Tag: ಗಡಿ ಪ್ರದೇಶ

  • ಗಡಿ ಪ್ರದೇಶದಲ್ಲಿ ಕಾಲು ಸೇತುವೆ ಬಂದ್ ಮಾಡ್ತಿರೋ ನೇಪಾಳ!

    ಗಡಿ ಪ್ರದೇಶದಲ್ಲಿ ಕಾಲು ಸೇತುವೆ ಬಂದ್ ಮಾಡ್ತಿರೋ ನೇಪಾಳ!

    ನವದೆಹಲಿ: ಚೀನಾ ಪ್ರಚೋದನೆಯಿಂದ ನೇಪಾಳ ಗಡಿ ಪ್ರದೇಶದಲ್ಲಿ ಖ್ಯಾತೆ ತೆಗೆದಿದ್ದು, ಹೊಸ ಭೂಪಟದೊಂದಿಗೆ ಭಾರತ ಪ್ರದೇಶಗಳನ್ನು ತನ್ನದೆಂದು ವಾದ ಮಂಡಿಸಿದ್ದು ಎಲ್ಲರಿಗೂ ತಿಳಿದಿದೆ. ಸದ್ಯ ಭಾರತದ ವಿರುದ್ಧ ದ್ವೇಷ ಸಾಧಿಸುವ ಮತ್ತಷ್ಟು ಕ್ರಮಗಳಿಗೆ ಮುಂದಾದಂತೆ ಕಾಣುತ್ತಿರುವ ನೇಪಾಳ, ಗಡಿ ಪ್ರದೇಶದಲ್ಲಿ ಭಾರತದೊಂದಿಗೆ ಸಂಪರ್ಕ ಕಲ್ಪಿಸುವ ಕಾಲು ಸೇತುವೆ (ಕಾಲುಸಂಕ)ಗಳನ್ನು ಹಲವು ಬಾರಿ ಬಂದ್ ಮಾಡಿರುವ ಕುರಿತು ವರದಿಯಾಗಿದೆ.

    ನೇಪಾಳ ಕಾಲುಸಂಕಗಳನ್ನು ಬಂದ್ ಮಾಡುತ್ತಿರುವ ಪರಿಣಾಮ ಗಡಿ ಪ್ರದೇಶದಲ್ಲಿ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರಾಖಂಡ ಧಾರ್ಚುಲಾದ ಸಬ್ ಡಿವಿಜನ್ ಮ್ಯಾಜಿಸ್ಟ್ರೇಟ್ ಅನಿಲ್ ಕುಮಾರ್ ತಿಳಿಸಿದ್ದಾರೆ. ಇದನ್ನು ಓದಿ: ನೇಪಾಳದ 10 ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ ಚೀನಾ- ನೇಪಾಳ ಸರ್ಕಾರದ ವರದಿ

    Recently, a number of times Nepal closed the footbridge connecting India-Nepal, disrupting the supply of essential commodities into their country. We’ll raise this issue in our next friendly meeting with Nepal: Anil Kumar Shukla, SDM Dharchula, Uttarakhand pic.twitter.com/rTEIkKYHaN

    ಧಾರ್ಚುಲಾ ಸಮೀಪದ ಭಾರತ ಮತ್ತು ನೇಪಾಳ ಒಂದು ಮಾಡುವ ಸೇತುವೆಯನ್ನು ನೇಪಾಳ ಭಾಗದಲ್ಲಿ ಹಲವು ಬಾರಿ ಬಂದ್ ಮಾಡಲಾಗಿದೆ ಎಂದು ಅನಿಲ್ ಕುಮಾರ್ ಹೇಳಿದ್ದಾರೆ. ಇತ್ತೀಚೆಗೆ ನೇಪಾಳ ಈ ರೀತಿ ಮಾಡುತ್ತಿದೆ ಎಂದು ಅವರು ತಿಳಿಸಿದ್ದು, ಈ ಕುರಿತು ಮುಂದಿನ ಸಭೆಗಳಲ್ಲಿ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಇದನ್ನು ಓದಿ: ಭಾರತದಿಂದ ನನ್ನ ಎಳೆದೊಯ್ದು ಸುಳ್ಳು ಹೇಳಲು ಒತ್ತಾಯಿಸಿದ್ರು: ನೇಪಾಳದ ವಶದಲ್ಲಿದ್ದ ವ್ಯಕ್ತಿ

    ಕಳೆದ ತಿಂಗಳು ಭಾರತ ವಿರುದ್ಧ ಗಂಭೀರ ಆರೋಪ ಮಾಡಿದ್ದ ನೇಪಾಳ ಪ್ರಧಾನಿ ಕೆಪಿ ಒಲಿ, ನೇಪಾಳದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಲು ಭಾರತದ ವೈರಸ್ ಕಾರಣ ಎಂದಿದ್ದರು. ಅಲ್ಲದೇ ಚೀನಾ ಮತ್ತು ಇಟಲಿ ವೈರಸ್‍ಗಿಂತಲೂ ಭಾರತ ವೈರಸ್ ಪ್ರಮಾದಕರ ಎಂದು ಆರೋಪಿಸಿದ್ದರು.

  • ನೇಪಾಳ ರೇಡಿಯೋದಲ್ಲಿ ಭಾರತ ವಿರೋಧಿ ಹಾಡು!

