Tag: ಖಿನ್ನತೆ

  • ಕೊರೊನಾ ಪಾಸಿಟಿವ್ ಬಂದಿದ್ದಕ್ಕೆ ಆಸ್ಪತ್ರೆಯಲ್ಲೇ ಮಹಿಳೆ ಆತ್ಮಹತ್ಯೆ

    ಕೊರೊನಾ ಪಾಸಿಟಿವ್ ಬಂದಿದ್ದಕ್ಕೆ ಆಸ್ಪತ್ರೆಯಲ್ಲೇ ಮಹಿಳೆ ಆತ್ಮಹತ್ಯೆ

    ಮುಂಬೈ: ಕೊರೊನಾ ಪಾಸಿಟಿವ್ ಖಚಿತವಾದ ಬೆನ್ನಲ್ಲೇ ಮಹಿಳೆಯೊಬ್ಬರು ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ನಡೆದಿದೆ.

    ಮುಂಬೈನ ವರ್ಲಿ ನಿವಾಸಿಯಾಗಿದ್ದ ಮಹಿಳೆ ಅಸ್ತಮಾದಿಂದ ಬಳಲುತ್ತಿದ್ದರು. ಸೋಮವಾರ ಮಹಿಳೆಯನ್ನು ನಾಯರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಆಕೆಯ ಪರೀಕ್ಷಾ ವರದಿ ಬಂದಿದ್ದು ಕೊರೋನಾ ಪಾಸಿಟಿವ್ ಇರುವುದು ಗೊತ್ತಾಗಿದೆ. ಆಕೆಯನ್ನು ವಾರ್ಡ್ ನಂಬರ್ 25ರಲ್ಲಿ ದಾಖಲಿಸಲಾಗಿತ್ತು. ಆದರೆ ಇಂದು ಮುಂಜಾನೆ 3.45ರ ವೇಳೆಗೆ ವಾಷ್ ರೂಮ್ ಗೆ ಹೋದ ಮಹಿಳೆ ದುಪಟ್ಟಾ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಗ್ರಿಪಾದ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.

    ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಖಿನ್ನತೆಯಿಂದ ಬಳಲುತ್ತಿದ್ದಿರಬಹುದು ಎಂದು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಹೇಳಿದ್ದು, ಇದರಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

    ಅಗ್ರಿಪಾದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

  • ರಾಜ್ಯದಲ್ಲಿ ಕೊರೊನಾಗೆ ಮೂವರು ಬಲಿ – ಮದ್ಯ ಸಿಗದಕ್ಕೆ 13 ಸಾವು

    ರಾಜ್ಯದಲ್ಲಿ ಕೊರೊನಾಗೆ ಮೂವರು ಬಲಿ – ಮದ್ಯ ಸಿಗದಕ್ಕೆ 13 ಸಾವು

    ಬೆಂಗಳೂರು: ಕುಡುಕರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ದಾರಿ ಹಿಡಿಯುತ್ತಿರೋದು, ಕೊರೊನಾ ವೈರಸ್ ಲಾಕ್‍ಡೌನ್ ವೇಳೆ ಉದ್ಭವಿಸಿರುವ ಮತ್ತೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

    ಕೊರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ದೇಶ ಲಾಕ್‍ಡೌನ್ ಆಗಿದೆ. ಹೀಗಾಗಿ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಮದ್ಯದಂಗಡಿಗಳು ಬಂದ್ ಆಗಿವೆ. ಇದರಿಂದ ಕುಡಿಯಲು ಮದ್ಯ ಸಿಗದೇ ಖಿನ್ನತೆಗೆ ಒಳಗಾಗಿ ಕಳೆದ ಆರು ದಿನಗಳಲ್ಲಿ ರಾಜ್ಯದ ಹಲವೆಡೆ ಒಟ್ಟು 13 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇಂದು ಮೂವರು ಮದ್ಯ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಶಿವಮೊಗ್ಗ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮಲ್ಲೆಕುಪ್ಪ ಗ್ರಾಮದ ಎಂ.ಶಂಕರ (36) ಮದ್ಯೆ ಸಿಗದೆ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದರೆ, ಬಂಗಾರಪೇಟೆ ತಾಲೂಕಿನ ದೊಡ್ಡೂರು ಕರಪನಹಳ್ಳಿಯ 30 ವರ್ಷದ ಆನಂದ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ.

