Tag: ಗಗನಯಾತ್ರಿ

  • ಬೆಳಕಿನ ಕಿರಣಗಳಲ್ಲಿ ನಮ್ಮ ದೇಶ ಅದ್ಭುತ, ಬೆಂಗ್ಳೂರು, ಪುಣೆ ಮಿನುಗುತ್ತೆ – ಬಾಹ್ಯಾಕಾಶದಿಂದ ಭಾರತ ಕಂಡ ಬಗೆ ಹಂಚಿಕೊಂಡ ಶುಕ್ಲಾ

    ಬೆಳಕಿನ ಕಿರಣಗಳಲ್ಲಿ ನಮ್ಮ ದೇಶ ಅದ್ಭುತ, ಬೆಂಗ್ಳೂರು, ಪುಣೆ ಮಿನುಗುತ್ತೆ – ಬಾಹ್ಯಾಕಾಶದಿಂದ ಭಾರತ ಕಂಡ ಬಗೆ ಹಂಚಿಕೊಂಡ ಶುಕ್ಲಾ

    ನವದೆಹಲಿ: ಬೆಳಕಿನ ಕಿರಣಗಳಲ್ಲಿ ನಮ್ಮ ದೇಶ ಅದ್ಭುತವಾಗಿ ಕಾಣುತ್ತದೆ, ಬೆಂಗ್ಳೂರು, ಪುಣೆ ಮಿನುಗುತ್ತವೆ ಎಂದು ಬಾಹ್ಯಾಕಾಶದಿಂದ ಭಾರತ (India) ಹೇಗೆ ಕಾಣಿಸುತ್ತದೆ ಎಂಬ ವಿಡಿಯೋವೊಂದನ್ನು ಗಗನಯಾನಿ ಶುಭಾಂಶು ಶುಕ್ಲಾ (Shubanshu Shukla) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಬೆಳಕಿನ ಚಿತ್ತಾರದಲ್ಲಿ ಭಾರತ ಕಂಡ ಬಗೆಯನ್ನು ಶುಭಾಂಶು ಶುಕ್ಲಾ ಹಂಚಿಕೊಂಡಿದ್ದಾರೆ. ಭಾರತವು ನೈರುತ್ಯದಿಂದ ಈಶಾನ್ಯಕ್ಕೆ ಒಂದು ನಕ್ಷತ್ರ ಪುಂಜದಂತೆ ಗೋಚರಿಸುತ್ತದೆ. ಬೆಂಗಳೂರು, ಹೈದ್ರಾಬಾದ್, ಪುಣೆ ನಗರಗಳು ಆ ಪುಂಜದ ನಕ್ಷತ್ರಗಳು ಎಂದು ಬಣ್ಣಿಸಿದ್ದಾರೆ.ಇದನ್ನೂ ಓದಿ: ಪುಣೆಯ ಐತಿಹಾಸಿಕ ಶನಿವಾರ್ ವಾಡಾದಲ್ಲಿ ಮಹಿಳೆಯರಿಂದ ನಮಾಜ್ – ಗೋಮೂತ್ರದಿಂದ ಶುದ್ಧೀಕರಿಸಿದ ಬಿಜೆಪಿ ಎಂಪಿ

    ಇನ್ನೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿ ಮೃದುವಾಗಿ ಹೊಳೆಯುವ ಮೂಲಕ ತನ್ನ ಇರುವಿಕೆಯನ್ನು ತೋರಿಸುತ್ತದೆ. ಬಂಗಾಳಕೊಲ್ಲಿ ಮತ್ತು ಮಧ್ಯ ಭಾರತ ಬೆಳಕಿನ ಕಿರಣಗಳಲ್ಲಿ ಅದ್ಭುತವಾಗಿ ಕಾಣುತ್ತವೆ. ಮೋಡಗಳ ನಡುವೆ ಘರ್ಜಿಸುವ ಸಿಡಿಲು, ಮಳೆ ಜಿನುಗು ಆಹ್ಲಾದವನ್ನು ನೀಡಿದರೆ, ಉತ್ತರಕ್ಕೆ ಸಾಗುತ್ತಿದ್ದಂತೆ ಬೆಳಕಿನ ತೇಜಸ್ಸು ಮೃದುವಾಗಿ ಮೌನವಾಗಿ, ಗಂಭೀರವಾಗಿ ಕುಳಿತ ಹಿಮಾಲಯ ಗೋಚರಿಸುತ್ತದೆ.

    ಇವೆಲ್ಲವನ್ನು ನೋಡಿದಾಗ ಪ್ರಕೃತಿಯಲ್ಲಿ ಮೂಡಿಸಿದ ಈ ವಿಸ್ಮಯದ ಕಲಾಕಾರ ಯಾರು ಎನ್ನುವ ಪ್ರಶ್ನೆ ಮೂಡುತ್ತದೆ. ಈ ಭವ್ಯ ದೃಶ್ಯವನ್ನು ನೋಡುವಾಗ ನಿಮ್ಮ ಮುಖದಲ್ಲಿ ನಸುನಗು ಬರದೇ ಇರಲು ಸಾಧ್ಯವಿಲ್ಲ. ಇದು ಭೂಮಿಯ ಮೇಲಿನ ದೀಪಾವಳಿ ಅಲ್ಲ ಭೂಮಿಯ ದೀಪಾವಳಿ ಎಂದು ಎಲ್ಲರಿಗೂ ದೀಪಾವಳಿ ಶುಭಾಶಯ ಕೋರಿದ್ದಾರೆ.ಇದನ್ನೂ ಓದಿ: ಶ್ರೀರಾಮ ಘನತೆಯ ಸಂಕೇತ, ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿ – ದೀಪಾವಳಿಗೆ ದೇಶವಾಸಿಗಳಿಗೆ ಪತ್ರ ಬರೆದ ಮೋದಿ

  • ಬಾಹ್ಯಾಕಾಶದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ಏನಾಗುತ್ತೆ?

    ಬಾಹ್ಯಾಕಾಶದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ಏನಾಗುತ್ತೆ?

    ಅಂತರಿಕ್ಷದಲ್ಲಿ ಮಾನವನ ಜೀವನ ಹೇಗೆ ಇರುತ್ತದೆ ಎನ್ನುವ ಕುರಿತು ಯೋಚಿಸಿದಾಗ ಹಲವು ಪ್ರಶ್ನೆಗಳು ಮುಂದೆ ಬರುತ್ತವೆ. ಮಾನವನಿಗೆ ಉಸಿರಾಟ, ಆಹಾರ ಹಾಗೂ ನೀರು ಹೇಗೆ ಮೂಲಭೂತ ಅವಶ್ಯಕತೆಗಳೋ ಹಾಗೆಯೇ ಮಲ, ಮೂತ್ರ ವಿಸರ್ಜನೆಯು ಮಾನವನ ಜೀವನ ಶೈಲಿ ಆರೋಗ್ಯಕರವಾಗಿರಿಸಲು ಸಹಾಯಮಾಡುತ್ತದೆ.

    ಹೌದು, ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಜೀವನ ಶೈಲಿ ಹಾಗೂ ದೈನಂದಿನ ಕ್ರಿಯೆಗಳು ಇರುತ್ತವೆ. ಆ ಕ್ರಿಯೆಗಳಲ್ಲಿ ಯಾವುದಾದರೂ ಒಂದು ಏರುಪೇರು ಆದರೂ ಕೂಡ ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಿರುವಾಗ ಬಾಹ್ಯಾಕಾಶಕ್ಕೆ ಹೋಗುವ ಗಗನಯಾತ್ರಿಗಳು ಅಂತರಿಕ್ಷದಲ್ಲಿ ಮಲ, ಮೂತ್ರ ವಿಸರ್ಜನೆಯ ನಿರ್ವಹಣೆ ಹೇಗೆ ಮಾಡುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ. ಬಾಹ್ಯಾಕಾಶದಲ್ಲಿ ಮಾನವನ ತ್ಯಾಜ್ಯ ನಿರ್ವಹಣೆ ಒಂದು ದೊಡ್ಡ ಸವಾಲು. ಗುರುತ್ವಾಕರ್ಷಣೆ ಇಲ್ಲದ ಈ ಪರಿಸರದಲ್ಲಿ ಮಾನವನ ತ್ಯಾಜ್ಯ ಹೇಗೆ ನಿರ್ವಹಿಸಲಾಗುತ್ತದೆ. ಅದಲ್ಲದೆ ಭೂಮಿಯಿಂದ ಬಾಹ್ಯಾಕಾಶಕ್ಕೆ ವಸ್ತುಗಳ ಮರುಪೂರೈಕೆ ತುಂಬಾ ಕಷ್ಟಕರವಾದದ್ದು. ಆದರೆ ಯಾವುದೇ ಪೂರೈಕೆ ಇದ್ದರೂ ಕೂಡ ಅದರ ವೆಚ್ಚ ಕೂಡ ಜಾಸ್ತಿ.

    ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದಿರುವ ಕಾರಣ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಭೂಮಿಯ ಮೇಲಿರುವ ಪ್ರತಿಯೊಬ್ಬ ಮಾನವ ಹಾಗೂ ಪ್ರಾಣಿಗಳು ನಡೆದುಕೊಂಡು ಜೀವನ ನಡೆಸುತ್ತವೆ. ಇನ್ನೂ ಕೆಲವು ನಡೆದುಕೊಂಡು ಹಾಗೂ ಹಾರಾಟ ನಡೆಸಿ ಜೀವನ ನಡೆಸುತ್ತವೆ. ಹೀಗಿರುವಾಗ ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿಗಳು ತೇಲಾಡಿಕೊಂಡು ಜೀವನ ನಡೆಸುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ನಡೆಯುತ್ತಿರುವ ಮನುಷ್ಯ ದಿಡೀರನೆ ತೇಲಾಡಿಕೊಂಡು ಬದುಕುವ ಅಭ್ಯಾಸ ಮಾಡಿದಾಗ ದೇಹದ ಮೇಲೆ ಅಥವಾ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅಂತರಿಕ್ಷಕ್ಕೆ ತೆರಳಿದ ಪ್ರಾರಂಭದ ದಿನಗಳಲ್ಲಿ ಮನುಷ್ಯನಿಗೆ ವಾಂತಿ, ಮಲ, ಮೂತ್ರ ವಿಸರ್ಜನೆಯಲ್ಲಿ ಪರಿಣಾಮ ಬೀರಬಹುದು. ಹೀಗಾಗಿ ಕೆಲವು ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ.

    ವಿಮಾನದಲ್ಲಿ ಪ್ರಯಾಣಿಸುವಾಗ ಅಥವಾ ಇನ್ನಿತರೆ ದೇಶಗಳಲ್ಲಿ ವಾಂತಿ ಮಾಡುವಾಗ ಕೆಲವು ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಾರೆ. ಅದೇ ರೀತಿ ಬಾಹ್ಯಾಕಾಶದಲ್ಲಿಯೂ ಕೂಡ ವಾಂತಿಗಾಗಿ `ಸ್ಪೇಸ್ ಸಿಕ್ನೆಸ್ ಬ್ಯಾಗ್’ ಗಳನ್ನು ಬಳಸುತ್ತಾರೆ. ಇವುಗಳಿಗೆ ಸೋರಿಕೆಯಾಗದಂತೆ ಬಿಗಿಯಾದ ಮುಚ್ಚುವಿಕೆಯನ್ನು ನೀಡಲಾಗಿರುತ್ತದೆ. ಬಳಿಕ ಇವುಗಳನ್ನು ತ್ಯಾಜ್ಯ ಸಂಗ್ರಹಿಸುವ ಜಾಗದಲ್ಲಿ ಇಡಲಾಗುತ್ತದೆ.

    ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿ ವಿಶೇಷ ಶೌಚಾಲಯಗಳ ಬಳಕೆ ಮಾಡಲಾಗುತ್ತಿದೆ. ಮಲ, ಮೂತ್ರ ವಿಸರ್ಜನೆಗಾಗಿ ಪ್ರತ್ಯೇಕ ಕೊಠಡಿಯ ರೀತಿಯಲ್ಲಿ ನಿರ್ಮಿಸಲಾಗಿರುತ್ತದೆ. ಇದರಲ್ಲಿ ಚಿಕ್ಕದಾದ ಕಮೋಡ್ ರೀತಿಯಲ್ಲಿರುತ್ತದೆ. ಅದರಲ್ಲಿ ಒಂದು ಚಿಕ್ಕದಾದ ಕೊಳವೆಯನ್ನು ನಿರ್ಮಿಸಿರುತ್ತಾರೆ. ಇನ್ನು ಅದರ ಮೇಲೆ ಕುಳಿತಾಗ ಕಾಲುಗಳಿಡಲು ಎರಡು ಹೋಲ್ಡರ್ ಗಳ ರೀತಿಯಲ್ಲಿ ನಿರ್ಮಿಸಲಾಗಿರುತ್ತದೆ. ತ್ಯಾಜ್ಯವನ್ನು ತೇಲದಂತೆ ಮಾಡಲು ಹಾಗೂ ವಾಸನೆಯನ್ನು ನಿಯಂತ್ರಿಸಲು ಶೌಚಾಲಯದ ಕೊಳವೆಯ ಮೇಲೆ ಬಿಗಿಯಾದ ಮುಚ್ಚಳವನ್ನು ನಿರ್ಮಿಸಲಾಗಿರುತ್ತದೆ. ಇದರ ಪಕ್ಕದಲ್ಲಿ ಎರಡು ಗಾಳಿ ನಿಯಂತ್ರಿತ ಪೈಪ್‌ಗಳನ್ನು ನಿರ್ಮಿಸಲಾಗಿರುತ್ತದೆ. ಇವುಗಳನ್ನು ಬಳಸಿ ಮಲ ಹಾಗೂ ಮೂತ್ರದ ವಾಸನೆ ಬರದಂತೆ ಉಪಯೋಗಿಸಲಾಗುತ್ತದೆ.

    ಪ್ರತಿ ಬಾರಿ ಮಲ,ಮೂತ್ರ ವಿಸರ್ಜನೆಗೆ ಹೋದಾಗ ಈ ಗಾಳಿಯ ಪೈಪನ್ನು ತೆರೆದು ಬಿಡುತ್ತಾರೆ. ಆಗ ಅದು ಗಾಳಿ ಸೂಸಲು ಪ್ರಾರಂಭಿಸುತ್ತದೆ. ಬಳಿಕ ಮಲ ವಿಸರ್ಜನೆಗೆ ಹೋಗುವ ಮುನ್ನ ಸಂಗ್ರಹಿಸಿಟ್ಟಿರುವ ಪ್ಲಾಸ್ಟಿಕ್ ಕವರ್ ನ್ನು ಚಿಕ್ಕ ಕೊಳವೆಯೊಳಗೆ ತೆರದು ಹಾಕುತ್ತಾರೆ. ಬಳಿಕ ತಮ್ಮ ಕೆಲಸ ಮುಗಿದ ನಂತರ ಆ ಪ್ಲಾಸ್ಟಿಕ್ ಅನ್ನು ಚೆನ್ನಾಗಿ ಬಿಗಿಗೊಳಿಸಿ, ಅದೇ ಕೊಳವೆಯೊಳಗೆ ಹಾಕಿ ಪ್ರೆಸ್ ಮಾಡಲಾಗುತ್ತದೆ. ಬಳಿಕ ಅದು ಮಲ ಸಂಗ್ರಹ ಜಾಗಕ್ಕೆ ಹೋಗುತ್ತದೆ. ಇನ್ನು ಮೂತ್ರ ವಿಸರ್ಜನೆಗೆ ಗಾಳಿಯ ಪೈಪ್ ಇರುತ್ತದೆ. ಆ ಪೈಪ್ ಅನ್ನು ತೆರೆದು ಆ ಪೈಪ್ ಮೂಲಕ ಮೂತ್ರ ವಿಸರ್ಜನೆ ಮಾಡಲಾಗುತ್ತದೆ.

