Tag: ಗಗನಚುಕ್ಕಿ

  • ಮಂಡ್ಯದ ಅಭಿವೃದ್ಧಿಗೆ 1,970 ಕೋಟಿ ರೂ. ಐತಿಹಾಸಿಕ ಅನುದಾನ: ಡಿಕೆಶಿ

    ಮಂಡ್ಯದ ಅಭಿವೃದ್ಧಿಗೆ 1,970 ಕೋಟಿ ರೂ. ಐತಿಹಾಸಿಕ ಅನುದಾನ: ಡಿಕೆಶಿ

    – ಪ್ರವಾಸೋದ್ಯಮ ನೀತಿಯಿಂದ 1.50 ಲಕ್ಷ ಉದ್ಯೋಗ ಸೃಷ್ಟಿ

    ಮಂಡ್ಯ: ಜಿಲ್ಲೆಗೆ ನೀರಾವರಿ ಇಲಾಖೆಯಿಂದ 1,970 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಕರ್ನಾಟಕದ (Karnataka) ಇತಿಹಾಸದಲ್ಲಿಯೇ ಮಂಡ್ಯ (Mandya) ಜಿಲ್ಲೆಗೆ ಇಷ್ಟು ದೊಡ್ಡ ಮೊತ್ತದ ಅನುದಾನ ನೀಡಿದ ಉದಾಹರಣೆಯೇ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಹೇಳಿದರು.

    ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ (Malavalli) ಭಾನುವಾರ (ಸೆ.14) ನಡೆದ ಗಗನಚುಕ್ಕಿ ಜಲಪಾತೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಅನುದಾನದ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಸುಳ್ಳು ಹೇಳಿದ್ದರೇ ವಿರೋಧ ಪಕ್ಷದವರು ಚರ್ಚೆ ಮಾಡಬಹುದು. ಜಿಲ್ಲೆಯ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಮಂಡ್ಯ ಜಿಲ್ಲೆಯ ರೈತರ ಬದುಕಿನ ಉನ್ನತಿ ಸೇರಿದಂತೆ ಎಲ್ಲರ ಸರ್ವತೋಮುಖ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಸಿದ್ದರಾಮಯ್ಯ ಅವರ ಸರ್ಕಾರ ಪಣತೊಟ್ಟಿದೆ ಎಂದು ತಿಳಿಸಿದರು. ಇದನ್ನೂ ಓದಿ: ಎರಡು ದಿನಗಳ ವರ್ಣರಂಜಿತ ಗಗನಚುಕ್ಕಿ ಜಲಪಾತೋತ್ಸವಕ್ಕೆ ತೆರೆ

    ಮಳವಳ್ಳಿಯ ಜನಪ್ರಿಯ ಶಾಸಕರಾದ ನರೇಂದ್ರ ಸ್ವಾಮಿ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ 300 ಕೋಟಿ ರೂ. ಅನುದಾನ ತಂದಿದ್ದಾರೆ. ಮಂಡ್ಯದ ಜನತೆಯ ಸೇವೆಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ನಾವು ನಿಮ್ಮ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಅಧಿಕಾರಿಗಳು ಸಹ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವೊಬ್ಬರು ಜಿಲ್ಲೆಯಲ್ಲಿ ಶಾಂತಿಭಂಗ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.

    ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ವರವಮಿಗೆ ನೀನು ಬೇಡಿಕೊಳ್ಳೋ ಮಂಕುತಿಮ್ಮ ಎಂದು ಡಿವಿಜಿ ಹೇಳಿದ್ದಾರೆ. ಏನೇ ಬಂದರೂ ಎಲ್ಲರೂ ನಗುತಾ ಒಟ್ಟಾಗಿ ಬಾಳಬೇಕು ಎಂದು ಕರೆ ನೀಡಿದರು.

