Tag: ಗಂಟುಮೂಟೆ

  • ತಾಯಿ ಕಳೆದುಕೊಂಡ ಮಗನ ಆಕ್ರಂದನ- ‘Supplier ಶಂಕರ್’ ಸಿನಿಮಾದ ಸಾಂಗ್‌ ಔಟ್

    ತಾಯಿ ಕಳೆದುಕೊಂಡ ಮಗನ ಆಕ್ರಂದನ- ‘Supplier ಶಂಕರ್’ ಸಿನಿಮಾದ ಸಾಂಗ್‌ ಔಟ್

    ‘ಗಂಟುಮೂಟೆ’, ‘ಟಾಮ್ ಆ್ಯಂಡ್‌ ಜರ‍್ರಿ’ ಸಿನಿಮಾ ಖ್ಯಾತಿಯ ನಾಯಕ ನಿಶ್ಚಿತ್ ಕೊರೋಡಿ (Nishchith Korodi) ಅಭಿನಯದ ‘ಸಪ್ಲೈಯರ್‌ ಶಂಕರ’ (Supplier Shankara) ಸಿನಿಮಾದ ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ. ಈ ಎಮೋಷನಲ್‌ ಸಾಂಗ್‌ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

    ತಾಯಿ ಕಳೆದುಕೊಂಡ ಮಗನ ಆಕ್ರಂದನ, ತುಂಬಾ ಪ್ರೀತಿಸುವ ಜೀವ ದೂರವಾದಾಗ ಆಗುವ‌ ನೋವಿನ ಗೀತೆಯಾಗಿರುವ ಅಯ್ಯೋ ದೈವವೇ ಹಾಡಿಗೆ ನಿರ್ದೇಶಕ ರಂಜಿತ್ ಸಿಂಗ್ ರಜಪೂತ್ ಸಾಹಿತ್ಯ ಬರೆದಿದ್ದು, ಸುನಿಲ್ ಕಶ್ಯಪ್ ಧ್ವನಿಯಾಗಿದ್ದು, ಆರ್ ಬಿ ಭರತ್ ಟ್ಯೂನ್ ಹಾಕಿದ್ದಾರೆ. ಕೇಳುಗರಿಗೆ ಬಹಳ ಕನೆಕ್ಟ್ ಆಗುವ ಸೆಂಟಿಮೆಂಟ್ ಹಾಡು ಇದಾಗಿದ್ದು, ಸಾಹಿತ್ಯ, ಸಂಗೀತ ಎಲ್ಲಾ ವಿಚಾರದಲ್ಲೂ ಗಮನ ಸೆಳೆಯುತ್ತಿದೆ.

    ಇತ್ತೀಚಿಗೆ ರಿಲೀಸ್ ಆದ ಮೋಷನ್ ಪೋಸ್ಟರ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿತ್ತು. ಯುವ ಪ್ರತಿಭೆ ರಂಜಿತ್ ಸಿಂಗ್ ರಜಪೂತ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ತ್ರಿನೇತ್ರ ಫಿಲ್ಮಂಸ್ ಸಂಸ್ಥೆಯಡಿ ಎಂ.ಚಂದ್ರಶೇಖರ್ – ನಾಗೇಂದ್ರ ಸಿಂಗ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ:ದಿಗ್ಗಜರು- 2 ಸಿನಿಮಾಗಾಗಿ ಮತ್ತೆ ಜೊತೆಯಾಗ್ತಾರಾ ಸುದೀಪ್-‌ ದರ್ಶನ್?‌

    ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಬಾರ್ ಸಪ್ಲೈಯರ್‌ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಗೋಪಾಲ ಕೃಷ್ಣ ದೇಶಪಾಂಡೆ, ಜ್ಯೋತಿ ರೈ(Jyothi Rai), ನವೀನ್ ಡಿ ಪಡಿಲ್ ಸೇರಿದಂತೆ ಒಂದಷ್ಟು ಹೊಸಬರು ಚಿತ್ರದಲ್ಲಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ. ಸತೀಶ್ ಕುಮಾರ್.ಎ ಛಾಯಾಗ್ರಹಣ, ಆರ್.ಬಿ.ಭರತ್ ಸಂಗೀತ, ಸತೀಶ್ ಚಂದ್ರಯ್ಯ ಸಂಕಲನ ಚಿತ್ರಕ್ಕಿದೆ. ಸದ್ದಿಲ್ಲದೇ ಶೂಟಿಂಗ್ ಮುಗಿಸಿರುವ ‘ಸಪ್ಲೈಯರ್ ಶಂಕರ’ ಬಿಡುಗಡೆಗೆ ಸಜ್ಜಾಗಿದ್ದಾನೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘Supplier ಶಂಕರ’ ಚಿತ್ರದ ಮೋಷನ್ ಪೋಸ್ಟರ್‌ ಔಟ್- ನಯಾ ಲುಕ್‌ನಲ್ಲಿ ‘ಗಂಟುಮೂಟೆ’ ಹೀರೋ

    ‘Supplier ಶಂಕರ’ ಚಿತ್ರದ ಮೋಷನ್ ಪೋಸ್ಟರ್‌ ಔಟ್- ನಯಾ ಲುಕ್‌ನಲ್ಲಿ ‘ಗಂಟುಮೂಟೆ’ ಹೀರೋ

    ‘Supplier ಶಂಕರ’ ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ‘ಸಪ್ಲೈರ್ ಶಂಕರ’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಪೊಲೀಸ್ ಸ್ಟೇಷನ್‌ ದೃಶ್ಯದ ಮೂಲಕ ತೆರೆದುಕೊಳ್ಳುವ ಮೋಷನ್ ಪೋಸ್ಟರ್ ನಾನಾ ಕುತೂಹಲವನ್ನು ಹುಟ್ಟುಹಾಕಿದೆ. ರಕ್ತ ಮೆತ್ತಿದ ನಾಯಕ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.


    ಗಂಟುಮೂಟೆ, ಟಾಮ್ ಅಂಡ್ ಜರ‍್ರಿ (Tom & Jerry) ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ನಾಯಕ ನಿಶ್ಚಿತ್ ಕೊರೋಡಿ Supplier ಶಂಕರ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಯುವ ಪ್ರತಿಭೆ ರಂಜಿತ್ ಸಿಂಗ್ ರಜಪೂತ್ (Ranjith Singh Rajput) ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ತ್ರಿನೇತ್ರ ಫಿಲ್ಮಂಸ್ ಸಂಸ್ಥೆಯಡಿ ಎಂ.ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ:ಪಡ್ಡೆಹುಡುಗರ ರಾಣಿ ಶ್ರೀಲೀಲಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್


    ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಟೈಟಲ್ ಹೇಳುವಂತೆ ಒಬ್ಬ ಬಾರ್ ಸಪ್ಲೈರ್ ಸುತ್ತಾ ಇಡೀ ಸಿನಿಮಾ ಸಾಗುತ್ತದೆ. ನಿಶ್ಚಿತ್ ಗೆ ಜೋಡಿಯಾಗಿ ಲಗೋರಿ ಸಿನಿಮಾ ಖ್ಯಾತಿಯ ದೀಪಿಕಾ ಆರಾಧ್ಯ (Deepika Aradya) ನಟಿಸಿದ್ದು, ಗೋಪಾಲ ಕೃಷ್ಣ ದೇಶಪಾಂಡೇ, ಜ್ಯೋತಿ ರೈ, ನವೀನ್ ಡಿ ಪಡಿಲ್ ಸೇರಿದಂತೆ ಒಂದಷ್ಟು ಹೊಸಬರು ಚಿತ್ರದಲ್ಲಿದ್ದಾರೆ.

