Tag: ಗಂಗಾವತಿ

  • ವಿರುಪಾಪುರ ಗಡ್ಡಿಯಲ್ಲಿ ಬೋನಿಗೆ ಬಿದ್ದ ಚಿರತೆ

    ವಿರುಪಾಪುರ ಗಡ್ಡಿಯಲ್ಲಿ ಬೋನಿಗೆ ಬಿದ್ದ ಚಿರತೆ

    ಕೊಪ್ಪಳ: ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿಯಲ್ಲಿ ಎರಡು ವರ್ಷದ ಹೆಣ್ಣು ಚಿರತೆ ಮರಿಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

    ಕಳೆದ ಮೂರ್ನಾಲ್ಕು ತಿಂಗಳಿಂದ ಆನೆಗೊಂದಿ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು. ಈಗಾಗಲೇ ಚಿರತೆ ದಾಳಿಗೆ ಇಬ್ಬರು ಯುವಕರು ಬಲಿಯಾಗಿದ್ದು,ಜನ-ಜಾನುವಾರುಗಳ ಮೇಲೂ ಚಿರತೆ ದಾಳಿ ಮಾಡಿ ಗಾಯಗೊಳಿಸಿತ್ತು.

    ಚಿರತೆ ಸೆರೆಹಿಡಿಯಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ ಅರಣ್ಯ ಇಲಾಖೆ ಕಳೆದ ಎರಡು ತಿಂಗಳಲ್ಲಿ ಆನೆಗೊಂದಿ ಭಾಗದಲ್ಲಿ ಮೂರು ಚಿರತೆಗಳನ್ನು ಸೆರೆಹಿಡಿದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ಚಿರತೆಗೆ ಅರವಳಿಕೆ ನೀಡಿ, ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್ ಗೆ ಕಳುಹಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶಿವರಾಜ್ ಮೇಟಿ ತಿಳಿಸಿದ್ದಾರೆ.

  • ಕೊಪ್ಪಳದಲ್ಲಿ ಕರುವಿನ ಕುತ್ತಿಗೆ ಕಚ್ಚಿದ ಚಿರತೆ

    ಕೊಪ್ಪಳದಲ್ಲಿ ಕರುವಿನ ಕುತ್ತಿಗೆ ಕಚ್ಚಿದ ಚಿರತೆ

    ಕೊಪ್ಪಳ: ಕರುವಿನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆ ಗ್ರಾಮದಲ್ಲಿ ನಡೆದಿದೆ.

    ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆ ಗ್ರಾಮದ ಮೇಲ್ಭಾಗದ ವೀರುಪಣ್ಣ ಎಂಬವರ ಕರುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಕರುವಿನ ಕುತ್ತಿಗೆ ಭಾಗಕ್ಕೆ ಚಿರತೆ ಕಚ್ಚಿ ಗಾಯ ಮಾಡಿದೆ. ಕರುವಿನ ಚೀರಾಟಕ್ಕೆ ಹತ್ತಿರದಲ್ಲಿರುವ ಜನರು ಓಡಿ ಬಂದು ಅದರ ಪ್ರಾಣವನ್ನು ರಕ್ಷಿಸಿದ್ದಾರೆ. ಬಳಿಕ ಚಿರತೆಯನ್ನು ಗ್ರಾಮಸ್ಥರು ಸ್ಥಳದಿಂದ ಓಡಿಸಿದ್ದಾರೆ.

    ಕಳೆದ ಎರಡು ದಿನಗಳ ಹಿಂದಷ್ಟೇ ಆನೆಗೊಂದಿಯಲ್ಲಿ ಹುಲಿಗೇಶ್ ಎಂಬ ಯುವಕನ ಮೇಲೆ ಚಿರತೆ ದಾಳಿ ಮಾಡಿ ತಿಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಇದೀಗ ಮತ್ತೆ ಚಿರತೆ ಪ್ರತ್ಯಕ್ಷವಾಗಿ ದಾಳಿ ನಡೆಸಿರುವುದರಂದ ಆನೆಗೊಂದಿ ಭಾಗದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಶೀಘ್ರವೇ ಚಿರತೆ ಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

  • ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನ ಕಿಡ್ನಾಪ್- ಸಿಸಿಟಿವಿಯಲ್ಲಿ ಸೆರೆ

    ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನ ಕಿಡ್ನಾಪ್- ಸಿಸಿಟಿವಿಯಲ್ಲಿ ಸೆರೆ