    ಪ್ರವಾಸೋದ್ಯಮ ನೀತಿಯಿಂದ 1.5 ಲಕ್ಷ ಉದ್ಯೋಗ ಸೃಷ್ಟಿ ಗುರಿ:
    ನಮ್ಮ ಕರ್ನಾಟಕ ಸಾಹಿತ್ಯ, ಸಂಗೀತ, ಚಿತ್ರಕಲೆ, ಶಿಲ್ಪಕಲೆ, ಧಾರ್ಮಿಕ, ಶೈಕ್ಷಣಿಕ ಹೀಗೆ ಅನೇಕ ರಂಗಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ರಾಜ್ಯ ಪ್ರವಾಸೋದ್ಯಮ ನೀತಿಯನ್ನು ರೂಪಿಸಿ ನಾವು ಇತರರಿಗೆ ಮಾದರಿಯಾಗಿದ್ದೇವೆ. ಇದರಿಂದ 1.5 ಲಕ್ಷ ಉದ್ಯೋಗ ಸೃಷ್ಟಿಗೆ ನಾವು ಮುಂದಡಿಯಿಟ್ಟಿದ್ದೇವೆ. ಈ ಭಾಗದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಂಬಂಧಪಟ್ಟ ಸಚಿವರು, ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸುತ್ತೇವೆ. ಪ್ರವಾಸೋದ್ಯಮದಿಂದ ಯುವಕರ ಬದುಕಿನಲ್ಲಿ ಬದಲಾವಣೆಯಾಗಲಿದೆ. ಉದ್ಯೋಗ ಸೃಷ್ಟಿಯಾಗಲಿದೆ. ಕಬಿನಿ ಭಾಗದಲ್ಲಿನ ಪ್ರಾಕೃತಿಕ ಸಂಪತ್ತು ದೇಶದಲ್ಲಿಯೇ ಅಪರೂಪ. ಕರ್ನಾಟಕ ಜಲಪಾತಗಳ ತವರೂರು. ನಮ್ಮ ರಾಜ್ಯದಲ್ಲಿ ಸುಮಾರು 544ಕ್ಕೂ ಹೆಚ್ಚು ಜಲಪಾತಗಳಿವೆ ಎಂದರು. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅನುಮತಿ ನೀಡಿ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಮನವಿ

    ಕಾವೇರಿ ಆರತಿ ಮೂಲಕ ತಾಯಿಗೆ ನಮನ ಸಲ್ಲಿಸಲು ಹೊರಟಿದ್ದೆವು. ಕೋರ್ಟ್ ನಿರ್ಬಂಧ ಹಾಗೂ ರೈತ ಸಂಘದವರ ಅಡಚಣೆಯಿಂದ ನಿಧಾನವಾಗುತ್ತಿದೆ. ಪ್ರಾರ್ಥನೆ ಸಲ್ಲಿಸಲು, ಆರತಿ ಮಾಡಲು ಯಾರೂ ಸಹ ನಿರ್ಬಂಧ ಮಾಡಲು ಸಾಧ್ಯವಿಲ್ಲ. ಇನ್ನೂ ಹೆಚ್ಚುವರಿ ಕಾವೇರಿ ನೀರಿನ ಸಂಗ್ರಹಕ್ಕಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ನಾನು ಹೋರಾಟ ಪ್ರಾರಂಭ ಮಾಡಿದೆ. ನಮ್ಮ ನೀರು ನಮ್ಮ ಹಕ್ಕು ಎಂದು ಮೇಕೆದಾಟಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಲಾಯಿತು. ಪ್ರಕೃತಿಯನ್ನು ಪೂಜಿಸುವುದು ನಮ್ಮ ಸಂಸ್ಕೃತಿ. ಜೂನ್ ತಿಂಗಳಿನಲ್ಲಿಯೇ ಕನ್ನಂಬಾಡಿ ಅಣೆಕಟ್ಟು ತುಂಬಿ ಇತಿಹಾಸ ನಿರ್ಮಾಣವಾಗಿದೆ. ಈ ವರ್ಷ 125 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ತೀರ್ಪಿನ ಪ್ರಕಾರ 177 ಟಿಎಂಸಿ ನೀರು ಹರಿಸಬೇಕಿತ್ತು ಎಂದು ತಿಳಿಸಿದರು.

    ಕಾವೇರಿ ತಾಯಿ ನಮಗೆ ಬದುಕು, ಅನ್ನ, ಜನ್ಮ ನೀಡಿದ್ದಾಳೆ. ಈಕೆ ಪುಣ್ಯದಾತೆ. ಕೊಡಗಿನಲ್ಲಿ ಜನಿಸಿ ಅರಬ್ಬಿ ಸಮುದ್ರ ಸೇರುವ ತನಕ ಲಕ್ಷಾಂತರ ಜನರಿಗೆ ಜೀವನ ನೀಡಿದ್ದಾಳೆ. ಕಾವೇರಿ ಹರಿಯುವ ಭೂಮಿ ಪವಿತ್ರ ಭೂಮಿ. ಕುಡಿಯುವ ನೀರಿಗೆ, ಕೈಗಾರಿಕೆಗೆ, ವಿದ್ಯುತ್ ಉತ್ಪಾದನೆಗೆ, ಪ್ರಮುಖವಾಗಿ ಕೃಷಿಗೆ, ಮೀನುಗಾರಿಕೆಗೆ ಹೀಗೆ ಪ್ರತಿ ಹಂತದಲ್ಲಿಯೂ ತಾಯಿ ಜೊತೆಯಾಗಿ ನಿಂತಿದ್ದಾಳೆ ಎಂದರು.

