲವಾಗಿದೆ. ಹಾಗಾಗಿ ಇಂದಿನಿಂದ ಕರಾಳ ದಿನ ಆಚರಿಸಲು ರೈತ ಸಂಘಟನೆಗಳು ಈಗಾಗಲೇ ನಿರ್ಧಾರ ಮಾಡಿದ್ದಾರೆ. ಕೊರೊನಾ ನಡುವೆಯೂ ದೆಹಲಿ ಗಡಿಯಲ್ಲಿ ಕಪ್ಪು ಬಾವುಟ ಹಿಡಿದು ರೈತರು ಹೋರಾಟ ಮುಂದುವರಿಸಿದ್ದಾರೆ. ಇತ್ತ ಪೊಲೀಸರು ಕೂಡ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿಭಾಗದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

  • ಪಾಕ್‍ನಿಂದ ಬಂದ ಪಾರಿವಾಳ- ಎಫ್‍ಐಆರ್ ದಾಖಲಿಸಲು ಒತ್ತಾಯ!

    ಪಾಕ್‍ನಿಂದ ಬಂದ ಪಾರಿವಾಳ- ಎಫ್‍ಐಆರ್ ದಾಖಲಿಸಲು ಒತ್ತಾಯ!

    ಇಸ್ಲಾಮಾಬಾದ್: ಪಾಕಿಸ್ತಾನದಿಂದ ಹಾರಿಬಂದ ಪಾರಿವಾಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಗಡಿ ಭದ್ರತಾ ಪಡೆ ಒತ್ತಾಯ ಮಾಡುತ್ತಿದೆ.

    ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಒಳನುಸುಳವವರನ್ನು ಹಿಡಿದು ಪ್ರಕರಣ ದಾಖಲಿಸುವುದು ಬಿಎಸ್‍ಎಫ್ ಕೆಲಸ. ಆದರೆ ಈ ಬಾರಿ ಗಡಿ ಭದ್ರತಾ ಪಡೆ ಪಾರಿವಾಳ ಪಾಕಿಸ್ತಾನದಿಂದ ಭಾರತದೊಳಗೆ ಹಾರಿ ಬಂದಿದೆ. ಪಾರಿವಾಳದ ವಿರುದ್ಧ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಎಫ್‍ಐಆರ್ ದಾಖಲಿಸುವಂತೆ ಬಿಎಸ್‍ಎಫ್ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪಂಜಾಬ್ ಪೊಲೀಸ್ ಇಲಾಖೆಯ ಅಭಿಪ್ರಾಯ ಕೋರಿದ್ದಾರೆ.

    ರೊರಾವಾಲಾ ಪೋಸ್ಟ್‌ನಲ್ಲಿರುವ ಗಡಿ ಭದ್ರತಾ ಪಡೆಯ ಜವಾನನ ಭುಜದ ಮೇಲೆ ಶಂಕಿತ ಪಾರಿವಾಳವೊಂದು ತಾನೇ ತಾನಾಗಿ ಬಂದು ಕೂತಿದೆ. ಈ ಪಾರಿವಾಳದ ಕಾಲಿನಲ್ಲಿ ಸಣ್ಣ ಪೇಪರ್ ತುಂಡನ್ನು ಕಟ್ಟಲಾಗಿತ್ತು. ಈ ಪೇಪರ್ ನಲ್ಲಿ ಕೆಲ ಸಂಪರ್ಕ ಸಂಖ್ಯೆಗಳನ್ನು ನಮೂದಿಸಲಾಗಿತ್ತು. ಈ ಪಾರಿವಾಳ ಗಡಿಯುದ್ದಕ್ಕೂ ಹಾರಾಟ ನಡೆಸಿತ್ತು. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಎಸ್‍ಎಫ್ ಸಿಬ್ಬಂದಿ ಲಿಖಿತ ಬೇಡಿಕೆಯೊಂದಿಗೆ ಪಕ್ಷಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಬಿಎಸ್‍ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಬಿಎಸ್‍ಎಫ್ ಪಾರಿವಾಳದ ವಿರುದ್ಧ ಎಫ್‍ಐಆರ್ ನೋಂದಾಯಿಸಲು ಒತ್ತಾಯಿಸಲಾಗಿದೆ. ಪಾರಿವಾಳವು ಪಕ್ಷಿಯಾಗಿರುವುದರಿಂದ ಅದರ ವಿರುದ್ಧ ಎಫ್‍ಐಆರ್ ದಾಖಲಿಸಬಹುದು ಎಂದು ನಾನು ಭಾವಿಸುವುದಿಲ್ಲ. ಆದರೆ ಅವರ ಅಭಿಪ್ರಾಯಕ್ಕಾಗಿ ನಾವು ಈ ವಿಷಯವನ್ನು ನಮ್ಮ ಕಾನೂನು ತಜ್ಞರಿಗೆ ಹಸ್ತಾಂತರಿಸಿದ್ದೇವೆ. ಪಾರಿವಾಳದ ಕಾಲಿಗೆ ಟ್ಯಾಗ್ ಮಾಡಲಾದ ಸಂಖ್ಯೆಯನ್ನು ವಿಶ್ಲೇಷಿಸಲಾಗುತ್ತಿದ್ದು, ಗೂಢಚರ್ಯೆ ಯತ್ನಗಳನ್ನು ಶಂಕಿಸಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ಪಾರಿವಾಳಗಳನ್ನು ಸೆರೆಹಿಡಿಯಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಧ್ರುವ್ ದಹಿಯಾ ಹೇಳಿದ್ದಾರೆ.

  • ಗಡಿಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ಬಂದ ಯೋಧನಿಗೆ ಗೌರವ

    ಗಡಿಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ಬಂದ ಯೋಧನಿಗೆ ಗೌರವ

    ಬೆಂಗಳೂರು: ಕಾಶ್ಮೀರದ ಪುಲ್ವಾಮ ದಾಳಿ, ಮಹಾರಾಷ್ಟ್ರ, ಮಥುರಾ, ಕಾರ್ಗಿಲ್ ಮುಂತಾದ ನಾನಾ ಕಡೆ ಸತತವಾಗಿ 17 ವರ್ಷ ನಿರಂತರವಾಗಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ಇಂದು ತನ್ನ ಹುಟ್ಟೂರಿಗೆ ಮರಳಿದ ಯೋಧನಿಗೆ, ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಅದ್ದೂರಿ ಸ್ವಾಗತ ಮಾಡಿದ್ದಾರೆ.

    ನೆಲಮಂಗಲ ತಾಲೂಕಿನ ಹೊನ್ನರಾಯನಹಳ್ಳಿಯ ಯೋಧ ಶಿವಕುಮಾರ್. ಸತತ 17 ವರ್ಷ ದೇಶಕ್ಕಾಗಿ ದುಡಿದು ಇಂದು ನಿವೃತ್ತಿ ಹೊಂದಿ ತವರೂರಿಗೆ ಆಗಮಿಸಿದರು. ಯೋಧನ ಆಗಮನವಾಗುತ್ತಿದ್ದಂತೆ ಸ್ನೇಹಿತ ಬಳಗ ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರು ಹೂಮಾಲೆ ಹಾಕಿ ಆರತಿ ಬೆಳಗಿ ಅರಿಶಿನಕುಂಟೆಯಿಂದ ನೆಲಮಂಗಲದವರೆಗೂ ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಿ ಯೋಧನಿಗೆ ಅಭಿನಂದಿಸಿದರು.

    ಮೆರವಣಿಗೆ ವೇಳೆ ರಸ್ತೆಯುದ್ದಕ್ಕೂ ವಂದೇ ಮಾತರಂ ಜೈಕಾರ, ಬೈಕ್ ರ್ಯಾಲಿ ಮೂಲಕ ತವರಿಗೆ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ನಿವೃತ್ತ ಯೋಧ ಶಿವಕುಮಾರ್ ದೇಶಕ್ಕೆ ಅವಶ್ಯಕತೆ ಬಿದ್ದಾಗ ದೇಶ ಕಾಯೋ ಸೈನಿಕನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕರೆ ಹೋಗಿ ಕೆಲಸ ಮಾಡಿ ಅಂತ ಯುವಕರಿಗೆ ಕರೆ ನೀಡಿದರು.

  • ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಳ – ಕೊಡಗಿನ ಜನತೆಯಲ್ಲಿ ಆತಂಕ

    ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಳ – ಕೊಡಗಿನ ಜನತೆಯಲ್ಲಿ ಆತಂಕ

    -ಕೊಡಗಿಗೆ ಕೇರಳದಿಂದ ಬರುವವರೇ ಕಂಟಕವಾಗುತ್ತಾರಾ?
    -ಕೊಡಗಿನಲ್ಲಿ ಮತ್ತೆ ಹೆಚ್ಚಾಗ್ತಿದ್ಯಾ ಕೊರೊನಾ?

    ಮಡಿಕೇರಿ: ಗಡಿ ಜಿಲ್ಲೆ ಕೊಡಗಿಗೆ ಹೊಂದಿಕೊಂಡಂತಿರುವ ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕೊಡಗಿನ ಜನರಲ್ಲಿ ಆತಂಕ ಹುಟ್ಟಿಸಿದೆ.