    ಕೊಪ್ಪಳ: ಸಿನಿಮೀಯ ರೀತಿಯಲ್ಲಿ ನಗರ ಸಭೆ ಸದಸ್ಯರೊಬ್ಬರನ್ನು ಅಪಹರಣ ಮಾಡಲಾಗಿದ್ದು, ಕಿಡ್ನಾಪ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನವೆಂಬರ್ 02ಕ್ಕೆ ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಗಂಗಾವತಿ ನಗರ ಸಭೆ ಕಾಂಗ್ರೆಸ್ ಸದಸ್ಯ ಮನೋಹರ ಸ್ವಾಮಿ ಹಿರೇಮಠರನ್ನ ಬಿಜೆಪಿ ಪಕ್ಷದ ನಗರ ಸಭೆ ಸದಸ್ಯರು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಬಿಜೆಪಿಯ ಹಾಲಿ ಸದಸ್ಯರಾದ ಅಜಯ್ ಬಿಚ್ಚಾಲಿ, ನವೀನ ಪಾಟೀಲ್, ಪರಶುರಾಮ ಮಡ್ಡೇರ್, ಹಾಗೂ ಮಾಜಿ ಸದಸ್ಯ ರಾಚ್ಚಪ್ಪ ಸಿದ್ದಾಪುರ ಹಾಗೂ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಸೇರಿದಂತೆ ಸಹಚರರಾದ ರವಿ ಲಿಂಗರಾಜ ಕ್ಯಾಂಪ್, ಡಬರಿ ಶರಣ ಹೀಗೆ ಒಟ್ಟು 08 ಜನರ ವಿರುದ್ಧ ಕಾಂಗ್ರೆಸ್ ಸದಸ್ಯನ ಕಿಡ್ನಾಪ್ ಆರೋಪ ಕೇಳಿಬಂದಿದೆ.

    ಗಂಗಾವತಿಯ ನಕ್ಷತ್ರ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಕಿಡ್ನಾಪ್ ಮಾಡಿದ್ದು, ಕತ್ತು ಹಿಡಿದು ಎಳೆದುಕೊಂಡು ಹೊಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಿಡ್ನಾಪ್ ಮಾಡಿದ ಎಂಟು ಜನರ ವಿರುದ್ಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಜೇಮ್ಸ್ ಚಿತ್ರೀಕರಣ – ಶೂಟಿಂಗ್ ನೋಡಲು ಸೇರಿದ ಅಪಾರ ಅಭಿಮಾನಿಗಳು

    ಜೇಮ್ಸ್ ಚಿತ್ರೀಕರಣ – ಶೂಟಿಂಗ್ ನೋಡಲು ಸೇರಿದ ಅಪಾರ ಅಭಿಮಾನಿಗಳು

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪೂರ ಗ್ರಾಮ ಸೀಮಾ ವ್ಯಾಪ್ತಿಯ ವಾಣೀಭದ್ರೇಶ್ವರ ದೇವಸ್ಥಾನ ಬಳಿಯ ನಟ ಪುನೀತ ರಾಜಕುಮಾರ ನಟಿಸುತ್ತಿರುವ ಜೇಮ್ಸ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಚಿತ್ರ ತಂಡ ಹೊಸಪೇಟೆ ಸೇರಿದಂತೆ ನಾನಾ ಭಾಗಗಳಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ.

    ಇಂದು ಗಂಗಾವತಿ ಭಾಗದಲ್ಲಿ ನಡೆಯುತ್ತಿರುವ ಶೂಟಿಂಗ್‍ಗೆ ಪುನೀತ್ ಆಗಮನದ ಸುದ್ದಿ ತಿಳಿದ ಅಭಿಮಾನಿಗಳು ಚಿತ್ರೀಕರಣ ಸ್ಥಳಕ್ಕೆ ಆಗಮಿಸಿದ್ದರು. ನೆಚ್ಚಿನ ನಟನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಅಭಿಮಾನಿಗಳನ್ನ ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಇಂದು ಶೂಟಿಂಗ್ ಸೆಟ್ ಗೆ ನಟಿ ಅನು ಪ್ರಭಾಕರ್ ಸಹ ಆಗಮಿಸಿದ್ದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪುನೀತ್ ರಾಜ್‍ಕುಮಾರ್, ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದ್ದು, ಜನರು ಸುರಕ್ಷತೆಯ ಕಡೆಗೆ ಹೆಚ್ಚು ಗಮನ ಹರಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ನಷ್ಟ ಸಂಭವಿಸಿದರೆ ಸಿನಿರಂಗದಿಂದ ಸಹಾಯ ಮಾಡುವ ಸಂದರ್ಭ ಬಂದರೆ ನಾವೆಲ್ಲರೂ ಕೈ ಜೋಡಿಸುತ್ತೇವೆ. ಕೊರೊನಾದಿಂದ ಚಿತ್ರ ಮಂದಿರಗಳು ಬಂದ್ ಆಗಿದ್ದವು. ಸದ್ಯ ಪುನಃ ಆರಂಭ ಮಾಡಲಾಗಿದೆ. ಜನರು ಮುಂಜಾಗೃತ ಕ್ರಮಗಳನ್ನು ಕೈಗೊಂಡು ಚಿತ್ರ ಮಂದಿರಕ್ಕೆ ಆಗಮಿಸಿ ಸಿನಿಮಾ ವೀಕ್ಷಣೆ ಮಾಡಿ, ಚಿತ್ರರಂಗ ಬೆಳೆಸಬೇಕು ಎಂದು ಮನವಿ ಮಾಡಿಕೊಂಡರು.