    ಗಗನಚುಕ್ಕಿ ಜಲಪಾತವಿರುವ ಜಾಗ ಐತಿಹಾಸಿಕ ಸ್ಥಳ. ಏಷ್ಯಾದಲ್ಲಿಯೇ ಮೊಟ್ಟಮೊದಲ ಜಲವಿದ್ಯುತ್ ಉತ್ಪಾದನೆ ಮಾಡಿದ ಸ್ಥಳವಿದು. ಶಾಲಾ ದಿನಗಳಲ್ಲಿ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದೆ. ಆನಂತರ ವಿದ್ಯುತ್ ಸಚಿವನಾಗಿದ್ದಾಗ ಭೇಟಿ ನೀಡಿದ್ದೆ. ಇದೀಗ ಮತ್ತೊಮ್ಮೆ ನೋಡುವ ಸೌಭಾಗ್ಯ ದೊರೆತಿದೆ. ಕೆಜಿಎಫ್‌ಗೆ ವಿದ್ಯುತ್ ನೀಡುವ ಉದ್ದೇಶದಿಂದ 1904ರಲ್ಲಿ ಇಲ್ಲಿಂದ ವಿದ್ಯುತ್ ಉತ್ಪಾದನೆ ಮಾಡಿ ನೀಡಲಾಯಿತು. ಇಲ್ಲಿಂದ ವಿದ್ಯುತ್ ನೀಡದೇ ಇದ್ದಿದ್ದರೆ ಅಭಿವೃದ್ಧಿಯೇ ಇಲ್ಲದಂತಾಗುತ್ತಿತ್ತು. ಇದರಿಂದ ನಮ್ಮೆಲ್ಲರ ಬದುಕಿಗೆ ಬೆಳಕು ಬಂದಿದೆ ಎಂದು ಹೇಳಿದರು.

    ಪ್ರವಾಸೋದ್ಯಮದಿಂದ ಸಾಕಷ್ಟು ಅಭಿವೃದ್ಧಿ ಸಾಧ್ಯ. ಕಳೆದ ವರ್ಷ ಸುಮಾರು 10 ಲಕ್ಷ ಜನರು ದಸರಾ ವೀಕ್ಷಣೆ ಮಾಡಿದರು. ಶಕ್ತಿ ಯೋಜನೆಯ ಪರಿಣಾಮ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದಸರಾದಲ್ಲಿ ಭಾಗವಹಿಸಿದರು. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರ ಬದುಕಿನಲ್ಲಿ ಬೆಳಕು ಬಂದಿದೆ. ಈ ಹಸ್ತ ರೈತರ, ಬಡವರ, ಕೂಲಿಕಾರ್ಮಿಕರ, ಮಹಿಳೆಯರ ಬದುಕನ್ನು ಭದ್ರ ಮಾಡಿದೆ ಎಂದರು. ಇದನ್ನೂ ಓದಿ: ಕುರುಬ ಸಮುದಾಯವನ್ನ STಗೆ ಸೇರಿಸುವ ಪ್ರಕ್ರಿಯೆ ಇನ್ನಷ್ಟು ತೀವ್ರ – ನಾಳೆ ಮಹತ್ವದ ಸಭೆ

  • ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

    ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

    ಚಾಮರಾಜನಗರ: ಕಬಿನಿ ಜಲಾಶಯದಿಂದ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಗಗನಚುಕ್ಕಿ-ಭರಚುಕ್ಕಿ ಹಾಗೂ ಹೊಗೆನಕಲ್ ಜಲಪಾತಗಳು ಮೈದುಂಬಿ ಭೋರ್ಗರೆಯುತ್ತಿವೆ.