    ಕೇರಳ ಮತ್ತು ಕೊಡಗಿಗೆ ಸಂಪರ್ಕ ಕಲ್ಪಿಸುವ ಕುಟ್ಟ, ಮಾಕುಟ್ಟ ಮತ್ತು ಕರಿಕೆ ಚೆಕ್ ಪೋಸ್ಟ್‍ಗಳಲ್ಲಿ ಕೇಂದ್ರದ ಕೊರೊನಾ ಹೊಸ ನಿಯಮದ ಪ್ರಕಾರ ಯಾವುದೇ ತಪಾಸಣೆಗಳು ನಡೆಯುತ್ತಿಲ್ಲ. ಜೊತೆಗೆ ಕೇರಳ ಕೊಡಗಿಗೆ ಹೋಗಿ ಬರಲು ಯಾವುದೇ ನಿರ್ಬಂಧಗಳಿಲ್ಲ. ಹೀಗಾಗಿ ನೂರಾರು ವಾಹನಗಳ ಮೂಲಕ ನಿತ್ಯ ಸಾವಿರಾರು ಜನರು ಕೊಡಗಿನಿಂದ ಕೇರಳಕ್ಕೆ, ಕೇರಳದಿಂದ ಕೊಡಗಿಗೆ ಓಡಾಡುತ್ತಿದ್ದಾರೆ. ಇದರಿಂದ ಕೊಡಗಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಉಲ್ಬಣಗೊಂಡು ಬಿಡುತ್ತಾ ಎನ್ನುವ ಆತಂಕ ಎದುರಾಗಿದೆ.

    ಕಳೆದ ಮೂರು ದಿನಗಳ ಹಿಂದೆಯಷ್ಟೇ ಕೊಡಗಿನಲ್ಲಿ ಕೋವಿಡ್ ಪ್ರಕರಣಗಳು ಶೂನ್ಯಕ್ಕೆ ಇಳಿದಿತ್ತು. ಆದರೆ ಅದರ ಮಾರನೇ ದಿನವೇ ಮೂರರಿಂದ ನಾಲ್ಕು ಹೊಸ ಪ್ರಕರಣಗಳು ದಾಖಲಾಗಿವೆ. ಕೊಡಗಿನಿಂದ ಕರಿಕೆ, ಕುಟ್ಟ ಮತ್ತು ಮಾಕುಟ್ಟ ಈ ಮೂರು ಕಡೆಗಳಲ್ಲಿ ಇರುವ ಚೆಕ್‍ಪೋಸ್ಟ್‍ಗಳಲ್ಲಿ ಯಾವುದೇ ತಪಾಸಣೆ ನಡೆಯುತ್ತಿಲ್ಲ. ಬದಲಾಗಿ ಫೆಬ್ರವರಿ 2 ರ ನಂತರ ಕೇರಳದಿಂದ ಕೊಡಗಿಗೆ ಬಂದಿರುವವರು ತಮ್ಮ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಕೊಡಗು ಜಿಲ್ಲಾಡಳಿತ ಸೂಚನೆ ನೀಡಿದೆ.

    ಕೇರಳ -ಕೊಡಗು ಗಡಿ ಭಾಗ ಆಗಿರುವುದರಿಂದ ದಿನ ನಿತ್ಯ ಕೇರಳದ ಕಣ್ಣೂರಿಗೆ ಕೆಎಸ್‍ಆರ್‍ಟಿಸಿ ಬಸ್ಸುಗಳು ಸಂಚಾರ ಮಾಡುತ್ತಿವೆ. ಇದರಲ್ಲಿ ಹೆಚ್ಚಾಗಿ ಕೇರಳದಿಂದ ಕೊಡಗಿಗೆ ಕನಿಷ್ಠ 25 ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಚಾಲಕ ಹಾಗೂ ನಿರ್ವಾಹಕರಿಗೆ ಕೊರೊನಾದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಮುಂಜಾಗ್ರತ ಕ್ರಮವಾಗಿ ಕೇರಳದಿಂದ ಬಂದ ಬಸ್ಸಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಆದರೂ ದಿನ ನಿತ್ಯ ಭಯದಿಂದಲೇ ಹೋಗಿ ಬರುವ ಅನಿವಾರ್ಯತೆ ಇದೆ ಎಂದು ಕೆಎಸ್‍ಆರ್‍ಟಿಸಿ ಬಸ್ಸು ಸಿಬ್ಬಂದಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