  • ಮೂವರು ಮಕ್ಕಳು ಸೇರಿ 22 ಮಂದಿಗೆ ಕೊರೊನಾ ಸೋಂಕು

    ಮೂವರು ಮಕ್ಕಳು ಸೇರಿ 22 ಮಂದಿಗೆ ಕೊರೊನಾ ಸೋಂಕು

    – ಸೋಂಕಿತರಲ್ಲಿ ರೋಗ ಲಕ್ಷಣಗಳೇ ಇಲ್ಲ

    ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಇಂದು ರಣಕೇಕೆ ಹಾಕಿದೆ. ಮೂವರು ಮಕ್ಕಳು ಸೇರಿದಂತೆ ಬರೋಬ್ಬರಿ 22 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೊಪ್ಪಳ ಡಿಸಿ ಸುನೀಲ್ ಕುಮಾರ್ ಹೇಳಿದ್ದಾರೆ.

    ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲೇ ಐದು ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. 19 ವರ್ಷದ ಯುವತಿ, 18 ವರ್ಷದ ಯುವಕ, 6 ವರ್ಷದ ಮಗು, 45 ಮತ್ತು 37 ವರ್ಷದ ಪುರುಷರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಶ್ರೀರಾಮನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

    ಗಂಗಾವತಿ ತಾಲೂಕಿನ ಅಡವಿಭಾವಿ ಗ್ರಾಮದ 42 ವರ್ಷದ ಮಹಿಳೆ, ಗಂಗಾವತಿ ನಗರದ 18 ವರ್ಷದ ಯುವತಿಗೆ ಕೊರೊನಾ ದೃಢಪಟ್ಟಿದೆ. ತಾಲೂಕಿನ ಮರಳಿ ಗ್ರಾಮದ 56 ವರ್ಷದ ವ್ಯಕ್ತಿಗೂ ಹಾಗೂ ಕಾರಟಗಿಯ 23 ವರ್ಷದ ಮಹಿಳೆಗೆ ಸೋಂಕು ಖಚಿತವಾಗಿದೆ. ಅಲ್ಲದೇ ಕುಷ್ಟಗಿ ತಾಲೂಕಿನ ನಂದಾಪುರ ಗ್ರಾಮದಲ್ಲಿ 2 ಕೊರೊನಾ ಪ್ರಕರಣ ಪತ್ತೆಯಾಗಿದ್ದು, 32 ವರ್ಷದ ವ್ಯಕ್ತಿ ಹಾಗೂ 40 ವರ್ಷದ ಮಹಿಳಿಗೆ ಸೋಂಕು ತಗುಲಿದೆ. ಕುಷ್ಟಗಿ ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದ 3 ವರ್ಷದ ಬಾಲಕನಿಗೆ ಕೊರೊನಾ ದೃಢಪಟ್ಟಿದೆ. ಪರಿಣಾಮ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

    ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮಕ್ಕೆ ಕೊರೊನಾ ಪ್ರವೇಶ ನೀಡಿದ್ದು, ಇಂದು 34 ವರ್ಷದದ ವ್ಯಕ್ತಿಯ ವರದಿ ಪಾಸಿಟಿವ್ ಬಂದಿದೆ. ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ 25 ವರ್ಷದ ಯುವಕನಿಗೆ ಮತ್ತು ಗೋರ್ಲೇಕೊಪ್ಪ ಗ್ರಾಮದ 12 ವರ್ಷದ ಬಾಲಕನಿಗೆ ಮತ್ತು ಯರಡೋಣಿ ಗ್ರಾಮದ 55 ವರ್ಷದ ವ್ಯಕ್ತಿಗೂ ಸೋಂಕು ತಗುಲಿದೆ. ಪರಿಣಾಮ ಯಲಬುರ್ಗಾ ತಾಲೂಕಿನ ಗ್ರಾಮಗಳಿಗೂ ಕೊರೊನಾ ಎಂಟ್ರಿ ಕೊಟ್ಟಿರುವುದಿಂದ ತಾಲೂಕಿನ ಜನರಲ್ಲಿ ಆತಂಕ ಮನೆ ಮಾಡಿದೆ.

    ಕೊಪ್ಪಳ ತಾಲೂಕಿನಲ್ಲೂ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ತಾಲೂಕಿನ ಹಿರೇಬಗನಾಳ ಗ್ರಾಮದ 31 ವರ್ಷದ ವ್ಯಕ್ತಿಗೆ, ಗೊಬ್ಬೂರ ಗ್ರಾಮದಲ್ಲಿ 2 ವರ್ಷದ ಮಗೂ ಸೇರಿದಂತೆ 25 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ಇನ್ನು ಹುಲಗಿ ಗ್ರಾಮದಲ್ಲಿ ಇಬ್ಬರು ಮಹಿಳೆಯರಿಗೆ, ಹೊಸಲಿಂಗಾಪುರ ಗ್ರಾಮದಲ್ಲಿ ಒಬ್ಬರಿಗೆ ಕೊರೊನಾ ದೃಢ ಪಟ್ಟಿದೆ. ಇದು ಜಿಲ್ಲೆಯನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.

    ಇಂದು ಪ್ರಕಟಗೊಂಡ ಕೊರೊನಾ ದೃಢಪಟ್ಟ ಪ್ರಕರಣಗಳಲ್ಲಿ ಸೋಂಕಿನ ರೋಗ ಲಕ್ಷಣಗಳೇ ಇಲ್ಲದಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಪರಿಣಾಮ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಸಾಮಾಜಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ಮನವಿ ಮಾಡಿಕೊಂಡಿದೆ.

  • ಗಂಗಾವತಿಯಲ್ಲಿ ಮೌಲ್ವಿಗೆ ಸೋಂಕು- ಹೆಚ್ಚಿದ ಆತಂಕ

    ಗಂಗಾವತಿಯಲ್ಲಿ ಮೌಲ್ವಿಗೆ ಸೋಂಕು- ಹೆಚ್ಚಿದ ಆತಂಕ

    ಕೊಪ್ಪಳ: ಆಂಧ್ರದಿಂದ ಮರಳಿದ ಮೌಲ್ವಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಆತಂಕ ಮನೆ ಮಾಡಿದೆ.

    ಈ ಕುರಿತು ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಮಾಹಿತಿ ನೀಡಿದ್ದು, ಜಿಲ್ಲೆಯ ಗಂಗಾವತಿಯಲ್ಲಿ ಆಂಧ್ರದ ಆಧೋನಿ ಮೂಲದ 32 ವರ್ಷದ ಮೌಲ್ವಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈತ ನಗರದ ಹೃದಯ ಭಾಗದಲ್ಲಿರುವ ಜಾಮೀಯಾ ಮಸೀದಿಯಲ್ಲಿ ಮೌಲ್ವಿಯಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಗಂಗಾವತಿಗೆ ಆಗಮಿಸಿ ಜಾಮೀಯಾ ಮಸೀದಿಯಲ್ಲಿ ದಿನಕ್ಕೆ ಐದು ಬಾರಿ ನಮಾಜ್ ಮಾಡಿಸಿದ್ದಾರೆ. ರೋಗ ಲಕ್ಷಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ವಿವರಿಸಿದ್ದಾರೆ.