    ಉಡುಪಿ ಜಿಲ್ಲೆ ಒಂದರಲ್ಲೇ ಆರು ಮಂದಿ ಕುಡುಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಇಬ್ಬರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೋಲಾರ, ಹುಬ್ಬಳ್ಳಿ ಮತ್ತು ಬೀದರ್ ನಲ್ಲಿ ತಲಾ ಒಬ್ಬೊಬ್ಬರು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಮುಳಬಾಗಿಲಿನ ಮುದಿಗೆರೆ ಮತ್ತು ತುಮಕೂರಿನಲ್ಲಿ ತಲಾ ಒಬ್ಬರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ. ಈ ಮಧ್ಯೆ ಕುಡುಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಸಿಎಂ ಪಿಣರಯ್ ವಿಜಯನ್, ವೈದ್ಯರ ಚೀಟಿ ತಂದರೆ ಮದ್ಯ ವಿತರಣೆ ಮಾಡಿ ಎಂದು ಆದೇಶ ಹೊರಡಿಸಿದ್ದಾರೆ.

  • ಕೊರೊನಾ ತಗುಲಿರುವ ಶಂಕೆ – ವ್ಯಕ್ತಿ ನೇಣಿಗೆ ಶರಣು

    ಕೊರೊನಾ ತಗುಲಿರುವ ಶಂಕೆ – ವ್ಯಕ್ತಿ ನೇಣಿಗೆ ಶರಣು

    ಮಂಗಳೂರು: ಇಡೀ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕು ತನಗೆ ತಗಲಿದೆ ಎಂದು ಶಂಕಿಸಿ ವ್ಯಕ್ತಿಯೋಬ್ಬರು ನೇಣಿಗೆ ಶರಣಾಗಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಬ್ಬೆಟ್ಟುವಿನಲ್ಲಿ ಈ ಘಟನೆ ನಡೆದಿದೆ. ಅಬ್ಬೆಟ್ಟು ನಿವಾಸಿ ಸದಾಶಿವ ಶೆಟ್ಟಿ(56) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಸದಾಶಿವ ಅವರು ತನಗೆ ಕೊರೊನಾ ತಗಲಿದೆ ಎಂದು ಶಂಕಿಸಿ ಭಯಗೊಂಡಿದ್ದರು. ತನ್ನಿಂದ ಮನೆಯವರಿಗೂ ಈ ಸೋಂಕು ಹರಡಬಹುದೆಂಬ ಖಿನ್ನತೆಗೆ ಒಳಗಾಗಿದ್ದರು.

    ಈ ಖಿನ್ನತೆಯಿಂದಲೇ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಸದಾಶಿವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮನೆಯವರ ಬಳಿ ಸದಾಶಿವ ಅವರು ಹೇಳಿಕೊಂಡಿದ್ದರು ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಶಸ್ತಿ ಪಡೆದು ಡಿಪ್ರೆಷನ್ ಬಗ್ಗೆ ಬಿಚ್ಚಿಟ್ಟ ದೀಪಿಕಾ

    ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಶಸ್ತಿ ಪಡೆದು ಡಿಪ್ರೆಷನ್ ಬಗ್ಗೆ ಬಿಚ್ಚಿಟ್ಟ ದೀಪಿಕಾ

    ನವದೆಹಲಿ: ಬಾಲಿವುಡ್‍ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಇತ್ತೀಚಿಗೆ ಸ್ವಿಟ್ಜರ್ಲ್ಯಾಂಡ್ ನ ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕ್ರಿಸ್ಟಲ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಈ ವೇದಿಕೆ ಮೇಲೆ ಪ್ರಶಸ್ತಿ ಪಡೆದ ಬಳಿಕ ದೀಪಿಕಾ ಡಿಪ್ರೆಷನ್ ಬಗ್ಗೆ ಬಿಚ್ಚಿಟ್ಟಿದ್ದಾರೆ.

    ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದಕ್ಕಾಗಿ ದೀಪಿಕಾ ಅವರಿಗೆ ಕ್ರಿಸ್ಟಲ್ ಅವಾರ್ಡ್ 2020 ನೀಡಿ ಗೌರವಿಸಲಾಗಿದೆ. ಸ್ಟಾರ್ ನಟಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳನ್ನು ದೀಪಿಕಾ ಮಾಡುತ್ತಾ ಬಂದಿದ್ದಾರೆ. ಖಿನ್ನತೆಗೆ ಒಳಗಾದರಿಗೆ ಸಹಾಯ ಮಾಡುವ ಉದ್ದೇಶದಿಂದ 2015ರಲ್ಲಿ ‘ಲೀವ್ ಲವ್ ಲಾಫ್’ ಸಂಸ್ಥೆಯನ್ನು ದೀಪಿಕಾ ಸ್ಥಾಪಿಸಿದ್ದಾರೆ. ಈ ಮೂಲಕ ಖಿನ್ನತೆಗೆ ಒಳಗಾದವರು ಆ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತಿದ್ದಾರೆ.

    ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ದೀಪಿಕಾ, ತಾವು ಖಿನ್ನತೆಗೆ ಒಳಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. 2014ರಲ್ಲಿ ಪ್ರಾರಂಭವಾದ ಖಿನ್ನತೆ ಮತ್ತು ಆತಂಕದಿಂದ ಸಾಕಷ್ಟು ಬಾರಿ ಸಿನಿಮಾ ರಂಗವನ್ನು ತೊರೆಯುವ ನಿರ್ಧಾರ ಮಾಡಿದ್ದೆ. ಆದರೆ ನನ್ನ ತಾಯಿ ನನ್ನನ್ನು ಖಿನ್ನತೆಯಿಂದ ಹೊರಗೆ ಕರೆದುಕೊಂಡು ಬಂದರು. ಖಿನ್ನತೆ ಮತ್ತು ಆತಂಕಕ್ಕೆ ಚಿಕಿತ್ಸೆ ನೀಡಲಾಗುತ್ತೆ. ನನ್ನ ಅನುಭವದ ಪ್ರಕಾರ ಸ್ವೀಕಾರವು ಚೇತರಿಕೆಯ ಮೊದಲ ಹೆಜ್ಜೆಯಾಗಿದೆ ಎಂದು ದೀಪಿಕಾ ವೇದಿಕೆ ಮೇಲೆ ಮಾತನಾಡಿದರು.

    ತನ್ನ ಖಿನ್ನತೆಯ ಅನುಭವನ್ನು ಬಿಚ್ಚಿಡುತ್ತ ‘ಲೀವ್ ಲವ್ ಲಾಫ್’ ಫೌಂಡೇಶನ್ ಸ್ಥಾಪಿಸಿರುವ ಬಗ್ಗೆಯು ದೀಪಿಕಾ ಹೇಳಿದರು. ಖಿನ್ನತೆಯಿಂದ ಹೊರಬಂದ ನಂತರ 2015ರಲ್ಲಿ ಲೀವ್ ಲವ್ ಲಾಫ್’ ಫೌಂಡೇಶನ್ ಸ್ಥಾಪಿಸಿದೆ. ಬದಲಾವಣೆಯನ್ನು ಮಾಡುವುದು ಮತ್ತು ಕನಿಷ್ಠ ಒಂದು ಜೀವವನ್ನಾದರು ಉಳಿಸುವ ಉದ್ದೇಶದಿಂದ ಈ ಸಂಸ್ಥೆ ಸ್ಥಾಪಿಸಿದೆ. “ನೀವು ಖಂಡಿತ ಒಬ್ಬಂಟಿಯಲ್ಲ. ಮುಖ್ಯವಾಗಿ ಭರವಸೆ ಇರಬೇಕು ಎಂದು ದೀಪಿಕಾ ಹೇಳಿದರು.