    ಮಲ ಹಾಗೂ ಇನ್ಯಾವುದೇ ತ್ಯಾಜ್ಯಗಳನ್ನು ಪ್ರತಿ 30 ರಿಂದ 90  ದಿನಗಳಲ್ಲಿ ಭೂಮಿಗೆ ಕಳುಹಿಸಲಾಗುತ್ತದೆ. ಇನ್ನು ಮೂತ್ರವನ್ನು ಶುದ್ಧೀಕರಿಸಿ ಮರುಬಳಕೆ ಮಾಡಲಾಗುತ್ತದೆ. ಜೊತೆಗೆ ಬೆವರನ್ನು ಕೂಡ ಶುದ್ಧೀಕರಣ ಮಾಡಲಾಗುತ್ತದೆ. ಮೂತ್ರದ ಹಾಗೂ ಮಲದ ವಿಸರ್ಜನೆಯ ನಂತರ ಪ್ರತ್ಯೇಕ ಭಾಗದಲ್ಲಿ ಸಂಗ್ರಹಗೊಳ್ಳುತ್ತದೆ. ಈ ಮೂಲಕ ಮಲವನ್ನು ಭೂಮಿಗೆ ಕಳುಹಿಸಿದರೆ, ಮೂತ್ರವು ಇನ್ನೊಂದು ಭಾಗದಲ್ಲಿ ಶುದ್ಧೀಕರಣಗೊಂಡು ಮರು ಬಳಕೆಗೆ ಸಹಾಯಕವಾಗುತ್ತದೆ.

    ನಾಸಾ ಮಾಹಿತಿಯ ಪ್ರಕಾರ, ಮೂತ್ರ ಶುದ್ಧೀಕರಣದ ಬಳಿಕ ಭೂಮಿಯ ಮೇಲೆ ಸಿಗುವ ನೀರಿಗಿಂತ ಹೆಚ್ಚು ಶುದ್ಧವಾಗಿರುತ್ತದೆ ಎಂದು ತಿಳಿಸಿದೆ. ಇದೇ ರೀತಿ ಮಲ, ವಾಂತಿ ಹಾಗೂ ಇನ್ಯಾವುದೇ ತ್ಯಾಜ್ಯವನ್ನು ಬಿಗಿಯಾಗಿ ಸಂಗ್ರಹಿಸಿದಲಾಗುವ ಪ್ಲಾಸ್ಟಿಕ್ ಗಳಲ್ಲಿ ಸಂಗ್ರಹಿಸಿ, ಬಳಿಕ ಅದನ್ನು ಭೂಮಿಗೆ ತಂದು ಸುಟ್ಟು ಹಾಕಲಾಗುತ್ತದೆ. ಈ ರೀತಿ ಅಂತರಾಷ್ಟ್ರೀಯ ಬಾಹ್ಯಾಕಾಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ. ಸದ್ಯ ಮಲವನ್ನು ಸುಟ್ಟು ಹಾಕಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮರುಬಳಕೆ ಮಾಡಬೇಕು ಎನ್ನುವ ಉದ್ದೇಶದಿಂದ ಅಭಿವೃದ್ಧಿ ಕಾರ್ಯ ನಡೆಸುತ್ತಿದೆ.

    ಇನ್ನು ಮುಂದಿನ ದಿನಗಳಲ್ಲಿ ಚಂದ್ರ ಅಥವಾ ಮಂಗಳ ಗ್ರಹಕ್ಕೆ ದೀರ್ಘಕಾಲದ ಕಾರ್ಯಾಚರಣೆಗಾಗಿ ನಾಸಾ ತೆರಳಿದರೆ, ಆ ಸಮಯದಲ್ಲಿ ತ್ಯಾಜ್ಯ ವಿಲೇವಾರಿಗೆ ಇನ್ನಿತರ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಮೂಲಕ ತ್ಯಾಜ್ಯಗಳನ್ನ ಸಂಪೂರ್ಣವಾಗಿ ಮರುಬಳಕೆ ಮಾಡುವಂತಹ ಗುರಿಯನ್ನು ನಾಸಾ ಹೊಂದಿದ್ದು, ಹೊಸ ಮಾರ್ಗಗಳನ್ನು ಕಂಡುಹಿಡಿಯುವಲ್ಲಿ ತೊಡಗಿಕೊಂಡಿದೆ.

    ನಾಸಾ ಲೂನಾರ್ ಲೂ ಚಾಲೆಂಜ್ ಎಂಬ ಜಾಗತಿಕ ಸ್ಪರ್ಧೆಯ ಮೂಲಕ ಇಂಜಿನಿಯರ್ ಗಳು, ವಿಜ್ಞಾನಿಗಳು ಹಾಗೂ ನವ ಉದ್ಯಮಿಗಳನ್ನು ಬಾಹ್ಯಾಕಾಶದಲ್ಲಿ ಬಳಸಲಾಗುವ ಶೌಚಾಲಯಗಳು ವಿವಿಧ ವಿನ್ಯಾಸಗಳನ್ನು ತಯಾರಿಸಲು ತೊಡಗಿಸಿದೆ. ಈ ಮೂಲಕ ಮಲ, ಮೂತ್ರ ಹಾಗೂ ವಾಂತಿಯನ್ನು ನೀರು, ಶಕ್ತಿ ಹಾಗೂ ಗೊಬ್ಬರದಂತಹ ಉಪಯುಕ್ತ ವಸ್ತುವನ್ನಾಗಿ ಪರಿವರ್ತಿಸಬೇಕು ಎಂಬ ಸವಾಲನ್ನು ನೀಡಿದೆ. ಈ ರೀತಿ ತಯಾರಾದರೆ ಮೂರು ಮಿಲಿಯನ್ ಡಾಲರ್ ( ಸುಮಾರು 25 ರಿಂದ 26 ಕೋಟಿ ರೂ.ಷ್ಟು) ಬಹುಮಾನ ನೀಡಲಿದೆ.

  • ಗಗನಯಾತ್ರಿ ಶುಭಾಂಶು ಜೊತೆಗೆ ಮೋದಿ ಸಂವಾದ – 16 ಬಾರಿ ಸೂರ್ಯೋದಯ, ಸೂರ್ಯಾಸ್ತ ನೋಡ್ತಿದ್ದೇವೆ ಎಂದ ಶುಕ್ಲಾ

    ಗಗನಯಾತ್ರಿ ಶುಭಾಂಶು ಜೊತೆಗೆ ಮೋದಿ ಸಂವಾದ – 16 ಬಾರಿ ಸೂರ್ಯೋದಯ, ಸೂರ್ಯಾಸ್ತ ನೋಡ್ತಿದ್ದೇವೆ ಎಂದ ಶುಕ್ಲಾ

    – ಭಾರತ ಬಹಳ ಅದ್ಭುತವಾಗಿ ಕಾಣುತ್ತೆ
    – ಧ್ಯಾನ ಇಲ್ಲಿ ಬಹಳ ಮುಖ್ಯ, ಮುಂದಿನ ಸವಾಲು ಎದುರಿಸಬಹುದು
    – ಪ್ರಧಾನಿ ಮೋದಿಗೆ ಇಂಚಿಂಚೂ ವಿವರ ನೀಡಿದ ಶುಭಾಂಶು ಶುಕ್ಲಾ

    ನವದೆಹಲಿ: ಆಕ್ಸಿಯಂ-4 ಮಿಷನ್‌ ಕಾರ್ಯಾಚರಣೆಯ ಭಾಗವಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಭಾರತೀಯ ವಾಯುಪಡೆಯ (IAF) ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ್ದಾರೆ.

    ಸುಮಾರು 18 ನಿಮಿಷಗಳ ಕಾಲ ಮಾತುಕತೆ ನಡೆಸಿದ ಪ್ರಧಾನಿ ಮೋದಿ-ಶುಕ್ಲಾ (Shubhanshu Shukla), ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮೊದಲಿಗೆ ಮಾತು ಆರಂಭಿಸಿದ ಪ್ರಧಾನಿ ಮೋದಿ ನನ್ನ ಮಾತಿನ ಜೊತೆಗೆ 140 ಕೋಟಿ ಭಾರತೀಯರ ಭಾವನೆ ಇದೆ. ಅವರ ಉತ್ಸಾಹ ಮತ್ತು ಕುತೂಹಲವೂ ಇದೆ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಶುಕ್ಲಾ, ದೇಶದ ಜನರು ಪ್ರೀತಿ, ಆರ್ಶಿವಾದದಿಂದ ನಾನು ಚೆನ್ನಾಗಿದ್ದೇನೆ. ಈ ಬಾಹ್ಯಕಾಶ ಯಾತ್ರೆ ನನ್ನದಲ್ಲ, ನನ್ನ ದೇಶದು. ನಿಮ್ಮ ನೇತೃತ್ವದ ಸರ್ಕಾರ ಕನಸುಗಳನ್ನು ಸಹಕಾರ ನೀಡಲು ಅವಕಾಶ ನೀಡುತ್ತದೆ ಎಂದು ಉತ್ತರಿಸಿದರು. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