    ‘Supplier ಶಂಕರ’ ಸಿನಿಮಾಗೆ ರಂಜಿತ್, ಕಥೆ , ಚಿತ್ರಕಥೆ, ಸಂಭಾಷಣೆ ಜೊತೆಗೆ ಸಾಹಿತ್ಯದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ವಿಜಯ್ ಪ್ರಕಾಶ್, ಅಮ್ಮ ನನ್ನೀ ಈ ಜನುಮ ಖ್ಯಾತಿಯ ಸುನಿಲ್ ಕಶ್ಯಪ್, ಮೋಹನ್ ಬಿನ್ನಿಪೇಟೆ, ಸಂತೋಷ್ ವೆಂಕಿ, ನಕುಲ್ ಅಭಯ್ಯಂಕರ್, ಐಶ್ವರ್ಯ ರಂಗರಾಜನ್ ಹಾಡುಗಳಿಗೆ ಧ್ವನಿಯಾಗಿದ್ದು, ರವಿ ಬಸ್ರೂರ್ ಬಳಿ ಕೆಲಸ ಮಾಡಿರುವ ಆರ್.ಬಿ.ಭರತ್ ಸಂಗೀತ ನೀಡಿದ್ದಾರೆ. ಸತೀಶ್ ಚಂದ್ರಯ್ಯ ಸಂಕಲನ, ಸತೀಶ್ ಕುಮಾರ್.ಎ ಛಾಯಾಗ್ರಹಣ, ಬಾಲಾಜಿ ಕಲಾ ನಿರ್ದೇಶನ Supplier ಶಂಕರ ಸಿನಿಮಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮೇಜಾನ್ ಪ್ರೈಮ್‍ಗೆ ಲಗ್ಗೆಯಿಟ್ಟ ಗಂಟುಮೂಟೆ!

    ಅಮೇಜಾನ್ ಪ್ರೈಮ್‍ಗೆ ಲಗ್ಗೆಯಿಟ್ಟ ಗಂಟುಮೂಟೆ!

    ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದು ತೆರೆ ಕಂಡಿದ್ದ ಚಿತ್ರ ಗಂಟುಮೂಟೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳ ಪಾಲಿಗೂ ವಿಶಿಷ್ಟವಾದ ಕಥೆಯನ್ನೊಳಗೊಂಡಿದ್ದು, ಈ ಚಿತ್ರಕ್ಕೆ ಪ್ರೇಕ್ಷಕರ ಕಡೆಯಿಂದ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಸ್ಟಾರ್ ನಟರ ಸಿನಿಮಾಗಳ ಮುಂದೆಯೂ ಸೆಣೆಸಾಡಿ ಯಶಸ್ವೀ ಪ್ರದರ್ಶನ ಕಂಡು ಗೆದ್ದಿತ್ತು. ಬಿಡುಗಡೆಗೂ ಮುನ್ನವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಈ ಸಿನಿಮಾವನ್ನು ನೀವು ಇನ್ನು ಅಮೇಜಾನ್ ಪ್ರೈಮ್‍ನಲ್ಲಿಯೂ ಕಣ್ತುಂಬಿಕೊಳ್ಳಬಹುದು. ಸಮಯ ಸಿಕ್ಕಾಗಲೆಲ್ಲಾ ಹೊಸ ಬಗೆಯ ಸಿನಿಮಾ ನೋಡಿದ ತೃಪ್ತಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

    ಅಮೇಜಾನ್ ಪ್ರೈಮ್ ಎಂಬುದು ಕಡಿಮೆ ಅವಧಿಯಲ್ಲಿ ಹೆಚ್ಚೆಚ್ಚು ಪ್ರೇಕ್ಷಕರನ್ನು ತಲುಪಿಕೊಳ್ಳುವ ಪರಿಣಾಮಕಾರಿ ಪ್ಲಾಟ್‍ಫಾರಂ. ಆದರೆ ಅದಕ್ಕೆ ಕನ್ನಡ ಸಿನಿಮಾವೊಂದು ಆಯ್ಕೆಯಾಗೋದೇನು ಸಲೀಸಿನ ಸಂಗತಿಯಲ್ಲ. ಅದಕ್ಕೆ ಎಂಥವರನ್ನೂ ಸೆಳೆದುಕೊಳ್ಳುವ ಕಂಟೆಂಟು ಅವಶ್ಯ. ಬಿಡುಗಡೆಯಾಗಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡಿದ್ದ ಗಂಟುಮೂಟೆ ಸಲೀಸಾಗಿಯೇ ಅಮೇಜಾನ್ ಪ್ರೈಂ ಸೇರಿಕೊಂಡಿದೆ. ಈ ಮೂಲಕ ಮತ್ತಷ್ಟು ಹೊಸ ಪ್ರೇಕ್ಷಕರನ್ನು ತಲುಪಿಕೊಳ್ಳಲಿದೆ. ಇದರೊಂದಿಗೆ ನಿರ್ದೇಶಕಿ ರೂಪಾ ರಾವ್ ಅವರ ಪ್ರತಿಭೆ, ಪರಿಶ್ರಮಗಳಿಗೂ ಗೌರವ ಮತ್ತು ಬೆಲೆ ಸಿಕ್ಕಂತಾಗಿದೆ. ಗಂಟುಮೂಟೆಯ ಹಕ್ಕುಗಳನ್ನು ಒಂದೊಳ್ಳೆ ಮೊತ್ತಕ್ಕೆ ಅಮೇಜಾನ್ ಪ್ರೈಮ್ ಖರೀದಿಸಿದೆ.

    ಗಂಟುಮೂಟೆಯೊಳಗೆ ನಿರ್ದೇಶಕಿ ರೂಪಾ ರಾವ್ ಬೆರಗುಗಳನ್ನೇ ದೃಶ್ಯವಾಗಿಸಿದ್ದಾರೆ. ಇದು ತೊಂಬತ್ತರ ದಶಕದಲ್ಲಿ ನಡೆಯೋ ಹೈಸ್ಕೂಲು ದಿನಗಳ ಪ್ರೇಮ ಕಥಾನಕದ ಚಿತ್ರ. ತೀರಾ ಹೆಚ್ಚೇನೂ ಹಳೆಯದಲ್ಲವಾದರೂ ಆ ಕಾಲದ ಫೀಲಿಂಗ್ಸ್ ಗೂ ಈ ಕಾಲದ್ದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅದು ಭಾವನೆಗಳೆಲ್ಲ ಬೆರಳ ಮೊನೆಗೆ ಬಾರದೆ ಹೃದಯದಲ್ಲಿಯೇ ಬೆಚ್ಚಗೆ ಉಳಿದುಕೊಂಡಿದ್ದ ಕಾಲ. ಅಂತಹ ಹೊತ್ತಿನಲ್ಲಿ ಸಿನಿಮಾ ದೃಶ್ಯಗಳಿಗೂ ಬದುಕಿಗೂ ಥಳುಕು ಹಾಕಿಕೊಂಡ ಮನಸ್ಥಿತಿಯ ಹುಡುಗಿಯ ಕಣ್ಣಲ್ಲಿ ಪ್ರೇಮದ ಭಾವಗಳನ್ನು ನೋಡೋ ಪ್ರಯತ್ನ ಗಂಟುಮೂಟೆಯಲ್ಲಿದೆ. ಅದು ಯಾರೇ ಆದರೂ ಮುದಗೊಳ್ಳುವಂತಿದೆ.