    ಡಿಪ್ರೆಷನ್ ಬಗ್ಗೆ ದೀಪಿಕಾ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು, ಅಭಿಮಾನಿಗಳು ದೀಪಿಕಾ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಕಾರ್ಯಕ್ಕೆ ಭೇಷ್ ಎಂದಿದ್ದಾರೆ.

    https://www.instagram.com/p/B7jO4UfB-2J/?utm_source=ig_embed

  • ಒಂದೇ ಸೀರೆಗೆ ನೇಣು ಬಿಗಿದು ದಂಪತಿ ಆತ್ಮಹತ್ಯೆ

    ಒಂದೇ ಸೀರೆಗೆ ನೇಣು ಬಿಗಿದು ದಂಪತಿ ಆತ್ಮಹತ್ಯೆ

    ಶಿವಮೊಗ್ಗ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಆಗರದಳ್ಳಿ ಕ್ಯಾಂಪಿನಲ್ಲಿ ನಡೆದಿದೆ.

    ಸಂತೋಷ್ (32) ಹಾಗೂ ಪಾರ್ವತಿ (27) ಮೃತ ದಂಪತಿ. ಭಾನುವಾರ ಭೂಮಿ ಹುಣ್ಣಿಮೆ ಹಬ್ಬ ಇದ್ದಿದ್ದರಿಂದ ಮನೆಯವರಿಗೆಲ್ಲ ತಾವೇ ಅಡುಗೆ ಸಿದ್ಧಪಡಿಸಿದ್ದರು. ಭೂಮಿ ಪೂಜೆಗೆ ಮನೆಯವರನ್ನೆಲ್ಲ ಗದ್ದೆಗೆ ಕಳುಹಿಸಿ, ನೀವೆಲ್ಲ ಹೋಗಿ ಪೂಜೆ ಮಾಡುತ್ತೀರಿ. ನಾವು ನಂತರ ಬರುತ್ತೇವೆ ಎಂದು ಹೇಳಿ ಕಳುಹಿಸಿದ್ದರು.

    ಕುಟುಂಬಸ್ಥರು ಗದ್ದೆಗೆ ತೆರಳುತ್ತಿದ್ದಂತೆ ಮನೆಯಲ್ಲಿಯೇ ಸಂತೋಷ್ ಹಾಗೂ ಪಾರ್ವತಿ ಒಂದೇ ಸೀರೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರ ಶವವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ನೀಡಲಾಯಿತು.

    ಈ ಘಟನೆ ಸಂಬಂಧ ಹೊಳೆ ಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೇ ಕಾರಣನಾ ಅಥವಾ ಬೇರೆ ಕಾರಣ ಇರಬಹುದೋ ಎಂಬುದು ಪೊಲೀಸರ ತನಿಖೆ ನಡೆಸುತ್ತಿದ್ದಾರೆ.

  • ‘ನನ್ನ ಮನಸ್ಸೇ, ನನ್ನ ಶತ್ರು’ ಅಂತಾ ಬರೆದಿಟ್ಟು 5ನೇ ಮಹಡಿಯಿಂದ ಜಿಗಿದ ನಿರೂಪಕಿ

    ‘ನನ್ನ ಮನಸ್ಸೇ, ನನ್ನ ಶತ್ರು’ ಅಂತಾ ಬರೆದಿಟ್ಟು 5ನೇ ಮಹಡಿಯಿಂದ ಜಿಗಿದ ನಿರೂಪಕಿ

    ಹೈದರಾಬಾದ್: ನ್ಯೂಸ್ ನಿರೂಪಕಿ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಹೈದರಾಬಾದ್ ನ ಮೂಸಪೇಟ್‍ನಲ್ಲಿ ನಡೆದಿದೆ.