    ಕೊರೊನಾ ಪಾಸಿಟಿವ್ ಬರುತ್ತಿದಂತೆ ಗಂಗಾವತಿ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ನಗರಸಭೆ ಅಧಿಕಾರಿಗಳು, ಸೋಂಕಿತ ಮೌಲ್ವಿಯನ್ನು ಕೊಪ್ಪಳದ ಕೋವಿಡ್-19 ಆಸ್ಪತ್ರೆಗೆ ರವಾನಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮೌಲ್ವಿ ವಾಸವಿದ್ದ ಮನೆ ಮತ್ತು ಮಸೀದಿ ಸುತ್ತಲಿನ ಪ್ರದೇಶವನ್ನು ಸೀಲ್‍ಡೌನ್ ಮಾಡಿದ್ದಾರೆ. ಅಲ್ಲದೆ ಮಸೀದಿ ಬಳಿ ಇರುವ ಡೇಲಿ ಮಾರ್ಕೆಟ್ ಕೂಡ ಬಂದ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಆತ ವಾಸವಿದ್ದ ಮನೆ, ಮಸೀದಿ ಹಾಗೂ ಸುತ್ತಲಿನ ಪ್ರದೇಶವನ್ನು ನಗರಸಭೆ ಸಿಬ್ಬಂದಿ ಸ್ಯಾನಿಟೈಸ್ ಮಾಡಿದ್ದಾರೆ. ಅಲ್ಲದೆ ಆ ಪ್ರದೇಶದಿಂದ ಯಾರೂ ಹೊರ ಬಾರದಂತೆ ಎಚ್ಚರಿಕೆ ನೀಡಲಾಗಿದೆ. ಭಯಾನಕ ವಿಚಾರವೆಂದರೆ ಮೌಲ್ವಿ ನಗರಕ್ಕೆ ಆಗಮಿಸುತ್ತಿದ್ದಂತೆ ಮಾರ್ಕೆಟ್‍ಗೆ ತೆರಳಿ ಹಣ್ಣು ಹಂಪಲು, ತರಕಾರಿ ಖರೀದಿಸಿದ್ದಾರೆ. ಅದಲ್ಲದೆ ಹೋಟೆಲ್ ಗಳಿಗೆ ಹೋಗಿ ತಿನಿಸುಗಳನ್ನು ಪಾರ್ಸಲ್ ತಂದಿದ್ದಾರೆ. ಹೀಗಾಗಿ ಈತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ಮಾಡಿದವರನ್ನೆಲ್ಲ ಕ್ವಾರಂಟೈನ್ ಮಾಡಲಾಗುತ್ತಿದೆ. ಸೀಲ್ ಡೌನ್ ಮಾಡಿದ ಪ್ರದೇಶದ ನಜ ಭಯಭೀತರಾಗಿದ್ದು, ನಗರಸಭೆ ಸಿಬ್ಬಂದಿ ಹಾಗೂ ವಾರ್ಡ್ ಸದಸ್ಯರು ಜನರಿಗೆ ತಿಳಿ ಹೇಳುತ್ತಿದ್ದಾರೆ.

  • ಬೆಂಗಳೂರಿನಿಂದ ಬಂದಿದ್ದ ಕಂಪ್ಲಿ ಕಾರ್ಮಿಕನಿಗೆ ಸೋಂಕು

    ಬೆಂಗಳೂರಿನಿಂದ ಬಂದಿದ್ದ ಕಂಪ್ಲಿ ಕಾರ್ಮಿಕನಿಗೆ ಸೋಂಕು

    -28 ಜನರ ಜೊತೆ ಗಂಗಾವತಿಗೆ ಬಸ್‍ನಲ್ಲಿ ಬಂದ ಕಾರ್ಮಿಕ
    -ಕಾರ್ಮಿಕನ ಸಂಪರ್ಕದಲ್ಲಿದ್ದ ಜನರಿಗಾಗಿ ಶೋಧ

    ಕೊಪ್ಪಳ: ಬೆಂಗಳೂರಿನಿಂದ ಸಾರಿಗೆ ಬಸ್ ನಲ್ಲಿ ಕಂಪ್ಲಿಗೆ ಬಂದಿದ್ದ ಕಾರ್ಮಿಕನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಆತನ ಜೊತೆ ಪ್ರಯಾಣ ಬೆಳೆಸಿದ್ದ ಜನರಿಗಾಗಿ ಜಿಲ್ಲಾಡಳಿತ ಶೋಧ ನಡೆಸುತ್ತಿದೆ.

    ಕಂಪ್ಲಿಯ ನಿವಾಸಿಯಾಗಿರೋ ಕೂಲಿ ಕಾರ್ಮಿಕ ಮೇ 5ರಂದು ಕೆಎ 37, ಎಫ್ 0887 ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದನು. ಬೆಂಗಳೂರಿನಿಂದ ಹೊರಟಿದ್ದ ಬಸ್ ಗಂಗಾವತಿಗೆ ತಲುಪಿದ ಬಳಿಕ, ಆಟೋ ಮೂಲಕ ಕಂಪ್ಲಿ ತಲುಪಿದ್ದನು. ಈಗಾಗಲೇ ಅಧಿಕಾರಿಗಳು ಆಟೋ ಚಾಲಕನನ್ನ ಪತ್ತೆ ಹಚ್ಚಲಾಗಿದ್ದು, ಉಳಿದ ಎಲ್ಲ ಪ್ರಯಾಣಿಕ ಪತ್ತೆಗಾಗಿ ಕೊಪ್ಪಳ ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಸೂಚನೆ ನೀಡಿದ್ದಾರೆ.

