Tag: ಗಂಟೆ

  • ಭಕ್ತರಂತೆ ದೇವಾಲಯಕ್ಕೆ ಬಂದು ಗಂಟೆ ಬಾರಿಸಿದ ಹಸು

    ಭಕ್ತರಂತೆ ದೇವಾಲಯಕ್ಕೆ ಬಂದು ಗಂಟೆ ಬಾರಿಸಿದ ಹಸು

    ಶಿವಮೊಗ್ಗ: ಭಕ್ತರಂತೆ ಒಂದು ಹಸು ದೇವಾಲಯಕ್ಕೆ ಬಂದು ಗಂಟೆ ಬಾರಿಸಿ ಹೋಗಿರುವ ಕೌತುಕಮಯ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಡಿ.ಬಿ ಹಳ್ಳಿಯಲ್ಲಿ ನಡೆದಿದೆ.

    ಇಲ್ಲಿರುವ ವೀರಭದ್ರಸ್ವಾಮಿ ಹಾಗೂ ಮುಗ್ದ ಸಂಮೇಶ್ವರ ಸ್ವಾಮೀಜಿಗಳ ಗದ್ದಿಗೆ ಇರುವ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ಗ್ರಾಮದ ಮಂಜಪ್ಪ ಎಂಬವರಿಗೆ ಸೇರಿದ ಈ ಹಸು ಗಂಟೆ ಬಾರಿಸಿದ ವಿಷಯ ಸುತ್ತಮುತ್ತಲ ಗ್ರಾಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಆದಾಗ ಶರಣ ದೊಂಬರ ಚನ್ನಮ್ಮ ಈ ಊರಿಗೆ ಬಂದು ನೆಲೆಸಿದರು ಎನ್ನಲಾಗಿದೆ. ಈ ಕಾರಣದಿಂದ ಗ್ರಾಮಕ್ಕೆ ದೊಂಬರ ಭೈರನಹಳ್ಳಿ ಎಂದು ಹೆಸರಿಡಲಾಗಿದೆ. ಆಗಿನ ಕಾಲದಿಂದಲೂ ಈ ದೇವಾಲಯದಲ್ಲಿ ಪವಾಡಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

    ಅಪ್ಪಣೆ ಕೇಳುವ ವಿಷಯದಲ್ಲಿ ಈ ದೇವಾಲಯ ಖ್ಯಾತಿ ಪಡೆದಿದೆ. ಬೇಕು ಬೇಡಗಳನ್ನು ಎಡ-ಬಲ ಹೂ ಕೊಟ್ಟು ಹೇಳುವ ಈ ದೇವರು ಗ್ರಾಮಸ್ಥರ ಅಚ್ಚುಮೆಚ್ಚು. ಈಗ ಹಸು ಗಂಟೆ ಬಾರಿಸಿರುವುದು ದೇವಾಲಯದ ಬಗ್ಗೆ ಇದ್ದ ಭಕ್ತಿಯನ್ನು ಇಮ್ಮಡಿಗೊಳಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

  • ಗಂಟೆ ಸದ್ದನ್ನು ಬಂದ್ ಮಾಡಿ – ಕೊಪ್ಪಳ ಬಿಜೆಪಿಯಿಂದ ಆಯೋಗಕ್ಕೆ ದೂರು

    ಗಂಟೆ ಸದ್ದನ್ನು ಬಂದ್ ಮಾಡಿ – ಕೊಪ್ಪಳ ಬಿಜೆಪಿಯಿಂದ ಆಯೋಗಕ್ಕೆ ದೂರು

    ಕೊಪ್ಪಳ: ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಗಂಟೆ ಸದ್ದನ್ನು ಬಂದು ಮಾಡುವಂತೆ ಜಿಲ್ಲಾ ಚುನಾವಣಾ ಆಯೋಗದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

    ನಗರದ ಬಸವೇಶ್ವರ ವೃತ್ತದಲ್ಲಿ ಅಳವಡಿಸಿರುವ ಗಡಿಯಾರ ಗಂಟೆಗೊಮ್ಮೆ ಸದ್ದು ಮಾಡುತ್ತದೆ. ಈ ಗಂಟೆಯ ಧ್ವನಿಯಿಂದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳರಿಗೆ ಓಟ್ ಹೋಗುತ್ತದೆ. ಈ ಕಾರಣದಿಂದ ಗಡಿಯಾರ ಗಂಟೆಯ ಧ್ವನಿಯನ್ನು ನಿಲ್ಲಿಸಬೇಕೆಂದು ಬಿಜೆಪಿ ಮುಖಂಡರು ಕೊಪ್ಪಳ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

    ಬಿಜೆಪಿ ಆಕ್ಷೇಪ ಏನು?
    ನಗರದ ಮುಖ್ಯರಸ್ತೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿ 20 ಲಕ್ಷರೂಪಾಯಿ ವೆಚ್ಚದಲ್ಲಿ ಶಾಸಕರು ಕೊಡುಗೆ ಗಡಿಯಾರ ಮತ್ತು ಗೋಪುರ ನೀಡಿದ್ದಾರೆ. ಈ ಗಂಟೆ ಇದೀಗ ಪ್ರತೀ ಗಂಟೆಗೊಮ್ಮೆ ಭಾರಿಸುವುದರಿಂದ ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೇ ಈ ಗಂಟೆಯ ಸದ್ದು ಶಾಸಕರ ಕೊಡುಗೆಯನ್ನು ನೆನಪು ಮಾಡಿಕೊಡುತ್ತದೆ. ಈ ಕಾರಣಕ್ಕಾಗಿ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವವರೆಗೂ ಗಂಟೆ ಭಾರಿಸುವುದನ್ನು ನಿಲ್ಲಿಸಬೇಕೆಂದು ದೂರಿನಲ್ಲಿ ಮುಖಂಡರು ವಿನಂತಿಸಿಕೊಂಡಿದ್ದಾರೆ.

    ಸದ್ಯ ಚುನಾವಣೆ ಅಧಿಕಾರಿಗಳು ದೂರನ್ನು ಪರಿಗಣಿಸಿ, ಗಡಿಯಾರದಲ್ಲಿ ಹಾಕಲಾಗಿರುವ ಶಾಸಕರ ಫೋಟೊವನ್ನ ಮರೆಮಾಚಿದ್ದಾರೆ. ಆದ್ರೆ ಗಂಟೆಯ ಧ್ವನಿ ನೀತಿ ಸಂಹಿತೆಗೆ ಒಳಪಡುವುದಿಲ್ಲ. ಹೀಗಾಗಿ ಧ್ವನಿಯನ್ನ ನಿಲ್ಲಿಸುವುದಿಲ್ಲ ಮತ್ತು ಇದು ಸಮಂಜಸವಾದ ದೂರು ಅಲ್ಲ ಎಂದು ಕೊಪ್ಪಳ ಚುನಾವಣಾಧಿಕಾರಿ ಗೀತಾ ಸ್ಪಷ್ಟನೆ ನೀಡಿದ್ದಾರೆ.