    ಈ ಸಿನಿಮಾವನ್ನು ಆರಂಭಿಕವಾಗಿ ನೋಡಿದ್ದವರೇ ಇದೊಂದು ಅಪರೂಪದ ಕಥೆ ಹೊಂದಿರೋ ಚಿತ್ರವೆಂದು ಕೊಂಡಾಡಿದ್ದರು. ಅಷ್ಟಕ್ಕೂ ಬಿಡುಗಡೆಯ ಪೂರ್ವದಲ್ಲಿಯೇ ಗಂಟುಮೂಟೆಯ ಹವಾ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಮಿರುಗಿತ್ತು. ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ಈ ಚಿತ್ರ ಪ್ರಶಸ್ತಿಯನ್ನೂ ಬಾಚಿಕೊಂಡಿತ್ತು. ಆ ನಂತರದಲ್ಲಿ ಪ್ರಚಾರಕ್ಕಾಗಿ ಯಾವ ಸರ್ಕಸ್ಸುಗಳನ್ನೂ ನಡೆಸದೆ ಒಂದೇ ಒಂದು ಟ್ರೇಲರ್ ಮೂಲಕ ಎಲ್ಲರನ್ನೂ ಸೆಳೆದುಕೊಂಡಿದ್ದ ಈ ಚಿತ್ರ ಬಿಡುಗಡೆಯ ನಂತರದಲ್ಲಿ ಪವಾಡವನ್ನೇ ಸೃಷ್ಟಿಸಿತ್ತು. ತೊಂಬತ್ತರ ದಶಕದ ಪ್ರೇಮ ಕಥೆಗೆ ಪ್ರೇಕ್ಷಕರೆಲ್ಲ ಫಿದಾ ಆದ ಕಾರಣ ಗೆಲುವನ್ನೂ ಕಂಡಿತ್ತು. ಇನ್ನುಮುಂದೆ ಗಂಟುಮೂಟೆ ಅಮೇಜಾನ್ ಪ್ರೈಮ್‍ನಲ್ಲಿಯೂ ನೋಡಲು ಸಿಗಲಿದೆ.

     

  • ‘ಗಂಟುಮೂಟೆ’ ನೋಡಿ ರಕ್ಷಿತ್ ಶೆಟ್ಟಿ ಹೇಳಿದ್ದೇನು?

    ‘ಗಂಟುಮೂಟೆ’ ನೋಡಿ ರಕ್ಷಿತ್ ಶೆಟ್ಟಿ ಹೇಳಿದ್ದೇನು?

    ಬೆಂಗಳೂರು: ರೂಪಾ ರಾವ್ ನಿರ್ದೇಶನದ ಚೊಚ್ಚಲ ಚಿತ್ರವಾದ ಗಂಟುಮೂಟೆಯೀಗ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಬಾಯಿಂದ ಬಾಯಿಗೆ ಹರಡಿಕೊಂಡ ಸದಾಭಿಪ್ರಾಯಗಳೇ ಹೊಸಬರ ಹೊಸಾ ಪ್ರಯತ್ನವಾಗಿ ಮೂಡಿ ಬಂದಿರೋ ಈ ಚಿತ್ರ ಮ್ಯಾಜಿಕ್ಕು ಮಾಡಲು ಪ್ರೇರೇಪಣೆ ನೀಡಿದೆ. ಇದೀಗ ಎಲ್ಲೆಡೆ ಪಾಸಿಟಿವ್ ಟಾಕ್ ಕ್ರಿಯೇಟ್ ಮಾಡಿರೋ ಈ ಚಿತ್ರದತ್ತ ನಟ ನಟಿಯರೂ ಚಿತ್ರ ಹರಿಸುತ್ತಿದ್ದಾರೆ. ಸದ್ಯ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗಂಟುಮೂಟೆಯನ್ನು ಕಣ್ತುಂಬಿಕೊಂಡಿದ್ದಾರೆ. ಒಂದು ಅಪರೂಪದ ಮಹಿಳಾ ಪ್ರಧಾನ ಚಿತ್ರವನ್ನು ನೋಡಿದ ಖುಷಿ ಅನುಭವಿಸಿರೋ ರಕ್ಷಿತ್ ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ‘ಗಂಟುಮೂಟೆ ಅತ್ಯಂತ ವಿರಳ ಕಥಾ ಹಂದರದ ಮಹಿಳಾ ಪ್ರಧಾನ ಕಥೆಯನ್ನೊಳಗೊಂಡಿರುವ ಚಿತ್ರ. ಇದು ನಮಗೆ ಅಪರಿಚಿತ ಎನ್ನಬಹುದಾದ ಜಗತ್ತನ್ನ ನಮ್ಮೆದುರು ಬಿಚ್ಚಿಡುವ ಪರಿಯೇ ಅಚ್ಚರಿಯಂಥಾದ್ದು. ಗಂಟುಮೂಟೆ ಅಭಿವ್ಯಕ್ತಗೊಳಿಸಲು ಅಸಾಧ್ಯವಾದಂಥಾ ಅಂಶಗಳ ಮೂಲಕ ಅದ್ಭುತ ಕವಿತೆಯಂತೆಯೇ ರೂಪುಗೊಂಡಿದೆ. ಇದರೊಳಗಿನ ಪ್ರತೀ ಪಾತ್ರಗಳೂ ಅದ್ಭುತ ಲೋಕದೊಳಗೆ ಕರೆದೊಯ್ಯುತ್ತದೆ. ಇದು ನೀವೆಲ್ಲ ನೋಡಲೇ ಬೇಕಾದ ಚಿತ್ರ’ ಎಂದು ರಕ್ಷಿತ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

    ರಕ್ಷಿತ್ ಶೆಟ್ಟಿ ಭಿನ್ನ ಅಭಿರುಚಿ ಹೊಂದಿರುವ ನಟ. ಅವರೊಳಗೊಬ್ಬ ಅದೇ ನೆಲೆಯ ನಿರ್ದೇಶಕನಿದ್ದಾನೆ. ಅಂಥಾ ರಕ್ಷಿತ್ ಶೆಟ್ಟಿಯವರೇ ಗಂಟುಮೂಟೆಯನ್ನು ನೋಡಿ ಬೆರಗಾಗಿದ್ದಾರೆಂದರೆ ಈ ಸಿನಿಮಾದ ನಿಜವಾದ ಕಸುವೇನೆಂಬುದು ಯಾರಿಗಾದರೂ ಅರ್ಥವಾಗದಿರೋದಿಲ್ಲ. ಇದೀಗ ಅವನೇ ಶ್ರೀಮನ್ನಾರಾಯಣ ಚಿತ್ರದ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿರೋ ರಕ್ಷಿತ್, ಅದರ ನಡುವೆಯೂ ಈ ಚಿತ್ರವನ್ನು ನೋಡಿ ಖುಷಿಗೊಂಡಿದ್ದಾರೆ. ಗಂಟುಮೂಟೆ ನೋಡಿದ ಪ್ರತೀ ಪ್ರೇಕ್ಷಕರೂ ಕೂಡಾ ಇದೇ ರೀತಿ ಥ್ರಿಲ್ ಆಗಿದ್ದಾರೆ. ನಿರ್ದೇಶಕಿ ರೂಪಾ ರಾವ್ ಈ ಚಿತ್ರವನ್ನು ರೂಪಿಸಿರೋ ರೀತಿಯೇ ಅಂಥಾದ್ದಿದೆ. ಅಂತೂ ಈ ಸಿನಿಮಾ ಅಪರೂಪದ ಕಥನದೊಂದಿಗೆ ಅಚ್ಚರಿದಾಯಕ ಗೆಲುವನ್ನು ತನ್ನದಾಗಿಸಿಕೊಂಡಿದೆ.