    ಸೋಂಕಿತನ ಸಂಪರ್ಕದಲ್ಲಿದ್ದರ ಪತ್ತೆ ಕಾರ್ಯ ಮುಂದುವರಿದಿದ್ದು, ಕಂಪ್ಲಿಯಲ್ಲಿ ಎಲ್ಲೆಲ್ಲಿ ತಿರುಗಾಡಿದ್ದ ಎಂಬುದರ ಕುರಿತು ಮಾಹಿತಿ ಕೆಲ ಹಾಕಲಾಗುತ್ತಿದೆ. ಆಟೋ ಚಾಲಕ ಸೇರಿದಂತೆ 29 ಜನರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

  • ಪ್ರಧಾನಿ ಮೋದಿ ಹೆಸರಿನಲ್ಲಿ ಮಹಿಳೆಯರಿಗೆ ವಂಚನೆ- 90 ಗ್ರಾಂ ಚಿನ್ನಾಭರಣ, 3 ಲಕ್ಷ ರೂ. ದೋಚಿ ಪರಾರಿ

    ಪ್ರಧಾನಿ ಮೋದಿ ಹೆಸರಿನಲ್ಲಿ ಮಹಿಳೆಯರಿಗೆ ವಂಚನೆ- 90 ಗ್ರಾಂ ಚಿನ್ನಾಭರಣ, 3 ಲಕ್ಷ ರೂ. ದೋಚಿ ಪರಾರಿ

    ಕೊಪ್ಪಳ: ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೂವರು ಮಹಿಳೆಯರಿಗೆ ವಂಚಿಸಿ, 90 ಗ್ರಾಂ ಚಿನ್ನಾಭರಣ, 3 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ಗಂಗಾವತಿ ತಾಲೂಕಿನ ಹಿರೇಡಕನಕಲ್ ಗ್ರಾಮದಲ್ಲಿ ನಡೆದಿದೆ.

    ಉಮೇಶ್ ಲಿಂಗದಳ್ಳಿ ಮಹಿಳೆಯರಿಗೆ ವಂಚಿಸಿದ ಆರೋಪಿ. ಭಾರತ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಣ ಜಮಾ ಆಗುತ್ತದೆ ಅಂತ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಅದರಂತೆ ಈಗಾಗಲೇ ಕೆಲವರ ಖಾತೆಗೆ ಹಣ ಜಮಾ ಆಗಿದೆ. ನಿಮ್ಮ ಖಾತೆಗೂ ಹಣ ಜಮಾ ಆಗಲು ನೀವು ಸ್ವಲ್ಪ ಹಣ ಖರ್ಚು ಮಾಡಬೇಕು ಎಂದು ಉಮೇಶ್ ಲಿಂಗದಳ್ಳಿ, ಹಿರೇಡಕನಕಲ್ ಗ್ರಾಮದ ಮೂವರು ಮಹಿಳೆಯರನ್ನು ನಂಬಿಸಿದ್ದ.

    ಉಮೇಶ್ ಲಿಂಗದಳ್ಳಿ ಮಾತು ನಂಬಿದ್ದ ಮೂವರು ಮಹಿಳೆಯರು ತಲಾ 10 ಗ್ರಾಂ ಚಿನ್ನಾಭರಣ ಹಾಗೂ ಒಂದೊಂದು ಲಕ್ಷ ರೂ. ನೀಡಿದ್ದರು. ಆದರೆ ಹಣ ಬರುತ್ತೆ ಎಂದು ಕಾಯುತ್ತಿದ್ದ ಮಹಿಳೆಯರಿಗೆ ಉಮೇಶ್‍ನ ಗೊತ್ತಾಗಿತ್ತು. ಹೀಗಾಗಿ ಹಣ ವಾಪಸ್ ನೀಡುವಂತೆ ಮಹಿಳೆಯರು ಎಂದು ದುಂಬಾಲು ಬಿದ್ದಿದ್ದರ. ಆದರೆ ಆರೋಪಿಯು ಬೌನ್ಸ್ ಆಗಿದ್ದ ಚೆಕ್‍ಗಳನ್ನು ನೀಡಿ ತಲೆಮರೆಸಿಕೊಂಡಿದ್ದಾನೆ.