    ಕೊಡಗಿನಲ್ಲಿ ಕಳೆದ ಒಂದು ವಾದದಿಂದ ಒಂದು ಪ್ರಕರಣವು ಇಲ್ಲದೆ 0% ನಲ್ಲಿತ್ತು. ಆದರೆ ಕಳೆದ ನಾಲ್ಕು ಐದು ದಿನಗಳಿಂದ ಮೂರರಿಂದ ನಾಲ್ಕು ಪಾಸಿಟಿವ್ ಪ್ರಕರಣ ಮತ್ತೆ ದಾಖಲು ಆಗುತ್ತಿದೆ. ಅಲ್ಲದೆ ಹೊಸ ಎಸ್‍ಓಪಿ ಪ್ರಕಾರ ಅಂತರ ರಾಜ್ಯ ಚೆಕ್ ಪೋಸ್ಟ್‍ನಲ್ಲಿ ಯಾವುದೇ ತಪಾಸಣೆ ಇಲ್ಲ. ಹೀಗಾಗಿ ಕೇರಳದಿಂದ ಕೊಡಗಿಗೆ ಆಗಮಿಸುವವರು ಮುಕ್ತವಾಗಿ ಸಂಚಾರ ಮಾಡುತ್ತಿದ್ದಾರೆ. ಇದರಿಂದ ಕೊಡಗಿಗೆ ಮತ್ತೆ ಕಂಟಕವಾಗುತ್ತಾ ಎಂದು ಜನರಲ್ಲಿ ಆತಂಕ ಶುರುವಾಗಿದೆ.

  • ಒಂದು ಇಂಚು ಜಾಗವನ್ನು ಯಾರಿಗೂ ಬಿಟ್ಟುಕೊಡಲ್ಲ – ರಾಜನಾಥ್ ಸಿಂಗ್

    ಒಂದು ಇಂಚು ಜಾಗವನ್ನು ಯಾರಿಗೂ ಬಿಟ್ಟುಕೊಡಲ್ಲ – ರಾಜನಾಥ್ ಸಿಂಗ್

    – ಗಲ್ವಾನ್ ಕಣಿವೆಯಲ್ಲಿ ಎರಡು ದೇಶಗಳ ಸೈನ್ಯ ಹಿಂದಕ್ಕೆ
    – ನಿರಂತರವಾಗಿ ನಡೆಯುತ್ತಿದೆ ಮಾತುಕತೆ

    ನವದೆಹಲಿ: ಗಲ್ವಾನ್ ಘರ್ಷಣೆಯಿಂದಾಗಿ ಸೃಷ್ಟಿಯಾಗಿದ್ದ ಬಿಕ್ಕಟ್ಟು ಈಗ ತಿಳಿಯಾಗುತ್ತಿದ್ದು ಭಾರತ ಮತ್ತು ಚೀನಾ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.

    ರಾಜ್ಯಸಭೆಯಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಭಾರತ-ಚೀನಾ ಸಂಪೂರ್ಣವಾಗಿ ಹಿಂದೆ ಸರಿಯಲು ಒಪ್ಪಿಕೊಂಡಿದ್ದು, ಪೂರ್ವ ಲಡಾಕ್‍ನ ವಾಸ್ತವ ನಿಯಂತ್ರಣ ರೇಖೆಯ ಪಾಂಗ್ಯಾಂಗ್ ತ್ಸೋ ಸರೋವರದ ಬಳಿ ಪರಿಸ್ಥಿತಿ ಸುಧಾರಿಸಿದೆ. ಅಲ್ಲದೆ 48 ಗಂಟೆಗಳಲ್ಲಿ ಕಮಾಂಡರ್ ಮಟ್ಟದಲ್ಲಿ ಸಭೆ ನಡೆಯುಲಿದೆ ಎಂದು ಮಾಹಿತಿ ನೀಡಿದರು.

    ಸೇನೆಯನ್ನು ಫಿಂಗರ್ 8 ಪ್ರದೇಶಕ್ಕೆ ಹಿಂದಿರುಗಿಸಲು ಚೀನಾ ಒಪ್ಪಿಕೊಂಡಿದ್ದು, ನಮ್ಮ ಸೈನಿಕರನ್ನು ಸಹ ಫಿಂಗರ್ 3ರ ಧನ್ ಸಿಂಗ್ ಥಾಪಾ ಶಾಶ್ವತ ನೆಲೆಗೆ ಕಳುಹಿಸಲಾಗುತ್ತಿದೆ. ಚೀನಾ ತನ್ನ ಸೈನ್ಯವನ್ನು ಪಾಂಗ್ಯಾಂಗ್ ತ್ಸೋ ಸರೋವರದ ಉತ್ತರ ದಂಡೆಯ ಫಿಂಗರ್ 8ಕ್ಕೆ ಕಳುಹಿಸುತ್ತಿದೆ. ಭಾರತದ ಸೈನಿಕರನ್ನು ಸಹ ಫಿಂಗರ್ 3ರ ಶಾಶ್ವತ ನೆಲೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

    ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಯ ಬೇರ್ಪಡಿಸುವಿಕೆ ಒಪ್ಪಂದದ ಬಗ್ಗೆ ಚೀನಾದೊಂದಿಗಿನ ನಮ್ಮ ಮಾತುಕತೆ ನಿರಂತರವಾಗಿ ನಡೆಯುತ್ತಿದೆ. ಒಪ್ಪಂದದ ಬಳಿಕ ಈ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರನ್ನು ಹಿಂಪಡೆಯಲಾಗುವುದು. ಭಾರತದ ಒಂದು ಇಂಚು ಜಾಗವನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ಭದ್ರತೆಯ ವಿಚಾರ ಬಂದಾಗ ಯಾರೊಂದಿಗೂ ಭಾರತ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಇದೇ ವೇಳೆ ಭರವಸೆ ನೀಡಿದರು.

    ಎಲ್‍ಒಸಿ ಬಳಿ ಶಾಂತಿಯುತ ಪರಿಸ್ಥಿತಿಯನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಭಾರತ ಯಾವಾಗಲೂ ದ್ವಿಪಕ್ಷೀಯ ಸಂಬಂಧಗಳನ್ನು ಕಾಪಾಡಿಕೊಳ್ಳಲು ಒತ್ತು ನೀಡಿದೆ. ಮೊದಲನೇಯದಾಗಿ ಎರಡೂ ಕಡೆಯವರು ಎಲ್‍ಎಸಿ ನಿಯಮಗಳಿಗೆ ಬದ್ಧವಾಗಿರಬೇಕು ಹಾಗೂ ಗೌರವಿಸಬೇಕು, ಎರಡನೇಯದಾಗಿ ಯಾವುದೇ ಕಡೆಯಿಂದಲೂ ಸ್ಥಿತಿಗತಿ ಬದಲಿಸಲು ಯತ್ನಿಸಬಾರದು. ಮೂರನೇಯದಾಗಿ ಎಲ್ಲ ಹೊಂದಾಣಿಕೆಗಳನ್ನು ಎರಡೂ ಪಕ್ಷಗಳು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.

    ಲಡಾಖ್ ಗಡಿಯಲ್ಲಿ ಜೂನ್ 15 ರಂದು ನಡೆದ ಘರ್ಷಣೆಯಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದರು. ಈ ಘಟನೆಯ ಬಳಿಕ ಭಾರತ ಚೀನಾ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಿತ್ತು.

    ಈ ವೇಳೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಭಾರತದ ಸೇನೆ ಚೀನಾ ಕಡೆಯಲ್ಲೂ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ತಿಳಿಸಿತ್ತು. ಚೀನಾದ 43 ಯೋಧರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು.

  • ಉದ್ಧವ್ ಠಾಕ್ರೆಯಂತವರು ನೂರು ಮಂದಿ ಬಂದ್ರೂ ಬೆಳಗಾವಿ ನಮ್ಮದೇ: ನಾರಾಯಣ ಗೌಡ

    ಉದ್ಧವ್ ಠಾಕ್ರೆಯಂತವರು ನೂರು ಮಂದಿ ಬಂದ್ರೂ ಬೆಳಗಾವಿ ನಮ್ಮದೇ: ನಾರಾಯಣ ಗೌಡ

    ಬೆಂಗಳೂರು: ಉದ್ಧವ್ ಠಾಕ್ರೆ ಅಂತವರು ನೂರು ಮಂದಿ ಬಂದರೂ ಕರ್ನಾಟಕದಲ್ಲಿರೋ ಪ್ರದೇಶ ನಮ್ಮಲ್ಲೇ ಇರುತ್ತವೆ ಎಂದು ಕರವೇ ನಾರಾಯಣ ಗೌಡ ಹೇಳಿದ್ದಾರೆ. ಬಾಳ್ ಠಾಕ್ರೆ ನಂತರ ಈ ಅಧ್ಯಾಯ ಮುಗಿದಿದೆ ಎಂದುಕೊಂಡಿದ್ದೆ ಆದರೀಗ ಅವರ ಮಗ ಉದ್ಧವ್ ಠಾಕ್ರೆ ಗಡಿ ವಿವಾದವನ್ನು ಪ್ರಾರಂಭಿಸಿದ್ದಾರೆ.