    ನೇಪಾಳ ರೇಡಿಯೋದಲ್ಲಿ ಭಾರತ ವಿರೋಧಿ ಹಾಡು!

    ನವದೆಹಲಿ: ಹೊಸ ಭೂಪಟದ ಸಂಬಂಧ ನೆರೆರಾಷ್ಟ್ರ ನೇಪಾಳದೊಂದಿಗೆ ವಿವಾದ ಹೆಚ್ಚಾಗುತ್ತಿರುವ ಬೆನ್ನಲ್ಲೇ ಅಲ್ಲಿನ ಸರ್ಕಾರ ಜನರಲ್ಲಿ ಭಾರತದ ವಿರುದ್ಧ ದ್ವೇಷವನ್ನು ಹೆಚ್ಚಿಸಲು ರೇಡಿಯೋಗಳಲ್ಲಿ ಭಾರತ ವಿರೋಧಿ ಹಾಡುಗಳನ್ನು ಪ್ರಸಾರ ಮಾಡುತ್ತಿದೆ ಎಂದು ವರದಿಯಾಗಿದೆ.

    ಗಡಿ ಪ್ರದೇಶದಲ್ಲಿರುವ ಭಾರತದ ಉತ್ತರಾಖಂಡ ರಾಜ್ಯದ ಹಳ್ಳಿಗಳಲ್ಲಿ ನೇಪಾಳ ರೇಡಿಯೋ ಸಿಗ್ನಲ್ ಲಭ್ಯವಾಗುತ್ತವೆ. ಈ ವೇಳೆ ಭಾರತ ವಿರೋಧಿ ಹಾಡುಗಳು ಪ್ರಸಾರವಾಗುತ್ತಿರುವುದು ಖಚಿತವಾಗಿದೆ ಎಂಬ ಮಾಹಿತಿ ಲಭಿಸಿದೆ. ಆ ಮೂಲಕ ಭಾರತ ವಿರುದ್ಧ ವ್ಯವಸ್ಥಿತವಾಗಿ ಜನರಿಗೆ ಅಪಪ್ರಚಾರ ನಡೆಸುವತ್ತ ನೇಪಾಳ ಸರ್ಕಾರ ಮುಂದಾಗಿದೆ. ಇದನ್ನು ಓದಿ: ಚೀನಾ ವೈರಸ್‍ಗಿಂತಲೂ ಭಾರತದ ವೈರಸ್ ಮಾರಕ – ನೇಪಾಳ ಪ್ರಧಾನಿಯಿಂದ ವಿವಾದಾತ್ಮಕ ಮಾತು

    ಕೆಲವು ನೇಪಾಳಿ ರೇಡಿಯೋಗಳು ನೇಪಾಳಿ ಹಾಡುಗಳೊಂದಿಗೆ ಭಾರತದ ವಿರೋಧಿ ಭಾಷಣಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿದೆ ಎಂದು ಧಾರ್ಚುಲಾ ಉಪಭಾಗದ ದಂಟು ಗ್ರಾಮದ ನಿವಾಸಿ ಶಾಲು ದತಾಲ್ ಅವರು ಮಾಹಿತಿ ನೀಡಿದ್ದಾರೆ. ಗಡಿಯ ಎರಡೂ ಬದಿಗಳಲ್ಲಿರುವ ಜನರು ನೇಪಾಳಿ ಹಾಡುಗಳನ್ನ ಕೇಳುತ್ತಾರೆ. ಈ ವೇಳೆ ನೇಪಾಳಿ ರಾಜಕೀಯ ನಾಯಕರ ಭಾರತ ವಿರೋಧಿ ಭಾಷಣಗಳು ಸಹ ಪ್ರಸಾರ ಮಾಡಲಾಗುತ್ತಿದೆ ಎಂದು ಪಿಟಿಐ ವರದಿ ಮಾಡಿದೆ. ಇದನ್ನು ಓದಿ: ನೇಪಾಳ ಆಯ್ತು, ಈಗ ಢಾಕಾದತ್ತ ಕೈಚಾಚಿದ ಬೀಜಿಂಗ್‌

    ಸ್ಥಳೀಯ ನಿವಾಸಿ ನೀಡಿರುವ ಮಾಹಿತಿ ಅನ್ವಯ, ನಯಾ ನೇಪಾಳ ಮತ್ತು ಕಲಾಪಾಣಿ ರೇಡಿಯೋ ಸೇರಿದಂತೆ ಕೆಲ ಹಳೆ ವಾಹಿನಿಗಳು ಕೂಡ ಇಂತಹ ಹಾಡು, ಭಾಷಣಗಳಲ್ಲಿ ಕಲಾಪಾನಿ ಪ್ರದೇಶ ನೇಪಾಳದೆಂದು ಬಿಂಬಿಸುತ್ತಿರುವ ವರದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ತಿಳಿಸಿದ್ದಾರೆ. ಈ ವಾಹಿನಿಗಳು ನೇಪಾಳದ ಧಾರ್ಚುಲಾದ ಜಿಲ್ಲಾ ಕೇಂದ್ರದ ಸಮೀಪದ ಚಬ್ರಿಗರ್ ಎಂಬ ಪ್ರದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಲಭಿಸಿದೆ. ಕೇವಲ ಮೂರು ವ್ಯಾಪಿಯ ದೂರದಲ್ಲಿ ಇರುವುದರಿಂದ ರೇಡಿಯೋ ತರಂಗಗಳು ಗಡಿ ಪ್ರದೇಶದ ಹಳ್ಳಿಗಳಲ್ಲಿ ಸುಲಭವಾಗಿ ಕೇಳಬಹುದಾಗಿದೆ.