    ಹಣ ಮತ್ತು ಚಿನ್ನಾಭರಣ ಕಳೆದುಕೊಂಡ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಜೀವನ ಪೂರ್ತಿ ದುಡಿದು ಕುಟುಂಬಕ್ಕಾಗಿ, ಮಕ್ಕಳಿಗಾಗಿ ಜೋಡಿಸಿದ್ದ ಬಂಗಾರ ಹಣ ಹೋಯಿತಲ್ಲ ಎಂದು ಉಮೇಶ್ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ನಮಗೆ ಬರಬೇಕಾದ ಹಣ ಮತ್ತು ಬಂಗಾರ ವಾಪಸ್ ಕೊಡಿಸುವಂತೆ ಬೇಡಿಕೊಳ್ಳುತ್ತಿದ್ದಾರೆ.

  • ಭತ್ತದ ಕಣಜ ಗಂಗಾವತಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಸ್ತಾವನೆ

    ಭತ್ತದ ಕಣಜ ಗಂಗಾವತಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಸ್ತಾವನೆ

    ಕೊಪ್ಪಳ: ರಾಜ್ಯದ ಭತ್ತದ ಕಣಜವೆಂದೇ ಹೆಸರಾದ ಗಂಗಾವತಿ ತಾಲೂಕಿನಲ್ಲಿ ಕೃಷಿ ಕಾಲೇಜು ಆರಂಭಿಸುವಂತೆ ರಾಯಚೂರು ಕೃಷಿ ವಿವಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

    ಅತಿ ಹೆಚ್ಚು ರೈಸ್ ಮಿಲ್, ಗುಣಮಟ್ಟದ ಅಕ್ಕಿ ಬೆಳೆದು ದೇಶ, ವಿದೇಶಕ್ಕೆ ರಫ್ತು ಮಾಡುವ ಮೂಲಕ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಂಗಾವತಿ ಹೊಂದಿದೆ. ಇಲ್ಲಿನ ಕೃಷಿ ವಿಸ್ತರಣಾ ಕೇಂದ್ರ 1956ರಲ್ಲಿಯೇ ಸ್ಥಾಪನೆಯಾಗುವ ಮೂಲಕ ಗಂಗಾವತಿ, ಕಾರಟಗಿ, ಮುನಿರಾಬಾದ್, ಬಳ್ಳಾರಿ ಜಿಲ್ಲೆಯ ಶಿರಗುಪ್ಪ, ಹೊಸಪೇಟೆ, ಕಂಪ್ಲಿ, ಕುರಗೋಡು, ರಾಯಚೂರು ಜಿಲ್ಲೆಯ ಮಸ್ಕಿ, ಸಿಂಧನೂರು ಭಾಗದ ರೈತರಿಗೆ ವಿವಿಧ ರೀತಿಯಲ್ಲಿ ನೆರವಾಗುವ ಮೂಲಕ ಕೃಷಿ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗಳಿಕೆಯನ್ನು ಹೊಂದಿದೆ.

    ಇಲ್ಲಿ ಕೃಷಿ ಕಾಲೇಜು ಸ್ಥಾಪಿಸಿದರೆ ಈ ಭಾಗದ ರೈತರ ಮತ್ತು ಅವರ ಅವಲಂಬಿತರಿಗೆ ಇನ್ನೂ ಹೆಚ್ಚಿನ ಸಹಾಯ ದೊರೆಯುವ ಆಶಯದೊಂದಿದೆ ಕಾಲೇಜು ಆರಂಭಕ್ಕೆ ಮನವಿ ಮಾಡಲಾಗಿದೆ. ಇಲ್ಲಿ 284 ಎಕರೆ ಪ್ರದೇಶದಲ್ಲಿ ಕೃಷಿ ಸಂಶೋಧನಾ ಕೇಂದ್ರವಿದ್ದು, ಇಲ್ಲಿಯೇ ಕಾಲೇಜು ಆರಂಭಿಸಿದರೆ ಸೂಕ್ತ ಎನ್ನಲಾಗುತ್ತದೆ. ಕಾಲೇಜಿಗೆ 112 ಕೋಟಿ ಅನುದಾನಕ್ಕೆ ಮನವಿ ಮಾಡಲಾಗಿದೆ.