    ಎರಡು ದಿನಗಳಿಂದ ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಹೆಸರುವಾಸಿಯಾಗಿರುವ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ತಮ್ಮ ಸೌಂದರ್ಯವನ್ನು ಮತ್ತಷ್ಟು ಎಚ್ಚಿಸಿಕೊಂಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

    ಗಗನಚುಕ್ಕಿಯಲ್ಲಂತೂ ನೀರು ಆಕಾಶದೆತ್ತರದಿಂದ ಬೀಳುವಂತೆ ಬಾಸವಾಗುತ್ತಿದೆ. ಇನ್ನೂ ಹೊಗೆನಕಲ್ ಫಾಲ್ಸ್ ಕೂಡ ಇದಕ್ಕೆ ಕಡಿಮೆ ಇಲ್ಲದಂತೆ ಧುಮ್ಮುಕ್ಕಿ ಹರಿಯುತ್ತಿದೆ. ಎತ್ತ ನೋಡಿದರೂ ನೀರು ತುಂಬಿಕೊಂಡಿದೆ. ಈ ರಮಣೀಯ ದೃಶ್ಯವನ್ನು ನೋಡಲು ಪ್ರವಾಸಿಗರ ದಂಡೆ ಈ ಜಲಪಾತಗಳ ಕಡೆ ಹರಿದು ಬರುತ್ತಿದೆ.

    ಮೈದುಂಬಿ ಹರಿಯುತ್ತಿರುವ ಕಾವೇರಿ ಮತ್ತು ಕಪಿಲಾ ನದಿಗಳಿಂದಾಗಿ ಅಕ್ಕ-ಪಕ್ಕದ ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ.

  • ಒಮ್ಮೆ ನೋಡಬನ್ನಿ ಕಾವೇರಿಯ ಜಲವೈಭವ – ವಿಡಿಯೋ

    ಒಮ್ಮೆ ನೋಡಬನ್ನಿ ಕಾವೇರಿಯ ಜಲವೈಭವ – ವಿಡಿಯೋ

    ಚಾಮರಾಜನಗರ: ನಿಜಕ್ಕೂ ಇದೊಂದು ದೃಶ್ಯ ವೈಭವವೇ ಸರಿ. ಒಂದೆಡೆ ಪ್ರಕೃತಿಯ ಸೊಬಗು, ಮತ್ತೊಂದೆಡೆ ಕಾವೇರಿಯ ನೃತ್ಯ ವೈಯ್ಯಾರ. ಇದು ಜಗತ್ತಿನಲ್ಲಿಯೇ ಅಪರೂಪದ ಭೂ ಸೃಷ್ಠಿಯ ಅಚ್ಚರಿಯಾಗಿದೆ. ಚಾಮರಾಜನಗರ ಜಿಲ್ಲೆ ಭರಚುಕ್ಕಿ ಹಾಗು ಗಗನಚುಕ್ಕಿ ಜಲಪಾತಗಳಲ್ಲಿ ಕಾವೇರಿಯ ಆರ್ಭಟ, ಭೂಮಿಯನ್ನು ಸೀಳಿ ಧುಮ್ಮಿಕ್ಕುವ ಐಸಿರಿ ನಿಜಕ್ಕೂ ವರ್ಣಾತೀತವಾಗಿದೆ.

    ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಹೆಚ್ಚಾದ ಪರಿಣಾಮ ಚಾಮರಾಜನಗರ ಜಿಲ್ಲೆಯಲ್ಲಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಇಲ್ಲಿ ಒಂದಲ್ಲ ಎರಡಲ್ಲ, ಲೆಕ್ಕವಿಲ್ಲದಷ್ಟು ಜಲಪಾತಗಳು ನಯನ ಮನೋಹರವಾಗಿ ಹರಿದಾಡುತ್ತವೆ. ಒಂದೆಡೆ ವಿಶಾಲವಾಗಿ ಕವಲು ಕವಲಾಗಿ ಶರವೇಗದಲ್ಲಿ ಬಿರುಸು ಬಿರುಸಾಗಿ ರಭಸದಿಂದ ಧುಮ್ಮಿಕ್ಕುವ ಭರಚುಕ್ಕಿ, ಮತ್ತೊಂದೆಡೆ ಗಗನದಿಂದ ಧುಮ್ಮಿಕ್ಕು ಹರಿಯುತ್ತಿರುವ ಗಗನಚುಕ್ಕಿ.