    ‘ಕಾಲಾಪಾನಿ, ಲಿಪುಲೇಕ್, ಲಿಂಪಿಯಾಮುದ್ರ ಪ್ರದೇಶಗಳು ನಮ್ಮದು. ಜನರೇ ಎಚ್ಚೆತ್ತುಕೊಳ್ಳಿ’ ಎಂಬ ಸರಾಂಶವಿರುವ ಹಾಡು, ಭಾಷಣಗಳು ಪ್ರಸಾರವಾಗುತ್ತಿದೆ ಎಂದು ಸ್ಥಳೀಯ ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಭಾರತದಿಂದ ನನ್ನ ಎಳೆದೊಯ್ದು ಸುಳ್ಳು ಹೇಳಲು ಒತ್ತಾಯಿಸಿದ್ರು: ನೇಪಾಳದ ವಶದಲ್ಲಿದ್ದ ವ್ಯಕ್ತಿ

    ಇಂತಹ ವರದಿಗಳು ಪ್ರಸಾರವಾಗುತ್ತಿರುವ ಬಗ್ಗೆ ಸ್ಥಳೀಯ ಆಡಳಿತ ಹಾಗೂ ಪೊಲೀಸರಿಗೆ ಮಾಹಿತಿ ಲಭಿಸಿಲ್ಲ ಎನ್ನಲಾಗಿದೆ. ಇಂತಹ ವಿಚಾರಗಳ ಬಗ್ಗೆ ನಮ್ಮ ಗುಪ್ತಚರದಿಂದ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಪಿಥೋರಗರ್ ಪೊಲೀಸ್ ವರಿಷ್ಠಾಧಿಕಾರಿ ಪ್ರೀತಿ ಪ್ರದರ್ಶಿನಿ ಪ್ರತಿಕ್ರಿಯೆ ನೀಡಿದ್ದಾರೆ.

    ಭಾರತದ ಭೂ ಭಾಗ ಕಾಲಾಪಾನಿ, ಲಿಂಪಿಯಾಧುರಾ, ಲಿಪುಲೇಖ್ ಪ್ರದೇಶಗಳನ್ನು ತನ್ನ ಪ್ರದೇಶ ಎಂದು ನೇಪಾಳ ಹೊಸ ರಾಜಕೀಯ ನಕ್ಷೆ ಬಿಡುಗಡೆ ಮಾಡಿ ಸಂಸತ್‍ನಲ್ಲಿ ಅಂಗೀಕರಿಸಿತ್ತು. ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಭಾರತ, ನೇಪಾಳದ ಹೊಸ ನಕ್ಷೆ ರಾಜಕೀಯ ಲಾಭಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದಿತ್ತು.

  • ರಾಯಚೂರಿನ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿ ವಸೂಲಿ ದಂಧೆ- ಹಣ ಕೊಟ್ರೆ ಎಲ್ಲರಿಗೂ ಎಂಟ್ರಿ

    ರಾಯಚೂರಿನ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿ ವಸೂಲಿ ದಂಧೆ- ಹಣ ಕೊಟ್ರೆ ಎಲ್ಲರಿಗೂ ಎಂಟ್ರಿ

    ರಾಯಚೂರು: ಜಿಲ್ಲೆಯಲ್ಲಿ 50, 100 ರೂಪಾಯಿ ಆಸೆಗೆ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿನ ಸಿಬ್ಬಂದಿ ಕೊರೊನಾ ವೈರಸ್ ಹರಡಿಸುತ್ತಿದ್ದಾರಾ ಎನ್ನುವ ಆತಂಕ ಮೂಡಿದೆ.

    ಆಂಧ್ರ ಪ್ರದೇಶದಿಂದ ಬರುವವರು ಚೆಕ್‌ಪೋಸ್ಟ್‌ನಲ್ಲಿನ ಪೊಲೀಸರಿಗೆ 100 ರೂ. ಕೊಟ್ಟರೆ ಸಾಕು ಹೋಂ ಕ್ವಾರಂಟೈನ್ ಭೀತಿಯೇ ಇಲ್ಲ. ಕೊರೊನಾ ಹರಡುವಿಕೆ ತಡೆಗಾಗಿ ಮಾಡಿರುವ ಚೆಕ್‍ಪೋಸ್ಟ್ ಸಿಬ್ಬಂದಿಯೇ ರಾಯಚೂರಿನಲ್ಲಿ ಕೊರೊನಾ ಹರಡುವುದಕ್ಕೆ ಕಾರಣರಾಗುತ್ತಿದ್ದಾರೆ. ಜಿಲ್ಲೆಯ ಗಿಲ್ಲೆಸುಗೂರು ಚೆಕ್‍ಪೋಸ್ಟ್‍ನಲ್ಲಿ ಪೋಲೀಸರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ ಕೃತ್ಯ ಈಗ ಬಟಾಬಯಲಾಗಿದೆ.