    ಈ ಹಿಂದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಲ್ಲಿ ಕೃಷಿ ಕಾಲೇಜಿಗೆ 46.50 ಕೋಟಿ ಹಣ ಮಂಜೂರು ಮಾಡಿದ್ದರು. ಅಲ್ಲದೆ ಶಾಸಕ ಪರಣ್ಣ ಮುನವಳ್ಳಿ ಕೂಡ ಕಾಲೇಜು ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ ನೆರೆವೇರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ನಂತರ ಬಂದ ಸರ್ಕಾರಗಳು ಈ ಪ್ರಸ್ತಾವಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದರಿಂದ ಕಾಲೇಜು ಸ್ಥಾಪನೆ ಕನಸಾಗಿಯೇ ಉಳಿದಿತ್ತು.

    ಈಗ ಮತ್ತೆ ಸರ್ಕಾರಕ್ಕೆ ಹೊಸ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಶೀಘ್ರ ಕಾಲೇಜು ಆರಂಭಿಸಬೇಕು ಎಂದು ಈ ಭಾಗದ ಜನರು ಬೇಡಿಕೆ ಇಟ್ಟಿದ್ದಾರೆ. ಈ ಭಾಗದಲ್ಲಿ ಭತ್ತ, ಸಜ್ಜೆ, ರಾಗಿ, ಶೇಂಗಾ, ಮುಸುಕಿನಜೋಳ, ಕಬ್ಬು, ಹತ್ತಿ ಬೆಳೆದು ರೈತರು ಸಾಧನೆ ಮಾಡಿದ್ದಾರೆ. ಹೊಸ ಪ್ರಯೋಗಗಳನ್ನು ಪ್ರಗತಿಪರ ರೈತರು ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

    ಕೃಷಿ ಕ್ಷೇತ್ರ ಬಗ್ಗೆ ಅಪಾರ ದೇಶೀ ಜ್ಞಾನ ಹೊಂದಿರುವ ಇಲ್ಲಿನ ರೈತರಿಗೆ ಕೃಷಿ ಕಾಲೇಜು ಆರಂಭಿಸುವುದರಿಂದ ಅವಕಾಶಗಳು ಸೃಷ್ಟಿಯಾಗುತ್ತವೆ. ಅಲ್ಲದೆ ಆಧುನಿಕ, ವೈಜ್ಞಾನಿಕ ಕೃಷಿಗೆ ಹೇರಳ ಮಾನವ ಸಂಪನ್ಮೂಲವನ್ನು ತಯಾರಿಸುವ ಹೊಣೆ ಕಾಲೇಜಿನ ಮೂಲಕ ಆಗುತ್ತದೆ ಎಂಬ ಭರವಸೆಯನ್ನು ಇಲ್ಲಿನ ರೈತರು ಹೊಂದಿದ್ದಾರೆ.

  • ಬಸ್-ಬೈಕ್ ಮುಖಾಮುಖಿ ಡಿಕ್ಕಿ- ಚೆಲ್ಲಾಪಿಲ್ಲಿಯಾದ ದೇಹಗಳು

    ಬಸ್-ಬೈಕ್ ಮುಖಾಮುಖಿ ಡಿಕ್ಕಿ- ಚೆಲ್ಲಾಪಿಲ್ಲಿಯಾದ ದೇಹಗಳು

    ಕೊಪ್ಪಳ: ಸರ್ಕಾರಿ ಸಾರಿಗೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಗಂಗಾವತಿ ತಾಲೂಕಿನ ಶ್ರೀರಾಮನಗರದ ಬಳಿ ನಡೆದಿದೆ.

    ಗಂಗಾವತಿ ತಾಲೂಕಿನ ಸತೀಶ್ (28) ಹಾಗೂ ಜಾಫರ್ (30) ಮೃತಪಟ್ಟಿದ್ದಾರೆ. ಇಬ್ಬರೂ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿದ್ದರು. ಅದೃಷ್ಟವಶಾತ್ ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ.

    ಸತೀಶ್ ಹಾಗೂ ಜಾಫರ್ ಇಂದು ಗಂಗಾವತಿಯಿಂದ ಕಾರಟಗಿಗೆ ಬೈಕ್‍ನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಕಾರಟಗಿಯಿಂದ ಗಂಗಾವತಿ ಕಡೆಗೆ ಹೋಗುತ್ತಿದ್ದ ಬಸ್‍ಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಡಿಕ್ಕಿಯ ರಭಸಕ್ಕೆ ಇಬ್ಬರು ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಮೃತ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.