    ಇಂದು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮಹಾಜನ್ ವರದಿಯನ್ನು ಸರಿಯಾಗಿ ಓದಿ ತಿಳಿಯದುಕೊಳ್ಳದೇ ಇಂತಹ ಉದ್ಧಾಟತನದ ಹೇಳಿಕೆ ನೀಡುವುದು ಸಿಎಂ ಸ್ಥಾನಕ್ಕೆ ಯೋಗ್ಯತೆ ತರುವಂತಹದಲ್ಲ. ಅವರ ಉದ್ದೇಶ ಏನು ಅಂತ ಗೊತ್ತಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧಾವ್ ಠಾಕ್ರೆ ಪದೇ ಪದೇ ಗಡಿ ವಿಚಾರದ ಬಗ್ಗೆ ಮಾತನಾಡುತ್ತಾರೆ. ಮರಾಠಿಗರನ್ನು ಓಲೈಸಿಕೊಳ್ಳುವ ಸಲುವಾಗಿ ಕನ್ನಡಿಗರನ್ನು ಕೆರಳಿಸುವಂತಹ ಹೇಳಿಕೆಗಳನ್ನು ಏಕೆ ನೀಡುತ್ತಾರೆ ಎಂದು ತಿಳಿದಿಲ್ಲ. ಬೆಳಗಾವಿಯಲ್ಲಿ ಒಂದೆಡೆ ಎಂಇಎಸ್ ಗಳಾದರೆ ಇನ್ನೊಂದೆಡೆ ಮಹಾರಾಷ್ಟ್ರದ ರಾಜಕಾರಣಿಗಳು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬೆಳಗಾವಿ, ನಿಪ್ಪಾಣಿ, ಕಾರವಾರ ಇವು ಕರ್ನಾಟಕದ ಅವಿಭಾಜ್ಯ ಅಂಗಗಳು ಎಂದು ಮಹಾಜನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಮಹಾಜನ್ ಕೂಡ ಮಹಾರಾಷ್ಟ್ರದವರೇ ಆಗಿದ್ದವರು. ಮಹಾಜನ್ ವರದಿಯನ್ನು ನೀಡಬೇಕೆಂದು ಒತ್ತಾಯಿಸಿದವರು ಕೂಡ ಮಹಾರಾಷ್ಟ್ರದವರೆ. ಮಹಾರಾಷ್ಟ್ರದ ಒತ್ತಾಯದ ಮೇರೆಗೆ ಅಂದು ಮಹಾಜನ್ ವರದಿಯನ್ನು ನೇಮಕ ಮಾಡಲಾಯಿತು. ಅದೇ ಮಹಾಜನ್ ನೀಡಿದ ವರದಿಯನ್ನು ಕರ್ನಾಟಕ ಸ್ವೀಕಾರ ಮಾಡಿದೆ. ಆದ್ರೆ ಮಹಾರಾಷ್ಟ್ರ ಸ್ವೀಕರಿಸಿಲ್ಲ ಎಂದರು.

    ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ನಮ್ಮ ರಾಜ್ಯದ ರಾಜಕಾರಣಿಗಳು ಸರಿಯಾದ ರೀತಿಯಲ್ಲಿ ಉತ್ತರ ಕೊಡದ ಕಾರಣ ಅವರು ಪದೇ ಪದೇ ಕಾಲು ಕೆರೆದುಕೊಂಡು ಗಡಿ ವಿಚಾರಕ್ಕೆ ಬರುತ್ತಿದ್ದಾರೆ. ಬೆಳಗಾವಿಯಂತಹ ಪ್ರದೇಶಗಳಲ್ಲಿ ಜನರು ಗೂಂಡಾಗಿರಿ ಮಾಡುವಂತದ್ದು, ಪುಂಡಾಟಿಕೆ ನಡೆಸುವಂತಹದ್ದು, ಇದು ಕರ್ನಾಟಕದ ಗಡಿಭಾಗದಲ್ಲಿ ಇರುವಂತಹ ರಾಜಕಾರಣಿಗಳ ದೌರ್ಬಲ್ಯಗಳಾಗಿವೆ. ಇಂದು ಅವರನ್ನು ಇಷ್ಟರ ಮಟ್ಟಿಗೆ ಮಾತನಾಡಲು ಕಾರಣವಾಗಿದೆ. ಗಡಿ ಭಾಗದ ರಾಜಕಾರಣಿಗಳಿಗೆ ಒಂದು ಚೂರು ಕೂಡ ನನ್ನ ನಾಡು, ನನ್ನ ಭಾಷೆ, ನನ್ನ ಸಂಸ್ಕøತಿ ಎಂಬ ಸ್ವಾಭಿಮಾನವಿಲ್ಲ. ನಾಡು, ನುಡಿ, ಗಡಿ ವಿಚಾರ ಬಂದಾಗ ನಮ್ಮ ರಾಜ್ಯ ರಾಜಕಾರಣಿಗಳು ಉಗ್ರವಾಗಿ ಖಂಡಿಸುವ ಕೆಲಸ ಮಾಡಬೇಕು ಎಂದರು.

    ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಅಷ್ಟೆಲ್ಲಾ ಮಾತನಾಡುವಾಗ ಕರ್ನಾಟಕದ ಮುಖ್ಯಮಂತ್ರಿಗಳು ಏಕೆ ಮಾತನಾಡಬಾರದು, ಏಕೆ ಸರಿಯಾದ ರೀತಿಯಲ್ಲಿ ಉತ್ತರ ನೀಡಬಾರದು ಎಂದು ಪ್ರಶ್ನಿಸಿದರು. ನಮ್ಮ ರಾಜಕಾರಣಿಗಳು ಉತ್ತರ ನೀಡದ ಪರಿಣಾಮ ಇಂದು ಅವರು ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಮಾತನಾಡಿ ಮಹಾಜನ್ ವರದಿಯನ್ನು ಓದಿ ಅದನ್ನು ಒಪ್ಪಿಕೊಂಡಿದ್ದೇವೆ. ಮಹಾಜನ್ ವರದಿ ಪ್ರಕಾರ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು, ಅದನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ಅದು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಬೇಕು. ಇಲ್ಲದೇ ಹೋದರೆ ಮತ್ತೆ ಮತ್ತೆ ಕ್ಯಾತೆ ತೆಗೆಯುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.

    ಉದ್ಧವ್ ಠಾಕ್ರೆ ಅಂತವರು ನೂರು ಮಂದಿ ಬಂದರೂ ಕರ್ನಾಟಕದಲ್ಲಿರುವ ಬೆಳಗಾವಿ ಪ್ರದೇಶ ನಮ್ಮಲ್ಲೆ ಇರುತ್ತವೇ. ಇದೇ ರೀತಿ ಮಹಾರಾಷ್ಟ್ರ ಸರ್ಕಾರದವರು ಖ್ಯಾತೆ ತಗೆಯುತ್ತಿದ್ದರೆ ನಾವು ಹೋರಾಟ ಮಾಡುತ್ತೆವೇ ಎಂಬ ಎಚ್ಚರಿಕೆ ಸಂದೇಶವನ್ನ ಕರವೇ ನಾರಾಯಣ ಗೌಡ ರವಾನಿಸಿದ್ದಾರೆ.

  • ಗಡಿ ದಾಟಿ ಬಂದಿದ್ದ ಬಾಲಕನನ್ನು ಪಾಕ್‍ಗೆ ಹಸ್ತಾಂತರಿಸಿದ ಭಾರತೀಯ ಸೇನೆ

    ಗಡಿ ದಾಟಿ ಬಂದಿದ್ದ ಬಾಲಕನನ್ನು ಪಾಕ್‍ಗೆ ಹಸ್ತಾಂತರಿಸಿದ ಭಾರತೀಯ ಸೇನೆ

    ಶ್ರೀನಗರ: ಕಾಶ್ಮೀರ ಗಡಿಯನ್ನು ಅಜಾಗರೂಕತೆಯಿಂದ ದಾಟಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಬಾಲಕನನ್ನು ಭಾರತೀಯ ಸೇನೆ ಶುಕ್ರವಾರ ವಾಪಸ್ ಕಳುಹಿಸುವ ಮೂಲಕ ಭಾರತೀಯ ಸೇನೆ ಮಾನವೀಯತೆಯನ್ನು ಮೆರೆದಿದ್ದಾರೆ.

    ಪಾಕಿಸ್ತಾನದ ಮಿರ್ಪುರ್ ಜಿಲ್ಲೆಯ ಅಲಿ ಹೈದರ್ (14) ಅಜಾಗರೂಕತೆಯಿಂದ ಪೂಂಚ್ ಜಿಲ್ಲೆಯ ಗಡಿ ದಾಟಿ ಜಮ್ಮು ಮತ್ತು ಕಾಶ್ಮೀರದ ಮೂಲಕ ಭಾರತಕ್ಕೆ ಬಂದಿದ್ದಾನೆ. ಬಾಲಕ ಮುಗ್ಧ ಹಾಗೂ ನಿರಾಪರಾಧಿಯಾಗಿದ್ದು, ಆತನಿಗೆ ಆಹಾರ, ಬಟ್ಟೆ ಮತ್ತು ಆಶ್ರಯವನ್ನು ನೀಡಲಾಯಿತು ಎಂದು ಭಾರತೀಯ ಸೇನೆ ತಿಳಿಸಿದೆ.