  • ಸ್ಟಾರ್ ಸಿನಿಮಾಗಳ ಅಬ್ಬರದಲ್ಲೂ ಗೆದ್ದ ‘ಗಂಟುಮೂಟೆ’!

    ಸ್ಟಾರ್ ಸಿನಿಮಾಗಳ ಅಬ್ಬರದಲ್ಲೂ ಗೆದ್ದ ‘ಗಂಟುಮೂಟೆ’!

    ಬೆಂಗಳೂರು: ಒಂದೊಳ್ಳೆ ಕಂಟೆಂಟು, ಹೊಸತನಗಳನ್ನು ಜೀವಾಳವಾಗಿಸಿಕೊಂಡ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ಯಾವತ್ತಿಗೂ ಕೈ ಬಿಡುವುದಿಲ್ಲ. ಇದುವರೆಗೂ ಈ ವಿಚಾರ ಅಡಿಗಡಿಗೆ ಸಾಬೀತಾಗುತ್ತಲೇ ಬಂದಿದೆ. ಅದು ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಗಂಟುಮೂಟೆ ವಿಚಾರದಲ್ಲಿಯೂ ನಿಜವಾಗಿದೆ. ಅಷ್ಟಕ್ಕೂ ಭರಾಟೆಯಂಥಾ ಸಿನಿಮಾಗಳ ಅಬ್ಬರದ ನಡುವೆ ಈ ಚಿತ್ರ ತೆರೆಗಾಣುವ ಸನ್ನಾಹದಲ್ಲಿದ್ದಾಗಲೇ ಜನರಲ್ಲೊಂದು ಅಚ್ಚರಿ ಮನೆ ಮಾಡಿಕೊಂಡಿತ್ತು. ಆದರೆ ನೋಡುಗರೆಲ್ಲರಿಗೂ ಅಚ್ಚರಿಯಂಥಾ ತಾಜಾ ಕಥೆಯೊಂದಿಗೆ ಗಂಟುಮೂಟೆ ಚಿತ್ರ ಈ ರೇಸಿನಲ್ಲಿ ಜಯಿಸಿಕೊಂಡಿದೆ.

    ಇದು ನವ ನಿರ್ದೇಶಕಿ ರೂಪಾ ರಾವ್ ಅವರ ಚೊಚ್ಚಲ ಚಿತ್ರ. ಆದರೆ ಮೊದಲ ಹೆಜ್ಜೆಯಲ್ಲಿ ಎಂಥವರಾದರೂ ಹಿಂದೇಟು ಹಾಕುವಂಥಾ ಕಥೆಯನ್ನೇ ಅವರು ಈ ಮೂಲಕ ಹೇಳಿದ್ದಾರೆ. ತೊಂಬತ್ತರ ದಶಕದ ಹೈಸ್ಕೂಲು ಪ್ರೇಮ ಕಥಾನಕವನ್ನೊಳಗೊಂಡಿರೋ ಗಂಟುಮೂಟೆ ಪ್ರತಿಯೊಬ್ಬರನ್ನೂ ಖುಷಿಗೊಳಿಸಿದೆ. ಅನೇಕರು ತಮ್ಮದೇ ನೆನಪುಗಳ ನೆತ್ತಿ ಸವರಿಕೊಂಡು ಥ್ರಿಲ್ ಆಗಿದ್ದಾರೆ. ಮತ್ತೆ ಕೆಲವರು ಇಲ್ಲಿರೋ ಬಿಡುಬೀಸಾದ ನಿರೂಪಣೆ ಮತ್ತು ತಣ್ಣಗೆ ಪ್ರವಹಿಸುವ ಭಾವತೀವ್ರತೆಗೆ ಮನ ಸೋತಿದ್ದಾರೆ. ಎಲ್ಲರನ್ನೂ ಒಂದೊಂದು ರೀತಿಯಲ್ಲಿ ಆವರಿಸಿಕೊಂಡಿರುವ ಈ ಚಿತ್ರವೀಗ ಅದೇ ಬಲದಿಂದ ಗೆದ್ದಿದೆ.

    ಅಷ್ಟಕ್ಕೂ ಬಿಡುಗಡೆಗೂ ತುಂಬಾ ಮುಂಚೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಚಿತ್ರ ಹೆಸರು ಗಳಿಸಿತ್ತು. ಅಲ್ಲಿಯೂ ಮೆಚ್ಚುಗೆ ಗಳಿಸಿಕೊಂಡು ಪ್ರಶಸ್ತಿ ಪಡೆಯೋ ಮೂಲಕ ಕನ್ನಡದ ಘನತೆಯನ್ನು ಮಿರುಗಿಸಿತ್ತು. ಇಂಥಾ ಚಿತ್ರವೀಗ ಕನ್ನಡದಲ್ಲಿಯೂ ಗೆದ್ದಿದೆ. ದೊಡ್ಡ ಚಿತ್ರಗಳ ಭರಾಟೆಯಲ್ಲಿ ಹೊಸಬರ ಚಿತ್ರಗಳು ನೆಲೆ ಕಂಡುಕೊಳ್ಳೋದು ಎಂಥಾ ಸವಾಲಿನ ಸಂಗತಿ ಅನ್ನೋದು ಗೊತ್ತಿರುವಂಥಾದ್ದೇ. ಅದನ್ನು ರೂಪಾ ರಾವ್ ಸಾಧ್ಯವಾಗಿಸಿದ್ದಾರೆ. ತೇಜು ಬೆಳವಾಡಿ, ನಿಶ್ಚಿತ್ ಮುಂತಾದ ಹೊಸಬರನ್ನೇ ಚೆಂದಗೆ ನಟಿಸುವಂತೆ ಮಾಡಿ, ಅತ್ಯಂತ ಅಪರೂಪದ ಕಥೆ ಹೇಳುವ ಮೂಲಕ ರೂಪಾ ರಾವ್ ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕಿಯಾಗಿ ನೆಲೆ ಕಂಡುಕೊಂಡಿದ್ದಾರೆ.

    https://www.facebook.com/publictv/videos/742395332886864/?v=742395332886864

  • ‘ಗಂಟುಮೂಟೆ’ಯೊಳಗಿನ ಮ್ಯಾಜಿಕ್‍ಗೆ ಮರುಳಾದ ಪ್ರೇಕ್ಷಕರು!

    ‘ಗಂಟುಮೂಟೆ’ಯೊಳಗಿನ ಮ್ಯಾಜಿಕ್‍ಗೆ ಮರುಳಾದ ಪ್ರೇಕ್ಷಕರು!

    ಬೆಂಗಳೂರು: ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಗಂಟುಮೂಟೆ ಚಿತ್ರದ ಟ್ರೇಲರ್ ನೋಡಿದವರೆಲ್ಲ ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಗಾಢವಾದ ನಂಬಿಕೆ ಹೊಂದಿದ್ದರು. ಈ ಚಿತ್ರ ಅಂಥಾ ನಂಬಿಕೆಗಳನ್ನೆಲ್ಲ ನಿಜವಾಗಿಸೋ ಸ್ವರೂಪದೊಂದಿಗೇ ತೆರೆ ಕಂಡಿದೆ. ತೊಂಭತ್ತರ ದಶಕದ ಹೈಸ್ಕೂಲು ಪ್ರೇಮವೊಂದರ ಘಮ ಹೊತ್ತು ತಂದಿರುವ ಈ ಚಿತ್ರ ಬಹುತೇಕರ ನೆನಪುಗಳನ್ನು ಕೆಣಕಿದೆ. ತನ್ನ ಸೂಕ್ಷ್ಮ ಕಥಾ ಹಂದರದಿಂದ ಹಲವರ ಭಾವಕೋಶಗಳನ್ನು ನವಿರಾಗಿಯೇ ತಾಕಿದೆ. ಇದು ಯಶಸ್ವಿ ಚಿತ್ರವೊಂದರ ಲಕ್ಷಣ. ಅದಿಲ್ಲದೇ ಹೋಗಿದ್ದರೆ ದೊಡ್ಡ ಸಿನಿಮಾಗಳ ನಡುವೆ ಕಾಲೂರಿ ನಿಂತು ಯಶಸ್ವಿ ಪ್ರದರ್ಶನ ಕಾಣುವ ಕಸುವು ಈ ಚಿತ್ರಕ್ಕೆ ಬರುತ್ತಿರಲಿಲ್ಲವೇನೋ…?