    ರಾಧಿಕಾ ರೆಡ್ಡಿ(36) ಆತ್ಮಹತ್ಯೆ ಮಾಡಿಕೊಂಡ ನಿರೂಪಕಿ. ರಾಧಿಕಾ ಖಿನ್ನತೆಯಿಂದ ಬಳಲುತ್ತಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದ ನಂತರ ನೇರವಾಗಿ ಟೆರೇಸ್‍ಗೆ ಹೋಗಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಕ್ಕಟ್ ಪಲ್ಲಿಯ ಸಬ್ ಇನ್ಸ್ ಪೆಕ್ಟರ್ ಮಜಿದ್ ತಿಳಿಸಿದ್ದಾರೆ.

    ರಾಧಿಕಾ 5ನೇ ಮಹಡಿಯಿಂದ ಜಿಗಿದ್ದಾಗ ಆಕೆಯ ತಲೆಗೆ ಗಂಭೀರ ಗಾಯಗಳಾಗಿದ್ದವು. ತೀವ್ರ ರಕ್ತಸ್ರಾವದಿಂದಾಗಿ ರಾಧಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಧಿಕಾ ಬ್ಯಾಗ್ ನಲ್ಲಿ ಡೆತ್ ನೋಟ್ ಸಿಕ್ಕಿದ್ದು, ನನ್ನ ಮನಸ್ಸೇ, ನನ್ನ ಶತ್ರು ಅಂತಾ ಬರೆದಿದ್ದಾರೆ ಎಂದು ಎಸ್‍ಐ ಮಜಿದ್ ಹೇಳಿದ್ದಾರೆ.

    6 ತಿಂಗಳ ಹಿಂದೆ ರಾಧಿಕಾ ಪತಿಯಿಂದ ವಿಚ್ಚೇದನ ಪಡೆದಿದ್ದರು. ವಿಚ್ಛೇದನದ ಬಳಿಕ ರಾಧಿಕಾ ತನ್ನ 14 ವರ್ಷದ ಬುದ್ಧಿಮಾಂದ್ಯ ಮಗನನ್ನು ತವರು ಮನೆಯಲ್ಲಿ ಬಿಟ್ಟು ಬಂದಿದ್ದರು. ಕೆಲಸದ ನಿಮಿತ್ತ ರಾಧಿಕಾ ಏಕಾಂಗಿಯಾಗಿ ಹೈದರಾಬಾದ್ ನಲ್ಲಿ ಉಳಿದುಕೊಂಡಿದ್ದರು. ವಿಚ್ಛೇದನದ ಬಳಿಕ ರಾಧಿಕಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಅಂತಾ ಪೊಲೀಸರು ತಿಳಿಸಿದ್ದಾರೆ.

    ಸದ್ಯ ಪೊಲೀಸರು ಈ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಒಂದೇ ಸೀರೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ವೈದ್ಯ ದಂಪತಿ ಆತ್ಮಹತ್ಯೆ!

    ಒಂದೇ ಸೀರೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ವೈದ್ಯ ದಂಪತಿ ಆತ್ಮಹತ್ಯೆ!

    ಮೈಸೂರು: ವೈದ್ಯ ದಂಪತಿ ಒಂದೇ ಸೀರೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಸರಸ್ವತಿಪುಂ 14ನೇ ಮೇನ್ ನಲ್ಲಿ ನಡೆದಿದೆ.

    ಡಾ. ಸತೀಶ್ ಹಾಗೂ ಡಾ. ವೀಣಾ ಆತ್ಮಹತ್ಯೆಗೆ ಶರಣಾದ ದಂಪತಿ. ಕುಕ್ಕರಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇವರ ಮಗ ಮೃತಪಟ್ಟಿದ್ದ. ಏಕೈಕ ಮಗನ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಇವರು ಇಂದು ಮಧ್ಯಾಹ್ನ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.