    ಮಾನವೀಯತೆಯ ದೃಷ್ಟಿಯಿಂದ ಅಲಿ ಹೈದರ್‍ನನ್ನು ವಾಪಸ್ ಕಳುಹಿಸುವಂತೆ ಜನವರಿ 3ರಂದು ಪಾಕಿಸ್ತಾನ ಅಧಿಕಾರಿಗಳು ಮನವಿ ಮಾಡಿರುವುದಾಗಿ ತಿಳಿಸಿದರು.

    ಇದೇ ರೀತಿ 2020ರ ಡಿಸೆಂಬರ್ 24ರಂದು ಪೂಂಚ್ ಸೆಕ್ಟರ್ ಮೂಲಕ ಅಜಾಗರೂಕತೆಯಿಂದ ಭಾರತೀಯ ಹುಡುಗ ಮೊಹಮ್ಮದ್ ಬಶೀರ್ ಪಾಕಿಸ್ತಾನಕ್ಕೆ ಹೋಗಿದ್ದನು. ಆತನನ್ನು ವಾಪಸ್ ಕಳುಹಿಸುವಂತೆ ಭಾರತವು ಮನವಿ ಮಾಡಿತ್ತು. ಪಾಕಿಸ್ತಾನ ಅಧಿಕಾರಿಗಳು 16 ದಿನಗಳ ಕಾಲ ಬಂಧನದಲ್ಲಿದ್ದ ಮೊಹಮ್ಮದ್ ಬಶೀರ್‍ನನ್ನು ಹಸ್ತಾಂತರಿಸಿದ್ದರು ಎಂದು ತಿಳಿಸಿದರು.

    ಪಾಕಿಸ್ತಾನ ಅಧಿಕಾರಿಗಳು ಪ್ರಸ್ತಾಪವನ್ನು 2021ರ ಜನವರಿ 6ರಂದು ಒಪ್ಪಿಕೊಂಡು ಇದೀಗ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ನಾಗರಿಕ ಆಡಳಿತ ಬೆಂಬಲದೊಂದಿಗೆ, ಅಲಿ ಹೈದರ್‍ನನ್ನು ಪೂಂಚ್ ರಾವಲಕೋಟ್ ಕ್ರಾಸಿಂಗ್ ಪಾಯಿಂಟ್ ಮೂಲಕ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗಿದೆ. ಪಾಕಿಸ್ತಾನ ಅಧಿಕಾರಿಗಳು 16 ದಿನಗಳ ಕಾಲ ಬಂಧನದಲ್ಲಿದ್ದ ಮೊಹಮ್ಮದ್ ಬಶೀರ್ ಅವರನ್ನು ಹಸ್ತಾಂತರಿಸಿದ್ದರು ಎಂದು ತಿಳಿಸಿದರು.

  • ಇಂಡೋ- ಚೀನಾ ಗಡಿಯಲ್ಲಿ ಅಪಘಾತ – ನಾಲ್ವರು ಸೈನಿಕರು ದುರ್ಮರಣ

    ಇಂಡೋ- ಚೀನಾ ಗಡಿಯಲ್ಲಿ ಅಪಘಾತ – ನಾಲ್ವರು ಸೈನಿಕರು ದುರ್ಮರಣ

    ಗ್ಯಾಂಗ್ಟಾಕ್: ನಾಲ್ವರು ಸೈನಿಕರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಭಾರತ ಚೀನಾ ಗಡಿಯಲ್ಲಿರುವ ಸಿಕ್ಕಿಂ ರಾಜ್ಯ ನಾಥುಲಾ ರಸ್ತೆಯಲ್ಲಿ ನಡೆದಿದೆ.

    ದಟ್ಟ ಹಿಮ ಆವರಿಸಿದ್ದರಿಂದ ಸೇನಾ ವಾಹನ ಸ್ಕಿಡ್‌ ಆಗಿ ಅಪಘಾತ ಸಂಭವಿಸಿದೆ ಸೇನಾ ಮೂಲಗಳು ತಿಳಿಸಿವೆ.

    ಸೇನಾ ವಾಹನದಲ್ಲಿ ಐವರು ಸೇನಾ ಸಿಬ್ಬಂದಿ ಇದ್ದರು. ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು ಒಬ್ಬರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಸೇನಾ ಸಿಬ್ಬಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ಕಳುಹಿಸಲಾಗಿದೆ.