    ಆಂಧ್ರದ ಗಡಿಭಾಗದಲ್ಲಿನ ಗಿಲ್ಲೆಸುಗೂರು ಚೆಕ್‌ಪೋಸ್ಟ್‌ನಲ್ಲಿ ಹಣ ಕೊಟ್ಟರೆ ಸಾಕು ಆರಾಮಾಗಿ ಆಂಧ್ರಪ್ರದೇಶಕ್ಕೂ ಹೋಗಬಹುದು, ಆಂಧ್ರದಿಂದ ರಾಜ್ಯಕ್ಕೂ ಬರಬಹುದು ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಚೆಕ್‌ಪೋಸ್ಟ್‌ನಲ್ಲಿ ಯಾವುದೇ ವಾಹನಗಳ ತಪಾಸಣೆಯಾಗಲಿ, ಆರೋಗ್ಯ ತಪಾಸಣೆಯಾಗಲಿ ನಡೆಯುತ್ತಲೇ ಇಲ್ಲ. ಈಗ ಮಂತ್ರಾಲಯಕ್ಕೆ ಬಸ್ ಓಡಾಟ ಆರಂಭವಾಗಿದ್ದರೂ ಹೋಂ ಕ್ವಾರಂಟೈನ್ ಜಾರಿಯಲ್ಲಿದೆ. ಸೇವಾಸಿಂಧುವಿನಲ್ಲಿ ಅರ್ಜಿ ಹಾಕಿದವರಿಗೆ ಮಾತ್ರ ಸಾರಿಗೆ ಬಸ್‍ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ ಚೆಕ್‌ಪೋಸ್ಟ್‌ನಲ್ಲಿ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿರುವ ಪೊಲೀಸ್ ಸಿಬ್ಬಂದಿ ಹಣ ತೆಗೆದುಕೊಂಡು ಜನರನ್ನ ಒಳ ಬಿಡುತ್ತಿದ್ದಾರೆ. ಅಂತರರಾಜ್ಯ ಗಡಿಯಲ್ಲಿ ಬೈಕ್, ಕಾರ್, ಟಂಟಂಗಳು ಯಾವುದೇ ಆತಂಕವಿಲ್ಲದೆ ಓಡಾಡುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 414ಕ್ಕೆ ಏರಿದ್ದು, ದಿನೇ ದಿನೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ಜಿಲ್ಲಾಡಳಿತ ಖಾಸಗಿ ವೈದ್ಯರ ಮೊರೆ ಹೋಗಿದ್ದು ನಗರದ ನವೋದಯ ವೈದ್ಯಕೀಯ ಬೋಧಕ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳನ್ನ ವೈದ್ಯಕೀಯ ಸೇವೆಗೆ ಬಳಸಿಕೊಳ್ಳಲು ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಚೆಕ್ ಪೋಸ್ಟ್ ಗಳಲ್ಲಿನ ಸಿಬ್ಬಂದಿ ಹಣ ವಸೂಲಿ ಮಾಡಿ ಆಂಧ್ರಪ್ರದೇಶದಿಂದ ಬರುವವರನ್ನ ರಾಜ್ಯಕ್ಕೆ ಬಿಡುತ್ತಿರುವುದು ಜಿಲ್ಲೆಯಲ್ಲಿ ಆತಂಕವನ್ನ ಹೆಚ್ಚಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

  • ಪಿಎಸ್‍ಎಲ್‍ಗಾಗಿ ಪಾಕ್ ತೆರಳಿ ಸಮಸ್ಯೆಗೆ ಸಿಲುಕಿದ ಭಾರತೀಯರು

    ಪಿಎಸ್‍ಎಲ್‍ಗಾಗಿ ಪಾಕ್ ತೆರಳಿ ಸಮಸ್ಯೆಗೆ ಸಿಲುಕಿದ ಭಾರತೀಯರು

    ಇಸ್ಲಾಮಾಬಾದ್: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ಪ್ರಸಾರ ಮಾಡುವ ಸಲುವಾಗಿ ಪಾಕ್‍ಗೆ ತೆರಳಿದ್ದ ಭಾರತೀಯರ ತಂಡ ಸಮಸ್ಯೆಗೆ ಸಿಲುಕಿದ್ದು, ಕೊರೊನಾ ಎಫೆಕ್ಟ್ ನಿಂದ ಟೂರ್ನಿ ಮುಂದೂಡುತ್ತಿದಂತೆ ಭಾರತಕ್ಕೆ ಹಿಂದಿರುಗಿ ಬರಲು ಯತ್ನಿಸಿದ್ದಾರೆ.

    ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಹಾಗೂ ಭಾರತ ನಡುವಿನ ಗಡಿಯನ್ನು ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಾಘಾ ಗಡಿಗೆ ಆಗಮಿಸಿದ್ದ ಬ್ರಾಡ್‍ಕಾಸ್ಟಿಂಕ್ ಸಂಸ್ಥೆಯ ಸಿಬ್ಬಂದಿಯನ್ನು ಗಡಿ ಭದ್ರತಾ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಮತ್ತೆ ವಾಪಸ್ ಕಳುಹಿಸಿದ್ದಾರೆ. ಪರಿಣಾಮ ಪಾಕ್ ತೆರಳಿದ್ದ 29 ಮಂದಿ ಭಾರತಕ್ಕೆ ವಾಪಸ್ ಬರಲು ಸಮಸ್ಯೆ ಎದುರಿಸಿದ್ದಾರೆ. ಇತ್ತ ಪಾಕಿಸ್ತಾನ ಅವರನ್ನು ವಿಮಾನದಲ್ಲಿ ಭಾರತಕ್ಕೆ ಕಳುಹಿಸಲು ತಯಾರಿ ನಡೆಸಿದೆ.

    ಪಿಎಸ್‍ಎಲ್ ಪ್ರಸಾರ ಮಾಡುವ ಹಿನ್ನೆಲೆಯಲ್ಲಿ ಬ್ರಾಡ್‍ಕಾಸ್ಟಿಂಗ್ ಸಂಸ್ಥೆ ಭಾರತದ 29 ಮಂದಿಯನ್ನು ಪಾಕ್‍ಗೆ ಕಳುಹಿಸಿತ್ತು. ಕೇಂದ್ರ ಸರ್ಕಾರ ಕೂಡ ಅವರಿಗೆ ವಿಮಾನ ಮೂಲಕ ಪಾಕ್ ತೆರಳಲು ಅನುಮತಿ ನೀಡಿತ್ತು. ಆದರೆ ಸದ್ಯ ಸಿಬ್ಬಂದಿ ಭೂ ಮಾರ್ಗದ ಮೂಲಕ ಭಾರತಕ್ಕೆ ಆಗಮಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ಕೇಂದ್ರ ಸರ್ಕಾರ ವಿಮಾನದಲ್ಲಿ ಭಾರತಕ್ಕೆ ಆಗಮಿಸಲು ಅನುಮತಿ ನೀಡಿದೆ ವಿನಾಃ ಭೂ ಮಾರ್ಗದ ಮೂಲಕ ಅಲ್ಲ ಎಂದು ಗಡಿ ಭದ್ರತಾ ಸಿಬ್ಬಂದಿ ಬ್ರಾಡ್‍ಕಾಸ್ಟಿಂಗ್ ಸಂಸ್ಥೆಗೆ ತಿಳಿಸಿ ವಾಪಸ್ ಕಳುಹಿಸಿದ್ದಾರೆ.

    ಅಂದಹಾಗೇ ವಿಶ್ವದ ಹಲವರು ಭಾಗಗಳಲ್ಲಿ ಕೊರೊನಾ ಎಫೆಕ್ಟ್ ಹೆಚ್ಚಾಗಿದೆ. ಆದರೆ ಪಾಕಿಸ್ತಾನ ಮಾತ್ರ ತನ್ನ ನೆಲದಲ್ಲಿ ಕೊರೊನಾ ಪ್ರಭಾವ ಇಲ್ಲ ಎಂದು ವಾದ ಮಂಡಿಸುತ್ತಿದೆ. ತೀವ್ರ ಒತ್ತಡ ಹಿನ್ನೆಲೆಯಲ್ಲಿ ಅಂತಿಮವಾಗಿ ಪಾಕ್ ಕ್ರಿಕೆಟ್ ಮಂಡಳಿ ಪಿಎಸ್‍ಎಲ್ ಟೂರ್ನಿಯನ್ನು ಮುಂದೂಡಿದೆ. ಅಲ್ಲದೇ ಇಂಗ್ಲೆಂಡ್ ಆಟಗಾರ ಅಲೆಕ್ಸ್ ಹೇಲ್ಸ್ ಅವರಿಗೆ ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಪಿಸಿಬಿ ಕೂಡಲೇ ಅವರನ್ನು ತವರಿಗೆ ವಾಪಸ್ ಕಳುಹಿಸಿಕೊಟ್ಟಿತ್ತು. ಈ ವಿಚಾರವನ್ನು ರಹಸ್ಯವಾಗಿಟ್ಟು ಟೂರ್ನಿ ಮುಂದುವರಿಸುವ ಚಿಂತನೆಯಲ್ಲಿದ್ದ ಸಮಯದಲ್ಲಿ ಕ್ರಿಕೆಟ್ ವಿಶ್ಲೇಷಣೆಗಾರ ರಮೀಜ್ ರಾಜಾ ಘಟನೆಯನ್ನು ಬಹಿರಂಗ ಪಡಿಸಿದ್ದರು. ಇದರೊಂದಿಗೆ ತೀವ್ರ ಮುಖಭಂಗಕ್ಕೆ ಒಳಗಾದ ಪಿಸಿಬಿ ಟೂರ್ನಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಿತ್ತು. ಇಂಗ್ಲೆಂಡ್‍ಗೆ ವಾಪಸ್ ಆಗಿರುವ ಅಲೆಕ್ಸ್ ಹೇಲ್ಸ್ ಜ್ವರದಿಂದ ಬಳುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಸದ್ಯ ಅವರು ಆರೋಗ್ಯದ ಇಲಾಖೆಯ ಸೂಚನೆಗಳ ಅನ್ವಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

  • ಉಗ್ರರನ್ನು ಮಟ್ಟ ಹಾಕಲು ಸ್ಮಾರ್ಟ್ ಬೇಲಿ: ಏನಿದು ಸ್ಮಾರ್ಟ್ ಬೇಲಿ? ಹೇಗೆ ಕಾರ್ಯನಿರ್ವಹಿಸುತ್ತೆ?