    ಸತೀಶ್ ಹಾಗೂ ವೀಣಾ ಮಗನನ್ನು ಕಳೆದು ಕೊಂಡು ನೋವಿನಲ್ಲಿದ್ದರು. ಈ ನೋವಿನಿಂದ ಹೊರಬರಲು ಸಮಾಜಸೇವೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ನಂತರ ಇಂದು ಮಧ್ಯಾಹ್ನ ಸರಸ್ವತಿ ಪುರಂನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

    ಸದ್ಯ ಘಟನಾ ಸ್ಥಳಕ್ಕೆ ಸರಸ್ವತಿಪುರಂ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಹೆಚ್ಚಿನ ಅಂಕ ನೀಡಲು ವಿದ್ಯಾರ್ಥಿನಿ ಬಳಿ ಕಿಸ್ ಕೇಳಿದ ಶಿಕ್ಷಕ

    ಹೆಚ್ಚಿನ ಅಂಕ ನೀಡಲು ವಿದ್ಯಾರ್ಥಿನಿ ಬಳಿ ಕಿಸ್ ಕೇಳಿದ ಶಿಕ್ಷಕ

    ಮುಂಬೈ: ಹೆಚ್ಚಿನ ಅಂಕ ನೀಡಲು ವಿದ್ಯಾರ್ಥಿನಿ ಬಳಿ ಶಿಕ್ಷಕನೊರ್ವ ಕಿಸ್ ಕೇಳಿದ ಘಟನೆ ಮುಂಬೈನಲ್ಲಿ ನಡೆದಿದೆ.

    35 ವರ್ಷದ ಶಿಕ್ಷಕನೊರ್ವ 17 ವರ್ಷದ ಕಾಮರ್ಸ್ ವಿದ್ಯಾರ್ಥಿನಿ ಬಳಿ ಕಿಸ್ ಕೇಳಿದ್ದು, ಇದ್ದರಿಂದ ಮನನೊಂದ ಯುವತಿ ಖಿನ್ನತೆಗೆ ಜಾರಿದ್ದಾಳೆ. ಅಷ್ಟೇ ಅಲ್ಲದೇ ಈ ಘಟನೆ ನಡೆದ ಎರಡು ವಾರಗಳ ನಂತರ ತನ್ನ ಕುಟುಂಬದವರ ಬಳಿ ಹೇಳಿಕೊಂಡಿದ್ದಾಳೆ.

    ನಗರದ ಪ್ರಸಿದ್ಧ ಕಾಲೇಜಿನಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಈ ಕಾಮುಕ ಮಾರ್ಚ್ 8ರಂದು ಯುವತಿಯ ಬಳಿ ನೀನು ನನಗೆ ಕಿಸ್ ಕೊಟ್ಟರೆ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ನೀಡುತ್ತೇನೆ ಎಂದು ಕೆಟ್ಟ ಆಫರ್ ನೀಡಿದ್ದಾನೆ.

    ಈ ಘಟನೆ ನಂತರ ಯುವತಿ ಮನನೊಂದು ಖಿನ್ನತೆಗೆ ಜಾರಿದ್ದಾಳೆ. ಬಳಿಕ ಆಕೆಯ ಕುಟುಂಬದವರು ಆಕೆಯ ವಿಚಿತ್ರ ವರ್ತನೆ ನೋಡಿ ಪ್ರಶ್ನಿಸಿದ್ದಾರೆ. ಆಗ ಯುವತಿ ನಡೆದ ಎಲ್ಲ ಘಟನೆ ಬಗ್ಗೆ ತನ್ನ ಕುಟುಂಬದವರ ಹತ್ತಿರ ಹೇಳಿದ್ದಾಳೆ ಎಂದು ಪಾಂಟ್‍ನಗರದ ಪೊಲೀಸ್ ಅಧಿಕಾರಿಯಾದ ರೋಹಿಣಿ ಕಾಳೆ ತಿಳಿಸಿದ್ದಾರೆ.

    ಪೊಲೀಸರು ಈ ಘಟನೆ ಬಗ್ಗೆ ಆದಷ್ಟು ಬೇಗ ತನಿಖೆ ನಡೆಸಲಿ ಎಂದು ಯುವತಿಯ ಪೋಷಕರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಶಿಕ್ಷಕನ ವಿರುದ್ಧ ಐಪಿಸಿ ಸೆಕ್ಷನ್ ಹಾಗೂ ಪೋಸ್ಕೋ ಕಾಯ್ದೆ ಅಡಿ ಲೈಂಗಿಕ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಶಿಕ್ಷಕನನ್ನು ಬಂಧಿಸಿದ್ದಾರೆ.