    Shubhanshu Shukla 1

    ಕ್ಯಾರೆಟ್‌ ಹಲ್ವಾ ನಿಮ್ಮ ಸ್ನೇಹಿತರಿಗೆ ನೀಡಿದ್ರಾ?
    ಸದ್ಯ ಶುಕ್ಲಾ ಐಎಸ್‌ಎಸ್‌ಗೆ ಮೂರು ರೀತಿ ಭಾರತೀಯ ಭಕ್ಷ್ಯಗಳನ್ನು ಕೊಂಡೊಯ್ದಿದ್ದಾರೆ. ಮ್ಯಾಂಗೋ ಜ್ಯೂಸ್‌, ಹೆಸರು ಬೇಳೆ ಹಲ್ವಾ ಹಾಗೂ ಕ್ಯಾರೆಟ್‌ ಹಲ್ವಾ ಕೊಂಡೊಯ್ದಿದ್ದಾರೆ. ಇದನ್ನು ನೆನಪಿಸಿದ ಪ್ರಧಾನಿ ಮೋದಿ ಹಲ್ವಾ ತೆಗೆದುಕೊಂಡು ಹೊಗಿದ್ದೀರಿ, ನಿಮ್ಮ ಸ್ನೇಹಿತರಿಗೆ ನೀಡಿದ್ರಾ? ಅಂತ ಕೇಳಿದ್ರು, ಇದಕ್ಕೆ ವಿನಯದಿಂದಲೇ ಉತ್ತರಿಸಿದ ಶುಕ್ಲಾ, ಹೌದು ನಾನು ಹಲ್ವಾ, ಮಾವಿನ ರಸ (ಮ್ಯಾಂಗೋ ಜ್ಯೂಸ್‌), ಹೆಸರು ಬೇಳೆ ಹಲ್ವಾ ತಂದಿದ್ದೇನೆ. ಇಲ್ಲಿ ಎಲ್ರೂ ಒಟ್ಟಾಗಿ ಅದನ್ನ ತಿಂದ್ವಿ, ಎಲ್ಲರೂ ತುಂಬಾ ಖುಷಿ ಪಟ್ಟರು. ಇದನ್ನೂ ಓದಿ: ಡಾಕಿಂಗ್‌ ನಂತರದ ಪ್ರಕ್ರಿಯೆ ಶುರು – ಸಂಜೆ 6 ಗಂಟೆ ವೇಳೆಗೆ ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಅಧಿಕೃತ ಎಂಟ್ರಿ

    ಭಾರತ ಬಹಳ ಅದ್ಭುತವಾಗಿ ಕಾಣುತ್ತೆ
    ಮುಂದುವರಿದು.. ಭೂಮಿಯ ಯಾವ ಭಾಗದ ಮೇಲೆ ಪ್ರಯಾಣ ಮಾಡ್ತಿದ್ದೀರಿ? ಅಂತ ಮೋದಿ ಕೇಳಿದ್ದಕ್ಕೆ ಈ ಕ್ಷಣದಲ್ಲಿ ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗ್ತಿಲ್ಲ. ಆದರೆ ಈಗ ಪ್ರತಿ ಗಂಟೆಗೆ 18,000 ವೇಗದಲ್ಲಿ ಪ್ರಯಾಣ ಮಾಡುತ್ತಿದ್ದೇವೆ. 16 ಬಾರಿ ಸೂರ್ಯೋದಯ, ಸೂರ್ಯಾಸ್ತ ನೋಡುತ್ತಿದ್ದೇವೆ. ಭೂಮಿಗೆ ಯಾವುದೇ ಗಡಿ ಕಾಣುವುದಿಲ್ಲ. ಭಾರತ ಮ್ಯಾಪ್‌ನಲ್ಲಿ ನೋಡುವುದಕ್ಕಿಂತ ದೊಡ್ಡದಾಗಿ ಕಾಣುತ್ತೆ. ಭಾರತ ಬಹಳ ಅದ್ಭುತವಾಗಿ ಕಾಣುತ್ತೆ. ರಾಜ್ಯ ದೇಶಗಳ ಗಡಿ ಕಾಣಲ್ಲ ಅಂತ ತಮಗಾದ ಅನುಭವ ಹಂಚಿಕೊಂಡ್ರು.

    International Space Station 1

    ನಂತರ ಬಹಳ ತರಬೇತಿ ಪಡೆದು ಹೋಗಿದ್ದೀರಿ, ಅದಾಗ್ಯೂ ಈಗ ಪರಿಸ್ಥಿತಿ ಹೇಗಿದೆ? ಅಂತ ಕೇಳಿದ್ರು. ಇದಕ್ಕೆ ಉತ್ತರಿಸಿದ ಶುಕ್ಲಾ, ಇಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಸಾಕಷ್ಟು ಸಮಸ್ಯೆಯಾಗುತ್ತದೆ. ನಿಮ್ಮ ಜೊತೆಗೆ ಮಾತನಾಡುವಾಗ ಕಾಲನ್ನು ಕಟ್ಟಿಕೊಂಡಿದ್ದೇವೆ ಅಂತ ಮೈಕ್ ತೋರಿಸಿ ಗುರುತ್ವಾಕರ್ಷಣೆಯ ಬಗ್ಗೆ ವಿವರಣೆ ನೀಡಿದರು. ಇದನ್ನೂ ಓದಿ: ಇಲ್ಲಿಂದ ಭೂಮಿಯನ್ನು ನೋಡುವುದೇ ಸೌಭಾಗ್ಯ – ಬಾಹ್ಯಾಕಾಶ ನಿಲ್ದಾಣದಿಂದ ಶುಭಾಂಶು ಮೊದಲ ಸಂದೇಶ!

    ಸಂವಾದ ಹೇಗಿತ್ತು? (ಪ್ರಶ್ನೋತ್ತರಗಳಲ್ಲಿ ನೋಡಿ…)
    ಮೋದಿ: ಧ್ಯಾನ ಬಾಹ್ಯಾಕಾಶದಲ್ಲಿ ಉಪಯೋಗವಾಗುತ್ತದೆಯೇ?
    ಶುಕ್ಲಾ: ನಾವು ಓಡುತ್ತಿದ್ದೇವೆ, ಅದರ ಸಣ್ಣ ಹೆಜ್ಜೆ ಈ ಪ್ರಯತ್ನ. ಮುಂದೆ ಭಾರತ ತನ್ನದೇಯಾದ ಬಾಹ್ಯಕಾಶ ಕೇಂದ್ರ ಹೊಂದಲಿದೆ. ಬಹಳಷ್ಟು ಜನರು ಇಲ್ಲಿಗೆ ಬರಲಿದ್ದಾರೆ. ಧ್ಯಾನ ಇಲ್ಲಿ ಬಹಳ ಮುಖ್ಯವಾಗುತ್ತದೆ. ಧ್ಯಾನದಿಂದ ಮುಂದಿನ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು.

    ಮೋದಿ: ನಿಮ್ಮ ಪ್ರಯೋಗಗಳು ಹೇಗೆ ಸಾಗುತ್ತಿದೆ?
    ಶುಕ್ಲಾ: ನಾವು ಇಲ್ಲಿ ಹಲವು ಪ್ರಯೋಗ ಮಾಡುತ್ತಿದ್ದೇವೆ. ಮೂಳೆ ಸವೆತದ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ. ಮೊಳಕೆ ಕಾಳುಗಳ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದೇವೆ. ಭೂಮಿಯ ಮೇಲೆ ಸಾಕಷ್ಟು ನಿಧಾನವಾಗಿ ಸಿಗುವ ಪ್ರತಿಫಲ ಇಲ್ಲಿದೆ ವೇಗವಾಗಿ ಸಿಗುತ್ತದೆ. ಇದನ್ನೂ ಓದಿ: NASA Axiom-4 Mission | ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ

    ಮೋದಿ: ಯುವ ಜನತೆಗೆ ಏನು ಸಂದೇಶ ನೀಡುತ್ತೀರಿ?
    ಶುಕ್ಲಾ: ನಾವು ದೊಡ್ಡ ಕನಸುಗಳೊಂದಿಗೆ ಓಡುತ್ತಿದ್ದೇವೆ. ಅದಕ್ಕೆ ನಿಮ್ಮಂಥವರ ಸಹಕಾರ ಬೇಕು. ಯಶಸ್ಸು ಸಿಗುವ ತನಕ ನಿರಂತರ ಪ್ರಯತ್ನ ಮಾಡಬೇಕು. ನಡುವೆ ಸೋಲು ಒಪ್ಪಿಕೊಳ್ಳಬಾರದು.