    ಉಗ್ರರನ್ನು ಮಟ್ಟ ಹಾಕಲು ಸ್ಮಾರ್ಟ್ ಬೇಲಿ: ಏನಿದು ಸ್ಮಾರ್ಟ್ ಬೇಲಿ? ಹೇಗೆ ಕಾರ್ಯನಿರ್ವಹಿಸುತ್ತೆ?

    ನವದೆಹಲಿ: ಪಾಕಿಸ್ತಾನ ಗಡಿಯಲ್ಲಿ ಉಗ್ರರ ಒಳನುಸುಳುವಿಕೆಗೆ ಸಂಪೂರ್ಣವಾಗಿ ಬ್ರೇಕ್ ಹಾಕುವ ಉದ್ದೇಶದೊಂದಿಗೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುತ್ತಿರುವ ದೇಶದ ಮೊದಲ ಸ್ಮಾರ್ಟ್ ಬೇಲಿಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದಾರೆ.

    ಕಾಂಪ್ರಹೆನ್ಸೀವ್ ಇಂಟಗ್ರೇಟೆಡ್ ಬಾರ್ಡರ್ ಮ್ಯಾನೇಜ್‍ಮೆಂಟ್ ಸಿಸ್ಟಂ (ಸಿಐಬಿಎಂಎಸ್) ಹೆಸರಿನ ಈ ಪ್ರಾಯೋಗಿಕ ವ್ಯವಸ್ಥೆ ಭಾರತ ಮತ್ತು ಪಾಕಿಸ್ತಾನದ ಗಡಿಗಳಲ್ಲಿನ ತಲಾ 5 ಕಿಲೋ ಮೀಟರ್ ಉದ್ದದ 2 ಬೇಲಿಗಳು ಸೋಮವಾರ ಲೋಕಾರ್ಪಣೆಯಾಗಿದೆ. ಸುಮಾರು 5 ಕಿ.ಮೀ.ನ ಎರಡು ಸ್ಮಾರ್ಟ್ ಬೇಲಿಗಳನ್ನು ಸ್ಲೊವೇನಿಯಾದ ಕಂಪೆನಿ ಹಾಗೂ ಭಾರತದ ಕಂಪೆನಿಗಳು ಅಭಿವೃದ್ಧಿ ಪಡಿಸಿದೆ.

    ಏನಿದು ಸ್ಮಾರ್ಟ್ ಬೇಲಿ?
    ಸ್ಮಾರ್ಟ್ ಬೇಲಿ ಎಂದರೆ ತಂತ್ರಜ್ಞಾನ ಆಧಾರಿತ ಕಣ್ಗಾವಲು ವ್ಯವಸ್ಥೆಯಾಗಿದೆ. ಸದ್ಯ ಭಾರತವು ಪಾಕಿಸ್ತಾನ ನಡುವಿನ ನೂರಾರು ಕಿ.ಮೀ. ವ್ಯಾಪ್ತಿಯಲ್ಲಿ ಗಡಿಪ್ರದೇಶಗಳಲ್ಲಿ ತಂತಿ ಬೇಲಿಯನ್ನು ಬಳಸುತ್ತಿದೆ. ಅಲ್ಲದೇ ಇವುಗಳು ನೈಸರ್ಗಿಕ ವಿಕೋಪ ಹಾಗೂ ಇತರೆ ಕಾರಣಗಳಿಂದ ಹಾಳಾಗುತ್ತಲೇ ಇರುತ್ತವೆ. ಇದಲ್ಲದೇ ಇವುಗಳನ್ನು ಪದೇ ಪದೇ ನಿರ್ವಹಣೆ ಮಾಡಲೇಬೇಕಾಗುತ್ತದೆ. ಹೀಗಾಗಿ ಇಂತಹ ಪ್ರದೇಶಗಳಲ್ಲಿ ಮಳೆ-ಗಾಳಿ, ಬಿರುಗಾಳಿ, ಚಳಿ, ಹಿಮಪಾತ ಎನ್ನದೇ ಎಲ್ಲಾ ಋತುಮಾನಗಳಲ್ಲಿಯೂ ಎಚ್ಚರದಿಂದ ಕಣ್ಗಾವಲು ಇಡಲು ಭಾರತ ಕಂಡುಕೊಂಡಿರುವ ಮಾರ್ಗವೇ ಸ್ಮಾರ್ಟ್ ಫೆನ್ಸ್ ಅಥವಾ ತಂತ್ರಜ್ಞಾನ ಬೇಲಿ.