    ಕಾವೇರಿ ಧುಮ್ಮಿಕ್ಕುವ ಭರಚುಕ್ಕಿ ಜಲಪಾತದ ಸೊಬಗನ್ನು ನೋಡಿಯೇ ಅನುಭವಿಸಬೇಕು. ಇಲ್ಲಿನ ಪ್ರಕೃತಿಯ ಸೊಬಗಂತು ಅತ್ಯದ್ಭುತವಾಗಿದೆ. ಹಾಲ್ನೊರೆಯಂತೆ ಧುಮ್ಮಿಕ್ಕುವ ಕಾವೇರಿಯ ಐಸಿರಿ ನಯನಮನೋಹರವಾಗಿದ್ದು, ಭರಚುಕ್ಕಿಯಷ್ಟೇ ಆಕರ್ಷಕವಾಗಿದೆ ಗಗನಚುಕ್ಕಿ. ಭರಚುಕ್ಕಿಯದ್ದು ಅಗಲವಾದ ನೋಟವಾದರೆ ಗಗನಚುಕ್ಕಿಯದ್ದು ಆಳದ ನೋಟ. ಅಕ್ಕಪಕ್ಕದಲ್ಲೇ ಇರುವ ಈ ಜೋಡಿ ಜಲಪಾತಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಈ ದೃಶ್ಯ ವೈಭವಕ್ಕೆ ಮನಸೋಲದ ಪ್ರವಾಸಿಗರೇ ಇಲ್ಲ.

    ಭರಚುಕ್ಕಿಯಲ್ಲಿ ಸುಮಾರು ಒಂದು ಕಿಲೋ ಮೀಟರ್ ಅಗಲವಾಗಿ ಮೈದಳೆದಿರುವ ಕಾವೇರಿ ಸುಮಾರು 75 ರಿಂದ 100 ಅಡಿವರೆಗೆ ಧುಮ್ಮಿಕ್ಕುವ ದೃಶ್ಯವಂತು ನಯನ ಮನೋಹರವಾಗಿದೆ. ನಭೋ ಲೋಕ ಮುಟ್ಟಿದಂತೆ ಭಾಸವಾಗುವ ಭೋರ್ಗರೆತ, ಸುತ್ತಲೂ ಇರುವ ಬೆಟ್ಟಸಾಲು, ಹಸಿರಿನಿಂದ ಕಂಗೊಳಿಸುವ ಅರಣ್ಯ, ಭರಚುಕ್ಕಿ ಜಲಪಾತದ ಸೊಬಗನ್ನು ಮತ್ತಷ್ಟು ಸುಂದರವಾಗಿಸಿದೆ. ಇಲ್ಲಿ ಅಗಲವಾಗಿ ಧುಮ್ಮಿಕ್ಕುವ ಹಾಲ್ನೊರೆಯಂತಹ ನೀರಿನ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ಪರಮಾನಂದ. ಇನ್ನು ಗಗನಚುಕ್ಕಿಯಲ್ಲಿ ಗಗನದಿಂದ ಧುಮ್ಮಿಕ್ಕುವವಳಂತೆ ಗೋಚರಿಸುವ ಕಾವೇರಿಯ ನೋಟ ವರ್ಣಿಸಲಸದಳ. ಸುಮಾರು ನೂರು ಮೀಟರ್ ಆಳಕ್ಕೆ ಧುಮ್ಮಿಕ್ಕುವ ರಭಸ ಹಾಗು ಭೋರ್ಗರೆತ ಎಂತಹವರರನ್ನು ಬೆರಗೊಳಿಸುತ್ತದೆ ಎಂದು ಪ್ರವಾಸಿಗರು ಹೇಳಿದ್ದಾರೆ.

    ಶಿವನ ಸಮುದ್ರದ ಟಿಪ್ಪು ಸೇತುವೆಯಿಂದ ಹಿಡಿದು ಭರಚುಕ್ಕಿ ಗಗನಚುಕ್ಕಿ ಜಲಪಾತದವರೆಗೂ ಎತ್ತ ನೋಡಿದರೂ ಕಾವೇರಿಯ ಸೊಬಗೇ ಮೈದುಂಬಿಕೊಂಡಿದೆ. ಜಲಪಾತದ ಸಮೂಹವನ್ನು ಒಳಗೊಂಡಿರುವ ಈ ಪ್ರದೇಶ ನಿಜಕ್ಕು ಭೂ ಸೃಷ್ಠಿಯ ಅಚ್ಚರಿಯಾಗಿದೆ. ಕಾವೇರಿಯ ಸಂಭ್ರಮಕ್ಕೆ ಇಲ್ಲಿ ಎಣ್ಣೆಯೇ ಇಲ್ಲ. ವಾರಾಂತ್ಯದ ದಿನಗಳಲ್ಲಂತು ಇಲ್ಲಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಹಾಲ್ನೊರೆಯಂತಹ ಜಲಧಾರೆಯನ್ನು ಕಣ್ಣಿನಿಂದಲೇ ಆಸ್ವಾಧಿಸುವ, ಕಾವೇರಿಯ ದೃಶ್ಯ ವೈಭವವನ್ನು ಕಣ್ತುಂಬಿಕೊಂಡು ಹೋಗುವ ಪ್ರವಾಸಿಗರ ಆನಂದಕ್ಕೆ ಇಲ್ಲಿ ಮಿತಿಯೇ ಇಲ್ಲ.

  • ಕಾಲು ಜಾರಿ ಗಗನಚುಕ್ಕಿ ಜಲಪಾತದೊಳಗೆ ಬಿದ್ದು 2 ದಿನ ಬಂಡೆ ಮೇಲೆ ಕಾಲ ಕಳೆದ ವ್ಯಕ್ತಿಯ ರಕ್ಷಣೆ

    ಕಾಲು ಜಾರಿ ಗಗನಚುಕ್ಕಿ ಜಲಪಾತದೊಳಗೆ ಬಿದ್ದು 2 ದಿನ ಬಂಡೆ ಮೇಲೆ ಕಾಲ ಕಳೆದ ವ್ಯಕ್ತಿಯ ರಕ್ಷಣೆ

    ಮಂಡ್ಯ: ಪ್ರವಾಸಕ್ಕೆ ಬಂದಿದ್ದ ವೇಳೆ ಕಾಲು ಜಾರಿ ಜಲಪಾತದೊಳಗೆ ಬಿದ್ದ ವ್ಯಕ್ತಿಯೊಬ್ಬರು ಎರಡು ದಿನ ಬಂಡೆಯ ಮೇಲೆ ಕಾಲಕಳೆದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

     

    ಜಿಲ್ಲೆಯ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ 37 ವರ್ಷದ ಖಾದರ್ ಕಳೆದ ಶನಿವಾರ ಗಗನಚುಕ್ಕಿಗೆ ಬಂದಿದ್ರು. ಈ ವೇಳೆ ಕಾಲುಜಾರಿ ಕೆಳಗೆ ಬಿದ್ದಿದ್ದಾರೆ.

    ಮೇಲಿಂದ ಬಿದ್ದ ರಭಸಕ್ಕೆ ಇವರ ಎಡಗೈ, ಕಾಲು ಮುರಿದು ಮೂರ್ಛೆ ತಪ್ಪಿದ್ದಾರೆ. ನಂತರ ಕಣ್ಣು ಬಿಟ್ಟು ನೋಡಿದಾಗ ಕತ್ತಲಾಗಿತ್ತು. ಎರಡು ದಿನ ಕೂಗಿಕೊಂಡರೂ, ಯಾರೊಬ್ಬರಿಗೂ ಇವರ ಚೀರಾಟ ಕೇಳಿಸಿಲ್ಲ.

    ಖಾದರ್ ನೀರನ್ನೇ ಕುಡಿದು ಎರಡು ದಿನ ಕಾಲ ಕಳೆದಿದ್ದಾರೆ. ಇಂದು ಪ್ರವಾಸಿಗರು ಬಂದಿರೋದನ್ನ ಗಮನಿಸಿದ ಖಾದರ್, ತಾನು ಹಾಕಿಕೊಂಡಿದ್ದ ಕೆಂಪು ಬಟ್ಟೆಯನ್ನ ತೋರಿಸಿ ಕೂಗಿಕೊಂಡಿದ್ದಾರೆ.

    ಇದನ್ನ ಗಮನಿಸಿದ ಸಾರ್ವಜನಿಕರು ಈ ಮಾಹಿತಿಯನ್ನ ಬೆಳಕವಾಡಿ ಪೊಲೀಸರಿಗೆ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು, ನುರಿತರನ್ನು ಜಲಪಾತದ ಕೆಳಕ್ಕೆ ಇಳಿಸಿ ಸುಮಾರು ಎರಡು ಗಂಟೆ ಕಾರ್ಯಾಚರಣೆ ನಡೆಸಿ ಖಾದರ್ ಅವರನ್ನ ರಕ್ಷಣೆ ಮಾಡಿದ್ದಾರೆ.