  • ಎದೆ ಭಾಗಕ್ಕೆ ಗನ್‍ನಿಂದ ಶೂಟ್ ಮಾಡಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ!

    ಎದೆ ಭಾಗಕ್ಕೆ ಗನ್‍ನಿಂದ ಶೂಟ್ ಮಾಡಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ!

    ಧಾರವಾಡ: ನಿವೃತ್ತ ಯೋಧರೊಬ್ಬರು ಗನ್‍ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.

    ನಗರದ ಮೋರೆ ಪ್ಲಾಟ್‍ನ ಚನ್ನಮಲ್ಲಯ್ಯ(43) ಹಿರೇಮಠ ಗನ್‍ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಯೋಧ. ಇವರು ಕಳೆದ ಎರಡು ದಿನಗಳಿಂದ ಮಾನಸಿಕ ಖಿನ್ನತೆಯಾದವರಂತೆ ವರ್ತಿಸುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಸಂಜೆ ಮನೆಯಲ್ಲಿದ್ದ ಡಬಲ್ ಬ್ಯಾರಲ್ ಗನ್ ತೆಗೆದುಕೊಂಡು ಅದರಲ್ಲಿ ಗುಂಡು ಹಾಕಿ ಎದೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಘಟನೆ ನಡೆದ ವೇಳೆ ಪತ್ನಿ ಹಾಗೂ ಅವರ ಮಕ್ಕಳು ಮನೆಯಲ್ಲೇ ಇದ್ದರು ಎಂದು ತಿಳಿದುಬಂದಿದೆ. ಚನ್ನಮಲ್ಲಯ್ಯ ಅವರ ಅಳಿಯ ಗನ್‍ನಿಂದ ಶೂಟ್ ಮಾಡಿಕೊಳ್ಳುವುದನ್ನು ತಪ್ಪಿಸಲು ಪ್ರಯತ್ನ ಮಾಡಿದಾಗ, ಅವರನ್ನ ಹಿಂದಕ್ಕೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಎರಡು ವರ್ಷಗಳ ಹಿಂದೆಯಷ್ಟೇ ಇವರು ಸೇನೆಯಿಂದ ನಿವೃತ್ತಿ ಹೊಂದಿದ್ದರು. ಸದ್ಯ ಹುಬ್ಬಳ್ಳಿಯ ಬ್ಯಾಂಕ್‍ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಉಪನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಬೆಂಗ್ಳೂರಿನಲ್ಲಿ ನಿವೃತ್ತ ಯೋಧ ಆತ್ಮಹತ್ಯೆ

    ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಬೆಂಗ್ಳೂರಿನಲ್ಲಿ ನಿವೃತ್ತ ಯೋಧ ಆತ್ಮಹತ್ಯೆ

    ಬೆಂಗಳೂರು: ಖಿನ್ನತೆಗೆ ಒಳಗಾಗಿದ್ದ ನಿವೃತ್ತ ಯೋಧರೊಬ್ಬರು ತನ್ನ ಬಳಿಯಿದ್ದ ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೊರಮಾವಿನಲ್ಲಿ ನಡೆದಿದೆ.

    ಇಲ್ಲಿನ ಎಲೈಟ್ ಅಪಾರ್ಟ್‍ಮೆಂಟ್ ನಿವಾಸಿಯಾಗಿದ್ದ ಅನಿಲ್ ಅಹುಜಾ ಎಂಬವರು ಕಳೆದ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಜೊತೆಗೆ ಸಾಕಷ್ಟು ಸಲ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಭಾನುವಾರ ರಾತ್ರಿ ತನ್ನ ರೂಮ್‍ನಲ್ಲಿ ಶೂಟ್ ಮಾಡಿಕೊಂಡು ಅನಿಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.