    ಹೇಗೆ ಕಾರ್ಯನಿರ್ವಹಿಸುತ್ತದೆ?
    ಈ ತಂತ್ರಜ್ಞಾನದಲ್ಲಿ ಸರ್ವೇಕ್ಷಣೆ, ಸಂಪರ್ಕ ಹಾಗೂ ದತ್ತಾಂಶ ಸಂಗ್ರಹಕ್ಕೆ ಬೇಕಾಗುವ ಎಲ್ಲಾ ಅಂಶಗಳನ್ನು ಈ ಸ್ಮಾರ್ಟ್ ಬೇಲಿಗಳು ಅಳವಡಿಸಿಕೊಂಡಿರುತ್ತದೆ. ಇದರ ಜೊತೆ ಎಂಟು ದಿಕ್ಕುಗಳಲ್ಲಿಯೂ ವ್ಯಕ್ತಿಗಳ ಚಲನೆ ಗ್ರಹಿಸುವ ವಿಕಿರಣ ಸಾಧನಗಳು, ಭೂಗತ ಸೆನ್ಸರ್ ಗಳು, ಫೈಬರ್ ಆಪ್ಟಿಕಲ್ ಸೆನ್ಸರ್, ರಾಡಾರ್, ಸೋನಾರ್, ಅಲಾರಾಂ ವ್ಯವಸ್ಥೆಯಂತಹ ಉಪಕರಣಗಳನ್ನು ಕಂಬಗಳಲ್ಲಿ ಅಳವಡಿಸಲಾಗುತ್ತದೆ. ಇದಲ್ಲದೇ ಸಿಸಿಟಿವಿ ಮೂಲಕ ಗಡಿ ಪ್ರದೇಶಗಳಲ್ಲಿನ ಚಲನವಲನವನ್ನು ಪತ್ತೆಮಾಡಬಹುದಾಗಿದೆ.

    ಒಂದು ವೇಳೆ ಯಾರಾದರೂ ಬೇಲಿ ಬಳಿ ಅನುಮಾನಾಸ್ಪದ ಚಟುವಟಿಕೆಯಲ್ಲಿ ಕಂಡು ಬಂದರೆ, ಕೂಡಲೇ ಜಾಗೃತಗೊಳ್ಳುವ ಸೆನ್ಸರ್ ಗಳು ಸಿಸಿಟಿವಿಯ ಮೂಲಕ ಸಂಪೂರ್ಣ ಚಿತ್ರಣವನ್ನು ನಿರ್ದಿಷ್ಟ ಪಡಿಸಿರುವ ಬಿಎಸ್‍ಎಫ್ ಸೇನಾ ನೆಲೆಗಳಿಗೆ ರವಾನಿಸುತ್ತದೆ. ತಕ್ಷಣವೇ ಎಚ್ಚೆತ್ತುಕೊಳ್ಳುವ ಸೈನಿಕರು ನಿರ್ದಿಷ್ಟ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ, ಉಗ್ರರ ಒಳನುಸುಳುವಿಕೆಯನ್ನು ತಡೆಯುತ್ತಾರೆ.

    ಕೇಂದ್ರದ ಉದ್ದೇಶ ಏನು?
    ಅಕ್ರಮ ನುಸುಳುಕೋರರು, ಮಾದಕ ವಸ್ತು ಸಾಗಾಣಿಕೆದಾರರು, ನಕಲಿ ನೋಟು ಜಾಲಗಳನ್ನು ನಡೆಸುವವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಗಡಿಯನ್ನು ದಾಟಿ ಭಾರತವನ್ನು ಪ್ರವೇಶುತ್ತಿದ್ದಾರೆ. ಇವರನ್ನು ತಡೆಯಲು ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಂಡರೂ ಪೂರ್ಣವಾಗಿ ಯಶಸ್ವಿಯಾಗಿಲ್ಲ. ಗಡಿ ಬೇಲಿ ಹಾಕಿದ್ದರೂ ಉಗ್ರರು ಭೂಮಿಯ ಅಡಿಯಲ್ಲೇ ಭೂಗತ ಸುರಂಗಗಳನ್ನು ಕೊರೆದು ಭಾರತವನ್ನು ಪ್ರವೇಶಿಸುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಅಷ್ಟೇ ಅಲ್ಲದೇ ನದಿ ಹರಿವು ಹೆಚ್ಚಾಗಿರುವ ಪ್ರದೇಶಗಳಲ್ಲಿ ತಂತಿ ಬೇಲಿಯನ್ನು ನಿರ್ಮಿಸಲು ಸಾಧ್ಯವಿಲ್ಲ. ಈ ಪ್ರದೇಶಗಳಲ್ಲಿ ಯೋಧರು ದೋಣಿಗಳಲ್ಲಿ ಗಸ್ತು ತಿರುಗುವ ಮೂಲಕ ನಿಗಾ ವಹಿಸುತ್ತಿದ್ದಾರೆ. ಹೀಗಾಗಿ ಕುಳಿತ ಸ್ಥಳದಿಂದಲೇ ಆ ಪ್ರದೇಶದ ಮೇಲೆ ನಿಗಾ ಇಡಲು ಕೇಂದ್ರ ಸರ್ಕಾರ ಸ್ಮಾರ್ಟ್ ಬೇಲಿಯ ನಿರ್ಮಾಣಕ್ಕೆ ಕೈ ಹಾಕಿದೆ.