    ಮೋದಿ: ಮಿಷನ್ ಗಗನ್ ಯಾನ್ ಮಾಡಬೇಕು, ಸ್ವತಃ ಬಾಹ್ಯಕಾಶ ಕೇಂದ್ರ ಹೊಂದಬೇಕು, ಗಗನಯಾತ್ರಿಗಳನ್ನು ಲ್ಯಾಂಡ್ ಮಾಡಬೇಕು. ನಿಮ್ಮ ಅನುಭವ ಬಹಳ ಮುಖ್ಯ, ನೀವು ಇದನ್ನು ದಾಖಲಿಸುತ್ತಿದ್ದೀರಾ?
    ಶುಕ್ಲಾ: ನಾವು ಎಲ್ಲವನ್ನೂ ದಾಖಲಿಸುತ್ತಿದ್ದೇವೆ. ಗಗನಯಾನ್ ಸಾಧ್ಯವಾದಷ್ಟು ಬೇಗ ಈಡೇರಲಿದೆ.

    ಸಂವಾದದ ಕೊನೆಯಲ್ಲಿ ಮಾತನಾಡುತ್ತಾ, ಇದು ಭಾರತದ ಗಗನಯಾನ್ ಯಶಸ್ಸಿನ ಮೊದಲ ಅಧ್ಯಾಯವಾಗಿದೆ. ವಿಕಸಿತ್ ಭಾರತಕ್ಕೆ ವೇಗ ಮತ್ತು ಶಕ್ತಿ ನೀಡಲಿದೆ. ಇದು ಬಾಹ್ಯಕಾಶದ ಮತ್ತಷ್ಟು ಅವಕಾಶಗಳನ್ನು ಸೃಷ್ಟಿಸಲಿದೆ ಎಂದರಲ್ಲದೇ ನಿಮ್ಮ ವಾಪಸ್ ಬರುವಿಕೆಯೂ ನಮ್ಮಗೆ ಬಹಳ ಮುಖ್ಯ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಕಿವಿಮಾತು ಹೇಳಿದರು.

  • ಬಾಹ್ಯಾಕಾಶದಲ್ಲಿ ವಿಶ್ವದಾಖಲೆ ನಿರ್ಮಿಸಿ ಭೂಮಿಗೆ ಮರಳಿದ ಸುನಿತಾ

    ಬಾಹ್ಯಾಕಾಶದಲ್ಲಿ ವಿಶ್ವದಾಖಲೆ ನಿರ್ಮಿಸಿ ಭೂಮಿಗೆ ಮರಳಿದ ಸುನಿತಾ

    ಫ್ಲೋರಿಡಾ: 286 ದಿನಗಳ ಬಾಹ್ಯಾಕಾಶವಾಸದ ಬಳಿಕ ಭೂಮಿಗೆ ಮರಳಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ (Sunita Willams) ಸುದೀರ್ಘ ಬಾಹ್ಯಾಕಾಶ ನಡಿಗೆ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ ಅವರು 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಪೂರೈಸಿದ್ದಾರೆ. ಈ ಮೂಲಕ ಸುದೀರ್ಘ ಬಾಹ್ಯಾಕಾಶ ನಡಿಗೆ ಪೂರೈಸಿದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಒಟ್ಟಾರೆ ಬಾಹ್ಯಾಕಾಶ ನಡಿಗೆ ಪೂರೈಸಿದ ಗಗಯಾತ್ರಿಗಳ ಸಾರ್ವಕಾಲಿಕ ದಾಖಲೆ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ.

    ಮತ್ತೊಂದು ದಾಖಲೆ
    ಅಲ್ಲದೇ ಬಾಹ್ಯಾಕಾಶದಲ್ಲಿ (Space) ಸುದೀರ್ಘ ವಾಸದ ದಾಖಲೆ ಬರೆದ 2ನೇ ಗಗನಯಾತ್ರಿ ಎಂಬ ಹೆಗ್ಗಳಿಕೆಗೂ ಸುನಿತಾ ಅವರು ಪಾತ್ರರಾಗಿದ್ದಾರೆ. ಒಟ್ಟು 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದು, ಇತಿಹಾಸದ ಪುಟ ಸೇರಿದ್ದಾರೆ. ವೃತ್ತಿಜೀವನದಲ್ಲಿ ಮೂರು ಬಾರಿ ಬಾಹ್ಯಾಕಾಶ ಹಾರಾಟಗಳನ್ನು ಪೂರ್ಣಗೊಳಿಸಿರುವ ಸುನಿತಾ ಅವರು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಕೆಲವು ಮಹತ್ವದ ಸಂಶೋಧನೆ ಮತ್ತು ಪರಿಶೋಧನಾ ಕಾರ್ಯಾಚರಣೆಗಳಿಗೆ ಕೊಡುಗೆ ನೀಡಿದ್ದಾರೆ. ಅವರ ಕೆಲಸ, ವಿಶೇಷವಾಗಿ ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ, ಅವರನ್ನು ನಾಸಾದ ಪ್ರಮುಖ ವ್ಯಕ್ತಿಯಾಗಿ ಗುರುತಿಸುತ್ತದೆ. ಇದೀಗ ವಿಶ್ವದಾಖಲೆ ಬರೆದಿರುವುದು ವಿಶ್ವದ ಹಾಗೂ ಭಾರತೀಯರ ಗಮನ ಸೆಳೆದಿದೆ.

    2024ರ ಜೂನ್ 6ರಂದು ಸುನಿತಾ ಮತ್ತು ವಿಲ್ಮೋರ್ 8 ದಿನಗಳ ಕಾರ್ಯಾಚರಣೆಗಾಗಿ ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಬಾಹ್ಯಾಕಾಶ ನೌಕೆಯ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಹಿಂದಿರುಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ 286 ದಿನಗಳನ್ನು ಪೂರೈಸಿದ ಸುನಿತಾ ಅವರು ಬಾಹ್ಯಾಕಾಶ ಕೇಂದ್ರದಲ್ಲಿ (International Space Station) ಸುದೀರ್ಘ ವಾಸ ಮಾಡಿದ ವಿಶ್ವದ 2ನೇ ಗಗನಯಾತ್ರಿ ಎನಿಸಿಕೊಂಡಿದ್ದಾರೆ. ಸುನಿತಾ ಅವರು ಒಟ್ಟಾರೆ 608 ದಿನಗಳನ್ನು ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದಿದ್ದಾರೆ. ಇನ್ನೂ 675 ದಿನಗಳನ್ನ ಬಾಹ್ಯಾಕಾಶ ಪೂರೈಸಿರುವ ಪೆಗ್ಗಿ ವಿಟ್ಸನ್‌ (Peggy Whitson) ಮೊದಲ ಸ್ಥಾನದಲ್ಲಿದ್ದಾರೆ.

    ಬಾಹ್ಯಾಕಾಶದಲ್ಲಿ ಹೆಚ್ಚು ಸಮಯ ಕಳೆದವರು ಯಾರು?
    * ಪೆಗ್ಗಿ ವಿಟ್ಸನ್ – 675 ದಿನಗಳು
    * ಸುನಿತಾ ವಿಲಿಯಮ್ಸ್ – 608 ದಿನಗಳು
    * ಜೆಫ್ ವಿಲಿಯಮ್ಸ್ – 534 ದಿನಗಳು
    * ಮಾರ್ಕ್ ವಂದೇ ಹೇ – 523 ದಿನಗಳು
    * ಸ್ಕಾಟ್ ಕೆಲ್ಲಿ – 520 ದಿನಗಳು

    ವಿಲಿಯಮ್ಸ್ ಮತ್ತು ವಿಲ್ಮೋರ್ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ 12,13,47,491 ಮೈಲುಗಳು ಪ್ರಯಾಣಿಸಿದ್ದಾರೆ. ಬಾಹ್ಯಾಕಾಶದಲ್ಲಿ 286 ದಿನಗಳನ್ನು ಕಳೆದ ಇವರು ಭೂಮಿಯ ಸುತ್ತ 4,576 ಬಾರಿ ಕಕ್ಷೆಗಳನ್ನು ಸುತ್ತಿದ್ದಾರೆ ಎಂದು ನಾಸಾ ಹೇಳಿದೆ. ವಿಲಿಯಮ್ಸ್ ತನ್ನ ಮೂರು ಹಾರಾಟಗಳಲ್ಲಿ 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದರೆ, ವಿಲ್ಮೋರ್ ತನ್ನ ಮೂರು ಹಾರಾಟಗಳಲ್ಲಿ 464 ದಿನಗಳನ್ನು ಬಾಹ್ಯಾಕಾಶದಲ್ಲಿ ಪೂರೈಸಿದ್ದಾರೆ.

  • 75ನೇ ಸ್ವಾತಂತ್ರ್ಯಕ್ಕೆ ಬಾಹ್ಯಾಕಾಶದಿಂದಲೂ ಬಂತು ಶುಭ ಹಾರೈಕೆ

    75ನೇ ಸ್ವಾತಂತ್ರ್ಯಕ್ಕೆ ಬಾಹ್ಯಾಕಾಶದಿಂದಲೂ ಬಂತು ಶುಭ ಹಾರೈಕೆ

    ವಾಷಿಂಗ್ಟನ್: ಭಾರತ ಇದೀಗ 75ನೇ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದು, ದೇಶ ವಿದೇಶಗಳಿಂದ ಶುಭಹಾರೈಕೆಯ ಸಂದೇಶಗಳು ಬರುತ್ತಲೇ ಇವೆ. ಆದರೆ ಈ ಒಂದು ಸಂದೇಶ ಬಾಹ್ಯಾಕಾಶದಿಂದ ಬಂದಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಗನಯಾತ್ರಿ ಸಮಂತಾ ಕ್ರಿಸ್ಟೋಫೋರೆಟ್ಟಿ ಭಾರತ ಆಚರಿಸುತ್ತಿರುವ ಐತಿಹಾಸಿಕ ಕ್ಷಣಕ್ಕೆ ಅಭಿನಂದಿಸಿದ್ದಾರೆ.

    ವೀಡಿಯೋ ಸಂದೇಶದಲ್ಲಿ ಮಾತನಾಡಿದ ಗಗನಯಾತ್ರಿ, ಭಾರತದ 75ನೇ ವರ್ಷದ ಸ್ವಾತಂತ್ರ‍್ಯಕ್ಕೆ ಅಭಿನಂದಿಸಲು ಸಂತೋಷವಾಗಿದೆ. ದಶಕಗಳಿಂದ ಅಂತಾರಾಷ್ಟ್ರೀಯ ಏಜೆನ್ಸಿಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೊತೆಗೆ ಅನೇಕ ಬಾಹ್ಯಾಕಾಶ ಮತ್ತು ವಿಜ್ಞಾನ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು.

    ನಾಸಾ ಮತ್ತು ಇಸ್ರೋ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿರುವ ಸಾರ್ ಮಿಷನ್ ಬಗ್ಗೆ ಮಾತನಾಡಿದ ಸಮಂತಾ, ಇಸ್ರೋ ಮುಂಬರುವ ಎನ್‌ಐಎಸ್‌ಎಆರ್ ಅರ್ಥ್ ಸೈನ್ಸ್ ಮಿಷನ್‌ನ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿದೆ. ಭಾರತ ತನ್ನ ಸಹಕಾರ ನೀಡುವುದನ್ನು ಇಂದಿಗೂ ಮುಂದುವರೆಸಿದೆ. ನಮಗೆ ವಿಪತ್ತುಗಳನ್ನು ಪತ್ತೆಹಚ್ಚಲು ಹಾಗೂ ಬದಲಾಗುತ್ತಿರುವ ಹವಾಮಾನದ ಬಗ್ಗೆ ಮಾಹಿತಿ ಪಡೆಯಲು ಸಹಾಯ ಮಾಡುತ್ತಿದೆ ಎಂದರು. ಇದನ್ನೂ ಓದಿ: ದೇಶದ ಅಭಿವೃದ್ಧಿಗಾಗಿ ಶ್ರಮಿಸೋಣ: ಥಾವರ್ ಚಂದ್ ಗೆಹ್ಲೋಟ್

    ಗಗನ್‌ಯಾನ್ ಮಿಷನ್ ಬಗ್ಗೆ ಮಾತನಾಡಿ, ಇದು ಮುಂದಿನ ವರ್ಷ ತನ್ನ ಮೊದಲ ಸಿಬ್ಬಂದಿರಹಿತ ಕಕ್ಷೆಯ ಹಾರಾಟವನ್ನು ನಡೆಸುವ ಸಾಧ್ಯತೆಯಿದೆ. ನಾಸಾ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಹಾಗೂ ಇತರ ಎಲ್ಲಾ ಏಜೆನ್ಸಿಗಳ ಪರವಾಗಿ, ಇಸ್ರೋ ಗಗನ್‌ಯಾನ್ ಮಿಷನ್‌ಗೆ ಶುಭ ಹಾರೈಸುತ್ತೇನೆ ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.

    ಇಸ್ರೋ ಜೊತೆಗಿನ ಪಾಲುದಾರಿಕೆಯನ್ನು ವಿಸ್ತರಿಸುವುದು ಹಾಗೂ ಬ್ರಹ್ಮಾಂಡವನ್ನು ಒಟ್ಟಾಗಿ ಅನ್ವೇಷಿಸುವುದು ನಮ್ಮೆಲ್ಲರ ಹಾಗೂ ಭವಿಷ್ಯದ ಬಾಹ್ಯಾಕಾಶ ಪರಿಶೋಧನೆಯ ಗುರಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಆ.15ಕ್ಕೆ ಓಲಾ ಎಲೆಕ್ಟ್ರಿಕ್‌ ಕಾರು ಬಿಡುಗಡೆ?

    ಭಾರತ ಗಗನ್‌ಯಾನ್ ಮಿಷನ್ ಪರೀಕ್ಷಿಸಲು ಅಂತಿಮ ಹಂತದ ತಯಾರಿಯಲ್ಲಿದೆ.

    Live Tv
    [brid partner=56869869 player=32851 video=960834 autoplay=true]

  • 6 ತಿಂಗಳ ಬಾಹ್ಯಾಕಾಶ ಯಾನ ಮುಗಿಸಿ ಬರಲಿದ್ದಾರೆ ಭಾರತೀಯ ಮೂಲದ ಗಗನಯಾತ್ರಿ

    6 ತಿಂಗಳ ಬಾಹ್ಯಾಕಾಶ ಯಾನ ಮುಗಿಸಿ ಬರಲಿದ್ದಾರೆ ಭಾರತೀಯ ಮೂಲದ ಗಗನಯಾತ್ರಿ

    ವಾಷಿಂಗ್ಟನ್: ಭಾರತೀಯ ಮೂಲದ ಗಗನಯಾತ್ರಿ ರಾಜಾ ಚಾರಿ 6 ತಿಂಗಳು ಬಾಹ್ಯಾಕಾಶ ಯಾನದ ಬಳಿಕ ಭೂಮಿಗೆ ಮರಳಲು ಸಿದ್ದರಾಗಿದ್ದಾರೆ.

    ರಾಜಾ ಚಾರಿ ನಾಸಾ ಸ್ಪೇಸ್ ಎಕ್ಸ್ ಕ್ರ್ಯೂ ಮಿಷನ್ ಅಡಿಯಲ್ಲಿ ಇತರ ಮೂವರು ಗಗನಯಾತ್ರಿಗಳೊಂದಿಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಪ್ರಯಾಣ ಪ್ರಾರಂಭಿಸಿದ್ದರು. ಇದೀಗ ಶೀಘ್ರವೇ ಈ ತಂಡ ಭೂಮಿಗೆ ಮರಳಲಿದೆ. ಇದನ್ನೂ ಓದಿ: ಮೇ 15ರಿಂದ ರಷ್ಯಾದ ಕಚ್ಚಾತೈಲ ಆಮದು ಕಡಿತ

    ಭಾರತ ಮೂಲದ ರಾಜಾ ಚಾರಿಯೊಂದಿಗೆ ಟಾಮ್ ಮಾರ್ಷ್ಬರ್ನ್, ಕೈಲಾ ಬ್ಯಾರನ್ ಹಾಗೂ ಯುರೋಪ್ ಸ್ಪೇಸ್ ಏಜೆನ್ಸಿಯ(ಇಎಸ್‌ಎ) ಗಗನಯಾತ್ರಿ ಮಥಿಯಾಸ್ ಮೌರೆರ್ 2021ರ ನವೆಂಬರ್‌ನಲ್ಲಿ ಬಾಹ್ಯಾಕಾಶ ಪ್ರಯಾಣ ಪ್ರಾರಂಭಿಸಿದರು. ಇದೀಗ ಕ್ರ್ಯೂ-3 ತಂಡ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಯಶಸ್ವೀ ವೈಜ್ಞಾನಿಕ ಕಾರ್ಯಾಚರಣೆ ಬಳಿಕ ಈ ತಿಂಗಳ ಕೊನೆಯಲ್ಲಿ ಭೂಮಿಗೆ ಮರಳಲಿದ್ದಾರೆ.

    ರಾಜಾ ಚಾರಿ ಯಾರು?
    ಭಾರತದ ತೆಲಂಗಾಣದಲ್ಲಿ ಜನಿಸಿದ ರಾಜಾ ಚಾರಿ ಪ್ರಸ್ತುತ ನಾಸಾ ಸ್ಪೇಸ್‌ಎಕ್ಸ್ ಕ್ರ‍್ಯೂ-3 ಮಿಷನ್‌ನ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2017ರಲ್ಲಿ ನಾಸಾ ರಾಜಾ ಚಾರಿಯನ್ನು ಗಗನಯಾತ್ರಿ ಅಭ್ಯರ್ಥಿ ವರ್ಗಕ್ಕೆ ಸೇರಿಸಿದೆ. ಇದನ್ನೂ ಓದಿ: ಪತ್ರಿಕಾ ಅಂಕಣದಿಂದಾಗಿ ಟ್ವಿಟ್ಟರ್‌ ಕಂಪನಿ ಖರೀದಿಗೆ ಮುಂದಾದ್ರಾ ಮಸ್ಕ್‌?

    ಇವರು 1999ರಲ್ಲಿ ಅಮೆರಿಕದ ಏರ್ ಫೋರ್ಸ್ ಅಕಾಡೆಮಿಯಿಂದ ಆಸ್ಟ್ರೋನಾಟಿಕಲ್ ಇಂಜಿನಿಯರಿಂಗ್ ಹಾಗೂ ಇಂಜಿನಿಯರಿಂಗ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ಸ್ ಹಾಗೂ ಆಸ್ಟ್ರೋನಾಟಿಕಲ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಮೆರಿಕದ ನೇವಲ್ ಟೆಸ್ಟ್ ಪೈಲಟ್ ಸ್ಕೂಲ್‌ನಲ್ಲಿ ಪದವಿಯನ್ನೂ ಪೂರೈಸಿದ್ದಾರೆ.

    ಇದೀಗ ಯಶಸ್ವೀ ಬಾಹ್ಯಾಕಾಶ ಕಾರ್ಯಾಚರಣೆಗಳ ಬಳಿಕ ಕ್ರ್ಯೂ-3 ತಂಡ ಫ್ಲೋರಿಡಾಗೆ ಬಂದಿಳಿಯಲಿದ್ದಾರೆ ಎಂದು ನಾಸಾ ತಿಳಿಸಿದೆ.

  • ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರವನ್ನು ಇಷ್ಟಪಡುತ್ತಾರೆ: ಅನಿಲ್ ಮೆನನ್

    ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರವನ್ನು ಇಷ್ಟಪಡುತ್ತಾರೆ: ಅನಿಲ್ ಮೆನನ್

    ವಾಷಿಂಗ್ಟನ್: ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರವನ್ನು ಇಷ್ಟಪಡುತ್ತಾರೆ ಎಂದು ಭಾರತೀಯ ಮೂಲದ ನಾಸಾ ಗಗನಯಾತ್ರಿ ಡಾ.ಅನಿಲ್ ಮೆನನ್ ಸಂದರ್ಶನ ಹೇಳಿದ್ದಾರೆ.

    ಶೀಘ್ರದಲ್ಲೇ ಚಂದ್ರನತ್ತ ಹಾರುವ ಹತ್ತು ಗಗನಯಾತ್ರಿಗಳಲ್ಲಿ ಭಾರತೀಯ ಮೂಲದ ಡಾ.ಅನಿಲ್ ಮೆನನ್ ಸಹ ಒಬ್ಬರು. ಈ ವೇಳೆ ಮೆನನ್ ಅವರು ವಿಶೇಷ ಸಂದರ್ಶನ ಒಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿದ್ದಾಗ, ಆಹಾರವು ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಅಲ್ಲಿ ದ್ರವ ರೂಪದ ಎಲ್ಲ ವಸ್ತುಗಳು ತೇಲುತ್ತಿರುತ್ತೆ. ಮೂಗು ಉಸಿರುಕಟ್ಟಿಕೊಂಡಿರುತ್ತೆ. ಅದಕ್ಕೆ ಗಗನಯಾತ್ರಿಗಳಿಗೆ ಭಾರತೀಯ ಆಹಾರ ಎಂದರೆ ಇಷ್ಟ. ಏಕೆಂದರೆ ಭಾರತೀಯ ಆಹಾರಗಳು ಮಸಾಲೆಯುಕ್ತವಾಗಿರುತ್ತೆ. ಅದನ್ನು ತಿನ್ನಲು ಎಲ್ಲ ಗಗನಯಾತ್ರಿಗಳು ಇಷ್ಟ ಪಡುತ್ತಾರೆ. ಈ ಕುರಿತು ಸ್ವತಃ ಗಗನಯಾತ್ರಿಗಳೇ ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:  ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

    ನಾನು ನನ್ನ ಹೃದಯದಲ್ಲಿ ಕೇರಳಗೆ ವಿಶೇಷ ಸ್ಥಾನವನ್ನು ಕೊಟ್ಟಿದ್ದೇನೆ. ಅಲ್ಲಿಗೆ ಹೋದರೆ ನನಗೆ ನೆಮ್ಮದಿ ಇರುತ್ತೆ. ಒಂದು ರೀತಿಯ ಸುರಕ್ಷತೆಯ ಭಾವ ಇರುತ್ತೆ. ಅಲ್ಲಿನ ಜನರು ನನ್ನನ್ನು ವಿಶೇಷವಾಗಿ ಸ್ವಾಗತಿಸುತ್ತಾರೆ. ನಾನು ಭಾರತದಲ್ಲಿ ಇದ್ದ ಕಾರಣ ಇಲ್ಲಿ ಹೊಂದಿಕೊಳ್ಳಲು ನನಗೆ ಸಹಾಯವಾಯಿತು. ಏಕೆಂದರೆ ಭವಿಷ್ಯದಲ್ಲಿ ನಾನು ಗಗನಯಾತ್ರಿಯಾಗಿ ಅರ್ಜಿ ಸಲ್ಲಿಸಬೇಕಾದ ಭಾರತೀಯ ಕೌಶಲ್ಯಗಳು ಬೇಕಾಗುತ್ತವೆ ಎಂದು ನೆನೆಪಿಸಿಕೊಂಡರು.

    ಕೇರಳ ಮೆನನ್ ಅವರ ತಂದೆಯ ಊರಾಗಿದ್ದು, ಮೆನನ್ ತಮ್ಮ ಪತ್ನಿಯನ್ನು ಸಹ ಕರೆದುಕೊಂಡು ಹೋಗಿ ಈ ಜಾಗಗಳನ್ನು ತೋರಿಸಿದ್ದರು. ಮೆನನ್ ಮಿನ್ನೇಸೋಟದ ಮಿನ್ನಿಯಾಪೋಲಿಸ್‍ನಲ್ಲಿ ಹುಟ್ಟಿ ಬೆಳೆದಿದ್ದು, ಪೋಲಿಯೊ ಲಸಿಕೆಯನ್ನು ಅಧ್ಯಯನ ಮಾಡಲು ಮತ್ತು ಬೆಂಬಲಿಸಲು ಅವರು ರೋಟರಿ ರಾಯಭಾರಿ ವಿದ್ವಾಂಸರಾಗಿ ಭಾರತದಲ್ಲಿ ಒಂದು ವರ್ಷ ಸೇವೆಯನ್ನು ಸಲ್ಲಿಸಿದ್ದರು. ಇದನ್ನೂ ಓದಿ: ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು

    ಮೆನನ್ ಅವರು 2014 ರಲ್ಲಿ ನಾಸಾ ಫ್ಲೈಟ್ ಸರ್ಜನ್ ಆಗಿ ವೃತ್ತಿಜೀವನವನ್ನು ಆರಂಭಿಸಿದ್ದು, ಸೂಯೆಜ್ 43 ಮತ್ತು ಸೂಯೆಜ್ 52 ಗೆ ಪ್ರಧಾನ ಸಿಬ್ಬಂದಿ ಶಸ್ತ್ರಚಿಕಿತ್ಸಕ ಮತ್ತು ಸೂಯೆಜ್ 52ಗೆ ಉಪ ಸಿಬ್ಬಂದಿ ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸಿದ್ದರು. ನಂತರ ನಾಸಾದಲ್ಲಿ ಗಗನಯಾತ್ರಿ ಅಭ್ಯರ್ಥಿಯಾಗಿ ಎರಡು ವರ್ಷಗಳ ಆರಂಭಿಕ ಗಗನಯಾತ್ರಿ ತರಬೇತಿಯನ್ನು ಪೂರ್ಣಗೊಳಿಸಿದ್ದು, ಜನವರಿ 2022ರಂದು ಕರ್ತವ್ಯಕ್ಕೆ ರಿಪೋಟ್ ಮಾಡಿಕೊಳ್ಳುತ್ತಿದ್ದಾರೆ.

  • 328 ದಿನ ಬಾಹ್ಯಾಕಾಶದಲ್ಲಿದ್ದ ಗಗನಯಾತ್ರಿಯನ್ನು ಅಪ್ಪಿ ಮುದ್ದಾಡಿದ ಶ್ವಾನ – ವಿಡಿಯೋ

    328 ದಿನ ಬಾಹ್ಯಾಕಾಶದಲ್ಲಿದ್ದ ಗಗನಯಾತ್ರಿಯನ್ನು ಅಪ್ಪಿ ಮುದ್ದಾಡಿದ ಶ್ವಾನ – ವಿಡಿಯೋ

    ವಾಷಿಂಗ್ಟನ್: 328 ದಿನ ಬಾಹ್ಯಾಕಾಶದಲ್ಲಿ ಇದ್ದು ಬಂದ ನಾಸಾದ ಮಹಿಳಾ ಗಗನಯಾತ್ರಿಯನ್ನು ಶ್ವಾನ ಅಪ್ಪಿ ಮುದ್ದಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ನಾಸಾದ ಗಗನಯಾತ್ರಿ ಕ್ರಿಸ್ಟನ್ ಕೋಚ್ 328 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇದ್ದು, ಫೆಬ್ರವರಿ 6 ರಂದು ವಾಪಸ್ ಬಂದಿದ್ದು ಮನೆಗೆ ತೆರಳಿದ್ದಾರೆ. ಮನೆಗೆ ಹೋದಾಗ ಆಕೆ ಪ್ರೀತಿಯ ನಾಯಿ ಅವರನ್ನು ಬರಮಾಡಿಕೊಂಡ ರೀತಿಯನ್ನು ವಿಡಿಯೋ ಮಾಡಿ ಕೋಚ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಶ್ವಾನದ ಪ್ರೀತಿಯನ್ನು ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

    ಕೋಚ್ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ 30 ಸೆಕೆಂಡಿನ ವಿಡಿಯೋದಲ್ಲಿ, ಕೋಚ್ ತನ್ನ ಪತಿಯ ಜೊತೆ ಬರುವುದನ್ನು ಗಮನಿಸಿದ ಶ್ವಾನ ಅವರು ಮನೆಯೊಳಗೆ ಬರುವ ಮುಂಚೆಯೇ ಬಾಗಿಲ ಬಳಿ ಬಹಳ ಉತ್ಸಾಹದಿಂದ ಕಾಯುತ್ತಿರುತ್ತದೆ. ಬಾಗಿಲು ತೆರೆದು ಒಳ ಬಂದ ಕೋಚ್ ಅವರನ್ನು ತುಂಬ ಖುಷಿಯಾಗಿ ಅಪ್ಪಿಕೊಂಡು ಮುದ್ದಾಡುತ್ತದೆ. ವಿಡಿಯೋದಲ್ಲಿ ಬಹಳ ದಿನದ ನಂತರ ಕೋಚ್ ಅವರನ್ನು ಕಂಡ ಶ್ವಾನದ ಸಂತೋಷವನ್ನು ನಾವು ಕಾಣಬಹುದು.

    ಕ್ರಿಸ್ಟನ್ ಕೋಚ್ ಅವರು ಈ ಶ್ವಾನವನ್ನು ಮಾನವೀಯ ಸಮಾಜದಿಂದ ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಕೋಚ್ ಅವರು, ಯಾರು ಹೆಚ್ಚು ಉತ್ಸುಕರಾಗಿದ್ದರೋ ಎಂದು ನನಗೆ ಗೊತ್ತಿಲ್ಲ. ಒಂದು ವರ್ಷದ ನಂತರ ಅವಳು ನನ್ನನ್ನು ನೆನಪಿಸಿಕೊಂಡಿದ್ದಕ್ಕೆ ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ನಾಸಾದಲ್ಲಿ 2013 ರಿಂದ ಗಗನಯಾತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕ್ರಿಸ್ಟನ್ ಕೋಚ್, 2019 ಮಾರ್ಚ್ 14 ರಂದು ಬಾಹ್ಯಕಾಶಕ್ಕೆ ಹೋಗಿ ಸತತ 328 ದಿನಗಳ ನಂತರ ಅಂದರೆ ಫೆಬ್ರವರಿ 6 ರಂದು ಭೂಮಿಗೆ ವಾಪಸ್ ಆಗಿದ್ದರು. ಈ ಮೂಲಕ ಅತೀ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಇದ್ದು ಬಂದ ಮಹಿಳೆ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

  • ಅಂತರಿಕ್ಷದಲ್ಲಿ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ: ಇಸ್ರೋ ಮುಖ್ಯಸ್ಥ

    ಅಂತರಿಕ್ಷದಲ್ಲಿ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ: ಇಸ್ರೋ ಮುಖ್ಯಸ್ಥ

    ನವದೆಹಲಿ: ಚಂದ್ರಯಾನ 2ಕ್ಕೆ ಸಜ್ಜಾಗುತ್ತಿರುವ ಇಸ್ರೋ ಇದೀಗ ಮತ್ತೊಂದು ಮಹತ್ವಾಕಾಂಕ್ಷೆಯ ಕೆಲಸಕ್ಕೆ ಕೈ ಹಾಕಿದ್ದು, ಬಾಹ್ಯಾಕಾಶ ಸಮರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಲು ಪ್ಲಾನ್ ಮಾಡಿದೆ.

    ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ ಶಿವನ್, 2030ರ ಹೊತ್ತಿಗೆ ಭಾರತ, 20 ಟನ್ ತೂಕದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಯೋಜನೆಗೆ ಯಾವ ದೇಶದ ನೆರವನ್ನು ಪಡೆಯುತ್ತಿಲ್ಲ. ಈ ನಿಲ್ದಾಣದಲ್ಲಿ ಸಣ್ಣ ಪ್ರಮಾಣದ ಗುರುತ್ವ ಪರೀಕ್ಷೆಗಳನ್ನು ಮಾಡುವ ಉದ್ದೇಶ ಹೊಂದಲಾಗಿದೆ. ಇಲ್ಲಿ ಚಿಕ್ಕ ಪ್ರಮಾಣದ ಗಗನ ನೌಕೆಯ ಉಡಾವಣೆ ಮತ್ತು ಮೈಕ್ರೊಗ್ಯಾವಿಟಿ ಪರೀಕ್ಷೆ ನಡೆಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

    ಇದೇ ಸಂದರ್ಭದಲ್ಲಿ 2022ರಲ್ಲಿ ಗಗನಯಾನ ಮಿಷನ್ ಅಡಿ ಭಾರತದ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಕೂಡ ರೂಪಿಸಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಅರ್ಹರನ್ನು ಆಯ್ಕೆ ಮಾಡಿ 2 ವರ್ಷ ತರಬೇತಿ ನೀಡಲಾಗುವುದು ಎಂದು ಶಿವನ್ ತಿಳಿಸಿದ್ದಾರೆ.