    ಈ ಸ್ಪರ್ಧೆಯ ತೀವ್ರತೆಯ ನಡುವೆ ಸರಿಕಟ್ಟಾದೊಂದು ಕಂಟೆಂಟಿಲ್ಲದೇ ಹೋದರೆ ಹೊಸಬರ ತಂಡವೊಂದು ಅಖಾಡಕ್ಕಿಳಿದು ಸೆಣೆಸುವುದು ಸಾಧ್ಯವಾಗದ ಮಾತು. ಆದರೆ ರೂಪಾ ರಾವ್ ತಮ್ಮ ಮೊದಲ ಹೆಜ್ಜೆಯಲ್ಲಿಯೇ ಹೊಸಬರನ್ನು ಜೊತೆಗಿಟ್ಟುಕೊಂಡೂ ಗೆದ್ದಿದ್ದಾರೆ. ಸ್ಟಾರ್ ಸಿನಿಮಾಗಳಿದ್ದರೂ ಕೂಡಾ ಪ್ರೇಕ್ಷಕರೆಲ್ಲ ಗಂಟುಮೂಟೆಯನ್ನು ನೋಡುತ್ತಾ ಮುದಗೊಳ್ಳುತ್ತಿದ್ದಾರೆ. ಎಲ್ಲ ಚೌಕಟ್ಟುಗಳನ್ನು ಮೀರಿದ ಈ ಚೇತೋಹಾರಿ ಚಿತ್ರವೀಗ ಬಾಯಿಂದ ಬಾಯಿಗೆ ಹರಡಿಕೊಂಡಿರೋ ಒಳ್ಳೆ ಮಾತುಗಳ ಮೂಲಕವೇ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

    ಇದು ಅದಾಗ ತಾನೇ ಹದಿಹರೆಯದ ಹೊಸ್ತಿಲ ಬಳಿ ಹೆಜ್ಜೆಯಿಡುತ್ತಿರೋ ಹೈಸ್ಕೂಲು ಜೀವನದ ಕಥೆಯಾಧಾರಿತ ಚಿತ್ರ. ಅದು ಮೊದಲ ಪ್ರೇಮದ ಪುಳಕಗಳು ಎಳೇ ಮನಸೊಳಗೆ ಹುರಿಗೊಳ್ಳುವ ಕಾಲ. ಇಂಥಾ ಹೊತ್ತಿನಲ್ಲಿಯೇ ಬೆಂಗಳೂರಿನ ಒಳ್ಳೆಯ ಕುಟುಂಬದ ಕುಡಿಯಂತಿರೋ ನಾಯಕಿ ಮೀರಾ ಕೂಡಾ ಅಂಥಾದ್ದೇ ಭಾವಗಳಿಗೆ ಪಕ್ಕಾಗುತ್ತಾಳೆ. ಆಕೆಯ ಮನೋಭೂಮಿಕೆಯ ಇಶಾರೆಯ ಮೇರೆಗೆ ಇಡೀ ಕಥೆ ಕದಲುತ್ತದೆ. ಇಂಥಾ ಕಥೆಗಳು ಹೆಣ್ಣಿನ ಮೂಲಕ ನಿರೂಪಣೆಗೊಳ್ಳೋದೇ ಹೊಸ ವಿಚಾರ. ಅದನ್ನು ಮತ್ತಷ್ಟು ಹೊಸತನಗಳೊಂದಿಗೆ ರೂಪಾ ರಾವ್ ಕಟ್ಟಿ ಕೊಟ್ಟಿದ್ದಾರೆ. ಗಂಟು ಮೂಟೆ ಚಿತ್ರಕ್ಕೆ ರಾಜ್ಯಾದ್ಯಂತ ವ್ಯಾಪಕ ಬೆಂಬಲವೇ ತೋರಿ ಬರುತ್ತಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ವಿಚಾರದಲ್ಲಿಯೂ ಏರುಗತಿ ಕಾಣುತ್ತಿದೆ. ಈ ಎಲ್ಲ ಅಂಶಗಳೊಂದಿಗೆ ರೂಪಾ ರಾವ್ ನಿರ್ದೇಶನದ ಗಂಟುಮೂಟೆ ಗೆದ್ದಿದೆ.

  • ಗಂಟುಮೂಟೆ: ಹರೆಯದ ಹೊಸ್ತಿಲ ಮೋಹಕ ಲೋಕದ ಚಿತ್ತಾರ!

    ಗಂಟುಮೂಟೆ: ಹರೆಯದ ಹೊಸ್ತಿಲ ಮೋಹಕ ಲೋಕದ ಚಿತ್ತಾರ!

    ಬೆಂಗಳೂರು: ನಿರ್ದೇಶಕಿ ರೂಪಾ ರಾವ್ ಖಂಡಿತಾ ಒಂದು ಮ್ಯಾಜಿಕ್ ಮಾಡುತ್ತಾರೆ. ಹೀಗಂತ ಗಂಟುಮೂಟೆ ಚಿತ್ರದ ಟ್ರೈಲರ್ ನೋಡಿದ ಪ್ರತಿಯೊಬ್ಬರೂ ಅಂದುಕೊಂಡಿದ್ದರು. ಹದಿಹರೆಯದ ಹತ್ತತ್ತಿರ ಸಾಗುತ್ತಿರೋ ಮನಸುಗಳ ಕಥೆಯ ಸುಳಿವಿನೊಂದಿಗೆ ಈ ಚಿತ್ರದ ಟ್ರೈಲರ್ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬಂದಿತ್ತು. ಇದೀಗ ಗಂಟುಮೂಟೆ ಪ್ರೇಕ್ಷಕರೆದುರು ತೆರೆದುಕೊಂಡಿದೆ. ಅದರೊಳಗೆ ಕಾಣಿಸಿದ ಹರೆಯದ ಹೊಸ್ತಿಲ ಮೋಹಕ ಲೋಕದ ಚಿತ್ತಾರ ಕಂಡು ಪ್ರತೀ ಪ್ರೇಕ್ಷಕರು ಮುದಗೊಂಡಿದ್ದಾರೆ.

    ಈಗಾಗಲೇ ಸಿನಿಮಾ ರಂಗದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವ ರೂಪಾ ರಾವ್ ಅದನ್ನೆಲ್ಲ ಒಟ್ಟುಗೂಡಿಸಿಕೊಂಡು ಕನ್ನಡ ಪ್ರೇಕ್ಷಕರಿಗೆ ಹೊಸ ಬಗೆಯ ಲೋಕವನ್ನೇ ಈ ಮೂಲಕ ತೆರೆದಿಟ್ಟಿದ್ದಾರೆ. ಯಾವುದೇ ಕಥೆಗಳಾದರೂ ಹುಡುಗನ ಕಣ್ಣೋಟದಿಂದಲೇ ಬಿಚ್ಚಿಕೊಳ್ಳುತ್ತದೆ. ಆತನ ಮನೋಭೂಮಿಕೆಯ ಇಷಾರೆಯ ಮೇರೆಗೇ ಕಥೆ ಕದಲುತ್ತದೆ. ಆದರೆ ಈ ಚಿತ್ರದಲ್ಲಿ ಕಥೆ ಬಿಚ್ಚಿಕೊಳ್ಳೋದೇ ನಾಯಕಿ ಮೀರಾಳ ದೃಷ್ಟಿಯಲ್ಲಿ. ಇದರಾಚೆಗೆ ಚದುರಿಕೊಳ್ಳುವ ಕಥೆ ಹಲವು ದಿಕ್ಕುಗಳಲ್ಲಿ ವಿಸ್ತಾರಗೊಳ್ಳುತ್ತಾ ತಾಜಾ ಅನುಭವವನ್ನು ಪ್ರೇಕ್ಷಕರ ಎದೆ ತುಂಬುವಷ್ಟು ಇಲ್ಲಿನ ದೃಶ್ಯಗಳು ಶಕ್ತವಾಗಿವೆ.

    ಮೀರಾ ಎಂಬುದು ಈ ಚಿತ್ರದ ಕೇಂದ್ರ ಬಿಂದುವಿನಂಥಾ ಪಾತ್ರ. ಇದು ಬೆಂಗಳೂರಿನ ಮಧ್ಯಮ ವರ್ಗದ ಭೂಮಿಕೆಯಲ್ಲಿ ಜರುಗೋ ಕಥೆ. ಕಥಾ ನಾಯಕಿ ಮೀರಾ ಹೈಸ್ಕೂಲ್ ಹುಡುಗಿ. ಮೃದು ಮಧುರ ಸ್ವಭಾವದ ಮೀರಾಗೆ ಸಿನಿಮಾ ಗುಂಗು. ಆಕೆ ಹಿಂದಿ ಸಿನಿಮಾವೊಂದನ್ನು ನೋಡಿ ಸಲ್ಮಾನ್ ಖಾನ್ ಅಭಿಮಾನಿಯಾಗಿ ಬಿಟ್ಟಿರುತ್ತಾಳೆ. ಅದು ಎಷ್ಟರ ಮಟ್ಟಿಗೆಂದರೆ ತನ್ನ ಬದುಕಿನ ಪಲ್ಲಟಗಳನ್ನೂ ಕೂಡಾ ಆ ಚಿತ್ರದ ದೃಶ್ಯಗಳೇ ಎಂಬಷ್ಟು ತೀವ್ರವಾಗಿ ಫೀಲ್ ಮಾಡಿಕೊಳ್ಳುವಷ್ಟು. ಅಂಥಾ ಹುಡುಗಿಯಲ್ಲಿ ಹೈಸ್ಕೂಲು ತಲುಪುತ್ತಲೇ ಪ್ರೇಮದ ಭಾವಗಳು ಚಿಗುರಿಕೊಳ್ಳುತ್ತವೆ. ಅದರಲ್ಲಿಯೂ ಕೂಡಾ ಸಲ್ಮಾನ್ ಖಾನ್ ಚಿತ್ರದ ಚಹರೆಗಳಿರುತ್ತವೆ.

    ತನ್ನನ್ನು ಪ್ರೇಮಿಸೋ ಹುಡುಗ ಕೂಡಾ ಸಲ್ಮಾನ್ ಖಾನನಂತಿರಬೇಕೆಂಬುದು ಆಕೆಯ ಬಯಕೆ. ಈ ದೆಸೆಯಲ್ಲಿ ಮೀರಾ ಹುಡುಕಾಡಿ ಕಡೆಗೂ ತನ್ನದೇ ಕ್ಲಾಸ್ ರೂಮಿನ ಮಧು ಎಂಬ ಹುಡುಗನಲ್ಲಿ ಸಲ್ಮಾನ್ ಚಹರೆಗಳನ್ನು ಕಂಡುಕೊಳ್ಳುತ್ತಾಳೆ. ಆ ನಂತರ ಪ್ರೇಮ ಮೂಡಿಕೊಂಡು ಕಥೆಯ ಓಘ ತೀವ್ರವಾಗುತ್ತದೆ. ಆ ಮೇಲೇನಾಗುತ್ತದೆ ಅನ್ನೋದಕ್ಕೆ ರೂಪಾ ರಾವ್ ಅತ್ಯಂತ ಚುರುಕಾದ ಅಪರೂಪದ ಉತ್ತರವನ್ನೇ ಸೃಷ್ಟಿಸಿದ್ದಾರೆ. ಇಲ್ಲಿ ಭಾವ ತೀವ್ರತೆ ಇದೆ. ಹರೆಯದ ಕೀಟಲೆ, ಭೋಳೇತನ, ರೋಮಾಂಚಕ ಅಂಶಗಳು ಸೇರಿದಂತೆ ಎಲ್ಲವೂ ಇವೆ.

    ಮೀರಾ ಪಾತ್ರಧಾರಿ ತೇಜು ಬೆಳವಾಡಿ ಪಾಲಿಗಿದು ಮೊದಲ ಅನುಭವ. ಆದರೆ ಆಕೆ ಪಳಗಿದ ನಟಿಯಂತೆ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರಿಗೆ ಜೋಡಿಯಾಗಿ ಮಧು ಎಂಬ ಪಾತ್ರದಲ್ಲಿ ನಟಿಸಿರೋ ನಿಶ್ಚಿತ್ ಕೊರೋಡಿ ಕೂಡಾ ಚೆಂದಗೆ ನಟಿಸಿದ್ದಾರೆ. ರೂಪಾರಾವ್ ಈ ಮೂಲಕವೇ ತಾನು ಭಿನ್ನ ನೋಟದ ನಿರ್ದೇಶಕಿ ಎಂಬುದನ್ನು ಸಾಬೀತು ಪಡಿಸುತ್ತಲೇ ನಿರ್ದೇಶಕಿಯಾಗಿ ನೆಲೆಗೊಳ್ಳುವ ಭರವಸೆ ಮೂಡಿಸಿದ್ದಾರೆ. ಅಷ್ಟು ತೀವ್ರತೆಯಿಂದ ಅವರಿಲ್ಲಿ ತೊಂಭತ್ತರ ದಶಕದ ಪ್ರೇಮಕಾವ್ಯವನ್ನು ಕಟ್ಟಿ ಕೊಟ್ಟಿದ್ದಾರೆ. ಒಂದೊಳ್ಳೆ ಚಿತ್ರ ನೋಡಿದ ಅನುಭವಕ್ಕಾಗಿ ಖಂಡಿತಾ ಗಂಟುಮೂಟೆಯನ್ನೊಮ್ಮೆ ಎಲ್ಲರೂ ನೋಡಬಹುದು.

    ರೇಟಿಂಗ್-4/5

  • ಗಂಟುಮೂಟೆ: ಇಂಥಾ ಕಥೆಯನ್ನು ನೀವೆಂದೂ ನೋಡಿರಲು ಸಾಧ್ಯವಿಲ್ಲ!

    ಗಂಟುಮೂಟೆ: ಇಂಥಾ ಕಥೆಯನ್ನು ನೀವೆಂದೂ ನೋಡಿರಲು ಸಾಧ್ಯವಿಲ್ಲ!

    ವಾರವೇ ಬಿಡುಗಡೆಗೊಳ್ಳುತ್ತಿರುವ ರೂಪಾ ರಾವ್ ನಿರ್ದೇಶನದ ಚಿತ್ರ ಗಂಟುಮೂಟೆ. ಈಗಾಗಲೇ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಮತ್ತು ಮೆಚ್ಚುಗೆ ಪಡೆದುಕೊಂಡಿರೋ ಈ ಚಿತ್ರವನ್ನು ಈಗಾಗಲೇ ಚಿತ್ರರಂಗದ ಅನೇಕ ಗಣ್ಯರಿಗೂ ತೋರಿಸಲಾಗಿದೆ. ಹಾಗೆ ನೋಡಿದವರ ಕಣ್ಣುಗಳಲ್ಲಿ ಇದುವರೆಗೂ ನೋಡಿರದಿದ್ದ ಶೈಲಿಯ ಚಿತ್ರವೊಂದನ್ನು ಕಣ್ತುಂಬಿಕೊಂಡ ಖುಷಿಯೇ ಲಾಸ್ಯವಾಡಿದೆ. ಇದನ್ನು ನೋಡಿದ ಕನ್ನಡದ ಕೆಲ ಯಶಸ್ವಿ ನಿರ್ದೇಶಕರಂತೂ ಇಂಥಾ ಕಥೆ ಮತ್ತು ನಿರೂಪಣೆಯ ಚಿತ್ರವನ್ನು ತಾವೆಂದೂ ನೋಡಿಲ್ಲ ಎಂದು ಮನಸಾರೆ ಹೊಗಳಿದ್ದಾರೆ.

    ತೀರಾ ನುರಿತ ನಿರ್ದೇಶಕರೇ ಈ ಪಾಟಿ ಮೆಚ್ಚಿಕೊಳ್ಳುತ್ತಾರೆಂದರೆ ಗಂಟುಮೂಟೆಯೊಳಗೆ ಎಂತೆಂಥಾ ತಾಜಾ ಸರಕುಗಳಿರಬಹುದೆಂದು ಯಾರಿಗಾದರೂ ಅಂದಾಜು ಸಿಗುತ್ತದೆ. ಇದೆಲ್ಲವೂ ರೂಪಾ ರಾವ್ ಮತ್ತು ಚಿತ್ರತಂಡಕ್ಕೆ ಗೆಲುವಿನ ಭರವಸೆಯನ್ನೂ ಮೂಡಿಸಿವೆ. ರೂಪಾ ರಾವ್ ಪಾಲಿಗಿದು ಮೊದಲ ಚಿತ್ರ. ಈವರೆಗೆ ನಿರ್ದೇಶನ ವಿಭಾಗದಲ್ಲಿ ಸಾಕಷ್ಟು ಪಳಗಿಕೊಂಡಿರುವ ಇವರು ವೆಬ್ ಸೀರೀಸ್, ಕಿರುಚಿತ್ರಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ಗಂಟುಮೂಟೆಯೊಂದಿಗೆ ನಿರ್ದೇಶಕಿಯಾಗಿ ಆಗಮಿಸಿರುವ ಅವರ ಮುಂದೀಗ ಎಲ್ಲ ದಿಕ್ಕಿನಲ್ಲಿಯೂ ಸದಾಭಿಪ್ರಾಯಗಳೇ ಬಂದು ಮುತ್ತಿಕೊಳ್ಳುತ್ತಿವೆ.

    ರೂಪಾ ರಾವ್ ಗಂಟುಮೂಟೆಯಲ್ಲಿ ಅಚ್ಚರಿಗೊಳ್ಳುವಂಥಾ ಅಂಶಗಳನ್ನು ಕಟ್ಟಿಟ್ಟಿದ್ದಾರೆಂಬುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಅದರ ಕೆಲ ಚಹರೆಗಳು ಮಾತ್ರವೇ ಟ್ರೇಲರ್ ಮೂಲಕ ಕಾಣಿಸಿದೆ. ಹೈಸ್ಕೂಲು ದಿನಗಳನ್ನು ಹಾದು ಬಂದ ಬಹುತೇಕರ ಎದೆಯಲ್ಲಿ ಒಂದು ನವಿರು ಪ್ರೇಮದ ಭಾವವಿರುತ್ತೆ. ಆ ನೆನಪುಗಳೂ ಇರುತ್ತವೆ. ಇದರಲ್ಲಿ ಘಟಿಸೋ ತೊಂಭತ್ತರ ದಶಕದ ಪ್ರೇಮಕಥೆ ಅದೆಲ್ಲವನ್ನೂ ಬಡಿದೆಬ್ಬಿಸೋದು ಗ್ಯಾರೆಂಟಿ. ಹದಿಹರೆಯದ ಹೊಸ್ತಿಲ ಪ್ರೀತಿ, ಪ್ರೇಮ, ಭ್ರಮೆ, ವಾಸ್ತವಗಳ ಚಿತ್ರಣ ಹೊಂದಿರೋ ಈ ಚಿತ್ರ ಕಮರ್ಶಿಯಲ್ ಫಾರ್ಮುಲಾಗಳನ್ನೂ ಲೇಪಿಸಿಕೊಂಡೇ ತಯಾರಾಗಿದೆ. ಇದು ಈ ವಾರವೇ ತೆರೆಗಾಣುತ್ತಿದೆ.

  • ಗಂಟುಮೂಟೆ ಟ್ರೇಲರ್‌ಗೆ ಕಿಚ್ಚನ ಮೆಚ್ಚುಗೆ!

    ಗಂಟುಮೂಟೆ ಟ್ರೇಲರ್‌ಗೆ ಕಿಚ್ಚನ ಮೆಚ್ಚುಗೆ!

    ಬೆಂಗಳೂರು: ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಗಂಟುಮೂಟೆ ಚಿತ್ರವೀಗ ಚರ್ಚೆಯ ಕೇಂದ್ರಬಿಂದುವಾಗಿ ಬದಲಾಗಿದೆ. ಕನ್ನಡದಲ್ಲಿ ಮಹಿಳಾ ನಿರ್ದೇಶಕಿಯರ ಕೊರತೆ ಕಾಡುತ್ತಿರೋ ಕಾಲದಲ್ಲಿಯೇ ಹೊಸ ಬಗೆಯ ಕಥೆಯೊಂದಿಗೆ ಎಂಟ್ರಿ ಕೊಟ್ಟಿರೋ ರೂಪಾ ರಾವ್ ಪಾಲಿಗಿದು ಆರಂಭಿಕ ಹೆಜ್ಜೆಯಾದರೂ ಭರ್ಜರಿಯಾಗಿಯೇ ಸದ್ದು ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಲಾಂಚ್ ಆಗಿತ್ತು. ಇದಕ್ಕೆ ವ್ಯಾಪಕ ಸದಭಿಪ್ರಾಯ ಮೂಡಿಕೊಂಡಿರೋ ವಾತಾವರಣದಲ್ಲಿಯೇ ಕಿಚ್ಚ ಸುದೀಪ್ ಕೂಡಾ ಈ ಟ್ರೇಲರನ್ನು ಮೆಚ್ಚಿಕೊಂಡಿದ್ದಾರೆ.

    ಗಂಟುಮೂಟೆ ಟ್ರೇಲರ್ ಬಗ್ಗೆ ಸುದೀಪ್ ಟ್ವೀಟ್ ಮಾಡೋ ಮೂಲಕ ಒಳ್ಳೆ ಮಾತುಗಳನ್ನಾಡಿದ್ದಾರೆ. ಈ ಸಣ್ಣ ಟ್ರೇಲರ್ ಸಾವಿರ ಮಾತುಗಳನ್ನಾಡುತ್ತಿದೆ. ಇದುವೇ ಈ ಚಿತ್ರ ಅದ್ಭುತ ಚಿಂತನೆಯೊಂದಿಗೆ ಮೂಡಿ ಬಂದಿರೋ ಸೂಚನೆಗಳನ್ನೂ ನೀಡುವಂತಿದೆ ಅಂದಿರೋ ಸುದೀಪ್ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಖುದ್ದು ಸುದೀಪ್ ಅವರೇ ಈ ರೀತಿ ಮೆಚ್ಚಿಕೊಂಡು ಮಾತಾಡಿರೋದರಿಂದ ಗಂಟುಮೂಟೆಯತ್ತ ಅಗಾಧ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ತ ನೆಟ್ಟಿದ್ದಾರೆ. ರೂಪಾ ರಾವ್ ಸೇರಿದಂತೆ ಚಿತ್ರತಂಡಕ್ಕೆ ಹೊಸ ಹುರುಪೂ ಸಿಕ್ಕಂತಾಗಿದೆ.

    ಗಂಟುಮೂಟೆ ಟ್ರೇಲರ್ ಹೀಗೆ ಎಲ್ಲ ದಿಕ್ಕಿನಿಂದಲೂ ಒಳ್ಳೆ ಪ್ರತಿಕ್ರಿಯೆ ಪಡೆದುಕೊಳ್ಳುವಂತೆಯೇ ಮೂಡಿ ಬಂದಿದೆ. ತೊಂಬತ್ತರ ದಶಕದ ಹೈಸ್ಕೂಲು ಪ್ರೇಮದ ಕಥೆ ಹೇಳೋ ಈ ಸಿನಿಮಾ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿದೆ. ಬಿಡುಗಡೆಗೂ ಮುನ್ನವೇ ವಿದೇಶಗಳಲ್ಲಿಯೂ ಕನ್ನಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದೆ. ಹಾಗೆಂದಾಕ್ಷಣ ಇದೇನು ಆರ್ಟ್ ಮೂವಿ ಅಂದುಕೊಳ್ಳಬೇಕಿಲ್ಲ. ಪಕ್ಕಾ ಕಮರ್ಶಿಯಲ್ ಅಂಶಗಳೊಂದಿಗೆ ಅಪರೂಪದ ಕಥೆಯ ಜೊತೆಗೇ ರೂಪಾ ಈ ಚಿತ್ರವನ್ನು ರೂಪಿಸಿದ್ದಾರಂತೆ.

    https://www.facebook.com/publictv/videos/742395332886864/?v=742395332886864

  • ಟ್ರೇಲರ್ ಮೂಲಕ ಬಿಚ್ಚಿಕೊಂಡಿತು ಹೈಸ್ಕೂಲು ಪ್ರೇಮದ ‘ಗಂಟುಮೂಟೆ’!

    ಟ್ರೇಲರ್ ಮೂಲಕ ಬಿಚ್ಚಿಕೊಂಡಿತು ಹೈಸ್ಕೂಲು ಪ್ರೇಮದ ‘ಗಂಟುಮೂಟೆ’!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇದೀಗ ಚಾಲ್ತಿಯಲ್ಲಿರುವ ಹೊಸಾ ಅಲೆಯ ಚಿತ್ರಗಳ ಸಾಲಿಗೆ ಸೇರ್ಪಡೆಯಾಗುವಂಥಾ ಗಂಟುಮೂಟೆಯೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಈಗಾಗಲೇ ಹೈಸ್ಕೂಲು ಪ್ರೇಮದ, ಹದಿಹರೆಯದ ಆವೇಗದ ಕಥೆಯ ಸುಳಿವಿನೊಂದಿಗೆ ಈ ಚಿತ್ರ ಜೋರಾಗಿಯೇ ಸದ್ದು ಮಾಡುತ್ತಿದೆ. ಇದೀಗ ರೂಪಾ ರಾವ್ ನಿರ್ದೇಶನ ಮಾಡಿರೋ ‘ಗಂಟುಮೂಟೆ’ಯ ಟ್ರೇಲರ್ ಬಿಡುಗಡೆಯಾಗಿದೆ.

    ಸಾಮಾನ್ಯವಾಗಿ ಪ್ರೇಮ ಕಥೆಗಳು ಹುಡುಗಕನ ದೃಷ್ಟಿಕೋನದಿಂದಲೇ ಬಿಚ್ಚಿಕೊಳ್ಳುತ್ತವೆ. ಆದರೆ ಹದಿಹರೆಯದ ಪುಳಕ, ತಲ್ಲಣಗಳ ಕಥೆ ಹೊಂದಿರೋ ಗಂಟುಮೂಟೆಯ ಕಥೆ ಹುಡುಗಿಯೊಬ್ಬಳ ಬಿಂದುವಿನಿಂದ ತೆರೆದುಕೊಳ್ಳುತ್ತದೆ. ನಿರ್ದೇಶಕಿ ರೂಪಾ ರಾವ್ ಈ ಹಿಂದೆಯೇ ಇಂಥಾ ಹಿಂಟ್ ಕೊಟ್ಟಿದ್ದರು. ಈ ಟ್ರೇಲರ್ ಮೂಲಕ ಅದು ಪರಿಣಾಮಕಾರಿಯಾಗಿಯೇ ಜಾಹೀರಾಗಿದೆ. ತುಸು ಬೋಲ್ಡ್ ಆಗಿಯೇ ಹೆಣ್ಣೊಬ್ಬಳ ಕೇಂದ್ರದಿಂದ ಪ್ರೇಮಕಥಾನಕದ ಗುಟ್ಟು ಬಿಟ್ಟುಕೊಡುವಂತಿರೋ ಈ ಸಿನಿಮಾದ ಟ್ರೇಲರ್ ಪರಿಣಾಮಕಾರಿಯಾದ ಹಿಒನ್ನೆಲೆ ಧ್ವನಿ, ಅದರಲ್ಲಿ ಕೇಳಿ ಬಂದಿರೋ ವಿಚಾರಗಳು ಮತ್ತು ಅದಕ್ಕೆ ಪೂರಕವಾದ ದೃಷ್ಯಾವಳಿಗಳಿಂದಲೇ ಭರವಸೆ ಮೂಡಿಸಿದೆ.

    ಗಂಟುಮೂಟೆ ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ. ಈಗಾಗಲೇ ಹಲವಾರು ವೆಬ್ ಸೀರೀಸ್ ಮೂಲಕ ಬೇರೆ ಭಾಷೆಗಳಲ್ಲಿಯೂ ಹೆಸರು ಮಾಡಿರೋ ಅವರೀಗ ಈ ಚಿತ್ರದ ಮೂಲಕ ಹೈಸ್ಕೂಲು ಮನೋಲೋಕದ ಭಿನ್ನ ಪದರುಗಳನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲು ಮುಂದಾಗಿದ್ದಾರೆ. ಈಗ ಬಂದಿರೋ ಟ್ರೇಲರ್ ಈ ಕಥೆ ಬೇರೆಯದ್ದೇ ಜಾಡಿನದ್ದೆಂಬುದನ್ನು ಜಾಹೀರು ಮಾಡುವಂತಿದೆ. ಈಗಾಗಲೇ ಟಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗುರುತು ಮೂಡಿಸಿ ಟಾಕ್ ಕ್ರಿಯೇಟ್ ಮಾಡಿರೋ ಗಂಟುಮೂಟೆಯೀಗ ಟ್ರೇಲರ್ ಮೂಲಕ ನಿರ್ಣಾಯಕವಾಗಿಯೇ ಸದ್ದು ಮಾಡುತ್ತಿದೆ.

    https://www.facebook.com/publictv/videos/742395332886864/