    ಅಕ್ರಮ ನುಸುಳುಕೋರರನ್ನು ಮತ್ತು ಗಡಿ ದಾಟಿ ಬರುವ ಉಗ್ರರನ್ನು ಸಂಪೂರ್ಣ ಮಟ್ಟ ಹಾಕುತ್ತೇವೆ ಎಂದಿರುವ ಕೇಂದ್ರ ಸರ್ಕಾರ ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿ ಒಟ್ಟು 2,400 ಕಿ.ಮೀ ಉದ್ದದ ಈ ಸ್ಮಾರ್ಟ್ ಬೇಲಿ ಅಳವಡಿಸುವುದಾಗಿ ಹೇಳಿಕೊಂಡಿದೆ. ಸಿಐಬಿಎಂಎಸ್ ಹೆಸರಿನ ಈ ಪ್ರಾಯೋಗಿಕ ವ್ಯವಸ್ಥೆ ಬ್ರಹ್ಮಪುತ್ರ ನದಿ ತೀರದ ಧುಬ್ರಿಯಲ್ಲಿನ ಗಡಿಭಾಗದ ಅಳವಡಿಸಲಾಗಿದೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತದ ಮೇಲೆ ದಾಳಿ ನಡೆಸಲು ಗಡಿಯಲ್ಲಿ ಕಾದು ಕುಳಿತಿದ್ದಾರೆ 600 ಕ್ಕೂ ಹೆಚ್ಚು ಮಂದಿ ಉಗ್ರರು!

    ಭಾರತದ ಮೇಲೆ ದಾಳಿ ನಡೆಸಲು ಗಡಿಯಲ್ಲಿ ಕಾದು ಕುಳಿತಿದ್ದಾರೆ 600 ಕ್ಕೂ ಹೆಚ್ಚು ಮಂದಿ ಉಗ್ರರು!

    ನವದೆಹಲಿ: ಪಾಕಿಸ್ತಾನದ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ ಮತ್ತು ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನವೇ ಭಾರತದಲ್ಲಿ ಭಾರೀ ಪ್ರಮಾಣದ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ತಾನ ಸೇನೆ ಸಹಾಯದಿಂದ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

    ಆಗಸ್ಟ್ 11 ರಂದು ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್ ಖಾನ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಆಗಸ್ಟ್ 15 ರಂದು ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದೆ. ಈ ಎರಡೂ ಕಾರ್ಯಕ್ರಮಗಳ ನಡುವೆ ಭಾರತದಲ್ಲಿ ಭಾರೀ ಪ್ರಮಾಣದ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ತಾನ ಮೂಲದ ಉಗ್ರರು ಸಂಚು ರೂಪಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಗೃಹ ಸಚಿವಾಲಯಕ್ಕೆ ಎಚ್ಚರಿಕೆ ನೀಡಿದೆ.

    ಉಗ್ರರ ಬಾರ್ಡರ್ ಆ್ಯಕ್ಷನ್ ಟೀಂ (ಬ್ಯಾಟ್) ತಂಡದ ಸೋಗಿನಲ್ಲಿ ಪಾಕಿಸ್ತಾನಿ ಸೈನಿಕರೇ ಭಾರತೀಯ ಯೋಧರ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದೆ.

    ಗಡಿಯಲ್ಲಿ ಈಗಾಗಲೇ ಸುಮಾರು 600ಕ್ಕೂ ಅಧಿಕ ಉಗ್ರರು ಮತ್ತು ಉಗ್ರರ ಸೋಗಿನಲ್ಲಿರುವ ಪಾಕಿಸ್ತಾನಿ ಸೈನಿಕರು ಗಡಿನಿಯಂತ್ರಣ ರೇಖೆ ದಾಟಲು ಕಾದು ಕುಳಿತಿದ್ದು, ಅವಕಾಶ ಸಿಕ್ಕ ತಕ್ಷಣವೇ ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

    ಭಾರತದ ಗಡಿ ಪ್ರದೇಶಗಳಾದ ಗುರೆಝ್ ಸೆಕ್ಟರ್ 67 ಮಂದಿ ಭಯೋತ್ಪಾದಕರು ಹಾಗೆಯೇ ಮಶಿಲ್ ಸೆಕ್ಟರ್ ನಲ್ಲಿ 96, ಕೆರನ್ ಸಕ್ಟರ್ ನಲ್ಲಿ 117, ಟ್ಯಾಂಗ್ಧರ್ ಸೆಕ್ಟರ್ ನಲ್ಲಿ 79, ಉರಿ ಸೆಕ್ಟರ್ 26, ರಾಂಪುರ ಸೆಕ್ಟರ್ 43, ಪೂಂಚ್ ಸೆಕ್ಟರ್ 43, ಕೃಷ್ಣಾ ಘಾಟಿ ಸೆಕ್ಟರ್ 21, ಬೀಂಬರ್ ಗ್ಯಾಲಿ ಸೆಕ್ಟರ್ 40, ನೌಶೇರಾ ಸೆಕ್ಟರ್ 6 ಹಾಗೂ ಸುಂದರ್ಬನಿ ಸೆಕ್ಟರ್ ನಲ್ಲಿ 16 ಮಂದಿ ಭಯೋತ್ಪಾದಕರು ಸೇರಿದಂತೆ ಒಟ್ಟು 600 ಮಂದಿ ಉಗ್ರರು ಒಳನುಸುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ.

    ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಸೇನೆಗೆ ಗಡಿಯಲ್ಲಿ ವ್ಯಾಪಕವಾಗಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದೆ.